27/06/2025
'X&Y': ಜೀವಾತ್ಮದ ಕಣ್ಣಿನಲ್ಲಿ ಜೀವನ ದರ್ಶನ!
ಬದುಕಿ ಬಾಳಿದ ಮನುಷ್ಯ ಸತ್ತಮೇಲೆ ಆತ್ಮವಾಗುವ ಕತೆ ತುಂಬಾ ಹಳೇದಾಯ್ತು. ಈಗ ಹುಟ್ಟುವ ಮೊದಲಿನ ಆತ್ಮದ ವಿಚಾರ ತೆರೆದುಕೊಂಡಿದೆ. ಅದು 'X&Y' ಸಿನಿಮಾದಲ್ಲಿ. ಕ್ರೋಮೋಜೋಮೊಂದು ತನ್ನ ತಂದೆ ತಾಯಿಯನ್ನು ತಾನೇ ಆಯ್ಕೆ ಮಾಡಿಕೊಳ್ಳಲು ಭೂಮಿಗೆ ಬರುತ್ತದೆ. ಇಲ್ಲಿ ಆ ʻಜೀವʼಕ್ಕೆ ಹುಟ್ಟುವ ಮೊದಲೇ ಬದುಕಿನ ದರ್ಶನವಾಗುತ್ತದೆ.
ಅಪ್ಪ-ಅಮ್ಮನ ಹುಡುಕಾಟದಲ್ಲಿ ಭೂಮಿಗೆ ಬಂದ ಒಂದು ಆತ್ಮದ ಕುತೂಹಲಗಳು ಮತ್ತು ಬಯಕೆಗಳು ಹೇಗಿರುತ್ತವೆ ಅನ್ನೋದನ್ನು ಈ ಚಿತ್ರ ವಿಶಿಷ್ಟವಾಗಿ ನಿರೂಪಿಸುತ್ತದೆ. ಕನ್ನಡದಲ್ಲಿ ಇದು ನಿಜಕ್ಕೂ ವಿಭಿನ್ನವಾದ ಕಥಾವಸ್ತು ಎಂದು ಹೇಳಬಹುದು. ಮನುಷ್ಯನಾಗಿ ಹುಟ್ಟಿದ ಒಬ್ಬೊಬ್ಬರಿಗೂ ಅನೇಕ ಬಗೆಯ ಸಂಕಟಗಳಿರುತ್ತವೆ. ಅಪಾರ ಜೀವನ ಪ್ರೀತಿ ಹೊಂದಿರುವವರ ಹೊಟ್ಟೇಲಿ ಒಳ್ಳೇ ಮಕ್ಕಳು ಹುಟ್ಟಿರುವುದಿಲ್ಲ. ಹೆತ್ತವರನ್ನು ಅನಾಥಾಶ್ರಮಕ್ಕೆ ಬಿಸಾಕಿ ಬಂದಿರುತ್ತಾರೆ. ಪ್ರೀತಿಸಿ ಮದುವೆಯಾಗಲು ಹೊರಟವರ ಎದುರು ಜಾತಿ ಜ್ವಾಲೆಯಂತೆ ಎದ್ದು ನಿಲ್ಲುತ್ತದೆ. ಇಷ್ಟವಿಲ್ಲದಿದ್ದರೂ ಮನೆಯ ಹಿರಿಯರ ಒತ್ತಾಯಕ್ಕೆ ಮದುವೆಯಾಗಬೇಕಾಗುತ್ತದೆ. ಬಯಸಿದ್ದಕ್ಕೆ ತದ್ವಿರುದ್ದವಾಗಿ ಬದುಕು ಸಾಗುತ್ತಾ ಹೋಗುತ್ತದೆ…
ಇವೆಲ್ಲದರ ಸಾವಾಸವೇ ಬೇಡ ಅಂತಾ ಆತ್ಮವೊಂದು ಹುಟ್ಟುವ ಮೊದಲೇ ಒಬ್ಬನ ಆತ್ಮದೊಳಗೆ ಹೊಕ್ಕುತ್ತದೆ. ತನ್ನ ತಂದೆ ತಾಯಿಯನ್ನು ತಾನೇ ಹುಡುಕಿ ಆಯ್ಕೆ ಮಾಡಿಕೊಳ್ಳುತ್ತದೆ. ನಗುನಗುತ್ತಾ ಬಂದ ಆ ಜೀವದ ಕಟ್ಟಕಡೆಯ ನಿರ್ಧಾರ ಏನು ಅನ್ನೋದು ಚಿತ್ರದ ಅಂತಿಮ ಗುಟ್ಟು.
'X&Y' ಚಿತ್ರದ ಕಥೆಯನ್ನು ಹೀಗೀಗೇ ಅಂತಾ ನೇರವಾಗಿ ಹೇಳುವುದು ಕಷ್ಟ. ಆದರೆ, ಇದರ ಮೂಲ ತಿರುಳು ಮಾನವ ಸಂಬಂಧಗಳು ಮತ್ತು ಜೀವನ ಮೌಲ್ಯಗಳ ಸುತ್ತ ಹೆಣೆದುಕೊಂಡಿದೆ. ಆಂಬ್ಯು ಆಟೋ ಮೂಲಕ ಜನಸೇವೆ ಮಾಡಲು ನಿಂತ ಕ್ರೀಡೆ, ಅವನ ಇನ್ಸ್‌ಟಾಗ್ರಾಮ್ ಲವರ್, ಮಾವ, ಮಾವನ ಮಗಳು, ಅವಳ ಲವ್ ಸ್ಟೋರಿ… ಹೀಗೆ ಅವನ ಜರ್ನಿಯಲ್ಲಿ ಏನೇನೋ ವಿಚಾರಗಳು ಎದುರಾಗುತ್ತವೆ.
