03/08/2026
ಒಂದು ದಿನ ನೀವು ಮನೆಯ ಹೊರಗೆ ನಿಂತಿದ್ದೀರಾ ಅಂತ ಇಟ್ಕೊಳಿ...
ಇದ್ದಕ್ಕಿದ್ದಂತೆ ಆಕಾಶದಿಂದ ಅರ್ಧ ಟನ್ ತೂಕದ ಕಬ್ಬಿಣದ ತುಂಡು ನಿಮ್ಮ ಹತ್ತಿರ ಬಿದ್ದರೆ?!
ಇದು ಕಾಲ್ಪನಿಕ ಕಥೆ ಅಲ್ಲ.
ಈಗ ವಿಜ್ಞಾನಿಗಳನ್ನೇ ಆತಂಕಕ್ಕೆ ತಳ್ಳಿರೋ ಸತ್ಯ..
ಈಗ ಬಾಹ್ಯಾಕಾಶದಿಂದ ಪ್ರತೀ ವಾರ ಸರಿಸುಮಾರು ಒಂದು ಮೆಟ್ರಿಕ್ ಟನ್ ಕಸ ಯಾವುದೇ ನಿಯಂತ್ರಣವಿಲ್ಲದೆ ಭೂಮಿಯ ವಾತಾವರಣಕ್ಕೆ ನುಗ್ಗುತ್ತಿದೆ.
ಒಮ್ಮೆ ಅಪರೂಪಕ್ಕೆ ನಡೆಯುತ್ತಿದ್ದ ಘಟನೆ ಈಗ ಬಹುತೇಕ ಪ್ರತಿದಿನದ ವಿಷಯವಾಗಿದೆ ಅಂತ ಪೋಲೆಂಡ್ ಸ್ಪೇಸ್ ಏಜೆನ್ಸಿಯ ಸ್ಪೇಸ್ ಸಿಚುವೇಷನಲ್ ಅವೇರ್‌ನೆಸ್ ಮುಖ್ಯಸ್ಥ ಮಾರಿಯುಷ್ ಸ್ಲೋನಿನಾ ಎಚ್ಚರಿಸಿದ್ದಾರೆ.
ಈ ಎಚ್ಚರಿಕೆಯ ಹಿಂದೆ ಒಂದು ಶಾಕಿಂಗ್ ಘಟನೆ ಇದೆ..
2024ರ ಡಿಸೆಂಬರ್ 30ರಂದು ಕೀನ್ಯಾದ ಮಕುಯೇನಿ ಕೌಂಟಿಯ ಮುಕುಕು ಗ್ರಾಮದಲ್ಲಿರುವ ಜೋಳದ ಹೊಲಕ್ಕೆ ಸುಮಾರು 8 ಅಡಿ ವ್ಯಾಸ ಮತ್ತು 500 ಕಿಲೋಗ್ರಾಂ ತೂಕದ ಬೆಂಕಿಯಂತೆ ಉರಿಯುತ್ತಿದ್ದ ದೈತ್ಯ ಲೋಹದ ಉಂಗುರ ಆಕಾಶದಿಂದ ಬಿದ್ದಿತ್ತು.
ಅದರ ಹೊಡೆತ ಎಷ್ಟು ಪ್ರಬಲವಾಗಿತ್ತೆಂದರೆ ಸುತ್ತಮುತ್ತಲಿನ ಮನೆಗಳ ಅಡಿಪಾಯಗಳೇ ಬಿರುಕು ಬಿಟ್ಟವು.
ಅದೃಷ್ಟವಶಾತ್ ಯಾರಿಗೂ ಪ್ರಾಣಾಪಾಯ ಆಗಲಿಲ್ಲ. ಆದರೆ ಇನ್ನೂ ಅಲ್ಲಿನ ಗ್ರಾಮಸ್ಥರಿಗೆ ಯಾವುದೇ ಪರಿಹಾರ ಸಿಕ್ಕಿಲ್ಲ..
ಮೊದಲಿಗೆ ಇದು ವಿಚಿತ್ರ ಅಪಘಾತ ಅಷ್ಟೇ ಎಂದು ಭಾವಿಸಲಾಗಿತ್ತು.
