UK Express News

  • Home
  • UK Express News

UK Express News uttarakannada news

ಮುಂಡಗೋಡದಲ್ಲಿ ₹8 ಲಕ್ಷ ಮೌಲ್ಯದ ಚರಸ್ ಜಪ್ತಿ; ಆರೋಪಿ ಬಂಧನಮುಂಡಗೋಡ: ಅಕ್ರಮವಾಗಿ ಮಾದಕ ವಸ್ತುವಾದ ಚರಸ್ ಅನ್ನು ಬೈಕ್‌ನಲ್ಲಿ ಸಾಗಿಸುತ್ತಿದ್ದ ಆ...
21/11/2025

ಮುಂಡಗೋಡದಲ್ಲಿ ₹8 ಲಕ್ಷ ಮೌಲ್ಯದ ಚರಸ್ ಜಪ್ತಿ; ಆರೋಪಿ ಬಂಧನ

ಮುಂಡಗೋಡ: ಅಕ್ರಮವಾಗಿ ಮಾದಕ ವಸ್ತುವಾದ ಚರಸ್ ಅನ್ನು ಬೈಕ್‌ನಲ್ಲಿ ಸಾಗಿಸುತ್ತಿದ್ದ ಆರೋಪಿಯನ್ನು ಮುಂಡಗೋಡ ಪೊಲೀಸರು ಬಂಧಿಸಿದ್ದು, ಆತನಿಂದ ಸುಮಾರು 8 ಲಕ್ಷ ರೂಪಾಯಿ ಮೌಲ್ಯದ ಮಾದಕ ವಸ್ತುವನ್ನು ವಶಪಡಿಸಿಕೊಂಡಿದ್ದಾರೆ.

ಮುಂಡಗೋಡ ಪಟ್ಟಣದ ಸುಭಾಷನಗರ ನಿವಾಸಿ ಸಚೀನ ಟೆಕ್‌ಬಹದ್ದೂರ ಗೋರ್ಖಾ ಬಂಧಿತ ಆರೋಪಿ.
ಆರೋಪಿ ಸಚೀನನು ಯಾವುದೇ ಅಧಿಕೃತ ಪಾಸ್ ಅಥವಾ ಪರವಾನಗಿ ಇಲ್ಲದೇ, ಲಾಭ ಗಳಿಸುವ ಉದ್ದೇಶದಿಂದ ಚರಸ್ ಅನ್ನು ಮಾರಾಟ ಮಾಡಲು ಹಿರೋ ಸ್ಪ್ಲೆಂಡರ್ ಬೈಕ್‌ನಲ್ಲಿ ಸಾಗಿಸುತ್ತಿದ್ದನು. ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು, ಪಟ್ಟಣದ ಶಿರಸಿ-ಹುಬ್ಬಳ್ಳಿ ರಾಜ್ಯ ಹೆದ್ದಾರಿ-69 ರ ಕೆ.ಎಸ್.ಆರ್.ಟಿ.ಸಿ (KSRTC) ಬಸ್ ಡಿಪೋ ಹತ್ತಿರ ಆರೋಪಿಯನ್ನು ತಡೆದು ಪರಿಶೀಲಿಸಿದ್ದಾರೆ.

ಈ ವೇಳೆ ಆರೋಪಿಯ ಬಳಿ ಸುಮಾರು 781 ಗ್ರಾಂ ತೂಕದ ನಿಷೇಧಿತ ಮಾದಕ ವಸ್ತುವಾದ ಚರಸ್ ಪತ್ತೆಯಾಗಿದೆ. ಇದರ ಮೌಲ್ಯ ಸುಮಾರು ₹8,00,000 (ಎಂಟು ಲಕ್ಷ ರೂಪಾಯಿ) ಎಂದು ಅಂದಾಜಿಸಲಾಗಿದೆ.
ಪೊಲೀಸರು ಮಾದಕ ವಸ್ತು ಹಾಗೂ ಕೃತ್ಯಕ್ಕೆ ಬಳಸಿದ ಬೈಕ್ ಅನ್ನು ಜಪ್ತಿ ಮಾಡಿದ್ದಾರೆ.

ಮುಂಡಗೋಡ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷರಾದ ರಂಗನಾಥ ನೀಲಮ್ಮನವರ ನೇತೃತ್ವದಲ್ಲಿ ಪಿ.ಎಸ್.ಐ ಯಲ್ಲಾಲಿಂಗ ಕುನ್ನುರ, ಸಿಬ್ಬಂದಿಗಳಾದ ಕೋಟೇಶ ನಾಗರೊಳ್ಳಿ, ಮಹಾಂತೇಶ ಕುಂದೋಳ, ಅಣ್ಣಪ್ಪ ಬಡಿಗೇರ, ಶಿವಾನಂದ ದಾನಣ್ಣನವರ, ಅನ್ವರ್ ಬಮ್ಮಿಗಟ್ಟಿ, ಗುರು ಬಿಶಟ್ಟಪ್ಪನವರ ಅವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಆರೋಪಿಯ ವಿರುದ್ಧ ಎನ್‌ಡಿಪಿಎಸ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಏನಿದು ಚರಸ್?
​'ಚರಸ್' (Charas) ಎಂಬುದು ಗಾಂಜಾ ಗಿಡದ ಹೂವು ಮತ್ತು ಎಲೆಗಳಿಂದ ತೆಗೆಯಲಾದ ಒಂದು ಬಗೆಯ ಅಂಟು (ರಾಳ). ಕಪ್ಪು ಅಥವಾ ಕಂದು ಬಣ್ಣದಲ್ಲಿರುವ ಇದು ಗಾಂಜಾಕ್ಕಿಂತ ಹೆಚ್ಚು ನಶೆ ನೀಡುವ ತೀಕ್ಷ್ಣ ಮಾದಕ ವಸ್ತು. ಇದು ನೇರವಾಗಿ ಮನುಷ್ಯನ ಮೆದುಳು ಮತ್ತು ನರಮಂಡಲದ ಮೇಲೆ ಗಂಭೀರ ಪರಿಣಾಮ ಬೀರುವುದರಿಂದ ಅತ್ಯಂತ ಅಪಾಯಕಾರಿಯಾಗಿದೆ.ಭಾರತದಲ್ಲಿ ಎನ್‌ಡಿಪಿಎಸ್ (NDPS) ಕಾಯ್ದೆಯಡಿ ಚರಸ್ ಸಾಗಾಟ, ಸಂಗ್ರಹಣೆ ಮತ್ತು ಮಾರಾಟ ಶಿಕ್ಷಾರ್ಹ ಅಪರಾಧವಾಗಿದೆ.

ಆನ್‌ಲೈನ್ ಪಾರ್ಟ್ ಟೈಂ ಜಾಬ್ ಆಸೆ: ಬರೋಬ್ಬರಿ 10.98 ಲಕ್ಷ ರೂ. ಕಳೆದುಕೊಂಡು ಕಂಗಾಲಾದ ಮಹಿಳೆಕಾರವಾರ: ಮನೆಯಲ್ಲೇ ಕುಳಿತು ಆನ್‌ಲೈನ್ ಮೂಲಕ ದಿನಕ...
21/11/2025

ಆನ್‌ಲೈನ್ ಪಾರ್ಟ್ ಟೈಂ ಜಾಬ್ ಆಸೆ: ಬರೋಬ್ಬರಿ 10.98 ಲಕ್ಷ ರೂ. ಕಳೆದುಕೊಂಡು ಕಂಗಾಲಾದ ಮಹಿಳೆ

ಕಾರವಾರ: ಮನೆಯಲ್ಲೇ ಕುಳಿತು ಆನ್‌ಲೈನ್ ಮೂಲಕ ದಿನಕ್ಕೆ ಸಾವಿರಾರು ರೂಪಾಯಿ ಗಳಿಸಬಹುದು ಎಂಬ ಆಸೆಗೆ ಬಿದ್ದ ಮಹಿಳೆಯೊಬ್ಬರು ಸೈಬರ್ ವಂಚಕರ ಬಲೆಗೆ ಬಿದ್ದು, ಬರೋಬ್ಬರಿ 10.98 ಲಕ್ಷ ರೂಪಾಯಿ ಕಳೆದುಕೊಂಡ ಘಟನೆ ನಡೆದಿದ್ದು ಮಹಿಳೆ ಈ ಕುರಿತು ಕಾರವಾರದ ಸೈಬರ್ ಕ್ರೈಂ (ಸಿಇಎನ್) ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಘಟನೆಯ ವಿವರ:
ದಿನಾಂಕ 04-11-2025 ರಂದು ಮಹಿಳೆಗೆ ಟೆಲಿಗ್ರಾಮ್ ಆ್ಯಪ್‌ನಲ್ಲಿ "Mishika" ಎಂಬ ಹೆಸರಿನ ಐಡಿಯಿಂದ ಸಂದೇಶವೊಂದು ಬಂದಿತ್ತು. ಅದರಲ್ಲಿ "ಆನ್‌ಲೈನ್ ಪಾರ್ಟ್ ಟೈಂ ಜಾಬ್ ಇದೆ, ಮನೆಯಲ್ಲೇ ಕುಳಿತು ಪ್ರತಿದಿನ 3,000 ರೂ. ಗಳವರೆಗೆ ಆದಾಯ ಗಳಿಸಬಹುದು" ಎಂದು ನಂಬಿಸಲಾಗಿತ್ತು.
ಇದನ್ನು ನಂಬಿ ಆಸಕ್ತಿ ತೋರಿದಾಗ, ವಂಚಕರು ವಾಟ್ಸಾಪ್ ಮೂಲಕ ಸಂಪರ್ಕಿಸಿ , ಒಂದು ಲಿಂಕ್ ಕಳುಹಿಸಿ 'Rent' ಎಂಬ ವೆಬ್‌ಸೈಟ್‌ಗೆ ಲಾಗಿನ್ ಆಗುವಂತೆ ಸೂಚಿಸಿದ್ದರು. ಅಲ್ಲಿ ವಿವಿಧ ಕಂಪನಿಗಳ ಉತ್ಪನ್ನಗಳಿಗೆ ರೇಟಿಂಗ್ ಮತ್ತು ರಿವ್ಯೂ ನೀಡುವ ಕೆಲಸ ನೀಡಲಾಗಿತ್ತು.

