29/11/2025
ಭಾಷೆಯು ಸಾಂಸ್ಕೃತಿಕ ಪರಂಪರೆ, ನಾಗರಿಕತೆಯ ಇತಿಹಾಸ, ಜ್ಞಾನ ಮತ್ತು ನಂಬಿಕೆಗಳನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯಲು ಸಹಕಾರಿಯಾಗುತ್ತದೆ ಎಂದು ದೊಡ್ಡಬಳ್ಳಾಪುರ ಉಪವಿಭಾಗದ ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತರಾದ ಜಿ.ಎಸ್.ಸ್ಮಿತಾ ತಿಳಿಸಿದರು.
ಅವರು ದೊಡ್ಡಬಳ್ಳಾಪುರ ತಾಲ್ಲೂಕಿನ ಜವಾಹರ ನವೋದಯ ವಿದ್ಯಾಲಯದಲ್ಲಿ ಕನ್ನಡ ಸಪ್ತಾಹ ಸಮಾರೋಪ, ಕನ್ನಡ ಜಾಗೃತ ಪರಿಷತ್ತು, ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕನ್ನಡ ಜಾಗೃತ ಸಮಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆಯುತ್ತಿರುವ ಸಾಹಿತ್ಯ ವಿಜ್ಞಾನ ಸಂಸ್ಕೃತಿ ಸಮಾಗಮ 2025 ಸಮಾರೋಪ ಕಾರ್ಯಕ್ರಮದಲ್ಲಿ ಕನ್ನಡ ಬಳಕೆ ಮತ್ತು ಬೆಳವಣಿಗೆ ಎಂಬ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು. ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕೆ ಭವ್ಯ ಪರಂಪರೆ ಇದೆ. ಭವ್ಯ ಪರಂಪರೆಯುಳ್ಳ ಕನ್ನಡ ಭಾಷೆಯ ಮೇಲೆ ಪ್ರತಿಯೊಬ್ಬ ಕನ್ನಡಿಗರು ಪ್ರೀತಿ ಬೆಳೆಸಿಕೊಳ್ಳಬೇಕಾಗಿರುವುದು ಅತ್ಯಗತ್ಯ. ಕನ್ನಡ ಭಾಷೆಯೂ ಕನ್ನಡಿಗರ ಸಂಸ್ಕೃತಿ ಮತ್ತು ಸ್ವಾಭಿಮಾನದ ಪ್ರತೀಕವಾಗಿದೆ ಎಂದರು.
ಕನ್ನಡ ಸಾಹಿತ್ಯ, ವಿಜ್ಞಾನ ಮತ್ತು ಸಂಸ್ಕೃತಿ ಸಮಾಗಮ 2025 ಕಾರ್ಯಕ್ರಮ ಕುರಿತು ಮಾತನಾಡಿದ ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪಿ.ಗೋವಿಂದರಾಜು, ಪ್ರತಿವರ್ಷ ನವೆಂಬರ್ ತಿಂಗಳಲ್ಲಿ ದೊಡ್ಡಬಳ್ಳಾಪುರ ವಿವಿಧ ಶಾಲಾ ಕಾಲೇಜುಗಳಲ್ಲಿ ಮೂವತ್ತು ವರ್ಷಗಳಿಂದ ಸಾಹಿತ್ಯ, ವಿಜ್ಞಾನ ಮತ್ತು ಸಂಸ್ಕೃತಿ ಸಮಾಗಮ ಕಾರ್ಯಕ್ರಮಗಳು ನಡೆಯುತ್ತಾ ಬರುತ್ತಿದೆ. ಈ ವರ್ಷ ಕುವೆಂಪು ರಚಿಸಿರುವ ನಾಡಗೀತೆಗೆ ನೂರು ವರ್ಷ ಆಗಿರುವುದರಿಂದ ಶತಮಾನದ ಸಂಭ್ರಮವನ್ನು ದೊಡ್ಡಬಳ್ಳಾಪುರದಲ್ಲಿ ಆಚರಿಸಲಾಯಿತು. ಇದರ ಜೊತೆಗೆ ಕನ್ನಡ ಪುಸ್ತಕ ಓದಿ ಬಹುಮಾನ ಗೆಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯನ್ನು ಸಹ ನಡೆಸಲಾಯಿತು. ಈ ಸ್ಪರ್ಧಾ ಪರೀಕ್ಷೆಯಲ್ಲಿ 523 ವಿದ್ಯಾರ್ಥಿಗಳು ಭಾಗವಹಿಸಿದ್ದರು ಎಂದರು.
