07/05/2023
ನೀವೂ ಗಮನಿಸಿರುತ್ತೀರಿ.
ಗೆಲ್ತಾರೋ ಬಿಡ್ತಾರೋ ಕಾಂಗ್ರೆಸ್ ಪಕ್ಷ ಯಾವ ವಿಷಯದಲ್ಲೂ ಚುನಾವಣಾ ರಂಗದಲ್ಲಿ ಬಡಿದಾಡುವುದರಲ್ಲಿ ಬಿಜೆಪಿಗಿಂತ ಕಿಂಚಿತ್ತೂ ಹಿಂದೆಬಿದ್ದಿಲ್ಲ. ಇದು ಹೊಸ ಕಾಂಗ್ರೆಸ್. ಅದು ಆಡುತ್ತಿರುವುದು ಹೊಸ ಬಗೆಯ ಆಟ. ಅದರ ವಾರ್ ರೂಂನಲ್ಲಿ ರಣೋತ್ಸಾಹ. ಗ್ರೌಂಡ್ ಜೀರೋದಲ್ಲಾದರೂ ಸರಿ, ಆನ್ ಲೈನ್ ನಲ್ಲಾದರೂ ಸರಿ, ಅದು ಹಿಂದೆಂದಿಗಿಂತ ಆಕ್ರಮಣಕಾರಿಯಾಗಿ ಎದ್ದುನಿಂತಿದೆ.
ಸ್ಟ್ರಾಟೆರ್ಜಿಗಳನ್ನು ಹೆಣೆಯುವಾಗ, ಅವುಗಳನ್ನು ಕಾರ್ಯರೂಪಕ್ಕೆ ತರುವಾಗ ಪ್ರತಿಬಾರಿಯೂ ಕಾಂಗ್ರೆಸ್ ಸೋಲುತ್ತಿತ್ತು. ನಿರ್ಣಾಯಕ ಗಳಿಗೆಗಳಲ್ಲಿ ಹಿಂದೆ ಬೀಳುತ್ತಿತ್ತು. ಈ ಬಾರಿ ಹಾಗೆ ಆಗಿಲ್ಲ. ಬಿಜೆಪಿಯವರು ಪದೇಪದೇ ಮುಟ್ಟಿ ನೋಡಿಕೊಳ್ಳುವಂಥ ಹೊಡೆತಗಳನ್ನು ಅದು ಕೊಟ್ಟಿದೆ.
ಬಿಜೆಪಿಯ ಚುನಾವಣಾ ರಾಜಕಾರಣವೆಂದರೆ ಮುಖ್ಯವಾಗಿ ಕಾಣಿಸೋದು ಅಗ್ರೆಷನ್. ಅದಕ್ಕೆ ಸಂಘ ಪರಿವಾರದ ಬೆಂಬಲ ಇರುವುದರಿಂದ ಏನೇ ತಂತ್ರ ಹೂಡಿದರೂ ಅದನ್ನು ಎಕ್ಸಿಕ್ಯೂಟ್ ಮಾಡುವುದು ನೀರು ಕುಡಿದಷ್ಟು ಸಲೀಸು. ಭಜರಂಗದಳ ನಿಷೇಧಿಸುವ ಮಾತು ಬಂದ ತಕ್ಷಣ ಇಡೀ ರಾಜ್ಯದಲ್ಲಿ ಹನುಮಾನ ಚಾಲೀಸ ಪಠಣ ಶುರು ಮಾಡಿಸಿತು ಬಿಜೆಪಿ. ಇದು ಒಂದು ಉದಾಹರಣೆಯಷ್ಟೆ. ಕಾಂಗ್ರೆಸ್ ಗೆ ಇಂಥ ಪರಿವಾರದ ಬೆಂಬಲ ಇಲ್ಲ. ಹಾಗಿದ್ದರೂ ಈ ಬಾರಿ ಅದು ಹಿಂದೆ ಬಿದ್ದಿಲ್ಲ.
