ಪ್ರಜಾವಾಣಿ ಉತ್ತರ ಕನ್ನಡ

  • Home
  • India
  • Karwar
  • ಪ್ರಜಾವಾಣಿ ಉತ್ತರ ಕನ್ನಡ

ಪ್ರಜಾವಾಣಿ ಉತ್ತರ ಕನ್ನಡ ಪ್ರಜಾವಾಣಿ ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ಸುದ್ದಿಗಳು
A .net Initiative

24/05/2025
15/04/2025

ಕಾರವಾರದ ಸಾಯಿಕಟ್ಟಾದ ಸಾಯಿಮಂದಿರಕ್ಕೆ ಸೋಮವಾರ ತಡರಾತ್ರಿ ನುಗ್ಗಿದ ಕಳ್ಳರು ಲಕ್ಷಾಂತರ ಮೌಲ್ಯದ ಬೆಳ್ಳಿ ಸಾಮಗ್ರಿಗಳನ್ನು ಕಳವು ಮಾಡಿದ್ದಾರೆ.

‘ಸಾಯಿಬಾಬಾ ಪೀಠದ ಬೆಳ್ಳಿಯ ಪ್ರಭಾವಳಿ, ಬೆಳ್ಳಿಯ ಪಾದುಕೆ ಸೇರಿದಂತೆ ಸುಮಾರು 12 ಕೆ.ಜಿಗೂ ಅಧಿಕ ಬೆಳ್ಳಿ ಸಾಮಗ್ರಿ ಕಳವು ಮಾಡಲಾಗಿದೆ’ ಎಂದು ನಗರಠಾಣೆ ಪೊಲೀಸರು ತಿಳಿಸಿದ್ದಾರೆ.

‘ದೇವಾಲಯಗಳಿಗೆ ನುಗ್ಗಿ ಬೆಳ್ಳಿ ಆಭರಣ ಕಳವು ಮಾಡುವುದನ್ನೇ ಕಸುಬಾಗಿಸಿಕೊಂಡವರಿಂದ ಈ ಕೃತ್ಯ ನಡೆದಿರುವ ಶಂಕೆ ಇದೆ. ಹಿಂದಿನ ಕಳವು ಪ್ರಕರಣಗಳಲ್ಲಿ ಭಾಗಿಯಾದವರೇ ಕಳವು ನಡೆಸಿರುವ ಸಾಧ್ಯತೆ ಇದೆ’ ಎಂದೂ ಪೊಲೀಸರು ಶಂಕಿಸಿದ್ದಾರೆ.

09/03/2024

ಸಮುದ್ರಕ್ಕೆ ಜಿಗಿದು ಈಜಿದ ಸಚಿವ

ಭಟ್ಕಳ: ತಾಲ್ಲೂಕಿನ ಬೆಳಕೆ ಸಮೀಪ ಅರಬ್ಬಿ ಸಮುದ್ರದಲ್ಲಿ ಕೃತಕ ಬಂಡೆಸಾಲು ಅಳವಡಿಕೆ ಕಾಮಗಾರಿಗೆ ಚಾಲನೆ ನೀಡಲು ತೆರಳಿದ್ದ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಮಂಕಾಳ ವೈದ್ಯ ಸಮುದ್ರಕ್ಕೆ ಜಿಗಿದು ಹತ್ತು ನಿಮಿಷಕ್ಕೂ ಹೆಚ್ಚು ಕಾಲ ಈಜಿದರು.

ಖಾಸಗಿ ದೋಣಿಯಲ್ಲಿ ತೆರಳಿದ್ದ ಅವರು ಕೃತಕ ಬಂಡೆಸಾಲು ಸಮುದ್ರಕ್ಕೆ ಬಿಡುವ ಕಾರ್ಯಕ್ಕೆ ಚಾಲನೆ ನೀಡಿದ ಬಳಿಕ ದಡದಿಂದ ಸುಮಾರು ಐದು ನಾಟಿಕಲ್ ದೂರದಲ್ಲಿ ಸಮುದ್ರಕ್ಕೆ ಜಿಗಿದರು. ಶವಾಸನದಲ್ಲಿ ಕೆಲ ನಿಮಿಷ ತೇಲಿದ್ದ ಅವರು ಬಳಿಕ ಕೆಲ ಹೊತ್ತು ಈಜಿದರು‌.

'ಸಮುದ್ರದಲ್ಲಿ ಈಜದೆ ಹಲವು ಸಮಯವಾಗಿತ್ತು. ಕೃತಕ ಬಂಡೆಸಾಲು ಅಳವಡಿಸುವಂತ ಯೋಜನೆಗೆ ಚಾಲನೆ ನೀಡುವ ಅವಕಾಶ ಸಿಕ್ಕ ವೇಳೆ ಈಜಿ ಹಳೆಯ ನೆನಪುಗಳನ್ನು ಮೆಲಕು ಹಾಕಿದ್ದೇನೆ' ಎಂದು ಸಚಿವ ಮಂಕಾಳ ವೈದ್ಯ ಪ್ರತಿಕ್ರಿಯಿಸಿದರು.

ಹುಲಿಹೊಂಡ:ಕಬ್ಬಿನ ಗದ್ದೆಯಲ್ಲಿ ಕಾಣಿಸಿಕೊಂಡ ಚಿರತೆ ಮರಿಗಳುಮುಂಡಗೋಡ: ತಾಲ್ಲೂಕಿನ ಹುಲಿಹೊಂಡ ಗ್ರಾಮದ ಸನಿಹದ ಕಬ್ಬಿನ ಗದ್ದೆಯಲ್ಲಿ ಚಿರತೆ ಮರಿಗಳ...
17/01/2024

ಹುಲಿಹೊಂಡ:ಕಬ್ಬಿನ ಗದ್ದೆಯಲ್ಲಿ ಕಾಣಿಸಿಕೊಂಡ ಚಿರತೆ ಮರಿಗಳು

ಮುಂಡಗೋಡ: ತಾಲ್ಲೂಕಿನ ಹುಲಿಹೊಂಡ ಗ್ರಾಮದ ಸನಿಹದ ಕಬ್ಬಿನ ಗದ್ದೆಯಲ್ಲಿ ಚಿರತೆ ಮರಿಗಳು ಪ್ರತ್ಯಕ್ಷವಾಗಿದ್ದು, ಕಬ್ಬು ಕಟಾವು ಮಾಡಲು ಹೋಗಿದ್ದ ಕಾರ್ಮಿಕರು ಭಯದಿಂದ ಕಬ್ಬು ಕಟಾವು ಮಾಡದೇ ಮರಳಿದ್ದಾರೆ.

