28/10/2025
“ಹೊಸದಾಗಿ ರಚಿಸಿರುವ GBA ಹಾಗೂ ಐದು ಪಾಲಿಕೆಗಳಲ್ಲಿ ಭ್ರಷ್ಟಾಚಾರ ಮುಕ್ತ ಆಡಳಿತ ನಡೆಸುವ ಸಲುವಾಗಿ ಸರ್ಕಾರವು ತೆಗೆದುಕೊಳ್ಳಬೇಕಿರುವ ಕ್ರಮಗಳ ಬಗ್ಗೆ ಮುಖ್ಯಮಂತ್ರಿ ಶ್ರೀ. ಸಿದ್ಧರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಶ್ರೀ. ಡಿ. ಕೆ. ಶಿವಕುಮಾರ್ ಅವರಿಗೆ N. R. ರಮೇಶ್ ಅವರಿಂದ ಬಹಿರಂಗ ಪತ್ರ”
ಬೆಂಗಳೂರು ಮಹಾನಗರದ ನಾಲ್ಕು ಪ್ರಮುಖ ಸ್ಥಳೀಯ ಸಂಸ್ಥೆಗಳಾದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ಮತ್ತು ಬೆಂಗಳೂರು ವಿದ್ಯುತ್ ಸರಬರಾಜು ಕಂಪೆನಿಗಳಲ್ಲಿ ಕಳೆದ ಹತ್ತು - ಹನ್ನೆರಡು ವರ್ಷಗಳಿಂದೀಚೆಗೆ ಭ್ರಷ್ಟಾಚಾರದ ಪ್ರಮಾಣವು ಊಹೆಗೂ ನಿಲುಕದಷ್ಟು ಅಂಕೆ ಮೀರಿ ಬೆಳೆದು ನಿಂತಿದೆ.
ಈ ನಾಲ್ಕು ಸ್ಥಳೀಯ ಸಂಸ್ಥೆಗಳ ಪೈಕಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮತ್ತು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಪ್ರತಿಯೊಂದು ಹಂತ - ಹಂತದಲ್ಲಿಯೂ ಭ್ರಷ್ಟಾಚಾರವು ತಾಂಡವವಾಡುತ್ತಿದೆ.
A) ಎಂಜಿನಿಯರಿಂಗ್ ವಿಭಾಗಗಳಲ್ಲಿ:- ಟೆಂಡರ್ ಅನುಮೋದನೆ ದೊರೆತು ಕಾರ್ಯಾದೇಶ ಪತ್ರ (Work Order) ಗಳನ್ನು ನೀಡುವಾಗ, ಮಾರ್ಪಾಟು ಅಂದಾಜು ಪಟ್ಟಿ (Modification of Estimation -> EIRL ಮತ್ತು Work Slip) ಗೆ ಅನುಮೋದನೆ ನೀಡುವಾಗ, ಕಾಮಗಾರಿ ಪೂರ್ಣಗೊಂಡ ನಂತರ ಗುತ್ತಿಗೆದಾರನಿಗೆ ಹಣ ಬಿಡುಗಡೆ ಮಾಡುವ ಸಂಬಂಧದ Bill Register Entry, Measurement Book Entry, Quality Control Report Entry ಮಾಡುವುದರಿಂದ ಮೊದಲ್ಗೊಂಡು ಅಂತಿಮ ಹಣ ಬಿಡುಗಡೆ ಮಾಡುವವರೆಗೆ – AE, AEE, EE, SE, CE, JC, Zonal Commissioner, CAO ಮತ್ತು Special Commissioner (Finance) ಕಛೇರಿಗಳಲ್ಲಿ. . . . .
B) ಕಂದಾಯ ಇಲಾಖೆಗಳಲ್ಲಿ:- ಹೊಸ ಖಾತಾ ಮಾಡುವುದು, ಖಾತಾ ವಿಭಜನೆ, ಖಾತಾ ಒಂದುಗೂಡಿಸುವಿಕೆ ಕಾರ್ಯಗಳಿಂದ ಮೊದಲ್ಗೊಂಡು ಸುಧಾರಣಾ / ಅಭಿವೃದ್ಧಿ ಶುಲ್ಕ ಪಾವತಿಸಿಕೊಳ್ಳದೆಯೇ ಕಾನೂನು ಬಾಹಿರವಾಗಿ ‘B’ ವಹಿ ಸ್ವತ್ತುಗಳಿಗೆ ಅಕ್ರಮ ‘A’ ಖಾತಾ ನೀಡುವವರೆಗೆ – TI, RI, Assessor, ARO, RO, DC ಮತ್ತು Special Commissioner (Revenue) ಕಛೇರಿಗಳಲ್ಲಿ. . . . .