ಜವಾಹರ ನವೋದಯ ವಿದ್ಯಾಲಯ ಪ್ರಾಂಶುಪಾಲ ಟಿ.ಪಳನಿ ವೇಲು ಮಾತನಾಡಿ, ದೊಡ್ಡಬಳ್ಳಾಪುರ ಜವಾಹರ ನವೋದಯ ವಿದ್ಯಾಲಯದಲ್ಲಿ ಪ್ರತಿ ವರ್ಷ ನವೆಂಬರ್ ತಿಂಗಳಲ್ಲಿ ಕನ್ನಡ ಸಪ್ತಾಹ ಕಾರ್ಯಕ್ರಮ ನಡೆಯುತ್ತಾ ಬರುತ್ತಿದೆ. ದೊಡ್ಡಬಳ್ಳಾಪುರ ನವೋದಯ ವಿದ್ಯಾಲಯದ ಆವರಣದಲ್ಲಿ ಕನ್ನಡ ಜ್ಞಾನಪೀಠ ಪುರಸ್ಕೃತರ ಪುತ್ಥಳಿಗಳನ್ನು ಅನಾವರಣ ಮಾಡುವ ಮೂಲಕ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಬಗೆಗಿನ ಪ್ರೀತಿ ಮತ್ತು ಗೌರವ ಹೊಂದಿದೆ. ಕಳೆದ ವರ್ಷ 50 ಮಂದಿ ಕನ್ನಡ ನಾಡಿನ ಸಾಧಕರ ಮಾಹಿತಿಯನ್ನು ವಿದ್ಯಾರ್ಥಿಗಳು ಸಿದ್ದಪಡಿಸಿ ಪ್ರದರ್ಶನ ಮಾಡುವ ಮೂಲಕ ಸಾರ್ವಜನಿಕರ ಮೆಚ್ಚುಗೆ ಪಡೆದಿದ್ದರೂ ಎಂದರು.
ಸಮಾರಂಭದಲ್ಲಿ ಜವಾಹರ ನವೋದಯ ವಿದ್ಯಾಲಯ ಉಪಪ್ರಾಂಶುಪಾಲ ಜಯಕೃಷ್ಣನ್ ಮಂಗಟ್, ಭಾರತ್ ಸ್ಕೌಟ್ಸ್ ಮತ್ತು ಗೈಡ್ ಜಿಲ್ಲಾ ಸಹಾಯಕ ಆಯುಕ್ತ ವೆಂಕಟರಾಜು, ನವೋದಯ ವಿದ್ಯಾಲಯದ ನಿವೃತ್ತ ಅಧ್ಯಾಪಕ ವಿ.ಎಸ್.ಹೆಗಡೆ, ಅಧ್ಯಾಪಕರುಗಳಾದ ಜೆ.ಪಿ.ಉಪಾಧ್ಯೆ, ಆರ್.ವೀರಣ್ಣಗೌಡ, ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪಿ.ಗೋವಿಂದರಾಜು, ಗೌರವ ಕಾರ್ಯದರ್ಶಿ ಎ.ಜಯರಾಮ್, ಸಂಘಟನಾ ಕಾರ್ಯದರ್ಶಿ ಆರ್.ಗೋವಿಂದರಾಜು, ಹೋಬಳಿ ಘಟಕಗಳ ಪದಾಧಿಕಾರಿಗಳಾದ ಜಿ.ಸುರೇಶ್, ಅಂಜನಮೂರ್ತಿ, ಗಿರೀಶ್ ಬರಗೂರು, ಪ್ರತಿನಿಧಿಗಳಾದ ಅಣ್ಣಯ್ಯ, ವೆಂಕಟೇಶ್, ಶಿವಪ್ರಸಾದ್, ರಂಗಸ್ವಾಮಯ್ಯ, ಸಫೀರ್, ಜವಾಹರ ನವೋದಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕನ್ನಡ ಸಪ್ತಾಹ ಅಂಗವಾಗಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ನಡೆಯಿತು. ದೊಡ್ಡಬಳ್ಳಾಪುರ ಜವಾಹರ ವಿದ್ಯಾಲಯ ವಿದ್ಯಾರ್ಥಿಗಳೊಂದಿಗೆ ಮಧ್ಯಪ್ರದೇಶ ಅಲೀರಾಜ್ ಜವಾಹರ ನವೋದಯದ ವಿದ್ಯಾರ್ಥಿಗಳು ನಡೆಸಿಕೊಟ್ಟ ಕನ್ನಡ ಸಾಂಸ್ಕೃತಿಕ ಕಾರ್ಯಕ್ರಮ ಪ್ರೇಕ್ಷಕರ ಗಮನ ಸೆಳೆಯಿತು.