ರೈತ ಶಿವಾನಂದ ಕೆಂಗಾಪುರ ಎಂಬುವರ ಗದ್ದೆಯಲ್ಲಿದ್ದ ಕಬ್ಬನ್ನು ಕಟಾವು ಮಾಡುತ್ತಿದ್ದಾಗ ಎರಡು ಚಿರತೆ ಮರಿಗಳು ಪ್ರತ್ಯಕ್ಷವಾಗಿವೆ. ಚಿರತೆ ಮರಿಗಳನ್ನು ಕೈಯಲ್ಲಿ ಎತ್ತಿಕೊಂಡು ಅನತಿ ದೂರದಲ್ಲಿ ಇಟ್ಟಿದ್ದಾರೆ. ಕಟಾವು ಮಾಡಿದ ಕಬ್ಬನ್ನು ಲಾರಿಗೆ ತುಂಬುವಾಗ ತಾಯಿ ಚಿರತೆಯು ಕಾರ್ಮಿಕರ ಮೇಲೆ ದಾಳಿ ಮಾಡುವ ಪ್ರಯತ್ನ ಮಾಡಿದೆ. ಆತಂಕಗೊಂಡ ಕಾರ್ಮಿಕರು ಲಾರಿ ಏರಿ ಜೀವ ಉಳಿಸಿಕೊಂಡಿದ್ದಾರೆ.

ಜ.12ರಂದು ಚಿರತೆ ಮರಿ ಪ್ರತ್ಯಕ್ಷವಾಗಿದ್ದರೂ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ರೈತರಿಂದ ಕೇಳಿಬರುತ್ತಿದೆ.

ಮರಿಗಳನ್ನು ಸನಿಹದ ಕಬ್ಬಿನ ಗದ್ದೆಗೆ ಮತ್ತೆ ಕರೆದುಕೊಂಡು ಹೋಗಿರುವ ತಾಯಿ ಚಿರತೆಯು, ಮಂಗಳವಾರ ರಾತ್ರಿ ಟಾರ್ಚ್ ಬೆಳಕಿಗೆ ಮುಖ ಮಾಡಿ ಚೀರುತ್ತ ಬಂದಿದೆ. ಬುಧವಾರ ಅರಣ್ಯ ಸಿಬ್ಬಂದಿ ಗದ್ದೆಗೆ ಭೇಟಿ ನೀಡಿ, ಚಿರತೆಯ ಚಲನವಲನ ವೀಕ್ಷಿಸಿದರು.

ಕಬ್ಬಿನ ಗದ್ದೆಯಲ್ಲಿಯೇ ಚಿರತೆ ತನ್ನ ಮರಿಗಳೊಂದಿಗೆ ಬಿಡಾರ ಹೂಡಿದ್ದರಿಂದ ಕಬ್ಬು ಕಟಾವು ಮಾಡಲು ಸಾಧ್ಯವಾಗುತ್ತಿಲ್ಲ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

'ಕಳೆದ ನಾಲ್ಕು ದಿನಗಳ ಹಿಂದೆ ಎರಡು ಚಿರತೆ ಮರಿಗಳು ಕಬ್ಬಿನ ಗದ್ದೆಯಲ್ಲಿ ಪ್ರತ್ಯಕ್ಷವಾಗಿದ್ದವು. ಮಾರನೇ ದಿನ ಮರಿಗಳನ್ನು ಮತ್ತೊಂದು ಕಬ್ಬಿನ ಹದ್ದೆಗೆ ಕರೆದುಕೊಂಡು ಹೋಗಿದೆ. ಕಬ್ಬು ಕಟಾವು ಮಾಡುವಾಗ ಚಿರತೆ ದಾಳಿ ಮಾಡಿದ್ದರಿಂದ ಆತಂಕಗೊಂಡ ಕೂಲಿಕಾರ್ಮಿಕರು ಕಬ್ಬನ್ನು ಸ್ಥಳದಲ್ಲಿಯೇ ಬಿಟ್ಟು ಹೋಗಿದ್ದಾರೆ' ಎಂದು ಗ್ರಾಮ ಅರಣ್ಯ ಸಮಿತಿಯ ಅಧ್ಯಕ್ಷ ಹನಮಂತ ಕಂಬಾರ ಹೇಳಿದರು.

ಸಮುದ್ರದಲ್ಲಿ ಮುಳುಗುತ್ತಿದ್ದ ಬೋಟ್ ಪರ್ಸಿನ್ ಬೋಟ್ ರಕ್ಷಣೆಕಾರವಾರ: ಗೋವಾದ ಬೇತುಲ್ ಭಾಗದ ಅರಬ್ಬಿ ಸಮುದ್ರದಲ್ಲಿ ಮುಳುಗುವ ಹಂತದಲ್ಲಿದ್ದ ಮಂಗಳೂ...
17/01/2024

ಸಮುದ್ರದಲ್ಲಿ ಮುಳುಗುತ್ತಿದ್ದ ಬೋಟ್ ಪರ್ಸಿನ್ ಬೋಟ್ ರಕ್ಷಣೆ

ಕಾರವಾರ: ಗೋವಾದ ಬೇತುಲ್ ಭಾಗದ ಅರಬ್ಬಿ ಸಮುದ್ರದಲ್ಲಿ ಮುಳುಗುವ ಹಂತದಲ್ಲಿದ್ದ ಮಂಗಳೂರಿನ ಪರ್ಸಿನ್ ಬೋಟ್ ಅನ್ನು ಬುಧವಾರ ಆರು ಮೀನುಗಾರಿಕೆ ಬೋಟ್ ಗಳ ಸಹಾಯದಿಂದ ರಕ್ಷಿಸಿ ಇಲ್ಲಿನ ಬೈತಕೋಲ ಮೀನುಗಾರಿಕೆ ಬಂದರಿಗೆ ಕರೆತರಲಾಯಿತು.

