16/07/2025
ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದಿಂದ ಪ್ರಗತಿ ಪರಿಶೀಲನೆ
ದಾವಣಗೆರೆ ಜುಲೈ.15 (ಇಂಡೋ ಟೈಮ್ಸ್ ಮೀಡಿಯಾ) : ಮಕ್ಕಳು ದೇಶದ ಆಸ್ತಿ, ಸುಸ್ಥಿರ ಮಾನವ ಸಂಪನ್ಮೂಲ ಅಭಿವೃದ್ದಿಯಲ್ಲಿ ಗುಣಮಟ್ಟದ ಶಿಕ್ಷಣ ಮತ್ತು ಆನ್‍ಲೈನ್ ವ್ಯಸನ ಹಾಗೂ ಮಾದಕ ವಸ್ತುಗಳಿಂದ ಮಕ್ಕಳನ್ನು ಕಾಪಾಡಿಕೊಳ್ಳುವುದು ಇಂದಿನ ಅಗತ್ಯವಾಗಿದೆ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರಾದ ಕೆ.ನಾಗಣ್ಣಗೌಡ ತಿಳಿಸಿದರು.
ಅವರು ಮಂಗಳವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಮತ್ತು ಮಕ್ಕಳ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಭಾಗೀದಾರರೊಂದಿಗೆ ನಡೆದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಕೇವಲ ಆಯೋಗ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಕೆಲಸ ಮಾಡಿದರೆ ಸಾಲದು, ಶಿಕ್ಷಣ ಇಲಾಖೆ ಸೇರಿದಂತೆ ಇತರೆ ಎಲ್ಲಾ ಇಲಾಖೆಗಳು ಕೆಲಸ ಮಾಡಿದಾಗ ಮಕ್ಕಳ ಅಭಿವೃದ್ದಿಯಾಗಿ ದೇಶದ ಮಾನವ ಸಂಪನ್ಮೂಲ ಅಭಿವೃದ್ದಿಯಾಗಲಿದೆ ಎಂದರು.
ಮಕ್ಕಳಿಗೆ 18 ವರ್ಷದವರೆಗೆ ಶಿಕ್ಷಣ ಸಿಗಬೇಕು, ಯಾವುದೇ ಕಾರಣಕ್ಕೂ ಬಾಲ ಕಾರ್ಮಿಕ, ಬಲ್ಯವಿವಾಹ, ಲೈಂಗಿಕ ದೌರ್ಜನ್ಯವೆಸಗುವುದನ್ನು ತಡೆಗಟ್ಟಿ ಶಿಕ್ಷಣ ಸಿಗುವಂತೆ ನೋಡಿಕೊಳ್ಳುವುದು ಎಲ್ಲರ ಜವಾಬ್ದಾರಿಯಾಗಿದೆ. ಮಕ್ಕಳ ಕಲ್ಯಾಣಕ್ಕಾಗಿ ನಗರ, ಪಟ್ಟಣ ಮಟ್ಟದಿಂದ ಗ್ರಾಮ ಮಟ್ಟದವರೆಗೆ ಹಲವಾರು ಯೋಜನೆಗಳನ್ನು ಸರ್ಕಾರ ಇದಕ್ಕಾಗಿ ರೂಪಿಸಿದೆ. ಆದರೆ ಅನುಷ್ಟಾನದ ಹಂತದಲ್ಲಿ ಚಕ್ಕಲಿಯಿಂದ ಕೋಡುಬಳೆಯಂತಾಗಿದೆ ಎಂದರು.
ಬಾಲ್ಯ ವಿವಾಹ ತಡೆಗಟ್ಟಲು ಕಠಿಣ ಕ್ರಮದ ಅವಶ್ಯಕತೆ ಇದೆ. ಬಳ್ಳಾರಿಯ ಪ್ರಕರಣದಲ್ಲಿ ಅಲ್ಲಿನ ಪೊಲೀಸ್ ಅಧಿಕಾರಿಗಳು ಬಾಲ್ಯವಿವಾಹ ಮಾಡಿದ ಪೋಷಕರು ಸೇರಿದಂತೆ ಮದುವೆಯಲ್ಲಿ ಕಂಕಣ ಕಟ್ಟಿಸಿದವರಿಂದ ಭಾಗಿಯಾದ ಸಂಬಂಧಿಕರು, ಗಿಫ್ಟ್ ನೀಡಿದವರು ಸೇರಿ 194 ಜನರ ಮೇಲೆ ಎಫ್‍ಐಆರ್ ದಾಖಲಿಸಲಾಗಿತ್ತು. ದಾವಣಗೆರೆ ಜಿಲ್ಲೆಯಲ್ಲಿ 2024-25 ರಲ್ಲಿ 75 ವರದಿಯಾದ ಪ್ರಕರಣಗಳಲ್ಲಿ 68 ತಡೆಯಲಾಗಿದ್ದು 2 ರಲ್ಲಿ ತಡೆಯಾಜ್ಞೆ ತರಲಾಗಿ ವಿವಾಹ ನಡೆದ 7 ಪ್ರಕರಣಗಳಲ್ಲಿ ಎಫ್‍ಐಆರ್ ದಾಖಲಿಸಲಾಗಿದೆ. 2025-26 ರ ಏಪ್ರಿಲ್ ನಿಂದ 31 ಪ್ರಕರಣಗಳು ವರದಿಯಾಗಿದ್ದು 29 ರಲ್ಲಿ ತಡೆಯಲಾಗಿದ್ದು ಬಾಲ್ಯ ವಿವಾಹ ಮಾಡಿದ 2 ಪ್ರಕರಣಗಳಲ್ಲಿ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಲಾಗಿದೆ.