C) ನಗರ ಯೋಜನೆ ಇಲಾಖೆಗಳಲ್ಲಿ:- ನಕ್ಷೆ ಮಂಜೂರಾತಿ, ಪ್ರಾರಂಭಿಕ ಪ್ರಮಾಣ ಪತ್ರ (Commencement Certificate) ನೀಡುವುದರಿಂದ ಮೊದಲ್ಗೊಂಡು ಸ್ವಾಧೀನಾನುಭವ ಪತ್ರ (Occupancy Certificate) ನೀಡುವವರೆಗೆ ಮಾತ್ರವಲ್ಲದೆ, ಪೂರ್ಣಪ್ರಮಾಣದ ಶುಲ್ಕ ಪಾವತಿಸಿಕೊಳ್ಳದೆಯೇ ನಿಗದಿತ ದರದಲ್ಲಿ ಶೇ. 50% ರಷ್ಟು ಲಂಚ ಪಡೆದು ನಕಲಿ ಸ್ವಾಧೀನಾನುಭವ ಪತ್ರ (Duplicate Occupancy Certificate) ನೀಡುವವರೆಗೆ – AE, ADTP, DDTP, JDTP, ಕೇಂದ್ರ ವಿಭಾಗದ JDTP, Additional Director Town Planning ಮತ್ತು Chief Director Town Planning ಕಛೇರಿಗಳಲ್ಲಿ. . . . .
ಊಹೆಗೂ ನಿಲುಕದಷ್ಟು ಪ್ರಮಾಣದಲ್ಲಿ ಭ್ರಷ್ಟಾಚಾರವೆಂಬ ಪಿಡುಗು ವ್ಯಾಪಕವಾಗಿ / ರಾಜಾರೋಷವಾಗಿ ನಡೆಯುತ್ತಿದ್ದು, ಕ್ಯಾಕ್ಟಸ್ ವಿಷದಂತೆ ವ್ಯಾಪಿಸಿಕೊಂಡಿದೆ !!!
“ಪಾರದರ್ಶಕ ಮತ್ತು ಭ್ರಷ್ಟಾಚಾರ ಮುಕ್ತ ಆಡಳಿತ ನೀಡುವ - ಇಚ್ಛಾಶಕ್ತಿ ನಿಮಗೆ ನಿಜಕ್ಕೂ ಇದ್ದಿದ್ದೇ ಆದಲ್ಲಿ. . . . .”
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಯಥಾಸ್ಥಿತಿಯಲ್ಲಿಯೇ ಚುನಾವಣೆ ನಡೆದರೆ ಕಾಂಗ್ರೆಸ್(ಐ) ಪಕ್ಷಕ್ಕೆ ಬಹುಮತವೆಂಬುದು ಮರೀಚಿಕೆ ಎಂಬ ಸತ್ಯವನ್ನು ಅರಿತು, ಶತಾಯ ಗತಾಯ ಅಧಿಕಾರವನ್ನು ಹಿಡಿಯಲೇಬೇಕೆಂಬ ಏಕೈಕ ದುರುದ್ದೇಶದಿಂದ ಅವರ ಪಕ್ಷದ ಸ್ವಹಿತಾಸಕ್ತಿಗಾಗಿ - ನಾಡಪ್ರಭು ಕೆಂಪೇಗೌಡರು ನಿರ್ಮಿಸಿರುವ ಬೆಂಗಳೂರು ಮಹಾನಗರವನ್ನು ಒಡೆದು ಚೂರು ಚೂರುಗಳನ್ನಾಗಿ ಮಾಡಿ - “ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA)” ವನ್ನು ರಚಿಸಿದ್ದಲ್ಲದೇ, BBMP ಯನ್ನು ಐದು ಪಾಲಿಕೆಗಳನ್ನಾಗಿ ವಿಭಜಿಸಿರುತ್ತಾರೆ. . . . .
