
30/10/2024
ಭಾರತದ ಆತ್ಮವನ್ನೇ ಒಡೆಯಲು ಬ್ರಿಟಿಷರು ಬಳಸಿದ ವಕ್ಫ್, ಮುಸ್ಲಿಂ ಪರ್ಸನಲ್ ಲಾ ಎಂಬಿತ್ಯಾದಿ ಹತಾರಗಳನ್ನು ಬಳಸಿ ಕಾಂಗ್ರೆಸ್ ಆತ್ಮಹತ್ಯೆ ಮಾಡಿಕೊಳ್ಳಬೇಕೆ ?
ಡಾ ಬಸವರಾಜ್ ಇಟ್ನಾಳ
ಹತ್ತನೇ ಶತಮಾನದಲ್ಲಿ ಪರ್ಸಿಯಾ ದೇಶದ ಘಜನಿಗಳು, ಹನ್ನೊಂದನೇ ಶತಮಾನದಲ್ಲಿ ಘೋರಿಗಳು ಇಂದಿನ ಉತ್ತರ ಭಾರತದ ಕೆಲ ಭಾಗ, ಪಾಕಿಸ್ತಾನ, ಅಫ್ಘಾನಿಸ್ತಾನ, ಇಂದಿನ ತಜಾಕಿಸ್ತಾನ, ತುರ್ಕ್ಮೇನಿಸ್ತಾನ, ಇತ್ಯಾದಿ ಪ್ರದೇಶಗಳನ್ನು ಆಕ್ರಮಿಸಿದ್ದ ಕಾಲದಲ್ಲಿ ಮುಸ್ಲಿಂ ಸಾಮ್ರಾಜ್ಯದ ಧಾರ್ಮಿಕ ದೊರೆ ಖಲೀಫರು ಅಂತ ನಂಬಿದ್ದ ಇವರೆಲ್ಲ ಷರಿಯಾ ಪ್ರಕಾರವೇ ನ್ಯಾಯಿಕ ವ್ಯವಸ್ಥೆಯನ್ನು ನಡೆಸುತ್ತಿದ್ದರು. ಮುಂದೆ ಹನ್ನೆರಡನೇ ಶತಮಾನದ ಆಸುಪಾಸಿನಲ್ಲಿ ಬಂದ ಮಾಮಲೂಕರು ಹಿಂದಿನ ಅರಸರ ದಾಸರ ವಂಶದವರಾಗಿದ್ದರು. ಇವರ ನಂತರ ಖಿಲ್ಜಿ ವಂಶ ನಂತರ ತುಘಲಕ್ ವಂಶ ನಂತರ ಲೋಧಿ ವಂಶಗಳೆಲ್ಲವೂ ದೆಹಲಿಯ ಸುಲ್ತಾನರೆಂದೇ ಇತಿಹಾಸದಲ್ಲಿ ದಾಖಲು. ಯಾವಾಗ ಇವರು ದೆಹಲಿಯತ್ತ ಮುಖ ಮಾಡಿದರೋ ಅಂದಿನಿಂದ ಖಿಲಾಫತ್ ಜೊತೆಗಿನ ಇವರ ಸಂಬಂಧ ಹಳಸತೊಡಗಿತು. ಯಾಕೆಂದರೆ ದೆಹಲಿ ಮತ್ತು ಅಂದಿನ ಭಾರತಕ್ಕೆ ಇಸ್ಲಾಮ್ ಹೊರತು.