ಬಹಳ ಮುಖ್ಯವಾಗಿ ಕಾಂಗ್ರೆಸ್ ಮುಖಂಡರ ಆತ್ಮವಿಶ್ವಾಸದ ಮಾತುಗಳು, ಅವರ ಬಾಡಿ ಲಾಂಗ್ವೇಜ್ ಗಮನಿಸಿ. ಚುನಾವಣೆ ಘೋಷಣೆಗೆ ಮುನ್ನಾ ದಿನಗಳಿಂದ ಹಿಡಿದು ಇಂದಿನವರೆಗೆ ಅವರ ವಿಶ್ವಾಸ ಅಡಗಿಲ್ಲ. ಎದುರಾಳಿಗಳನ್ನು ನಡುಗಿಸೋದು ಇಂಥ ಆತ್ಮವಿಶ್ವಾಸವೇ ಅಲ್ಲವೇ? ನೀವು ಯಡಿಯೂರಪ್ಪ, ಬೊಮ್ಮಾಯಿ ಥರದ ಲೀಡರುಗಳ ಇತ್ತೀಚಿನ ದಿನಗಳ ಮುಖಭಾವ ಗಮನಿಸಿ, ಸಿದ್ಧರಾಮಯ್ಯ-ಡಿ.ಕೆ.ಶಿವಕುಮಾರ್ ಅವರ ವಿಶ್ವಾಸ ಬಿಜೆಪಿ ನಾಯಕರಲ್ಲಿ ಕಾಣುತ್ತಲೇ ಇಲ್ಲ.
ಬಹಳ ಮುಖ್ಯ ಅಂಶವೆಂದರೆ ಕಾಂಗ್ರೆಸ್ ಈ ಬಾರಿ ತನ್ನ ಮಡಿವಂತಿಕೆಯಿಂದ ಹೊರಬಂದು ಏಟಿಗೆ ಎದುರೇಟು ಕೊಡುತ್ತ ಬಂದಿದ್ದು. ಧರ್ಮ, ಜಾತಿಯಂಥ ವಿಷಯ ಬಂದಾಗ ಕಾಂಗ್ರೆಸ್ ಹಿಂದೆಲ್ಲ ಡಿಫೆನ್ಸ್ ಮೋಡ್ ಗೆ ಹೋಗಿಬಿಡುತ್ತಿತ್ತು. ಈ ಬಾರಿ ಹಾಗೆ ಆಗಿಲ್ಲ. ಕಾಂಗ್ರೆಸ್ ನ ಟ್ವಿಟರ್ ಸೇರಿದಂತೆ ಸೋಷಿಯಲ್ ಮೀಡಿಯಾ ಹ್ಯಾಂಡಲ್ ಗಳ ಭಾಷೆ ಗಮನಿಸಿ, ಅಷ್ಟು ಹರಿತವಾದ ಭಾಷೆ ಹಿಂದೆಂದೂ ಕಂಡಿರಲಿಲ್ಲ. ಸಿದ್ಧು-ಡೀಕೆ ಟೀಂ ಚುನಾವಣಾ ಕಣದಲ್ಲಿ ತೋರುತ್ತಿರುವ ಆಕ್ರಮಣಕಾರಿ ಭಾಷೆ ಕಾಂಗ್ರೆಸ್ ನ ಆನ್ ಲೈನ್ ಮಾಧ್ಯಮಗಳಲ್ಲೂ ಕಾಣಿಸುತ್ತಿದೆ.
ರ‌್ಯಾಪ್ ಸಿಂಗರ್ ಚಂದನ್ ಶೆಟ್ಟಿ ಕಡೆಯಿಂದ ಬಿಜೆಪಿ ಒಂದು ಹಾಡು ಮಾಡಿಸಿದ ತಕ್ಷಣ ಅದೇ ಧಾಟಿಯ ಬಿಜೆಪಿಯನ್ನು ಜರಿಯುವ ಹಾಡು ರೆಡಿ ಮಾಡಿಬಿಟ್ಟಿತು ಕಾಂಗ್ರೆಸ್ ಪ್ರಚಾರ ತಂಡ. ಒರಿಜಿನಲ್ ಹಾಡಿಗಿಂದ ಅದು ಜನಪ್ರಿಯವಾಗಿಬಿಟ್ಟಿತು. ಬಳ್ಳಾರಿಯಲ್ಲಿ ಬಿಜೆಪಿ ಪ್ರಚಾರಕರು ಬಿಜೆಪಿಯನ್ನು ಬೈಯುವ ಹಾಡನ್ನೇ ಪ್ರಚಾರ ಮಾಡಿ ನಗೆಪಾಟಿಲಿಗೆ ಈಡಾದರು.