ಬೆಂಗಳೂರಿನ ಮೂಲ ನಿವಾಸಿಗಳ ಭಾವನೆಗಳಿಗೆ ಕಿವಿಗೊಡದೆ, ಕಾಂಗ್ರೆಸ್(ಐ) ಪಕ್ಷದ ಸರ್ಕಾರ ನೂತನವಾಗಿ ರಚಿಸಿರುವ “ಐದು ಪಾಲಿಕೆ” ಗಳಲ್ಲಿಯಾದರೂ “ಪಾರದರ್ಶಕ ಮತ್ತು ಭ್ರಷ್ಟಾಚಾರ ರಹಿತ ಆಡಳಿತ / ಸಾರ್ವಜನಿಕ ಸೇವೆ ನೀಡುವ ಇಚ್ಛಾಶಕ್ತಿ” ಅವರ ಸರ್ಕಾರಕ್ಕೆ ಇದ್ದಿದ್ದೇ ಆದಲ್ಲಿ, ಈ ಕೆಳಕಂಡ ಎಂಟು ನಿಯಮಗಳನ್ನು ಕಡ್ಡಾಯವಾಗಿ ಜಾರಿಗೆ ತರಬೇಕಾದುದ್ದು ಅವರ ಆದ್ಯ ಕರ್ತವ್ಯವಾಗಿರುತ್ತದೆ.
1) ಆಡಳಿತದ ಕೆಳ ಹಂತದಿಂದ ಅಂತಿಮ ಹಂತದವರೆಗೆ ಸಂಪೂರ್ಣವಾಗಿ ಶೇ. 100% ರಷ್ಟು “ಕಾಗದ ರಹಿತ ಆಡಳಿತ”ನೀಡುವುದು.
2) “ಕಾಗದದ ಪ್ರತಿಗಳ ಕಡತ”(Hard Copy File) ಗಳಿಗೆ ತಿಲಾಂಜಲಿ ಇಟ್ಟು, “ವಿದ್ಯುನ್ಮಾನ ಪ್ರತಿಗಳ ಕಡತ”(Soft Copy / e – file) ಗಳಿಗೆ ಒತ್ತುಕೊಟ್ಟು ಕಡ್ಡಾಯವಾಗಿ ಜಾರಿಗೆ ತರುವುದು.
3) ಸಾರ್ವಜನಿಕರಾಗಲೀ ಅಥವಾ ಗುತ್ತಿಗೆದಾರರಾಗಲೀ ಕಛೇರಿಯಿಂದ ಕಛೇರಿಗೆ ಅಲೆಯುವುದನ್ನು ತಪ್ಪಿಸಿ, ಆಯಾ ಕಡತಗಳ ಅನುಮೋದನೆಗೆ ಪ್ರತಿಯೊಬ್ಬ ಅಧಿಕಾರಿ / ನೌಕರರಿಗೆ ಗರಿಷ್ಠ 24 ಗಂಟೆಗಳ ಕಾರ್ಯಾವಧಿಯನ್ನು ನಿಗದಿ ಪಡಿಸುವುದು ಹಾಗೂ ಮೂರು ದಿನಗಳ ಒಳಗಾಗಿ ಆಯಾ ಕಡತಗಳಿಗೆ ಅನುಮೋದನೆ ನೀಡಿ ಮೇಲಾಧಿಕಾರಿಗೆ ಕಡತವನ್ನು ರವಾನಿಸದ ಅಧಿಕಾರಿ / ನೌಕರನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು.
4) ಪ್ರತಿಯೊಂದು ಇಲಾಖೆಯ ಕೆಳ ಹಂತದ ಕಛೇರಿಯಿಂದ ಮೊದಲ್ಗೊಂಡು ವಲಯ ಆಯುಕ್ತರು, ಅಪರ ಆಯುಕ್ತರ ಕಛೇರಿಗಳು ಸೇರಿದಂತೆ ಆಯುಕ್ತರ ಕಛೇರಿಗಳಲ್ಲಿ ಸಿ.ಸಿ. ಕ್ಯಾಮೆರಾಗಳನ್ನು ಕಡ್ಡಾಯವಾಗಿ ಅಳವಡಿಸುವುದು / ಪ್ರತಿಯೊಂದು ಸಿ.ಸಿ. ಕ್ಯಾಮೆರಾಗಳಲ್ಲಿ ಕನಿಷ್ಠ ಆರು ತಿಂಗಳ ಕಾಲ ಮುದ್ರಿಕೆಯನ್ನು ಶೇಖರಿಸುವಂತಹ Memory Card ಗಳ ಸೌಲಭ್ಯ ಕಲ್ಪಿಸುವುದು.
