News Fuel

News Fuel “Breaking News | Viral Stories | Daily Updates 🚀”

ಕುಂದಾಪುರ: ಅವಳಿ ಸಹೋದರಿಯರು ಎಂದರೆ ಸಾಮಾನ್ಯವಾಗಿ ಅವರ ರೂಪ-ನಡವಳಿಕೆಯಲ್ಲಿ ಸಾಮ್ಯತೆ ಕಾಣುವುದು ಸಹಜ. ಆದರೆ ಕುಂದಾಪುರದ ಸಮೀಕ್ಷಾ ಎಸ್. ಪೂಜಾರಿ...
30/04/2026

ಕುಂದಾಪುರ: ಅವಳಿ ಸಹೋದರಿಯರು ಎಂದರೆ ಸಾಮಾನ್ಯವಾಗಿ ಅವರ ರೂಪ-ನಡವಳಿಕೆಯಲ್ಲಿ ಸಾಮ್ಯತೆ ಕಾಣುವುದು ಸಹಜ. ಆದರೆ ಕುಂದಾಪುರದ ಸಮೀಕ್ಷಾ ಎಸ್. ಪೂಜಾರಿ ಮತ್ತು ಪ್ರತೀಕ್ಷಾ ಎಸ್. ಪೂಜಾರಿ ಶೈಕ್ಷಣಿಕ ಸಾಧನೆಯಲ್ಲೂ ‘ಸೇಮ್ ಟು ಸೇಮ್’ ಎಂದು ಸಾಬೀತುಪಡಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಇತ್ತೀಚೆಗೆ ಪ್ರಕಟವಾದ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶದಲ್ಲಿ ಈ ಇಬ್ಬರೂ ಸಹೋದರಿಯರು ನಿಖರವಾಗಿ 602 ಅಂಕಗಳನ್ನು ಪಡೆದು ಅಪರೂಪದ ಸಾಧನೆ ಮಾಡಿದ್ದಾರೆ.

ಕರ್ನಾಟಕ ಪಬ್ಲಿಕ್ ಸ್ಕೂಲ್, ವಂಡ್ಲೆ-ನೆಂಪು ವಿದ್ಯಾರ್ಥಿನಿಯರಾದ ಇವರು, ತಮ್ಮ ನಿರಂತರ ಪರಿಶ್ರಮ ಮತ್ತು ಶ್ರದ್ಧೆಯಿಂದ ಈ ಸಾಧನೆ ಸಾಧ್ಯವಾಗಿದೆಯೆಂದು ಶಿಕ್ಷಕರು ತಿಳಿಸಿದ್ದಾರೆ. ಒಂದೇ ರೀತಿ ಅಂಕಗಳನ್ನು ಪಡೆಯುವ ಮೂಲಕ ಇವರು ಶಾಲೆಗೆ ಮಾತ್ರವಲ್ಲ, ಕುಂದಾಪುರ ಪ್ರದೇಶಕ್ಕೂ ಹೆಮ್ಮೆಯಾಗಿ ಹೊರಹೊಮ್ಮಿದ್ದಾರೆ.

ಈ ಪ್ರತಿಭಾವಂತ ವಿದ್ಯಾರ್ಥಿನಿಯರು ಬಸೂರು ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರಾದ ಸಂತೋಷ್ ಹಾಗೂ ಪ್ರೇಮಾ ದಂಪತಿಯ ಪುತ್ರಿಯರು. ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಯಲ್ಲೇ ಓದಿಸಿ ಉತ್ತಮ ಸಾಧನೆ ಮಾಡಿಸುವಂತೆ ಪ್ರೇರೇಪಿಸಿರುವ ಸಂತೋಷ್ ಅವರ ನಡೆಗೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗುತ್ತಿದೆ. ಸರ್ಕಾರಿ ಶಾಲೆಯಲ್ಲಿಯೇ ಉತ್ತಮ ಶಿಕ್ಷಣ ಪಡೆದು ದೊಡ್ಡ ಸಾಧನೆ ಮಾಡಬಹುದು ಎಂಬುದಕ್ಕೆ ಈ ಉದಾಹರಣೆ ಸ್ಪಷ್ಟ ಸಾಕ್ಷಿಯಾಗಿದೆ.

ಸಮೀಕ್ಷಾ ಮತ್ತು ಪ್ರತೀಕ್ಷಾ ತಮ್ಮ ಪ್ರಾಥಮಿಕ ಶಿಕ್ಷಣವನ್ನು ವಂಡ್ಲೆಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೂರ್ಣಗೊಳಿಸಿದ್ದು, ನಂತರ ಕೆಪಿಎಸ್ ನೆಂಪುವಿನಲ್ಲಿ ಪ್ರೌಢ ಶಿಕ್ಷಣ ಪಡೆದಿದ್ದಾರೆ. ಆರಂಭದಿಂದಲೇ ಶ್ರದ್ಧೆಯಿಂದ ಓದಿದ ಈ ವಿದ್ಯಾರ್ಥಿನಿಯರು, ಸಂಕಲ್ಪ ಮತ್ತು ಪರಿಶ್ರಮ ಇದ್ದರೆ ಸಾಧನೆ ಸಾಧ್ಯ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

ಇವರ ಈ ಅಪರೂಪದ ಸಾಧನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಹಾಗೂ ಸ್ಥಳೀಯರು ಅಭಿನಂದನೆಗಳ ಸುರಿಮಳೆಗರೆದಿದ್ದಾರೆ. ಅವಳಿ ಸಹೋದರಿಯರ ಈ ಸಾಧನೆ ಇತರ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದ್ದು, ಶಿಕ್ಷಣ ಕ್ಷೇತ್ರದಲ್ಲಿ ಹೊಸ ಮಾದರಿಯನ್ನೇ ನಿರ್ಮಿಸಿದೆ. ​

ಟೆಕ್ಕಿ ಪೂಜಾ ದತ್ತಾಗೆ ಮದುವೆ ಆಗಿತ್ತು', ಮಗಳು ಸತ್ತು ಮೂರು ದಿನಗಳ ಬಳಿಕ ಬಂದ ತಂದೆ ಹೇಳಿದ್ದೇನು?Techie Puja Dutta Death Case: ಜಾರ್ಖಂಡ...
30/04/2026

ಟೆಕ್ಕಿ ಪೂಜಾ ದತ್ತಾಗೆ ಮದುವೆ ಆಗಿತ್ತು', ಮಗಳು ಸತ್ತು ಮೂರು ದಿನಗಳ ಬಳಿಕ ಬಂದ ತಂದೆ ಹೇಳಿದ್ದೇನು?

Techie Puja Dutta Death Case: ಜಾರ್ಖಂಡ್ ಮೂಲದ ಟೆಕ್ಕಿ ಪೂಜಾ ದತ್ತಾ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ವಿಚಾರಗಳು ಬೆಳಕಿಗೆ ಬರುತ್ತಿವೆ. ನಗರದಲ್ಲಿರುವ ಆಡುಗೋಡಿ ಪ್ರದೇಶದ ಮನೆಯಲ್ಲಿ ಪೂಜಾ ದತ್ತಾ ಮೃತದೇಹ ಪತ್ತೆಯಾಗಿದ್ದು, ಪ್ರಕರಣದ ಸುತ್ತ ಹಲವು ಅನುಮಾನಗಳು ವ್ಯಕ್ತವಾಗಿವೆ. ಸ್ಥಳಕ್ಕೆ ಭೇಟಿ ನೀಡಿದ ಆಡುಗೋಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಪ್ರಾಥಮಿಕ ತನಿಖೆಯಲ್ಲಿ ಪೂಜಾ ದತ್ತಾ ಕಳೆದ ನಾಲ್ಕು ವರ್ಷಗಳಿಂದ ಖಿನ್ನತೆಯಿಂದ ಬಳಲುತ್ತಿದ್ದರು ಎಂಬ ಮಾಹಿತಿ ಹೊರಬಂದಿದೆ. ಕೊರೊನಾ ಅವಧಿಯಲ್ಲಿ ಪೂಜಾ ಮದುವೆಯಾಗಿದ್ದರೂ, ಮದುವೆಯಾದ ಕೆಲವೇ ದಿನಗಳಲ್ಲಿ ಅವರ ಪತಿ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಘಟನೆ ನಂತರ ಪೂಜಾ ಮಾನಸಿಕವಾಗಿ ತುಂಬಾ ಕುಗ್ಗಿಹೋಗಿದ್ದಳು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

2023ರಲ್ಲಿ ಕೆಲಸದ ನಿಮಿತ್ತ ಬೆಂಗಳೂರಿಗೆ ಬಂದ ಪೂಜಾ, ಖಾಸಗಿ ಕಂಪನಿಯಲ್ಲಿ ಉದ್ಯೋಗ ಮಾಡುತ್ತಿದ್ದರು. ಆದರೆ ಇಲ್ಲಿ ಬಂದ ಬಳಿಕ ಕುಟುಂಬದವರ ಜೊತೆ ಸಂಪರ್ಕ ಕಡಿತ ಮಾಡಿಕೊಂಡಿದ್ದಳು. ಈ ವಿಚಾರವನ್ನು ಪೂಜಾ ತಂದೆ ಸನಾತನ್ ದತ್ತ ಅವರು ತಿಳಿಸಿದ್ದು, “ಮಗಳು ನಮ್ಮ ಜೊತೆ ಮಾತನಾಡುವುದನ್ನೇ ಬಿಟ್ಟಿದ್ದಳು. ಅವಳ ಕಾಂಟ್ಯಾಕ್ಟ್ ನಂಬರ್ ಕೂಡ ನಮ್ಮ ಬಳಿ ಇರಲಿಲ್ಲ. ಎರಡು ಬಾರಿ ಬೆಂಗಳೂರಿಗೆ ಬಂದರೂ ಸಂಪರ್ಕ ಸಾಧಿಸಲು ಸಾಧ್ಯವಾಗಲಿಲ್ಲ” ಎಂದು ಹೇಳಿದ್ದಾರೆ.

ಇನ್ನು, ಪೂಜಾ ಏಕೆ ಆತ್ಮಹತ್ಯೆ ಮಾಡಿಕೊಂಡಳು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಚಿಕ್ಕ ವಯಸ್ಸಿನಿಂದಲೂ ಓದಿನಲ್ಲಿ ಮೇಲುಗೈ ಸಾಧಿಸಿದ್ದ ಪೂಜಾ ಈ ರೀತಿಯಾಗಿ ಸಾವನ್ನಪ್ಪಿರುವುದು ಕುಟುಂಬಕ್ಕೆ ಆಘಾತ ತಂದಿದೆ. ಈ ಸಂಬಂಧ ಸೆಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆದಿದ್ದು, ವರದಿ ಬಂದ ನಂತರ ಸಾವಿನ ನಿಖರ ಕಾರಣ ತಿಳಿಯಲಿದೆ.

ಪ್ರಸ್ತುತ ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ಮುಂದುವರೆಸಿದ್ದು, ಪೂಜಾ ಸಾವಿನ ಹಿಂದೆ ಇರುವ ನಿಜಾಂಶವನ್ನು ಹೊರತರುವ ಪ್ರಯತ್ನದಲ್ಲಿದ್ದಾರೆ.


ಸೈನಿಕನಾಗಬೇಕೆಂಬ ಕನಸು ಕಂಡಿದ್ದವ ಇಂದು IPL ಸ್ಟಾರ್ ಬೌಲರ್! ಒಡವೆ ಮಾರಿ ಮಗನಿಗೆ ಶೂ ಕೊಡಿಸಿದ್ದ ತಾಯಿ!!  Shakib Hussain Inspiring Story...
16/04/2026

ಸೈನಿಕನಾಗಬೇಕೆಂಬ ಕನಸು ಕಂಡಿದ್ದವ ಇಂದು IPL ಸ್ಟಾರ್ ಬೌಲರ್! ಒಡವೆ ಮಾರಿ ಮಗನಿಗೆ ಶೂ ಕೊಡಿಸಿದ್ದ ತಾಯಿ!!