ನಿರ್ದೇಶಕ ಸತ್ಯಪ್ರಕಾಶ್, ಗಂಭೀರ ವಿಚಾರಗಳನ್ನು ಹಾಸ್ಯದ ಮೂಲಕ ಹೇಳಲು ಪ್ರಯತ್ನಿಸಿದ್ದಾರೆ. ಇದಕ್ಕೆ ಫ್ಯಾಂಟಸಿ ಅಂಶಗಳನ್ನು ಬಳಸಿಕೊಂಡಿರುವುದು ಕುತೂಹಲ ಹೆಚ್ಚಿಸಿದ್ದಾರೆ. ಚಿತ್ರದ ಶೀರ್ಷಿಕೆ 'X&Y' ಮತ್ತು ಕಥೆಗೂ ಇರುವ ಸಂಬಂಧ ಆಳವಾಗಿದೆ. ಚಿತ್ರದ ಮೊದಲಾರ್ಧ ಮನರಂಜನೀಯವಾಗಿ ಸಾಗುತ್ತದೆ. ಹಾಸ್ಯಮಯ ಸನ್ನಿವೇಶಗಳು ನೋಡುಗರನ್ನು ನಗೆಗಡಲಲ್ಲಿ ತೇಲಿಸುತ್ತವೆ. ಆದರೆ, ದ್ವಿತೀಯಾರ್ಧದಲ್ಲಿ ಚಿತ್ರ ಗಂಭೀರ ತಿರುವು ಪಡೆಯುತ್ತದೆ. ಅನಾಥಾಶ್ರಮ, ವೃದ್ಧಾಶ್ರಮ, ಜಾತಿ ಮುಂತಾದ ಸೂಕ್ಷ್ಮ ವಿಷಯಗಳನ್ನು ಪ್ರಸ್ತಾಪಿಸುವ ಮೂಲಕ, ಜೀವ ಮತ್ತು ಜೀವನದ ಮೌಲ್ಯವನ್ನು ಅರ್ಥಮಾಡಿಸಲು ಪ್ರಯತ್ನಿಸಿದ್ದಾರೆ.
ಸತ್ಯಪ್ರಕಾಶ್ ನಟನೆಯ ಜೊತೆಗೆ ನಿರ್ದೇಶನ ಮತ್ತು ಚಿತ್ರಕಥೆಯಂತಹ ಹಲವು ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ. ತಮ್ಮ ಮಿತಿಗಳನ್ನು ಅರಿತುಕೊಂಡು, ತಮಗೊಪ್ಪುವ ಪಾತ್ರವನ್ನು ತಾವೇ ಸೃಷ್ಟಿಸಿಕೊಂಡಿದ್ದಾರೆ. ಯಾವುದೇ ಹೀರೋಯಿಸಮ್ಮನ್ನು ಪ್ರದರ್ಶಿಸದೇ ಸಾಮಾನ್ಯನಂತೆ ಕಾಣಿಸಿಕೊಂಡು ಪ್ರೇಕ್ಷಕರನ್ನು ತಲುಪುತ್ತಾರೆ. ಬೃಂದಾ ಆಚಾರ್ಯ ಮತ್ತು ಅಥರ್ವ ಪ್ರಕಾಶ್ ತಮ್ಮ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ. ಬಹಳ ದಿನಗಳ ನಂತರ ತೆರೆಯ ಮೇಲೆ ಕಾಣಿಸಿಕೊಂಡಿರುವ ಹಿರಿಯ ನಟ ದೊಡ್ಡಣ್ಣ ಆಪ್ತರಾಗಿ ಮನಸ್ಸಿಗೆ ಹತ್ತಿರವಾಗುತ್ತಾರೆ. ಅಪರೂಪಕ್ಕೆ ಸುಂದರ್ ವೀಣಾ ವಿಭಿನ್ನ ಲುಕ್ ಮಾತ್ರವಲ್ಲದೆ ಹೊಸ ಬಗೆಯ ಪಾತ್ರದಲ್ಲಿ ಇಷ್ಟವಾಗುತ್ತದೆ. ಮದುವೆ ಗಂಡಿನ ಪಾತ್ರದ ಮೂಲಕ ವಾಲ್‌ನಟ್ ಮಹೇಶ್ ಎನ್ನುವ ಖಡಕ್ ವಿಲನ್ ಕನ್ನಡ ಚಿತ್ರರಂಗಕ್ಕೆ ದಕ್ಕಿದ್ದಾರೆ. ಮಹೇಶ್ ತೆರೆಗೆ ಹೊಸಬರಾದರೂ, ಅನುಭವೀ ನಟನಂತೆ ಪಾತ್ರ ಪೋಷಣೆ ಮಾಡಿದ್ದಾರೆ.
ಚಿತ್ರದಲ್ಲಿ ಲವಿತ್ ಛಾಯಾಗ್ರಹಣ, ಕೌಶಿಕ್ ಹರ್ಷ ಸಂಗೀತ ಮತ್ತು ಗ್ರಾಫಿಕ್ಸ್ ತಾಂತ್ರಿಕವಾಗಿ ಚಿತ್ರದ ಅಂದವನ್ನು ಹೆಚ್ಚಿಸಿವೆ. ಒಟ್ಟಾರೆ, 'X&Y' ಕೇವಲ ಒಂದು ಚಿತ್ರವಲ್ಲ, ಇದೊಂದು ಜೀವನ ಪಾಠ.