ದೆಹಲಿ ಸಾಮ್ರಾಜ್ಯ ಷರಿಯಾ ಪ್ರಕಾರವೇ ನಡೆಯಬೇಕು. ಆದ್ದರಿಂದ ಇಲ್ಲಿನ ಹಿಂದುಗಳ ಮೇಲೆ ಮುಸಲ್ಮಾನರಾಗಲು ಒತ್ತಾಯ ಹೇರಬೇಕು, ಇಲ್ಲವಾದಲ್ಲಿ ಅವರನ್ನೆಲ್ಲ ಕೊಲ್ಲಬೇಕು ಅಂತ ಉಲೇಮಾಗಳ ನಿಯೋಗ ಮಾಮಲೂಕ ದೊರೆ ಇಲ್ತಮಿಷ್ ಗೆ ಹೇಳಿದಾಗ, ಇಲ್ತಮಿಷ್ ಹೇಳುವುದೇನು ಗೊತ್ತೇ "ಅನ್ನದಲ್ಲಿ ಉಪ್ಪು ಇರುವಷ್ಟು ಮುಸ್ಲಿಮರು ಇದ್ದೇವೆ. ನೀವು ಹೇಳಿದಂಗೆಲ್ಲ ಮಾಡುವುದು ಅವಾಸ್ತವಿಕ ಮತ್ತು ಅಸಾಧ್ಯ. " ಆದರೆ ಹಿಂದೂ ಧರ್ಮವನ್ನು ಹಿಮ್ಮೆಟ್ಟಿಸಲು ಜೆಜಿಯಾ ಅನ್ನುವ `ಧರ್ಮ ತೆರಿಗೆ' ಯನ್ನು ಹೇರಲಾಯಿತು. ಈ ಸದರಿ `ಹಿಂದೂ ಧರ್ಮ ತೆರಿಗೆ' ಯಿಂದ ಬ್ರಾಹ್ಮಣರಿಗೆ ವಿನಾಯಿತಿ ಕೂಡ ಇತ್ತು. ಹೇ ನಮಗೆ ಮಾತ್ರ ಏಕೆ? ನಾವೆಲ್ಲಾ ಹಿಂದೂ ನಾವೆಲ್ಲಾ ಒಂದು. ನಮಗೆ ಮಾತ್ರ ಏಕೆ ಈ ವಿನಾಯಿತಿ ? ವಿನಾಯಿತಿ ಕೊಡುವುದಾದರೆ ನಮ್ಮ ಇಡೀ ಹಿಂದೂ ಸಮಾಜಕ್ಕೆ ಕೊಡಿ. ಇಲ್ಲವಾದಲ್ಲಿ ನಮಗೂ ಬೇಡ ಅಂತ ಈ ಬ್ರಾಹ್ಮಣೋತ್ತಮರು ಹೇಳಲೇ ಇಲ್ಲ !
ಹದಿನಾರನೇ ಶತಮಾನದಲ್ಲಿ ಬಾಬರ್ ಮೊದಲನೇ ಪಾಣಿಪತ್ ಕದನದ ಮೂಲಕ ಬಂದ ಮುಘಲ್ ಸಾಮ್ರಾಜ್ಯವಂತೂ ಖಲೀಫರೊಂದಿಗೆ ಹೆಚ್ಚೂ ಕಡಿಮೆ ಸಂಪರ್ಕವನ್ನೇ ಕಡಿದುಕೊಂಡಿತು. ಬಾಬರನ ಮಗ ಹುಮಾಯೂನ್ ಜೆಜಿಯಾ ತೆರಿಗೆಯನ್ನು ರದ್ದುಗೊಳಿಸಿದ. ಹುಮಾಯುನ್ ಮಗ ಅಕ್ಬರ್ ಹಿಂದೂ-ಮುಸ್ಲಿಂ ಏಕತೆಗೆ ದೀನ್ ಏ ಇಲಾಹಿ ಅನ್ನುವ ಹೊಸ ಧರ್ಮವನ್ನೇ ಶುರು ಮಾಡಿದ. ಹಿಂದೂ ರಾಜ ಹೇಮುವಿನೊಂದಿಗೆ ಎರಡನೇ ಪಾಣಿಪತ್ ಯುದ್ಧವನ್ನೂ ಮಾಡಿದ. ಅಕ್ಬರನ ಮಗ ಜಹಾಂಗೀರ್ ಈಸ್ಟ್ ಇಂಡಿಯಾ ಕಂಪನಿಗೆ ಇಲ್ಲಿ ವ್ಯಾಪಾರ ಮಾಡಲು ಅನುಮತಿ ಕೊಟ್ಟರೆ ಈತನ ಮಗ ಶಾ ಆಲಂ ಅಧಿಕಾರಕ್ಕೆ ಬರುವ ಹೊತ್ತಿಗೆ ಮೊಘಲ್ ಸಾಮ್ರಾಜ್ಯ ಅವನತಿಯತ್ತ ತಿರುಗಿ ಇಲ್ಲಿ ಮರಾಠರು ಆಫ್ಗನ್ ದೊರೆ ಅಹ್ಮದ್ ಷಾ ಅಬ್ದಾಲಿ ಜೊತೆ ಮೂರನೇ ಪಾಣಿಪತ್ ಯುದ್ಧ ಮಾಡಿ ಸೋತಿದ್ದರು. ಷಾ ಆಲಮನ ಸಾಮ್ರಾಜ್ಯ ನೋಡಿ ದೆಹಲಿಯಿಂದ ಪಾಲಂ ವರೆಗೆ ಅಂತ ತಮಾಷೆ ಮಾಡುವ ಸ್ಥಿತಿ ಹದಿನೆಂಟನೇ ಶತಮಾನದಲ್ಲಿತ್ತು. ಇದೇ ಷಾ ಆಲಂ ಎಂತ ಮೂರ್ಖ ಅಂದರೆ ತನ್ನ ಅಧಿಕಾರಿ ವರ್ಗಕ್ಕೆ ಸಂಬಳ ಕೊಟ್ಟು ತೆರಿಗೆ ಸಂಗ್ರಹಿಸುವುದು ದುಬಾರಿ ಅಂತನೋ ತನ್ನನ್ನು ಮೊಘಲ್ ದೊರೆ ಅಂತ ಗುರುತಿಸಿದ್ದಾಕೆ ಕ್ರತಜ್ಞತೆಗೋ 1765ರಲ್ಲಿ ಅಲಾಹಾಬಾದ್ ಒಪ್ಪಂದ ಮಾಡಿಕೊಳ್ಳುತ್ತಾನೆ. ಇದರ ಪ್ರಕಾರ ಮೊಘಲ್ ಸಾಮ್ರಾಜ್ಯದ ಎಲ್ಲಾ ತೆರಿಗೆಯನ್ನು ಈಸ್ಟ್ ಇಂಡಿಯಾ ಕಂಪನಿಯೇ ಸಂಗ್ರಹಿಸಿ ಸುಲ್ತಾನರಿಗೆ ಕೊಡುವುದು ಅಂತ. ಇಲ್ಲಿಂದಲೇ ಈಸ್ಟ್ ಇಂಡಿಯಾ ಕಂಪನಿಯ ಬೆಳವಣಿಗೆಯ ವೇಗ ಹೆಚ್ಚುವುದು. ಆಗಲೇ ಸೋತ ಮರಾಠಾ ಬ್ರಾಹ್ಮಣ ರಾಜರ ಒಳಜಗಳವನ್ನು ಉಪಯೋಗಿಸಿಕೊಂಡು ಈಸ್ಟ್ ಇಂಡಿಯಾ ಕಂಪನಿ ಅವರನ್ನು ತಮ್ಮ ಸಾಮಂತರನ್ನಾಗಿಸಿಕೊಂಡು ಅಗಾಧ ಪ್ರಮಾಣದಲ್ಲಿ ಬೆಳೆಯುತ್ತದೆ.
ಮೊಘಲ್ ದೊರೆ ಜಹಾಂಗೀರ್ ಮತ್ತವನ ಮಗ ಷಾ ಆಲಂ ಜೊತೆಗಿನ ಒಪ್ಪಂದಗಳೇ ಈಸ್ಟ್ ಇಂಡಿಯಾ ಕಂಪನಿಯ ತಳಹದಿ ಆದ್ದರಿಂದ ಭಾರತದ ಬಹುತೇಕ ಪ್ರದೇಶದಲ್ಲಿ ನೇರ ಅಥವಾ ಪರೋಕ್ಷ ಆಡಳಿತ ನಡೆಸಲು ಕಂಪನಿ ಮುಸ್ಲಿಂ ಪರ ಒಲವನ್ನು ಹೊಂದಿರುತ್ತದೆ - ಕಾನೂನು ವ್ಯವಸ್ಥೆಯ ವಿಚಾರದಲ್ಲಿ. ಹಾಗಂತ ಹಿಂದೂಗಳ ಮೇಲೆ ಹೆಚ್ಚುವರಿ ಒತ್ತಡ ಒತ್ತಾಯ ಏನೂ ಇರುವುದಿಲ್ಲ. ಹಿಂದುಗಳಿಗೆ ಹಿಂದೂ ಕಾನೂನು, ಮುಸ್ಲಿಮರಿಗೆ ಮುಸ್ಲಿಂ ಕಾನೂನು ಅನ್ವಯಿಸುತ್ತಾ ಆಡಳಿತ ಮಾಡುತ್ತದೆ. ಆದರೆ ಕ್ರಿಮಿನಲ್ ಲಾ ಮಾತ್ರ ಎಲ್ಲರಿಗೂ ಒಂದೇ, ಐಪಿಸಿ.
