06/07/2023
_*ಡಾ. ಬಾಬು ಜಗಜೀವನ ರಾಮ್ 37ನೇ ಶ್ರಾದ್ಧ ಭಾವ*_
▬▬▬▬▬ஜ۩۞۩ஜ▬▬▬▬▬
*_ಮರಹುಟ್ಟಿ ಮರಬಿತ್ತೋ_*
_ಸವರ್ಣೀಯ ಮನಸ್ಸು 'ಬಾಬೂಜಿ' ಎಂದು ತುಂಬು ಮನಸ್ಸಿನಿಂದ ಕರೆಯಲೂ ಮುಜುಗರಪಡುತ್ತಿದ್ದ, ಆ ದೊಡ್ಡ ಕಪ್ಪು ಕಾಯವನ್ನು ಅವಹೇಳನದ ಕಣ್ಣಿಂದ ಮಾತ್ರವೇ ಕಾಣತೊಡಗಿದ್ದ; ದಲಿತರ ಪಾಲಿಗೆ ಗಗನಕುಸುಮವಾಗಿರುವ ಸ್ವಾತಂತ್ರ್ಯ ಅನ್ನೋ ಫಲದ ತೊಟ್ಟಾಗಿದ್ದ ಜಗಜೀವನ ರಾಮ್ ಇನ್ನಿಲ್ಲ._
_ಆ ದೇಹವು ದೆಹಲಿಯ ರಾಜಘಾಟ್‌ನಲ್ಲಿ ಸಮಾಧಿಯಾಗಬೇಕೆಂದು ಸಾವಿರಾರು ಯುವಕರು ಇಚ್ಚಿಸಿದರೆ, ಕುಟುಂಬದವರ ಇಚ್ಚೆಯಂತೆ ಜಗಜೀವನ ರಾಮ್ ಸ್ವಗ್ರಾಮದಲ್ಲಿ ಅಂತ್ಯ ಕ್ರಿಯೆ ನಡೆಯಿತು. ಈ ಹಿನ್ನೆಲೆಯಲ್ಲಿ ದೇಶವು ಆಗಲಿದ ನಾಯಕನಿಗೆ ಸಂತಾಪ, ಗೌರವಗಳನ್ನು ಸೂಚಿಸಿತು. ಜಗಜೀವನ ರಾಮ್ ಸತತವಾಗಿ ನಾಲ್ಕು ದಶಕಗಳು ರಾಜಕೀಯ ಜೀವನದಲ್ಲಿದ್ದರು. ಇಂಡಿಯಾದ ರಾಜಕೀಯವು ಅವರ ಕೈಲಿ ಬಡವರ ಕಣ್ಣು ಒರೆಸುವ ಕೆಲಸ ಮಾಡಿಸಿತೋ, ಇಲ್ಲವೋ, ಆದರೆ, ನೆಹರೂ ಮನೆತನದ ರಾಜಕೀಯ ಅಧಿಕಾರ ವ್ಯಾಪ್ತಿಯಲ್ಲಿ ಜಗಜೀವನ ರಾಮ್ ರವರ ಇರುವಿಕೆಯು ಅಸ್ಪೃಶ್ಯರಿಗೆ, ಹಿಂದುಳಿದ ವರ್ಗದವರಿಗೆ ಹೀಗಾಗಿ ಇಡೀ ದೇಶಕ್ಕೆ ಅಭಯವಾಗಿತ್ತು. ಆದ್ದರಿಂದಲೇ ಇರಬಹುದು ಮಾಂಸದ ಮುದ್ದೆಯಾದ ರಾಮ್ ದೇಹವು, ಮಾಂಸದ ಮುದ್ದೆಯಾಗಿ ದೆಹಲಿಯಲ್ಲಿದ್ದರೆ, ಮನಸ್ಸು ಪಾದರಸದಂತೆ ಇಂಡಿಯಾ ಎಂಬ ಮನುಷ್ಯನ ನರನಾಡಿಗಳಲ್ಲಿ ಸಂಚರಿಸಿತು. ಈಗ ರಾಜೀವ್ ಗಾಂಧಿಯ ರಾಜಕೀಯವು ದೇಶವನ್ನು ಇಪ್ಪತ್ತೊಂದನೇ ಶತಮಾನಕ್ಕೆ ನಡೆಸುತ್ತಿರುವಾಗ್ಗೆ ದೇಶಕ್ಕೆ ಅಭಯವಿಲ್ಲವಾಗಿದೆ._
