10/01/2024
ತ್ಯಾಗವೀರ ಮಹಾಧಾನಿ #ಶಿರಸಂಗಿ #ಲಿಂಗರಾಜ
#ದೇಸಾಯಿ ಯವರ ಜನ್ಮದಿನವಿಂದು 💖🙏💐
--------------------------------------------
ಶರಣ ಶ್ರೀ ಶಿರಸಂಗಿ ಲಿಂಗರಾಜ ದೇಸಾಯಿ ಈ ನಾಡು ಕಂಡ ಅಪ್ರತಿಮ ದಾನವೀರ ಅವರ ತ್ಯಾಗ ಮತ್ತು ಉದಾರ ಮನೋಭಾವ ಸದಾ ಸ್ಮರಣೀಯವಾದದ್ದು. ಕನ್ನಡ ನಾಡಿಗೆ ಮತ್ತು ಲಿಂಗಾಯತ ಸಮಾಜಕ್ಕೆ ಅಪಾರ ಸೇವೆ ಸಲ್ಲಿಸಿ, ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿದ ದೇಸಾಯಿಯವರ ಸಂಪೂರ್ಣ ಪರಿಚಯ ನಾಡಿನಾದ್ಯಂತ ಆಗಬೇಕಾಗಿದೆ.
ಶಿರಸಂಗಿ ಲಿಂಗರಾಜರು ಗದಗ ಜಿಲ್ಲೆಯ ಲಕ್ಷ್ಮೇಶ್ವರ ಸಮೀಪದ ಶಿಗ್ಲಿ ಗ್ರಾಮದಲ್ಲಿ ಗೂಳಪ್ಪ ಮತ್ತು ಯಲ್ಲವ್ವ ಮಾಡ್ಲಿ ದಂಪತಿಗೆ 1861 ರ ಜನವರಿ 10 ರಂದು ಜನಿಸಿದರು . ನಂತರ ಶಿರಸಂಗಿ ದೇಸಗತಿ ಸಂಸ್ಥಾನದ ದೇಸಾಯಿ ಹಾಗೂ ಗಂಗಾಬಾಯಿ ಜಯಪ್ಪ ದೇಸಾಯಿ ಅವರು ದತ್ತು ಪಡೆದರು . ಜೂನ್ 2, 1872 ರಂದು ಅವರ ಹೆಸರನ್ನು ರಾಮಪ್ಪ ಮಡ್ಲಿಯಿಂದ ಶಿರಸಂಗಿ ಲಿಂಗರಾಜ ದೇಸಾಯಿ ಎಂದು ಬದಲಾಯಿಸಲಾಯಿತು
ಶಿರಸಂಗಿ ಲಿಂಗರಾಜ್ ದೇಸಾಯಿ (1861-1906) ಒಬ್ಬ ಭಾರತೀಯ ಲೋಕೋಪಕಾರಿ ಮತ್ತು ಆಡಳಿತಗಾರ ರಾಜ ಮತ್ತು ಶಿರಸಂಗಿ ಪ್ರಾಂತ್ಯದ ಕೊನೆಯ ಪ್ರಾಂತೀಯ ಆಡಳಿತಗಾರ . ಲಿಂಗಾಯತ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತಮ್ಮ ಆಸ್ತಿಯೆಲ್ಲವನ್ನೂ ದಾನ ಮಾಡಿದರು . 1904 ರಲ್ಲಿ ಧಾರವಾಡದಲ್ಲಿ ನಡೆದ ಮೊದಲ ಅಖಿಲ ಭಾರತ ವೀರಶೈವ ಮಹಾಸಭಾ ಸಮಾವೇಶದ ಅಧ್ಯಕ್ಷತೆ ವಹಿಸಿದ್ದರು.
18ನೇ ಶತಮಾನದ ಅಂತ್ಯದಲ್ಲಿ ವಿಧವಾ ವಿವಾಹದಂಥ ಸಾಮಾಜಿಕ ಬದಲಾವಣೆಗೆ ಮುಂದಾದವರು ಶಿರಸಂಗಿ ಲಿಂಗರಾಜ ದೇಸಾಯಿ ಅವರು.
