
22/12/2023
ನೋ ಮೊಬೈಲ್ ಡೇ !
ಹೀಗೆ ಒಂದು ದಿನಕ್ಕೆ ಮಹತ್ವ ಸಿಕ್ಕರೆ
ಒಂದು ದಿನಕ್ಕೆ ' No Mobile Day' ಅನ್ನುವ ದಿನದ ಆಚರಣೆ ಘೋಷಣೆ ಮಾಡಿದಲ್ಲಿ ಹೇಗಾಗಬಹುದು? ಅವರವರ ಕೆಲಸಗಳ ಜಾಗೃತಿ, ಮನೆಮಂದಿಯ ಸಂಗಮ, ಹೆಚ್ಚು ಮಾತುಗಳು, ಚರ್ಚೆಗಳು, ಗದ್ದಲಗಳು, ಇನ್ನೊಬ್ಬರ ನೋವಿಗೆ ಕಿವಿಗೊಡುವ ತಾಳ್ಮೆ..... ಹೀಗೆ ಅನೇಕ ಚಟುವಟಿಕೆಗಳು ವೇಗ ಪಡೆಯುವುದು. ಕಳೆದ 10-15 ವರ್ಷಗಳ ಹಿಂದಿನ ವ್ಯವಸ್ಥೆ ಆ ಒಂದು ದಿನಕ್ಕಾದರೂ ಸೀಮಿತವಾಗಬಹುದು.
ಚಾರಣ ಹೋದ ಘಳಿಗೆಯೊಂದು ಈ ದಿನವನ್ನು ನೆನಪಿಸಿತು. ಬೆಟ್ಟಗಳ ನಡುವೆ ಎಲ್ಲಿಯೂ ನೆಟ್ವರ್ಕ್ಕೇ ಇರಲಿಲ್ಲ. ಮೊಬೈಲನ್ನು ತಿರುಗಿಸಿ , ಎತ್ತಿಹಿಡಿದರೂ ಇಂಟರ್ನೆಟ್ಟೂ ಸಿಗಲ್ಲ, ಕಾಲ್ ಕೂಡ ಹೋಗುವುದಿಲ್ಲ. ದಿನವಿಡೀ ನೆಟ್ವರ್ಕೇ ಇಲ್ಲದ ಮನುಷ್ಯ ಶಾಂತಚಿತ್ತನಾಗಿ, ಮನಸ್ಸು ಒತ್ತಡಗಳಿಲ್ಲದೆ ಆರಾಮವಾಗಿ , ಬಾಯಿ ತುಂಬಾ ಮಾತುಗಳನ್ನಾಡಲು ಅವಕಾಶ ಕಲ್ಪಿಸಿದ ವಾತಾವರಣ ತುಂಬಿ ತುಳುಕುತ್ತದೆ.
ನೋವಾದ ನೆಟ್ವಕ್೯
ಬೆಟ್ಟಗಳ ನಡುವೆ ಎಲ್ಲಿಯೂ ಸಿಗದಿದ್ದರೆ ಏನು,, ದಟ್ಟ ಕಾನನದೊಳಕ್ಕೆ ಒಂದು ಮರದ ಬುಡದಲ್ಲಿ ಫುಲ್ ನೆಟ್ವಕ್೯. ಆ ತಾಣವೇ ಅದ್ಭುತ. ಹಲವು ವರ್ಷಗಳ ಹಳೆಯ ಮರ . ಸುತ್ತ ಹುಲ್ಲುಗಳು, ಗಿಡಗಂಟೆಗಳೇ ಇಲ್ಲ, ಮರದ ಸಿಪ್ಪೆಯೂ ಸವೆದು ಹೋಗಿ, ಮರ ನೋವುಂಡ ದಿನಗಳೆಷ್ಟೋ??? ನೆಟ್ವಕ್೯ ಸಿಗದ ಇಡೀ ಊರೇ ಮೊಬೈಲ್ ನೆಟ್ವರ್ಕಿಗಾಗಿ ಮರದ ಬುಡದತ್ತ ಬರಲೇಬೇಕಿದೆ. ಒಂದು ಮರದ ಬುಡದಲ್ಲಿ ಊರಿಗೂರೇ ನಿಂತು ಗಂಟೆಗಳ ಕಾಲ ಮಾತನಾಡಿದ ಪರಿಣಾಮ ಮರದ ಸಿಪ್ಪೆಯೇ ಸವೆದು ಹೋಗಿದೆ. ಊರವರಿಗೆ One day with mobile ಅನ್ನುವುದಕ್ಕೆ ಮರದ ಬುಡವೇ ಆಶ್ರಯ. ಊರಿನ ಪ್ರತಿಯೊಬ್ಬರ ಕತೆಗಳನ್ನು ಇಡೀ ಮರವೇ ಹೇಳಬಲ್ಲದು. ನೆಟ್ವಕ್೯ ಇಲ್ಲದ ಊರಿನಲ್ಲಿ ಪ್ರೀತಿಯಿದೆ, ಬಾಂಧವ್ಯವಿದೆ, ನೋವಿಗೆ ಸ್ಪಂಧಿಸುವ ಮನೋಭಾವವಿದೆ, ಮಾತುಗಳಿವೆ, ಹರಟೆಗಳಿವೆ, ಎಲ್ಲದಕ್ಕೂ ಮಿಗಿಲಾದ ಮಕ್ಕಳ ಆಟದ ಸೊಬಗಿದೆ.