ಪೋಕ್ಸೋ ಪ್ರಕರಣ; 2024-25 ರಲ್ಲಿ 99 ಪೋಕ್ಸೋ ವರದಿಯಾಗಿದ್ದು ಇದರಲ್ಲಿ 16 ಪ್ರಕರಣಗಳಲ್ಲಿ ಶಿಕ್ಷೆಯಾಗಿದೆ. 69 ರಲ್ಲಿ ಖುಲಾಸೆಯಾಗಿದ್ದು 6 ವರ್ಗಾವಣೆಯಾಗಿವೆ. 3 ಸುಳ್ಳು ಪ್ರಕರಣಗಳೆಂದು ಕೈಬಿಡಲಾಗಿದೆ. 2025 ರ ಮಾರ್ಚ್ ಅಂತ್ಯದವರೆಗೆ 224 ಪ್ರಕರಣಗಳು ವಿಚಾರಣಾ ಹಂತದಲ್ಲಿದ್ದರೆ, 20 ತನಿಖಾ ಹಂತದಲ್ಲಿವೆ. 2025-26 ರಲ್ಲಿ ಏಪ್ರಿಲ್‍ನಿಂದ ಜೂನ್ ವರೆಗೆ 31 ಪ್ರಕರಣಗಳು ವರದಿಯಾಗಿದ್ದು ಇದರಲ್ಲಿ 10 ಪ್ರೇಮ ಪ್ರಕರಣ, 10 ಬಾಲ್ಯವಿವಾಹ, 11 ಇತರೆ ಪೋಕ್ಸೊ ಮತ್ತು 5 ಬಾಲ ಗರ್ಭಿಣಿಯರ ಪ್ರಕರಣಗಳಿವೆ.
ಇಲಾಖೆ ಪೋರ್ಟಲ್ ಅನ್ವಯ ಕಳೆದ 5 ವರ್ಷಗಳಲ್ಲಿ ದಾವಣಗೆರೆಯಲ್ಲಿ 5513 ಬಾಲ ಗರ್ಭಿಣಿಯರು ಪತ್ತೆಯಾಗಿದೆ. ಆದರೆ ಆರೋಗ್ಯ ಇಲಾಖೆಯವರು ನೀಡುವ ಅಂಕಿ ಅಂಶಗಳಿಗೂ ಮತ್ತು ಪೋರ್ಟಲ್ ಮಾಹಿತಿಗೂ ವ್ಯತ್ಯಾಸ ಕಂಡು ಬರುತ್ತಿದೆ. 19 ವರ್ಷಕ್ಕೆ ಗರ್ಭಿಣಿಯಾಗಿದ್ದಲ್ಲಿಯೂ ಸಹ ಅದು ಬಾಲ್ಯ ವಿವಾಹದ ವ್ಯಾಪ್ತಿಗೆ ಬರುವುದನ್ನು ಗಮನಿಸಬೇಕು. ಬಾಲ ಗರ್ಭಿಣಿ ಪ್ರಕರಣದಲ್ಲಿ ಪ್ರಕರಣ ದಾಖಲು ಮಾಡಬೇಕು. ಪೊಲೀಸ್ ಇಲಾಖೆಯಲ್ಲಿಯು ವೆಲ್‍ಫೇರ್ ಅಧಿಕಾರಿಗಳನ್ನು ಪೋಕ್ಸೋ ಕಾಯಿದೆಯಡಿ ನೇಮಕ ಮಾಡಲಾಗಿರುತ್ತದೆ. ಆಸ್ಪತ್ರೆಯಿಂದ ವರದಿಯನ್ನು ಪೊಲೀಸ್ ಇಲಾಖೆಗೆ ನೀಡಿದಲ್ಲಿ ಕ್ರಮ ಜರುಗಿಸಲಾಗುತ್ತದೆ ಎಂದು ಎಸ್.ಪಿ. ಉಮಾ ಪ್ರಶಾಂತ್ ಸಭೆಗೆ ತಿಳಿಸಿದರು.
