06/08/2025
ಮುಷ್ಕರ ಸ್ಥಗಿತಗೊಳಿಸದಿದ್ದರೆ ನ್ಯಾಯಾಂಗ ನಿಂದನೆ ಅರ್ಜಿ ದಾಖಲು: ಸಾರಿಗೆ ನೌಕರರ ಸಂಘಗಳಿಗೆ ಹೈಕೋರ್ಟ್ ತಾಕೀತು - KSRTC STRIKE
ನ್ಯಾಯಾಲಯದ ಆದೇಶವಿದ್ದರೂ ಸಾರಿಗೆ ನೌಕರರು ಮುಷ್ಕರ ಮುಂದುವರೆಸಿರುವುದು ನ್ಯಾಯಾಂಗ ನಿಂದನೆಯಾಗಿದೆ. ನೌಕರರ ಸಂಘಗಳ ಪದಾಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಿಕೊಳ್ಳಲಾಗುವುದು ಎಂದು ಹೈಕೋರ್ಟ್ ಎಚ್ಚರಿಕೆ ನೀಡಿತು.
ಮುಷ್ಕರ ಸ್ಥಗಿತಗೊಳಿಸದಿದ್ದರೆ ನ್ಯಾಯಾಂಗ ನಿಂದನೆ ಅರ್ಜಿ ದಾಖಲು: ಸಾರಿಗೆ ನೌಕರರ ಸಂಘಗಳಿಗೆ ಹೈಕೋರ್ಟ್ ತಾಕೀತು
ಬೆಂಗಳೂರು: ನಾಳೆ ಮುಷ್ಕರ ನಡೆಸುವುದಿಲ್ಲ ಎಂಬುದಾಗಿ ಸಾರಿಗೆ ನೌಕರರ ಸಂಘವು ಹೈಕೋರ್ಟ್ಗೆ ಮಾಹಿತಿ ನೀಡಿದೆ. ನಗರದ ಜೆ. ಸುನೀಲ್ ಎಂಬುವರು ಸೇರಿದಂತೆ ಮತ್ತಿತರರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಸಿ. ಎಂ. ಜೋಷಿ ಅವರಿದ್ದ ನ್ಯಾಯಪೀಠಕ್ಕೆ ರಸ್ತೆ ಸಾರಿಗೆ ನಿಗಮಗಳ ನೌಕರರ ಜಂಟಿ ಕ್ರಿಯಾ ಸಮಿತಿ ಪರ ವಕೀಲರು ಈ ಮಾಹಿತಿ ನೀಡಿದರು.
ನ್ಯಾಯಾಲಯ ಕಲಾಪ ಪ್ರಾರಂಭವಾಗುತ್ತಿದ್ದಂತೆ ಸರ್ಕಾರದ ಪರವಾಗಿ ಹಾಜರಿದ್ದ ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ಸಾರಿಗೆ ಎಂಬುದು ಅಗತ್ಯ ಸೇವೆಯಾಗಿದೆ. ಸಾರಿಗೆ ನೌಕರರು ಮುಷ್ಕರಕ್ಕೆ ಕರೆ ನೀಡಿರುವುದರಿಂದ ಜನ ಸಾಮಾನ್ಯರಿಗೆ ತೀವ್ರ ತೊಂದರೆಯಾಗಿದೆ. ಕೈಗಾರಿಕೆ ವಿವಾದ ಕಾಯ್ದೆಯಡಿಯಲ್ಲಿ ಸರ್ಕಾರ ಸಾರಿಗೆ ನಿಗಮಗಳ ನೌಕರರ ಸಂಘದ ಪದಾಧಿಕಾರಿಗಳೊಂದಿಗೆ ಸಂಧಾನ ಸಭೆ ನಡೆಸಲಾಗುತ್ತಿದೆ. ಈ ನಡುವೆ ಹೈಕೋರ್ಟ್ ಸಾರಿಗೆ ಮುಷ್ಕರ ನಡೆಸದಂತೆ ಆದೇಶ ನೀಡಿದೆ. ಆದರೂ, ಮುಷ್ಕರ ಮುಂದುರೆದಿದೆ ಎಂದು ತಿಳಿಸಿದರು.