Shakib Hussain Inspiring Story: ಭಾರತದ ಕ್ರಿಕೆಟ್ ಲೋಕದಲ್ಲಿ ಈಗ ಹೆಚ್ಚು ಗಮನ ಸೆಳೆದಿರುವ ಯುವ ಪ್ರತಿಭೆಯ ಹೆಸರು ಶಾಕಿಬ್ ಹುಸ್ಸೇನ್. ಬಿಹಾರದ ಗೋಪಾಲ್‌ಗಂಜ್ ಎಂಬ ಸಣ್ಣ ಗ್ರಾಮದಲ್ಲಿ ಜನಿಸಿದ ಈ ಯುವಕನ ಜೀವನ ಕಥೆ ನಿಜಕ್ಕೂ ಪ್ರೇರಣಾದಾಯಕವಾಗಿದೆ. ಇಂದಿನ IPL ಸ್ಟಾರ್ ಆಗಿರುವ ಶಾಕಿಬ್, ಒಮ್ಮೆ ದೇಶಕ್ಕೆ ಸೇವೆ ಸಲ್ಲಿಸಲು ಸೈನಿಕನಾಗಬೇಕು ಎಂಬ ಕನಸು ಕಂಡಿದ್ದನು.

ಶಾಕಿಬ್ ಹುಸ್ಸೇನ್ ಬಾಲ್ಯ ಅಷ್ಟೇನೂ ಚೆನ್ನಾಗಿರಲಿಲ್ಲ. ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಶಾಕಿಬ್‌ ಅವರ ತಂದೆ ದಿನಗೂಲಿ ಕಾರ್ಮಿಕರಾಗಿದ್ದರು. ಕುಟುಂಬದ ಆರ್ಥಿಕ ಪರಿಸ್ಥಿತಿ ಬಹಳ ಕಷ್ಟಕರವಾಗಿತ್ತು. ಆದರೂ ಶಾಕಿಬ್ ತಮ್ಮ ಕನಸುಗಳನ್ನು ಬಿಟ್ಟುಕೊಡಲಿಲ್ಲ. ಆರಂಭದಲ್ಲಿ ಅವರು ಟೆನಿಸ್ ಬಾಲ್ ಪಂದ್ಯಗಳಲ್ಲಿ ಆಡುತ್ತಿದ್ದರು. ಆ ಸಮಯದಲ್ಲಿ ಅವರ ಮನಸ್ಸಿನಲ್ಲಿ ಒಂದು ದೊಡ್ಡ ಆಸೆ ಇತ್ತು – “ನಾನು ಸೈನಿಕನಾಗಿ ದೇಶ ಸೇವೆ ಮಾಡಬೇಕು” ಎಂಬುದು. ಆದರೆ ಜೀವನವು ಅವರನ್ನು ಬೇರೆ ದಾರಿಯ ಕಡೆಗೆ ಕರೆದೊಯ್ದಿತು.

ಕ್ರಿಕೆಟ್ ಮೇಲಿನ ಆಸಕ್ತಿ ದಿನೇ ದಿನೇ ಹೆಚ್ಚುತ್ತಾ ಹೋಗಿತು. ಗ್ರಾಮದಲ್ಲಿ ಟೆನಿಸ್ ಬಾಲ್ ಕ್ರಿಕೆಟ್ ಆಡುತ್ತಿದ್ದ ಶಾಕಿಬ್, ನಂತರ ಲೆದರ್ ಬಾಲ್ ಕ್ರಿಕೆಟ್‌ಗೆ ಕಾಲಿಟ್ಟರು. ಆರಂಭದಲ್ಲಿ ಸರಿಯಾದ ಸೌಲಭ್ಯಗಳಿಲ್ಲದೇ ಕಷ್ಟಪಟ್ಟರೂ, ಅವರ ಪರಿಶ್ರಮ ಮತ್ತು ಪ್ರತಿಭೆ ಗಮನಸೆಳೆಯಿತು. ಕುಟುಂಬದ ಆರ್ಥಿಕ ಸಮಸ್ಯೆಗಳು ದೊಡ್ಡ ಅಡ್ಡಿಯಾಗಿದ್ದರೂ, ಅವರ ತಾಯಿ ತಮ್ಮ ಆಭರಣಗಳನ್ನ ಮಾರಾಟ ಮಾಡಿ ಶಾಕಿಬ್‌ಗೆ ಕ್ರಿಕೆಟ್ ಶೂಸ್ ಮತ್ತು ಸಾಮಗ್ರಿಗಳನ್ನ ಖರೀದಿಸಲು ಮಹಾನ್‌ ತ್ಯಾಗ ಮಾಡಿದರು.

ಇದುವೇ ಶಾಕಿಬ್ ಅವರ ಜೀವನದಲ್ಲಿ ದೊಡ್ಡ ಟರ್ನಿಂಗ್‌ ಪಾಯಿಂಟ್‌ ಆಯಿತು. ಆ ನಂತರ ಅವರು ಹಿಂತಿರುಗಿ ನೋಡಲೇ ಇಲ್ಲ. ದಿನದಿನವೂ ಕಠಿಣ ಅಭ್ಯಾಸ ಮಾಡಿ, ತಮ್ಮ ವೇಗ ಮತ್ತು ಬೌಲಿಂಗ್ ಕೌಶಲ್ಯವನ್ನು ಹೆಚ್ಚಿಸಿಕೊಂಡರು. ಬಿಹಾರ ತಂಡದ ಪರವಾಗಿ ಅವರು ಉತ್ತಮ ಪ್ರದರ್ಶನ ನೀಡಿದರು ಮತ್ತು ದೇಶೀಯ ಕ್ರಿಕೆಟ್‌ನಲ್ಲಿ ತಮ್ಮ ಸ್ಥಾನವನ್ನು ಸ್ಥಿರಗೊಳಿಸಿದರು.

IPL ಪ್ರವೇಶವು ಅವರ ಜೀವನದಲ್ಲಿ ಮತ್ತೊಂದು ಮಹತ್ವದ ಹಂತ. ಮೊದಲಿಗೆ Kolkata Knight Riders ತಂಡದಲ್ಲಿ ಆಯ್ಕೆಯಾಗಿದ್ದರೂ ಅವಕಾಶ ಸಿಕ್ಕಿಲ್ಲ. ಆದರೆ ಅವರು ನಿರಾಶರಾಗದೆ ಶ್ರಮ ಮುಂದುವರೆಸಿದರು. ನಂತರ Sunrisers Hyderabad ತಂಡಕ್ಕೆ ಸೇರ್ಪಡೆಯಾಗಿ, ತಮ್ಮ ಮೊದಲ ಪಂದ್ಯದಲ್ಲೇ ಅದ್ಭುತ ಪ್ರದರ್ಶನ ನೀಡಿ 4 ವಿಕೆಟ್ ಪಡೆದು ಎಲ್ಲರ ಗಮನ ಸೆಳೆದರು.

IPL ಡೆಬ್ಯೂ ಪಂದ್ಯದಲ್ಲೇ 24ಕ್ಕೆ 4 ವಿಕೆಟ್‌ ಪಡೆಯುವ ಮೂಲಕ ಅವರು ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದರು. ಈ ಮೂಲಕ ಶಾಕಿಬ್ ಹುಸ್ಸೇನ್ ಕ್ರಿಕೆಟ್ ಪ್ರಪಂಚದಲ್ಲಿ ಹೊಸ ತಾರೆ ಆಗಿ ಹೊರಹೊಮ್ಮಿದರು. ಈ ಸಾಧನೆಯೊಂದಿಗೆ ಅವರು ದಿಗ್ಗಜರ ಸಾಲಿನಲ್ಲಿ ಹೆಸರು ದಾಖಲಿಸಿಕೊಂಡರು.

ಟೆನಿಸ್ ಬಾಲ್ ಪಂದ್ಯಗಳಲ್ಲಿ ಆಡುತ್ತಿದ್ದ ಮತ್ತು ಸೈನಿಕನಾಗಬೇಕೆಂದು ಕನಸು ಕಂಡಿದ್ದ ಯುವಕ, ಇಂದು ತನ್ನ ಪ್ರತಿಭೆಯಿಂದ IPL ಸ್ಟಾರ್ ಬೌಲರ್ ಆಗಿ ಬೆಳೆದಿದ್ದಾನೆ. ಅವರ ಕಥೆ ನಮಗೆ ಒಂದು ಸ್ಪಷ್ಟ ಸಂದೇಶ ನೀಡುತ್ತದೆ – “ಕನಸು ಬದಲಾದರೂ, ಪರಿಶ್ರಮ ಇದ್ದರೆ ಯಶಸ್ಸು ಖಚಿತ.” ಎನ್ನುವುದು.

ಶಾಕಿಬ್ ಹುಸ್ಸೇನ್ ಅವರ ಜೀವನವು ಹೋರಾಟದಿಂದ ಯಶಸ್ಸಿನತ್ತ ಸಾಗಿದ ಒಂದು ಅದ್ಭುತ ಪ್ರಯಾಣವಾಗಿದೆ. ಇಂದು ಅವರು ಸಾವಿರಾರು ಯುವಕರಿಗೆ ಪ್ರೇರಣೆಯಾಗಿದ್ದಾರೆ.

SSLC ತೃತೀಯ ಭಾಷೆಗೆ 'ಗ್ರೇಡ್' ಇಲ್ಲ, 'ಅಂಕ'ಗಳೇ ಕಡ್ಡಾಯ! ಸರ್ಕಾರಕ್ಕೆ ಹೈಕೋರ್ಟ್ ಶಾಕ್...!​ಬೆಂಗಳೂರು: 2025-26ನೇ ಶೈಕ್ಷಣಿಕ ಸಾಲಿನ ಎಸ್ಎಸ್...
16/04/2026

SSLC ತೃತೀಯ ಭಾಷೆಗೆ 'ಗ್ರೇಡ್' ಇಲ್ಲ, 'ಅಂಕ'ಗಳೇ ಕಡ್ಡಾಯ! ಸರ್ಕಾರಕ್ಕೆ ಹೈಕೋರ್ಟ್ ಶಾಕ್...!

​ಬೆಂಗಳೂರು: 2025-26ನೇ ಶೈಕ್ಷಣಿಕ ಸಾಲಿನ ಎಸ್ಎಸ್ಎಲ್​ಸಿ (SSLC) ವಿದ್ಯಾರ್ಥಿಗಳಿಗೆ ಹೈಕೋರ್ಟ್ ದೊಡ್ಡ ಸಮಾಧಾನದ ಸುದ್ದಿ ನೀಡಿದೆ. ಹಿಂದಿ ಸೇರಿದಂತೆ ತೃತೀಯ ಭಾಷೆ ವಿಷಯಗಳಿಗೆ 'ಗ್ರೇಡ್' ನೀಡಲು ಮುಂದಾಗಿದ್ದ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಕೋರ್ಟ್ ಬ್ರೇಕ್ ಹಾಕಿದ್ದು, ಎಂದಿನಂತೆ ಅಂಕಗಳನ್ನೇ (Marks) ನೀಡುವಂತೆ ಮಹತ್ವದ ನಿರ್ದೇಶನ ನೀಡಿದೆ.

ಹೈಕೋರ್ಟ್ ಮೆಟ್ಟಿಲೇರಿದ್ದ ವಿದ್ಯಾರ್ಥಿಗಳು!

​ಚಿಕ್ಕಮಗಳೂರಿನ ಸಹನಾ ಆರ್. ನಾಯ್ಕ್ ಸೇರಿದಂತೆ ಹಲವು ವಿದ್ಯಾರ್ಥಿಗಳು ಸರ್ಕಾರದ ಗ್ರೇಡಿಂಗ್ ಪದ್ಧತಿಯನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಇ.ಎಸ್. ಇಂದಿರೇಶ್ ಅವರ ಪೀಠವು ವಿದ್ಯಾರ್ಥಿಗಳ ಪರವಾಗಿ ತೀರ್ಪು ನೀಡಿದೆ.

ಗ್ರೇಡಿಂಗ್ ಬೇಡ ಎನ್ನಲು ಕಾರಣವೇನು?

​ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ಪ್ರಬಲವಾದ ವಾದಗಳನ್ನು ಮಂಡಿಸಿದರು:

​ಸ್ಪರ್ಧಾತ್ಮಕ ಪರೀಕ್ಷೆಗಳ ಮೇಲೆ ಹೊಡೆತ: ಯುಪಿಎಸ್​ಸಿ (UPSC), ಬ್ಯಾಂಕಿಂಗ್ ಮತ್ತು ಕೇಂದ್ರ ಸರ್ಕಾರದ ಉದ್ಯೋಗಗಳ ಪರೀಕ್ಷೆಯಲ್ಲಿ ಗ್ರೇಡ್‌ಗಳನ್ನು ಪರಿಗಣಿಸುವುದಿಲ್ಲ, ಕೇವಲ ಅಂಕಗಳನ್ನು ಮಾತ್ರ ನೋಡಲಾಗುತ್ತದೆ.

​ಭವಿಷ್ಯಕ್ಕೆ ತೊಂದರೆ: ಒಂದು ವೇಳೆ ಕರ್ನಾಟಕ ಸರ್ಕಾರ ತೃತೀಯ ಭಾಷೆಗೆ ಕೇವಲ ಗ್ರೇಡ್ ನೀಡಿದರೆ, ಮುಂದಿನ ದಿನಗಳಲ್ಲಿ ರಾಜ್ಯದ ಉದ್ಯೋಗ ಆಕಾಂಕ್ಷಿಗಳಿಗೆ ಅನ್ಯಾಯವಾಗುವ ಸಾಧ್ಯತೆ ಇರುತ್ತದೆ.
​ಗೊಂದಲದ ನಿರ್ಧಾರ: ಈಗಾಗಲೇ ಪರೀಕ್ಷಾ ಮಂಡಳಿಯು 80 ಅಂಕಗಳ ಲಿಖಿತ ಪರೀಕ್ಷೆ ಮತ್ತು 20 ಅಂಕಗಳ ಆಂತರಿಕ ಮೌಲ್ಯಮಾಪನ ಇರಲಿದೆ ಎಂದು ಸುತ್ತೋಲೆ ಹೊರಡಿಸಿತ್ತು. ಆದರೆ ಕೊನೆ ಕ್ಷಣದಲ್ಲಿ ಗ್ರೇಡ್ ನೀಡುವುದು ಸರಿಯಲ್ಲ ಎಂದು ವಾದಿಸಲಾಯಿತು.

ಕೋರ್ಟ್ ನೀಡಿದ ಆದೇಶವೇನು?

​ಎಲ್ಲಾ ಅಂಶಗಳನ್ನು ಪರಿಶೀಲಿಸಿದ ನ್ಯಾಯಪೀಠವು, 2025-26ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ತೃತೀಯ ಭಾಷೆಗಳಿಗೆ ಗ್ರೇಡ್ ಬದಲಿಗೆ ಅಂಕಗಳನ್ನೇ ನೀಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಮತ್ತು ಮೌಲ್ಯ ನಿರ್ಣಯ ಮಂಡಳಿಗೆ ಸ್ಪಷ್ಟ ಸೂಚನೆ ನೀಡಿ ಅರ್ಜಿ ಇತ್ಯರ್ಥಪಡಿಸಿದೆ.
ಸರ್ಕಾರದ ಈ ಹಿಂದಿನ ನಿರ್ಧಾರದಿಂದ ಆತಂಕದಲ್ಲಿದ್ದ ಸಾವಿರಾರು ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಈಗ ಹೈಕೋರ್ಟ್ ಆದೇಶದಿಂದ ನಿರಾಳವಾದಂತಾಗಿದೆ. ತೃತೀಯ ಭಾಷೆಯಲ್ಲೂ ಪ್ರತಿಭೆ ತೋರುವ ವಿದ್ಯಾರ್ಥಿಗಳಿಗೆ ಇನ್ನು ಮುಂದೆ ಅಂಕಗಳೇ ಸಿಗಲಿವೆ!

ಲಂಕೇಶ್ ಮತ್ತು ರವಿ ಬೆಳಗೆರೆ ಈಗ ಇರಬೇಕಿತ್ತು !            ✍🏻ವಿಶ್ವೇಶ್ವರ ಭಟ್ಒಮ್ಮೆ ಪ್ರಧಾನಿ ಇಂದಿರಾ ಗಾಂಧಿಯವರು ಗೋವಾದಿಂದ ವಿಮಾನದಲ್ಲಿ ದ...
16/04/2026

ಲಂಕೇಶ್ ಮತ್ತು ರವಿ ಬೆಳಗೆರೆ ಈಗ ಇರಬೇಕಿತ್ತು !