ಪೋಕ್ಸೋ ಕಾಯಿದೆ ನಿಯಮಾವಳಿ ರೀತ್ಯ ಬಾಲ್ಯ ವಿವಾಹ ಎಂದು ತಿಳಿದಿದ್ದರೂ ಅದನ್ನು ಮುಚ್ಚಿಹಾಕಿದಲ್ಲಿ ಅಂತಹವರ ಮೇಲೆಯು ಪ್ರಕರಣ ದಾಖಲಿಸಲು ಅವಕಾಶ ಇದೆ. ಯಾವುದೇ ಆಸ್ಪತ್ರೆ ವೈದ್ಯರು ಮಾಹಿತಿಯನ್ನು ಮುಚ್ಚಿಟ್ಟಲ್ಲಿ ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಅಧ್ಯಕ್ಷರು ತಿಳಿಸಿ ಶಾಲೆ, ಪಂಚಾಯಿತಿ, ಪೊಲೀಸ್ ಠಾಣೆ, ಸರ್ಕಾರಿ ಕಚೇರಿ ಸೇರಿದಂತೆ ಎಲ್ಲಾ ಕಡೆ ಮಕ್ಕಳ ಸಹಾಯವಾಣಿ 1098 ಸಹಾಯವಾಣಿ ಪ್ರದರ್ಶನವಾಗುವಂತೆ ನೋಡಿಕೊಳ್ಳಲು ತಿಳಿಸಿದರು.
ಹೊರಗುತ್ತಿಗೆಯಡಿ ಕೆಲಸ ಮಾಡುವವರು ಮತ್ತು ವಾಹನ ಚಾಲಕರ ಮಾಹಿತಿ ಪರಿಶೀಲನೆ; ಹೊರಗುತ್ತಿಗೆಯಡಿ ಹಾಗೂ ಅತಿಥಿ ಶಿಕ್ಷಕರಾಗಿ ಅನೇಕ ಜನರು ಕೆಲಸ ಮಾಡುತ್ತಿದ್ದಾರೆ. ಅನೇಕ ಪೋಕ್ಸೋ ಪ್ರಕರಣಗಳಲ್ಲಿ ಶಿಕ್ಷಕರು, ವಾಹನ ಚಾಲಕರು ಕೃತ್ಯದಲ್ಲಿ ಭಾಗಿಯಾಗಿರುವುದನ್ನು ಕಾಣಲಾಗಿದೆÀ. ಸರ್ಕಾರಿ ನೌಕರರಿಗೆ ಪೊಲೀಸ್ ಪರಿಶೀಲನೆ ಮಾಡಿದ ನಂತರವೇ ನೇಮಕಾತಿ ನಡೆಯಲಿದೆ. ಆದ್ದರಿಂದ ಪೊಲೀಸ್ ಪರಿಶೀಲನೆ ಮಾಡಿ ಆಯೋಗಕ್ಕೆ ವರದಿ ನೀಡಲು ಸೂಚನೆ ನೀಡಲಾಯಿತು.
ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಮಾತನಾಡಿ ದಾವಣಗೆರೆ ನಗರದಲ್ಲಿ ಈಗಾಗಲೇ ಖಾಸಗಿ ಶಾಲಾ ವಾಹನ ಚಾಲಕರಿಗೆ ಕಾನೂನಿನ ಅರಿವು ಮೂಡಿಸಿ ಪ್ರತಿ ಶಾಲಾ ವಾಹನದಲ್ಲಿ ಕಡ್ಡಾಯವಾಗಿ ಮಹಿಳಾ ಸಿಬ್ಬಂದಿ ಇರಲೇಬೇಕೆಂದು ಸೂಚನೆ ನೀಡಲಾಗಿದೆ. ಇದೇ ರೀತಿ ತಾಲ್ಲೂಕು ಮಟ್ಟದಲ್ಲಿ ಸಭೆಯನ್ನು ಮಾಡುವ ಮೂಲಕ ಕಾನೂನಿನ ಅರಿವು ಮೂಡಿಸಲು ಕ್ರಮ ಜರುಗಿಸಲಾಗುತ್ತದೆ ಎಂದು ತಿಳಿಸಿ ಮಕ್ಕಳ ಶಿಕ್ಷಣ, ಪೋಕ್ಸೋ ತಡೆ, ಬಾಲ್ಯ ವಿವಾಹ ತಡೆಗಟ್ಟಲು ಸಮಿತಿಗಳನ್ನು ಕ್ರಿಯಾಶೀಲರನ್ನಾಗಿ ಮಾಡಲಾಗುತ್ತದೆ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಿತ್ತೆ ಮಾಧವ ವಿಠ್ಠಲರಾವ್ ಮಾತನಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೂಸಿನ ಮನೆಯನ್ನು ಸ್ಥಾಪಿಸಲಾಗಿದೆ. ಅದೇ ರೀತಿ ಗ್ರಾಮ ಮಟ್ಟದ ಮಹಿಳೆಯರು ಮತ್ತು ಮಕ್ಕಳ ಕಾವಲು ಸಮಿತಿ, ಕಲ್ಯಾಣ ಸಮಿತಿಯನ್ನು ಕ್ರಿಯಾಶೀಲರನ್ನಾಗಿಸಿ ಮಕ್ಕಳ ಗ್ರಾಮಸಭೆಗಳು ಸೇರಿದಂತೆ ಮಕ್ಕಳ ಸ್ನೇಹಿ ವಾತಾವರಣವನ್ನು ಕಲ್ಪಿಸಲು ಕ್ರಮವಹಿಸಲಾಗುತ್ತದೆ ಎಂದರು.