ಜಾಹೀರಾತುಗಳು, ಪ್ರಚಾರದ ಹಾಡುಗಳು, ಪೋಸ್ಟರ್ ಗಳು, ಮೀಮ್ ಗಳು ಎಲ್ಲದರಲ್ಲೂ ಕಾಂಗ್ರೆಸ್ ತಂಡ ಸಖತ್ ಕ್ರಿಯೇಟಿವಿಟಿಯನ್ನು ತಂದಿತು. ಪೇಸಿಎಂ ಪೋಸ್ಟರ್ ಇಡೀ ದೇಶದ ಗಮನ ಸೆಳೆಯಿತು. ಇಂಥ ಧೈರ್ಯ ಹಿಂದೆ ಪ್ರದರ್ಶಿಸಿದ ಉದಾಹರಣೆ ಇಲ್ಲ. 40% ಸರ್ಕಾರ ಎಂಬುದು ಈ ಕಾಲದ ಜನಪ್ರಿಯ ನುಡಿಗಟ್ಟೇ ಆಗಿಹೋಯಿತು. ಅದು ಜನಗಳ ಮನಸಿನಲ್ಲಿ ಆಳವಾಗಿ ಕೂರಿಸಲು ಕಾಂಗ್ರೆಸ್ ಸಫಲವಾಯಿತು. ಹಳ್ಳಿಹಳ್ಳಿಯ ಜನರೂ 40% ಬಗ್ಗೆ ಮಾತಾಡುವಂತೆ ಆಯಿತು.
ಸೋನಿಯಾ, ರಾಹುಲ್, ಪ್ರಿಯಾಂಕ ಎಲ್ಲರೂ ಕರ್ನಾಟಕದ ಚುನಾವಣಾ ಪ್ರಚಾರಕ್ಕೆ ಬಂದರೂ ಅವರೆಲ್ಲ ಹೆಚ್ಚು ಮಾತಾಡಿದ್ದು ಸ್ಥಳೀಯ ವಿಷಯಗಳ ಕುರಿತೇ. ರಾಷ್ಟ್ರೀಯ ಮಹತ್ವದ ವಿಷಯಗಳು ಇದ್ದರೂ ಅವರುಗಳು ಆ ಕುರಿತು ಹೆಚ್ಚು ಮಾತನಾಡಲಿಲ್ಲ. ರಾಹುಲ್ ಗಾಂಧಿ ನಂದಿನಿ ಅಂಗಡಿಗೆ ಹೋಗಿದ್ದು ಸ್ಮಾರ್ಟ್ ತಂತ್ರ.
ಕಾಂಗ್ರೆಸ್ ಈ ಬಾರಿ ನೀಡಿದ ಐದು ಗ್ಯಾರೆಂಟಿಗಳು ನಿಸ್ಸಂಶಯವಾಗಿ ಮಾಸ್ಟರ್ ಸ್ಟ್ರೋಕ್. ಈ ಕ್ಷಣದವರೆಗೆ ಬಿಜೆಪಿಯಲ್ಲಿ ಇದಕ್ಕೆ ಸರಿಯಾದ ಕೌಂಟರ್ ಇಲ್ಲವೇ ಇಲ್ಲ. ಬಿಜೆಪಿಯ ಪ್ರಣಾಳಿಕೆ ಈ ಐದು ಗ್ಯಾರೆಂಟಿಗಳ ಎದುರು ಸಪ್ಪೆಯಾಗಿಹೋಯಿತು. ಪ್ರಣಾಳಿಕೆ ಬಿಡುಗಡೆಗೆ ಮುನ್ನವೇ ಕಾಂಗ್ರೆಸ್ ಒಂದೊಂದೇ ಗ್ಯಾರೆಂಟಿಗಳನ್ನು ಘೋಷಿಸಿ, ಅಚ್ಚುಕಟ್ಟಾಗಿ ಪ್ರಚಾರ ಮಾಡಿತು.
