28/08/2025
ದೇವರ ಸಾಮ್ರಾಜ್ಯವಾದ ಕೇರಳದಲ್ಲಿ ಮಾನವಹಕ್ಕುಗಳನ್ನು ಮೊದಲ ಬಾರಿಗೆ ಸ್ಥಾಪಿಸಿದ ಹೋರಾಟಗಾರ ಅಯ್ಯನ್ ಕಾಳಿ.
- ಗೌತಮ ಆವರ್ತಿ
------------------------------------------------------------------------------
ಇದು ೧೮೮೧ರ ಮಾತು. ಆ ದಿನಗಳಲ್ಲಿ ಒಬ್ಬ ಚೇರುಮಾನ್ನ ಬೆಲೆ ಕೇವಲ ಆರರಿಂದ ಒಂಬತ್ತು ರೂಪಾಯಿ ಮಾತ್ರ, ಚೇರುಮಾನ್ ಎಂದರೆ ಪುಲಯರು (ಹೊಲಯರು). ಅಂದರೆ ಯಾರಾದರೂ ಚೇರುಮಾನ್ನನ್ನು ಕೊಂಡುಕೊಳ್ಳಬಹುದು ಅಥವಾ ಮಾರಬಹುದು, ಬಾಡಿಗೆಗೆ ತೆಗೆದುಕೊಳ್ಳಬಹುದು. ಬೇಡವೆಂದರೆ ದಾನ ಕೊಡಬಹುದು. ಆ ದಿನಗಳಲ್ಲಿ ಮದುಮಗಳು ಅತ್ತೆಯ ಮನೆಗೆ ಹೋಗುತ್ತಿದ್ದರೆ ದಕ್ಷಿಣೆಯಾಗಿ ಕೊಟ್ಟು ಕಳುಹಿಸುವ ಜೀವವಿಲ್ಲದ ವಸ್ತುಗಳ ನಡುವೆ ಚೇರುಮಾನ್ ಇರುತ್ತಿದ್ದ. ಗುಡಿಗಳಿಗೆ, ಗೋಪುರಗಳಿಗೆ ಚೇರುಮಾನ್ನನ್ನು ಬಹುಮಾನವಾಗಿ ಕೊಡುವವರೂ ಇದ್ದರು.
ಸಮಾಜದಲ್ಲಿ ಇಂತಹ ಅನ್ಯಾಯ ರಾಜ್ಯವಾಳುತ್ತಿದ್ದ ದಿನಗಳಲ್ಲಿ ಹುಟ್ಟಿದ ಅಯ್ಯನ್ಕಾಳಿ ಅಸ್ಪೃಶ್ಯರ ಜೀವನದಲ್ಲಿ ಬದಲಾವಣೆ ತರುವುದಕ್ಕೆ ಅವರ ಹೋರಾಟಗಳಿಗೆ ನಾಯಕತ್ವ ವಹಿಸಿದ. ಅಸ್ಪೃಶ್ಯರ ಕತ್ತಲ ಬದುಕಿನಲ್ಲಿ ಬೆಳಕನ್ನು ತುಂಬಲು ತನ್ನ ಜೀವನವನ್ನೇ ಚಳವಳಿಯಾಗಿ ಪರಿವರ್ತಿಸಿಕೊಂಡ ಅಯ್ಯನ್ ಕಾಳಿ.
ಅಸ್ಪೃಶ್ಯರು ರಸ್ತೆಯ ಮೇಲೆ ನಡೆಯುವುದಕ್ಕೆ ನಿಷೇಧವಿದ್ದ ದಿನಗಳಲ್ಲಿ ಅಸ್ಪೃಶ್ಯ ಜಾತಿಯಲ್ಲಿ ಹುಟ್ಟಿ, ತಾನೇ ಎಲ್ಲ ನಿಷೇಧಗಳನ್ನು ಉಲ್ಲಂಘಿಸಿ, ರಸ್ತೆಯ ಮೇಲೆ ದಿಟ್ಟತನದಿಂದ ನಡೆದು, ಎಲ್ಲ ರಸ್ತೆಗಳನ್ನು ಅಸ್ಪೃಶ್ಯರಿಗೆ ತೆರೆಸಿ, ಅಸ್ಪೃಶ್ಯರನ್ನು ರಸ್ತೆಯ ಮೇಲೆ ನಡೆಸಿ, ಆ ಹಕ್ಕಿಗಾಗಿ ಸಾವಿರಾರು ಜನರೊಂದಿಗೆ ಹೋರಾಟ ಮಾಡಿ, ಅಸ್ಪೃಶ್ಯರ ಹಕ್ಕುಗಳನ್ನು ಮೊದಲ ಬಾರಿಗೆ ಸ್ಥಾಪಿಸಿದ ಹೋರಾಟಗಾರ ಅಯ್ಯನ್ಕಾಳಿ. ಸವರ್ಣೀಯರ ಹೊಡೆತಗಳಿಗೆ ನೆತ್ತರು ಸುರಿಯುತ್ತಿದ್ದರೂ ರಸ್ತೆಯ ಮೇಲೆ ನಡೆಯುವ ಹಕ್ಕನ್ನು ಉಳಿಸಿಕೊಂಡ ಹೋರಾಟ ಚರಿತ್ರೆ ಬಹುಶಃ ಭಾರತದಲ್ಲಿ ಬೇರೆಲ್ಲಿಯೂ ಇಲ್ಲ!