ಅನುಚಿತ ವರ್ತನೆ ಮಹಿಳಾ ಪೊಲೀಸ್ ಮೇಲೆ ಶಿಸ್ತುಕ್ರಮ; ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರು ಜಿಲ್ಲೆಯಾದ್ಯಂತ ವಿವಿಧ ಅಂಗನವಾಡಿ, ಶಾಲೆ, ಹಾಸ್ಟೆಲ್, ಪೊಲೀಸ್ ಠಾಣೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಹರಿಹರ ನಗರ ಠಾಣೆಗೆ ಭೇಟಿ ನೀಡಿದಾಗ ಪೋಕ್ಸೋ ಪ್ರಕರಣ, ಬಾಲ್ಯವಿವಾಹಗಳ ವಿವರ ಮತ್ತು ಇವುಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೈಗೊಂಡು ಕ್ರಮಗಳ ಬಗ್ಗೆ ಪರಿಶೀಲನೆಗೆ ಠಾಣೆಗೆ ಹೋದಾಗ ಯಾರೆಂದು ತಿಳಿಯದೇ ಅನುಚಿತವಾಗಿ ವರ್ತಿಸಿದ ಬಗ್ಗೆ ಸದಸ್ಯರು ಸಭೆಯಲ್ಲಿ ಪ್ರಸ್ತಾಪಿಸಿ ಸಾಮಾನ್ಯ ಜನರೊಂದಿಗೆ ಯಾವ ರೀತಿ ವರ್ತಿಸಬೇಕೆಂಬ ಕನಿಷ್ಠ ಸೌಜನ್ಯ ತೋರದ ಮಹಿಳಾ ಪೊಲೀಸ್ ಪೇದೆಗೆ ಸೂಕ್ತ ನಿರ್ದೇಶನ ನೀಡಲು ಪ್ರಸ್ತಾಪಿಸಿದಾಗ ಸಿಬ್ಬಂದಿ ಮೇಲೆ ಶಿಸ್ತುಕ್ರಮ ಜರುಗಿಸಿ ಜನರೊಂದಿಗೆ ಸೌಜನ್ಯಯುತವಾಗಿ ನಡೆದುಕೊಳ್ಳಲು ಎಲ್ಲಾ ಸಿಬ್ಬಂದಿಗಳಿಗೆ ಮಾರ್ಗದರ್ಶನ ಮಾಡಲಾಗುತ್ತದೆ ಎಂದು ತಿಳಿಸಿದರು.
ಸಭೆಯಲ್ಲಿ ಆಯೋಗದ ಸದಸ್ಯರಾದ ಶೇಖರಗೌಡ ಜಿ.ರಾಮತ್ನಾಳ, ಶಶಿಧರ್ ಕೋಸಂಬೆ, ಡಾ; ತಿಪ್ಪೇಸ್ವಾಮಿ ಕೆ.ಟಿ, ಶ್ರೀಮತಿ ಮಂಜು, ವೆಂಕಟೇಶ್, ಅಪರ್ಣಾ ಎಂ.ಕೊಳ್ಳ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ನೂತನ ವಿನ್ಯಾಸದೊಂದಿಗೆ ಪರಿಷ್ಕøತ ಮಕ್ಕಳ ಸಹಾಯವಾಣಿ ಲಾಂಛವನ್ನು ಸಭೆಯಲ್ಲಿ ಬಿಡುಗಡೆ ಮಾಡಲಾಯಿತು.