ಆದರೆ ಈಸ್ಟ್ ಇಂಡಿಯಾ ಕಂಪನಿಯ ಹೆಚ್ಚು ಕಡಿಮೆ ಎರಡು ನೂರು ವರ್ಷಗಳ ಆಳ್ವಿಕೆಗೆ ದೊಡ್ಡ ಪೆಟ್ಟು ಕೊಟ್ಟಿದ್ದೇ 1857ರ ಸಿಪಾಯಿ ದಂಗೆ. ಇದು ಸಾಧ್ಯವಾಗಿದ್ದೇ ಹಿಂದೂ-ಮುಸ್ಲಿಂ ಒಟ್ಟಾಗಿ ಹೋರಾಡಿದ್ದರಿಂದ. ಹಿಂದೂಗಳ ಗೋ ಭಕ್ತಿ, ಮುಸ್ಲಿಮರ ಹಂದಿ ದ್ವೇಷ ಇಬ್ಬರನ್ನೂ ಒಗ್ಗೂಡಿಸಿತ್ತು. ಈಸ್ಟ್ ಇಂಡಿಯಾ ಕಂಪನಿ ಈ ದಂಗೆಯಿಂದ ಎಷ್ಟು ಗಾಭರಿ ಆಯಿತೆಂದರೆ, ಕಂಪನಿ ನೇರವಾಗಿ ಬ್ರಿಟಿಷ್ ಸರಕಾರಕ್ಕೆ ತನ್ನ ಆಡಳಿತ ಪ್ರದೇಶವೆನ್ನೆಲ್ಲ ಬಿಟ್ಟುಕೊಟ್ಟು, ಇನ್ನು ಸರಕಾರ ಉಂಟು, ಭಾರತ ಉಂಟು ಅಂತ ನುಣುಚಿಕೊಂಡಿತು. ಆಗ ಭಾರತ ಬ್ರಿಟಿಷ್ ಸರಕಾರ, ತನ್ನ ಸಂಸತ್ತಿನ ಕಾನೂನು ಪ್ರಕಾರವೇ ಆಡಳಿತ ನಡೆಸಬಹುದಾದ ವಸಾಹತು ಆಯಿತು. ಆಗ ಬ್ರಿಟಿಷ್ ಸರಕಾರಕ್ಕೆ ಕಂಡಿದ್ದೇ ಹಿಂದೂ ಮುಸ್ಲಿಂ ಏಕತೆ. ಮತ್ತು ಇವರ ಮಧ್ಯದ ಐತಿಹಾಸಿಕ ಜಗಳಗಳು. ಅವರು ಮೊಟ್ಟ ಮೊದಲು ಮಾಡಿದ್ದು ಬಂಗಾಳ ಪ್ರಾಂತ್ಯದ ವಿಭಜನೆ - ಹಿಂದೂ ಬಾಹುಳ್ಯದ ಪಶ್ಚಿಮ ಮತ್ತು ಮುಸ್ಲಿಂ ಬಾಹುಳ್ಯದ ಪೂರ್ವ ಬಂಗಾಳ ಅಂತ. ಇದನ್ನು ಎರಡೂ ಕೋಮುಗಳು ವಿರೋಧಿಸಿದ್ದಕ್ಕೆ ಕೆಲವೇ ವರ್ಷಗಳಲ್ಲಿ ಮರು ಏಕೀಕರಣವೂ ನಡೆಯುತ್ತದೆ. ಅಷ್ಟೊತ್ತಿಗೆ ಮುಂಬಯಿಯಲ್ಲಿ ಅಂದಿನ ಮೇಲ್ವರ್ಗದ ಶ್ರೀಮಂತರ ಪಕ್ಷ ಅಂತ ಟೀಕೆಗೆ ಒಳಗಾಗುತ್ತಲೇ ಇಂಡಿಯನ್ ನ್ಯಾಶನಲ್ ಕಾಂಗ್ರೆಸ್ಸು ಹುಟ್ಟುತ್ತದೆ.