ಮಂಗಳೂರಿನ ಇಂದಾದ್ ಎಂಬುವವರಿಗೆ ಸೇರಿದ್ದ ರಾಯಲ್ ಬ್ಲ್ಯೂ ಹೆಸರಿನ ಪರ್ಸಿನ್ ಬೋಟ್ ಕಾರವಾರದಿಂದ ಸುಮಾರು 30 ನಾಟಿಕಲ್ ಮೈಲು ದೂರದಲ್ಲಿ ಅಪಾಯಕ್ಕೆ ಸಿಲುಕಿತ್ತು. ಅದನ್ನು ಏಶಿಯನ್ ಬ್ಲ್ಯೂ, ಸೀ ಫ್ಲವರ್, ಸೀ ಪ್ರಿನ್ಸ್, ವೈಟ್ ಆರ್ಬಿಟ್, ಬ್ಲ್ಯಾಕ್ ಬೆರ್ರಿ, ಸೀ ಹಂಟರ್ ಹೆಸರಿನ ಬೋಟುಗಳ ನೆರವಿನೊಂದಿಗೆ ರಕ್ಷಿಸಿ ಬಂದರಿಗೆ ಕರೆತರಲಾಯಿತು.

'ರಾಯಲ್ ಬ್ಲ್ಯೂ ಬೋಟ್ ನ ತಳಭಾಗದಲ್ಲಿ ಬಿರುಕು ಕಾಣಿಸಿಕೊಂಡಿದ್ದರಿಂದ ನೀರು ಒಳನುಗ್ಗಿತ್ತು. ಏಳು ಮಂದಿ ಕಾರ್ಮಿಕರು ಅಪಾಯಕ್ಕೆ ಸಿಲುಕಿದ್ದ ಬಗ್ಗೆ ಸಂದೇಶ ಕಳಿಸಿದ್ದರು. ಬೋಟ್ ಪತ್ತೆ ಹಚ್ಚಿ ಹಗ್ಗ ಕಟ್ಟಿ ಎಳೆದುಕೊಂಡು ತರಲಾಯಿತು' ಎಂದು ಬ್ಲ್ಯಾಕ್ ಬೆರ್ರಿ ಬೋಟ್ ಚಾಲಕ ಜಯರಾಮ್ ತಿಳಿಸಿದರು.

ಬೋಟನಲ್ಲಿ ತುಂಬುತ್ತಿದ್ದ ನೀರನ್ನು ಪಂಪ್ ಮೂಲಕ ಸಮುದ್ರಕ್ಕೆ ಹೊರಚೆಲ್ಲಲಾಗುತ್ತಿತ್ತು.

'ಬೋಟ್ ಸುರಕ್ಷಿತವಾಗಿ ದಡಕ್ಕೆ ಬಂದಿದೆ. ಎಲ್ಲ ಕಾರ್ಮಿಕರು ಸುರಕ್ಷಿತವಾಗಿದ್ದಾರೆ' ಎಂದು ಕರಾವಳಿ ಕಾವಲು ಪಡೆಯ ಇನ್ಸಪೆಕ್ಟರ್ ನಿಶ್ಚಲಕುಮಾರ ತಿಳಿಸಿದರು.

ಸಂಕ್ರಾಂತಿ:ಉತ್ಸಾಹ ಹೆಚ್ಚಿಸಿದ ಗಾಳಿಪಟ ಸ್ಪರ್ಧೆಕಾರವಾರ: ಸಂಕ್ರಾಂತಿ ಹಬ್ಬದ ಪ್ರಯುಕ್ತ ಇಲ್ಲಿನ ನಂದನಗದ್ದಾದ ತೇಲಂಗ ರಸ್ತೆಯಲ್ಲಿರುವ ಸರ್ಕಾರಿ ...
15/01/2024

ಸಂಕ್ರಾಂತಿ:ಉತ್ಸಾಹ ಹೆಚ್ಚಿಸಿದ ಗಾಳಿಪಟ ಸ್ಪರ್ಧೆ

ಕಾರವಾರ: ಸಂಕ್ರಾಂತಿ ಹಬ್ಬದ ಪ್ರಯುಕ್ತ ಇಲ್ಲಿನ ನಂದನಗದ್ದಾದ ತೇಲಂಗ ರಸ್ತೆಯಲ್ಲಿರುವ ಸರ್ಕಾರಿ ಕನ್ನಡ ಶಾಲೆ ಮೈದಾನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಗಾಳಿಪಟ ಸ್ಪರ್ಧೆಯು ಮಕ್ಕಳು, ಯುವಕರಲ್ಲಿ ಉತ್ಸಾಹ ಇಮ್ಮಡಿಸುವಂತೆ ಮಾಡಿತು.

ಇಲ್ಲಿನ ಗಜಾನನ ಯೂಥ್ ಕ್ಲಬ್ ನೇತೃತ್ವದಲ್ಲಿ ಸತತ ಮೂರನೆ ವರ್ಷ ಆಯೋಜಿಸಿದ್ದ ಸ್ಪರ್ಧೆಯಲ್ಲಿ 35ಕ್ಕೂ ಹೆಚ್ಚು ಸ್ಪರ್ಧಿಗಳು ಪಾಲ್ಗೊಂಡಿದ್ದರು. ವಿವಿಧ ಬಗೆಯ, ಹಲವು ಬಣ್ಣದ ಗಾಳಿಪಟಗಳನ್ನು ಹಾರಿಸಿ ಖುಷಿಪಟ್ಟರು. ಮಕ್ಕಳು, ಯುವಕರು, ವೃದ್ಧರು ಎಂಬ ವಯಸ್ಸಿನ ಭೇದವಿಲ್ಲದೆ ಹಲವಾರು ಜನರು ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಮನೋಜ್ ಬಾಂದೇಕರ ಸ್ಪರ್ಧೆಗೆ ಚಾಲನೆ ನೀಡಿದ್ದರು. ‘ಎಲ್ಲರನ್ನೂ ಒಗ್ಗೂಡಿಸುವುದೇ ಹಬ್ಬಗಳ ಆಚರಣೆಯ ಮಹತ್ವ. ಇಂತಹ ಸಂದರ್ಭದಲ್ಲಿ ಹೊಸ ಮಾದರಿಯ ಸ್ಪರ್ಧೆಯ ಮೂಲಕ ಯುವಕರೆಲ್ಲ ಒಂದೆಡೆ ಸೇರುವುದು ಮಾದರಿ’ ಎಂದರು.

ಗಜಾನನ ಯೂಥ್ ಕ್ಲಬ್‍ನ ಸಿದ್ದೇಶ ಬಾಂದೇಕರ, ಆಕಾಶ ನಾಯ್ಕ, ಅಮೇಯ ನಾಯ್ಕ, ಪ್ರಜ್ವಲ್ ಬಾಂದೇಕರ, ಆದರ್ಶ ನಾಯ್ಕ, ಸಚಿನ್ ಶೇಣ್ವಿ, ಇತರರು ಪಾಲ್ಗೊಂಡಿದ್ದರು.

ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಎನ್.ಎಸ್.ಹೆಗಡೆ ನೇಮಕಕಾರವಾರ: ಲೋಕಸಭೆ ಚುನಾವಣೆ ಸಮೀಪಿಸಿದ ಹೊತ್ತಿನಲ್ಲಿಯೇ ಬಿಜೆಪಿ ಜಿಲ್ಲಾ ಘಟಕಕ್ಕೆ ಹೊಸ ಅಧ್ಯಕ್...
15/01/2024

ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಎನ್.ಎಸ್.ಹೆಗಡೆ ನೇಮಕ

ಕಾರವಾರ: ಲೋಕಸಭೆ ಚುನಾವಣೆ ಸಮೀಪಿಸಿದ ಹೊತ್ತಿನಲ್ಲಿಯೇ ಬಿಜೆಪಿ ಜಿಲ್ಲಾ ಘಟಕಕ್ಕೆ ಹೊಸ ಅಧ್ಯಕ್ಷರ ನೇಮಕವಾಗಿದ್ದು, ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿರುವ ಹೊನ್ನಾವರದ ಎನ್.ಎಸ್.ಹೆಗಡೆ ಅವರಿಗೆ ಜವಾಬ್ದಾರಿ ಹೊರಿಸಲಾಗಿದೆ.

ಮೂರು ಅವಧಿಗೆ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ, ಈ ಹಿಂದಿನ ಅವಧಿಯಲ್ಲಿ ಬಿಜೆಪಿ ಶಿವಮೊಗ್ಗ ವಿಭಾಗದ ಸಹಪ್ರಭಾರಿಯಾಗಿದ್ದ ಕರ್ಕಿ ಗ್ರಾಮದ ಹೆಗಡೆ ಈ ಬಾರಿ ಅಧ್ಯಕ್ಷ ಸ್ಥಾನ ಅಲಂಕರಿಸಿದ್ದಾರೆ. ಅಧ್ಯಕ್ಷ ಹುದ್ದೆಗೆ ಏರಲು ಬಿಜೆಪಿಯ 11 ಮಂದಿ ಮುಖಂಡರು ಪೈಪೋಟಿ ನಡೆಸಿದ್ದರು. ಕಳೆದ ಅವಧಿಯಲ್ಲಿ ಬ್ರಾಹ್ಮಣ ಸಮುದಾಯದವರಿಗೆ ಅಧ್ಯಕ್ಷ ಸ್ಥಾನ ನೀಡಿದ್ದರಿಂದ ಈ ಬಾರಿ ಹಿಂದುಳಿದ ವರ್ಗಕ್ಕೆ ಅವಕಾಶ ಸಿಗಬಹುದು ಎಂಬ ಲೆಕ್ಕಾಚಾರ ಪಕ್ಷದ ಹಲವು ಮುಖಂಡರಲ್ಲಿತ್ತು.

‘ಬಿಜೆಪಿ ಸಾರಥ್ಯಕ್ಕೆ ಈ ಬಾರಿ ಬಹುಸಂಖ್ಯಾತ ನಾಮಧಾರಿ ಸಮುದಾಯಕ್ಕೆ ಅವಕಾಶ ಸಿಗಬಹುದು ಎಂಬ ನಿರೀಕ್ಷೆ ಇತ್ತು. ಅದೇ ಸಮುದಾಯಕ್ಕೆ ಸೇರಿದ್ದ ಮೂವರು ಪೈಪೋಟಿಯಲ್ಲಿಯೂ ಇದ್ದರು. ಕಳೆದ ಬಾರಿ ಕರಾವಳಿ ಭಾಗಕ್ಕೆ ಅವಕಾಶ ನೀಡಿದ್ದರಿಂದ ಈ ಬಾರಿ ಘಟ್ಟದ ಮೇಲಿನವರಿಗೆ ಹುದ್ದೆ ಸಿಗಬಹುದು ಎಂಬ ಲೆಕ್ಕಾಚಾರವೂ ಇದ್ದವು’ ಎಂದು ಬಿಜೆಪಿ ಮುಖಂಡರೊಬ್ಬರು ಪ್ರತಿಕ್ರಿಯಿಸಿದರು.

‘ಕಳೆದ 20 ವರ್ಷಗಳಿಂದ ಪಕ್ಷದ ವಿವಿಧ ಜವಾಬ್ದಾರಿ ನಿಭಾಯಿಸಿರುವ ಅನುಭವವಿದೆ. ಅದನ್ನು ವರಿಷ್ಠರು ಪರಿಗಣಿಸಿ ಹೊಸ ಜವಾಬ್ದಾರಿ ನೀಡಿದ್ದಾರೆ. ಲೋಕಸಭೆ, ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ ಚುನಾವಣೆಗಳು ಎದುರಿಗಿದ್ದು ಪಕ್ಷ ಸಂಘಟನೆಯನ್ನು ಮತ್ತಷ್ಟು ಚುರುಕುಗೊಳಿಸುವ ಕೆಲಸ ಮಾಡಲಾಗುವುದು. ಎಲ್ಲರನ್ನೂ ವಿಶ್ವಾಸಕ್ಕೆ ಪಡೆಯುತ್ತ ಜವಾಬ್ದಾರಿ ನಿಭಾಯಿಸಲಾಗುವುದು’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಎಸ್.ಹೆಗಡೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಅದ್ದೂರಿಯಾಗಿ ನೆರವೇರಿದ ಶೇಡಬರಿ ಜಾತ್ರೆಭಟ್ಕಳ: ಪ್ರತಿ ವರ್ಷದಂತೆ ಸಂಕ್ರಾಂತಿಯ ನಂತರದ ತಾಲ್ಲೂಕಿನ ಪ್ರಥಮ ಜಾತ್ರೆ ಹೆಬಳೆಯ ಗ್ರಾಮ ಪಂಚಾಯ್ತಿ ವ್...
15/01/2024

ಅದ್ದೂರಿಯಾಗಿ ನೆರವೇರಿದ ಶೇಡಬರಿ ಜಾತ್ರೆ

ಭಟ್ಕಳ: ಪ್ರತಿ ವರ್ಷದಂತೆ ಸಂಕ್ರಾಂತಿಯ ನಂತರದ ತಾಲ್ಲೂಕಿನ ಪ್ರಥಮ ಜಾತ್ರೆ ಹೆಬಳೆಯ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಶೇಡಬರಿ ಜಟಕಾ ಮಹಾಸತಿ ದೇವರ ಜಾತ್ರೆ ಸೋಮವಾರ ಸಂಜೆ ನಡೆಯಿತು.

