22/06/2025
ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲ್ಲೂಕು ಸರ್ಕಾರಿ ನೌಕರರ ಸಂಘ, ಜೇನುಗೂಡು ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ,ರಮಣ ಮಹರ್ಷಿ ಆಶ್ರಮ, ಜ್ಯೋತಿ ಗಾಯನ ಸಭಾ, ಮಾತೃ ವಾತ್ಸಲ್ಯ ಫೌಂಡೇಷನ್ ವತಿಯಿಂದ ಮರೆಯಾಲಾಗದ ಮಹಾನುಭಾವರು ಕಾರ್ಯಕ್ರಮವನ್ನು ತಾಲ್ಲೂಕಿನ ತಿರುಮಗೊಂಡನಹಳ್ಳಿಯ ರಮಣ ಮಹರ್ಷಿ ಆಶ್ರಮದಲ್ಲಿ ಶನಿವಾರ ಆಯೋಜಿಸಲಾಗಿತ್ತು.
ಮರೆಯಾಲಾಗದ ಮಹಾನುಭಾವರು ಕಾರ್ಯಕ್ರಮದಲ್ಲಿ ಇತ್ತೀಚಿಗೆ ನಿಧನರಾದ ಕವಿ ಎಚ್.ಎಸ್.ವೆಂಕಟೇಶ್ ಮೂರ್ತಿ ಮತ್ತು ಸಾಹಿತಿ ಡಾ.ಜಿ.ಎಸ್.ಸಿದ್ದಲಿಂಗಯ್ಯ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತು. ಶಿಕ್ಷಕರು ಮತ್ತು ಗಾಯಕರು ಎಚ್.ಎಸ್.ವೆಂಕಟೇಶಮೂರ್ತಿ ಅವರ ಗೀತೆಗಳ ಗಾಯನ ನಡೆಸಿಕೊಟ್ಟರು.
ಕವಿ ಬಿ.ಆರ್.ಲಕ್ಷ್ಮಣರಾವ್ ಮಾತನಾಡಿ ಎಚ್ಎಸ್ವಿ ಅವರು ಆನೇಕಲ್ನೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದರು. ಆನೇಕಲ್ ಅವರಿಗೆ ಎರಡನೇ ತವರುಮನೆಯಾಗಿತ್ತು. ಎಚ್ಎಸ್ವಿ ಅವರ ನಿಧನ ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ. ಎಚ್ಎಸ್ವಿ ಅವರು ಕುಟುಂಬವನ್ನು ಪ್ರೀತಿಸುವುದರ ಜೊತೆಗೆ ವಿಶ್ವ ಕುಟುಂಬಕ್ಕೆ ಬೆಲೆ ನೀಡುತ್ತಿದ್ದರು ಎಂದರು.
ಲೇಖಕ ಡಾ.ಎಚ್.ಎಸ್.ಸತ್ಯನಾರಾಯಣ್ ಮಾತನಾಡಿ ಮರಣವನ್ನು ಸ್ಮರಣೆಯಿಂದ ಗೆಲ್ಲಬೇಕು ಎಂಬ ಮಾತಿದೆ. ಅದರಂತೆ ಎಚ್ಎಸ್ವಿ ಅವರಂತಹ ಕವಿ ನಮ್ಮೊಂದಿಗೆ ಇಲ್ಲದಿದ್ದರೂ ಅವರ ಸಾಹಿತ್ಯ, ಕವಿತೆ, ಕವನಗಳು ನಮ್ಮೊಂದಿಗಿದೆ. ಎಚ್ಎಸ್ವಿ ಅವರು ಸಾಹಿತ್ಯ ಕೃಷಿಯಲ್ಲಿ 124 ಪುಸ್ತಕಗಳನ್ನು ಬರೆದಿದ್ದಾರೆ. ನಾಟಕ, ಕಥಾಸಂಕಲನ, ಶಿಶು ಸಾಹಿತ್ಯ ಸೇರಿದಂತೆ ಸಾಹಿತ್ಯದ ಎಲ್ಲಾ ಪ್ರಕಾರಗಳಿಗೂ ಕೊಡುಗೆ ನೀಡಿದ್ದಾರೆ ಎಂದರು.
ಸಾಹಿತ್ಯ ಶೂದ್ರ ಶ್ರೀನಿವಾಸ್, ಎಚ್ಎಸ್ವಿ ಅವರ ಕುಟುಂಬಸ್ಥರಾದ ಸುಧೀರ್, ಶಾಲಿನಿ, ಶ್ರೀರಮಣ ಮಹರ್ಷಿ ಆಶ್ರಮದ ಮುಖ್ಯಸ್ಥ ಬಿ.ಶ್ರೀನಿವಾಸರೆಡ್ಡಿ, ಕೆಎಸ್ನ ಟ್ರಸ್ಟ್ನ ಅಧ್ಯಕ್ಷ ಕಿಕ್ಕೀರಿ ಕೃಷ್ಣಮೂರ್ತಿ, ತಿಲಕ್ ನಗರ ಪೊಲೀಸ್ ಇನ್ಸ್ಪೆಕ್ಟರ್ ಕೆ.ವಿಶ್ವನಾಥ್, ಭುದಾಖಲೆ ಇಲಾಖೆಯ ಎಡಿಎಲ್ಆರ್ ಮದನ್, ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ವೆಂಕಟೇಶ್, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಧನಂಜಯ, ಅನುದಾನ ರಹಿತ ಶಾಲೆಗಳ ಒಕ್ಕೂಟದ ರವಿಕುಮಾರ್, ಡಿ.ಮುನಿರಾಜು, ಚಿನ್ಮಯ ಸೇವಾ ಸಂಸ್ಥೆಯ ಚಿನ್ನಪ್ಪ.ವೈ.ಚಿಕ್ಕಹಾಗಡೆ, ನಾಗವೇಣಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಚ್.ಮಂಜುನಾಥ್, ಗೌರವ ಅಧ್ಯಕ್ಷ ಶಿವಣ್ಣ, ಉಪಾಧ್ಯಕ್ಷ ಸರ್ವೆ ಚಂದ್ರಶೇಖರ್, ಜೇನುಗೂಡು ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಯ ಮಹೇಶ್ ಊಗಿನಹಳ್ಳಿ, ಮಾತೃ ವಾತ್ಸಲ್ಯ ಸಂಸ್ಥೆಯ ಅನ್ನಪೂರ್ಣ, ಕಂಠೀರವ ನೃತ್ಯ ಸಂಗೀತ ಸಭಾದ ಅಧ್ಯಕ್ಷ ಪಿ.ಧನಂಜಯ, ಜ್ಯೋತಿ ಗಾಯನ ಸಭಾದ ಭಾಗಪ್ಪ ಗೊರನಾಳ, ಸಾವಿತ್ರಿಭಾಯಿ ಫುಲೆ ಶಿಕ್ಷಕಿಯರ ಸಂಘದ ಅಧ್ಯಕ್ಷೆ ಸರೋಜಮ್ಮ ಇದ್ದರು.