ಕಾಂಗ್ರೆಸ್ಸು ಇಲ್ಲಿ ಸಂಸದೀಯ ವ್ಯವಸ್ಥೆ ಬೇಕು ಅಂತ ಒತ್ತಡ ಹೇರಲು ಬ್ರಿಟಿಷ್ ಸರಕಾರ ಮಾರ್ಲೆ ಮಿಂಟೋ ಸುಧಾರಣಾ ಕಾಯಿದೆ ತಂದು ಭಾರತದ ವೈಸ್ ರಾಯ್ ಕೆಳಗೆ ಕೇಂದ್ರ ಶಾಸನ ಸಭೆ, ಪ್ರಾಂತೀಯ ಶಾಶನ ಸಭೆಗೆ ಗವರ್ನರ್ ಇತ್ಯಾದಿ ವ್ಯವಸ್ಥೆ ತಂದು ಕೇಂದ್ರ ಮತ್ತು ಪ್ರಾಂತೀಯ ಶಾಸನ ಸಭೆಗೆ ಸದಸ್ಯರು ಚುನಾಯಿತರಾಗಿರಬೇಕು ಅಂತ ಕಾನೂನು ಬರುತ್ತದೆ. ಈ ಮಾರ್ಲೆ ಮಿಂಟೋ ಸುಧಾರಣೆ ಮುಂದೆ 1909ರ ಗವರ್ನಮೆಂಟ್ ಆ ಇಂಡಿಯಾ ಆಕ್ಟ್. ಈ ಕಾನೂನಿನ ಪ್ರಕಾರ ಮುಸ್ಲಿಮರಿಗೆ ಹೆಚ್ಚುವರಿ ಸದಸ್ಯತ್ವವನ್ನು ಎಲ್ಲಾ ಶಾಸನ ಸಭೆಗಳಲ್ಲಿ ಏರ್ಪಡಿಸಲಾಗುತ್ತದೆ -ಕಾರಣ ಆಗ ತಾನೇ ಹುಟ್ಟಿದ ಮುಸ್ಲಿಂ ಲೀಗ್ ಮತ್ತು ಲಾರ್ಡ್ ಮಿಂಟೋ ಜೊತೆಗಿನ ಒಪ್ಪಂದ. ಉದ್ದೇಶ ಬಹುಸಂಖ್ಯಾತ ಹಿಂದೂ ಪರ ಆಡಳಿತ ತಡೆಯುವುದು.
ಮುಂದೆ ಕೆಲ ವರ್ಷಗಳಲ್ಲಿ ಭಾರತಕ್ಕೆ ಮರಳಿದ ಬಾಪುವಿಗೆ ಇದೆಲ್ಲ ಕಂಡು ಇಲ್ಲಿ ಕೋಮು ಸೌಹಾರ್ದ ಇಲ್ಲದೇ ಬ್ರಿಟಿಷರನ್ನು ಎದುರಿಸಲು ಸಾಧ್ಯವೇ ಇಲ್ಲ ಅಂತ ಅನಿಸಿದ್ದು ಸಹಜ.
ತನ್ನ ಡಿವೈಡ್ ಆಂಡ್ ರೂಲ್ ಪಾಲಿಸಿಯಂತೆ ಬ್ರಿಟಿಷ್ ಸರಕಾರ 1923ರಲ್ಲಿ ಮುಸಲ್ಮಾನ್ ವಕ್ಫ್ ಆಕ್ಟ್ ಜಾರಿ ಮಾಡುತ್ತದೆ. ಷರಿಯಾ ಪ್ರಕಾರ ವಕ್ಫ್ ಅಂದರೆ ಮಾನಸಿಕ ಸ್ಥಿಮಿತ ಹೊಂದಿದ, ಹದಿನೆಂಟು ವರ್ಷ ಮೀರಿದ ಮುಸ್ಲಿಂ ಒಬ್ಬ ತಾನು ಪ್ರಶ್ನಾತೀತ ಮಾಲೀಕತ್ವ ಹೊಂದಿದ ಆಸ್ತಿಯನ್ನು ಸಮಾಜ ಸೇವೆಗಾಗಿ ಮುಡಿಪಾಗಿಡುವುದು. ಈ ಮುಡಿಪಿಗೆ ವಕ್ಫ್ ಅಂದರೆ, ಈ ದಾನಿಗೆ ವಾಕೀಫ್ ಅಂತಾರೆ ಮತ್ತು ಈ ದಾನ ಶಾಶ್ವತ. ಅಂದರೆ ದಾನಿಯ ವಾರಸುದಾರರೇ ಆಗಲಿ ಮತ್ಯಾರೇ ಆಗಿರಲಿ ಇದನ್ನು ರದ್ದುಗೊಳಿಸಲು ಆಗುವುದಿಲ್ಲ.