ನಂಬಿಸಲು ಲಾಭದ ಆಮಿಷ:
ಆರಂಭದಲ್ಲಿ ಮಹಿಳೆ 10,000 ರೂ. ಹೂಡಿಕೆ ಮಾಡಿದಾಗ, ವಂಚಕರು ವಿಶ್ವಾಸಗಳಿಸಲು ಲಾಭಾಂಶ ಸೇರಿ 15,268 ರೂ.ಗಳನ್ನು ವಾಪಸ್ ನೀಡಿದ್ದರು. ಇದರಿಂದ ಉತ್ತೇಜಿತರಾದ ಅವರಿಗೆ, ಹೆಚ್ಚಿನ ಲಾಭಕ್ಕಾಗಿ ಇನ್ನೂ ಹೆಚ್ಚು ಹಣ ಹೂಡಿಕೆ ಮಾಡಲು ಆರೋಪಿತರು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಮಹಿಳೆಯು, ಪ್ರಕರಣದ ಇತರ ಇಬ್ಬರು ವ್ಯಕ್ತಿಗಳ ಪ್ರಚೋದನೆಯ ಮೇರೆಗೆ ಹಾಗೂ ಅವರ ಆರ್ಥಿಕ ಸಹಾಯದೊಂದಿಗೆ ಹಂತ ಹಂತವಾಗಿ ವಂಚಕರು ಸೂಚಿಸಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಒಟ್ಟು 10,98,113 ರೂ.ಗಳನ್ನು ವರ್ಗಾಯಿಸಿದ್ದಾರೆ. ಆದರೆ, ಇಷ್ಟೊಂದು ದೊಡ್ಡ ಮೊತ್ತದ ಹಣ ಹೂಡಿಕೆ ಮಾಡಿದ ನಂತರ ಯಾವುದೇ ಲಾಭಾಂಶವಾಗಲಿ ಅಥವಾ ಅಸಲು ಹಣವಾಗಲಿ ಬಾರದೇ ಇದ್ದಾಗ ತಾವು ಮೋಸ ಹೋಗಿರುವುದು ಅರಿವಿಗೆ ಬಂದಿದೆ.

ಈ ಸಂಬಂಧ ಕಾರವಾರದ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಬಿ.ಎನ್.ಎಸ್ (BNS) ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಅಪರಿಚಿತ ಮೊಬೈಲ್ ಬಳಕೆದಾರ ಹಾಗೂ ಇತರ ಇಬ್ಬರು ವ್ಯಕ್ತಿಗಳ ವಿರುದ್ಧ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಸಾರ್ವಜನಿಕರಿಗೆ ಎಚ್ಚರಿಕೆ:
ಸಾಮಾಜಿಕ ಜಾಲತಾಣಗಳಲ್ಲಿ ಬರುವ 'ಪಾರ್ಟ್ ಟೈಂ ಜಾಬ್', 'ಮನೆಯಲ್ಲೇ ಕುಳಿತು ಸುಲಭವಾಗಿ ಹಣ ಗಳಿಸಿ' ಎಂಬಂತಹ ಸಂದೇಶಗಳನ್ನು ನಂಬಿ ಅಪರಿಚಿತರಿಗೆ ಹಣ ವರ್ಗಾವಣೆ ಮಾಡದಂತೆ ಮತ್ತು ಯಾವುದೇ ಲಿಂಕ್‌ಗಳನ್ನು ಕ್ಲಿಕ್ ಮಾಡದಂತೆ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

20/11/2025

ಅಭಿವೃದ್ಧಿಗೆ ಹಣ ಕೇಳಿ ವರ್ಷವಾಯಿತು; ಕಣ್ಣುಮುಚ್ಚಿ ಕುಳಿತಿದೆ ರಾಜ್ಯ ಸರ್ಕಾರ: ದಿನಕರ ಶೆಟ್ಟಿ

ಕುಮಟಾ: ಕುಮಟಾ ಹಾಗೂ ಹೊನ್ನಾವರ ಪಟ್ಟಣಗಳ ಅಭಿವೃದ್ಧಿಗಾಗಿ ವಿಶೇಷ ಅನುದಾನ ನೀಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿ ಒಂದು ವರ್ಷ ಕಳೆದರೂ, ಸರ್ಕಾರ ಕಣ್ಣುಮುಚ್ಚಿ ಕುಳಿತಿದೆ ಎಂದು ಶಾಸಕ ದಿನಕರ ಶೆಟ್ಟಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ವಿವಿಧೆಡೆ ತಮ್ಮ ಶಾಸಕರ ನಿಧಿಯಿಂದ ಕೈಗೆತ್ತಿಕೊಂಡಿರುವ ರಸ್ತೆ ಕಾಮಗಾರಿಗಳನ್ನು ಪರಿಶೀಲಿಸಿ ಅವರು ಮಾತನಾಡಿದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಪೂರೈಸುತ್ತಾ ಬಂದಿದೆ. ಆದರೆ, ಕುಮಟಾ-ಹೊನ್ನಾವರ ಕ್ಷೇತ್ರದ ಅಭಿವೃದ್ಧಿಗೆ ಚಿಕ್ಕಾಸನ್ನೂ ಬಿಡುಗಡೆ ಮಾಡಿಲ್ಲ. ಸಾರ್ವಜನಿಕರಿಗೆ ಮೂಲಭೂತವಾಗಿ ಬೇಕಿರುವ ರಸ್ತೆ, ನೀರು ಮತ್ತು ದೀಪದಂತಹ ಸೌಕರ್ಯಗಳಿಗೂ ಅನುದಾನ ನೀಡದೆ ಸತಾಯಿಸುತ್ತಿದೆ ಎಂದು ಅವರು ಆರೋಪಿಸಿದರು.

ಸರ್ಕಾರದ ಅನುದಾನ ಬಾರದಿರುವುದರಿಂದ ಅಭಿವೃದ್ಧಿ ಕಾರ್ಯಗಳು ನಿಲ್ಲಬಾರದು ಎಂಬ ಉದ್ದೇಶದಿಂದ, ಶಾಸಕರ ಪ್ರದೇಶಾಭಿವೃದ್ಧಿ ನಿಧಿಯನ್ನು ಬಳಸಿಕೊಳ್ಳಲಾಗುತ್ತಿದೆ. ಪಟ್ಟಣದ ಗಿಬ್ ಸರ್ಕಲ್ ಬಳಿಯ ಪ್ರಮೀಳಾ ಕಾಂಪ್ಲೆಕ್ಸ್ ಎದುರು, ಗುಡಿಗಾರ ಗಲ್ಲಿ, ಸುಭಾಸ್ ರೋಡ್, ಚಿತ್ರಗಿ ಹಾಗೂ ನೆಲ್ಲಿಕೇರಿ ರಸ್ತೆಗಳಲ್ಲಿ ಹದಗೆಟ್ಟ ಜಾಗಗಳಿಗೆ ಇಂಟರ್‌ಲಾಕ್ ಅಳವಡಿಸಿ ರಸ್ತೆ ಸರಿಪಡಿಸಲಾಗುತ್ತಿದೆ.

"ನನ್ನ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಕೊಡಿ ಎಂದು ಕಳೆದ ಒಂದು ವರ್ಷದಿಂದ ಸತತವಾಗಿ ಕೇಳುತ್ತಿದ್ದೇನೆ. ಆದರೆ ಸರ್ಕಾರ ಸ್ಪಂದಿಸುತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಕೂಡ ತಮ್ಮ ಕ್ಷೇತ್ರವಾದ ಭಟ್ಕಳದ ಕಡೆಯಷ್ಟೇ ಗಮನ ಹರಿಸುತ್ತಿದ್ದಾರೆ ಹೊರತು, ಕುಮಟಾ-ಹೊನ್ನಾವರದ ಬಗ್ಗೆ ಮುತುವರ್ಜಿ ವಹಿಸುತ್ತಿಲ್ಲ," ಎಂದು ಶೆಟ್ಟಿ ಬೇಸರ ವ್ಯಕ್ತಪಡಿಸಿದರು.
ಕೇವಲ ಶಾಸಕರ ನಿಧಿಯಿಂದಲೇ ಎಲ್ಲಾ ರಸ್ತೆಗಳನ್ನು ಅಭಿವೃದ್ಧಿಪಡಿಸುವುದು ಅಸಾಧ್ಯ. ಸರ್ಕಾರ ತಾರತಮ್ಯ ಮಾಡದೆ ತಕ್ಷಣವೇ ವಿಶೇಷ ಅನುದಾನ ಬಿಡುಗಡೆ ಮಾಡಬೇಕು ಎಂದು ಅವರು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಪುರಸಭಾ ಸದಸ್ಯರಾದ ಮೋಹಿನಿ ಗೌಡ, ತುಳಸು ಗೌಡ ಹಾಗೂ ಬಿಜೆಪಿ ಮುಖಂಡರಾದ ಹೇಮಂತಕುಮಾರ ಗಾಂವಕರ, ಪ್ರಸಾದ ನಾಯಕ, ಚೇತೇಶ್ ಶಾನಭಾಗ, ರಾಮ ಮಡಿವಾಳ, ನವೀನ್ ಪಟಗಾರ, ನಾಗರಾಜ ಹರಿಕಂತ್ರ ಮುಂತಾದವರು ಇದ್ದರು.