ಜಾತ್ರೆಯ ಪ್ರಯುಕ್ತ ಬೆಳಿಗ್ಗೆಯಿಂದಲೇ ದೇವಸ್ಥಾನದಲ್ಲಿ ವಿಶೇಷ ಪೂಜೆ, ಹರಕೆ, ಕಾಣಿಕೆ ಸಲ್ಲಿಕೆ ಇತ್ಯಾದಿ ಧಾರ್ಮಿಕ ವಿಧಿ ವಿಧಾನಗಳು ನಡೆದವು.

ಭಕ್ತರು ತಮಗೆ ಕಷ್ಟ ಬಂದ ಸಂದರ್ಭದಲ್ಲಿ ಹೇಳಿಕೊಂಡ ಪೂಜೆ, ಶೇಡಿಮರದ ಹರಕೆಯನ್ನು ಭಕ್ತಿ ಪೂರ್ವಕವಾಗಿ ನೆರವೇರಿಸಿದರು. ಜಾತ್ರೆಗೆ ಹೆಬಳೆ ಭಾಗದವರಷ್ಟೇ ಅಲ್ಲದೇ ತಾಲ್ಲೂಕಿನ ವಿವಿಧ ಭಾಗಗಳ ಜನರೂ ಆಗಮಿಸಿ ಪೂಜೆ ಸಲ್ಲಿಸಿದರು.

ಜಾತ್ರೆಯಲ್ಲಿ ಹಲವು ಭಕ್ತರು ಶೇಡಿ ಮರವನ್ನು ಏರಿ ತಮ್ಮ ಸಂಕಷ್ಟ ನಿವಾರಣೆಗಾಗಿ ಹೇಳಿಕೊಂಡ ಹರಿಕೆಯನ್ನು ತೀರಿಸಿದರು. ಕಷ್ಟ–ಕಾರ್ಪಣ್ಯ ಬಂದೊದಗಿದ ಸಂದರ್ಭದಲ್ಲಿ ಶೇಡಿ ಮರದ ಹರಕೆ ಹೇಳಿಕೊಳ್ಳುವುದು ಇಲ್ಲಿನ ವಾಡಿಕೆ. ಹೀಗಾಗಿಯೇ ಶೇಡಬರಿ ಜಾತ್ರೆಯಲ್ಲಿ ಸೇಡಿಮರದ ಹರಕೆಗೆ ಮಹತ್ವವಿದ್ದು, ಜಾತ್ರೆಯಲ್ಲಿ ಮಕ್ಕಳಿಂದ ಹಿಡಿದು ಎಲ್ಲರೂ ಶೇಡಿ ಮರದ ಹರಕೆ ಸಲ್ಲಿಸಿದರು.

ಜಾತ್ರೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ಭಕ್ತಿಪೂರ್ವಕವಾಗಿ ಹರಕೆ, ಪೂಜೆ ಸಲ್ಲಿಸಿದರು. ದೇವಸ್ಥಾನದ ಆಡಳಿತ ಮಂಡಳಿಯ ಪ್ರಮುಖರು ಜಾತ್ರಾ ಸ್ಥಳದಲ್ಲಿದ್ದು, ಪೂಜಾ ಮತ್ತು ಹರಕೆ ಕಾರ್ಯಗಳು ಸಾಂಗವಾಗಿ ನಡೆಯಲು ಸಹಕರಿಸಿದರು. ಜಾತ್ರಾ ಪ್ರಯುಕ್ತ ಮಂಗಳವಾರ ಮಧ್ಯಾಹ್ನದ ವರೆಗೆ ದೇವರಿಗೆ ವಿಶೇಷ ಪೂಜೆ, ಹರಕೆ ನಡೆಯಲಿದೆ.

ಬಾಣಂತಿ ದೇವಿ ಜಾತ್ರೆ:ಹರಕೆ ಅರ್ಪಿಸಿದ ತಾಯಂದಿರುಮುಂಡಗೋಡ: ಹರಕೆ ಈಡೇರಿದ ಸಂತೃಪ್ತಭಾವ ತಾಯಂದಿಯರ ಮೊಗದಲ್ಲಿ ಎದ್ದು ಕಾಣುತ್ತಿತ್ತು. ಎಳೆಯ ಕಂದಮ...
15/01/2024

ಬಾಣಂತಿ ದೇವಿ ಜಾತ್ರೆ:ಹರಕೆ ಅರ್ಪಿಸಿದ ತಾಯಂದಿರು

ಮುಂಡಗೋಡ: ಹರಕೆ ಈಡೇರಿದ ಸಂತೃಪ್ತಭಾವ ತಾಯಂದಿಯರ ಮೊಗದಲ್ಲಿ ಎದ್ದು ಕಾಣುತ್ತಿತ್ತು. ಎಳೆಯ ಕಂದಮ್ಮಗಳನ್ನು ಮಡಿಲಲ್ಲಿ ಹಾಕಿಕೊಂಡು, ದೇವಿಯ ತೆಪ್ಪೋತ್ಸವವನ್ನು ಕಣ್ತುಂಬಿಕೊಳ್ಳಲು ಕಾತುರದಿಂದ ಕಾಯುತ್ತಿದ್ದರು. ದೇವಸ್ಥಾನದಿಂದ ಪಲ್ಲಕ್ಕಿ ಮೆರವಣಿಗೆ ಕೆರೆಯತ್ತ ಆಗಮಿಸಿದಾಗ, ದಡಭಾಗದಲ್ಲಿ ನೆರೆದ ಭಕ್ತ ಸಮೂಹದ ಜಯಘೋಷಗಳು ಮಾರ್ದನಿಸಿದವು.