ಅಸ್ಪೃಶ್ಯರಿಗಾಗಿ ದೇವಾಲಯದ ಬಾಗಿಲುಗಳನ್ನು ತೆರೆಸಿದ ಮೊದಲ ನಾಯಕ ಅಯ್ಯನ್ಕಾಳಿ. ಈ ಹೋರಾಟಕ್ಕೆ ಸಾಟಿಯಾಗುವ ಹೋರಾಟ ಬೇರೆಲ್ಲಿಯೂ ಇಲ್ಲವೆಂದರೆ ಅತಿಶಯೋಕ್ತಿಯಲ್ಲ. ಅಸ್ಪೃಶ್ಯರನ್ನು ಶಾಲೆಗೆ ಸೇರಿಸದಿರುವ ದಿನಗಳವು. ತಿರುವಾಂಕೂರ್ ಮಹಾರಾಜ ಶಾಲೆಗಳಿಗೆ ಅಸ್ಪೃಶ್ಯ ಮಕ್ಕಳನ್ನು ಸೇರಿಸಿಕೊಳ್ಳಬೇಕೆಂದು ಆದೇಶ ನೀಡಿದರೂ ಸವರ್ಣೀಯರು ಸೇರಿಸಿಕೊಳ್ಳುತ್ತಿರಲಿಲ್ಲ. ಅದಕ್ಕಾಗಿ ಹೋರಾಟ ಮಾಡಿದ ಅಯ್ಯನ್ಕಾಳಿ. ಎಲ್ಲವೂ ಬೀದಿ ಹೋರಾಟಗಳೇ. ಎರಡೂ ಕಡೆಯವರು ಬಡಿಗೆಗಳನ್ನಿಡಿದುಕೊಂಡು ತಲೆಗಳನ್ನು ಒಡೆದಿಕ್ಕಿಕೊಳ್ಳುತ್ತಿದ್ದರು. ಸ್ವತಃ ಅಯ್ಯನ್ಕಾಳಿ ಬಡಿಗೆ ಹಿಡಿದು ಹೋರಾಟ ಮಾಡುತ್ತಿದ್ದ. ಆರು ಅಡಿ ಎತ್ತರವಿದ್ದ ಆಜಾನುಬಾಹು ಬಡಿಗೆ ಹಿಡಿದು ರಸ್ತೆಯ ಮೇಲೆ ನಿಂತರೆ ಸವರ್ಣೀಯರು ಓಡಿ ಹೋಗುತ್ತಿದ್ದರು. ಪ್ರತಿ ಹೋರಾಟದಲ್ಲಿ ನೆತ್ತರು ಹರಿಯುತ್ತಿತ್ತು. ಹಲವು ಸಾರಿ ಆತನನ್ನು ಕೊಲ್ಲಲು ಪ್ರಯತ್ನಿಸಿದರು. ಆ ವೀರನ ಹತ್ತಿರ ಹೋಗುವುದಕ್ಕೆ ಕುಖ್ಯಾತ ರೌಡಿಗಳು ಭಯಪಡುತ್ತಿದ್ದರು. ಶಾಲೆಗಳಿಗೆ ಪ್ರವೇಶವನ್ನು ಸಂಪಾದಿಸಿದ್ದಲ್ಲದೆ ಆತನೇ ಸ್ವತಃ ಪಾಠಶಾಲೆಗಳನ್ನು ಸ್ಥಾಪಿಸಿದ. ವಿಚಿತ್ರವೇನೆಂದರೆ ಆತ ಓದು ಬರಹ ಬಲ್ಲವನಲ್ಲ. ಆದರೆ ಶಿಕ್ಷಣದ ಮಹತ್ವವನ್ನು ಆತ ಅರಿತಿದ್ದ.
