04/10/2025
ನಿನ್ನ ಕನಸನ್ನು ನೀನೇ ನಿರ್ಧರಿಸು, ತಡ ಮಾಡಬೇಡ
ಇತ್ತೀಚೆಗೆ ಮಹಾರಾಷ್ಟ್ರದ ಚಂದ್ರಪುರ ಜಿಲ್ಲೆಯ ಅನುರಾಗ ಅನಿಲ ಬೊರಕರ ಎಂಬ ಯುವಕನೊಬ್ಬ, ವೈದ್ಯಕೀಯ ಪ್ರವೇಶ ಪರೀಕ್ಷೆ (ನೀಟ್ ಯುಜಿ-2025)ಯಲ್ಲಿ ಶೇ. 99.99 ಅಂಕ ಗಳಿಸುವ ಮೂಲಕ ದೇಶ ಮಟ್ಟದಲ್ಲಿ ಶ್ರೇಷ್ಠ ಅಂಕ ಗಳಿಸಿ, ಉತ್ತರಪ್ರದೇಶದ AIIMS ಕಾಲೇಜಿಗೆ ಸೇರ್ಪಡೆ ಆಗುವ ಅವಕಾಶ ಪಡೆದಿದ್ದರೂ, ವೈದ್ಯರಾಗಲು ಆಸಕ್ತಿ ಇಲ್ಲವೆಂದು ಡೆತ್‌ನೋಟ್ ಬರೆದು ತನ್ನ ಜೀವನವನ್ನು ಕೊನೆಗೊಳಿಸಿದ್ದಾನೆ. ಈ ಸುದ್ದಿ ದೇಶದಾದ್ಯಂತ ಅನೇಕರನ್ನು ಬೆಚ್ಚಿಬೀಳಿಸಿದೆ.
ಆ ಹುಡುಗ ಡಾಕ್ಟರ್ ಆಗುವ ಬದಲು ಉದ್ಯಮಿ ಆಗುವ ಕನಸು ಕಂಡಿದ್ದನಂತೆ. ಆದರೆ ಅದನ್ನು ಮನೆಯವರ ಮುಂದೆ ಹೇಳಲಾರದೇ, ಆ ಕಡೆ ಎಂಬಿಬಿಎಸ್ ಕಾಲೇಜಿಗೆ ಸೇರಲು ಮನಸ್ಸಿಲ್ಲದೇ ಕಾಲೇಜಿಗೆ ಹೋಗಬೇಕಾದ ದಿನವೇ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಈ ಘಟನೆಯು ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಅನುಭವಿಸುತ್ತಿರುವ ಒತ್ತಡಕ್ಕೆ ಸಾಕ್ಷಿಯಾಗಿದೆ. ಇದರಿಂದ ವಿದ್ಯಾರ್ಥಿಗಳು ಕಲಿಯಬೇಕಾದ ಪ್ರಮುಖ ಪಾಠ ಏನೆಂದರೆ ಶಾಲಾ ಅಂಕಗಳು, ಹುದ್ದೆಗಳು, ಪದವಿಗಳು ಮಾತ್ರ ಜೀವನವಲ್ಲ. ಅದು ನಿಮ್ಮ ಗುರಿ ತಲುಪಲು ಇರುವ ಒಂದು ಪ್ರಮುಖ ಹಂತ ಅಷ್ಟೇ. ನಿಮ್ಮ ಆಸಕ್ತಿ, ಮನಸ್ಸಿನ ಹಂಬಲ ಮತ್ತು ಜೀವನದ ಗುರಿ ಮುಖ್ಯ. ನಾವು ಯಾವ ದಾರಿಯಲ್ಲಿ ಸಂತೋಷದಿಂದ, ಉತ್ಸಾಹದಿಂದ ಬದುಕಬಹುದು ಎಂಬುದನ್ನು ಅರಿತುಕೊಳ್ಳುವುದು ಹೆಚ್ಚು ಮುಖ್ಯ.
1. ನಿಮಗೆ ಯಾವುದರಲ್ಲಿ ಆಸಕ್ತಿಯಿದೆ ಎಂಬುದನ್ನು ಗುರುತಿಸಿ
2. ಸೋಲು ಅಥವಾ ಒತ್ತಡಗಳಿಗೆ ತಲೆಕೆಡಿಸಿಕೊಳ್ಳಬೇಡಿ
3. ಯಶಸ್ಸು ಎಂದರೆ ಪಾಸಾಗುವುದು ಮಾತ್ರವಲ್ಲ, ಜೀವನದಲ್ಲಿ ಯಶಸ್ಸು ಸಾಧಿಸುವುದು ಮುಖ್ಯ
4. ಸಮಾಜಕ್ಕೆ ಬೇಕಿರುವುದು ನಿಮ್ಮ ನಗು, ನಿಮ್ಮ ಜೀವನ
ಆ ಯುವಕನ ಕಥೆ ನಮಗೆ ಒಂದು ದೊಡ್ಡ ಪಾಠ ಕಲಿಸುತ್ತದೆ: ಜೀವನವೇ ಮುಖ್ಯ, ಮಾರ್ಗ ಬದಲಿಸಬಹುದು ಆದರೆ ಜೀವ ಬದಲಿಸಲಾಗುವುದಿಲ್ಲ ಎಂಬುದನ್ನು ನಾವು ಅರಿತುಕೊಳ್ಳಬೇಕು.
ವಿದ್ಯಾರ್ಥಿಗಳೇ, ಕನಸುಗಳನ್ನು ಬೆಳೆಸಿಕೊಳ್ಳಿ, ಆದರೆ ಅವು ನಿಮ್ಮ ಹೃದಯದಿಂದ ಬರಬೇಕು. ಇತರರ ಒತ್ತಡದಿಂದ ಅಲ್ಲ. ಜೀವನ ಅಮೂಲ್ಯ, ಅದನ್ನು ಪ್ರೀತಿ, ಕನಸು ಮತ್ತು ಧೈರ್ಯದಿಂದ ಬೆಳೆಸಿಕೊಳ್ಳಿ.