5) ಅಧಿಕಾರಿಗಳು / ನೌಕರರು ಗುತ್ತಿಗೆದಾರರನ್ನಾಗಲೀ ಅಥವಾ ಗ್ರಾಹಕರನ್ನಾಗಲೀ ಅವರವರ ಅಧಿಕೃತ ಕಛೇರಿಗಳನ್ನು ಹೊರತುಪಡಿಸಿ, ಖಾಸಗಿ ಸ್ಥಳಗಳಲ್ಲಿ ಭೇಟಿ ಮಾಡುವುದನ್ನು ಕಡ್ಡಾಯವಾಗಿ ನಿಷೇಧಿಸುವುದು.
6) ಪ್ರತಿಯೊಬ್ಬ ಅಧಿಕಾರಿಯು ಬಳಸುವ ಸರ್ಕಾರಿ ವಾಹನ ಮತ್ತು ಸ್ವಂತ ವಾಹನಗಳಿಗೆ GPS ಅಳವಡಿಕೆಯನ್ನು ಕಡ್ಡಾಯಗೊಳಿಸಿ, ಪ್ರತೀ ತಿಂಗಳು ಆಯಾ ವಾಹನಗಳಿಗೆ ಸಂಬಂಧಿಸಿದ RFID ದಾಖಲೆಗಳನ್ನು ಒದಗಿಸುವುದನ್ನು ಕಡ್ಡಾಯಗೊಳಿಸುವುದು.
7) ಪ್ರತಿಯೊಂದು ಇಲಾಖೆಯ ಪ್ರತಿಯೊಬ್ಬ ಅಧಿಕಾರಿ / ನೌಕರರು ನಿರ್ವಹಿಸಿರುವ ಕಾರ್ಯವು ಕ್ರಮಬದ್ಧವಾಗಿದೆಯೇ ? ಅಥವಾ ಕಾನೂನು ಬಾಹಿರವಾಗಿದೆಯೇ ? ಎಂಬ ಬಗ್ಗೆ ಕಛೇರಿವಾರು ಮಾಹಿತಿಯನ್ನು ಪ್ರತೀ ತಿಂಗಳಿಗೊಮ್ಮೆ ವಿಶೇಷ ತಂಡದಿಂದ ಪಡೆದುಕೊಳ್ಳುವುದು.
8) ಇವೆಲ್ಲವುಗಳಿಗಿಂತಲೂ ಮುಖ್ಯವಾಗಿ “ದ್ವಿತೀಯ ದರ್ಜೆ ನೌಕರ”ರಿಂದ ಮೊದಲ್ಗೊಂಡು “ಆಯುಕ್ತ”ರವರೆಗೆ ಪ್ರತಿಯೊಬ್ಬರೂ ಪ್ರತೀ ವರ್ಷ ನಿಗದಿತ ಸಮಯದೊಳಗೆ ತಮ್ಮ ತಮ್ಮ “ಆಸ್ತಿ / ಆದಾಯ ಘೋಷಣಾ ಪ್ರಮಾಣ ಪತ್ರ”ಗಳನ್ನು “ಲೋಕಾಯುಕ್ತ ಕಛೇರಿ”ಯಲ್ಲಿ ಸಲ್ಲಿಸಬೇಕೆಂಬ ಕಡ್ಡಾಯ ನಿಯಮವನ್ನು ಜಾರಿಗೆ ತರುವುದು.
ಮೇಲೆ ತಿಳಿಸಿರುವ ಎಲ್ಲ ನಿಯಮಗಳನ್ನು ಹೊಸದಾಗಿ ರಚಿಸಿರುವ “ಐದು ಪಾಲಿಕೆ”ಗಳಲ್ಲಿ ಮತ್ತು “ಗ್ರೇಟರ್ ಬೆಂಗಳೂರು ಪ್ರಾಧಿಕಾರ”ದಲ್ಲಿ ಕಡ್ಡಾಯವಾಗಿ / ಪರಿಣಾಮಕಾರಿಯಾಗಿ ಜಾರಿಗೆ ತಂದಿದ್ದೇ ಆದಲ್ಲಿ ಭ್ರಷ್ಟಾಚಾರದ ಪ್ರಮಾಣವನ್ನು ಸಂಪೂರ್ಣವಾಗಿಯಲ್ಲದಿದ್ದರೂ, ಪ್ರಸ್ತುತ ಚಾಲ್ತಿಯಲ್ಲಿರುವ ಪ್ರಮಾಣದ ಶೇ. 50% ರಷ್ಟಾದರೂ ಕಡಿಮೆ ಮಾಡಬಹುದು.