_ಜಾತಿ, ಅವಮಾನ, ಹಸಿವು, ಅನ್ಯಾಯ, ಭ್ರಷ್ಟಾಚಾರ ಇಂತಹ ಸಕಲವೂ ತುಂಬ ತುಳುಕಾಡಿ ಭಾರತಮಾತೆಯ ಮನಸ್ಸಿಗೆ ಹುಚ್ಚು ಹಿಡಿದಂತಾಗಿದೆ. ಈ ಹುಚ್ಚು ಮನಸ್ಸನ್ನು ತಿದ್ದಲು ಯೋಗ್ಯತೆ ಇಲ್ಲದ ಇಂಡಿಯಾದ ರಾಜಕೀಯ, ಮನುಷ್ಯನು ಜಗಜೀವನ ರಾಮ್ ರಂಥ ಅನುಭವಿ ರಾಜಕಾರಣಿಯನ್ನು ಮೊನ್ನೆ ತಾನೇ ಕಳೆದು ಕೊಂಡು ಅಂಗವಿಕಲನಾಗಿ ಬಿಟ್ಟನು. ಜಗಜೀವನ ರಾಮ್ ಸಾವು, ಸಾವಾಗದೆ ವಿವಾದಕ್ಕೂ ದಾರಿಯಾಗಿದೆ. ಅದೇನೆಂದರೆ: ಡಾ.ಬಿ. ಆರ್. ಅಂಬೇಡ್ಕರ್ ಹಿಂದೂ ಧರ್ಮವನ್ನು ಬಿಟ್ಟಾಗ ಜಗಜೀವನ ರಾಮ್ ವಿರೋಧಿಸಿದ ರೆಂಬ ಭಿನ್ನಾಭಿಪ್ರಾಯವು ಪತ್ರಿಕೆಗಳು, ಸಮುದಾಯಗಳ ಮೂಲಕ ಹರಡುತ್ತಿದೆ. ಆದರೆ ಜಗಜೀವನ ರಾಮ್ ರವರು ಕಾಶಿಯ ಸಂಪೂರ್ಣಾನಂದ ಸ್ವಾಮಿ ವಿಗ್ರಹ ಅನಾವರಣ ಮಾಡಿದಾಗ ಗಂಗಾ ನದಿಯ ನೀರಿನಿಂದ ಪವಿತ್ರಗೊಳಿಸಿ ಜಗಜೀವನ ರಮ್ ರವರಿಗೆ ಅವಮಾನಿಸಿದ ಪುರೋಹಿತಶಾಹಿಯು ಅವರಿಗೆ ತಿಳಿಯದ ಸಂಗತಿಯಲ್ಲ. ಈ ಅವಮಾನವೇ ಜಗಜೀವನ ರಾಮ್-ಅಂಬೇಡ್ಕರ್‌ರವರು ಅಪ್ಪಿಕೊಂಡು, ಮುದ್ದಾಡಿ ನಿಟ್ಟುಸಿರು ಬಿಟ್ಟಿರುತ್ತಾರೆ. ಈ ನಿಟ್ಟುಸಿರಿನ ತಾಪ ಜಗಜೀವನ ರಾಮ್-ಅಂಬೇಡ್ಕರ್‌ರನ್ನು ದೂರ ಮಾಡುವ, ಗಂಡನನ್ನು ಹೆಂಡತಿಯಿಂದ, ಮಕ್ಕಳನ್ನು ತಂದೆ-ತಾಯಿಯಿಂದ, ದೇಶವನ್ನು ಜನತೆಯಿಂದ ದೂರ ದೂರ ಮಾಡುವ ಪುರೋಹಿತಶಾಯಿಗಳಿಗೆ ತಟ್ಟಲಿ. ಈಗ ಜಗಜೀವನ ರಾಮ್ ಇಲ್ಲ. ಅವರಲ್ಲಿ ಸಮೃದ್ಧ ಮಳೆ ಬಿದ್ದು ಬೆಳೆದ ಹಸಿರಿತ್ತು. ಮಳೆ ಇಲ್ಲದೇ ತತ್ತರಿಸಿದ ಬರವಿತ್ತು. ಮರ ಹುಟ್ಟಿ, ಮರ ಬಿತ್ತು, ಅಲ್ಲವೇ?._
_*ಸಂಗ್ರಹ*: ಪಂಚಮ, ಜುಲೈ ೧೯೮೬.- ಪ್ರೊ. ಕೆ.ಬಿ. ಸಿದ್ದಯ್ಯ ಬರೆದ ಬರಹ._
_*✍️ಡಾ. ಕೃಷ್ಣಪ್ಪ (ಕ್ರಿಶ್ ಮೌರ್ಯ)✍️*_
_ಮೈಸೂರು_