ಡಾ.ರಾಜ್ ಕುಮಾರ್ ಅವರ ಕನ್ನಡ ಭಾಷೆಯ ಉಚ್ಚಾರಣೆ ಮಧುರ ಮತ್ತು ಸ್ಪಷ್ಟತೆಯಿಂದ ಕೂಡಿತ್ತು. ಉತ್ತಮ ಕನ್ನಡ ಹೇಗಿರಬೇಕೆಂದರೆ ಡಾ.ರಾಜ್ ಕುಮಾರ್ ಅಂತೆ ಇರಬೇಕೆಂದು ಕನ್ನಡಿಗರು ಅಭಿಮಾನದಿಂದ ಹೇಳುತ್ತಿದ್ದರು. ಅವರು ತಮ್ಮ ಯಶಸ್ಸಿನ ಉತ್ತುಂಗದಲ್ಲೂ ತಮ್ಮ ಸರಳತೆಯನ್ನು ಕಾಯ್ದುಕೊಂಡು, ಅಭಿಮಾನಿಗಳಿಗೆ ಆದರ್ಶಪ್ರಾಯರಾದರು. ಡಾ.ರಾಜ್ ಕುಮಾರ್ ಅವರ ಸಿನಿಮಾ ಪಾತ್ರಗಳು ಮತ್ತು ಜೀವನಶೈಲಿ ಕನ್ನಡಿಗರ ಸಂಸ್ಕೃತಿ ಪ್ರತಿನಿಧಿಸುತ್ತದೆ ಎಂದರು.
ಡಾ.ರಾಜ್ ಕುಮಾರ್ ಅವರು ಕನ್ನಡಿಗರಲ್ಲಿ ಕನ್ನಡ ನಾಡು-ನುಡಿಯ ಪ್ರಜ್ಞೆಯನ್ನು ಜಾಗೃತಗೊಳಿಸಿದರು. ಗೋಕಾಕ್ ಚಳುವಳಿ'ಯಂತಹ ಕನ್ನಡ ಭಾಷಾ ಚಳುವಳಿಗಳಿಗೆ ಬೆಂಬಲ ನೀಡಿದರು. ಕನ್ನಡ ಭಾಷೆ ಹಾಗೂ ಸಂಸ್ಕೃತಿಯ ಬಗ್ಗೆ ಡಾ.ರಾಜ್ ಕುಮಾರ್ ಅವರಿಗಿದ್ದ ಬದ್ಧತೆ ಅವರನ್ನು ಕನ್ನಡಿಗರ ಹೃದಯದಲ್ಲಿ ವಿಶೇಷ ಸ್ಥಾನ ಪಡೆಯುಂತೆ ಮಾಡಿತು. ಜನಸಾಮಾನ್ಯರ ಆಶೋತ್ತರಗಳು ಮತ್ತು ಸಾಮಾಜಿಕ ಕಳಕಳಿ ರಾಜ್ಕುಮಾರ್ ಚಲನಚಿತ್ರಗಳ ಪ್ರಮುಖ ಕಥಾ ವಸ್ತುಗಳು ಆಗಿರುವ ಕಾರಣದಿಂದ ಅವರು ಎಲ್ಲರ ಮನಸ್ಸನ್ನು ಗೆದ್ದಿದ್ದಾರೆ. ಕರ್ನಾಟಕದ ಜನರಿಗೆ ಮಾದರಿ ಮತ್ತು ಆದರ್ಶ ವ್ಯಕ್ತಿ ಡಾ.ರಾಜ್ ಕುಮಾರ್ ಆಗಿದ್ದಾರೆ ಎಂದರು.
