08/01/2026
ಿಮೆ 🤔
ಒಂದು ಕುಟುಂಬದಲ್ಲಿ ಗಂಡ ಹೆಂಡತಿ, ಇಬ್ಬರೂ ಬಹಳ ಅನ್ಯೋನ್ಯವಾಗಿದ್ದರು. ಆದರೆ ಇದ್ದಕ್ಕಿದ್ದಂತೆ ಹೆಂಡತಿ ಬಹಳ ಬೇಗ ತೀರಿಕೊಂಡಳು. ಅವರಿಗಿನ್ನೂ ಮಕ್ಕಳೂ ಆಗಿರಲಿಲ್ಲ. ಹಾಗಾಗಿ ಅವನು ಇನ್ನೊಂದು ಮದುವೆ ಮಾಡಿಕೊಂಡ.
ಎರಡನೇ ಹೆಂಡತಿ, ಇವನಿಗಿಂತ ವಯಸ್ಸಿನಲ್ಲಿ ಬಹಳ ಚಿಕ್ಕವಳು. ಇವಳಿಗೆ ಮಗನೊಬ್ಬ ಜನಿಸಿದ. ಮಗ ಇನ್ನೂ ಸಣ್ಣವನಿರುವಾಗಲೇ ಯಜಮಾನನಿಗೆ ಯಾವುದೋ ಕಾಯಿಲೆ ಶುರುವಾಯಿತು . ಅವನಿಗೆ ತಾನು ಇನ್ನು ಬದುಕುಳಿಯುವುದು ಕಷ್ಟ ಎಂದು ಖಚಿತವಾಯಿತು . ತನ್ನ ಹೆಂಡತಿ ಇನ್ನು ಚಿಕ್ಕ ವಯಸ್ಸಿನವಳು, ತಾನು ಸತ್ತ ನಂತರ ಆಕೆ ಮರು ಮದುವೆ ಮಾಡಿಕೊಳ್ಳಬಹುದು, ಆಗ ತನ್ನ ಮಗ ಅನಾಥನಾಗಬಹುದು ಎಂದೆನಿಸ ತೊಡಗಿತು ಅವನಿಗೆ. ಹಾಗಾಗಿ ಆತ,ಬಹಳ ವರ್ಷಗಳಿಂದ ತನ್ನ ಆಪ್ತ, ಪ್ರಾಮಾಣಿಕ ಸೇವಕ ನಾಗಿದ್ದ "ನಂದ" ನೆಂಬುವನನ್ನು ಕರೆದು ಹೇಳಿದ, ನಾನಿನ್ನು ಬಹಳ ದಿನ ಬದುಕುಳಿಯಲಾರೆ ಎನಿಸುತ್ತಿದೆ, ಆದ್ದರಿಂದ ನಾನು, ಇಷ್ಟು ದಿನ ಗಳಿಸಿದ ಅಪಾರವಾದ ಧನವನ್ನು, ಐಶ್ವರ್ಯವನ್ನು ನಿನ್ನ ಬಳಿ ಕೊಟ್ಟಿರುತ್ತೇನೆ, ಅದನ್ನು ನೀನು ಯಾರೂ ನೋಡದ ಒಂದು ಜಾಗದಲ್ಲಿಟ್ಟು ಕಾಪಾಡು,
ಅದು ಯಾರಿಗೂ ಗೊತ್ತಾಗಬಾರದು, ಮುಂದೆ ನನ್ನ ಮಗ, ಬೆಳೆದು ದೊಡ್ಡವನಾಗಿ ವಯಸ್ಸಿಗೆ ಬಂದಾಗ, ಈ ಧನವಿರುವ ಜಾಗವನ್ನು ಅವನಿಗೆ ನೀನು ತಿಳಿಸಬೇಕು, ನನ್ನ ನಂತರ ನೀನೇ ಅವನ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದುಹೇಳಿ, ಒಂದು ದೊಡ್ಡ ಪೆಟ್ಟಿಗೆಯಲ್ಲಿ ತನ್ನ ಅಪಾರವಾದ ಐಶ್ವರ್ಯವನ್ನು ಧನಸಂಪತ್ತನ್ನೂ ಇಟ್ಟು, ಅವನ ಕೈಗೆ ಅದರ ಜವಾಬ್ದಾರಿ ನೀಡಿದ.
ಅವನು ಹೇಳಿದಂತೆ ಅವನ ಸೇವಕ, ಆ ಪೆಟ್ಟಿಗೆಯನ್ನು ಯಾರಿಗೂ ಕಾಣದೆ ಹಾಗೆ ಕಾಡಿನಲ್ಲಿ ಒಂದೆಡೆ ಹೂತಿಟ್ಟು, ಅದು ನೆನಪಿನಲ್ಲಿರುವಂತೆ ಒಂದು ಗುರುತು ಮಾಡಿಟ್ಟುಕೊಂಡು ಆಗಾಗ್ಗೆ ಅದನ್ನು ನೋಡಿಕೊಂಡು ಬರುತ್ತಿದ್ದ.
ಇದಾಗಿ ಸ್ವಲ್ಪ ದಿನಗಳ ನಂತರ ಕುಟುಂಬದ ಯಜಮಾನ ತೀರಿಕೊಂಡ. ಆದರೆ ಅವನು ಅಂದುಕೊಂಡ ಹಾಗೆ ಅವನ ಹೆಂಡತಿ ಬೇರೆ ಮದುವೆಯಾಗಲಿಲ್ಲ. ಪಾಪ, ಆಕೆ, ತೀರಿಕೊಂಡ ಗಂಡನ ನೆನಪಲ್ಲೇ ಬದುಕುತ್ತಾ, ಮಗನನ್ನು ಚೆನ್ನಾಗಿ ಬೆಳೆಸಿದಳು. ಮಗ ದೊಡ್ಡವನಾದ. ಆದರೆ ದುಡಿಯುವ ಯಜಮಾನನಿಲ್ಲದ ಕಾರಣ , ಹಣದ ಅಭಾವ ಹೆಚ್ಚಾಗಿ, ಅವರಿಗೆ ಬದುಕು ಕಷ್ಟವಾಗ ತೊಡಗಿತು.
ಒಂದು ದಿನ ಆಕೆ ತನ್ನ ಮಗನ ಬಳಿ, ಮಗೂ, ನಿಮ್ಮ ತಂದೆ ತೀರಿಕೊಳ್ಳುವ ಮೊದಲು, ಮನೆಯಲ್ಲಿ ಅಪಾರ ಧನ ಸಂಪತ್ತು ಇತ್ತು, ಆದರೆ ಅದನ್ನು ಒಂದು ದಿನ ನಿನ್ನ ತಂದೆ, ಅವರ ಆಪ್ತ ಸೇವಕನಾದ ನಂದನಿಗೆ ಜೋಪಾನವಾಗಿಡಲೆಂದು ಕೊಟ್ಟಿದ್ದನ್ನು ನಾನು ನೋಡಿದ್ದೆ, ಅದು ಏನಾಯಿತು ಎಂದು, ನೀನೇ ಅವನನ್ನು ಕೇಳಿದರೆ, ಅದರ ಬಗ್ಗೆ ಅವನು ನಿನಗೆ ತಿಳಿಸಬಹುದು, ಈಗ ನೀನು ಹೇಗೂ ವಯಸ್ಸಿಗೆ ಬಂದಿರುವಿಯಲ್ಲಾ,ಒಮ್ಮೆ ನೀನೇ ಅವನನ್ನು ಕೇಳಿ ನೋಡು, ಎಂದು ಹೇಳಿದಳು.
ಯಜಮಾನನ ಮಗ, ನಂದನನ್ನು ಬಚ್ಚಿಟ್ಟ ಸಂಪತ್ತಿನ ಬಗ್ಗೆ ಕೇಳಿದಾಗ, ಆತ ಪ್ರಾಮಾಣಿಕವಾದ ಉತ್ತರವನ್ನೇ ನೀಡಿ, ನಾನು ಸಂಪತ್ತನ್ನು ಕಾಡಿನ ಒಂದು ಜಾಗದಲ್ಲಿ ಜೋಪಾನವಾಗಿ ಹೂತಿಟ್ಟಿರುವುದಾಗಿ ತಿಳಿಸಿ, ನೀನು ನನ್ನ ಜೊತೆಗೆ ಬಂದರೆ ಅದನ್ನು ತೋರಿಸುವುದಾಗಿ ಹೇಳಿದ.
ಮರುದಿನ ನಂದ ಹಾಗೂ ಯಜಮಾನನ ಮಗ, ಇಬ್ಬರೂ ಒಟ್ಟಿಗೆ ಕಾಡಿಗೆ ಹೋದರು. ಧನ ಸಂಪತ್ತನ್ನು ಹೂತಿಟ್ಟ ಜಾಗದ ಬಳಿಗೆ ಬಂದ ತಕ್ಷಣ, ಆಪ್ತ, ಪ್ರಾಮಾಣಿಕ ಸೇವಕ ನಂದನ ವರ್ತನೆಯೇ, ಬದಲಾಯಿತು. ಆತ ಯಜಮಾನನ ಮಗನ ಮೇಲೆ ರೇಗುತ್ತಾ , ದ್ವನಿ ಏರಿಸಿ , ಕಿರುಚತೊಡಗಿದ. ಯಾವ ಹಣ? ಯಾವ ಸಂಪತ್ತು ? ಅದು ಎಲ್ಲಿದೆ ಎಂದು ನನಗೆ ಗೊತ್ತಿಲ್ಲ, ಎಂದು ಯಜಮಾನನ ಮಗನ ಮೇಲೆ ಕೋಪಿಸಿಕೊಂಡು ರೇಗ ತೊಡಗಿದ.
ಗಾಬರಿಯಾದ ಯಾಜಮಾನನ ಮಗ, ಮನೆಗೆ ಹಿಂತಿರುಗಿ ಹೊರಟ. ಅವನ ಹಿಂದೆಯೇ ನಂದನೂ ಬಂದ.