ಅಧಿಕಾರಿಗಳನ್ನು ಕಂಡು ಬೈಕ್ ಬಿಟ್ಟು ಪರಾರಿ: ಮುಡಗೇರಿ ಡ್ಯಾಂ ಬಳಿ 649 ಲೀಟರ್ ಅಕ್ರಮ ಮದ್ಯ ಜಪ್ತಿಕಾರವಾರ: ಗೋವಾದಿಂದ ಅಕ್ರಮವಾಗಿ ಸಾಗಾಟ ಮಾಡುತ...
20/11/2025

ಅಧಿಕಾರಿಗಳನ್ನು ಕಂಡು ಬೈಕ್ ಬಿಟ್ಟು ಪರಾರಿ: ಮುಡಗೇರಿ ಡ್ಯಾಂ ಬಳಿ 649 ಲೀಟರ್ ಅಕ್ರಮ ಮದ್ಯ ಜಪ್ತಿ

ಕಾರವಾರ: ಗೋವಾದಿಂದ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಭಾರೀ ಪ್ರಮಾಣದ ಮದ್ಯವನ್ನು ತಾಲೂಕಿನ ಮುಡಗೇರಿ ಡ್ಯಾಂ ಹತ್ತಿರದ ಅರಣ್ಯ ಪ್ರದೇಶದಲ್ಲಿ ಅಬಕಾರಿ ಇಲಾಖೆಯ ಅಧಿಕಾರಿಗಳು ವಶಪಡಿಸಿಕೊಂಡ ಘಟನೆ ಗುರುವಾರ ಬೆಳಿಗ್ಗೆ ನಡೆದಿದೆ. ದಾಳಿಯ ವೇಳೆ ಅಧಿಕಾರಿಗಳನ್ನು ಕಂಡ ಆರೋಪಿಗಳು ಸ್ಥಳದಲ್ಲೇ ವಾಹನಗಳನ್ನು ಬಿಟ್ಟು ಪರಾರಿಯಾಗಿದ್ದಾರೆ.

ಖಚಿತ ಸುಳಿವಿನ ಮೇರೆಗೆ ಗುರುವಾರ ಬೆಳಿಗ್ಗೆ ಸುಮಾರು 9 ಗಂಟೆಗೆ ಅಬಕಾರಿ ಅಧಿಕಾರಿಗಳು ಮುಡಗೇರಿ ಅರಣ್ಯ ಪ್ರದೇಶದಲ್ಲಿ ಗಸ್ತು ನಡೆಸುತ್ತಿದ್ದ ವೇಳೆ ಈ ಪ್ರಕರಣ ಬೆಳಕಿಗೆ ಬಂದಿದೆ. ಐದು ದ್ವಿಚಕ್ರ ವಾಹನಗಳಲ್ಲಿ ಈ ಅಕ್ರಮ ಮದ್ಯ ಸಾಗಾಟ ನಡೆಯುತ್ತಿತ್ತು.

ದಾಳಿಯಲ್ಲಿ ಒಟ್ಟು 649.610 ಲೀಟರ್ ಮದ್ಯವನ್ನು ಜಪ್ತಿ ಮಾಡಲಾಗಿದೆ. ಇದರಲ್ಲಿ ಗೋವಾ ಫೆನ್ನಿ (304.830 ಲೀ), ಗೋವಾ ಮದ್ಯ (284.280 ಲೀ) ಹಾಗೂ ಬಿಯರ್ (60.500 ಲೀ) ಸೇರಿದೆ. ವಶಪಡಿಸಿಕೊಂಡ ಮದ್ಯದ ಅಂದಾಜು ಮೌಲ್ಯ ರೂ. 3,62,350 ಎಂದು ಅಂದಾಜಿಸಲಾಗಿದೆ.
ಅಲ್ಲದೆ ಮದ್ಯ ಸಾಗಣೆಗೆ ಬಳಸಲಾಗಿದ್ದ 4,00,000 ರೂ. ಮೌಲ್ಯದ ಐದು ದ್ವಿಚಕ್ರ ವಾಹನಗಳನ್ನೂ ಅಬಕಾರಿ ಇಲಾಖೆ ವಶಕ್ಕೆ ಪಡೆದಿದ್ದು, ಒಟ್ಟು ಜಪ್ತಿ ಮಾಡಿದ ಸೊತ್ತಿನ ಮೌಲ್ಯ ರೂ. 7,62,350 ಆಗಿದೆ. ಪರಾರಿಯಾಗಿರುವ ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ.

ಮಂಗಳೂರು ವಿಭಾಗದ ಅಬಕಾರಿ ಜಂಟಿ ಆಯುಕ್ತರು ಹಾಗೂ ಉತ್ತರ ಕನ್ನಡ ಜಿಲ್ಲಾ ಅಬಕಾರಿ ಉಪ ಆಯುಕ್ತರ ನಿರ್ದೇಶನದಂತೆ ನಡೆದ ಈ ಕಾರ್ಯಾಚರಣೆಯಲ್ಲಿ, ಅಬಕಾರಿ ಉಪ ಅಧೀಕ್ಷಕ ರಮೇಶ್ ಬಿ. ಭಜಂತ್ರಿ, ನಿರೀಕ್ಷಕ ರಂಜೀತಕುಮಾರ ಮೀತ್ರಾ, ಉಪ ನಿರೀಕ್ಷಕ ನಾಗರಾಜ ಕೊಟಗಿ, ಸಿಬ್ಬಂದಿಗಳಾದ ಪ್ರವೀಣಕುಮಾರ ಕಲ್ಲೊಳ್ಳಿ, ಹೇಮಚಂದ್ರ ಈರಣ್ಣನವರ್, ವಿರೇಶ ಕುರಿಯವರ ಹಾಗೂ ವಾಹನ ಚಾಲಕರಾದ ಇಮ್ಮಿಯಾಝ್ ಮತ್ತು ಪವನ ಮಸೂರಕರ ಪಾಲ್ಗೊಂಡಿದ್ದರು.

ಧರ್ಮ, ಸಹಕಾರ ಮತ್ತು ಜನಸೇವೆ: ಗೋಕರ್ಣದ ರಾಜಗೋಪಾಲ ಅಡಿ ಎಂಬ ಬಹುಮುಖಿ ವ್ಯಕ್ತಿತ್ವಕ್ಕೆ ಇಂದು ಜನ್ಮದಿನಗೋಕರ್ಣ: ಇತ್ತೀಚೆಗೆ ನಡೆದ ಕೆಡಿಸಿಸಿ ಬ್...
02/11/2025

ಧರ್ಮ, ಸಹಕಾರ ಮತ್ತು ಜನಸೇವೆ: ಗೋಕರ್ಣದ ರಾಜಗೋಪಾಲ ಅಡಿ ಎಂಬ ಬಹುಮುಖಿ ವ್ಯಕ್ತಿತ್ವಕ್ಕೆ ಇಂದು ಜನ್ಮದಿನ

ಗೋಕರ್ಣ: ಇತ್ತೀಚೆಗೆ ನಡೆದ ಕೆಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಕುಮಟಾ ಕ್ಷೇತ್ರದಿಂದ ಜಯಭೇರಿ ಬಾರಿಸುವ ಮೂಲಕ ರಾಜಕೀಯ-ಸಹಕಾರಿ ವಲಯದಲ್ಲಿ ಸದ್ದು ಮಾಡಿದ ರಾಜಗೋಪಾಲ ಅಡಿ, ಕೇವಲ ಒಬ್ಬ ಸಹಕಾರಿ ಧುರೀಣ ಮಾತ್ರವಲ್ಲ. ಅವರು ಶ್ರೀಕ್ಷೇತ್ರ ಗೋಕರ್ಣದ ಧಾರ್ಮಿಕ ಪರಂಪರೆಯ ಪ್ರಧಾನ ಅರ್ಚಕರು, ಆಧುನಿಕ ಚಿಂತನೆಯ ಸಂಘಟಕರು ಹಾಗೂ ಜನಸೇವಕರೂ ಹೌದು. ಅವರ ಈ ಬಹುಮುಖಿ ವ್ಯಕ್ತಿತ್ವವೇ ಅವರನ್ನು ಗೋಕರ್ಣದ ಪ್ರಭಾವಿ ವ್ಯಕ್ತಿಗಳಲ್ಲಿ ಒಬ್ಬರನ್ನಾಗಿಸಿದೆ.