ಅವರ ದೂರದೃಷ್ಟಿತ್ವದಿಂದಾಗಿ ಅನೇಕ ಶಿಕ್ಷಣ ಸಂಸ್ಥೆಗಳು ಆರಂಭವಾದವು. ಕೃಷಿಯನ್ನೇ ನಂಬಿದ್ದ ಲಿಂಗಾಯತ ಸಮುದಾಯವು ಶಿಕ್ಷಣದತ್ತ ಒಲವು ತೋರುವಂತೆ ಮಾಡಿದರು. ವಸತಿನಿಲಯಗಳ ನಿರ್ಮಾಣ, ಶಿಕ್ಷಣ ಸಂಸ್ಥೆಗಳ ನಿರ್ಮಾಣ, ಆ ಕಾಲದಲ್ಲಿಯೇ ಸಹಕಾರ ತತ್ವದ ಅಡಿ ಕೃಷಿಕರಿಗಾಗಿ ಮಾರುಕಟ್ಟೆ ನಿರ್ಮಾಣ, ಕೃಷಿಯಲ್ಲಿ ತರಬೇತಿಗಾಗಿ ಪ್ರಾಯೋಗಿಕ ಜಮೀನು ಖರೀದಿ ಮತ್ತು ತರಬೇತಿ ಹೀಗೆ ಹತ್ತು ಹಲವು ಅಭಿವೃದ್ಧಿ ಪರ ಕಾರ್ಯಗಳನ್ನು ಕೈಗೊಂಡಿದ್ದು ಶಿರಸಂಗಿ ಸಂಸ್ಥಾನ.
ಈ ಸಂಸ್ಥಾನದ ಕೊನೆಯ ದೊರೆ ಲಿಂಗರಾಜ ದೇಸಾಯಿ(1861-1906) ಅವರು ಸಾರ್ವಜನಿಕ ಹಿತಾಸಕ್ತಿಗಾಗಿ ತಮ್ಮೆಲ್ಲ ಸಂಪತ್ತನ್ನೂ ವಿನಿಯೋಗಿಸಿದರು. ಸಾಮಾನ್ಯವಾಗಿ ರಾಜ್ಯಬೊಕ್ಕಸಕ್ಕೆ ಸಾರ್ವಜನಿಕರ ಆದಾಯ ಸೇರುತ್ತದೆ. ಇಲ್ಲಿ ಮಾತ್ರ ತ್ರಿವಿಧ ದಾಸೋಹಿಯಂತೆ ಸಂಸ್ಥಾನದ ಆಸ್ತಿ ಎಲ್ಲವೂ ಸಮುದಾಯದ ಹಿತಾಸಕ್ತಿಗಾಗಿ ವಿನಿಯೋಗಿಸಲು ‘ಶಿರಸಂಗಿ ಲಿಂಗರಾಜ ಟ್ರಸ್ಟ್’ ಸ್ಥಾಪಿಸಿದರು. ‘ಅರವತ್ತ ನಾಲ್ಕನೆಯ ಪುರಾತನ ಶಿವಶರಣ’ ಎಂದು ಅವರು ಸಮಕಾಲೀನರಿಂದ ಕರೆಯಿಸಿಕೊಂಡಿದ್ದರು.
ಅರಟಾಳ ರುದ್ರಗೌಡರು, ವಾರದ ಮಲ್ಲಪ್ಪನವರು, ಪುಟ್ಟಣ್ಣ ಶೆಟ್ಟರು ಸೇರಿದಂತೆ ಆ ಕಾಲದ ಹಿರಿಯರ ಜೊತೆಗೆ ಸಮಾಲೋಚಿಸಿ, ಸಮಾಜ ಸಂಘಟನೆಗೆ ಮುಂದಾದರು. ಹಾನಗಲ್ ಕುಮಾರಸ್ವಾಮಿ ಅವರು ಅಖಿಲ ಭಾರತ ವೀರಶೈವ ಮಹಾಸಭೆಯನ್ನು ಪ್ರಾರಂಭಿಸಿದರು.
ಹಾವೇರಿ ಹತ್ತಿರದ ದೇವಿಹೊಸುರು ಗ್ರಾಮದಲ್ಲಿ 1.10 ಎಕರೆ ಜಮೀನನ್ನು ಖರೀದಿಸಿ, ಕೃಷಿ ತರಬೇತಿ ಶಾಖೆಯನ್ನು ಪ್ರಾರಂಭಿಸಿ
ದರು.ನವಲಗುಂದ ಮತ್ತು ಶಿರಸಂಗಿ ಊರುಗಳಲ್ಲಿ ಕೆರೆಗಳನ್ನು ನಿರ್ಮಿಸಿ ಹೊಲಗಳಿಗೆ ನೀರುಣಿಸುವ ತಂತ್ರಜ್ಞಾನವನ್ನು ರೂಢಿಗೆ ತಂದರು.ವಿಜಯಪುರದಲ್ಲಿ ಸಹಕಾರ ತತ್ವದಡಿಯಲ್ಲಿ ಏಳೂರ ಗೌಡರ ದಲ್ಲಾಳಿ ಮಂಡಳಿಯನ್ನು ಸ್ಥಾಪಿಸಿದರು. ಕೃಷಿ, ಶಿಕ್ಷಣ, ಮಾರುಕಟ್ಟೆ, ಸಾಮಾಜಿಕ ಸುಧಾರಣೆ ಹೀಗೆ ಸಮಗ್ರ ಅಭಿವೃದ್ಧಿಗಾಗಿ ಶ್ರಮಿಸಿದ ಲಿಂಗರಾಜ ಅವರು ಆಧುನಿಕ ಕರ್ನಾಟಕದ ನಿರ್ಮಾಪಕರೆನಿಸಿಕೊಂಡರು
ಶಿರಸಂಗಿ ಲಿಂಗರಾಜರ ಮೃತ್ಯುಪತ್ರದಲ್ಲಿದಂತೆ ೧೯೦೬ ನೇ ಇಸವಿಯ ಆಗಸ್ಟ್ ತಿಂಗಳಲ್ಲಿ ವೀರಶೈವ ಲಿಂಗಾಯತ ವಿದ್ಯಾರ್ಥಿಗಳ ಉನ್ನತಿ ಮತ್ತು ಶಿಕ್ಷಣಾಭಿವೃದ್ಧಿಗಾಗಿ ನವಲಗುಂದ-ಶಿರಸಂಗಿ ಟ್ರಸ್ಟ್ ಸ್ಥಾಪಿಸಲಾಯಿತು. ಆಗ ಟ್ರಸ್ಟ್ ನ ವರಮಾನ ಸುಮಾರು ಆರು ಲಕ್ಷ ರೂಪಾಯಿ ಇತ್ತು. ೧೯೩೦ ಮತ್ತು ೧೯೮೪ರ ನಡುವೆ ಈ ಟ್ರಸ್ಟ್ ನಿಂದ ಸುಮಾರು ೬,೯೨೫ ವಿದ್ಯಾರ್ಥಿಗಳು ಪಡೆದ ಹಣಕಾಸು ನೆರವಿನ ಮೌಲ್ಯ ಸುಮಾರು ೨೨,೯೮,೩೨೧-೦೦ ಭಾರತೀಯ ರೂಪಾಯಿಗಳು . ಈ ಟ್ರಸ್ಟ್ ಈಗಲೂ ಸಹಲಿಂಗಾಯತ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯವನ್ನು ಮುಂದುವರೆಸಿದೆ. ಡಿ.ಸಿ.ಪಾವಟೆ, ಬಿ.ಡಿ.ಜತ್ತಿ, ಎಸ್.ಆರ್.ಕಂಠಿ, ರತ್ನಪ್ಪಾ ಕುಂಬಾರರು ಈ ಟ್ರಸ್ಟ್ ನಿಂದ ಆರ್ಥಿಕ ನೆರವು ಪಡೆದ ಕೆಲವು ಗಮನಾರ್ಹ ವ್ಯಕ್ತಿಗಳು.
ಕರ್ನಾಟಕ ಲಿಂಗಾಯತ ಶಿಕ್ಷಣ(ಕೆಎಲ್ಇ) ಸೊಸೈಟಿ ಶಿರಸಂಗಿ ಲಿಂಗರಾಜರು ಮಾಡಿದ ದಾನದ ಕೃತಾರ್ಥವಾಗಿ ೧೯೧೬ ರಲ್ಲಿ ಸ್ಥಾಪಿಸಲಾದ ಅದರ ಮೊದಲ ಕಾಲೇಜಿಗೆ ಶಿರಸಂಗಿ ಲಿಂಗರಾಜರ ಹೆಸರು ಇಟ್ಟಿದೆ. ಇಂದಿಗೂ ಅವರ ಟ್ರಸ್ಟ್ ಹೆಸರಲ್ಲಿ 3000 ಕಿಂತಲೂ ಹೆಚ್ಚು ಎಕರೆ ಭೂಮಿ ಇದೆ ಅದರಿಂದ ಬಂದ ಆಧಾಯವನ್ನು ಸಾಮಾಜಿಕ ಕಾರ್ಯಗಳಿಗೆ ಉಪಯೋಗಿಸುತ್ತಿದ್ದಾರೆ. ಜನ್ಮದಿನವಾದ ಇಂದು ಅವರಿಗೆ ಕೋಟಿ ಕೋಟಿ ನಮನಗಳು 🙏💖🙏
# Anil Allolli ಅಖಿಲ ಭಾರತ ಶರಣ ಸಾಹಿತ್ಯ
ಪರಿಷತ್ತು ಜಿಲ್ಲಾ ಘಟಕ ಧಾರವಾಡ.