16/05/2023
ಆರ್ಥಿಕ ಅಪರಾಧಿಗಳಿಗೆ ಶ್ರೀದಲ್ಲೇ ವಿಶಿಷ್ಟ "ಬಿಲ್ಲೆ' ಸಂಖ್ಯೆ'
ಆರ್ಥಿಕ ಅಪರಾಧಗಳನ್ನು ಎಸಗಿ, ಪರದೇಶಗಳಿಗೆ ಓಡಿ, ಹೋಗಿ ತಲೆಮರೆಸಿಕೊಳ್ಳುವವರು ಇನ್ನು ಮುಂದೆ ಎಚ್ಚರಿಕೆಯಿಂದ ಇರುವುದು ಒಳಿತು. ಏಕೆಂದರೆ, ಕೇಂದ್ರ ವಿತ್ತ ಸಚಿವಾಲಯ ಆರ್ಥಿಕ ಅಪರಾಧಿಗಳೆಲ್ಲರಿಗೂ ವಿಶಿಷ್ಟವಾದ "ಬಿಲ್ಲೆ' ಸಂಖ್ಯೆಗಳನ್ನು ಕೊಡಲು ನಿರ್ಧರಿಸಿದೆ. ಈ ಬಿಲ್ಲೆ ಸಂಖ್ಯೆಯನ್ನು ವ್ಯಕ್ತಿಗತವಾಗಿ ಅಪರಾಧ ಎಸಗಿದವರಿಗೆ ಅಷ್ಟೇ ಅಲ್ಲ, ಕಂಪನಿಗಳಿಗೂ ಕೊಡಲಾಗುತ್ತದೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.
ಕೇಂದ್ರ ವಿತ್ತ ಸಚಿವಾಲಯದ ವ್ಯಾಪ್ತಿಗೆ ಬರುವ ಕೇಂದ್ರೀಯ ಆರ್ಥಿಕ ಗುಪ್ತಚರ ಬ್ಯುರೋ ಈಗಾಗಲೆ ವಿಜಯ್ ಮಲ್ಯ, ಕೇಂದ್ರದ ಮಾಜಿ ವಿತ್ತ ಸಚಿವ ಪಿ. ಚಿದಂಬರಂ, ದೆಹಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸೇರಿ ಇದುವರೆಗೆ 2.5 ಲಕ್ಷಆರ್ಥಿಕ ಅಪರಾಧಿಗಳ ಪಟ್ಟಿಯನ್ನು ಸಿದ್ಧಪಡಿಸಿಕೊಂಡಿದೆ. ಇವರೆಲ್ಲರಿಗೂ ವಿಶಿಷ್ಟ ಬಿಲ್ಲೆ ಸಂಖ್ಯೆ ನೀಡುವ ಪ್ರಕ್ರಿಯೆಗೆ ಚಾಲನೆ ನೀಡಿದೆ.
ಹೀಗಿರಲಿದೆ ಬಿಲ್ಲೆ ಸಂಖ್ಯೆ: ವ್ಯಕ್ತಿಗತವಾಗಿ ಆರ್ಥಿಕ ಅಪರಾಧ ಎಸಗಿದ್ದರೆ ಆ ವ್ಯಕ್ತಿಯ ಆಧಾರ್ಕಾರ್ಡ್ ಸಂಖ್ಯೆ, ಕಂಪನಿಯಾಗಿದ್ದರೆ ಕಂಪನಿಯ ಪಾನ್ಕಾರ್ಡ್ ಆಧರಿಸಿ, ವಿಶಿಷ್ಟ ಬಿಲ್ಲೆ ಸಂಖ್ಯೆಯನ್ನು ಸೃಜಿಸಲಾಗುತ್ತದೆ. ಆಧಾರ್ಕಾರ್ಡ್ ಅಥವಾ ಪಾನ್ ಸಂಖ್ಯೆಯನ್ನು ಆಧರಿಸಿ, ಸೃಜಿಸಲಾಗುವ ಈ ಬಿಲ್ಲೆ ಸಂಖ್ಯೆಯನ್ನು ವಿಶಿಷ್ಟ ಆರ್ಥಿಕ ಅಪರಾಧಿ ಕೋಡ್ ಎಂದು ಕರೆಯಲಾಗುತ್ತದೆ. ಹಾಗೂ ಈ ಸಂಖ್ಯೆಯನ್ನು ವೈಯಕ್ತಿಕ ಅಪರಾಧವಾಗಿದ್ದರೆ, ಅವರ ಆಧಾರ್ಕಾರ್ಡ್ಗೆ ಹಾಗೂ ಕಂಪನಿಯಾಗಿದ್ದರೆ, ಕಂಪನಿಯ ಪಾನ್ಕಾರ್ಡ್ನೊಂದಿಗೆ ಜೋಡಣೆ ಮಾಡಲಾಗುತ್ತದೆ.
ಹೀಗೆ ಮಾಡುವುದರಿಂದ, ಆರ್ಥಿಕ ಅಪರಾಧ ಎಸಗಿರುವ ಆರೋಪ ಕೇಳಿ ಬಂದಾಗ ಬಹುತನಿಖಾ ಸಂಸ್ಥೆಗಳ ತನಿಖೆಯನ್ನು ಏಕಕಾಲಕ್ಕೇ ಆರಂಭಿಸಲು ಅನುಕೂಲವಾಗುತ್ತದೆ. ಸದ್ಯ ಇರುವ ವ್ಯವಸ್ಥೆಯಲ್ಲಿ ಆರ್ಥಿಕ ಅಪರಾಧ ಎಸಗಿರುವವರ ವಿರುದ್ಧ ಯಾವುದಾದರೂ ಒಂದು ಸಂಸ್ಥೆ ತನಿಖೆ ನಡೆಸಿ, ಆರೋಪಪಟ್ಟಿ ಇಲ್ಲವೇ ವಿಚಾರಣೆಯ ದೂರು ದಾಖಲಿಸಿಕೊಳ್ಳುವವರೆಗೂ ಬೇರೆ ತನಿಖಾ ಸಂಸ್ಥೆಗಳು ಕಾಯುತ್ತಾ ಕೂಡಬೇಕಾಗುತ್ತದೆ.
ಎಲ್ಲಿ ಸಿಗುತ್ತದೆ ಈ ಮಾಹಿತಿ: ಆರ್ಥಿಕ ಅಪರಾಧ ಎಸಗಿಸದವರ ಎಲ್ಲಾ ಮಾಹಿತಿಗಳು ಬೆರಳಿನ ತುದಿಯಲ್ಲೇ ಲಭ್ಯವಾಗುವ ರೀತಿಯಲ್ಲಿ ರಾಷ್ಟ್ರೀಯ ಆರ್ಥಿಕ ಅಪರಾಧ ದಾಖಲೆಗಳು (ನಿಯೋರ್ & ಎನ್ಇಒಆರ್) ಎಂಬಲ್ಲಿ ಶೇಖರಣೆ ಮಾಡಲಾಗುತ್ತದೆ. ಇದರಿಂದಾಗಿ, ಆರ್ಥಿಕ ಅಪರಾಧ ಎಸಗಿದವರ ವಿವರಗಳು ಕ್ಷಣಾರ್ಧದಲ್ಲಿ ಲಭ್ಯವಾಗುತ್ತದೆ.