ಈಗಿನ ಮತ್ತು ಮುಂದಿನ ಪೀಳಿಗೆಯು “ಭ್ರಷ್ಟ ವ್ಯವಸ್ಥೆ”ಯಲ್ಲಿ ಜೀವಿಸುವಂತಹ ಅಸಹ್ಯಕರ ವಾತಾವರಣವನ್ನು ಬದಲಿಸಿ, “ಭ್ರಷ್ಟಾಚಾರ ಮುಕ್ತ ವ್ಯವಸ್ಥೆ”ಯಲ್ಲಿ ಜೀವಿಸುವಂತಹ ವಾತಾವರಣವನ್ನು ನಿರ್ಮಿಸುವ ಅವಕಾಶ ತಮಗೆ ದೊರೆತಿದ್ದು, ಈ ನಿಟ್ಟಿನಲ್ಲಿ “ಪ್ರಾಮಾಣಿಕ ಪ್ರಯತ್ನ”ವನ್ನು “ಬೆಂಗಳೂರು ಮಹಾನಗರ”ದ ಜನತೆ ಸರ್ಕಾರದಿಂದ ನಿರೀಕ್ಷಿಸುತ್ತಿದೆ ಎಂಬ “ಮಹಾ ಸತ್ಯ”ವನ್ನು ಅರ್ಥಮಾಡಿಕೊಂಡು ಮುಂದಡಿಯನ್ನು ಇಡಬೇಕೆಂದು ಮುಖ್ಯಮಂತ್ರಿಗಳು ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ. ಸಿದ್ಧರಾಮಯ್ಯನವರನ್ನು ಮತ್ತು ಉಪ ಮುಖ್ಯಮಂತ್ರಿಗಳು ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಉಪಾಧ್ಯಕ್ಷರಾದ ಶ್ರೀ. ಡಿ. ಕೆ. ಶಿವಕುಮಾರ್ ಅವರನ್ನು ಆಗ್ರಹಿಸಲಾಗಿದೆ.
ಇಲ್ಲವಾದಲ್ಲಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ತಾವು ಕಾರ್ಯ ನಿರ್ವಹಿಸಿರುವ ಕೆಲವೇ ವರ್ಷಗಳ ಅವಧಿಯಲ್ಲಿ: ಸುಮಾರು ಒಂದು ಸಾವಿರ ಕೋಟಿ ರೂಪಾಯಿಗಳಿಗೂ ಹೆಚ್ಚು ಮೊತ್ತದ “ಸ್ಥಿರಾಸ್ತಿ / ಚರಾಸ್ತಿ”ಮಾಡಿರುವ ನಿವೃತ್ತ ಕಂದಾಯ ವಸೂಲಿಗಾರ “ಗಂಗರಾಜು”ವಿನಂತೆ, ಸುಮಾರು ಐದು ನೂರು ಕೋಟಿ ರೂ. ಗಳಿಗೂ ಹೆಚ್ಚು ಮೊತ್ತದ “ಸ್ಥಿರಾಸ್ತಿ / ಚರಾಸ್ತಿ”ಮಾಡಿರುವ TDR ವಿಭಾಗದ AEE “ದೇವರಾಜು”ವಿನಂತೆ, ಸುಮಾರು ಇನ್ನೂರು ಕೋಟಿ ರೂ. ಗಳಿಗೂ ಹೆಚ್ಚು ಮೊತ್ತದ “ಸ್ಥಿರಾಸ್ತಿ / ಚರಾಸ್ತಿ”ಮಾಡಿರುವ ನಗರ ಯೋಜನೆ ಇಲಾಖೆಯ ನಿಕಟ ಪೂರ್ವ ಜಂಟಿ ನಿರ್ದೇಶಕ “ಮಂಜೇಶ”ನಂತೆ ಅಥವಾ ಸುಮಾರು ಒಂದು ನೂರು ಕೋಟಿ ರೂ. ಗಳಿಗೂ ಹೆಚ್ಚು ಮೊತ್ತದ “ಸ್ಥಿರಾಸ್ತಿ / ಚರಾಸ್ತಿ”ಮಾಡಿರುವ ನಾಲ್ಕನೇ ದರ್ಜೆ ನೌಕರ “ಕೃಷ್ಣ”ಎಂಬಾತನಂತೆ ನೂರಾರು ಮಂದಿ ಮಹಾ ಭ್ರಷ್ಟರು ಪ್ರತೀ ದಿನ “ಬಕ ಪಕ್ಷಿ”ಗಳಂತೆ ಹುಟ್ಟಿಕೊಳ್ಳುತ್ತಲೇ ಇರುತ್ತಾರೆ ಹಾಗೂ ಪ್ರಸ್ತುತ ಜಾರಿಯಲ್ಲಿರುವ ಭ್ರಷ್ಟಾಚಾರದ ಪ್ರಮಾಣವನ್ನು ಇನ್ನಷ್ಟು ಏರಿಸುತ್ತಲೇ ಇರುತ್ತಾರೆ.
