26/06/2024
ಅಪ್ಪನ ಆಸೆ - ಈಡೇರಿಸಿದ್ದು
ಸಾಯುವುದರೊಳಗೊಮ್ಮೆ ಶ್ರೀಶೈಲ ಯಾತ್ರೆ ಮಾಡಬೇಕು
*********************************************
ನಮ್ಮ ಅಪ್ಪ ಕಳೆದ 30 ವರ್ಷಗಳಿಂದ ಏನನ್ನು ಮಕ್ಕಳಿಂದ ಆಸೆ ಪಟ್ಟು ಕೇಳಿದವರಲ್ಲ. ಒಂದೇ ಒಂದು ದಿನಾನೂ ಬೈಯ್ದವರಲ್ಲ. ಇವತ್ತಿನವರೆಗೂ ನಮಗೆಲ್ಲ ಕೊಡುತ್ತಾನೇ ಬಂದಿದ್ದಾರೆ. ನಮಗೆ ಏನನ್ನು ಕೇಳಿಲ್ಲ, ಏನೂ ಬಯಸಲಿಲ್ಲ. ತಮ್ಮ ದುಡಿಮೆ, ಸಂಸಾರ, ಮಕ್ಕಳ ವಿಧ್ಯಾಭ್ಯಾಸ, ಮಕ್ಕಳಿಗೆ ತಿಳುವಳಿಕೆ ಹೇಳುವುದರಲ್ಲೆ ಇಷ್ಟು ವರ್ಷ ಕಳೆದೆ ಬಿಟ್ಟರು. ಮತ್ತೋಬ್ಬರಿಂದ ಏನನ್ನು ಕಿತ್ಕೋಲಿಲ್ಲ, ಮತ್ತೋಬ್ಬರಿಗೆ ಕೊಡುವಷ್ಟು ಶಕ್ತರು ಆಗಿರಲಿಲ್ಲ. ಕಷ್ಟಪಟ್ಟು ದುಡಿಯುವುದು ಇದ್ದಿದ್ದರಲ್ಲೆ ತಿಂದು ಖುಷಿ ಪಡುವ ಸ್ವಭಾವ ಅಪ್ಪಂದು. ನಮಗೆಲ್ಲ ತಿಳುವಳಿಕೆ ಬಂದಮೇಲೆ ಅಪ್ಪನಿಗೆ ಸಾಕಷ್ಟು ಬುದ್ದಿವಾದ ಹೇಳುವ ಮೊಂಡತನ ತೊರಿಸಿದಿವಿ. ಕಿಂಚಿತ್ತೂ ಅಪ್ಪ ಬೇಜಾರಾಗಿಲ್ಲ ಇವತ್ತಿನವರೆಗೂ. ಮಕ್ಕಳು ಬುದ್ದಿ ಕಲಿತು ನಾಲ್ಕು ಜನರ ಜೊತೆಗೆ ಬೆರೆಯುವುದನ್ನು ನೋಡಿ ಖುಷಿ ಪಟ್ಟವರು. ಅಪ್ಪನ ಮಾತು ಕೇಳಿಲ್ಲ ಅಂತ ಒಂದೇ ಒಂದು ದಿನ ಬೇಜಾರಾಗಿಲ್ಲ, ಕೋಪ ಮಾಡ್ಕೊಂಡಿಲ್ಲ. ಆದರೂ ತಿಳುವಳಿಕೆ ಹೇಳುವುದನ್ನು ಬಿಟ್ಟಿಲ್ಲ.
