05/08/2025
ಕಾಂಗ್ರೆಸ್ ಸರಕಾರ ವಜಾಗೊಳಿಸಿ:
ರಾಜ್ಯಪಾಲರಿಗೆ ಜೆಡಿಎಸ್ ಆಗ್ರಹ
ತುಮಕೂರು:ರೈತರ ಹಿತ ಕಾಪಾಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿರುವ ಕಾಂಗ್ರೆಸ್ ಸರಕಾರವನ್ನು ಈ ಕೂಡಲೇ ವಜಾಗೊಳಿಸಬೇಕೆಂದು ಜೆಡಿ (ಎಸ್) ನಾಯಕರು ಆಗ್ರಹಿಸಿದರು.
ಸಕಾಲದಲ್ಲಿ ರೈತರಿಗೆ ರಸಗೊಬ್ಬರ ಪೂರೈಸುವಲ್ಲಿ ವಿಫಲವಾಗಿರುವ ಸರ್ಕಾರದ ವಿರುದ್ಧ ಸೋಮವಾರ ಜಿಲ್ಲಾಧಿಕಾರಿ ಕಚೇರಿಯ ಎದುರುಗಡೆ ಅವರು ಪ್ರತಿಭಟನೆ ನಡೆಸಿದರು.
"ರಾಜ್ಯದಲ್ಲಿ ಕಳೆದ ಎರಡು ವರ್ಷಗಳಿಂದ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಲಂಚಗುಳಿತನ, ದುರಾಡಳಿತ ಮತ್ತು ವೈಫಲ್ಯತೆಯಿಂದ ಜನತೆ ಬಸವಳಿದಿದ್ದಾರೆ. ರಾಜ್ಯದಲ್ಲಿ ಪೂರ್ವ ಮುಂಗಾರು ಮತ್ತು ಮುಂಗಾರಿನಲ್ಲಿ ಉತ್ತಮ ಮಳೆ ಬಿದ್ದು ರಾಜ್ಯದ ರೈತರು ಕೃಷಿ ಚಟುವಟಿಕೆ ಪ್ರಾರಂಭಿಸಿದ್ದಾರೆ.
ಆದರೆ, ರಾಜ್ಯ ಸರ್ಕಾರ ರೈತರಿಗೆ ಅಗತ್ಯವಿರುವ ರಸ ಗೊಬ್ಬರವನ್ನು ಪೂರೈಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಆದರಲ್ಲಿ ರಸ ಗೊಬ್ಬರಗಳಾದ ಯೂರಿಯಾ ಮತ್ತು ಡಿ.ಪಿ.ಎ.ಗಳನ್ನು ಸಾಕಷ್ಟು ಪ್ರಮಾಣದಲ್ಲಿ ಶೇಖರಣೆ ಮಾಡಿ ವಿತರಿಸದೇ ಇರುವುದರಿಂದ ರೈತರು ಪರದಾಡುತ್ತಿದ್ದಾರೆ. ಈ ಗೊಬ್ಬರಗಳನ್ನು ಕಾಳಸಂತೆಯಲ್ಲಿ ವರ್ತಕರು ದುಬಾರಿ ದರದಲ್ಲಿ ಮಾರಾಟ ಮಾಡುತ್ತಿದ್ದಾರೆ. ರಾಜ್ಯಕ್ಕೆ ಕೊರತೆ ಇರುವ ಗೊಬ್ಬರಗಳನ್ನು ಕೇಂದ್ರ ಸರ್ಕಾರದೊಂದಿಗೆ ವ್ಯವಹರಿಸಿ ಸಂಪರ್ಕಿಸಿ ಪಡೆಯಲು ಕಾಂಗ್ರೆಸ್ ಸರಕಾರ ವಿಫಲವಾಗಿದೆ," ಎಂದು ಪಕ್ಷದ ಯುವ ಘಟಕದ ಕಾರ್ಯಾಧ್ಯಕ್ಷ ರಾಜು ನಾಯಕ್ ಆಕ್ರೋಶ ವ್ಯಕ್ತಪಡಿಸಿದರು.
"ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರಕ್ಕೆ 6.8 ಲಕ್ಷ ಟನ್ ರಸ ಗೊಬ್ಬರ ನಿಗದಿ ಮಾಡಿದ್ದು, ಈ ಪೈಕಿ ಕೇವಲ 5.27 ಲಕ್ಷ ಟನ್ ರಸ ಗೊಬ್ಬರ ನೀಡಿರುವುದಾಗಿ ರಾಜ್ಯ ಸರ್ಕಾರ ಆಪಾದನೆ ಮಾಡುತ್ತಿದೆ. ಆದರೆ, ಬಾಕಿಯಿರುವ 1.5 ಲಕ್ಷ ಟನ್ ರಸ ಗೊಬ್ಬರವನ್ನು ಕೇಂದ್ರ ಸರ್ಕಾರವನ್ನು ಸಂಪರ್ಕಿಸಿ ತರುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿ ರಾಜ್ಯದ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ," ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕರಾವಳಿ ಭಾಗದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಹಾಗೂ ಮಲೆನಾಡು ವ್ಯಾಪ್ತಿಯ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನ ಹಾಗೂ ಉತ್ತರ ಕರ್ನಾಟಕದ ಬೆಳಗಾವಿ ಜಿಲ್ಲೆಗಳಲ್ಲಿ ಕಳೆದ 2 ತಿಂಗಳಿಂದ ಮುಂಗಾರು ಮಳೆ ಅಬ್ಬರದಿಂದ ಉಂಟಾದ ಭಾರಿ ಮಳೆ ಮತ್ತು ನೆರೆ ಹಾವಳಿಯಿಂದ ಭಾರಿ ಪ್ರಮಾಣದಲ್ಲಿ ಖಾಸಗಿ ಮತ್ತು ಸಾರ್ವಜನಿಕ ಆಸ್ತಿಗಳಿಗೆ ಹಾನಿ ಉಂಟಾಗಿದೆ. ಆದರೆ, ರಾಜ್ಯ ಸರ್ಕಾರ ನೆರೆ ಪೀಡಿತ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ವಿಪತ್ತು ಪರಿಹಾರ ನಿಧಿಯಿಂದ ಅಗತ್ಯ ಅನುದಾನ ನೀಡಿ ನೆರೆ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ಸಂಪೂರ್ಣವಾಗಿ ವಿಫಲವಾಗಿದೆ. ರಾಜ್ಯದ ಬಯಲುಸೀಮೆ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ದಾವಣಗೆರೆ, ಬೆಂಗಳೂರು, ಬೀದರ, ಬಳ್ಳಾರಿ, ವಿಜಯನಗರ ಹಾಗೂ ಬೆಳಗಾವಿ ಜಿಲ್ಲೆಯ ಹಲವು ಭಾಗಗಳು ಹಾಗೂ ಬಾಗಲಕೋಟೆ ಮತ್ತು ಗದಗ ಜಿಲ್ಲೆಗಳಲ್ಲಿ ಕಳೆದ 6 ವಾರಗಳಿಂದ ಮಳೆ ಕೊರತೆಯಿಂದ ರೈತರು ನಾಟಿ ಮಾಡಿದ ಫಸಲು ಒಣಗುತ್ತಿವೆ. ರೈತರು ಕೃಷಿ ಚಟುವಟಿಕೆ ನಡೆಸಲು ಆಕಾಶದತ್ತ ಮುಖ ಮಾಡಿದ್ದಾರೆ. ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರು, ಆಹಾರ ಮತ್ತು ಮೇವಿನ ಕೊರತೆ ಉಂಟಾಗಿದೆ.