ಮುಂದೆ 1937ರಲ್ಲಿ ಮುಸ್ಲಿಂ ಪರ್ಸನಲ್ ಲಾ (ಷರಿಯತ್ ) ಅಪ್ಲಿಕೇಶನ್ ಆಕ್ಟ್ ಅನ್ನು ಬ್ರಿಟಿಷ್ ಸರಕಾರ ಜಾರಿಗೊಳಿಸುತ್ತದೆ. ಅಷ್ಟೊತ್ತಿಗೆ ಮುಸ್ಲಿಂ ಲೀಗ್ ಒಂದು ಕಡೆ, ಇನ್ನೊಂದು ಕಡೆಗೆ ಹಿಂದೂ ಮಹಾಸಭಾ ಮತ್ತು ಆರ್ ಎಸ್ ಎಸ್ ಕೋಮು ದ್ವೇಷ ಬೆಳೆಸುತ್ತಾ ಬ್ರಿಟಿಷರ ಡಿವೈಡ್ ಆಂಡ್ ರೂಲ್ ಪಾಲಿಸಿಗೆ ಪೂರಕವಾಗಿದ್ದರೆ, ಬ್ರಿಟಿಷರ ವಿರುದ್ಧ ನಿಲ್ಲಲು ಗಾಂಧೀಜಿಗೆ ಹಿಂದೂ ಮುಸ್ಲಿಂ ಏಕತೆ ಮಾತ್ರ ಒಳ್ಳೆಯ ಉಪಾಯವಾಗಿ ಕಂಡಿತ್ತು. ಇತ್ತ ಜಿನ್ನಾ ಅತ್ತ ಹೆಡಗೇವಾರ್ ಮತ್ತಿತರು. ಇದೆಲ್ಲ ಸೇರಿ ಭಾರತ ಪಾಕಿಸ್ತಾನ ವಿಭಜನೆ ಆದಾಗ ಅಲ್ಲಿ ಜಿನ್ನಾ ಇಲ್ಲಿ ನೆಹರು ಸರಕಾರದ ಸಂಭ್ರಮದಲ್ಲಿದ್ದರೆ ಬಾಪು ಮೌನಕ್ಕೆ ಜಾರಿದ್ದರು.
ವಿಭಜನೆಯ ನಂತರ ನಡೆದ ನರಮೇಧ ನೋಡಿಯೂ ಕೂಡ ಅನೇಕ ಮುಸ್ಲಿಮರು ಭಾರತದಲ್ಲೇ ಉಳಿದರು. ಪಾಕಿಸ್ತಾನಕ್ಕೆ ಹೋದವರಿಗಿಂತ ಭಾರತದಲ್ಲೇ ಉಳಿದವರು ಹೆಚ್ಚು. ಧಾರ್ಮಿಕ ಮತ್ತು ವಯಕ್ತಿಕ ಮಟ್ಟದಲ್ಲಿ ಇವರಲ್ಲಿ ಸುರಕ್ಷತಾ ಭಾವನೆ ಮೂಡಿಸಲು ಅಷ್ಟೇ ಅಲ್ಲ ಭಾರತದಲ್ಲಿ ಎಲ್ಲ ಧರ್ಮಗಳೂ ಸುರಕ್ಷಿತ ಪಾಕಿಸ್ತಾನದ ತರ ನಾವು ಅಲ್ಲ ಅಂತ ನಿರೂಪಿಸುವುದು ನೆಹರೂವಿಗೆ ಅನಿವಾರ್ಯವಾಗಿತ್ತೇನೋ .. ಆದ್ದರಿಂದಲೇ ಬ್ರಿಟಿಷರು ಮಾಡಿದ್ದ ಷರಿಯತ್ ಕಾನೂನನ್ನು ಉಳಿಸಿಕೊಂಡ ನೆಹರು ಹೊಸ ವಕ್ಫ್ ಆಕ್ಟ್ ಅನ್ನು 1954ರಲ್ಲಿ ತರುತ್ತಾರೆ. ಹೊಸ ವಕ್ಫ್ ಕಾಯಿದೆಯಲ್ಲಿ ಯಾವುದಾದರೂ ಆಸ್ತಿ ಹಿಂದೆ -ಅಂದರೆ ಶತಮಾನಗಳೇ ಕಳೆದಿರಲಿ -ಯಾರಾದರೂ ಮಾಡಿದ ವಕ್ಫ್ ಅಂತ ವಕ್ಫ್ ಮಂಡಳಿಗೆ ಅನಿಸಿದರೆ ಅದನ್ನು ತನ್ನ ಅಸ್ತಿ ಅಂತ ಘೋಷಿಸಿಕೊಳ್ಳುವ ಅಧಿಕಾರ ಇರುತ್ತದೆ.
