15/05/2023
ಕೆ.ರಾಜಕುಮಾರ್
ಬರೆಯುತ್ತಾರೆ :
ಆತ್ಮಕಥನಗಳಿಗೊಂದು ನಿಖರ ತೋರುಗಂಬ:
ಸಾಮಾನ್ಯವಾಗಿ ಆತ್ಮಕಥನವೆಂದರೆ ತನ್ನ ಬಣ್ಣಿಸಿ, ಇದಿರ ಹಳಿಯಲು ತೆರೆದಿಟ್ಟ ಕೃತಿ. ಬಹುತೇಕ ಸಂದರ್ಭಗಳಲ್ಲಿ ತನ್ನ ಸಾಧನೆಗಳನ್ನು ಉತ್ಪ್ರೇಕ್ಷಿಸಿ ಸಾರುವ ಹೊತ್ತಗೆಯೂ ಹೌದು. ತನ್ನನ್ನು ತಾನು ಇರುವಂತೆ ತೆರೆದಿಟ್ಟುಕೊಳ್ಳುವ ಆತ್ಮಚರಿತ್ರೆಗಳು ಅಪರೂಪ. ಚರಿತ್ರಹೀನರೂ ಆತ್ಮಕಥನವೊಂದನ್ನು ರಚಿಸಿ ತಮ್ಮನ್ನು ತಾವು ಸ್ವಯಂ ವೈಭವೀಕರಿಸಿಕೊಂಡು ಪುನೀತರಾಗಲು ಯತ್ನಿಸಿರುವುದುಂಟು. ಇದಕ್ಕೆ ಅಪವಾದ ಎಂಬಂತೆ ಕನ್ನಡದಲ್ಲಿ ಇತ್ತೀಚೆಗೆ ಒಂದು ಅಪರೂಪದ ಬೃಹತ್ ಆತ್ಮಕಥನವೊಂದು ಪ್ರಕಟವಾಗಿದೆ. ಕನ್ನಡದ ಹಿರಿಯ ಗಾಯಕಿ, ಲೇಖಕಿ ಡಾ. ಎಚ್.ಆರ್. ಲೀಲಾವತಿ ಅವರ 'ಹಾಡಾಗಿ ಹರಿದಾಳೆ' ಬೃಹತ್ ಆತ್ಮಕಥನ ಈ ಆರೋಪಗಳಿಗೆ ಎಡೆಯೇ ಇಲ್ಲದಂತೆ ಹೊರಬಂದಿದೆ! ಇದರಲ್ಲಿನ ಪುಟಪುಟವೂ, ಪದಪದವೂ ನೇರ, ನಿರ್ಭಿಡ, ಪಾರದರ್ಶಕ.
ಲೇಖಕಿ ಹಾಡಾಗಿ ಅಷ್ಟೇ ಹರಿದಿಲ್ಲ; ಅಕ್ಷರವಾಗಿಯೂ ಹರಿದಿದ್ದಾರೆ. ಸರಳ ಪ್ರಸ್ತುತಿ. ನಿರಾಡಂಬರ ಶೈಲಿ. ಒಂದೇ ಗುಕ್ಕಿಗೆ ಓದಿಸಿಕೊಳ್ಳುವ ಗುಣ ಇದರ ಧನಾತ್ಮಕ ಅಂಶಗಳು. ಆತ್ಮಚರಿತ್ರೆಯಂತಹ ಬರೆಹದಲ್ಲಿ ಪ್ರಾಮಾಣಿಕತೆ ಇರಬೇಕು ಎಂಬ ನಿರೀಕ್ಷೆ ಸಹಜ. ಅಂತಹ ಅಪೇಕ್ಷೆ ಇಲ್ಲಿ "ಹಸಿಗೋಡೆಯ ಹರಳಿನಂತೆ ಹುಸಿಹೋಗದೆ", ಕಚ್ಚಿಕೊಂಡಿದೆ. ಇಡೀ ಕೃತಿಯ ತುಂಬಾ ಒಂದು ಸ್ವಸ್ಥ ಮನಸ್ಸು ತನ್ನನ್ನು ತಾನು ವಾಸ್ತವ ಆಕಾರ ಮತ್ತು ಗಾತ್ರದಲ್ಲಿ ತೆರೆದುಕೊಂಡಿದೆ. ತನ್ನ ಸಾಧನೆ, ಗೆಲುವುಗಳನ್ನಷ್ಟೇ ಬಿಂಬಿಸಿಕೊಂಡಿಲ್ಲ. ಸೋಲು, ಕೊರತೆ, ಮಿತಿಗಳಿಗೂ ಕನ್ನಡಿ ಹಿಡಿದಿದೆ. ಓದತೊಡಗಿದರೆ ಚಕಚಕನೆ ಸಾಗುವ ಶತಾಬ್ದಿ ರೈಲಿನಂತೆ ಓಡತೊಡಗುತ್ತದೆ. ಇದರ ರಚನೆಯನ್ನು "ಹಿಂದಕೆ ನೋಡುತ ಮುಂದಕೆ ಸಾಗುವ ನದಿಯಂತಿದರ ವಿಹಾರ" ಎನ್ನಬಹುದು. ತನ್ನ ಹರಿವಿನಲ್ಲಿ ಈ ಕೃತಿ ನಮ್ಮ ನಡುವಿನ ಒಂಬತ್ತು ದಶಕಗಳ ಸಾಂಸ್ಕೃತಿಕ, ಸಾಮಾಜಿಕ ಸಂಗತಿಗಳನ್ನು ಅನಾವರಣಗೊಳಿಸಿದೆ. ಹಾಗಾಗಿ ಇದೊಂದು ಆತ್ಮಚರಿತ್ರೆಯಷ್ಟೇ ಅಲ್ಲ; ಚರಿತ್ರೆಯೂ ಹೌದು.
ಘೋಷಣೆ, ಬರೆಹವಷ್ಟೇ ಸ್ತ್ರೀವಾದವಲ್ಲ; ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಸವಾಲುಗಳನ್ನು ಎದುರಿಸಿ ಈಸಿ ಜಯಿಸುವುದೂ ಸ್ತ್ರೀವಾದವೇ ಎಂಬುದನ್ನು ಈ ಹೊತ್ತಗೆ ಮನಗಾಣಿಸುತ್ತದೆ. ಇಂತಹ ಮಹತ್ತ್ವದ ಕೃತಿ ರಚಿಸಿದ ಲೇಖಕಿ ಎಲ್ಲರ ಅಭಿನಂದನೆಗೆ ಪಾತ್ರರು ಎಂಬ ಮಾತು ಇಲ್ಲಿ ಸವಕಲು ಮಾತಾಗದೆ, ಕ್ಲೀಷೆಯಾಗದೆ, ಚರ್ವಿತ ಚರ್ವಣವಾಗದೆ ಅಕ್ಷರಶಃ ನಿಜ ಎಂದಾಗುತ್ತದೆ. ಕನ್ನಡದಲ್ಲಿ ಹಾದಿತಪ್ಪಿದ ಆತ್ಮಕಥನಗಳಿಗೆ ಇದೊಂದು ನಿಖರ ತೋರುಗಂಬ. - ಕೆ. ರಾಜಕುಮಾರ್