ರಾಜ್ಯ ಹೆದ್ದಾರಿಯು ಭಕ್ತರಿಂದ ತುಂಬಿ ತುಳುಕಿತ್ತು. ಮಕರ ಸಂಕ್ರಮಣದಂದು ನಡೆಯುವ ತಾಲ್ಲೂಕಿನ ಮೊದಲ ಜಾತ್ರೆ ಎಂಬ ಹೆಗ್ಗಳಿಕೆ ಪಡೆದಿರುವ ಸಾಲಗಾಂವ ಗ್ರಾಮದ ಬಾಣಂತಿ ದೇವಿ ಜಾತ್ರೆಯು ಸೋಮವಾರ ಸಂಜೆ ಸಂಭ್ರಮದಿಂದ ಜರುಗಿತು.

ಶಿರಸಿ-ಮುಂಡಗೋಡ ರಾಜ್ಯ ಹೆದ್ದಾರಿ ಅಂಚಿನಲ್ಲಿರುವ ಬಾಣಂತಿ ದೇವಿಯ ಜಾತ್ರೆಗೆ ನೂರಾರು ಸಂಖ್ಯೆಯಲ್ಲಿ ಭಕ್ತರು ಸಾಕ್ಷಿಯಾದರು. ಕೆರೆಯ ವಿರುದ್ಧ ದಿಕ್ಕಿನಲ್ಲಿ ಸೂರ್ಯ ಜಾರಲು ಅಣಿಯಾಗುತ್ತಿದ್ದಂತೆ, ಪೂರ್ವಾಭಿಮುಖವಾಗಿ ಹೊರಡಲು ಅಣಿಯಾಗಿದ್ದ ತೆಪ್ಪಕ್ಕೆ ಯಲ್ಲಪ್ಪ ಸುಬ್ಬಣ್ಣವರ್‌ ನೇತೃತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಡೊಳ್ಳು ಕುಣಿತದ ತಂಡದವರು ಪಲ್ಲಕ್ಕಿ ಮೆರವಣಿಗೆಗೆ ಕಳೆ ನೀಡಿದರು. ದೇವಸ್ಥಾನ ಕಮೀಟಿಯ ಅಧ್ಯಕ್ಷ, ಸದಸ್ಯರು, ಜನಪ್ರತಿನಿಧಿಗಳು ಇದ್ದರು.

ಪೂರ್ವಾಭಿಮುಖವಾಗಿ ತೆಪ್ಪ ಸಾಗುತ್ತಿದ್ದಂತೆ, ಭಕ್ತರು ಬಾಳೆಹಣ್ಣು, ಉತ್ತತ್ತಿಗಳನ್ನು ಎಸೆದು, ದೇವಿಗೆ ಕೈಮುಗಿದರು. ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ನಡೆದ ತೆಪ್ಪದ ಪೂಜೆ ಹಾಗೂ ಬಿಡುವ ಪ್ರಕ್ರಿಯೆಯನ್ನು ನೆರೆದ ಭಕ್ತರು ವೀಕ್ಷಿಸಿದರು.

ಹರಕೆ ತೀರಿಸಿದರು: ಬಾಣಂತಿದೇವಿ ಜಾತ್ರೆಯ ವಿಶೇಷ ಎಂದರೆ, ಸಣ್ಣ ಮಕ್ಕಳನ್ನು ತೆಪ್ಪದ ಎದುರಿಗೆ, ನೀರಿನಲ್ಲಿ ಸ್ನಾನ ಮಾಡಿಸುವುದಾಗಿದೆ. ಜೋಡಿಕುಡಿ ಬಾಳೆಎಳೆಯ ಮೇಲೆ ಮಕ್ಕಳನ್ನು ಮಲಗಿಸಿ, ಕೆರೆಯ ನೀರಿನಲ್ಲಿ ಒಂದು ಕ್ಷಣ ಮುಳುಗಿಸಿ, ಮೇಲಕ್ಕೆತ್ತುವುದು ಹಿಂದಿನಿಂದ ನಡೆದುಕೊಂಡು ಬಂದ ಆಚರಣೆಯಾಗಿದೆ. ಪ್ರತಿ ವರ್ಷದಂತೆ ಈ ಸಲವೂ ಹಲವು ಮಕ್ಕಳ ತಾಯಂದಿರು ಹರಕೆ ತೀರಿಸಿದರು.

ʼಸಂತಾನಭಾಗ್ಯ ಕರುಣಿಸಿದರೆ ಹಾಗೂ ಬೇಡಿಕೆ ಈಡೇರಿದಾಗ, ಜಾತ್ರೆಯ ಸಂದರ್ಭದಲ್ಲಿ ತೆಪ್ಪದ ಮುಂದೆ ಮಗುವನ್ನು ನೀರಿನಲ್ಲಿ ಸ್ನಾನ ಮಾಡಿಸುವುದಾಗಿ ಭಕ್ತರು ಬೇಡಿಕೊಂಡಿರುತ್ತಾರೆ. ಸುತ್ತಲಿನ ಗ್ರಾಮದ ಭಕ್ತರಲ್ಲದೇ, ಹೊರ ತಾಲ್ಲೂಕು, ಹೊರ ಜಿಲ್ಲೆಯ ಭಕ್ತರೂ ಜಾತ್ರೆಯಲ್ಲಿ ಪಾಲ್ಗೊಂಡಿದ್ದರು. ತೆಪ್ಪವನ್ನು ಬಿಡುವ ಪೂಜಾರಿಯು ಮಕ್ಕಳನ್ನು ಬಾಳೆಎಲೆಯ ಮೇಲೆ ಮಲಗಿಸಿ, ನೀರಿನಲ್ಲಿ ಮುಳುಗಿಸಿ ಮರಳಿ ಪಾಲಕರ ಕೈಗೆ ಕೊಡುತ್ತಾರೆ. ಈ ಮೂಲಕ ಮಕ್ಕಳ ಮೇಲೆ ತಾಯಿಯ ಆಶೀರ್ವಾದ ಸದಾ ಇರಲಿ ಎಂದು ತಾಯಂದಿರು ಪ್ರಾರ್ಥಿಸುತ್ತಾರೆʼ ಎಂದು ಗ್ರಾಮಸ್ಥ ಸಂತೋಷ ತಳವಾರ ಹೇಳಿದರು.