ಅಸ್ಪೃಶ್ಯರನ್ನು ತಮ್ಮ ಹಕ್ಕುಗಳಿಗಾಗಿ ಹೋರಾಟಕ್ಕೆ ಇಳಿಸಿದ್ದಲ್ಲದೆ ರೈತಕೂಲಿಗಳನ್ನು ಒಗ್ಗೂಡಿಸಿದ. ಅವರ ವೇತನದ ಬಗ್ಗೆ, ಕೂಲಿದರಗಳ ಬಗ್ಗೆ, ಕೆಲಸಕ್ಕೆ ಸಂಬಂಧಿಸಿದ ಇತರೆ ಅಂಶಗಳ ಬಗ್ಗೆ ಹಲವು ಹೋರಾಟಗಳನ್ನು ಮಾಡಿಸಿದ. ಕೇರಳದಲ್ಲಿ ಕಮ್ಯೂನಿಸ್ಟ್ ಚಳುವಳಿ ಹುಟ್ಟುವ ಮೊದಲೇ ಅಯ್ಯನ್ಕಾಳಿ ಕೂಲಿಕಾರರ ಸಂಘಗಳನ್ನು ಸ್ಥಾಪಿಸಿ ಮೊಟ್ಟಮೊದಲ ಕೂಲಿ ಮುಷ್ಕರವನ್ನು ಮಾಡಿಸಿದ. ೧೯೦೭ರಲ್ಲಿ ಮಾಡಿಸಿದ ಮುಷ್ಕರ ಬಹುಶಃ ಜಗತ್ತಿನ ಚರಿತ್ರೆಯಲ್ಲೇ ಮೊದಲ ರೈತಕೂಲಿಗಳ ಮುಷ್ಕರ ಎನ್ನುತ್ತಾರೆ ಚರಿತ್ರೆಕಾರರು. ಈ ವಿಷಯವನ್ನು ಕಮ್ಯೂನಿಸ್ಟರು ನಮಗೆ ಹೇಳಲಿಲ್ಲ. ಭಾರತಕ್ಕೆ ಅಗತ್ಯವಾದ ಕ್ರಾಂತಿಗೆ ಅಯ್ಯನ್ಕಾಳಿ ನಾಂದಿ ಹಾಡಿದ.
ಕೊಚ್ಚಿಯಲ್ಲಿ ಒಂದು ಸಾರಿ ಅಯ್ಯನ್ಕಾಳಿಗೆ ಎಲ್ಲೂ ಸಮಾವೇಶವನ್ನು ನಡೆಸುವುದಕ್ಕೆ ಅಲ್ಲಿನ ರಾಜ ಅನುಮತಿ ನೀಡಲಿಲ್ಲ. ನೆಲದ ಮೇಲೆ ಎಲ್ಲೂ ಸಮ್ಮೇಳನ ನಡೆಸುವುದಕ್ಕೆ ಅವಕಾಶವಿಲ್ಲವೆಂದಿದ್ದಕ್ಕೆ ಪಕ್ಕದಲ್ಲೇ ಇದ್ದ ನದಿಯ ಮೇಲೆ ಸಾವಿರಾರು ತೆಪ್ಪ ಮತ್ತು ದೋಣಿಗಳನ್ನು ಸೇರಿಸಿ ಕಟ್ಟಿ ನೀರಿನ ಮೇಲೆ ಸಮಾವೇಶ ನಡೆಸಿದ. ಬಹುಶಃ ಜಗತ್ತಿನಲ್ಲೇ ಇದು ಅಪೂರ್ವವಾದ ಘಟನೆ.