ಅಪ್ಪನಿಗೆ 10-15 ವರ್ಷಗಳ ಹಿಂದೆನೆ ಅಪ್ಪನಿಗೆ ಅನಿಸಿತ್ತಂತೆ ಶ್ರೀಶೈಲ್ ಮಲ್ಲಿಕಾರ್ಜುನ ಸ್ವಾಮಿಯ ದರ್ಶನ ಪಡೆದುಕೊಳ್ಳುಬೇಕು ಅಂತ. ಯಾತ್ರೆಗೆ ಹೋದರೆ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಯಿತು ಅಂತ ಆ ಆಸೆಯೂ ಇವತ್ತಿನವರೆಗೂ ಪೂರ್ಣ ಆಗಿರಲಿಲ್ಲ. ಇದ್ದಿದ್ದರಲ್ಲೆ ಜೀವನ ಸಾಗಿಸಿದವರು, ಸಾಲ ಮಾಡಿ ಯಾತ್ರೆಯ ಬಗ್ಗೆ ಯೋಚಿಸಿದವರು ಅಲ್ಲ. ಯಾತ್ರೆಗೆ ಹೋಗುವ ವಿಚಾರ ಇಲ್ಲಿಯವರೆಗೆ ಅವರ ಮನಸ್ಸಿನಲ್ಲೆ ಇತ್ತು. ಯಾರಿಗೂ ಹೇಳಿರಲಿಲ್ಲ. ಮೊನ್ನೆ ಯಾವುದೋ ಮಾತಿನಲ್ಲಿ ತಮ್ಮನ ಮುಂದೆ ಸಾಯುವುದರೊಳಗೆ ಒಮ್ಮೆ ಶ್ರೀಶೈಲ್ ದರ್ಶನ ಮಾಡಬೇಕು ಅಂತ ಇಚ್ಛೆ ವ್ಯಕ್ತಪಡಿಸಿದ್ದಾರೆ. ತಮ್ಮ ನನ್ನೋಟ್ಟಿಗೆ ಮಾತನಾಡಿ ಹೋಗುವುದರ ಬಗ್ಗೆ ಪಕ್ಕ ಯೋಜನೆ ಆಯಿತು. ಅಪ್ಪನೊಟ್ಟಿಗೆ ಅಮ್ಮ ಜೊತೆಗೆ ಕುಟುಂಬ ಸೇರಿ ಶ್ರೀಶೈಲ್ ಮಲ್ಲಿಕಾರ್ಜುನ ಸ್ವಾಮಿಯ ಯಾತ್ರೆ ಮಾಡೋಣ. ಅಪ್ಪನ ಇಂಗಿತವನ್ನು ಪೂರ್ಣಗೊಳಿಸೋಣ ಅಂತ ಮನೆಯಲ್ಲಿ ಎಲ್ಲರ ಸಮ್ಮುಖದಲ್ಲಿ ಯೋಜನೆ ಆಯಿತು.
ಯೋಜನೆಯ ದಿನದಿಂದ ಮನೆಯಲ್ಲಿ ಹಬ್ಬದ ವಾತಾವರಣ, ಬರೀ ಯಾತ್ರೆಯ ಬಗ್ಗೆ ಚರ್ಚೆ, ಮನೆಯಲ್ಲ ತೊಳೆದು, ಬಳಿಸು, ಗುಡಿಸಿ, ಸಾರಿಸಿ, ಗೋಮೂತ್ರ ಸಿಂಪಡಿಸಿ ತಯಾರಾದರು ಎಲ್ಲರೂ. ತಿಂಗಳವರೆಗೆ ಹೋಗುವ ಹಾಗೆ ದೊಡ್ಡ ದೊಡ್ಡ ಬ್ಯಾಗ್, ಅದರಲ್ಲಿ ಇಲ್ಲಸಲ್ಲದ ವಸ್ತುಗಳ ಸೇರಿಸಿ ಬಾರ ಹೆಚ್ಚಿಸಿದರು ಮನೆಯಲ್ಲಿ. ಯಾತ್ರೆಯಲ್ಲಿ ತೊಂದರೆ ಆಗಬಾರದು ಅನ್ನುವ ಸಲುವಾಗಿ...