ಸಾವಯವ ಕೃಷಿ ಮತ್ತು ಸಮಗ್ರ ಕೃಷಿ ಎಂಬ ವಿಷಯ ಕುರಿತು ಮಾತನಾಡಿದ ಕೃಷಿ ತಜ್ಞರಾದ ಲಯನ್ ಕೆ.ವಿ.ಪ್ರಭುಸ್ವಾಮಿ, ನಾಗರಿಕತೆಯೊಂದಿಗೆ ಕೃಷಿಯು ಬೆಳೆದು ಬಂದಿದೆ. ಒಂದು ದೇಶ ಕೃಷಿಯಿಂದ ಶ್ರೀಮಂತವಾಗಿದ್ದರೆ ಮಾತ್ರ ಅಂತಹ ದೇಶಕ್ಕೆ ಉಜ್ವಲ ಭವಿಷ್ಯ ಇರುತ್ತದೆ. ಪ್ರಾರಂಭದಲ್ಲಿ ಸಾವಯವ ಕೃಷಿಯಿತ್ತು. ಎರಡನೆಯ ಮಹಾಯುದ್ಧದ ನಂತರ ಕೃಷಿಯಲ್ಲಿ ರಾಸಾಯನಿಕ ಬಳಕೆ ಪ್ರಾರಂಭವಾಯಿತು. ಕೃಷಿಕರು ಎಲ್ಲಾ ಬೆಳೆಗಳನ್ನು ಬೆಳೆದು ಗುಣಮಟ್ಟ ಮತ್ತು ಉತ್ಪಾದನೆಯನ್ನು ಹೆಚ್ಚಿಸುವುದು ಸಮಗ್ರ ಕೃಷಿಯಾಗಿದೆ. ಕೃಷಿಯನ್ನು ವೈಜ್ಞಾನಿಕವಾಗಿ ಮಾಡುವುದರ ಕಡೆಗೆ ನಾವಿಂದು ಗಮನ ನೀಡಬೇಕಾಗಿದೆ. ಕೃಷಿಯ ಬಗ್ಗೆ ವೈಜ್ಞಾನಿಕ ದೃಷ್ಟಿಕೋನವನ್ನು ಬೆಳೆಸಿಕೊಳ್ಳಬೇಕಾಗಿದೆ. ಕೃಷಿಯಲ್ಲಿ ಮೊದಲಿನಿಂದಲೂ ಮಹಿಳೆಯರ ಪಾತ್ರ ಬಹಳ ಪ್ರಮುಖವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಚನ್ನವೀರನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಬಿ.ಎನ್.ಯೋಗನರಸಿಂಹಮೂರ್ತಿ, ಪ್ರೌಢಶಾಲಾ ಸಹಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಟಿ.ಅರುಣ್ ಕುಮಾರ್, ಮುಖ್ಯಶಿಕ್ಷಕ ವಿರೂಪಾಕ್ಷ, ಶಿಕ್ಷಕ ಚಂದ್ರಶೇಖರ್, ನವೋದಯ ವಿದ್ಯಾಲಯದ ನಿವೃತ್ತ ಶಿಕ್ಷಕ ವಿ.ಎಸ್.ಹೆಗಡೆ, ಕಲಾವಿದರುಗಳಾದ ದರ್ಗಾಜೋಗಿಹಳ್ಳಿ ಮಲ್ಲೇಶ್, ಸೆಲ್ವಂ ಮುಂತಾದವರು ಭಾಗವಹಿಸಿದ್ದರು.