ಸಹಕಾರಿ ಕ್ಷೇತ್ರದಿಂದ 'ಕೆಡಿಸಿಸಿ'ವರೆಗೆ

ರಾಜಗೋಪಾಲ ಅಡಿಯವರು ಸಹಕಾರ ಕ್ಷೇತ್ರಕ್ಕೆ ಹೊಸಬರಲ್ಲ. ಗೋಕರ್ಣ ವ್ಯವಸಾಯ ಸೇವಾ ಸಹಕಾರಿ ಸಂಘ (VSS) ಅಧ್ಯಕ್ಷರಾಗಿ ಹಾಗೂ ಶ್ರೀ ಮಹಾಬಲೇಶ್ವರ ಸಹಕಾರಿ ಬ್ಯಾಂಕಿನ ನಿರ್ದೇಶಕರಾಗಿ ತಳಮಟ್ಟದಿಂದಲೇ ಕಾರ್ಯನಿರ್ವಹಿಸಿದ ಅನುಭವ ಅವರಿಗಿದೆ. ಇದೇ ಅನುಭವದ ಬಲದ ಮೇಲೆ, ಇತ್ತೀಚೆಗೆ ನಡೆದ ಜಿದ್ದಾಜಿದ್ದಿನ ಕೆಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಶಾಸಕ ಶಿವರಾಮ ಹೆಬ್ಬಾರ್ ಬಣದಿಂದ ಸ್ಪರ್ಧಿಸಿ, ತ್ರಿಕೋನ ಸ್ಪರ್ಧೆಯ ನಡುವೆಯೂ ಗೆಲುವು ಸಾಧಿಸಿದರು. ಈ ಗೆಲುವು ಹೆಬ್ಬಾರ್ ಪ್ಯಾನೆಲ್‌ಗೆ ದೊಡ್ಡ ಕೊಡುಗೆಯಾಗಿದ್ದು, ಅವರ ಸಂಘಟನಾ ಚಾತುರ್ಯವನ್ನು ಸಾಬೀತುಪಡಿಸಿದೆ.

ಧಾರ್ಮಿಕ ಕ್ಷೇತ್ರ: ಪರಂಪರೆಗೆ ಆಧುನಿಕ ಸ್ಪರ್ಶ

ಶ್ರೀ ರಾಜಗೋಪಾಲ ಅಡಿ ಅವರನ್ನು ಸಾವಿರಾರು ಭಕ್ತರು "ಗುರೂಜಿ" ಎಂದೇ ಗೌರವದಿಂದ ಕರೆಯುತ್ತಾರೆ. ಶ್ರೀಕ್ಷೇತ್ರ ಗೋಕರ್ಣ ಆನುವಂಶೀಯ ಉಪಾಧಿವಂತ ಮಂಡಳದ ಅಧ್ಯಕ್ಷರಾಗಿ ಮತ್ತು ಸಂಸ್ಥಾನ ಶ್ರೀಮಹಾಬಲೇಶ್ವರ ದೇವರ ಪ್ರಧಾನ ಅರ್ಚಕರಾಗಿ, ಅವರು ಕ್ಷೇತ್ರದ ಧಾರ್ಮಿಕ ವಿಧಿವಿಧಾನಗಳ ನೇತೃತ್ವ ವಹಿಸುತ್ತಾರೆ.
ಅವರ ಒಂದು ವಿನೂತನ ಮತ್ತು ಯಶಸ್ವಿ ಪ್ರಯತ್ನವೆಂದರೆ "ಗೋಕರ್ಣ ಪುಣ್ಯಾಶ್ರಮ".

ಗೋಕರ್ಣಕ್ಕೆ ಧಾರ್ಮಿಕ ಕಾರ್ಯಗಳಿಗಾಗಿ ಬರುವ ಯಾತ್ರಿಕರಿಗೆ, ಪುರಾತನ ಕಾಲದ ಪುರೋಹಿತರ ಮನೆಗಳಲ್ಲಿ ಸಿಗುತ್ತಿದ್ದ ಆತಿಥ್ಯವನ್ನೇ ಆಧುನಿಕ ಸ್ಪರ್ಶದೊಂದಿಗೆ ನೀಡುವುದು ಈ ಆಶ್ರಮದ ಪರಿಕಲ್ಪನೆ,ಮಾದರಿಯಲ್ಲಿ, ಯಾತ್ರಿಕರಿಗೆ ವಸತಿ ಮತ್ತು ಸಾಂಪ್ರದಾಯಿಕ ಊಟೋಪಚಾರದ ವ್ಯವಸ್ಥೆ ಮಾಡಲಾಗಿದೆ. "ಹಿಂದಿನಿಂದಲೂ ಗೋಕರ್ಣದ ಪರಂಪರೆಯಲ್ಲಿ ಅನ್ನಕ್ಕೆ ಕ್ರಯ ಸಲ್ಲ ಎಂಬ ನೀತಿ ಇದೆ. ಅದನ್ನು ನಾವು ಪುಣ್ಯಾಶ್ರಮದಲ್ಲಿ ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದೇವೆ" ಎನ್ನುತ್ತಾರೆ ರಾಜಗೋಪಾಲ ಅಡಿ ಗುರೂಜಿ.
ಇಲ್ಲಿ ಕೇವಲ ವಾಸ್ತವ್ಯವಲ್ಲದೆ, ಅವರದ್ದೇ ಆದ ಗೋಶಾಲೆಯನ್ನು ನಿರ್ಮಿಸಲಾಗಿದೆ. ಆಶ್ರಮದ ದಿನನಿತ್ಯದ ಧಾರ್ಮಿಕ ಕಾರ್ಯಗಳಿಗೆ ಬೇಕಾದ ಹಾಲನ್ನು ಇದೇ ಗೋಶಾಲೆಯಿಂದ ಪಡೆಯಲಾಗುತ್ತದೆ.

'ವೈದಿಕ್ ಟ್ರೀಟ್‌ಮೆಂಟ್' ಪರಿಕಲ್ಪನೆ

ಪುಣ್ಯಾಶ್ರಮದಲ್ಲಿ ಲೌಕಿಕ ತೊಂದರೆಗಳಿಗೆ ವೈದಿಕ ಪರಿಹಾರ ಸೂಚಿಸುವ ಪ್ರಯತ್ನವನ್ನೂ ಅಡಿ ಗುರೂಜಿ ಮಾಡುತ್ತಾರೆ. "ಲೌಕಿಕದ ತೊಂದರೆ ತಾಪತ್ರಯಗಳಿಗೆ ಅವರವರ ನಕ್ಷತ್ರ ಮತ್ತು ಗ್ರಹಗಳ ಸಂಚಾರವನ್ನು ಅಭ್ಯಸಿಸಿ 'ವೈದಿಕ್ ಟ್ರೀಟ್‌ಮೆಂಟ್' (ವೈದಿಕ ಶುಶ್ರೂಷೆ) ಕೊಡುವ ಪ್ರಯತ್ನವನ್ನು ಇಲ್ಲಿ ಮಾಡಲಾಗುತ್ತದೆ. ದೀಪ ಪೂಜನ, ಯಜ್ಞ-ಯಾಗ ಸೇರಿದಂತೆ ಎಲ್ಲ ಶಾಸ್ತ್ರೋಕ್ತ ಕಾರ್ಯಗಳನ್ನು ಸಮರ್ಥ ಪುರೋಹಿತರ ಮೂಲಕ ನಡೆಸಿಕೊಡಲಾಗುತ್ತದೆ" ಎಂಬುದು ಅವರ ನಿಲುವು.

ಸಾಮಾಜಿಕ ನಾಯಕತ್ವ ಮತ್ತು ಜನಸೇವೆ

ರಾಜಗೋಪಾಲ ಅಡಿಯವರ ಕಾರ್ಯಕ್ಷೇತ್ರ ಕೇವಲ ಧರ್ಮ ಮತ್ತು ಸಹಕಾರಕ್ಕೆ ಸೀಮಿತವಾಗಿಲ್ಲ.
* ಗೋಕರ್ಣ ಉತ್ಸವದ ರೂವಾರಿ: ಈ ಬಾರಿಯ ಶಿವರಾತ್ರಿ ಸಂದರ್ಭದಲ್ಲಿ 3 ದಿನಗಳ ಕಾಲ ನಡೆದ "ಗೋಕರ್ಣ ಉತ್ಸವ"ದ ಯಶಸ್ಸಿನ ಸಂಪೂರ್ಣ ಶ್ರೇಯವನ್ನು ಶಾಸಕ ದಿನಕರ ಶೆಟ್ಟಿ ಅವರು ರಾಜಗೋಪಾಲ ಅಡಿ ಗುರೂಜಿಯವರಿಗೆ ನೀಡಿದ್ದಾರೆ. "ಉತ್ಸವದ ಸಂಪೂರ್ಣ ಅಧಿಕಾರವನ್ನು ರಾಜಗೋಪಾಲ ಅಡಿ ಗುರೂಜಿಯವರಿಗೆ ನೀಡಲಾಯಿತು, ಅವರ ಪ್ರಯತ್ನದಿಂದಾಗಿಯೇ ಕಾರ್ಯಕ್ರಮ ಇಷ್ಟು ಸಂಭ್ರಮದಿಂದ ನಡೆಯಿತು" ಎಂದು ಶಾಸಕರು ಸಾರ್ವಜನಿಕವಾಗಿಯೇ ಶ್ಲಾಘಿಸಿದ್ದಾರೆ.