ಅಪ್ಪನ ಆಸೆ ಈಡೇರಿಸುವುದರಲ್ಲಿ ಎಲ್ಲರ ಪಾತ್ರ ಮಾತ್ರ ಅವಿಸ್ಮರಣೀಯ ಹಾಗೂ ಸಂತೋಷದಾಯಕವಾದುದು. ಆದರೆ ಅಪ್ಪನ ಮುಖದಲ್ಲಿನ ಕಳೆ ಮಾತ್ರ ಹೊರಟ ಕ್ಷಣದಿಂದ ನೂರ್ಮಡಿ ಹೆಚ್ಚಾಗಿತ್ತು. ನಾನಂತು ಎಷ್ಟೋ ಯಾತ್ರೆಗಳನ್ನು ಮಾಡಿರುವೆ ಕುಟುಂಬದ ಜೊತೆಗೆ ಮೊದಲ ಯಾತ್ರೆ ಅದರಲ್ಲೂ ಅಪ್ಪನ ಆಸೆ ಈಡೇರಿಸುವ ಯಾತ್ರೆ, ನನಗಂತ ಅತ್ಯಂತ ಸಂತೋಷದ ಯಾತ್ರೆ. ಇಷ್ಟು ದಿನ ನಾವುಗಳು ಯಾತ್ರಗೆ ಹೊರಟಾಗ ಕಿಸೆಯಲ್ಲಿದ್ದಷ್ಟು ಹಣ ಒಂದಿನಿತು ಯೋಚಿಸದೇ ಕೊಡ್ತಿದ್ದ ಅಪ್ಪ. ಇವತ್ತು ಮಾತ್ರ ಅಪ್ಪನಿಗೆ ಯಾತ್ರೆಯ ಖರ್ಚಿಗೆ ತಮ್ಮ ಕೊಡ್ತಿದ್ದ ಹಣ ನೋಡಿ ಕಣ್ಣಿಂಚಿನಲ್ಲಿ ನೀರು ಬಂದಿತ್ತು. ನಾವು ಹೋಗುವ ಯಾತ್ರೆಗಳಿಗೆ ಅಪ್ಪನತ್ರ ಬಡತನ ಕಾಣಲೇ ಇಲ್ಲ ಆದರೆ ತನ್ನ ಮನಸ್ಸಿನ ಯಾತ್ರೆಯನ್ನು ಪೂರ್ಣಗೊಳಿಸಲು ಅಪ್ಪನಿಗೆ ತನ್ನ ಬಡತನ ಕಣ್ಮುಂದೆ ಇದ್ದಿದ್ದಕ್ಕೆ ಇಷ್ಟು ವರ್ಷ ಮನಸ್ಸಲ್ಲೆ ಕೊರಗಿತ್ತು ಮನ....
ನಾವು ಯಾತ್ರೆಗೆ ಮನೆ ಬಿಟ್ಟ ಒಂದು ದಿನದ ನಂತರ ದರ್ಶನಕ್ಕೆ ಹೋಗುವುದಿತ್ತು. ಆ ಒಂದು ದಿನದ ಪ್ರಯಾಣವನ್ನು ಕಳೆಯುವುದು ಅಪ್ಪನಿಗೆ ಅತ್ಯಂತ ಕಷ್ಟವಾಗಿತ್ತು. ಅಷ್ಟು ಅಪ್ಪ ಶಿವನ ದರ್ಶನಕ್ಕೆ ಹಾತೊರೆಯುತ್ತಿದ್ದ. ಅಪ್ಪ ಹೊಸ ಬಟ್ಟೆಯನ್ನು ಹಾಕಿದ್ದು ನೋಡಿದ್ದೆ ನನ್ನ ಮದುವೆಯಲ್ಲಿ. ಅದಕ್ಕಿಂತ ಮುಂಚೆ ಹೊಸ ಬಟ್ಟೆಗಳನ್ನು ಹಾಕಿದ್ದರು ಅವು ಹೊಸದು ಅನಿಸುತ್ತಿರಲೇ ಇಲ್ಲ, ಯಾಕೆಂದರೆ ಕಡಿಮೆ ಬೆಲೆಗೆ ಬಟ್ಟೆಗಳನ್ನು ಕೊಂಡರೆ ಅದ್ಹೇಗೆ ಹೊಸ ಬಟ್ಟೆ ಅನಿಸುತ್ತವೆ ? ಆದರೆ ಶ್ರೀಶೈಲ್ ಮಲ್ಲಿಕಾರ್ಜುನ ಸ್ವಾಮಿಯ ದರ್ಶನಕ್ಕೆ ಹೋಗುವಾಗ ಮಾತ್ರ ಅಪ್ಪ ಎಲ್ಲರಿಗಿಂತ ವಿಶೇಷವಾಗಿ ಕಾಣ್ತಿದ್ದ. ಹಾಕಿರುವ ಬಟ್ಟೆಗಳು ಹೊಸದು ಅನಿಸುತ್ತಿತ್ತು ಆದರೆ ಹೊಸದಲ್ಲ. ಅಪ್ಪ ಪಂಚೆ ಬಿಳಿ ಅಂಗಿ ತೊಟ್ಟು ಕೇಸರಿ ಶಾಲು ಹಾಕೊಂಡು ಅತ್ಯಂತ ವಿಶೇಷವಾಗಿ ಕಾಣ್ತಿದ್ದ. ಮನದಾಸೆ ಇಡೇರುವ ಕಾಲ ಸನ್ನಿಹಿತವಾಯಿತು ಅಂತ ಅವರ ಮೊಗದಲ್ಲಿ ಧನ್ಯತಾಭಾವ ಎದ್ದು ಕಾಣ್ತಿತ್ತು. ದರ್ಶನಕ್ಕೆ ಹೋಗುವಾಗ ಅವರನ್ನೆ ಹೆಚ್ಚಾಗಿ ಗಮನಿಸಿದ್ದ ನನಗೆ ಅಪ್ಪನ ಪ್ರತಿ ಹೆಜ್ಜೆ ಹೆಜ್ಜೆಗೂ ಅವರಲ್ಲಿದ್ದ ಶಿವನ ಭಕ್ತಿ ಗಮನಿಸಿ ಬೇರಗಾಗಿದ್ದೆ. ಅತ್ಯಂತ ಪವಿತ್ರ ಪೂರ್ವಕವಾಗಿ ದರ್ಶನ ಮಾಡಿ, ನಮಗೆ ಗೊತ್ತಿಲ್ಲದಂತೆ ಎಷ್ಟು ಸಾರಿ ಆನಂದ ಬಾಷ್ಪ ಹರಿಸಿದ್ದರೋ ಗೊತ್ತಿಲ್ಲ. ಇನ್ನೆಷ್ಟು ಸಾರಿ ಅಮ್ಮನ ಮುಂದೆ ಅಪ್ಪ ಶಿವನ ದರ್ಶನವಾಗಿದ್ದರ ಬಗ್ಗೆ ಕಣ್ಣಿರು ಹಾಕಿ ಖುಷಿ ವ್ಯಕ್ತ ಪಡಿಸುತ್ತಾರೋ ಗೊತ್ತಿಲ್ಲ.. ಅಮ್ಮ ಅಂತು ಅದನ್ನು ನಮ್ಮ ಗಮನಕ್ಕೆ ತರುವ ಮಾತೆ ಇಲ್ಲ. ಇದೆಲ್ಲದರ ನಡುವೆ ಅಪ್ಪ ಅಮ್ಮ ಇಷ್ಟು ವರ್ಷಗಳ ನಂತರ ತಮ್ಮ ಮನದಾಳದ ಇಚ್ಛೆಯನ್ನು ಒಟ್ಟಾಗಿ ಈಡೇರಿಸಿಕೊಂಡರು ಅಂತ ನಾವು ಸಾಯುವ ಕೊನೆಯ ಕ್ಷಣದವರೆಗೂ ನೆನಪಿನಲ್ಲಿ ಉಳಿಯುತ್ತೆ. ಅವರೊಟ್ಟಿಗೆ ನಮ್ಮದು ದರ್ಶನವಾಯ್ತು, ಇಡೀ ಕುಟುಂಬದ ಮೊದಲ ಯಶಸ್ವಿ ಯಾತ್ರೆ ಇದಾಯಿತು. ಎಲ್ಲಕ್ಕಿಂತ ಮುಖ್ಯವಾಗಿ ಅಮ್ಮನಿಗೆ, ತಮ್ಮಂದಿರಿಗೆ, ತಂಗಿಗೆ, ಹೆಂಡತಿಗೆ ಅಪ್ಪನ ಮನದಾಸೆ ಎಲ್ಲರೊಟ್ಟಿಗೆ ಈಡೆರಿದ್ದು ಅತೀವ ಸಂತೋಷದ ಕ್ಷಣ. ಸಾರ್ಥಕ ಈ ದಿನ, ಈ ಕ್ಷಣ... ಅಪ್ಪ ದರ್ಶನ ಮುಗಿಸಿ ಹೊರಗೆ ಬರುಔರೆಗೂ ಗಡಿಬಿಡಿ, ಸ್ಪರ್ಶ ದರ್ಶನ ಮಾಡಿ ಹೊರಬಂದ ಮೇಲೆ ಅವರ ಕಣ್ಣಲ್ಲಿ ಕಂಡಷ್ಟು ನೆಮ್ಮದಿ ನಾನ್ಯಾವತ್ತು ನೋಡಿರಲಿಲ್ಲ....
