06/27/2023
ಅಮೇರಿಕಾಯಣ-೪
ಮೊನ್ನೆ ಮೌನಳ ಅಪ್ಪ, ಅಮ್ಮ ಇಬ್ಬರೂ ಮೌನಳನ್ನು ಕರೆದುಕೊಂಡು ಮನೆಗೆ ಬಂದಿದ್ದರು. ಅಪ್ಪ, ಅಮ್ಮನ ಮುಖದಲ್ಲಿ ಏನೋ ದುಗುಡ. ಮೌನ ಎಂದಿನಂತೆ ಲವಲವಿಕೆಯಿಂದ ಇದ್ದಳು. ಮೌನಳ ಅಪ್ಪ ಅಮ್ಮ ಇಬ್ಬರು ಮೈಸೂರಿನವರು. ಅಮೇರಿಕಕ್ಕೆ ಬಂದು ಮೂವತ್ತು ವರುಷವಾಗಿದೆ. ಮೌನ ಚನ್ನಾಗಿ ಓದಿ ಡಾಕ್ಟರ್ ಆಗಿದ್ದಾಳೆ. ಅದರ ಬಗ್ಗೆ ಅಪ್ಪ, ಅಮ್ಮನಿಗೆ ಹೆಮ್ಮೆ ಇದೆ. ಆದರೆ ಮೌನ ಒಬ್ಬ ಬಿಳಿ ಹುಡುಗನ ಜೊತೆ ಸಲುಗೆ ಬೆಳೆಸುಕೊಂಡಿದ್ದಾಳೆ, ಅವನನ್ನೇ ಮದುವೆ ಆಗುತ್ತೇನೆ ಎಂದು ಹೇಳುತ್ತಿದ್ದಾಳೆ. ಆದರೆ ಅಪ್ಪ, ಅಮ್ಮನಿಗೆ, ಯಾವುದಾದರೂ ಭಾರತದ ಹುಡುಗ ಆಗಿದ್ದರೆ, ಚನ್ನಾಗಿತ್ತು ಎಂಬ ಭಾವನೆ.
ಮೌನ, ಶ್ವೇತಾಳ ಹತ್ತಿರ ಅಡಿಗೆ ಮನೆಯಲ್ಲಿ ಇದ್ದಾಗ, ಮೌನಳ ಅಪ್ಪ ನನಗೆ " ನಿನ್ನ ಮಾತು ಮೌನ ಕೇಳುತ್ತಾಳೆ, ಸ್ವಲ್ಪ ಹೇಳಬಾರದೇ" ಎಂದರು.
" ನಾನು ಹಾಗೆ ಹೇಳಿದರೆ ಅವಳ ಕಣ್ಣಿನಲ್ಲಿ ಕೇವಲವಾಗುವುದಿಲ್ಲವೇ" ಎಂದೆ
" ಅದೆಲ್ಲಾ ಗೊತ್ತಿಲ್ಲ, ನೀನು ನಮಗೆ ಸಹಾಯ ಮಾಡಬೇಕು"
" ನೋಡಿ ಇದು ಅವಳ ಜೀವನ, ಅವಳಿಗೆ ಆ ಹುಡುಗನ ಮೇಲೆ ನಂಬಿಕೆಯಿದ್ದರೆ ನೀವು ಅವಳನ್ನು ನಂಬಬೇಕು, ನಿಮ್ಮ ಮಗಳಮೇಲೆ ನಿಮಗೆ ನಂಬಿಕೆಯಿರಬೇಕು"
"ಅವಳ ಮೇಲೆ ನಂಬಿಕೆ ನಮಗೆ ಇದೆ, ಆದರೆ ಆ ಬಿಳಿ ಹುಡುಗನ ಮೇಲೆ ಇಲ್ಲವೇ, ಇವರು ಯಾವಾಗ ಬೇರೆ ಹುಡುಗಿಯ ಜೊತೆ ಓಡುತ್ತಾರೋ"ಎಂದರು ಮೌನಳ ಅಮ್ಮ .
" ನೀವು ಮಾತನಾಡುತ್ತಿರುವುದು ಸ್ಕಾಟ್ ಬಗ್ಗೆನಾ, ಅದೇ ಆ ಡಾಕ್ಟರ್ ಹುಡುಗ"
"ನಿನಗೆ ಗೊತ್ತಾ"
"ಚನ್ನಾಗಿ ಗೊತ್ತು, ತುಂಬಾ ಒಳ್ಳೆಯ ಹುಡುಗ, ನಿಮಗೆ ಯಾವುದೇ ಭಯ ಬೇಡ"
ನಮ್ಮ ಮಾತನ್ನು ಕೇಳಿಸಿಕೊಂಡಳೋ ಎಂಬಂತೆ ಅಲ್ಲಿಗೆ ಬಂದ ಮೌನ "ಅಲ್ಲವಾ ಅಣ್ಣ, ಅದೇ ನಾನು ಹೇಳುತ್ತಿರುವುದು"ಎಂದಳು
" ನೋಡಿ ಅವಳು ಯಾವುದೋ ಒಬ್ಬ ಹುಡುಗನನ್ನು ಇಷ್ಟಪಟ್ಟಿಲ್ಲ, ಅವನೂ ಕೂಡ ಡಾಕ್ಟರ್, ಎಲ್ಲ ಸರಿಹೋಗುತ್ತೆ ಹೆದರಬೇಡಿ"
ಒಲ್ಲದ ಮನಸ್ಸಿನಿಂದ ಮಗಳ ಮಾತಿಗೆ ಒಪ್ಪಿಗೆ ಕೊಟ್ಟರು. ಮುಂದಿನ ತಿಂಗಳು ಅವರ ಮದುವೆ. ನೋಡೋಣ ಮೌನಳ ಅಮ್ಮ, ಅಮ್ಮ ಮುಂದೆ ಮಗಳ ಆಯ್ಕೆಗೆ ಏನು ಹೇಳುತ್ತಾರೋ ಎಂದು. ಸ್ವಲ್ಪ ದಿನ ಕಾಯೋಣ. ಅವರಿಬ್ಬರೂ ಸುಖವಾಗಿರಿಲಿ ಎಂಬುದೇ ಎಲ್ಲರ ಆಶಯ.
ಎಂ.ವಿ.ಎಸ್