✍🏻ವಿಶ್ವೇಶ್ವರ ಭಟ್

ಒಮ್ಮೆ ಪ್ರಧಾನಿ ಇಂದಿರಾ ಗಾಂಧಿಯವರು ಗೋವಾದಿಂದ ವಿಮಾನದಲ್ಲಿ ದಿಲ್ಲಿಗೆ ಹೋಗುವವರಿದ್ದರು. ತಾಂತ್ರಿಕ ಕಾರಣದಿಂದ ಅವರ ವಿಮಾನ ಹಾರಾಟ ವಿಳಂಬವಾಯಿತು. ವಿಮಾನವನ್ನು ಸರಿಪಡಿಸಲು ಸುಮಾರು ಎರಡೂ ಗಂಟೆ ಹಿಡಿಯಬಹುದೆಂದು ಅವರಿಗೆ ಅಧಿಕಾರಿಗಳು ತಿಳಿಸಿದರು. ಇಂದಿರಾ ಗಾಂಧಿಯವರನ್ನು ಭೇಟಿ ಮಾಡಲು ವಿಮಾನ ನಿಲ್ದಾಣದಲ್ಲಿ ಪತ್ರಕರ್ತರು ಕಾಯುತ್ತಿದ್ದರು. ಆದರೆ ಅವರು ವಿಮಾನವೇರುವ ಧಾವಂತದಲ್ಲಿದ್ದರು. ಯಾವಾಗ ವಿಮಾನ ಹಾರಾಟ ಎರಡು ಗಂಟೆ ವಿಳಂಬವಾಗುವುದೆಂದು ತಿಳಿದಾಗ ಇಂದಿರಾ ಗಾಂಧಿ, ‘ಪತ್ರಕರ್ತರನ್ನು ಕರೆಯಿರಿ, ನಾನು ಅವರ ಜತೆ ಮಾತಾಡಬಯಸುತ್ತೇನೆ’ ಎಂದು ಹೇಳಿದರು.
ಪ್ರಧಾನಿಯವರ ಜತೆ ಮಾತುಕತೆ ಸಾಧ್ಯವಾಗದ್ದಕ್ಕೆ ಬೇಸರಗೊಂಡು ಇನ್ನೇನು ಹೊರಡಲು ಸಿದ್ಧರಾಗಿದ್ದ ಪತ್ರಕರ್ತರಿಗೆ, ಅಧಿಕಾರಿಗಳು ಬಂದು, ‘ಪ್ರಧಾನಿಯವರು ನಿಮ್ಮ ಜತೆ ಮಾತಾಡಲು ಉತ್ಸುಕರಾಗಿದ್ದಾರೆ’ ಎಂದು ತಿಳಿಸಿದಾಗ, ಅವರು ವಿಮಾನ ನಿಲ್ದಾಣದ ಲೌಂಜ್ ಗೆ ಧಾವಿಸಿದರು. ಅಂದು ಇಂದಿರಾ ಗಾಂಧಿಯವರು, ತಮ್ಮ ಸುತ್ತ ಪತ್ರಕರ್ತರನ್ನು ಕುಳ್ಳಿರಿಸಿಕೊಂಡು ಸುಮಾರು ಒಂದೂವರೆ ಗಂಟೆ ಕಾಲ ಅವರ ಪ್ರಶ್ನೆಗಳಿಗೆ ಸಮಾಧಾನದಿಂದ ಉತ್ತರಿಸಿದರು. ಅವರ ಜತೆ ಲೋಕಾಭಿರಾಮ ಚರ್ಚೆ ನಡೆಸಿದರು. ಪತ್ರಕರ್ತರ ಜತೆ ಅನೇಕ ಸ್ವಾರಸ್ಯಕರ ಪ್ರಸಂಗಗಳನ್ನು ‘ಆಫ್ ದಿ ರೆಕಾರ್ಡ್’ ಹಂಚಿಕೊಂಡರು. ಈ ಪ್ರಸಂಗವನ್ನು ‘ದಿ ಹಿಂದು’ ಪತ್ರಿಕೆಯ ಹುಬ್ಬಳ್ಳಿ ಮತ್ತು ಗೋವಾ ವಿಶೇಷ ವರದಿಗಾರರಾಗಿದ್ದ ಮತ್ತಿಹಳ್ಳಿ ಮದನಗೋಪಾಲ ನೆನಪಿಸಿಕೊಂಡಿದ್ದರು.
ಒಂದು ಕಾಲವಿತ್ತು, ರಾಜಕಾರಣಿಗಳು, ಸಚಿವರು, ಮುಖ್ಯಮಂತ್ರಿಗಳು ಪ್ರೆಸ್ ಮೀಟ್ ಆರಂಭಿಸುವ ಮೊದಲು ಹಿರಿಯ ಮತ್ತು ಪ್ರಮುಖ ಪತ್ರಿಕೆಗಳ ವರದಿಗಾರರಿಗೆ ಕಾಯುತ್ತಿದ್ದರು. ‘ಇವರು ಬಂದಿದ್ದಾರಾ, ಅವರು ಬಂದಿದ್ದಾರಾ’, ಎಂದು ಪತ್ರಕರ್ತರ ಬಗ್ಗೆ ವಿಚಾರಿಸಿಕೊಳ್ಳುತ್ತಿದ್ದರು. ಅದರಲ್ಲೂ ಪ್ರಸಾರ ಹೆಚ್ಚಿರುವ ಪತ್ರಿಕೆಗಳ ವರದಿಗಾರರು ಬಂದಿರುವುದನ್ನು ಖಾತ್ರಿಪಡಿಸಿಕೊಂಡ ನಂತರವೇ ಪತ್ರಿಕಾಗೋಷ್ಠಿಯನ್ನು ಆರಂಭಿಸುತ್ತಿದ್ದರು. ಒಂದು ವೇಳೆ ಪ್ರಮುಖ ಪತ್ರಿಕೆಯ ಮುಖ್ಯ ವರದಿಗಾರರು ಬರದಿದ್ದರೆ, ಪತ್ರಿಕಾಗೋಷ್ಠಿಯನ್ನು ಮುಂದಕ್ಕೆ ಹಾಕಿದ ನಿದರ್ಶನಗಳಿದ್ದವು. ಪತ್ರಿಕಾಗೋಷ್ಠಿ ಎಂದರೆ ಅದು ಕೇವಲ ಮಾಹಿತಿ ಹಂಚಿಕೆಯ ವೇದಿಕೆಯಾಗಿರಲಿಲ್ಲ, ಅದೊಂದು ಜವಾಬ್ದಾರಿಯುತ ಸಂವಾದವಾಗಿತ್ತು. ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತಾಡುವವರು, ಮರುದಿನ ತಮ್ಮ ಹೇಳಿಕೆ ಪತ್ರಿಕೆಗಳಲ್ಲಿ ಪ್ರಧಾನವಾಗಿ ವರದಿಯಾಗುವುದನ್ನೇ ಎದುರು ನೋಡುತ್ತಿದ್ದರು. ತಮ್ಮ ಹೇಳಿಕೆಗೆ ಪ್ರಾಧಾನ್ಯ ಕೊಡದಿದ್ದರೆ ಅಥವಾ ಉಪೇಕ್ಷಿಸಿದರೆ, ರಾಜಕಾರಣಿಗಳು ಮತ್ತು ಸಚಿವರು ಸಂಪಾದಕರಿಗೆ ಫೋನ್ ಮಾಡಿ ವಿಚಾರಿಸುತ್ತಿದ್ದರು. ಮರುದಿನವಾದರೂ ತಮ್ಮ ಹೇಳಿಕೆಗೆ ಪ್ರಾಧಾನ್ಯ ನೀಡಿ ಪ್ರಕಟಿಸುವಂತೆ ಕೋರುತ್ತಿದ್ದರು.
ಆ ದಿನಗಳಲ್ಲಿ ಪತ್ರಿಕೆಯೊಂದೇ ಸುದ್ದಿಯ ಮೂಲವಾಗಿತ್ತು. ಪತ್ರಕರ್ತರೇ ಸುದ್ದಿಯ ‘ಗೇಟ್ ಕೀಪರ್’ ಆಗಿದ್ದರು. ಯಾವ ಸುದ್ದಿಯನ್ನು ಎಷ್ಟು ನೀಡಬೇಕು, ಹೇಗೆ ನೀಡಬೇಕು ಎಂಬುದನ್ನು ಅವರೇ ನಿರ್ಧರಿಸುತ್ತಿದ್ದರು. ಅವರೇ ಸುದ್ದಿಯ ಕಸ್ಟೋಡಿಯನ್ ಆಗಿದ್ದರು. ಅವರು ಸುದ್ದಿಯನ್ನು ಪ್ರಕಟಿಸದಿದ್ದರೆ, ಅದು ಓದುಗರ ಗಮನಕ್ಕೆ ಬರುತ್ತಿರಲಿಲ್ಲ. ಇಂದಿರಾ ಗಾಂಧಿಯವರ ಕಾಲದಲ್ಲಿ ಜನರನ್ನು ತಲುಪಲು ಪತ್ರಿಕೆಗಳು ಮತ್ತು ರೇಡಿಯೋ ಬಿಟ್ಟರೆ ಬೇರೆ ದಾರಿಯೇ ಇರಲಿಲ್ಲ. ಪತ್ರಕರ್ತರು ಪ್ರಕಟಿಸಿದ್ದಷ್ಟೇ ಸುದ್ದಿ. ಪತ್ರಿಕೆಗಳಲ್ಲಿ ಪ್ರಕಟವಾಗಿದ್ದಷ್ಟೇ ಸುದ್ದಿ. ರಾಜಕಾರಣಿಗಳು ಜನರಿಗೆ ಏನನ್ನಾದರೂ ಹೇಳಬೇಕೆಂದರೆ, ಅದು ಪತ್ರಕರ್ತರ ಮೂಲಕವೇ ಹೋಗಬೇಕಿತ್ತು. ಬೆಂಗಳೂರಿನಲ್ಲಿ ರಾತ್ರಿ ಎಂಟೂವರೆಗೆ ಪ್ರಕಟವಾದ ‘ಪ್ರಜಾವಾಣಿ’ ಅಥವಾ ‘ಕನ್ನಡಪ್ರಭ’ ಬೀದರ್ ತಲುಪಲು ಮೂವತ್ತಾರು ಗಂಟೆ ಬೇಕಾಗುತ್ತಿತ್ತು. ಅಲ್ಲಿಂದ ಮುಂದಿನ ಊರುಗಳಿಗೆ, ಗಡಿಭಾಗದ ಗ್ರಾಮಗಳಿಗೆ ತಲುಪಲು ಮತ್ತೆ ಎಂಟು ತಾಸು ಹಿಡಿಯುತ್ತಿತ್ತು. ಅಂದರೆ ಬೆಂಗಳೂರಿನಿಂದ ಹೊರಟ ಪತ್ರಿಕೆ ಕಟ್ಟಕಡೆಯ ಹಳ್ಳಿಗಳಿಗೆ ತಲುಪಲು ನಲವತ್ತು-ನಲವತ್ತೆರಡು ಗಂಟೆಗಳು ಹಿಡಿಯುತ್ತಿದ್ದವು. ಆದರೂ ಜನ ಪತ್ರಿಕೆಗಳನ್ನು ಓದಲು ಕಾತರ, ಕುತೂಹಲದಿಂದ ಕಾದಿರುತ್ತಿದ್ದರು. ಪತ್ರಿಕೆ ತಡವಾಗಿ ಬರುವ ಬಗ್ಗೆ ಅವರ ತಕರಾರಿರಲಿಲ್ಲ.
ಆದರೆ ಈಗ?
ಪರಿಸ್ಥಿತಿ ಸಂಪೂರ್ಣ ಊಹೆಗೂ ಮೀರಿ ಬದಲಾಗಿಬಿಟ್ಟಿದೆ. ಇಂದು ರಾಜಕಾರಣಿಗಳಾಗಲಿ, ಸಚಿವರಾಗಲಿ, ಪತ್ರಿಕಾಗೋಷ್ಠಿಯನ್ನೇ ಮಾಡುತ್ತಿಲ್ಲ. ಅವರಿಗೆ ಅದರ ಅಗತ್ಯವೇ ಇಲ್ಲ. ಜಿಲ್ಲಾ ಕೇಂದ್ರಗಳಲ್ಲೂ ಪತ್ರಿಕಾಗೋಷ್ಠಿಗಳು ನಡೆಯುವುದು ಅಪರೂಪ. ಯಾರಾದರೂ ಟಿವಿ ಕೆಮರಾಮನ್ ಗಳು ಮೈಕ್ ಹಿಡಿದರೆ ಮಾತ್ರ ಮಾತಾಡುತ್ತಾರೆ. ಸುದ್ದಿ ಕಳಿಸಿದ್ದೇವೆ, ಪ್ರಕಟಿಸಿ ಎಂದು ಸಹ ಹೇಳುವುದಿಲ್ಲ. ಕಾರ್ಯಕ್ರಮ ಇದೆ ಎಂದು ಆಹ್ವಾನ ಪತ್ರಿಕೆಯನ್ನು ಸಹ ಕಳಿಸುವುದಿಲ್ಲ. ಪತ್ರಿಕೆಯಲ್ಲಿ ಉಲ್ಟಾ ಬರೆದರೆ ತಲೆ ಕೆಡಿಸಿಕೊಳ್ಳಬಹುದು. ಇಲ್ಲದಿದ್ದರೆ ಯಾರೂ ವರದಿಗಳ ಬಗ್ಗೆ ಹೆಚ್ಚು ಆಸ್ಥೆವಹಿಸುವುದಿಲ್ಲ. ತಾವು ಹೇಳಬೇಕಿರುವುದನ್ನು ಫೇಸ್ ಬುಕ್, ಎಕ್ಸ್, ಇನ್ಸ್ಟಾ ಮೂಲಕ ಹೇಳುತ್ತಾರೆ. ಫೇಸ್ ಬುಕ್ ಲೈವ್ ನಲ್ಲಿ ವಿವರವಾಗಿ ಹೇಳುತ್ತಾರೆ. ಇಲ್ಲವೇ ಯೂಟ್ಯೂಬ್ ಮೂಲಕ ಬಿತ್ತರಿಸುತ್ತಾರೆ. ಇವುಗಳ ಲಿಂಕ್ ನ್ನು ವಾಟ್ಸಪ್ ಮೂಲಕ ಷೇರ್ ಮಾಡುತ್ತಾರೆ.
ಇದು ಕ್ಷಣಾರ್ಧದಲ್ಲಿ ಎಲ್ಲೆಡೆ ಬಿತ್ತರವಾಗುತ್ತದೆ. ಒಂದು ಸುದ್ದಿಯನ್ನು ನಾವು ನೋಡುವ ಹೊತ್ತಿಗೇ, ಅಮೆರಿಕದ ಅಧ್ಯಕ್ಷನೂ ನೋಡುವಂತಾಗಿದೆ. ಇಂದು ಪ್ರತಿಯೊಬ್ಬರ ಕೈಯಲ್ಲೂ ಸ್ಮಾರ್ಟ್ ಫೋನ್ ಇದೆ, ಅದು ಇರುವವರೆಲ್ಲ ಫೇಸ್ ಬುಕ್, ಎಕ್ಸ್, ಇನ್ಸ್ಟಾ ಖಾತೆಗಳನ್ನು ಹೊಂದಿದ್ದಾರೆ. ಅವರೆಲ್ಲರಿಗೂ ಫಾಲೋವರುಗಳಿದ್ದಾರೆ. ತಮಗೆ ಸಂಬಂಧಿಸಿದ ಸುದ್ದಿಯನ್ನು ಸಾಮಾಜಿಕ ಜಾಲತಾಣಗಳ ತಮ್ಮ ತಮ್ಮ ಖಾತೆಗಳಲ್ಲಿ ಹಂಚಿಕೊಳ್ಳುತ್ತಾರೆ. ಅವರಿಗೆ ಪತ್ರಿಕೆಯಲ್ಲಿ ಪ್ರಕಟವಾಗಬೇಕು ಎಂಬ ದರ್ದು ಇಲ್ಲ. ಸಾಮಾಜಿಕ ಜಾಲತಾಣಗಳ ಮೂಲಕ ಯಾರಿಗೆ ಹೋಗಬೇಕೋ, ಅವರಿಗೆ ಹೋದರೆ ಸಾಕು. ಹೀಗಾಗಿ ಅವರಿಗೆ ಪತ್ರಿಕೆಯಲ್ಲಿ ಪ್ರಕಟವಾಗಬೇಕು ಮತ್ತು ಟಿವಿಯಲ್ಲಿ ಕಾಣಿಸಿಕೊಳ್ಳಬೇಕು ಎಂಬ ಜರೂರು ಇಲ್ಲ.
ಮೊದಲಾಗಿದ್ದರೆ ಏನೇ ಘಟನೆ ಜರುಗಲಿ, ಪತ್ರಿಕೆಯ ವರದಿಗಾರರಿಗೆ ತಿಳಿಸಿ ಎನ್ನುತ್ತಿದ್ದರು. ಅಪಘಾತವಾದರೆ, ಬೆಂಕಿ ಅಪಘಾತವಾದರೆ, ಯಾರಾದರೂ ಸತ್ತರೆ, ಹುಲಿ ಬಂದರೆ, ಕಾಡಾನೆ ನುಗ್ಗಿದರೆ, ಯಾರಾದರೂ ಲಂಚ ಕೇಳಿದರೆ, ಅನ್ಯಾಯ - ಅಕ್ರಮ ಕಂಡರೆ ಪತ್ರಿಕೆಗಳಿಗೆ ತಿಳಿಸಿ, ಟಿವಿ ನೈನ್ ಗೆ ಫೋನ್ ಮಾಡಿ ಎಂದು ಹೇಳುತ್ತಿದ್ದರು. ಈಗ ಯಾರೂ ಹಾಗೆ ಹೇಳುವುದಿಲ್ಲ. ತಮ್ಮ ಕೈಯಲ್ಲಿರುವ ಮೊಬೈಲ್ ಮೂಲಕ ಫೋಟೋ ತೆಗೆಯುತ್ತಾರೆ, ವಿಡಿಯೋ ಮಾಡಿಕೊಳ್ಳುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಾರೆ. ಇಂದು ಸ್ಮಾರ್ಟ್ ಫೋನ್ ಅಥವಾ ಮೊಬೈಲ್ ಇರುವವರೆಲ್ಲ ವರದಿಗಾರರೇ. ಇವರು ಯಾವ ಪತ್ರಕರ್ತರಿಗೇನೂ ಕಮ್ಮಿಯಿಲ್ಲ. ಇಂದು ಎಲ್ಲರಿಗೂ ಯೂಟ್ಯೂಬ್ ಮಹತ್ವ ಮತ್ತು reach ಗೊತ್ತು. ಹೀಗಾಗಿ ಎಲ್ಲರೂ ಯೂಟ್ಯೂಬ್ ಖಾತೆ ಹೊಂದಿದ್ದಾರೆ. ಹಾಗೆ ನೋಡಿದರೆ, ಇಂದು ಪ್ರತಿಯೊಬ್ಬರೂ ಯೂಟ್ಯೂಬ್ ಚಾನೆಲ್ ಗಳೇ!
ಇವರಿಗೆ ನ್ಯೂಸ್ ಚಾನಲ್ ಹಂಗಿಲ್ಲ. ಮೀನು ಮಾರಾಟ ಮಾಡುವ ಹೆಂಗಸು, ತರಕಾರಿ ಬೆಳೆಯುವ ರೈತ, ಕೋಳಿ ಸಾಕಾಣಿಕೆ ಮಾಡುವವ, ಬೂಟು ಪಾಲಿಶ ಮಾಡುವವ, ನಶ್ಯ ಮಾರಾಟಗಾರ, ಹೂವಿನ ಅಂಗಡಿಯವ… ಎಲ್ಲರೂ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮದೇ ಆದ ವೇದಿಕೆಗಳನ್ನು ಹೊಂದಿದ್ದಾರೆ. ತಮಗೆ ಬೇಕಾದ ಜನರನ್ನು ತಲುಪಲು ಇವರೆಲ್ಲ ಮಾರ್ಗಗಳನ್ನು ಕಂಡುಕೊಂಡಿದ್ದಾರೆ. ಅಷ್ಟೇ ಅಲ್ಲ, ಇವರೆಲ್ಲರಿಗೂ ಅವರವರ ಸಾಮರ್ಥ್ಯಕ್ಕನುಗುಣವಾಗಿ ಫಾಲೋವರುಗಳಿದ್ದಾರೆ. ಇವರಿಗೆ ಮುಖ್ಯವಾಹಿನಿ ಮಾಧ್ಯಮಗಳೇ ಬೇಕಾಗಿಲ್ಲ. ದಿನದಲ್ಲಿ ತಾನು ಹಿಡಿದ ಮೀನುಗಳನ್ನು ತನ್ನ ಯೂಟ್ಯೂಬ್ ನಲ್ಲಿ ಪ್ರಸಾರ ಮಾಡಿ, ಅರ್ಧ ಗಂಟೆಯಲ್ಲಿ ಮಾರಾಟ ಮಾಡುವ, ಉಡುಪಿಯ ಅಕ್ಕಯಮ್ಮನಿಗೂ ಲಕ್ಷಾಂತರ ಫಾಲೋವರುಗಳಿದ್ದಾರೆ. ಕುಣಿಗಲ್ ಸನಿಹ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಪ್ರತಿದಿನ ತಾಜಾ ತರಕಾರಿ ಮಾರಾಟ ಮಾಡುವ ಶಂಕರೇಗೌಡ ಪ್ರತಿದಿನ ಹತ್ತು ನಿಮಿಷ ಲೈವ್ ಬಂದು ತರಕಾರಿ ಮಾರಾಟ ಮಾಡುತ್ತಾನೆ. ಅದನ್ನು ಹತ್ತಾರು ಸಾವಿರ ಮಂದಿ ನೋಡುತ್ತಾರೆ. ಆತನಿಗೆ ಲಕ್ಷಕ್ಕೂ ಅಧಿಕ ಫಾಲೋವರ್ಸ್ ಇದ್ದಾರೆ.
ಕಳೆದ ಹತ್ತು-ಹದಿನೈದು ವರ್ಷಗಳಲ್ಲಿ ಮಾಧ್ಯಮ ಪರಿಸರ (ecosystem) ಸಂಪೂರ್ಣವಾಗಿ ಬದಲಾಗಿಬಿಟ್ಟಿದೆ. ಇಂದಿನ ಡಿಜಿಟಲ್ ಯುಗದಲ್ಲಿ ‘ಮಾಧ್ಯಮ’ ಎನ್ನುವ ಪದದ ವ್ಯಾಖ್ಯಾನವೇ ಮಗ್ಗುಲು ಬದಲಿಸಿದೆ. ಒಂದು ಕಾಲದಲ್ಲಿ ಸಾಮಾನ್ಯ ಜನರ ಧ್ವನಿ ಜನಪ್ರಿಯವಾಗಬೇಕಾದರೆ ಪತ್ರಿಕೆ ಅಥವಾ ಟಿವಿ ಚಾನಲ್‌ಗಳ ಕೃಪಾಕಟಾಕ್ಷ ಬೇಕಿತ್ತು. ಆದರೆ ಇಂದು ಪರಿಸ್ಥಿತಿ ಹಾಗಿಲ್ಲ. ಸ್ಮಾರ್ಟ್‌ಫೋನ್ ಮತ್ತು ಅಗ್ಗದ ಅಂತರ್ಜಾಲದ ಕ್ರಾಂತಿಯಿಂದಾಗಿ, ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಕೂಡ ತನ್ನದೇ ಆದ ಪ್ರಭಾವಲಯವನ್ನು ಸೃಷ್ಟಿಸಿಕೊಂಡಿದ್ದಾನೆ. ಹಿಂದೆ ಸುದ್ದಿಯೆಂದರೆ ಅದು ಕೇವಲ ರಾಜಕೀಯ ಅಥವಾ ಅಪರಾಧ ವಿಚಾರಗಳಾಗಿದ್ದವು. ಆದರೆ ಇಂದು ಶ್ರಮಜೀವಿಗಳ ಬದುಕು ಕೂಡ ಸುದ್ದಿಯಾಗುತ್ತಿದೆ. ಮುಖ್ಯವಾಹಿನಿ ಮಾಧ್ಯಮಗಳು ಟಿಆರ್‌ಪಿ ಬೆನ್ನತ್ತಿ ಸತ್ಯಕ್ಕಿಂತ ಹೆಚ್ಚು ಮನರಂಜನೆಗೆ ಪ್ರಾಮುಖ್ಯ ನೀಡುತ್ತಿರುವಾಗ, ಜನರು ಸಹಜತೆಗಾಗಿ (Authenticity) ಹುಡುಕಾಡುತ್ತಿದ್ದಾರೆ. ಇಂದಿನ ಸೋಷಿಯಲ್ ಮೀಡಿಯಾ ಕ್ರಾಂತಿಯು ಸಾಮಾನ್ಯ ಜನರನ್ನು ಅಸಾಮಾನ್ಯರನ್ನಾಗಿ ಮಾಡಿದೆ. ಇವರು ಕೇವಲ ಫಾಲೋವರ್ಸ್‌ಗಳನ್ನು ಹೊಂದಿಲ್ಲ, ಬದಲಾಗಿ ಒಂದು ನಿಷ್ಠಾವಂತ ಗ್ರಾಹಕ ಬಳಗವನ್ನು ಸೃಷ್ಟಿಸಿಕೊಂಡಿದ್ದಾರೆ. ‘ಯಾರು ಸುದ್ದಿಯಾಗಬೇಕು?’ ಎಂಬುದನ್ನು ನಿರ್ಧರಿಸುವ ಅಧಿಕಾರ ಈಗ ಎಡಿಟರ್‌ಗಳ ಕೈಯಿಂದ ಜನಸಾಮಾನ್ಯರ ಕೈಗೆ ಬಂದಿದೆ.
ಕಳೆದ ಹದಿಮೂರು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಒಂದೇ ಒಂದು ಪತ್ರಿಕಾಗೋಷ್ಠಿ ಕರೆದಿಲ್ಲ. ಪತ್ರಕರ್ತನ್ನುದ್ದೇಶಿಸಿ ಮಾತಾಡಿಲ್ಲ. ಅಸಲಿಗೆ ಅವರಿಗೆ ಮಾಧ್ಯಮ ಸಲಹೆಗಾರರಾಗಲಿ, ಮಾಧ್ಯಮ ಕಾರ್ಯದರ್ಶಿಯಾಗಲಿ ಇಲ್ಲವೇ ಇಲ್ಲ. ಅವರಿಗಿಂತ ಮುನ್ನ ಪ್ರಧಾನಿಯಾದವರೆಲ್ಲ ಆ ಹುದ್ದೆಯನ್ನು ಇಟ್ಟುಕೊಂಡಿದ್ದರು. ಗಣ್ಯ ಪತ್ರಕರ್ತರನ್ನು ಆ ಹುದ್ದೆಯಲ್ಲಿ ಕುಳ್ಳಿರಿಸಿದ್ದರು. ಪತ್ರಿಕಾಗೋಷ್ಠಿ ಕರೆಯದ ಬಗ್ಗೆ ಅವರ ಸನಿಹವರ್ತಿಗಳು ನೀಡುವ ಸಮರ್ಥನೆ ಅಂದ್ರೆ ಪ್ರಧಾನಿಯವರು ಸಾರ್ವಜನಿಕವಾಗಿ ಏನು ಹೇಳಬೇಕೋ, ಅದನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹೇಳುತ್ತಾರೆ. ಪತ್ರಕರ್ತರ ಮೂಲಕವೇ ಹೇಳಬೇಕು ಎಂದೇನಿಲ್ಲವಲ್ಲ? ಮೋದಿ ಅವರು ‘ಮಧ್ಯವರ್ತಿ ರಹಿತ ಸಂವಹನ’ವನ್ನು (Disintermediated Communication) ಬಲವಾಗಿ ನಂಬುತ್ತಾರೆ. ಸಾಂಪ್ರದಾಯಿಕ ಪತ್ರಿಕಾಗೋಷ್ಠಿಗಳಲ್ಲಿ ಪತ್ರಕರ್ತರು ಕೇಳುವ ಪ್ರಶ್ನೆಗಳು ಮತ್ತು ಅದಕ್ಕೆ ನೀಡುವ ಉತ್ತರಗಳು ಮಾಧ್ಯಮಗಳ 'ಎಡಿಟಿಂಗ್'ಗೆ ಒಳಪಡುತ್ತವೆ ಎಂಬುದು ಅವರ ಅಭಿಪ್ರಾಯವಿರಬಹುದು. ಪ್ರಧಾನಿಯವರ ‘ಮನ್ ಕಿ ಬಾತ್’ ಕಾರ್ಯಕ್ರಮವು ಇದಕ್ಕೆ ಅತ್ಯುತ್ತಮ ಉದಾಹರಣೆ. ರೇಡಿಯೋ ಮತ್ತು ಸೋಶಿಯಲ್ ಮೀಡಿಯಾ ಮೂಲಕ ಅವರು ಕೋಟ್ಯಂತರ ಜನರೊಂದಿಗೆ ನೇರವಾಗಿ ಮಾತನಾಡುತ್ತಾರೆ, ಇಲ್ಲಿ ಪ್ರಶ್ನೆ ಕೇಳುವ ಪತ್ರಕರ್ತರ ಅಗತ್ಯ ಅವರಿಗೆ ಕಂಡುಬಂದಿಲ್ಲ. ಸರಕಾರದ ಬೆಂಬಲಿಗರು ಇದನ್ನು ‘ತಂತ್ರಜ್ಞಾನದ ಸಮರ್ಥ ಬಳಕೆ’ ಎಂದು ಕರೆದರೆ, ಟೀಕಾಕಾರರು ಇದನ್ನು ‘ಜವಾಬ್ದಾರಿಯಿಂದ ನುಣುಚಿಕೊಳ್ಳುವ ತಂತ್ರ’ ಎನ್ನುತ್ತಾರೆ. ಆದರೂ, ಜನರೊಂದಿಗೆ ನೇರವಾಗಿ ಸಂಪರ್ಕ ಸಾಧಿಸುವ ಅವರ ಈ ವಿಶಿಷ್ಟ ಕಲೆ ಅವರನ್ನು ಇತರ ನಾಯಕರಿಗಿಂತ ಭಿನ್ನವಾಗಿ ನಿಲ್ಲಿಸಿರುವುದು ಸುಳ್ಳಲ್ಲ.
ಮಾಧ್ಯಮ ಲೋಕದ ಇತಿಹಾಸದಲ್ಲಿ ಇಂದು ನಾವು ಅತ್ಯಂತ ಕುತೂಹಲಕಾರಿ ಘಟ್ಟದಲ್ಲಿದ್ದೇವೆ. ಒಂದು ಕಾಲದಲ್ಲಿ ‘ಅಭಿಪ್ರಾಯ’ ಎನ್ನುವುದು ಕೇವಲ ಸಂಪಾದಕೀಯ ಪುಟಗಳಿಗೆ ಅಥವಾ ರಾತ್ರಿಯ ಪ್ರೈಮ್ ಟೈಮ್ ಚರ್ಚೆಗಳಿಗೆ ಸೀಮಿತವಾಗಿತ್ತು. ಆದರೆ ಇಂದು ಪರಿಸ್ಥಿತಿ ಸಂಪೂರ್ಣವಾಗಿ ಬದಲಾಗಿದೆ. ಯಾರಲ್ಲಿ ವಿಷಯವಿದೆಯೋ, ಯಾರಲ್ಲಿ ಆಕರ್ಷಕವಾಗಿ ಮಾತನಾಡುವ ಕಲೆಯಿದೆಯೋ, ಅವರು ಇಡೀ ಮಾಧ್ಯಮ ಸಾಮ್ರಾಜ್ಯವನ್ನೇ ಸೃಷ್ಟಿಸಬಲ್ಲರು ಎಂಬುದು ಸಾಬೀತಾಗಿದೆ. ಇಂದು ಯಾರಲ್ಲಿ ಅಭಿಪ್ರಾಯವಿದೆಯೋ, ಅವನಿಗೆ ಅವನದೇ ಆದ ಸ್ವಂತ ವೇದಿಕೆಯಿದೆ. ಆತ ಮಾಧ್ಯಮದ ಮರ್ಜಿಗೆ ಒಳಗಾಗಬೇಕಿಲ್ಲ. ಆತ ಏಕಾಏಕಿ ತನ್ನದೇ ಆದ ಯೂಟ್ಯೂಬ್ ಚಾನೆಲ್ ಆರಂಭಿಸಿ, ತನ್ನ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಬಹುದು. ಈ ರೀತಿಯ ಯೂಟ್ಯೂಬ್ ಚಾನೆಲ್ ಹೊಂದಿರುವವರ ಪೈಕಿ ಹೆಚ್ಚಿನವರು ಪತ್ರಕರ್ತರಲ್ಲ. ಸೋಜಿಗದ ಸಂಗತಿಯೆಂದರೆ, ಭಾರತದಲ್ಲಿ ‘ಟಾಪ್ ಟೆನ್’ ಯೂಟ್ಯೂಬ್ ಚಾನೆಲ್, ಪಾಡ್ ಕಾಸ್ಟ್ ಚಾನೆಲ್ ಹೊಂದಿರುವವರು ಪತ್ರಕರ್ತರಲ್ಲ. ಫೇಸ್ ಬುಕ್ ಮತ್ತು ಟ್ವಿಟರ್ ನಲ್ಲಿ ಪತ್ರಕರ್ತರಿಗಿಂತ ಹೆಚ್ಚು ಫಾಲೋವರ್ಸ್ ಹೊಂದಿರುವವರಿದ್ದಾರೆ. ಅಲ್ಲಿ ಪತ್ರಕರ್ತರಿಗಿಂತ ಹೆಚ್ಚಾಗಿ ಸಾಮಾನ್ಯ ಹಿನ್ನೆಲೆಯ ಅಥವಾ ಬೇರೆ ವೃತ್ತಿಯವರೇ ಕಾಣಸಿಗುತ್ತಾರೆ. ಇದಕ್ಕೆ ಮುಖ್ಯ ಕಾರಣಗಳು ಸರಳ ಭಾಷೆ ಮತ್ತು ಶೈಲಿ ಹಾಗೂ ವೈವಿಧ್ಯಮಯ ವಿಷಯಗಳು. ಜನರು ಸ್ಕ್ರಿಪ್ಟೆಡ್ ಸುದ್ದಿಗಳಿಗಿಂತ ಹೆಚ್ಚಾಗಿ, ಎಡಿಟಿಂಗ್ ಇಲ್ಲದ ನೇರ ಮಾತುಗಳನ್ನು ಇಷ್ಟಪಡುತ್ತಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಪಾಡ್‌ಕಾಸ್ಟ್‌ಗಳು ಭಾರತದಲ್ಲಿ ಭಾರಿ ಜನಪ್ರಿಯತೆ ಗಳಿಸಿವೆ. ಉದಾಹರಣೆಗೆ, ರಣವೀರ್ ಅಲ್ಲಾಬಾಡಿಯಾ (BeerBiceps) ಅವರಂಥ ಪಾಡ್‌ಕಾಸ್ಟರ್‌ಗಳು ಪತ್ರಕರ್ತರಲ್ಲ. ಆದರೂ ಅವರು ವಿಜ್ಞಾನಿಗಳು, ಉದ್ಯಮಿಗಳು ಮತ್ತು ಆಧ್ಯಾತ್ಮಿಕ ಗುರುಗಳನ್ನು ಸಂದರ್ಶಿಸಿ ಕೋಟ್ಯಂತರ ಜನರನ್ನು ತಲುಪುತ್ತಿದ್ದಾರೆ. ಇವರಿಗೆ ಟಿವಿ ಚಾನಲ್‌ಗಳಲ್ಲಿ ಹತ್ತು ಸೆಕೆಂಡ್‌ನ ‘ಸೌಂಡ್ ಬೈಟ್’ ಸಿಗುತ್ತದೆ. ಆದರೆ ಇಲ್ಲಿ ಗಂಟೆಗಟ್ಟಲೆ ಆಳವಾದ ಚರ್ಚೆ ನಡೆಯುತ್ತದೆ. ಇದು ಜ್ಞಾನದಾಹಿಗಳಿಗೆ ದೊಡ್ಡ ವರದಾನವಾಗಿದೆ. ಹಿಂದೆ ಒಬ್ಬ ವಿಚಾರವಂತ ಬರೆಯಬೇಕೆಂದರೆ ಸಂಭಾವನೆಗಾಗಿ ಪತ್ರಿಕೆಗಳನ್ನು ನೆಚ್ಚಿಕೊಳ್ಳಬೇಕಿತ್ತು. ಈಗ ಯೂಟ್ಯೂಬ್‌ನ ‘ಆಡ್ ರೆವೆನ್ಯೂ’, ಸ್ಪಾನ್ಸರ್‌ಶಿಪ್ ಮತ್ತು ಮೆಂಬರ್‌ಶಿಪ್‌ಗಳ ಮೂಲಕ ಒಬ್ಬ ಸ್ವತಂತ್ರ ಕ್ರಿಯೇಟರ್ ಲಕ್ಷಾಂತರ ರುಪಾಯಿ ಗಳಿಸಬಹುದು. ಈ ಆರ್ಥಿಕ ಸ್ವಾತಂತ್ರ್ಯವು ಅವರ ಅಭಿಪ್ರಾಯಗಳಿಗೆ ಬಲ ನೀಡಿದೆ. ಅವರು ಯಾವುದೇ ಮಾಲೀಕರ ಅಥವಾ ರಾಜಕೀಯ ಪಕ್ಷದ ಅಜೆಂಡಾಗಳಿಗೆ ಬಲಿಯಾಗಬೇಕಿಲ್ಲ. ಇಂದು ಯೂಟ್ಯೂಬ್ ಕೇವಲ ವಿಡಿಯೋ ಪ್ಲಾಟ್‌ಫಾರ್ಮ್ ಆಗಿ ಉಳಿದಿಲ್ಲ, ಅದೊಂದು ‘ಪರ್ಯಾಯ ವಿಶ್ವವಿದ್ಯಾಲಯ’ವಾಗಿದೆ. ಧ್ರುವ್ ರಾಠೀ ಅಥವಾ ಅಭಿ ಅಂಡ್ ನಿಯು ಅವರಂಥವರು ಸುದ್ದಿಗಳ ವಿಶ್ಲೇಷಣೆ ಮಾಡುತ್ತಾರೆ. ಇವರು ಸಾಂಪ್ರದಾಯಿಕ ಪತ್ರಕರ್ತರಲ್ಲದಿದ್ದರೂ, ಇವರ ವಿಡಿಯೋಗಳು ಮುಖ್ಯವಾಹಿನಿ ಮಾಧ್ಯಮಗಳಿಗಿಂತ ಹೆಚ್ಚು ವೀಕ್ಷಣೆ ಪಡೆಯುತ್ತವೆ. ಜನರು ಸತ್ಯದ ವಿಭಿನ್ನ ಆಯಾಮಗಳನ್ನು ತಿಳಿಯಲು ಈ ಸ್ವತಂತ್ರ ವೇದಿಕೆಗಳ ಮೊರೆ ಹೋಗುತ್ತಿದ್ದಾರೆ.
ಈ ಬದಲಾವಣೆಯಲ್ಲಿ ಒಂದು ಅಪಾಯವೂ ಇದೆ. ಪತ್ರಕರ್ತರಿಗೆ ಕೆಲವು ವೃತ್ತಿಪರ ನೈತಿಕತೆ (Ethics) ಮತ್ತು ಜವಾಬ್ದಾರಿಗಳಿರುತ್ತವೆ. ಆದರೆ ಸ್ವತಂತ್ರ ಯುಟ್ಯೂಬರ್‌ಗಳಿಗೆ ಅಂಥ ಕಟ್ಟುಪಾಡುಗಳಿಲ್ಲ. ಇದು ಕೆಲವೊಮ್ಮೆ ತಪ್ಪು ಮಾಹಿತಿ (Misinformation) ಹರಡಲು ದಾರಿಯಾಗಬಹುದು. ಆದರೂ, ಜನರೇ ಬುದ್ಧಿವಂತರಾಗಿರುವುದರಿಂದ ಸತ್ಯ ಮತ್ತು ಸುಳ್ಳಿನ ನಡುವಿನ ವ್ಯತ್ಯಾಸವನ್ನು ಕಾಲಕ್ರಮೇಣ ಗುರುತಿಸುತ್ತಿದ್ದಾರೆ. ಹಿಂದೆ ‘ಮಾಧ್ಯಮದ ಮಸಲತ್ತು’ ಎಂಬುದಿತ್ತು. ಸಂಪಾದಕೀಯ ಪುಟಕ್ಕೆ ಮಾತ್ರ ಸೀಮಿತವಾದ ಸಂಪಾದಕರಿದ್ದರು. ಅವರೇ ಎಲ್ಲವನ್ನೂ ನಿಯಂತ್ರಿಸುತ್ತಿದ್ದರು. ಈಗ ಆ ‘ಪ್ರಭೃತಿ’ಗಳೇ ಇಲ್ಲವಾಗಿದ್ದಾರೆ. ಈಗ ಅವರು ತಮ್ಮ ಗತವೈಭವವನ್ನು ಮೆಲುಕು ಹಾಕುವಂತಾಗಿದೆ. ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಈಗ ಡಿಗ್ರಿ ಅಥವಾ ದೊಡ್ಡ ಕಚೇರಿಯ ಅಗತ್ಯವಿಲ್ಲ. ಕೇವಲ ಒಂದು ಸ್ಮಾರ್ಟ್‌ಫೋನ್ ಮತ್ತು ವಿಷಯದ ಸ್ಪಷ್ಟತೆ ಇದ್ದರೆ ಸಾಕು. ಭಾರತದ ಟಾಪ್ ಹತ್ತು ಚಾನೆಲ್‌ಗಳಲ್ಲಿ ಪತ್ರಕರ್ತರಲ್ಲದವರು ಇರುವುದು ಬದಲಾಗುತ್ತಿರುವ ಜನರ ಆಸಕ್ತಿ ಮತ್ತು ಮಾಧ್ಯಮದ ಹೊಸ ಮನ್ವಂತರಕ್ಕೆ ಸಾಕ್ಷಿಯಾಗಿದೆ.
ಇವೆಲ್ಲಕ್ಕಿಂತ ಮುಖ್ಯವಾಗಿ, ಇಂದಿನ ಪತ್ರಿಕಾ ಓದುಗ, ಪತ್ರಕರ್ತನಿಗಿಂತ ಮುಂದಿದ್ದಾನೆ. ಟಿವಿ ವೀಕ್ಷಕ, ಆಂಕರ್ ಗಿಂತ ಚೆನ್ನಾಗಿ ತಿಳಿದುಕೊಂಡಿದ್ದಾನೆ. ಸಾಹಿತಿಗಿಂತ ಓದುಗನೇ ವಿಷಯವನ್ನು ಚೆನ್ನಾಗಿ ಮಂಡಿಸಬಲ್ಲ. ನುರಿತ ವಿಮರ್ಶಕನಿಗಿಂತ ಒಂದು ಕೈ ಮೇಲಾಗಿ ಪುಸ್ತಕವನ್ನಾಗಲಿ, ಸಿನಿಮಾವನ್ನಾಗಲಿ, ವಿಮರ್ಶೆ ಮಾಡಬಲ್ಲ. ಪತ್ರಕರ್ತನ ಬರಹದಲ್ಲಿರುವ ತಪ್ಪುಗಳನ್ನು ಪಟ್ಟಿ ಮಾಡಿ, ಎಲ್ಲರ ಎದುರು ಬೆತ್ತಲೆಯಾಗಿಸಬಲ್ಲ. ಹಿಂದೆ ಒಬ್ಬ ಪತ್ರಕರ್ತ ಅಥವಾ ಸಾಹಿತಿ ಹೇಳಿದ್ದೇ ಅಂತಿಮ ಸತ್ಯವಾಗಿತ್ತು. ಏಕೆಂದರೆ ಮಾಹಿತಿ ಅವರ ಬಳಿ ಮಾತ್ರ ಇರುತ್ತಿತ್ತು. ಆದರೆ ಇಂದು ಅಂತರಜಾಲದ (ಗೂಗಲ್, ವಿಕಿಪೀಡಿಯ) ಕಾರಣದಿಂದಾಗಿ ಓದುಗನ ಬಳಿಯೂ ಅದೇ ಮಾಹಿತಿಯಿದೆ. ಪತ್ರಕರ್ತ ಲೇಖನದಲ್ಲಿ ತಪ್ಪು ಅಂಕಿ-ಅಂಶ ನೀಡಿದರೆ, ಹತ್ತು ಸೆಕೆಂಡ್‌ನಲ್ಲಿ ಓದುಗ ಅದನ್ನು ಪತ್ತೆಹಚ್ಚಿ ಕಾಮೆಂಟ್ ಬಾಕ್ಸ್‌ನಲ್ಲಿ ಸರಿಪಡಿಸುತ್ತಾನೆ. ತಾಕತ್ತಿದ್ದರೆ ಲಂಕೇಶ್ ಮತ್ತು ರವಿ ಬೆಳಗೆರೆ ಈಗ ಪತ್ರಿಕೋದ್ಯಮ ಮಾಡಬೇಕಿತ್ತು. ಅವರ ಕಾಲದಲ್ಲಿ ಸಂವಹನವು ಏಕಮುಖವಾಗಿತ್ತು. ಅವರು ಬರೆದಿದ್ದನ್ನು ಓದಿ ಜನ ಮೆಚ್ಚಿಕೊಳ್ಳಬೇಕಿತ್ತೇ ಹೊರತು, ಪ್ರಶ್ನೆ ಮಾಡುವ ವೇದಿಕೆಗಳು ಇರಲಿಲ್ಲ. ಪ್ರಶ್ನೆ ಮಾಡುವವರ ಮೇಲೆ ಅವರು ಪ್ರಹಾರ ಮಾಡಿ ಬಾಯಿ ಮುಚ್ಚಿಸುತ್ತಿದ್ದರು. ಈಗ ಆ ತಂತ್ರಗಳು ನಡೆಯುವುದಿಲ್ಲ. ಈಗ ಓದುಗರು ಹಿಡಿಯುವ ಭೂತಗನ್ನಡಿ ಶಾಖಕ್ಕೆ ಅವರಿಬ್ಬರೂ ಸುಟ್ಟು ಹೋಗುತಿದ್ದರು.
ಹಳದಿ ಪತ್ರಿಕೋದ್ಯಮ ಅಥವಾ ಊಹಾಪೋಹದ ವರದಿಗಾರಿಕೆ ಇಂದು ನಡೆಯುವುದಿಲ್ಲ. ಅಂದು ಲಂಕೇಶ್-ಬೆಳಗೆರೆ ಪ್ರಕಟಿಸುತ್ತಿದ್ದ ಅವೆಷ್ಟೋ ವೈಯಕ್ತಿಕ ದಾಳಿಗಳು ಅಥವಾ ಆಧಾರರಹಿತ ಸುದ್ದಿಗಳು ಇಂದಿನ ಕಾಲದಲ್ಲಾಗಿದ್ದರೆ ‘ಡಿಜಿಟಲ್ ಲಿಂಚಿಂಗ್’ಗೆ ಒಳಗಾಗುತ್ತಿದ್ದವು. ಈಗ ಊಹಾಪೋಹದ ಟ್ಯಾಬ್ಲಾಯಿಡ್ ಪತ್ರಿಕೋದ್ಯಮ ಮಾಡಲು ಸಾಧ್ಯವೇ ಇರಲಿಲ್ಲ. ಆಗ ಕಟ್ಟುಕತೆಗಳನ್ನು ಬರೆದು ತಪ್ಪಿಸಿಕೊಳ್ಳಬಹುದಿತ್ತು. ಆದರೆ ಇಂದು ಸುಳ್ಳು ಸುದ್ದಿ ಹರಡಿದರೆ ಅಥವಾ ತಪ್ಪು ಮಾಹಿತಿ ನೀಡಿದರೆ ‘ಎಕ್ಸ್’ ಮತ್ತು ‘ಫೇಸ್‌ಬುಕ್’‌ಗಳಲ್ಲಿ ಜನ ಆ ಪತ್ರಕರ್ತನನ್ನು ಸಾರ್ವಜನಿಕವಾಗಿ ಬೆತ್ತಲೆ ಮಾಡುತ್ತಾರೆ. ಬರಹಗಾರನೊಬ್ಬ ತನ್ನ ಲೇಖನದಲ್ಲಿ ಪಕ್ಷಪಾತ ಮಾಡಿದರೆ, ಓದುಗರು ಕೂಡಲೇ ಅದನ್ನು ಪತ್ತೆಹಚ್ಚಿ ಆತನ ಹಳೆಯ ಬರಹಗಳ ಜತೆ ಹೋಲಿಸಿ ಆತನ ಅಜೆಂಡಾವನ್ನು ಬಯಲಿಗೆಳೆಯುತ್ತಾರೆ. ಮಾಹಿತಿ ತಂತ್ರಜ್ಞಾನದ ಪ್ರಭಾವದಿಂದಾಗಿ ಜ್ಞಾನವು ಈಗ ಕೇವಲ ಒಂದು ವರ್ಗದ ಅಥವಾ ಒಂದು ವೃತ್ತಿಯ ಜನರ ಸ್ವತ್ತಾಗಿ ಉಳಿದಿಲ್ಲ. ಇಂದಿನ ಓದುಗ ಕೇವಲ ‘ಗ್ರಾಹಕ’ನಾಗಿ ಉಳಿಯದೇ, ವಿಮರ್ಶಕನಾಗಿ, ಸಂಶೋಧಕನಾಗಿ ಮತ್ತು ತಿದ್ದುವ ಗುರುವಾಗಿಯೂ ಬದಲಾಗಿದ್ದಾನೆ. ಟಿವಿ ಚರ್ಚೆಗಳಲ್ಲಿ ಆಂಕರ್‌ಗಳು ತಪ್ಪು ಮಾಹಿತಿ ನೀಡಿದಾಗ ಅಥವಾ ಪೂರ್ವಗ್ರಹ ತೋರಿದಾಗ, ವೀಕ್ಷಕರು ಆ ಕ್ಲಿಪ್‌ಗಳನ್ನು ಎಡಿಟ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಯಬಿಟ್ಟು ಅವರ ಮುಖವಾಡ ಕಳಚುತ್ತಿದ್ದಾರೆ. ಇಂದು ಆಂಕರ್‌ಗಿಂತ ವೀಕ್ಷಕನೇ ಹೆಚ್ಚು ಜಾಗರೂಕನಾಗಿದ್ದಾನೆ.
ಇಂದಿನ ಕಾಲದಲ್ಲಿ ‘ಮಾಹಿತಿಯ ಸರ್ವಾಧಿಕಾರ’ ಕೊನೆಗೊಂಡಿದೆ. ಯಾರೂ ಕೂಡ ತಾವು ದೊಡ್ಡ ತಜ್ಞರು ಎಂದು ಭ್ರಮೆಯಲ್ಲಿರುವಂತಿಲ್ಲ. ಓದುಗ ಅಥವಾ ವೀಕ್ಷಕ ಇಂದು ಕೇವಲ ಮೂಕಪ್ರೇಕ್ಷಕನಲ್ಲ. ಆತ ಸಂಶೋಧಕನೂ ಹೌದು, ತೀರ್ಪುಗಾರನೂ ಹೌದು. ಇದು ಪತ್ರಿಕೋದ್ಯಮ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ದೊಡ್ಡ ಮಟ್ಟದ ಉತ್ತರದಾಯಿತ್ವವನ್ನು (Accountability) ತಂದಿದೆ. ಜ್ಞಾನದ ಪ್ರಜಾಪ್ರಭುತ್ವೀಕರಣವೇ ಈ ಹೊಸ ಯುಗದ ಯಶಸ್ಸು. ಇಂದಿನ ಓದುಗನ ಭೂತಗನ್ನಡಿಗೆ ಬೆದರದೇ ಕೆಲಸ ಮಾಡುವುದು ಪ್ರತಿಯೊಬ್ಬ ಪತ್ರಕರ್ತನ ಮುಂದಿರುವ ದೊಡ್ಡ ಸವಾಲು. ಪತ್ರಿಕೆಗಳು ಅಳಿಯುವುದಿಲ್ಲ, ಪತ್ರಕರ್ತ ಅಳಿವಿನ ಅಂಚಿನಲ್ಲಿರುವ ಪ್ರಾಣಿಯೂ ಅಲ್ಲ. ಆದರೆ ಪತ್ರಕರ್ತ ತನ್ನ ಅಸ್ತಿತ್ವವನ್ನು ಕಾಪಾಡಿಕೊಳ್ಳಲು ಹಿಂದೆಂದಿಗಿಂತಲೂ ಹೆಚ್ಚು update ಆಗಬೇಕಾದ, ವಿಶ್ವಾಸಾರ್ಹನಾಗಬೇಕಾದ ಅಗತ್ಯವಿದೆ, ಮತ್ತಷ್ಟು ವೃತ್ತಿಪರ ಆಗಬೇಕಾಗಿದೆ. ಇವೆಲ್ಲ ಹುಯ್ದಾಟಗಳ ಮಧ್ಯೆ, ಓದುಗರ - ಕೇಳುಗರ ಸಂತತಿ ಹತ್ತಾರು ಪಟ್ಟು ಹೆಚ್ಚಿರುವುದು, ಪತ್ರಕರ್ತರನ್ನು ಒರೆಗೆ ಹಚ್ಚುತ್ತಿರುವುದು, ವೈಯಕ್ತಿಕವಾಗಿ ನನಗೆ ಹೆಚ್ಚು ಸಂತಸ ನೀಡಿದ ಸಂಗತಿ.
ಹೀಗೆಂದು ಮೊನ್ನೆ ಬೀದರಿನಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (KUWJ)ಏರ್ಪಡಿಸಿದ ‘ನಲವತ್ತನೇ ಪತ್ರಕರ್ತರ ಸಮ್ಮೇಳನ’ದ ಪ್ರಧಾನ ಭಾಷಣದಲ್ಲಿ ಹೇಳಿ ಕುಳಿತುಕೊಂಡೆ. ಲಂಕೇಶ್ - ರವಿ ಬೆಳಗೆರೆ ಈ ಕಾಲದಲ್ಲಿ ಇರಬೇಕಿತ್ತು !

ಮೈಸೂರಿನ ʼಕಿಲ್ಲಿಂಗ್ ಡಾಕ್ಟರ್ʼ ವಿನಯ್ ಅಸಲಿ ಬಣ್ಣ ಬಯಲು: ಸೈಕೋ ವೈದ್ಯನ ಬಲೆಗೆ ಸಿಲುಕಿ ನಲುಗಿದ ಮೂವರು ಸುಂದರಿಯರು...              ಸಮಾಜದಲ...
26/03/2026

ಮೈಸೂರಿನ ʼಕಿಲ್ಲಿಂಗ್ ಡಾಕ್ಟರ್ʼ ವಿನಯ್ ಅಸಲಿ ಬಣ್ಣ ಬಯಲು: ಸೈಕೋ ವೈದ್ಯನ ಬಲೆಗೆ ಸಿಲುಕಿ ನಲುಗಿದ ಮೂವರು ಸುಂದರಿಯರು...



ಸಮಾಜದಲ್ಲಿ ವೈದ್ಯರನ್ನು ದೇವರ ಸಮಾನ ಎಂದು ಕಾಣಲಾಗುತ್ತದೆ. ಆದರೆ ಮೈಸೂರಿನಲ್ಲಿ ಆಯುರ್ವೇದ ವೈದ್ಯನೆಂದು ಕರೆಸಿಕೊಳ್ಳುವ ವಿನಯ್ ಎಂಬಾತನ ಕ್ರೂರ ಕೃತ್ಯಗಳು ಕೇಳಿದರೆ ಮೈ ಜುಂ ಎನ್ನುತ್ತದೆ. ಈತ ಕೇವಲ ವೈದ್ಯನಲ್ಲ, ಪ್ರೀತಿಯ ಹೆಸರಲ್ಲಿ ಹೆಣ್ಣುಮಕ್ಕಳ ಜೀವನದ ಜೊತೆ ಚೆಲ್ಲಾಟವಾಡಿ, ಸಾವು-ನೋವಿಗೆ ಕಾರಣನಾದ ಒಬ್ಬ ಸರಣಿ ಅಪರಾಧಿ ಎಂಬ ಆಘಾತಕಾರಿ ಸತ್ಯಗಳು ಈಗ ಹೊರಬರುತ್ತಿವೆ.
ಹುಣಸೂರು ತಾಲೂಕಿನ ಹನಗೋಡು ಸಮೀಪ ಕ್ಲಿನಿಕ್ ನಡೆಸುತ್ತಿದ್ದ ಈ 'ಮೋಸದ ವೈದ್ಯ'ನ ಅಸಲಿ ಮುಖ ಈಗ ಬಯಲಾಗಿದೆ. ಈತ ಮೈಸೂರು ಆಯುರ್ವೇದ ಡಾಕ್ಟರ್ ಅಲ್ಲಲ್ಲಾ, ಹುಡುಗಿಯರಿಗೆ ಮೋಸ ಮಾಡುವ ವಿಕ್ಟರ್. ಗಂಡನಿಂದ ವಿಚಿತ್ರ ಲೈಂಗಿಕ ಕಿರುಕುಳ ಕೇಸಿನ ಬೆನ್ನಲ್ಲಿಯೇ ಆತನ ಹಳೆಯ ಪ್ರೇಮ ಪುರಾಣಗಳೆಲ್ಲವೂ ಹೊರಬೀಳುತ್ತಿವೆ. ಈತನ ವಿರುದ್ಧ ಪೊಲೀಸರು ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹ ಮಾಡುತ್ತಿದ್ದಾರೆ.
12 ವರ್ಷದ ಹಿಂದಿನ ಲವ್ ಕಹಾನಿ, ವೈದ್ಯನ ಮೋಸಕ್ಕೆ ನರಳಿ ಪ್ರಾಣಬಿಟ್ಟ ವೈದ್ಯೆ ನಾಗಶ್ರೀ. ವೈದ್ಯೆಯ ಸಾವಿನ ಹಿಂದೆ ರೋಚಕ ಕಹಾನಿಯೊಂದು ಹೊರಬಿದ್ದಿದೆ. ಮೈಸೂರಿನ ಖಾಸಗಿ ಆಯುರ್ವೇದ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಡಾ.ನಾಗಶ್ರೀ ಜೊತೆಗೆ, ಜ್ಯೂನಿಯರ್ ಡಾಕ್ಟರ್ ಆಗಿ ವಿನಯ್ ಸೇರಿಕೊಂಡನು.
ನಂತರ ತನಗಿಂತ ಹಿರಿಯ ಡಾಕ್ಟರ್ ನಾಗಶ್ರೀ ಅವರನ್ನ ಪುಸಲಾಯಿಸಿ ಲವ್ ಮಾಡ್ತಾನೆ. ಮದುವೆ ಮಾಡಿಕೊಳ್ಳುವುದಾಗಿ ಲೈಂಗಿಕ ಸಂಬಂಧವನ್ನೂ ಬೆಳೆಸುತ್ತಾನೆ. ನಂತರ, ಮದುವೆ ಮಾಡಿಕೊಳ್ಳುವಂತೆ ಕೇಳಿದಾಗ ನೀನು ನನಗಿಂತ 2 ವರ್ಷ ದೊಡ್ಡವಳು ಮದುವೆ ಮಾಡಿಕೊಳ್ಳಲು ಮನೆಯಲ್ಲಿ ಒಪ್ಪುತ್ತಿಲ್ಲ ಎಂದು ನಾಟಕ ಮಾಡಿದ್ದಾನೆ.
ಇದಾದ ನಂತರ ಇಬ್ಬರೂ ಬದುಕುವುದು ಬೇಡವೆಂದು ಶ್ರೀರಂಗಪಟ್ಟಣಕ್ಕೆ ಹೋಗಿ ಇಬ್ಬರೂ ಸಾಯೋಣವೆಂದು ಹೇಳಿದ್ದಾನೆ. ಶ್ರೀರಂಗಪಟ್ಟಣದಲ್ಲಿ ಲಾಡ್ಜ್ ರೂಮು ಮಾಡಿ, ಇಬ್ಬರೂ ನಿದ್ರೆ ಮಾತ್ರೆಯನ್ನು ತೆಗೆದುಕೊಂಡಿದ್ದಾರೆ. ನಂತರ, ಯುವತಿಯನ್ನು ಕೊಲೆ ಮಾಡುವ ಉದ್ದೇಶದಿಂದ ಡಾ.ನಾಗಶ್ರೀಗೆ ಓವರ್‌ಡೋಸ್ ಇಂಜೆಕ್ಷನ್ ಕೂಡ ಕೊಟ್ಟಿದ್ದಾನೆ. ಇದರಿಂದ ಯುವತಿ ಸ್ಥಿತಿ ಗಂಭೀರವಾಗಿದ್ದು ಕೋಮಾಕ್ಕೆ ಜಾರಿದ್ದಳು. ಆದರೆ, ವಿನಯ್‌ಗೆ ಏನೂ ಆಗಿರಲಿಲ್ಲ. 12 ವರ್ಷಗಳ ಕಾಲ ಕೋಮಾದಲ್ಲಿದ್ದ ಡಾ.ನಾಗಶ್ರೀ ಇತ್ತೀಚೆಗೆ ಸಾವನ್ನಪ್ಪಿದ್ದಾರೆ.
ಚಾರ್ಟೆಡ್ ಅಕೌಂಟೆಂಟ್ ಗೌತಮಿ ಹಿರೇಮಠ ಅವರು 2014ರಿಂದ 2017ರವರೆಗೆ ಇಂಗ್ಲೆಂಡಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಇದಾದ ನಂತರ 2017ರಲ್ಲಿ ಗೌತಮಿ ಹಿರೇಮಠ ಮೈಸೂರಿಗೆ ಬಂದು ವಾಸವಾಗಿದ್ದರು. ಆಗ ಡಾ. ವಿನಯ್ ಫೇಸ್‌ಬುಕ್ ಮೂಲಕ ಗೌತಮಿಯನ್ನು ಪರಿಚಯ ಮಾಡಿಕೊಂಡಿದ್ದನು. ಇಬ್ಬರೂ ಪರಿಚಿತರಾಗಿ, ಲವ್ ಮಾಡಿ ಒಂದು ವರ್ಷಗಳ ಕಾಲ ಪ್ರೇಮ ಹಕ್ಕಿಗಳಾಗಿ ವಿಹಾರ ಮಾಡಿದ್ದಾರೆ.
ಆದರೆ, ವಿನಯ್ ಜೊತೆಗೆ ಲವ್‌ನಲ್ಲಿದ್ದ ಗೌತಮಿ ಒಂದು ವರ್ಷದ ಬಳಿಕ ಆತ್ಮ*ಹತ್ಯೆ ಮಾಡಿಕೊಳ್ಳುತ್ತಾರೆ. ಇನ್ನು ಗೌತಮಿಯ ತಂದೆ ಡಾ.ವಿನಯ್‌ನಿಂದಲೇ ತನ್ನ ಮಗಳು ಸಾವನ್ನಪ್ಪಿದ್ದಾಳೆ ಎಂದು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆದರೆ, ಪೊಲೀಸರ ಮೇಲೆ ಪ್ರಭಾವ ಬೀರಿದ್ದರಿಂದ ಆ ಕೇಸಿನಿಂದಲೂ ವಿನಯ್ ಲೀಲಾಜಾಲವಾಗಿ ಹೊರಬಂದಿದ್ದನು.
ಇದೀಗ ಹುಣಸೂರಿನ ಹನಗೋಡು ಗ್ರಾಮದ ಪಕ್ಕದಲ್ಲಿರುವ ಹುಡುಗಿ ವಿನೋದಾ ಎನ್ನುವವರನ್ನು ಮದುವೆ ಮಾಡಿಕೊಳ್ಳುತ್ತಾರೆ. ವಿನೋದಾ ಮದುವೆಯಾಗಿ 15 ದಿನಕ್ಕೆ ಮನೆಯಿಂದ ಹೊರಗಡೆ ಬಂದಿದ್ದಾಳೆ. ಮದುವೆಯಾಗಿ ಒಂದೇ ವಾರದಲ್ಲಿ ನಿಮ್ಮ ಮನೆಯವರಿಗೆ ಅದ್ಧೂರಿ ಮದುವೆ ಮಾಡಿಕೊಡಲು ಆಗಿಲ್ಲ, ನಾವು ಕೇಳಿದಷ್ಟು ಹಣ ಕೊಡಲು ಆಗಿಲ್ಲ. ನೀವು ನಿಮ್ಮನೆಯಲ್ಲಿ ಮಾಡಿರುವ ಮದುವೆ ಸಾಲಕ್ಕೆ ಜಮೀನು ಮಾರುತ್ತಾರಂತೆ, ಅದೇ ಜಮೀನನ್ನ ನಮ್ಮ ಹೆಸರಿಗೆ ಬರೆದುಕೊಡಲು ಹೇಳು ಎಂದು ಒತ್ತಡ ಹಾಕಿದ್ದಾರೆ.
ಇದ್ಯಾವುದಕ್ಕೂ ವಿನೋದಾ ಸೊಪ್ಪು ಹಾಕದಿದ್ದಾಗ ಕಿರುಕುಳ ಕೊಡಲು ಆರಂಭಿಸಿದ್ದಾನೆ. ಪ್ರತಿದಿನ ಜ್ಯೂಸ್‌ನಲ್ಲಿ ಡ್ರಗ್ಸ್ ಹಾಕಿಕೊಟ್ಟು ಮಂಕು ಕವಿದಂತೆ ಮಾಡುತ್ತಿದ್ದನು. ಇನ್ನು ರಾತ್ರಿಯಾದರೆ ವಿಚಿತ್ರ ಲೈಂಗಿಕತೆಗೆ ಬೇಡಿಕೆ ಇಡುತ್ತಿದ್ದನು. ಇದಕ್ಕೊಪ್ಪದಿದ್ದರೆ ಗನ್ ತೋರಿಸಿ ಜೀವ ಬೆದರಿಕೆಯನ್ನೂ ಹಾಕುತ್ತಿದ್ದನು ಎಂದು ಆರೋಪ ಮಾಡಿದ್ದಾರೆ.

23/08/2025

Best Hollywood Movie Clip |

24/09/2023

Siddanakolla |Lajja Gowri Temple | Fertility Temple | ಸಿದ್ದನಕೊಳ್ಳ | ಸಂತಾನ ಭಾಗ್ಯ ಕರುಣಿಸುವ ಲಜ್ಜಾಗೌರಿ

19/09/2023

Hubli Ganesh Festival | ಕೇದಾರನಾಥ ಗಣೇಶ |

14/09/2023

Anjanadri Hill | ಅಂಜನಾದ್ರಿ ಬೆಟ್ಟ |

Address

MG Road
Bangalore
560001

Telephone

+918904987757

Website

Alerts

Be the first to know and let us send you an email when News Fuel posts news and promotions. Your email address will not be used for any other purpose, and you can unsubscribe at any time.

Contact The Business

Send a message to News Fuel:

Share