2013ರ ಮನ್ ಮೋಹನ್ ಸಿಂಗ್ ಸರಕಾರ ಮುಸ್ಲಿಮರೇತರು ವಕ್ಫ್ ಮಂಡಳಿಯ ಸದಸ್ಯರಾಗಿರಕೂಡದು ಅಂತ ಇನ್ನೊಂದು ತಿದ್ದುಪಡಿ ತರುತ್ತಾರೆ.
ಈಗ ನೋಡಿದರೆ ಭಾರತೀಯ ರೇಲ್ವೆ ಇಲಾಖೆ ನಂತರ ವಕ್ಫ್ ಇಡೀ ದೇಶದಲ್ಲಿ ಅತಿ ಹೆಚ್ಚು ಭೂ ಮಾಲೀಕತ್ವ ಹೊಂದಿದೆ. ವಕ್ಫ್ ಮಂಡಳಿ ಯಾವುದೋ ಓಬೀರಾಯನ ಕತೆ ಹೇಳಿ ಸರಕಾರೀ ಕಚೇರಿ, ವಿಧಾನ ಸೌಧ, ರೈತರ ಜಮೀನು ಕಂಡ ಕಂಡದ್ದೆಲ್ಲ ತನ್ನದೇ ಅಂತ ಕಬಳಿಸುತ್ತಾ ಹೊರಟಿದೆ.
ಜಮೀರನಂತ ಮೂರ್ಖನನ್ನು ವಕ್ಫ್ ಮಂತ್ರಿ ಮಾಡಿದ ಜಾಣ `ಸಮಾಜವಾದಿ'ಗೆ ಹಿಂದೂ ಮುಸ್ಲಿಂ ವಿಭಜನೆ, ಲಿಂಗಾಯತ ವಿಭಜನೆ ಎಲ್ಲಾ ಆಗಿ ಅಹಿಂದ ಮಾತ್ರ ಒಗ್ಗಟ್ಟಾಗಿದ್ದು ತಾನೇ ಕರ್ನಾಟಕದ ಅನಭಿಷಿಕ್ತ ದೊರೆ ಆಗಬೇಕು ಅನ್ನುವ ಹುಚ್ಚು ಕನಸು.
ಗಾಂಧೀಜಿ ಮತ್ತು ನೆಹರು ಮುಸ್ಲಿಂರ ವಿಶೇಷ ಸವಲತ್ತುಗಳನ್ನು ಸಹಿಸಿಕೊಳ್ಳಿ ಅಂತ ಆಗ ಹೇಳಿದ್ದಕ್ಕೆ ಒಂದು ಸಂದರ್ಭ ಇತ್ತು. ಈಗ ಆ ಸಂದರ್ಭ ಇಲ್ಲ. ಈಗ ಈ ವಕ್ಫ್ ಮತ್ತು ಶರಿಯಾಗಳನ್ನು ರದ್ದು ಗೊಳಿಸಿ ಎಲ್ಲರಿಗು ಸಮನಾದ ಕಾನೂನು ತರುವ ಸಂದರ್ಭ. ವಕ್ಫ್ ಮತ್ತು ಷರಿಯಾ ಬಗೆಗಿನ ಮೃದು ಧೋರಣೆ ಗಾಂಧೀಜಿ ಮತ್ತು ನೆಹರುಗಳು ಬ್ರಿಟಿಷ್ ಕಸವನ್ನು ಕತ್ತರಿಸಲು ಉಪಯೋಗಿಸಿದ ಹತಾರಗಳು. ಅವುಗಳನ್ನು ಉಪಯೋಗಿಸಿ ತನ್ನ ಕೈ ಕಾಲು ಕತ್ತರಿಸಿಕೊಳ್ಳುವ ಅಗತ್ಯ ಕಾಂಗ್ರೆಸ್ಸಿಗೆ 2024ರಲ್ಲಿ ಇದೆಯೇ ?