ಆದರೆ ನಂತರ ಕೀನ್ಯಾ ಸ್ಪೇಸ್ ಏಜೆನ್ಸಿ ಮತ್ತು ಅಂತರರಾಷ್ಟ್ರೀಯ ಟ್ರ್ಯಾಕಿಂಗ್ ತಜ್ಞರು ನಡೆಸಿದ ತನಿಖೆಯಲ್ಲಿ ಅಚ್ಚರಿಯ ಸತ್ಯ ಹೊರಬಿತ್ತು.
ಅದು ಸಾಮಾನ್ಯ ಕಬ್ಬಿಣದ ತುಂಡಲ್ಲ.
ಸುಮಾರು 16 ವರ್ಷಗಳ ಹಿಂದೆ ಅಮೆರಿಕದ ಟೆಲಿವಿಷನ್ ಸ್ಯಾಟಲೈಟ್ ಅನ್ನು ಕಕ್ಷೆಗೆ ಸೇರಿಸಲು ಉಡಾವಣೆ ಮಾಡಿದ್ದ ಫ್ರೆಂಚ್ ರಾಕೆಟ್‌ನ ರಾಕೆಟ್ ಸೆಪರೇಷನ್ ಸ್ಟೇಜ್ ಆಗಿತ್ತು.
ಹದಿನಾರು ವರ್ಷ ಬಾಹ್ಯಾಕಾಶದಲ್ಲಿ ಸುತ್ತಾಡಿದ ಆ ಲೋಹದ ಭಾಗ ಕೊನೆಗೆ ಭೂಮಿಗೆ ಬಂದು ಬಿದ್ದಿತ್ತು.
ಇದೊಂದೇ ಘಟನೆ ಅಲ್ಲ.
ಕಳೆದ ವರ್ಷ ಅಮೆರಿಕದ ಸ್ಪೇಸ್ ಫೋರ್ಸ್ 820ಕ್ಕೂ ಹೆಚ್ಚು ರೀ-ಎಂಟ್ರಿ ಅಲರ್ಟ್‌ಗಳನ್ನು ನೀಡಿದೆ.
ಹತ್ತು ವರ್ಷಗಳ ಹಿಂದೆ ಈ ಸಂಖ್ಯೆ ವರ್ಷಕ್ಕೆ ಕೇವಲ 110 ಮಾತ್ರ ಇತ್ತು.
ಜಾಗತಿಕವಾಗಿ ಈಗ ವರ್ಷಕ್ಕೆ 300ಕ್ಕೂ ಹೆಚ್ಚು ರಾಕೆಟ್‌ಗಳು ಉಡಾವಣೆಯಾಗುತ್ತಿವೆ. ಇದು 2010ರ ದಶಕದ ಮಧ್ಯಭಾಗಕ್ಕಿಂತ ಸುಮಾರು ನಾಲ್ಕು ಪಟ್ಟು ಹೆಚ್ಚು.
ಇಷ್ಟೆಲ್ಲ ಉಪಗ್ರಹಗಳು, ರಾಕೆಟ್‌ಗಳು ಬಾಹ್ಯಾಕಾಶಕ್ಕೆ ಹೋಗುತ್ತಿರುವುದರಿಂದ ಅಲ್ಲಿನ ಕಸದ ಪ್ರಮಾಣವೂ ಭಾರೀ ವೇಗದಲ್ಲಿ ಹೆಚ್ಚುತ್ತಿದೆ.
ಇನ್ನೊಂದು ದೊಡ್ಡ ಸಮಸ್ಯೆ ಏನೆಂದರೆ, ಈಗಿರುವ ವಿಶ್ವಸಂಸ್ಥೆಯ ಬಾಹ್ಯಾಕಾಶ ಕಾನೂನುಗಳು 2007ರ ಕಾಲದವು. ಅವು ಕಡ್ಡಾಯ ನಿಯಮಗಳಲ್ಲ. ಇಂದಿನ ಸ್ಟಾರ್‌ಲಿಂಕ್ ಮಾದರಿಯ ಮೆಗಾ ಸ್ಯಾಟಲೈಟ್ ನೆಟ್‌ವರ್ಕ್‌ಗಳು ಅಥವಾ ಚೀನಾದ ವಾಣಿಜ್ಯ ಸ್ಯಾಟಲೈಟ್ ಸಮೂಹಗಳನ್ನು ನಿಯಂತ್ರಿಸಲು ಅವು ಸಾಕಾಗುತ್ತಿಲ್ಲ.