* ಭಕ್ತರಿಗೆ ತಂಪುಪಾನೀಯ ವಿತರಣೆ: ಕಳೆದ 5 ವರ್ಷಗಳಿಂದ, ಮಹಾರಥೋತ್ಸವಕ್ಕೆ ಆಗಮಿಸುವ ಸಾವಿರಾರು ಭಕ್ತರಿಗೆ (ಸುಮಾರು 10,000+) ಅಡಿ ಗುರೂಜಿ ಮತ್ತು ಅವರ ಮಂಡಳಿಯ ವತಿಯಿಂದ ಮಜ್ಜಿಗೆ, ಬಾದಾಮ್ ಮಿಲ್ಕ್ ಮತ್ತಿತರ ತಂಪು ಪಾನೀಯಗಳನ್ನು ವಿತರಿಸುತ್ತಾ ಬಂದಿದ್ದಾರೆ. "ಸೆಕೆಯ ಬಳಲಿಕೆಗೆ ನಾವು ನೀಡುವ ತಂಪುಪಾನೀಯವನ್ನು ಭಕ್ತರು ಸೇವಿಸಿದರೆ ಅದೇ ನಮಗೆ ದೊಡ್ಡ ಭಾಗ್ಯ" ಎಂಬುದು ಅವರ ಸೇವಾ ಮನೋಭಾವ.

* ಶಿಕ್ಷಣಕ್ಕೆ ಕೊಡುಗೆ: ಸೇವಾ ಸಹಕಾರಿ ಸಂಘದ ವತಿಯಿಂದ ಕೆಲವು ಶಾಲೆಗಳಿಗೆ ಕಪಾಟು (ಅಲ್ಮೆರಾ) ಕೊಡುಗೆಯನ್ನು ನೀಡುವ ಮೂಲಕ ಶಿಕ್ಷಣ ಕ್ಷೇತ್ರಕ್ಕೂ ನೆರವು ನೀಡಿದ್ದಾರೆ.

* ಸಂತ್ರಸ್ತರಿಗೆ ನೆರವು: ಇತ್ತೀಚೆಗೆ ಶಿರೂರು ಗುಡ್ಡ ಕುಸಿತದಿಂದ ಸಂತ್ರಸ್ತರಾದ 50 ಕುಟುಂಬಗಳಿಗೆ, 'ಟೀಮ್ ವಾರಿಯರ್ಸ್ ಅಸೋಸಿಯೇಷನ್' ಜೊತೆಗೂಡಿ ದಿನಸಿ, ತಿಂಡಿ-ತಿನಿಸುಗಳು ಸೇರಿದಂತೆ ಅಗತ್ಯ ಪರಿಕರಗಳನ್ನು ವಿತರಿಸಿ ಮಾನವೀಯತೆ ಮೆರೆದಿದ್ದಾರೆ. "ಕಷ್ಟ ಎಲ್ಲರಿಗೂ ಬರುತ್ತದೆ, ಧೈರ್ಯವಾಗಿ ಎದುರಿಸಿ. ನಿಮ್ಮ ಕಷ್ಟ-ಸುಖದ ಜೊತೆ ನಾವಿದ್ದೇವೆ" ಎಂದು ಸಂತ್ರಸ್ತರಿಗೆ ಧೈರ್ಯ ತುಂಬಿದ್ದಾರೆ.

ಒಟ್ಟಿನಲ್ಲಿ, ಪುನೀತ್ ರಾಜಕುಮಾರ್ ಅವರಿಂದ ಹಿಡಿದು ಆದಿಚುಂಚನಗಿರಿ ಶ್ರೀಗಳವರೆಗೆ ಗಣ್ಯರಿಗೆ ಪೂಜೆ ನೆರವೇರಿಸುವ ಪ್ರಧಾನ ಅರ್ಚಕರಾಗಿ, ಸಹಕಾರಿ ಬ್ಯಾಂಕಿನ ಚುಕ್ಕಾಣಿ ಹಿಡಿಯುವ ನಿರ್ದೇಶಕರಾಗಿ ಮತ್ತು ಸಂತ್ರಸ್ತರ ಕಣ್ಣೀರು ಒರೆಸುವ ಸಮಾಜ ಸೇವಕರಾಗಿ, ರಾಜಗೋಪಾಲ ಅಡಿ ಗುರೂಜಿಯವರು ಗೋಕರ್ಣದ ಸಾಮಾಜಿಕ ಮತ್ತು ಧಾರ್ಮಿಕ ಜೀವನದ ಅವಿಭಾಜ್ಯ ಅಂಗವಾಗಿದ್ದಾರೆ.

ಅವರು ತಮ್ಮ ಈ ಜನಸೇವೆಯ ಪಯಣದಲ್ಲಿ ಇನ್ನಷ್ಟು ಎತ್ತರಕ್ಕೆ ಏರಲಿ ಎನ್ನುವುದು 'ಯುಕೆ ಎಕ್ಸ್‌ಪ್ರೆಸ್' (UK EXPRESS) ಹಾಗೂ ಸಮಸ್ತ ಜನರ ಆಶಯವಾಗಿದೆ.

ಉತ್ತರ ಕನ್ನಡದ ನದಿ ತಿರುವು, ಶರಾವತಿ ಯೋಜನೆಗಳನ್ನು ನಿಲ್ಲಿಸಲು ಸಿಎಂಗೆ ಆಗ್ರಹ: ಮುಖ್ಯಮಂತ್ರಿಗಳಿಗೆ ನಿಯೋಗದಿಂದ ಒಗ್ಗಟ್ಟಿನ ಮನವಿಕಾರವಾರ:ಉತ್ತ...
31/10/2025

ಉತ್ತರ ಕನ್ನಡದ ನದಿ ತಿರುವು, ಶರಾವತಿ ಯೋಜನೆಗಳನ್ನು ನಿಲ್ಲಿಸಲು ಸಿಎಂಗೆ ಆಗ್ರಹ: ಮುಖ್ಯಮಂತ್ರಿಗಳಿಗೆ ನಿಯೋಗದಿಂದ ಒಗ್ಗಟ್ಟಿನ ಮನವಿ

ಕಾರವಾರ:ಉತ್ತರ ಕನ್ನಡ ಜಿಲ್ಲೆಯಲ್ಲಿ ಪರಿಸರ ಮತ್ತು ಜನಜೀವನಕ್ಕೆ ತೀವ್ರ ಆತಂಕ ಸೃಷ್ಟಿಸಿರುವ ಬೇಡ್ತಿ-ವರದಾ, ಅಘನಾಶಿನಿ-ವೇದಾವತಿ ನದಿ ತಿರುವು ಯೋಜನೆಗಳು ಹಾಗೂ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗಳನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಆಗ್ರಹಿಸಿ ಉತ್ತರ ಕನ್ನಡ ಜಿಲ್ಲೆಯ ಪ್ರಮುಖರ ನಿಯೋಗವೊಂದು ಇಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.

ಈ ಯೋಜನೆಗಳ ಕುರಿತು ತಜ್ಞ ವಿಜ್ಞಾನಿಗಳ ಸಭೆ ನಡೆಸಬೇಕು ಮತ್ತು ಜಿಲ್ಲೆಯ ಒಟ್ಟಾರೆ ಧಾರಣಾ ಸಾಮರ್ಥ್ಯದ (Carrying Capacity) ಬಗ್ಗೆ ವೈಜ್ಞಾನಿಕ ಅಧ್ಯಯನ ನಡೆಸಬೇಕೆಂದು ನಿಯೋಗವು ಇದೇ ಸಂದರ್ಭದಲ್ಲಿ ಒತ್ತಾಯಿಸಿತು.

ಮನವಿಯಲ್ಲಿದ್ದ ಪ್ರಮುಖಾಂಶಗಳು:
ನಿಯೋಗವು ಸಲ್ಲಿಸಿದ ಮನವಿಯಲ್ಲಿ, ಈ ಯೋಜನೆಗಳಿಂದಾಗುವ ಅನಾಹುತಗಳ ಬಗ್ಗೆ ವಿವರಿಸಲಾಗಿದೆ. "ಬೇಡ್ತಿ ಮತ್ತು ಅಘನಾಶಿನಿ ಕಣಿವೆಗಳು ಪಶ್ಚಿಮ ಘಟ್ಟದ ಹೃದಯ ಭಾಗವಾಗಿದ್ದು, ಇಲ್ಲಿ ಅಣೆಕಟ್ಟು, ಕಾಲುವೆ, ರಸ್ತೆ ನಿರ್ಮಾಣವಾದರೆ ಭೂಕುಸಿತದಂತಹ ಅನಾಹುತಗಳು ಸಂಭವಿಸುತ್ತವೆ. ಅಂದಾಜು 2 ಲಕ್ಷ ಮಲೆನಾಡು ಕುಟುಂಬಗಳು ಹಾಗೂ ಕರಾವಳಿಯ ಮೀನುಗಾರರು ಈ ನದಿಗಳನ್ನೇ ಅವಲಂಬಿಸಿದ್ದಾರೆ. ಈ ಯೋಜನೆಗಳಿಂದ ನದಿಯಲ್ಲಿ ಸಿಹಿ ನೀರು ಕಡಿಮೆಯಾಗಿ, ಉಪ್ಪು ನೀರು ನುಗ್ಗುವ ಅಪಾಯವಿದ್ದು, ಮೀನುಗಾರರ ಬದುಕು ಅತಂತ್ರವಾಗಲಿದೆ," ಎಂದು ನಿಯೋಗವು ಕಳವಳ ವ್ಯಕ್ತಪಡಿಸಿದೆ.