ಸಂಕ್ರಾಂತಿ:ಕಾಳಿ ನದಿಯಲ್ಲಿ ಭಕ್ತರಿಂದ ಪುಣ್ಯಸ್ನಾನದಾಂಡೇಲಿ: ಮಕರ ಸಂಕ್ರಾಂತಿ ಅಂಗವಾಗಿ ಕಾಳಿ ನದಿಯಲ್ಲಿ ಸೋಮವಾರ ಭಕ್ತಿಯಿಂದ ಗಂಗಾ ಪೂಜೆ ನೇರವೇ...
15/01/2024

ಸಂಕ್ರಾಂತಿ:ಕಾಳಿ ನದಿಯಲ್ಲಿ ಭಕ್ತರಿಂದ ಪುಣ್ಯಸ್ನಾನ

ದಾಂಡೇಲಿ: ಮಕರ ಸಂಕ್ರಾಂತಿ ಅಂಗವಾಗಿ ಕಾಳಿ ನದಿಯಲ್ಲಿ ಸೋಮವಾರ ಭಕ್ತಿಯಿಂದ ಗಂಗಾ ಪೂಜೆ ನೇರವೇರಿಸಿ, ಭಕ್ತರು ಪುಣ್ಯ ಸ್ನಾನ ಮಾಡಿ ಸಂಕ್ರಾಂತಿ ಹಬ್ಬವನ್ನು ಆಚರಿಸಿದರು.

ನಗರದ ಸಮೀಪ ಮೌಳಂಗಿ ಇಕೋ ಪಾರ್ಕ್‌ಗೆ ಸಾವಿರಾರು ಸಂಖ್ಯೆಯಲ್ಲಿ ಜನರು ಬೆಳಿಗ್ಗೆಯಿಂದ ಜಮಾಯಿಸಿ ಕಾಳಿ ನದಿಯಲ್ಲಿ ಪುಣ್ಯ ಸ್ನಾನ ಮಾಡಿ , ಭಕ್ತಿ ಭಾವದಿಂದ ಗಂಗಾ ಪೂಜೆಗೆ ಜೋಳದ ರೊಟ್ಟಿ, ಸಜ್ಜೆ ರೊಟ್ಟಿ ಸೇರಿದಂತೆ ವಿವಿಧ ಭಕ್ಷ್ಯಗಳನ್ನು ಕಾಳಿ ನದಿಗೆ ನೈವೇದ್ಯ ಮಾಡಿ ಕುಟುಂಬ ಸಮೇತ ಊಟ ಸವಿದರು.

ನಗರ ಸಮೀಪದ ಈಶ್ವರ ದೇವಸ್ಥಾನ, ಮೃತ್ಯುಂಜಯ ಮಠ, ಹಳೆ ದಾಂಡೇಲಿಯ ಬೈಲಪಾರು ಸೇತುವೆ ಹತ್ತಿರವೂ ನೂರಾರು ಸಂಖ್ಯೆಯಲ್ಲಿ ಭಕ್ತರು ನದಿ ಸ್ನಾನ ಮಾಡಿದರು.

ಬೆಳಗಾವಿ, ಧಾರವಾಡ, ಹಳಿಯಾಳ,ಯಲ್ಲಾಪುರ, ಗದಗ , ಹುಬ್ಬಳ್ಳಿ ಮುಂತಾದ ಊರುಗಳಿಂದ ನದಿ ಸ್ನಾನ ಮಾಡಲು ಕುಟುಂಬ ಸಮೇತರಾಗಿ ದಾಂಡೇಲಿಗೆ ಬಂದು ಕಾಳಿ ನದಿಯಲ್ಲಿ ಪುಣ್ಯ ಸ್ನಾನ ಮಾಡಿ, ಭೋಜನದ ಸವಿ ಸವಿದು ಹಬ್ಬದ ಖುಷಿ ಪಟ್ಟರು.

ಪಾರ್ಕ್ ವ್ಯವಸ್ಥೆ ಚೆನ್ನಾಗಿ ಮಾಡಿದ್ದಾರೆ. ಊಟಕ್ಕೆ ಆಸನ ವ್ಯವಸ್ಥೆ, ಮಕ್ಕಳು ಆಟ ಆಡಲು ಆಟಿಕೆ ಇರುವುದರಿಂದ ಹಬ್ಬದ ಜೊತೆಗೆ ಮಕ್ಕಳು ಸಂತೋಷ ಪಡಬಹುದು ಎಂದು ಕೊಪ್ಪಳ ನಿವಾಸಿ ಗ್ಯಾನಪ್ಪ ಮೇಟಿ ಹೇಳಿದರು.

‘ಜನವರಿ 14 ಮತ್ತು 15 ರಂದು ಕಾಳಿ ನದಿಯಲ್ಲಿ ಪುಣ್ಯ ಸ್ನಾನ ಮಾಡಲು ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಬರುವ ಕಾರಣ ಮೌಳಂಗಿ ಇಕೋ ಪಾರ್ಕ್‌ಗೆ ಭದ್ರತೆ ದೃಷ್ಟಿಯಿಂದ ಅರಣ್ಯ ಇಲಾಖೆ 80ಕ್ಕೂ ಹೆಚ್ಚಿನ ಅರಣ್ಯ ಪಾಲಕರನ್ನು ಹಾಗೂ ಪೋಲಿಸ್ ಇಲಾಖೆ 30 ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಿದೆ. ದ್ವಿಚಕ್ರ, ಕಾರು, ಬಸ್‌ಗಳಿಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಪೊಲೀಸ್‌ ಇಲಾಖೆಯ ಸಿಬ್ಬಂದಿ, ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸಹಕಾರದೊಂದಿಗೆ ಪ್ರವಾಸಿಗರ ಸುರಕ್ಷಿತಕ್ಕಾಗಿ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ’ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದರು.

ಭಾನುವಾರ ಮೌಳಂಗಿ ಇಕೋ ಪಾರ್ಕ್‌ಗೆ ಸುಮಾರು 3,500ಕ್ಕೂ ಪ್ರವಾಸಿಗರ ಭೇಟಿ ನೀಡಿದ್ದಾರೆ. ಸೋಮವಾರ 5,000ಕ್ಕೂ ಸಂಖ್ಯೆಯಲ್ಲಿ ಪ್ರವಾಸಿಗರ ಭೇಟಿ ನೀಡಿದ್ದಾರೆ ಎಂದು ಮೌಳಂಗಿ ಗ್ರಾಮ ಅರಣ್ಯ ಸಮಿತಿ ಅಧಿಕಾರಿಗಳು ತಿಳಿಸಿದರು.

