13/07/2026
ಅಕ್ರಮ ವಲಸಿಗರಿಗೆ ಪ್ರಮಾಣಪತ್ರ ನೀಡುವ ಯತ್ನ ಅಪಾಯಕಾರಿ: ಶಾಸಕ ದಿನಕರ ಶೆಟ್ಟಿ
ಕಾರವಾರ:ಅಕ್ರಮ ವಲಸಿಗರಿಗೆ ಯಾವುದೇ ರೀತಿಯ ಪ್ರಮಾಣಪತ್ರ ನೀಡಬಾರದು ಎಂದು ಕುಮಟಾ ಶಾಸಕ ದಿನಕರ ಶೆಟ್ಟಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಕಾರವಾರ ಜಿಲ್ಲಾ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಕ್ರಮ ವಲಸಿಗರಿಗೆ ಪ್ರಮಾಣಪತ್ರ ನೀಡುವ ಅಧಿಕಾರ ಜಿಲ್ಲಾಧಿಕಾರಿಗಳಿಗೆ ಅಥವಾ ಇತರ ಅಧಿಕಾರಿಗಳಿಗೆ ಸಂವಿಧಾನದಲ್ಲಿ ನೀಡಲಾಗಿಲ್ಲ ಎಂದು ಹೇಳಿದರು. ಇಂತಹವರಿಗೆ ಕಂದಾಯ ನಿರೀಕ್ಷಕರ ಮೂಲಕ ಪ್ರಮಾಣಪತ್ರ ನೀಡಲಾಗುತ್ತದೆ ಎಂಬ ರಾಜ್ಯ ಸರ್ಕಾರದ ಹೇಳಿಕೆ ಆಶ್ಚರ್ಯಕರ ಹಾಗೂ ನಗೆಪಾಟಲಿನ ಸಂಗತಿಯಾಗಿದೆ ಎಂದು ಟೀಕಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದು, ಮುಂದಿನ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಈ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂಬ ಅನುಮಾನ ವ್ಯಕ್ತಪಡಿಸಿದ ಅವರು, ಸರ್ಕಾರದ ಆಡಳಿತದ ಮೇಲಿನ ಜನರ ವಿಶ್ವಾಸ ಕುಸಿದಿರುವ ಕಾರಣ ಹೊಸ ಮತದಾರರನ್ನು ಸೃಷ್ಟಿಸುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು.
ಬಾಂಗ್ಲಾದೇಶದಿಂದ ಅಕ್ರಮವಾಗಿ ಬಂದಿರುವವರನ್ನು ಮತದಾರರ ಪಟ್ಟಿಗೆ ಸೇರಿಸುವ ಮೂಲಕ ಚುನಾವಣಾ ಲಾಭ ಪಡೆಯುವ ಉದ್ದೇಶ ಸರ್ಕಾರಕ್ಕಿದೆ ಎಂದು ದಿನಕರ ಶೆಟ್ಟಿ ಆರೋಪಿಸಿದರು. ಇಂತಹ ಕ್ರಮಗಳು ದೇಶದ ಭದ್ರತೆ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ತರುವ ಸಾಧ್ಯತೆ ಇದ್ದು, ಸರ್ಕಾರ ಈ ನಿಲುವಿನಿಂದ ಹಿಂದೆ ಸರಿಯಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಅವರು ರಾಜ್ಯ ಸರ್ಕಾರದ ಈ ಕ್ರಮವನ್ನು ತೀವ್ರವಾಗಿ ಖಂಡಿಸಿ, ಅಕ್ರಮ ವಲಸಿಗರ ಕುರಿತು ಕಾನೂನುಬದ್ಧ ಹಾಗೂ ಪಾರದರ್ಶಕ ಕ್ರಮಗಳನ್ನು ಮಾತ್ರ ಅನುಸರಿಸಬೇಕು ಎಂದು ಒತ್ತಾಯಿಸಿದರು.