ಸುಮಾರು 35,000 ಕೋಟಿ ರೂಪಾಯಿ ಅಂದಾಜು ವೆಚ್ಚದ ಈ "ನೀರಿಲ್ಲದ ನೀರಾವರಿ ಯೋಜನೆಗಳ" ಸಾಧ್ಯತಾ ವರದಿಯನ್ನು (Feasibility Report) ಜಲಸಂಪನ್ಮೂಲ ಇಲಾಖೆ ಸಿದ್ಧಪಡಿಸಿದ್ದು, ಕಳೆದ 3 ತಿಂಗಳಿಂದ ಈ ಯೋಜನೆಗಳ ವಿರುದ್ಧ ವ್ಯಾಪಕ ಜನಾಕ್ರೋಶ ವ್ಯಕ್ತವಾಗುತ್ತಿದೆ.

ಹಿಂದಿನ ಹೋರಾಟದ ನೆನಪಿಸಿದ ನಿಯೋಗ:
ಪೂಜ್ಯ ಸೋಂದಾ ಸ್ವರ್ಣವಲ್ಲಿ ಶ್ರೀಗಳ ನೇತತ್ವದಲ್ಲಿ 'ಬೇಡ್ತಿ ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ'ಯು ಈ ಯೋಜನೆಗಳ ವಿರುದ್ಧ ನಿರಂತರ ಹೋರಾಟ ನಡೆಸುತ್ತಿದೆ. 2021-22ರಲ್ಲಿ ನಡೆದ ಬೃಹತ್ ಪ್ರತಿಭಟನೆಯ ಫಲವಾಗಿ ಸರ್ಕಾರವು ಬೇಡ್ತಿ-ವರದಾ ಯೋಜನೆಯನ್ನು ನಿಲ್ಲಿಸಿತ್ತು ಎಂಬುದನ್ನು ನಿಯೋಗವು ಮುಖ್ಯಮಂತ್ರಿಗಳ ಗಮನಕ್ಕೆ ತಂದಿತು. ಆದ್ದರಿಂದ, ಯಾವುದೇ ಕಾರಣಕ್ಕೂ ಈ ಯೋಜನೆಗಳ ಡಿ.ಪಿ.ಆರ್. (DPR) ತಯಾರಿಗೆ ಮುಂದಾಗಬಾರದು ಎಂದು ಬಲವಾಗಿ ಆಗ್ರಹಿಸಲಾಯಿತು.

ಅತಿವೃಷ್ಟಿ ಪರಿಹಾರಕ್ಕೆ ಆಗ್ರಹ:
ಇದರ ಜೊತೆಗೆ, ಉತ್ತರ ಕನ್ನಡ ಜಿಲ್ಲೆಯಲ್ಲಿ ಅತಿವೃಷ್ಟಿ ಮತ್ತು ಪ್ರವಾಹದಿಂದ ರೈತರ ಬೆಳೆಗಳು ಸಂಪೂರ್ಣ ನಾಶವಾಗಿದ್ದು, ರೈತರು ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಆದ್ದರಿಂದ, ಬೆಳೆ ನಷ್ಟ ಪರಿಹಾರದ ಹಣವನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ನಿಯೋಗ ಒತ್ತಾಯಿಸಿತು.
ಹವಾಮಾನ ಆಧಾರಿತ ಬೆಳೆ ವಿಮೆ ಸಕಾಲದಲ್ಲಿ ದೊರಕಲು ಕ್ರಮ ಕೈಗೊಳ್ಳಬೇಕು, ಕೆಟ್ಟುನಿಂತಿರುವ ಹವಾಮಾನ ಮಾಪನ ಯಂತ್ರಗಳನ್ನು ತುರ್ತಾಗಿ ದುರಸ್ತಿಗೊಳಿಸಬೇಕು ಹಾಗೂ ಪ್ರವಾಹದಿಂದ ಹದಗೆಟ್ಟಿರುವ ಜಿಲ್ಲೆಯ ರಸ್ತೆಗಳ ದುರಸ್ತಿಗಾಗಿ ತಕ್ಷಣವೇ ಅಗತ್ಯ ಅನುದಾನ ಬಿಡುಗಡೆ ಮಾಡಬೇಕೆಂದು ಸಹ ವಿನಂತಿಸಲಾಯಿತು.

ನಿಯೋಗದಲ್ಲಿದ್ದ ಪ್ರಮುಖರು:
ಈ ನಿಯೋಗದಲ್ಲಿ ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕರಾದ ಭೀಮಣ್ಣ ನಾಯಕ್, ಶಿವರಾಮ್ ಹೆಬ್ಬಾರ್, ವಿಧಾನ ಪರಿಷತ್ ಸದಸ್ಯರಾದ ಶಾಂತರಾಮ್ ಸಿದ್ಧಿ, ಅಘನಾಶಿನಿ ಕೊಳ್ಳ ಸಮಿತಿಯ ಅಧ್ಯಕ್ಷರಾದ ಅನಂತ ಹೆಗಡೆ ಅಶಿಸರ, ಶ್ರೀ ಸ್ವರ್ಣವಲ್ಲಿ ಮಠದ ಅಧ್ಯಕ್ಷರಾದ ವಿ. ಎನ್. ಹೆಗಡೆ ಸೇರಿದಂತೆ ಹಲವು ಪ್ರಮುಖರು ಮತ್ತು ಪರಿಸರ ಹೋರಾಟಗಾರರು ಉಪಸ್ಥಿತರಿದ್ದರು.

​ಜಿಲ್ಲೆಯ ಹಿತಕ್ಕಾಗಿ ಪಕ್ಷಾತೀತ ಹೋರಾಟ:
​ಜಿಲ್ಲೆಯ ಸೂಕ್ಷ್ಮ ಪರಿಸರ ಮತ್ತು ಜನಜೀವನದ ಮೇಲಾಗುವ ಗಂಭೀರ ಪರಿಣಾಮಗಳನ್ನು ಮನಗಂಡು, ವಿವಿಧ ಪಕ್ಷಗಳ ಮುಖಂಡರು ಹಾಗೂ ಪರಿಸರ ಸಂಘಟನೆಗಳ ಪ್ರಮುಖರು ರಾಜಕೀಯ ಮರೆತು ಒಟ್ಟಾಗಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದು ಸಾರ್ವಜನಿಕ ವಲಯದಲ್ಲಿ ಉತ್ತಮ ಬೆಳವಣಿಗೆಯೆಂದು ಪರಿಗಣಿಸಲ್ಪಟ್ಟಿದೆ.

ವ್ಯವಸ್ಥೆಯ ಬಲಿಪಶು ಚಂದ್ರಹಾಸ; ಉತ್ತರ ಕನ್ನಡಕ್ಕೆ ಇನ್ನಾದರೂ ಬೇಕು ಸುಸಜ್ಜಿತ ಆಸ್ಪತ್ರೆಒಂದು ಸಾವಿನ ಸುತ್ತ ಎದ್ದ ಉತ್ತರಗಳು: 600 ಕಿ.ಮೀ ಅಲೆದ...
31/10/2025

ವ್ಯವಸ್ಥೆಯ ಬಲಿಪಶು ಚಂದ್ರಹಾಸ; ಉತ್ತರ ಕನ್ನಡಕ್ಕೆ ಇನ್ನಾದರೂ ಬೇಕು ಸುಸಜ್ಜಿತ ಆಸ್ಪತ್ರೆ

ಒಂದು ಸಾವಿನ ಸುತ್ತ ಎದ್ದ ಉತ್ತರಗಳು: 600 ಕಿ.ಮೀ ಅಲೆದಾಟ, ಆ್ಯಂಬುಲೆನ್ಸ್‌ನಲ್ಲೇ ಸಾವು... ಜಿಲ್ಲೆಯ ಆರೋಗ್ಯ ವ್ಯವಸ್ಥೆಯ ದುಸ್ಥಿತಿಗೆ ಹಿಡಿದ ಕನ್ನಡಿ.

ಕಾರವಾರ: ಅಂಕೋಲಾದ ಕೂಲಿಕಾರ್ಮಿಕ ಚಂದ್ರಹಾಸ ಆಗೇರ ಅವರ ದಾರುಣ ಸಾವು ಕೇವಲ ಒಂದು ಅಪಘಾತದ ದುರಂತ ಅಂತ್ಯವಲ್ಲ, ಬದಲಿಗೆ ಇದು ಉತ್ತರ ಕನ್ನಡ ಜಿಲ್ಲೆಯ ಆರೋಗ್ಯ ವ್ಯವಸ್ಥೆಯ ವೈಫಲ್ಯಕ್ಕೆ ಮತ್ತು ಒಂದು ಸುಸಜ್ಜಿತ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಇಲ್ಲದಿರುವುದರ ಭೀಕರ ಪರಿಣಾಮಕ್ಕೆ ಹಿಡಿದ ಕನ್ನಡಿಯಾಗಿದೆ. "ಜಿಲ್ಲೆಯಲ್ಲೇ ಸೂಕ್ತ ಚಿಕಿತ್ಸೆ ಸಿಕ್ಕಿದ್ದರೆ, ನಮ್ಮ ತಂದೆ ಬದುಕುಳಿಯುತ್ತಿದ್ದರು" ಎಂಬ ಮೃತರ ಮಗಳ ಕಣ್ಣೀರಿನ ಪ್ರಶ್ನೆ, ಇಡೀ ಜಿಲ್ಲೆಯ ಜನರ ದಶಕಗಳ ಬೇಡಿಕೆಯನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ.