ಟಿಕೆಟ್ ಹಂಚಿಕೆ ವಿಷಯದಲ್ಲೂ ಕಾಂಗ್ರೆಸ್ ಎಷ್ಟೇ ಒಳಗುದಿ ಇದ್ದರೂ ಅದು ಹೆಚ್ಚು ಕಾಣದಂತೆ ನೋಡಿಕೊಂಡಿತು. ಟಿಕೆಟ್ ಹಂಚಿಕೆಯಲ್ಲಿ ಸಿದ್ಧು-ಡಿಕೆ ಬಣಗಳ ಮೇಲಾಟ ನಡೆದೇ ಇಲ್ಲವೆಂಬಂತೆ ತೋರಿಸಿಕೊಂಡಿತು. ಸಿದ್ಧಾಂತ, ಇತ್ಯಾದಿ ನೋಡದೇ ಲಕ್ಷ್ಮಣ ಸವದಿ, ಜಗದೀಶ್ ಶೆಟ್ಟರ್ ಕರೆತಂದು ಕಿತ್ತೂರು ಕರ್ನಾಟಕದಲ್ಲಿ ಬಿಜೆಪಿಗೆ ಮರ್ಮಾಘಾತ ಮಾಡಿತು. ಸಿಟಿ ರವಿಯನ್ನು ಸೋಲಿಸುವ ಶಕ್ತಿಯಿರುವ ಅವನ ಶಿಷ್ಯನನ್ನೇ ತಂದು ಕಣಕ್ಕೆ ಇಳಿಸಿದ್ದು ಕಾಂಗ್ರೆಸ್ ಮಡಿವಂತಿಕೆ ಬಿಟ್ಟಿರುವುದಕ್ಕೆ ಸ್ಪಷ್ಟ ಉದಾಹರಣೆ. ಕೆಲವೊಂದು ಬಾರಿ ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕಾಗುತ್ತದೆ.
ಕಾಂಗ್ರೆಸ್ ಈ ಬಾರಿ ಜೆಡಿಎಸ್ ಮೇಲೆ ದಾಳಿ ಮಾಡುವುದನ್ನು ಕಡಿಮೆ ಮಾಡಿದೆ. ಇದೂ ಕೂಡ ಜಾಣತನದ ನೀತಿ. ಹಿಂದೆಲ್ಲ ಕಾಂಗ್ರೆಸ್-ಜೆಡಿಎಸ್ ನಾಯಕರ ನಡುವಿನ ಜಟಾಪಟಿಯೇ ಹೆಚ್ಚು ಸುದ್ದಿಯಾಗುತ್ತಿತ್ತು. ಈ ಬಾರಿ ಹಾಗೆ ಆಗುತ್ತಿಲ್ಲ. ಬೇರೆಯವರ ವಿಷಯ ಹಾಗಿರಲಿ, ಜೆಡಿಎಸ್ ಅನ್ನು ನಖಶಿಖಾಂತ ದ್ವೇಷಿಸುವ ಸಿದ್ಧರಾಮಯ್ಯ ಅವರೇ ಜೆಡಿಎಸ್ ಬಗ್ಗೆ, ನಾಯಕರ ಬಗ್ಗೆ ಹೆಚ್ಚು ಮಾತನಾಡುತ್ತಿಲ್ಲ.