ಇಲ್ಲಿಯವರೆಗೆ ಬಾಹ್ಯಾಕಾಶದ ಕಸ ವಾತಾವರಣದಲ್ಲೇ ಸುಟ್ಟುಹೋಗುತ್ತದೆ ಅಥವಾ ಪೆಸಿಫಿಕ್ ಸಾಗರಕ್ಕೆ ಬೀಳುತ್ತದೆ ಅನ್ನೋ ನಂಬಿಕೆ ಇತ್ತು.
ಆದರೆ ಹೊಸ ಅಂಕಿಅಂಶಗಳು ಬೇರೆ ಕಥೆ ಹೇಳುತ್ತಿವೆ.
ಅಮೆರಿಕದ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್‌ಗಾಗಿ ಸಿದ್ಧಪಡಿಸಿದ ಅಧ್ಯಯನದ ಪ್ರಕಾರ, 2035ರ ವೇಳೆಗೆ ವಾಣಿಜ್ಯ ಸ್ಯಾಟಲೈಟ್‌ಗಳಿಂದ ಬೀಳುವ ಅವಶೇಷಗಳು ಪ್ರತಿ ಎರಡು ವರ್ಷಕ್ಕೊಮ್ಮೆ ಒಬ್ಬರಿಗೆ ಗಾಯ ಅಥವಾ ಸಾವಿಗೆ ಕಾರಣವಾಗುವ ಸಾಧ್ಯತೆ ಇದೆ.
ಇನ್ನೊಂದು ಆಘಾತಕಾರಿ ಸಂಗತಿ ಏನೆಂದರೆ, ಹಲವು ಕಂಪನಿಗಳು ತಮ್ಮ ಸ್ಯಾಟಲೈಟ್‌ಗಳು ಸಂಪೂರ್ಣ ಸುಟ್ಟುಹೋಗುತ್ತವೆ ಎಂದು ಭಾವಿಸಿದ್ದವು. ಆದರೆ ಸ್ಪೇಸ್‌ಎಕ್ಸ್ ಕೂಡ ತನ್ನ ಸ್ಯಾಟಲೈಟ್‌ಗಳ ಒಟ್ಟು ತೂಕದ ಸುಮಾರು 5% ಭಾಗ ಸಂಪೂರ್ಣವಾಗಿ ಸುಟ್ಟುಹೋಗುವುದಿಲ್ಲ ಎಂದು ಒಪ್ಪಿಕೊಂಡಿದೆ.
ಅದರಲ್ಲೂ ಅತ್ಯಂತ ಅಪಾಯಕಾರಿ ವಿಷಯ ಬೇರೆ ಇದೆ.
ಭೂಮಿಯತ್ತ ಧುಮುಕುವ ಈ ವಸ್ತುಗಳು ನಿಯಂತ್ರಣವಿಲ್ಲದೆ ತಿರುಗುತ್ತಾ ಬರುತ್ತವೆ. ಅವು ಎಲ್ಲಿ ಬೀಳುತ್ತವೆ ಅನ್ನೋದನ್ನು ಲೆಕ್ಕ ಹಾಕುವಾಗ ಕೇವಲ ಒಂದು ನಿಮಿಷದ ತಪ್ಪು ಆದರೂ ಅಂದಾಜು ಮಾಡಿದ ಸ್ಥಳದಿಂದ ಸುಮಾರು 300 ಮೈಲು ದೂರ ವಸ್ತು ಬಿದ್ದುಬಿಡಬಹುದು.
ಅಂದರೆ...
ಮುಂದಿನ ಬಾರಿ ಆಕಾಶದಿಂದ ಏನು ಬೀಳುತ್ತದೆ?
ಎಲ್ಲಿ ಬೀಳುತ್ತದೆ?
ಯಾರಿಗೂ ಖಚಿತವಾಗಿ ಹೇಳಲು ಸಾಧ್ಯವಿಲ್ಲ.