ದುರಂತ ನೆನಪಿಸಿದ 'ಗೋಲ್ಡನ್ ಅವರ್' ವ್ಯರ್ಥ

ಅಪಘಾತವಾದ ತಕ್ಷಣ ಚಂದ್ರಹಾಸ ಅವರನ್ನು ಮೊದಲು ಅಂಕೋಲಾ, ನಂತರ ಕಾರವಾರದ ಕ್ರಿಮ್ಸ್‌ಗೆ ದಾಖಲಿಸಲಾಯಿತು. ಆದರೆ, ಗಂಭೀರ ಗಾಯಗಳಿಗೆ ತಕ್ಷಣದ ಉನ್ನತ ಮಟ್ಟದ ಚಿಕಿತ್ಸೆ (ವಿಶೇಷವಾಗಿ ನ್ಯೂರೋ ಅಥವಾ ಟ್ರಾಮಾ ಕೇರ್) ಕ್ರಿಮ್ಸ್‌ನಲ್ಲಿ ಲಭ್ಯವಿಲ್ಲದ ಕಾರಣ, ಅವರನ್ನು 270 ಕಿ.ಮೀ. ದೂರದ ಮಂಗಳೂರಿಗೆ ಶಿಫಾರಸು ಮಾಡಲಾಯಿತು.

ಈ ಒಂದು ನಿರ್ಧಾರವೇ, ರೋಗಿಯ ಬದುಕುಳಿಯುವಿಕೆಯ ನಿರ್ಣಾಯಕ 'ಗೋಲ್ಡನ್ ಅವರ್' (Golden Hour) ಅನ್ನು ಸಂಪೂರ್ಣವಾಗಿ ಕಸಿದುಕೊಂಡಿತು. ಚಿಕಿತ್ಸೆಗಾಗಿ 12 ಗಂಟೆಗಳ ಕಾಲ, 600 ಕಿ.ಮೀ. ಅಲೆದಾಡಿ, ಐದು ಆಸ್ಪತ್ರೆಗಳಿಂದ ನಿರಾಕರಣೆಗೊಂಡು, ಕೊನೆಗೆ ಆ್ಯಂಬುಲೆನ್ಸ್‌ನಲ್ಲೇ ಪ್ರಾಣ ಬಿಟ್ಟಿದ್ದು, ಜಿಲ್ಲೆಯ ಆರೋಗ್ಯ ವ್ಯವಸ್ಥೆಯ ಅಸಹಾಯಕತೆಯನ್ನು ಸಾಬೀತುಪಡಿಸಿದೆ.

ಜಿಲ್ಲೆಯ ಭೌಗೋಳಿಕ ಸವಾಲು ಮತ್ತು ಚಿಕಿತ್ಸೆಯ ಅನಿವಾರ್ಯ ವಲಸೆ

ಉತ್ತರ ಕನ್ನಡವು ರಾಜ್ಯದ ಅತಿ ದೊಡ್ಡ ಜಿಲ್ಲೆಗಳಲ್ಲಿ ಒಂದು. ಇದು ಕರಾವಳಿ, ಮಲೆನಾಡು ಮತ್ತು ಬಯಲುಸೀಮೆಯ ಭಾಗಗಳನ್ನು ಹೊಂದಿದೆ. ಆದರೆ, ಯಾವುದೇ ಗಂಭೀರ ಅಪಘಾತ, ಹೃದಯಾಘಾತ, ಪಾರ್ಶ್ವವಾಯು ಅಥವಾ ಇತರೆ ತುರ್ತು ಚಿಕಿತ್ಸೆಗಳಿಗೆ, ಜಿಲ್ಲೆಯ ಜನರು ಅನಿವಾರ್ಯವಾಗಿ ಮಂಗಳೂರು, ಮಣಿಪಾಲ, ಹುಬ್ಬಳ್ಳಿ, ಬೆಳಗಾವಿ ಅಥವಾ ನೆರೆಯ ಗೋವಾ ರಾಜ್ಯವನ್ನೇ ಅವಲಂಬಿಸಬೇಕಾಗಿದೆ.

"ಕಾರವಾರದ ಕ್ರಿಮ್ಸ್ ಜಿಲ್ಲಾ ಆಸ್ಪತ್ರೆಯಾಗಿ ಕಾರ್ಯನಿರ್ವಹಿಸುತ್ತಿದೆಯಾದರೂ, ಅದು ಸಂಕೀರ್ಣ ಪ್ರಕರಣಗಳನ್ನು ನಿಭಾಯಿಸಬಲ್ಲ 'ಸೂಪರ್ ಸ್ಪೆಷಾಲಿಟಿ' ಸೌಲಭ್ಯಗಳನ್ನು ಹೊಂದಿಲ್ಲ. ಹೀಗಾಗಿ ಪ್ರತಿ ಗಂಭೀರ ಪ್ರಕರಣವನ್ನೂ ನೂರಾರು ಕಿ.ಮೀ. ದೂರ ಸಾಗಿಸುವುದು ಅನಿವಾರ್ಯವಾಗಿದೆ. ಈ ಪಯಣದಲ್ಲಿಯೇ ಅನೇಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ," ಎನ್ನುತ್ತಾರೆ ಸ್ಥಳೀಯ ಹೋರಾಟಗಾರರು.

ಬಲಗೊಂಡ ಜನಾಗ್ರಹ: ಬೇಕೇಬೇಕು ಆಸ್ಪತ್ರೆ

ಚಂದ್ರಹಾಸ ಅವರ ಸಾವಿನ ಹಿನ್ನೆಲೆಯಲ್ಲಿ, ಆರೋಗ್ಯ ಸಚಿವರಿಗೆ ಪತ್ರ ಬರೆಯಲಾಗಿದ್ದು, ನ್ಯಾಯಾಂಗ ತನಿಖೆಗೆ ಒತ್ತಾಯಿಸಲಾಗಿದೆ. ಆದರೆ, ತನಿಖೆಗಳ ಜೊತೆಗೆ, ಇಂತಹ ಘಟನೆಗಳು ಮರುಕಳಿಸದಂತೆ ಶಾಶ್ವತ ಪರಿಹಾರ ಬೇಕು ಎಂಬುದು ಸಾರ್ವಜನಿಕರ ಒಕ್ಕೊರಲ ಆಗ್ರಹವಾಗಿದೆ.

* ರಾಷ್ಟ್ರೀಯ ಹೆದ್ದಾರಿ 66: ಈ ಹೆದ್ದಾರಿಯಲ್ಲಿ ನಿರಂತರ ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ. ಗಂಭೀರವಾಗಿ ಗಾಯಗೊಂಡವರಿಗೆ ತಕ್ಷಣದ ಚಿಕಿತ್ಸೆ ನೀಡಲು ಜಿಲ್ಲೆಯಲ್ಲಿ ಒಂದು ಉನ್ನತ ಮಟ್ಟದ ಟ್ರಾಮಾ ಕೇರ್ ಸೆಂಟರ್ ಇಲ್ಲ.

* ಬಡ ರೋಗಿಗಳ ಗೋಳು: ಮಂಗಳೂರಿನಂತಹ ನಗರಗಳಲ್ಲಿ ಖಾಸಗಿ ಆಸ್ಪತ್ರೆಗಳು 'ಆಯುಷ್ಮಾನ್ ಕಾರ್ಡ್' ನಿರಾಕರಿಸುವುದು ಅಥವಾ ಲಕ್ಷಗಟ್ಟಲೆ ಮುಂಗಡ ಕೇಳುವುದು ಬಡ ರೋಗಿಗಳನ್ನು ಅಕ್ಷರಶಃ ಸಾವಿನ ದವಡೆಗೆ ತಳ್ಳುತ್ತಿದೆ.

ಒಟ್ಟಾರೆ ಆಗ್ರಹ:
ಚಂದ್ರಹಾಸ ಆಗೇರ ಅವರ ಸಾವು ವ್ಯರ್ಥವಾಗಬಾರದು. ಇದು ವ್ಯವಸ್ಥೆಯ ಕಣ್ಣು ತೆರೆಸಬೇಕಿದೆ. ಸರ್ಕಾರವು ತಕ್ಷಣವೇ ಉತ್ತರ ಕನ್ನಡ ಜಿಲ್ಲೆಯ ಭೌಗೋಳಿಕ ಅಗತ್ಯವನ್ನು ಪರಿಗಣಿಸಿ, ಕಾರವಾರದ ಕ್ರಿಮ್ಸ್ ಅನ್ನು ಉನ್ನತ ಮಟ್ಟದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಲು ಅಥವಾ ಹೊಸ ಆಸ್ಪತ್ರೆಯನ್ನು ಸ್ಥಾಪಿಸಲು ತುರ್ತು ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ, ಚಂದ್ರಹಾಸ ಅವರಂತಹ ನೂರಾರು ಅಮಾಯಕರು ಚಿಕಿತ್ಸೆಗಾಗಿ ಅಲೆದಾಡಿ ಪ್ರಾಣ ಬಿಡುವುದು ಮುಂದುವರೆಯುತ್ತದೆ.

15/07/2025

ಮಹಾಮಂಡಲೇಶ್ವರ 1008, ಸದ್ಗುರು, ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ "ಕೋನಳ್ಳಿ ಚಾತುರ್ಮಾಸ್ಯ ವ್ರತಾಚರಣೆ" ಯ 6ನೇ ದಿನವಾದ ಇಂದು, ಮಂಗಳವಾರ ಶ್ರೀಗಳ ಭಕ್ತಾಧಿಗಳು ಹೊರೆಕಾಣಿಕೆ ಸಹಿತ ಚಾತುರ್ಮಾಸ್ಯ ಕ್ಷೇತ್ರಕ್ಕೆ ಮೆರವಣಿಗೆಯಲ್ಲಿ ಬಂದರು.