ನರೇಂದ್ರ ಮೋದಿ ಯಾವ ರಾಜ್ಯದಲ್ಲೂ ಮಾಡದಷ್ಟು ಪ್ರಚಾರ ಕರ್ನಾಟಕದಲ್ಲಿ ಮಾಡಿದರು. ಬೆಂಗಳೂರಿನ ಬೀದಿಬೀದಿ ಸುತ್ತಿದ್ದರು. ಅಮಿತ್ ಶಾ ಕರ್ನಾಟಕ ಬಿಟ್ಟು ಹೋಗಲೇ ಇಲ್ಲ. ಕನ್ನಡ ನ್ಯೂಸ್ ಚಾನಲ್ ಗಳಿಗೆ ಅಮಿತ್ ಶಾ ಹಿಂದಿಯಲ್ಲಿ ಸಂದರ್ಶನ ನೀಡುವಷ್ಟರ ಮಟ್ಟಿಗೆ ಬಿಜೆಪಿ ಹೈಕಮಾಂಡ್ ತಲುಪಿನಿಂತಿತು. ಇದಕ್ಕೆ ಕಾರಣ ಕಾಂಗ್ರೆಸ್ ಆಕ್ರಮಣಕಾರಿ ಹೋರಾಟ.
ಹಾಗಂತ ಕಾಂಗ್ರೆಸ್ ಈ ಚುನಾವಣೆ ಪ್ರಚಾರದಲ್ಲಿ ತಪ್ಪು ಮಾಡಲಿಲ್ಲವೆಂದೇನಲ್ಲ. ಮಲ್ಲಿಕಾರ್ಜುನ ಖರ್ಗೆಯವರು ನೀಡಿದ ವಿಷಸರ್ಪದ ಹೇಳಿಕೆ ಬೇಕಾಗಿರಲಿಲ್ಲ. ಪ್ರಣಾಳಿಕೆಯಲ್ಲಿ ಭಜರಂಗದಳದ ಹೆಸರು ತರಬೇಕಾಗಿರಲಿಲ್ಲ. ಇಂಥವು ಬಿಜೆಪಿಗೆ ಕೊಂಚ ಉಸಿರಾಡಲು ಅವಕಾಶ ನೀಡಿದ್ದು ಸುಳ್ಳಲ್ಲ.
ಈ ಚುನಾವಣೆಯಲ್ಲಿ ಕಾಂಗ್ರೆಸ್ ಸೋತರೂ ಅದು ತನ್ನನ್ನು ತಾನು ಹಳಿದುಕೊಳ್ಳಬೇಕಾಗಿಲ್ಲ. ಯಾಕೆಂದರೆ ಅದು ಒಂದು ತಂಡವಾಗಿ ಏನೇನು ಮಾಡಬೇಕಿತ್ತೋ ಎಲ್ಲವನ್ನೂ ಮಾಡಿದೆ. ಚುನಾವಣಾ ಪಂದ್ಯವನ್ನು ಕೊನೆಯ ಓವರ್ ವರೆಗೆ ತಂದು ನಿಲ್ಲಿಸಿದೆ. ಇನ್ನೂ ಮೂರು ದಿನಗಳ ಹೋರಾಟ ಬಾಕಿ ಇದೆ. ಏನೇನಾಗುತ್ತೋ ಕಾದುನೋಡೋಣ.
ಕೊನೆಯದಾಗಿ ಕಾಂಗ್ರೆಸ್ ಇಂದು ಬಿಡುಗಡೆ ಮಾಡುತ್ತಿರುವ ಸಿದ್ದರಾಮಯ್ಯ-ಡಿ.ಕೆ.ಶಿವಕುಮಾರ್ ನಡುವಿನ ಸಂವಾದದ ವಿಡಿಯೋ ಬಗ್ಗೆ ಏನು ಹೇಳೋದು? ಇಂಥ ಅದ್ಭುತ ಐಡಿಯಾ ಅವರಿಗೆ ಹೇಗೆ ಹೊಳೆಯಿತು? ಹೇಳಿದೆನಲ್ಲ, ಇದು ಹೊಸ ಕಾಂಗ್ರೆಸ್!
ನಿಮಗೇನನ್ನಿಸುತ್ತಿದೆ, ಕಮೆಂಟ್ ಮಾಡಿ ತಿಳಿಸಿ.
-ದಿನೇಶ್ ಕುಮಾರ್ ಎಸ್.ಸಿ.