ಇವೆಲ್ಲವುಗಳ ಜೊತೆಗೆ, ಹಿಂದಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮೂಲ ಬಿಬಿಎಂಪಿ ಅಧಿಕಾರಿ / ನೌಕರರು ಮತ್ತು ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಿಂದ ಅಧಿಕಾರಿಗಳು ಎರವಲು ಸೇವೆ ಅಡಿಯಲ್ಲಿ ಬಿಬಿಎಂಪಿಗೆ ನಿಯೋಜನೆಗೊಂಡು ಕಾರ್ಯ ನಿರ್ವಹಿಸುತ್ತಿದ್ದ ಸಂದರ್ಭಗಳಲ್ಲಿ ED / ACB / ಲೋಕಾಯುಕ್ತ ಸಂಸ್ಥೆಗಳ ದಾಳಿಗೆ ಒಳಗಾಗಿದ್ದ ಅಥವಾ ಭ್ರಷ್ಟಾಚಾರ ಪ್ರಕರಣಗಳಲ್ಲಿ ಬಂಧಿತರಾಗಿ ಅಮಾನತು ಶಿಕ್ಷೆಗೆ ಗುರಿಯಾಗಿದ್ದ ಅಧಿಕಾರಿ / ನೌಕರರನ್ನು ಪ್ರಾಮುಖ್ಯತೆಯಿಲ್ಲದ ಇಲಾಖೆಗಳಿಗೆ ವರ್ಗಾವಣೆ ಮಾಡುವ ಹಾಗೂ ಎರವಲು ಸೇವೆ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ರಾಜ್ಯದ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಪುನಃ GBA ಗೆ ಸಂಬಂಧಿಸಿದ ಐದು ಪಾಲಿಕೆಗಳಲ್ಲಿನ ಯಾವುದೇ ಇಲಾಖೆಗೂ ನಿಯೋಜನೆ ಮಾಡದೇ ಇರುವ ಕಡ್ಡಾಯ ನಿಯಮಗಳನ್ನು ಜಾರಿಗೆ ತರುವ ಮೂಲಕ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮತ್ತು ಐದು ಪಾಲಿಕೆಗಳಿಗೆ ದಿಟ್ಟತನದ ಕಾಯಕಲ್ಪಗಳನ್ನು ಅಳವಡಿಸುವ ಹಾಗೂ ಆ ಮೂಲಕ “ಭ್ರಷ್ಟಾಚಾರ ರಹಿತ ಸ್ಥಳೀಯ ಸಂಸ್ಥೆ”ಗಳನ್ನಾಗಿ ಮಾಡುವ ಸಂಕಲ್ಪದೊಂದಿಗೆ ಮೇಲೆ ತಿಳಿಸಿರುವ 08 ನಿಯಮಗಳನ್ನು ಜಾರಿಗೆ ತರುವ ಸಂಬಂಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಮುಖ್ಯಮಂತ್ರಿಗಳು ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ. ಸಿದ್ಧರಾಮಯ್ಯನವರನ್ನು ಮತ್ತು ಉಪ ಮುಖ್ಯಮಂತ್ರಿಗಳು ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಉಪಾಧ್ಯಕ್ಷರಾದ ಶ್ರೀ. ಡಿ. ಕೆ. ಶಿವಕುಮಾರ್ ಅವರನ್ನು ಆಗ್ರಹಿಸಿ ಬಹಿರಂಗ ಪತ್ರ ಬರೆಯಲಾಗಿದೆ: ಎನ್ ಆರ್ ರಮೇಶ್