ಈ ವೇಳೆ ರಸ್ತೆ ಸಾರಿಗೆ ನಿಗಮಗಳ ನೌಕರರ ಸಂಘದ ಪರ ವಕೀಲರನ್ನು ಪ್ರಶ್ನಿಸಿದ ಪೀಠ, ಮುಷ್ಕರ ಸ್ಥಗಿತವಾಗಿದೆಯೇ ಎಂದು ಪ್ರಶ್ನಿಸಿತು. ಇದಕ್ಕೆ ಉತ್ತರಿಸಿದ ವಕೀಲರು, ಬೆಂಗಳೂರಿನಲ್ಲಿ ಸಂಚಾರ ಮುಂದುವರೆದಿದೆ. ಕೆಲ ಸಂವಹನಾ ಕಾರಣದಿಂದಾಗಿ ಜಿಲ್ಲೆಗಳಲ್ಲಿ ಗೊಂದಲಕ್ಕೆ ಕಾರಣವಾಗಿದೆ ಎಂದು ವಿವರಿಸಿದರು.
ಇದಕ್ಕೆ ಗರಂ ಆದ ನ್ಯಾಯಪೀಠ, ನ್ಯಾಯಾಲಯದ ಆದೇಶವಿದ್ದರೂ ಮುಷ್ಕರ ಮುಂದುವರೆಸಿರುವುದು ನ್ಯಾಯಾಂಗ ನಿಂದನೆಯಾಗಿದೆ. ನೌಕರರ ಸಂಘಗಳ ಪದಾಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿತು.
ಅಲ್ಲದೆ, ಮುಷ್ಕರ ಸ್ಥಗಿತಗೊಳಿಸಿರುವ ಕುರಿತಂತೆ ಬುಧವಾರ ನ್ಯಾಯಪೀಠಕ್ಕೆ ಮಾಹಿತಿ ನೀಡಬೇಕು. ಇಲ್ಲವಾದಲ್ಲಿ ಸಂಘಗಳ ಪದಾಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಿಕೊಂಡು ವಿಚಾರಣೆ ನಡೆಸುವುದಕ್ಕೆ ಅದೇಶ ನೀಡಲಾಗುವುದು. ಸಾರಿಗೆ ಸಂಘಟನೆಗಳ ಕ್ರಿಯಾ ಸಮಿತಿ ಪದಾಧಿಕಾರಿಗಳ ಬಂಧನಕ್ಕೆ ಆದೇಶಿಸಲಾಗುವುದು ಎಂದು ಪೀಠ ಎಚ್ಚರಿಕೆ ನೀಡಿತು.
ಸರ್ಕಾರದೊಂದಿಗೆ ನಿಮ್ಮ ಸಮಸ್ಯೆ ಬಗೆಹರಿಸಿಕೊಳ್ಳಿ: ಸಾರಿಗೆ ನಿಗಮಗಳ ನೌಕರರ ಯಾವುದೇ ಸಮಸ್ಯೆ ಇದ್ದಲ್ಲಿ ಸರ್ಕಾರದ ಜೊತೆ ಚರ್ಚೆ ನಡೆಸಿ ಪರಿಹಾರ ಕಂಡುಕೊಳ್ಳಿ. ಅದನ್ನು ಹೊರತುಪಡಿಸಿ ಜನಸಾಮಾನ್ಯರನ್ನು ಒತ್ತೆಯಾಗಿರಿಸುವುದು, ಅವರಿಗೆ ಸಮಸ್ಯೆ ಉಂಟಾಗುವಂತೆ ಮಾಡುವುದನ್ನು ಸಹಿಸಲಾಗುವುದಿಲ್ಲ ಎಂದು ಪೀಠ ತರಾಟೆಗೆ ತೆಗೆದುಕೊಂಡಿತು.
ಎಸ್ಮಾ ಅಡಿ ಬಂಧನ: ಅಗತ್ಯ ಸೇವೆ ನಿರ್ವಹಣಾ ಕಾಯ್ದೆ (ಎಸ್ಮಾ) ಜಾರಿಯಲ್ಲಿದ್ದರೂ ಮುಷ್ಕರ ಮುಂದುವರೆಸಲಾಗಿದೆ. ಎಸ್ಮಾ ಕಾಯ್ದೆಯಡಿ ಸಂಘಟನೆಯ ಪದಾಧಿಕಾರಿಗಳನ್ನು ಬಂಧಿಸಬಹುದು. ಮುಷ್ಕರ ನಿಂತಿರುವುದಕ್ಕೆ ಸಂಬಂಧಿಸಿದಂತೆ ಬುಧವಾರ ನ್ಯಾಯಪೀಠಕ್ಕೆ ಮಾಹಿತಿ ನೀಡಬೇಕು ಎಂದು ಸೂಚನೆ ನೀಡಿದ ನ್ಯಾಯಪೀಠ ವಿಚಾರಣೆಯನ್ನು ಆಗಸ್ಟ್ 7ಕ್ಕೆ ಮುಂದೂಡಿತು.