02/05/2026
Arkalgud News : ಕುವೆಂಪುರವರ ಆಶಯದಂತೆ ಮಂತ್ರ ಮಾಂಗಲ್ಯ ವಿವಾಹವಾದ ಸರ್ಕಾರಿ ವೈದ್ಯ.!
ಕೇವಲ ಅರ್ಧ ತಾಸಲ್ಲಿ ಮದುವೆಯಾದ ಜೋಡಿ, ಕುವೆಂಪು ಆಶಯದಂತೆ
ಮಂತ್ರ ಮಾಂಗಲ್ಯ..!
ಅರಕಲಗೂಡು ಪಟ್ಟಣದ ನಿವಾಸಿ ನಿವೃತ್ತ ಯೋಧ ರಮೇಶ್ ಮತ್ತು ಗೃಹಣಿ ನಾಗಮಣಿ ಅವರ ಪುತ್ರ ಡಾ. ಅಭಿಷೇಕ್ ಮತ್ತು ಮನುಗನಹಳ್ಳಿ ಗ್ರಾಮದ ಶ್ರೀಮತಿ ರುಕ್ಮಿಣಿ,ದಿll.ಹನುಮಂತ ಅವರ ಪುತ್ರಿ ನಿವೇದಿತ ಅವರು ಬುದ್ಧ ಪೂರ್ಣಿಮಾ ದಿನದಂದು ಗೌತಮಬುದ್ಧ, ಬಸವಣ್ಣ, ಅಂಬೇಡ್ಕರ್ ಹಾಗೂ ಕುವೆಂಪು ಅವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಿ ಆಶೀರ್ವಾದ ಪಡೆಯುವ ಮೂಲಕ ಹಾರ ಬದಲಾಹಿಸಿಕೊಂಡು ಮಂತ್ರ ಮಾಂಗಲ್ಯ ಧಾರಣೆ ಮಾಡಿಕೊಂಡು ಸರಳವಾಗಿ ವಿವಾಹ ಮಾಡಿಕೊಂಡರು.
ಅರಕಲಗೂಡು ಪಟ್ಟಣದ ಹೊರವಲಯ ರಾಮನಾಥಪುರ ರಸ್ತೆಯಲ್ಲಿನ ಎಸ್ ಹೆಚ್ ಕೆ ಕಲ್ಯಾಣ ಮಂಟಪದಲ್ಲಿ ವಿವಾಹ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.
ಕಾರ್ಯಕ್ರಮಕ್ಕೆ ವಧು, ವರನ ತಂದೆ ತಾಯಿಯನ್ನು ಅಹ್ವಾನಿಸಿದ ಶಿಕ್ಷಕ ಮಲ್ಲೇಶ್ ಅವರು, ಮಂತ್ರ ಮಾಂಗಲ್ಯ ಬಗ್ಗೆ ವಿವರಿಸಿ, ವಿವಾಹಕ್ಕೆ ಸಮ್ಮತಿ ಸೂಚಿಸುವಂತೆ ಮನವಿ ಮಾಡಿದರು.
ತಂದೆ ತಾಯಿ ಹಾಗೂ ಗುರು ಹಿರಿಯರ ಸಮ್ಮತಿ ಮೇರೆಗೆ ವಧು ವರರನ್ನು ವೇದಿಕೆ ಮುಂಭಾಗ ನಿಲ್ಲಿಸಿ ವಿವಾಹ ಸಂಹಿತೆಯನ್ನು ಓದುವ ಮೂಲಕ ಸಹಿ ಹಾಕಿಸಲಾಯಿತು. ಇದಾದ ಬಳಿಕ ಮಾಲಾರ್ಪಣೆ, ಮಾಂಗಲ್ಯ ಧಾರಣೆಯೊಂದಿಗೆ ಮದುವೆ ನಡೆಯಿತು. ಇದಾದ ನಂತರ ವಂದನಾರ್ಪಣೆ ಮೂಲಕ ಮುಕ್ತಾಯಗೊಂಡಿತು.
ಕುವೆಂಪು ಅವರ ನುಡಿಯಂತೆ, ಲೋಕವನ್ನಾಗಲಿ, ಸಮಾಜವನ್ನಾಗಲಿ, ಪುರೋಹಿಶಾಹಿಯನ್ನಾಗಲಿ ಬದಲಾಯಿಸುವ ಅಗತ್ಯ ಖಂಡಿತ ಇಲ್ಲ. ನೀವು ಮತ್ತು ನಿಮ್ಮ ಮನಸ್ಸು ಪರಿವರ್ತನೆ ಆಗದೆ ಏನೂ ಬದಲಾಗುವುದಿಲ್ಲ ಎಂಬುದಾಗಿದೆ.
ಇಂದಿನ ಸಮಾಜಕ್ಕೆ ಕುವೆಂಪು ಅವರ ಪರಿಕಲ್ಪನೆಯ ಸರಳ ವಿವಾಹ ಹೆಚ್ಚು ಅವಶ್ಯಕತೆಯಾಗಿದೆ. ನಾನು ಸರಕಾರಿ ವೈದ್ಯನಾಗಿ ನನ್ನ ಕೈ ಹಿಡಿದಿರುವ ನಿವೇದಿತ ಕೂಡ ಎಂ ಬಿ ಎ ಪದವೀಧರರು. ಯಾವುದೇ ಆಡಂಭರ, ಶಾಸ್ತ್ರ ಸಂಪ್ರದಾಯವಿಲ್ಲದೆ,ಮಂಗಳ ವಾದ್ಯ, ಅರುಂಧತಿ ನಕ್ಷತ್ರ,ಪುರೋಹಿತರನ್ನು ಅವಲಂಬನೆ ಮಾಡದೆ ಸಮಾಜ ಸುಧಾರಕರಾದ ಬುದ್ಧ, ಬಸವ ಅಂಬೇಡ್ಕರ್ ಮತ್ತು ಕುವೆಂಪು ಅವರ ಆಶಯದಂತೆ ಸರಳ ವಿವಾಹ ಮಾಡಿಕೊಂಡು ಸಣ್ಣ ಪ್ರಮಾಣದಲ್ಲಿ ಸಮಾಜ ಬದಲಾವಣೆಗೆ ಕೈಜೋಡಿಸಿದ್ದೇವೆ ಎಂದು ನವ ಜೋಡಿಗಳಾದ ಡಾ. ಅಭಿಷೇಕ್( ಸರಕಾರಿ ವೈದ್ಯಾಧಿಕಾರಿ ) ನಿವೇದಿತ ಸಂತಸ ಹಂಚಿಕೊಂಡರು.