ಅಸ್ಪೃಶ್ಯ ಜಾತಿಯಾದ 'ಪುಲಯ 'ರನ್ನು ಒಗ್ಗೂಡಿಸಿದ್ದಲ್ಲದೆ ಅವರು ಮಾಡುತ್ತಿದ್ದ ರೈತ ಕೂಲಿಗಳ ಮುಷ್ಕರವನ್ನು ಜಮೀನ್ದಾರರು ಹತ್ತಿಕ್ಕುವುದಕ್ಕೆ ಪ್ರಯತ್ನಿಸುತ್ತಿದ್ದರೆ ಅಲ್ಲಿನ ಬೆಸ್ತರ ಸಹಾಯವನ್ನು ತೆಗೆದುಕೊಂಡು ಮೀನು ಹಿಡಿಯುವ ಕೆಲಸಕ್ಕೆ ಪುಲಯರನ್ನು ಕಳುಹಿಸಿ ಮುಷ್ಕರ ವಿಫಲವಾಗದಂತೆ ಮಾಡಿದ ಅಯ್ಯನ್ಕಾಳಿ. ವರ್ಣಹೋರಾಟ ವನ್ನು ವರ್ಗಹೋರಾಟವನ್ನಾಗಿ ಪರಿವರ್ತಿಸಿದ ನಿಜವಾದ ಕ್ರಾಂತಿಯೋಧ ಅಯ್ಯನ್ಕಾಳಿ ಯಾವ ಹೋರಾಟವನ್ನೇ ಮಾಡಿದರೂ ಅದು ವಿನೂತನವಾದುದೇ ಆಗಿತ್ತು. ಸಾವಿರಾರು ಜನ ಪಾಲ್ಗೊಳ್ಳುವಂತಹುದೇ ಆಗಿತ್ತು. ಅಸ್ಪೃಶ್ಯರ ನೆತ್ತರಿನಿಂದ ನೆಂದಿರುವುದೇ ಆಗಿತ್ತು.
ಅಯ್ಯನ್ಕಾಳಿ ಸ್ತ್ರೀಯರ ಸಾಂಸ್ಕೃತಿಕ ಸಮಸ್ಯೆಯಲ್ಲಿ ಮತ್ತೊಂದು ಕ್ರಾಂತಿಕಾರಕ ಬದಲಾವಣೆ ತಂದ. ಕೇರಳದಲ್ಲಿ ಅಸ್ಪೃಶ್ಯ ಮಹಿಳೆಯರಿಗೆ ರವಿಕೆ ಹಾಕಿಕೊಳ್ಳುವುದಕ್ಕೆ ಅವಕಾಶವಿರಲಿಲ್ಲ. ವಕ್ಷಸ್ಥಲವನ್ನು ಮುಚ್ಚಿ ಕೊಳ್ಳುವುದಕ್ಕೆ ಕಲ್ಲುಗಳು ಮತ್ತು ಮಣಿಗಳ ಸರವನ್ನು ಹಾಕಿಕೊಳ್ಳಬೇಕು. ಅಯ್ಯನ್ಕಾಳಿ ಆ ಅಭ್ಯಾಸವನ್ನು ಹೋಗಲಾಡಿಸುವುದಕ್ಕೆ ಒಂದು ಚಳುವಳಿಯನ್ನೇ ಮಾಡಿದ. ಮಹಿಳೆಯರಲ್ಲಿ ಲೋಕಪ್ರಜ್ಞೆಯನ್ನು ಜಾಗೃತ ಗೊಳಿಸಿ ಒಂದೇ ದಿನದಲ್ಲಿ ಸಾವಿರಾರು ಮಂದಿ ಮಹಿಳೆಯರ ಸಮಾವೇಶ ಏರ್ಪಡಿಸಿ ಅಲ್ಲಿ ಆತ ಒಂದು ಕರೆಯನ್ನು ನೀಡಿದ ಕೂಡಲೇ ಸಾವಿರಾರು ಮಂದಿ ಸ್ತ್ರೀಯರು ಒಂದೇ ಸಾರಿ ಆ ಕಲ್ಲುಗಳ, ಮಣಿಗಳ ಸರವನ್ನು ಕಿತ್ತೆಸೆದರು. ಅಂದಿನಿಂದ ರವಿಕೆಗಳನ್ನು ಹಾಕಿಕೊಳ್ಳಲು ಆರಂಭಿಸಿದರು.
ಮಹಿಳೆಯರು ರವಿಕೆಗಳನ್ನು ಹಾಕಿಕೊಂಡರೂ ಸಹಿಸಲಾರದ ಸವರ್ಣೀಯರು ಮಹಿಳೆಯರ ಮೇಲೆ ದಾಳಿ ಮಾಡಿದರೆ ಸಾವಿರಾರು ಮಂದಿ ಮಹಿಳೆಯರು ತಟ್ಟನೆ ಜಾಗೃತರಾಗಿ ಎದುರು ದಾಳಿ ಮಾಡಿ ಸವರ್ಣೀಯರನ್ನು ಓಡಿಸಿ ಹೊಡೆದರು. ಅಯ್ಯನ್ಕಾಳಿಯ ಜೀವನವೆಲ್ಲ ಇಂತಹ ಹೋರಾಟಗಳಲ್ಲೇ ಕಳೆದ. ಕೇರಳದಲ್ಲಿ ಅದನ್ನು ಹೋರಾಟಗಳ ಯುಗವೆಂದು ಕರೆಯಲಾಗಿದೆ.