ಮಾರನೇ ದಿನ ಬೆಳಗ್ಗೆ ಬಂದು ತನ್ನ ನಡತೆಯ ಬಗ್ಗೆ ಅವನಲ್ಲಿ ಕ್ಷಮೆ ಕೋರಿ, ಮತ್ತೆ ಅವನನ್ನು ಅದೇ ಜಾಗಕ್ಕೆ ಕರೆದುಕೊಂಡು ಬಂದ .ಮತ್ತೆ ಹಣ ಹೂತಿಟ್ಟ ಜಾಗವನ್ನು ನೋಡಿದ ತಕ್ಷಣ, ಅವನ ವರ್ತನೆ, ಬದಲಾಗತೊಡಗಿತು. ಅದರ ಬಗ್ಗೆ ತನಗೇನೂ ಗೊತ್ತಿಲ್ಲ ಎಂದು ಹೇಳತೊಡಗಿದ.
ಸುಮಾರು ಎರಡು ಮೂರು ಬಾರಿ ಹೀಗೇ ಆದಾಗ, ಯಜಮಾನನ ಮಗ, ಊರಿನಲ್ಲಿರುವ ಒಬ್ಬ ಪಂಡಿತರ ಬಳಿಗೆ ಹೋಗಿ, ನೆಡೆದ ವಿಷಯವನ್ನು ಅವರಿಗೆ ತಿಳಿಸಿ,ಇವನ ವರ್ತನೆ ಬಗ್ಗೆ ಅವರಿಗೆ ಹೇಳಿದ. ಆಗ ಪಂಡಿತರು,ಯಾವ ಜಾಗದಲ್ಲಿ ನಿಂತು ಅವನು ನಿನ್ನನ್ನು ಬೈಯ್ದು,ಕೂಗ ತೊಡಗುವನೊ, ಅದೇ ಜಾಗದಲ್ಲಿ ಸಂಪತ್ತನ್ನು ಬಚ್ಚಿಟ್ಟಿದ್ದಾನೆ,ಅನ್ನಿಸುತ್ತದೆ.ನೀನು ಇನ್ನಿಬ್ಬರನ್ನು ಆ ಜಾಗಕ್ಕೆ ಕರೆದುಕೊಂಡು ಹೋಗಿ, ನಂದನನ್ನು ಕಟ್ಟಿಹಾಕಿ, ಅಲ್ಲಿರುವ ಹಣ ಸಂಪತ್ತನ್ನು ತೆಗೆದುಕೊಂಡು ಬಾ , ನಿನ್ನ ಹಣ ನಿನ್ನ ಕೈಗೆ ಬಂದ ನಂತರ, ಆತ ಮತ್ತೆ ಮೊದಲಿನಂತಾಗುತ್ತಾನೆ, ಎಂದರು.
ಯಜಮಾನನ ಮಗ, ಪಂಡಿತರು ಹೇಳಿದಂತೆಯೇ , ತನ್ನ ಇಬ್ಬರು ಗೆಳೆಯರನ್ನು ಕಾಡಿಗೆ ಕರೆದುಕೊಂಡು ಹೋಗಿ,ನಂದನನ್ನು ಒಂದು ಮರಕ್ಕೆ ಕಟ್ಟಿಹಾಕಿ, ತನ್ನ ತಂದೆ ಇಟ್ಟ ,ಧನಸಂಪತ್ತನ್ನು ತೆಗೆದುಕೊಂಡು , ಮನೆಗೆ ಬಂದ. ನಂತರ ನಂದನನ್ನು ಬಿಡುಗಡೆ ಮಾಡಿದ.
ಬಿಡುಗಡೆಯಾಗಿ ಬಂದಮೇಲೆ, ನಂದ, ಮೊದಲಿನಂತೆಯೇ, ಪ್ರಾಮಾಣಿಕನಾಗಿ ಬದುಕ ತೊಡಗಿದ. ಹಣ ವೆಂಬುದು ಎಂಥಹ #ಪ್ರಾಮಾಣಿಕ ಮನುಷ್ಯನನ್ನು ಕೂಡಾ ಕೆಟ್ಟವನನ್ನಾಗಿ ಮಾಡಿಬಿಡುತ್ತದೆ. ಅದಕ್ಕೆ ಹಿರಿಯರು ಹೇಳಿರುವುದು," ಹಣವೆಂದರೆ ಹೆಣವೂ ಕೂಡಾ ಬಾಯಿ ಬಿಡುತ್ತದೆ" ಎಂದು.
ಹಣ, ಸಂಪತ್ತು ಎಂಬುದು,ಎಂತಹ ಪ್ರಾಮಾಣಿಕ ಮನುಷ್ಯನ ಬುದ್ಧಿ, ಮನಸ್ಸನ್ನೂ ಕೆಡಿಸುತ್ತದೆ. ಅದು ಎಂತಹ ಕೆಟ್ಟ ಕೆಲಸವನ್ನು ಕೂಡಾ ಅವನಿಂದ ಮಾಡಿಸಿ ಬಿಡುತ್ತದೆ. ಕೃಪೆ.. ▪️▪️▪️▪️▪️▪️
SiddaRajuGowda Bjp Mandya