ದಾಂಡೇಲಿ ವಲಯ ಅರಣ್ಯಾಧಿಕಾರಿ ಅಪ್ಪರಾವ ಕಲ್ಲಶಟ್ಟಿ, ಮೌಳಂಗಿ ಅರಣ್ಯ ವಲಯ ಉಪ ಅರಣ್ಯ ಅಧಿಕಾರಿ ಆನಂದ ರಾಠೋಡ ಹಾಗೂ ಸಿಬ್ಬಂದಿ ಸ್ಥಳದಲ್ಲಿ ಇದ್ದು ಬಂದೋಬಸ್ತ್ ನೋಡಿಕೊಂಡರು.

ದಾಂಡೇಲಿ ಸಿಪಿಐ ಭೀಮಣ್ಣ ಸೂರಿ, ಗ್ರಾಮೀಣ ಠಾಣೆ ಪಿಎಸ್ಐ ಕೃಷ್ಣಾ ಗೌಡ ಹರಿಕೇರಿ, ನಗರ ಠಾಣಾದ ಪಿಎಸ್ಐ ಯಲ್ಲಪ್ಪ ಎಸ್ ಹಾಗೂ ಸಿಬ್ಬಂದಿ ಇದ್ದರು.

ಗಲಭೆ ಪ್ರಕರಣದ ಆರೋಪಿ ಬಂಧನ ವಿರೋಧಿಸಿ ಬಿಜೆಪಿ ಪ್ರತಿಭಟನೆಕಾರವಾರ: 31 ವರ್ಷ ಹಿಂದಿನ ಗಲಭೆ ಪ್ರಕರಣದ ಆರೋಪಿಯೊಬ್ಬರ ಬಂಧನ ಖಂಡಿಸಿ ಬಿಜೆಪಿ ಕಾರ್...
03/01/2024

ಗಲಭೆ ಪ್ರಕರಣದ ಆರೋಪಿ ಬಂಧನ ವಿರೋಧಿಸಿ ಬಿಜೆಪಿ ಪ್ರತಿಭಟನೆ

ಕಾರವಾರ: 31 ವರ್ಷ ಹಿಂದಿನ ಗಲಭೆ ಪ್ರಕರಣದ ಆರೋಪಿಯೊಬ್ಬರ ಬಂಧನ ಖಂಡಿಸಿ ಬಿಜೆಪಿ ಕಾರ್ಯಕರ್ತರು ಇಲ್ಲಿನ ಸುಭಾಷ ವೃತ್ತದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೊಳ್ಳುವ ಸಮಯದಲ್ಲಿ ಹಳೆಯ ಗಲಭೆ ಪ್ರಕರಣಕ್ಕೆ ಸಂಬಂಧಿಸಿ ಹಿಂದೂ ಕಾರ್ಯಕರ್ತರನ್ನು ಗುರಿಯಾಗಿಸಿ ಕಿರುಕುಳ ನೀಡಲು ಕಾಂಗ್ರೆಸ್ ಸರ್ಕಾರ ಮುಂದಾಗಿದೆ ಎಂದು ಆರೋಪಿಸಿದರು.

ಹಿಂದುತ್ವ ವಿರೋಧಿ ನೀತಿ ಅನುಸರಿಸುತ್ತಿರುವ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿ ಘೋಷಣೆ ಕೂಗಿದರು.

ಕುಮಟಾ ಶಾಸಕ ದಿನಕರ ಶೆಟ್ಟಿ, 'ಹಳೆಯ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿ ಕರಸೇವಕರೊಬ್ಬರನ್ನು ಬಂಧಿಸುವ ಮೂಲಕ ರಾಜ್ಯದ ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ನೀತಿ ಅನುಸರಿಸಿದೆ' ಎಂದು ಆರೋಪಿಸಿದರು.

'ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರನ್ನು ಸಂತೋಷಪಡಿಸಲು ಕಾಂಗ್ರೆಸ್ ಸರ್ಕಾರ ರಾಮಮಂದಿರ ಉದ್ಘಾಟನೆಯಾಗುವ ಹೊತ್ತಲ್ಲಿ ರಾಮಭಕ್ತರನ್ನು ಬಂಧಿಸಿದ್ದಾರೆ. ಇದು ಇಡೀ ಹಿಂದೂ ಸಮಾಜಕ್ಕೆ ಸಿದ್ದರಾಮಯ್ಯ ಸರ್ಕಾರ ಮಾಡಿದ ಅನ್ಯಾಯ' ಎಂದು ಬಿಜೆಪಿ ಜಿಲ್ಲಾ ಘಟಕದ ವಕ್ತಾರ ನಾಗರಾಜ ನಾಯಕ ಆರೋಪಿಸಿದರು.

ಬಿಜೆಪಿ ಮುಖಂಡ ಸುನೀಲ ಹೆಗಡೆ, 'ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಸಾಧು ಸಂತರು, ಹಿಂದೂ ಕಾರ್ಯಕರ್ತರ ಹತ್ಯೆ ನಡೆಯುತ್ತಿತ್ತು. ರಾಮಮಂದಿರಕ್ಕೆ ಹೋರಾಟ ನಡೆಸಿದವರ ಮೇಲೆ ಸುಳ್ಳು ಪ್ರಕರಣ ದಾಖಲಿಸುತ್ತಿತ್ತು. ಕೋಟ್ಯಂತರ ಹಿಂದೂಗಳ ಹೋರಾಟದ ಫಲವಾಗಿ ತಲೆ ಎತ್ತಿರುವ ರಾಮಮಂದಿರ ಸಹಿಸಲಾಗದೆ ಸನಾತನ ವಿರೋಧಿ ಕಾಂಗ್ರೆಸ್ ಕರಸೇವಕರೊಬ್ಬರನ್ನು ಬಂಧಿಸಿದೆ' ಎಂದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವೆಂಕಟೇಶ ನಾಯಕ, ಪ್ರಮುಖರಾದ ರಾಜೇಂದ್ರ ನಾಯ್ಕ, ನಾಗೇಶ ಕುರ್ಡೇಕರ, ಸುಭಾಷ ಗುನಗಿ, ಮನೋಜ್ ಭಟ್, ಇತರರು ಪಾಲ್ಗೊಂಡಿದ್ದರು.

Address

Karwar
Karwar

Alerts

Be the first to know and let us send you an email when ಪ್ರಜಾವಾಣಿ ಉತ್ತರ ಕನ್ನಡ posts news and promotions. Your email address will not be used for any other purpose, and you can unsubscribe at any time.

Contact The Business

Send a message to ಪ್ರಜಾವಾಣಿ ಉತ್ತರ ಕನ್ನಡ:

Share