04/05/2024
ಅಪ್ಪ......
ಎಲ್ಲರಂತಲ್ಲ ನಮ್ಮಪ್ಪ. ಸಾಮಾನ್ಯ ರೈತನ ಮಗನಾಗಿ ಹುಟ್ಟಿ ಕೊನೆವರೆಗೂ ರೈತನಾಗೆ ಬಾಳಿ ಬದುಕಿದ್ರು. ಎಲ್ಲಾ ಮಕ್ಕಳಿಗೂ ಅವರವರ ಅಪ್ಪಂದ್ರು ಹೀರೋನೆ, ನನಗೂ ಹಾಗೆನೆ. ನನ್ನಪ್ಪ ಅವರಪ್ಪನ್ನ ದೇವ್ರು ಅಂತಿದ್ರು, ನನಗೂ ನನ್ನಪ್ಪ ದೇವ್ರೆ. ನನ್ನಪ್ಪ ಆಡಂಬರದ ಬದುಕನ್ನು ಯಾವತ್ತೂ ಬಯಸಲಿಲ್ಲ. ಅವರ ಜೀವನ ತುಂಬಾ ಸರಳವಾಗಿತ್ತು. ಆಹಾರ ಪದ್ಧತಿಯಿಂದ ಹಿಡಿದು ಬದುಕಿನ ಶೈಲಿಯವರೆಗೂ. ಏನೇ ಆದ್ರೂ ಆಸ್ಪತ್ರೆಗೆ ಹೋದವರಲ್ಲ. 25 ಅಡಿ ಎತ್ತರದಿಂದ ಕಂದಕಕ್ಕೆ ಬಿದ್ದಾಗಲೂ, ರಸ್ತೆ ದಾಟುವಾಗ ಬೈಕ್ ಗುದ್ದಿ ಪೆಟ್ಟಾದಾಗಲೂ, ಅದೆಷ್ಟೋ ಜ್ವರಗಳು ಬಂದಾಗಲೂ, ಪ್ರತಿ ವರ್ಷ ನೆಗಡಿ ಕೆಮ್ಮುಗಳಾದಾಗಲೂ, ಗ್ಯಾಸ್ಟಿಕ್ ನಿಂದ ಸೊಂಟ ಹಿಡಿದುಕೊಂಡಾಗಲೂ, ಕಣ್ಣಿನ ಪೊರೆಯಿಂದಾಗಿ ಕಣ್ಣು ಮಂಜಾದಾಗಲೂ, ಅತಿ ಉಷ್ಣದಿಂದ ಮೂಗಿನಿಂದ ರಕ್ತ ಸುರಿತಿದ್ರು ಯಾವುದಕ್ಕೂ ಆಸ್ಪತ್ರೆ ಮೆಟ್ಟಿಲು ಹತ್ತಲಿಲ್ಲ. ಮಾತ್ರೆ ನುಂಗಲಿಲ್ಲ. ಇಂಜೆಕ್ಷನ್ ಚುಚ್ಚಿಸಿಕೊಳ್ಳಲಿಲ್ಲ. ಅಪ್ಪ ಅದ್ಯಾವುದಕ್ಕೂ ಹೆದರಿದ್ದನ್ನು ನಾನು ನೋಡೇ ಇಲ್ಲ. ಅಪ್ಪನ ಧೈರ್ಯದ ಜೊತೆ ಹಠ ಸ್ವಾಭಿಮಾನದ ಬಗ್ಗೆ ಹೇಳಬೇಕು. ಸ್ವಾಭಿಮಾನ ಅಂದ್ರೇನೆ ಅಪ್ಪ ಅನ್ನೋ ಹಾಗಿದ್ರು. ರೈತನಾಗಿ ಸರಕಾರದ ಯಾವುದೇ ಯೋಜನೆಗಳಿಗೂ ಕೈ ಚಾಚಿಲ್ಲ ನನ್ನಪ್ಪ. ಬಡ್ಡಿ ಇಲ್ಲದೆ ಸಿಗುವ (ಕೆಲವೊಂದು ಸಲ ಮನ್ನಾ ಆಗುವಂತಹ) ಬೆಳೆ ಸಾಲಕ್ಕಾಗಿ ಯಾವತ್ತೂ ಅರ್ಜಿ ಹಾಕಿಲ್ಲ. ಕಿಸಾನ್ ಸಮ್ಮಾನ್ ಯೋಜನೆ ಆಗಲಿ, ಬೆಳೆ ಪರಿಹಾರ ಆಗಲಿ, ರೈತನಿಗೆ ಸಿಗುವ ಯಾವುದೇ ಸಬ್ಸಿಡಿ ಯೋಜನೆಯಾಗಲಿ, ಅಷ್ಟೇ ಯಾಕೆ ಬಿಪಿಎಲ್ ಕಾರ್ಡು ದಾರರಿಗೆ ಸಿಗುವ ವೃದ್ಧಾಪ್ಯ ವೇತನಕ್ಕೂ ಕೈ ಚಾಚಿಲ್ಲ ನನ್ನಪ್ಪ. ರೈತ ಇನ್ನೊಬ್ಬರ ಹಂಗಲ್ಲಿ ಬದುಕಬಾರದು ಅನ್ನೋ ಸ್ವಾಭಿಮಾನ ಎಷ್ಟಿತ್ತೆಂದರೆ ಬಿಪಿಎಲ್ ಕಾರ್ಡ್ ದಾರ ಆಧಾರ್ ಕಾರ್ಡ್ ನ ಲಿಂಕ್ ಮಾಡುವ ಕಾಯ್ದೆ ಬಂದಾಗ ಸರಕಾರದ ಆಧಾರ ನನಗೆ ಬೇಡ, ನನ್ನ ಜಮೀನೇ ನನಗೆ ಆಧಾರ ನನ್ನ ಮಕ್ಕಳೇ ನನಗೆ ಆಧಾರ ಬೇರೆ ಯಾರ ಆಧಾರವು ನನಗೆ ಬೇಡ ಎಂದು ಆಧಾರ್ ಕಾರ್ಡನ್ನೇ ಮಾಡಿಸಿಕೊಳ್ಳಲಿಲ್ಲ. ಸರ್ಕಾರದ ಯಾವುದೇ ಯೋಜನೆಗಳಿಗೋಸ್ಕರ ಅಲ್ಲದಿದ್ದರೂ ಸರಕಾರದ ಒಂದು ದಾಖಲೆಗೋಸ್ಕರನಾದ್ರು ಆಧಾರ್ ಕಾರ್ಡ್ ಮಾಡಿಸಲು ನಾವು ಮಾಡಿದ ಪ್ರಯತ್ನ ಅಪ್ಪನ ಹಠದ ಮುಂದೆ ವ್ಯರ್ಥವಾಯಿತು ನನ್ನಪ್ಪನಿಗೆ ಸರ್ಕಾರದಿಂದ ಅಥವಾ ಇನ್ನೊಬ್ಬರ ಹತ್ತಿರ ಕೈ ಚಾಚಿ ತೆಗೆದುಕೊಳ್ಳೋದು ಅಂದ್ರೆನೇ ಆಗ್ತಾ ಇರಲಿಲ್ಲ ಯಾಕೆಂದರೆ ಪ್ರತಿ ವರ್ಷ ಜನವರಿಯಿಂದ ಮೇ ವರೆಗೂ ಜಮೀನಿನಲ್ಲಿ ಬೆಳೆಯುವ ಗೇರುಬೀಜ ಮಾರೋದ್ರಿಂದ ಸಿಗೋ ಹತ್ತರಿಂದ ಹನ್ನೆರಡು ಸಾವಿರ ದುಡ್ಡಲ್ಲಿ 6000 ಬ್ಯಾಂಕ್ ನಲ್ಲಿ ಅಡಮಾನ ಇಟ್ಟಿರೋ ಅಮ್ಮನ ಬಂಗಾರದ ಸರ ಬಿಡಿಸೋಕಾದರೆ ಇನ್ನುಳಿದ 6000 ಮಕ್ಕಳ ಬಟ್ಟೆ, ಸ್ಕೂಲು, ಮನೆ ಖರ್ಚಿಗೆ ಆಗುತ್ತಿತ್ತು. ಮಳೆಗಾಲದಲ್ಲಿ ಬೆಳೆಯೋ ಅಲ್ಪ ಸ್ವಲ್ಪ ತರಕಾರಿ ಮಾರಿ ಬಂದಿರೋ ದುಡ್ಡು ಸೆಪ್ಟೆಂಬರ್ ಅಕ್ಟೋಬರ್ ಗೆಲ್ಲಾ ಖಾಲಿ ಆಗುತ್ತಿತ್ತು. ಮೇ ನಲ್ಲಿ ಬ್ಯಾಂಕಿಂದ ಬಿಡಿಸಿದ ಬಂಗಾರದ ಸರ ಮತ್ತೆ ಬ್ಯಾಂಕಲ್ಲಿ ಅಡಮಾನ ಇಟ್ಟು 6,000 ತಂದು ನಂಬರ್ ಡಿಸೆಂಬರ್ ವರೆಗೂ ಮನೆ ಖರ್ಚಿಗೆ ಆಗುತ್ತಿತ್ತು. ಆಮೇಲೆ ಅಡಿಕೆ, ಗೇರುಬೀಜ, ಮೇನಲ್ಲಿ ಮತ್ತೆ ಸರ ಬಿಡಿಸುವುದು ಇದು ಪ್ರತಿ ವರ್ಷ ಕಂಟಿನ್ಯೂ ಆಗ್ತಿತ್ತು. ಹಾಗಾಗಿ ಅಪ್ಪನಿಗೆ ದುಡ್ಡಿಗೆ ಕೊರತೆ ಆಗದಿರೋವಷ್ಟು ಅಪ್ಪ ಶ್ರೀಮಂತರಾಗಿದ್ದರು. ಒಂದು ವೇಳೆ ಕೊರತೆ ಆದರೆ ತೆಂಗಿನಕಾಯಿ ಹಾಕ್ದೆ ಇರೋ ಸಾಂಬಾರು, ನಮ್ಮನೇಲೇ ಬೆಳೆಯೋ ಕಾಯಿ ಪಪ್ಪಾಯ ಸಾಂಬಾರು, ಕೆಸುವಿನ ದಂಟಿನ ಸಾಂಬಾರು ವಾರಾನುಗಟ್ಟಲೆ ಮಾಡುವ ಕಲೆ ನಮ್ಮ ಅಮ್ಮನಿಗೆ ಗೊತ್ತಿತ್ತು. ಹಲಸಿನ ಹಣ್ಣು, ಬಾಳೆಹಣ್ಣು ಕೆಲವು ಸಲ ಬೆಳಗಿನ ಉಪಹಾರಕ್ಕೆ ಆಗುತ್ತಿತ್ತು. ಹಾಗಾಗಿ ಯಾರತ್ರಾನೂ ಅಪ್ಪ ಕೈ ಚಾಚುತ್ತ ಇರಲಿಲ್ಲಾ. ರೈತನ ಮಗನಾಗಿ ಇನ್ನೊಬ್ಬರ ಕೈ ಕೆಳಗೆ ಕೆಲಸ ಮಾಡಿ ಲಕ್ಷ ಸಂಬಳ ತಗೊಂಡ್ರೂ ಅದು ದುಡ್ಡಲ್ಲ ನಿನ್ನ ಜಮೀನಿನಲ್ಲಿ ನೀನು ಬೆಳೆದಿರೋ ಬೆಳೆ ಮಾರಿ ನೂರು ರೂಪಾಯಿ ತಂದ್ರು ಅದು ನಿನ್ನ ದುಡ್ಡು , ಸ್ವಂತದ್ದು. ಅದಕ್ಕೆ ಬೆಲೆ ಜಾಸ್ತಿ ಅನ್ನೋರು. ಎಷ್ಟು ಬರೆದ್ರೂ ಮುಗಿದಿರೋವಷ್ಟು ಅಪ್ಪನ ಆದರ್ಶ ಜೀವನ ಇದೆ. ಅಪ್ಪ ಭೂಮಿ ತಾಯಿಯ ಸೇವೆ ಮಾಡುವ ಆರಂಭದ ದಿನಗಳಲ್ಲಿ ಮಳೆಗಾಲದಲ್ಲಿ ಹರಿಯುವ ಕೆಂಪು ನೀರಿನಲ್ಲಿ ಕುಚಲಕ್ಕಿ ಬೇಯಿಸಿ ಗಂಜಿ ಮಾಡಿ ಊಟ ಮಾಡಿರೋ ಕಥೆಗಳಿವೆ. ರೈತನಾಗಿ ಜಮೀನಿಗೋಸ್ಕರ, ಅಪ್ಪನಾಗಿ ಮಕ್ಕಳಿಗೋಸ್ಕರ, ಗಂಡನಾಗಿ ಹೆಂಡತಿಗೋಸ್ಕರ ತನ್ನ ಜೀವನ ಸವೆಸಿ ಹಠ, ಧೈರ್ಯ, ಸ್ವಾಭಿಮಾನ ನನ್ನಲ್ಲಿ ಹಾಗೆ ಬಿಟ್ಟು ಇವತ್ತಿಗೆ ಸರಿಯಾಗಿ ಒಂದು ತಿಂಗಳು ಅಂದರೆ 04/04/2024 ರಂದು ನಮ್ಮನ್ನೆಲ್ಲ ಬಿಟ್ಟು ಹೋದ್ರು. ಮತ್ತೆ ನನ್ನ ಮಗನಾಗಿ ಹುಟ್ಟಿ ಬಾ ಅಪ್ಪ.......