20/05/2026
ಬೇಜವಾಬ್ದಾರಿ ಕಾಮಗಾರಿ: ಅಗ್ನಿಶಾಮಕ ದಳ ವಾಹನಕ್ಕೆ ಅಡ್ಡಿಯಾದ ರಸ್ತೆ ಕಾಮಗಾರಿ..!
ಲಿಂಗಸುಗೂರು ಪಟ್ಟಣದ ಗಡಿಯಾರ ಚೌಕದಲ್ಲಿ ಸಿ.ಸಿ ರಸ್ತೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು, ಕಾಮಗಾರಿ ನಡೆಯುವ ಸ್ಥಳದಲ್ಲಿ ಕಡ್ಡಾಯವಾಗಿ ಅಳವಡಿಸಬೇಕಾದ ಸೂಚನಾ ಫಲಕಗಳನ್ನು ಅಳವಡಿಸದೇ ನಿರ್ಲಕ್ಷ್ಯ ತೋರಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ನಗರದ ಅತಿ ಹೆಚ್ಚು ಜನದಟ್ಟಣೆ ಇರುವ ಗಡಿಯಾರ ಚೌಕದಲ್ಲಿ ಯಾವುದೇ ಮುನ್ನೆಚ್ಚರಿಕಾ ಸೂಚನೆ ಇಲ್ಲದೆ ಕಾಮಗಾರಿ ನಡೆಸುತ್ತಿರುವುದರಿಂದ ವಾಹನ ಸವಾರರು ಹಾಗೂ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ.
ಸಾಮಾನ್ಯ ಜನರ ತೊಂದರೆ ಒಂದೆಡೆಯಾದರೆ, ತುರ್ತು ಪರಿಸ್ಥಿತಿಯಲ್ಲಿ ಕ್ಷಣ ಕ್ಷಣವೂ ಅಮೂಲ್ಯವಾಗಿರುವ ಅಂಬುಲೆನ್ಸ್ ಹಾಗೂ ಅಗ್ನಿಶಾಮಕ ದಳದ ವಾಹನಗಳ ಸಂಚಾರಕ್ಕೂ ಇದೇ ರಸ್ತೆ ಪ್ರಮುಖ ಮಾರ್ಗವಾಗಿದೆ. ಆದರೆ ಮುಂಚಿತವಾಗಿ ಯಾವುದೇ ಸೂಚನಾ ಫಲಕ ಅಳವಡಿಸದ ಪರಿಣಾಮ ಅಗ್ನಿಶಾಮಕ ದಳದ ವಾಹನ ಕಾಮಗಾರಿ ಸ್ಥಳದವರೆಗೆ ಬಂದು ಹಿಂದಿರುಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಯಾವ ಸ್ಥಳದಲ್ಲಿ ಎಂತಹ ತುರ್ತು ಪರಿಸ್ಥಿತಿ ಎದುರಾಯಿತೋ ಗೊತ್ತಿಲ್ಲ, ಆದರೆ ಇಲ್ಲಿ ಅಮೂಲ್ಯ ಸಮಯ ವ್ಯರ್ಥವಾದುದು ಮಾತ್ರ ಸತ್ಯ. ಇಂತಹ ನಿರ್ಲಕ್ಷ್ಯದಿಂದ ಅನಾಹುತ ಸಂಭವಿಸಿದ್ದರೆ ಅದರ ಹೊಣೆ ಯಾರು ಹೊರುತ್ತಿದ್ದರು ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಈ ಅವ್ಯವಸ್ಥೆಗೆ ನೇರ ಹೊಣೆ ಕಾಮಗಾರಿಯ ಗುತ್ತಿಗೆದಾರರದೋ ಅಥವಾ ಪುರಸಭೆ ಅಧಿಕಾರಿಗಳದೋ ಎಂಬುದನ್ನು ಸ್ಪಷ್ಟಪಡಿಸಿ, ತಪ್ಪನ್ನು ಒಪ್ಪಿಕೊಂಡು ಮುಂದಿನ ದಿನಗಳಲ್ಲಿ ಇಂತಹ ಘಟನೆ ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕಿದೆ.