
24/03/2023
ಹಂಪಿ - ಪುರಾತತ್ವ ಅದ್ಭುತ | Hampi: Archeological Wonder
visit: www.7wondersofkarnataka.com
ರೋಮ್ ನಂತೆ ಇಡೀ ಹಂಪಿಯೇ ಒಂದು ಅದ್ಭುತ. ಇದನ್ನು ಜಗತ್ತಿನ ಅತಿದೊಡ್ಡ ಓಪನ್ ಏರ್ ಆರ್ಕಿಯಾಲಜಿಕಲ್ ಮ್ಯೂಸಿಯಂಗಳಲ್ಲಿ ಒಂದು ಎಂದು ಹೇಳಬಹುದು. ಇಲ್ಲಿನ ಶಿಲ್ಪಕಲಾ ವೈಭವ, ಶಿಲ್ಪಕಲಾ ವೈವಿಧ್ಯ, ನೂರಾರು ಸ್ಮಾರಕಗಳು, ಜಗತ್ಪ್ರಸಿದ್ಧ. ಹಂಪಿಯ ಕಲ್ಲಿನ ರಥ ಯಾರಿಗೆ ಗೊತ್ತಿಲ್ಲ ಹೇಳಿ. ಇಲ್ಲಿನ ಕಲ್ಲುಕಲ್ಲಿನಲಿ ಶಿಲೆಗಳು ಸಂಗೀತ ನುಡಿಸುತ್ತವೆ ಎಂಬುದು ಅಕ್ಷರಶಃ ನಿಜ. ಇದಕ್ಕೆ ವಿಜಯ ವಿಠ್ಠಲ ದೇವಾಲಯದ ಸಂಗೀತ ಕಂಬಗಳಿಂದ ಹಿಡಿದು, ಮಹಾನವಮಿ ದಿಬ್ಬದ ಬಳಿ ಇರುವ ಕಲ್ಲಿನ ಊಟದ ತಟ್ಟೆಗಳವರೆಗೆ ಅನೇಕ ಸಾಕ್ಷಾತ್ ನಿದರ್ಶನಗಳಿವೆ. ಅಲ್ಲದೆ, ಹಂಪಿಯ ಸುತ್ತ ಇರುವ ಬಂಡೆ ಬೆಟ್ಟಗಳ ಪರಿಸರ ಕರ್ನಾಟಕದ ವೈವಿಧ್ಯಮಯ ನಿಸರ್ಗ ಸೌಂದರ್ಯಕ್ಕೆ ಪ್ರತ್ಯೇಕ ಮೆರುಗನ್ನೇ ನೀಡಿದೆ. ಕರ್ನಾಟಕದಲ್ಲಿ ಹಂಪಿಯಂಥ ಹಲವಾರು ಶಿಲ್ಪಕಲೆಯ ಪುರಾತತ್ವ ಅದ್ಭುತಗಳಿವೆ. ಪ್ರತಿಯೊಂದೂ ತಾವೇ ತಾವಾಗಿ ಒಂದೊಂದು ಅದ್ಭುತ ಎನಿಸಿಕೊಳ್ಳಬೇಕಾದಂಥವು. ಬೇಲೂರು ಚನ್ನಕೇಶವ ದೇವಾಲಯ ಭಾರತೀಯ ಶಿಲ್ಪಕಲೆಯ ಔನ್ನತ್ಯಕ್ಕೆ ಉದಾಹರಣೆ. ಹಳೇಬೀಡು, ಪಟ್ಟದಕಲ್ಲು ದೇವಾಲಯಗಳು ಒಂದೆಡೆಯಾದರೆ ಐಹೊಳೆಯು ಭಾರತೀಯ ದೇವಾಲಯ ಶಿಲ್ಪಕಲೆಯ ತೊಟ್ಟಿಲು ಎಂದೇ ಖ್ಯಾತ. ಬಾದಾಮಿಯ ಗುಹಾಂತರ ದೇವಾಲಯಗಳೂ ಏನೂ ಕಡಿಮೆ ಇಲ್ಲ. ಲಕ್ಕುಂಡಿ, ತಲಕಾಡು ಸೇರಿದಂತೆ ಕರ್ನಾಟಕಾದ್ಯಂತ ಇರುವ ಇಂಥ ಹಲವಾರು ಪುರಾತತ್ವ ವೈಭವದ ಪ್ರಾತಿನಿಧಿಕ ಅದ್ಭುತವೇ ಹಂಪಿ.
#ಹಂಪಿ