ಅಸ್ಪೃಶ್ಯತೆಯನ್ನು ಹೋಗಲಾಡಿಸಿ, ಮಾನವಹಕ್ಕುಗಳನ್ನು ಸಾಧಿಸಿ ನಾಗರಿಕವಾದ ಜೀವನವನ್ನು ಪುಲಯರು ನಡೆಸುವುದಕ್ಕೆ ಸಾಧುಜನ ಪರಿಪಾಲನ ಸಂಘವನ್ನು ಸ್ಥಾಪಿಸಿದ. ಅವರನ್ನು ಚೈತನ್ಯಗೊಳಿಸುವುದಕ್ಕೆ ಒಂದು ಪತ್ರಿಕೆಯನ್ನು ನಡೆಸಿದ.
ಅಸ್ಪೃಶ್ಯರು ರಸ್ತೆಯ ಮೇಲೆ ನಡೆಯುವುದಕ್ಕೆ ಅವಕಾಶವಿಲ್ಲವೆಂಬ ನಿರ್ಬಂಧವನ್ನು ಹೊಡೆದುಹಾಕಲು ಎತ್ತಿನಗಾಡಿಯನ್ನು ತೆಗೆದುಕೊಂಡು ಎರಡು ಬಿಳಿ ಎತ್ತುಗಳನ್ನು ಕಟ್ಟಿ ಅವುಗಳ ಕೊರಳಿಗೆ ಗಂಟೆ ಕಟ್ಟಿ, ಒಂದು ಬಿಳಿಪಂಚೆ, ಬಿಳಿ ಅಂಗವಸ್ತ್ರ ತೊಟ್ಟುಕೊಂಡು ಆರಡಿಯ ಆಜಾನುಬಾಹು ಗಾಡಿಯ ಮೇಲೆ ಕುಳಿತು ಹಗ್ಗ ಹಿಡಿದುಕೊಂಡು ಬೀದಿಗಳಲ್ಲಿ ಗಾಡಿಯನ್ನು ಓಡಿಸುತ್ತಿದ್ದರೆ ಸವರ್ಣೀಯ ಹಿಂದುಗಳು ನಿಬ್ಬೆರಗಾಗಿ ತಲಾ ಒಂದು ದಿಕ್ಕಿಗೆ ಓಡಿಹೋಗುತ್ತಿದ್ದರು. ಸವರ್ಣೀಯರಿಗೆ ತಮ್ಮ ಎದೆಯ ಮೇಲೆ ಎತ್ತಿನ ಗಾಡಿ ಓಡಿಸಿದಂತಾಗುತ್ತಿತ್ತು. ಅಸ್ಪೃಶ್ಯ ಜಾತಿಯವರಿಗೆ ರಾಜಮಾರ್ಗವನ್ನು ತೆರೆಸಿದ ಸಾಮಾಜಿಕ ಕ್ರಾಂತಿಕಾರಿ ಅಯ್ಯನ್ಕಾಳಿ,
ಕೇರಳದಲ್ಲಿ ನಾರಾಯಣಗುರು ಮಾಡಲಾಗದ ಮೌಲಿಕವಾದ ಬದಲಾವಣೆಯನ್ನು ಅಯ್ಕನ್ಕಾಳಿ ತಂದ. ೧೯೨೪ರಲ್ಲಿ ನಡೆದ ವೈಕಂ ಸತ್ಯಾಗ್ರಹ ಕುರಿತು ನಮಗೆ ಹೇಳಿದರಾದರೂ ೧೯೦೭ರಲ್ಲಿಯೇ ದೇವಾಲಯ ಪ್ರವೇಶಕ್ಕಾಗಿ ಅಯ್ಯನ್ ಕಾಳಿ ಮಾಡಿದ ಹೋರಾಟದ ಬಗ್ಗೆ ಯಾರೂ ಹೇಳಲಿಲ್ಲವೆಂದರೆ ಅಸ್ಪೃಶ್ಯರಿಗೆ ಚರಿತ್ರೆಕಾರರು ಎಷ್ಟು ಅನ್ಯಾಯ ಮಾಡಿದ್ದಾರೆಂದು ತಿಳಿಯುತ್ತದೆ.
#ಹೋರಾಟಗಾರಅಯ್ಯನ್ಕಾಳಿ #ಅಸ್ಪೃಶ್ಯರು #ದೇವಾಲಯಸ್ವಾತಂತ್ರ್ಯ #ರೈತಕೂಲಿ #ಪುಲಯ #ಸವರ್ಣೀಯಹಿಂದುಗಳು #ಕೇರಳಹೋರಾಟ