ಚಿಕ್ಕವರಾಗಿದ್ದಾಗ ಅಪ್ಪನಿಗೆ ಅದು ಕೊಡಿಸಿ, ಇದು ಕೊಡಿಸಿ ಅಂತ ಗೋಳು ಇಟ್ಟಿದ್ದೆ ಹೆಚ್ಚು. ಅವರ ಮನದಾಸೆಗಳನ್ನು ಈಡೇರಿಸಲು ಮಕ್ಕಳಾದವರು ಹವಣಿಸಬೇಕು. ಈಡೇರಿದ ನಂತರ ಅವರಿಗಿಂತ ಆತ್ಮತೃಪ್ತಿ ಮಕ್ಕಳಿಗೆ ಸಿಗುತ್ತದೆ. ಅವರ ಆಸೆಗಳನ್ನು ಈಡೆರಿಸುವ ಸಂದರ್ಭದಲ್ಲಿ ಅವರು ಮಕ್ಕಳಂತೆ ಕಾಣುತ್ತಿರುತ್ತಾರೆ. ಅವರ ಮನದ ನಗು, ಸಂತೋಷವನ್ನು ಬಣ್ಣಿಸಲು ಈ ಅಕ್ಷರಗಳಿಂದ ಸಾಲದು. ಮಕ್ಕಳಿಂದ ಏನನ್ನು ಬಯಸದ ಈ ಜೀವಗಳಿಗೆ ಅವರ ಇಚ್ಛೆಯ ಕಡೆಗೆ ಯೋಚಿಸುವುದು ಪ್ರತಿಯೊಬ್ಬರ ಆಧ್ಯ ಕರ್ತವ್ಯವಾಗಬೇಕು. ಇದೇನು ದೊಡ್ಡ ಸಾಧನೆಯಲ್ಲ ಅವರ ತಪಸ್ಸಿನ ಮುಂದೆ, ಆದರೆ ಅವರ ಮನದಾಸೆಗೆ ಮನ್ನಣೆ ನೀಡುವ ಪ್ರಾಮಾಣಿಕ ಪ್ರಯತ್ನದ ಪ್ರತಿರೂಪ. ಪ್ರತಿ ಮಕ್ಕಳು ತಮ್ಮ ತಂದೆ ತಾಯಿಯರನ್ನು ಕೂಡಿಸಿ ಮನದಾಸೆಯನ್ನು ಕೇಳಿ ಅದಕ್ಕೆ ಸ್ಪಂಧಿಸುವ ಮೂಲಕ ಅವರ ಇಚ್ಛೆ ಪೂರೈಸಿದರೆ ಸಾರ್ಥಕ ಈ ಲೇಖನ. ಇದರ ಮೂಲಕ ಇನ್ನೂ ನಾಲ್ಕಾರು ತಂದೆ ತಾಯಂದಿರು ಅವರಿಷ್ಟದ ಯಾತ್ರೆ ಪೂರ್ಣಗೊಳಿಸಲು ಈ ಪುಟ್ಟ ಲೇಖನ ಪ್ರೇರಣೆಯಾಗಲಿ ಎನ್ನುವ ಆಶಯದೊಂದಿಗೆ....
ಶ್ರೀಶೈಲ್‌ದಲ್ಲಿ ಪ್ರತಿ ಕ್ಷಣಕ್ಕೂ ಸಹಾಯ ಮಾಡಿದ ಶ್ರೀ ಸಂಗಮೇಶಣ್ಣ ಹಿತ್ತಲಮನಿಯವರಿಗೆ ಅನಂತ ವಂದನೆಗಳು.. ಸಂಪೂರ್ಣವಾಗಿ ಬೆನ್ನೆಲುಬಾಗಿ ನಿಂತು ಯಾತ್ರೆ ಯಶಸ್ಸಿಗೆ ಕಾರಣಿಭೂತರು.. ಧನ್ಯವಾದಗಳು Sangamesh Hittalamani ...
✍🏻 ಸುರೇಶ ಮಾಗಿ, ಬಾಗಲಕೋಟೆ
#ಸೂರಿ_ಲೈನ್ಸ #ಶ್ರೀಶೈಲ