ಅಧಿಕಾರಿ ಸಮರ್ಥನಿದ್ದರೆ ಇಲಾಖೆಯೇ  ಜನಪರವಾಗುತ್ತದೆ ಎನ್ನುವುದಕ್ಕೆ  ಸಾಕ್ಷಿಯಾದ "ಸೀಸೈ ಕಾಲುಸಂಕ''ಜೋಯಿಡಾ : ಇಲ್ಲಿನ ಜನರ ಸ್ವಕ್ಷೇತ್ರ ಕರ್ನಾಟ...
22/06/2025

ಅಧಿಕಾರಿ ಸಮರ್ಥನಿದ್ದರೆ ಇಲಾಖೆಯೇ ಜನಪರವಾಗುತ್ತದೆ ಎನ್ನುವುದಕ್ಕೆ ಸಾಕ್ಷಿಯಾದ "ಸೀಸೈ ಕಾಲುಸಂಕ''

ಜೋಯಿಡಾ : ಇಲ್ಲಿನ ಜನರ ಸ್ವಕ್ಷೇತ್ರ ಕರ್ನಾಟಕವಾದರೂ ಇವರು ಗೋವಾವನ್ನೇ ಕಾರ್ಯ ಕ್ಷೇತ್ರವನ್ನಾಗಿ ನೆಚ್ಚಿಕೊಂಡಿದ್ದಾರೆ. ಇಲ್ಲಿಗೆ ಬರುವ ಎಲ್ಲಾ ಯೋಜನೆಗಳು ವಿಳಂಬವಾಗೇ ತಲುಪುತ್ತದೆ ಮತ್ತು ಬಹುತೇಕ ಯೋಜನೆ ಕಳಪೆಯಾಗಿರುತ್ತದೆ ಎನ್ನುವುದಕ್ಕೆ ಮಳೆ ನೀರಿಗೆ ಕೊಚ್ಚಿಹೋದ ಸೀಸೈ ಗ್ರಾಮದ ಸೇತುವೆಯೇ ಸಾಕ್ಷಿ.

ಆದರೆ ಅಧಿಕಾರಿ ಸಮರ್ಥನಾಗಿದ್ದರೆ, ಜನಪರ ಚಿಂತಕನಾಗಿದ್ದರೆ ಎಲ್ಲಾ ಇಲಾಖೆಗಳ ಜೊತೆ ಸಮನ್ವಯ ಸಾಧಿಸುವುದರ ಜೊತೆಗೆ ಜನರ ಸಮಸ್ಯೆಗೆ ಪರಿಹಾರವನ್ನೂ ಹುಡುಕುತ್ತಾನೆ ಎನ್ನುವುದಕ್ಕೂ ಇದೇ ಸೀಸೈ ಗ್ರಾಮದ ಕಾಲುಸಂಕ ಸಾಕ್ಷಿಯಾಗಿದೆ.

ಎಲ್ಲರಿಗೂ ಗೊತ್ತಿರುವ ಹಾಗೆ ಜೋಯಿಡಾ ಹಿಂದುಳಿದ ತಾಲೂಕು. ಇಲ್ಲಿನ ಜನರು ಕಾಡಿನೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದಾರೆ. ಈ ಡಿಜಿಟಲ್ ಯುಗದಲ್ಲೂ ಮಾನವ ಸಂಚಾರಕ್ಕೆ ರಸ್ತೆಗಳೇ ಇಲ್ಲ ಎನ್ನುವಂತಹ ಜನವಸತಿ ಪ್ರದೇಶವೂ ಇಲ್ಲಿದೆ ಎಂದರೆ ನಾವೆಲ್ಲ ಆಶ್ಚರ್ಯ ಪಡಲೇಬೇಕು.

ಕುಣಬಿ ಜನರೇ ಹೆಚ್ಚಿರುವ ಜೋಯಿಡಾದ ಗುಡ್ಡಗಾಡು ಪ್ರದೇಶ ಬಜಾರಕುಣಂಗ ಗ್ರಾಮ ಪಂಚಾಯತದ ಸೀಸೈ ಗ್ರಾಮಕ್ಕೆ ಸುಮಾರು 10 ವರ್ಷಗಳ ಹಿಂದೆ ಜನರ ಅನುಕೂಲಕ್ಕೆ ಒಂದು ಸೇತುವೆ ನಿರ್ಮಿಸಲಾಗಿತ್ತು. ಆದರೆ ಆ ಸೇತುವೆ ನೀರಿನ ರಭಸಕ್ಕೆ ಕೊಚ್ಚಿಹೋಗಿದೆ. ತದನಂತರ ಗ್ರಾಮಸ್ಥರೇ ಸೇರಿ ಒಂದು ಕಾಲುಸಂಕ ಮಾಡಿಕೊಂಡಿದ್ದರು. ಮಳೆಯ ಆರ್ಭಟಕ್ಕೆ ಅದೂ ಕೂಡ ನೀರುಪಾಲಾಗಿದೆ. ಇಷ್ಟೆಲ್ಲ ಆದರೂ ಇಲ್ಲಿನ ಜನಕ್ಕೆ ತಾವೇನೂ ಮಾಡಬೇಕು ಎಂಬುದು ತೋಚಿಲ್ಲ. ಯಾಕೆಂದರೆ ಇಲ್ಲಿನ ಜನ ಡಿಜಿಟಲ್ ಯುಗದ ಮುಗ್ದರು, ಮೂಲಭೂತ ಸೌಕರ್ಯಗಳ ಬಗ್ಗೆ ಅರಿಯದ ಅಮಾಯಕರು.

ಇದಕ್ಕೆ ಹೇಳೋದು ಅಧಿಕಾರಿ ಜನಪರನಾಗಿದ್ದರೆ ಆತ ಜನರ ಸಮಸ್ಯೆಗೆ ಮರುಗುತ್ತಾನೆ. ಜನರ ಸಮಸ್ಯೆ ಪರಿಹರಿಸಲು ಹಾತೊರೆಯುತ್ತಾನೆ. ಅದೃಷ್ಟವಶಾತ್ ರಾಮನಗರ ಠಾಣೆಗೆ ಸಹೃದಯಿ ಮಹಾಂತೇಶ ಉದಯ ನಾಯಕ ಎನ್ನುವ ಪಿ.ಎಸ್.ಐ. ಸಿಕ್ಕ ಕಾರಣ ಇವರು ತನ್ನ ಠಾಣಾ ವ್ಯಾಪ್ತಿಯಲ್ಲಿ ಬರುವ ಸೀಸೈ ಗ್ರಾಮದ ಸೇತುವೆ ಮತ್ತು ನಂತರದ ಕಾಲುಸಂಕದ ಬಗ್ಗೆ ಪೊಲೀಸ್ ವರಿಷ್ಟಾಧಿಕಾರಿಗಳ ಗಮನ ಸೆಳೆದಿದ್ದಾರೆ.

ಸದಾ ಜನಪರವೇ ಯೋಚಿಸುವ ಪೊಲೀಸ್ ವರಿಷ್ಟಾಧಿಕಾರಿಗಳ ಕಿವಿಗೆ ಜನರು ಸಮಸ್ಯೆ ಅನುಭವಿಸುತ್ತಿದ್ದಾರೆ ಎಂದರೆ ಕೇಳಬೇಕೇ? ಅವರು ಸಂಬಂಧಪಟ್ಟ ಇಲಾಖೆ, ಇತರೇ ಆಡಳಿತದ ಜೊತೆ ಸಮನ್ವಯ ಸಾಧಿಸಿ ಸೀಸೈ ಗ್ರಾಮದ ಜನತೆಗೆ ಅನುಕೂಲ ಆಗಲಿ ಎನ್ನುವ ಕಾರಣಕ್ಕೆ ಈಗೊಂದು ತಾತ್ಕಾಲಿಕ ಸೇತುವೆ ನಿರ್ಮಾಣ ಕಾರ್ಯಕ್ಕೆ ಸಹಕರಿಸಿದ್ದಾರೆ. ಇವರ ಕಾರ್ಯ ಹೀಗೆಯೇ ಮುಂದುವರಿಯಲಿ, ಮುಂದೆ ನಮಗೊಂದು ಶಾಶ್ವತ ಪರಿಹಾರ ಕಲ್ಪಿಸಿಕೊಡುವಲ್ಲಿ ಇದೇ ಅಧಿಕಾರಿಗಳು ನೆರವಾಗಲಿ ಎಂದು ಊರ ನಾಗರಿಕರು ಬಯಸುವುದರ ಜೊತೆಗೆ ಜನಪರ ಅಧಿಕಾರಿಗಳ ಜೊತೆ ಸಮರ್ಥ ಪೊಲೀಸ್ ವರಿಷ್ಟಾಧಿಕಾರಿ ಎಂ. ನಾರಾಯಣ ಅವರ ಕಾರ್ಯವನ್ನು ಸೀಸೈ ಗ್ರಾಮದ ಜನ ಶ್ಲಾಘಿಸಿದ್ದಾರೆ.

Address


Website

Alerts

Be the first to know and let us send you an email when UK Express News posts news and promotions. Your email address will not be used for any other purpose, and you can unsubscribe at any time.

  • Want your business to be the top-listed Media Company?

Share