13/09/2025
ನಂಜನಗೂಡು : ಮೃತಪಟ್ಟ ಮಗು ಶವ ಆಸ್ಪತ್ರೆಯಿಂದ ಪಡೆಯಲು ಹಣದ ಕೊರತೆ...ಗ್ರಾಮದಲ್ಲಿ ಭಿಕ್ಷೆ ಬೇಡಿದ ದೊಡ್ಡಮ್ಮ...ನಂಜನಗೂಡಿನಲ್ಲೊಂದು ಮನಕಲುಕುವ ಘಟನೆ...ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಮೃತಪಟ್ಡ ಮಗುವಿನ ಶವ ಪಡೆಯಲು ಹಣದ ಕೊರತೆಯಾದ ಹಿನ್ನಲೆ ದೊಡ್ಡಮ್ಮ ಗ್ರಾಮದಲ್ಲಿ ಸೆರಗು ಚಾಚಿ ಮನೆ ಮನೆಗೆ ತೆರಳಿ ಭಿಕ್ಷೆ ಬೇಡಿದ ಮನಕಲುಕುವ ಘಟನೆ ಬೆಳಕಿಗೆ ಬಂದಿದೆ.ಮೈಸೂರಿನಖಾಸಗಿ ಆಸ್ಪತ್ರೆಯ ವರ್ತನೆಗೆ ಗ್ರಾಮಸ್ಥರು ಹಿಡಿಶಾಪ ಹಾಕಿದ್ದಾರೆ.
ನಂಜನಗೂಡು ತಾಲ್ಲೂಕಿನ ಹೆಡೆತಲೆ ಗ್ರಾಮದಲ್ಲಿ ಘಟನೆ ನಡೆದಿದೆ.
ಹೆಡತಲೆ ಗ್ರಾಮದ ಮಹೇಶ್ ಮತ್ತು ರಾಣಿ ಎಂಬ ದಂಪತಿಯ
ಐದು ವರ್ಷದ ಮಗು ಆದ್ಯ ಮೃತಪಟ್ಟಿದೆ.
ಮಂಗಳವಾರ ಸಂಜೆ ನಂಜನಗೂಡು ತಾಲ್ಲೂಕಿನ ಬದನವಾಳು ಗ್ರಾಮದ ಚಾಮರಾಜನಗರ ಮತ್ತು ನಂಜನಗೂಡು ರಾಷ್ಟ್ರೀಯ ಹೆದ್ದಾರಿಯಲ್ಲಿ ಎರಡು ಬೈಕ್ ಗಳ ನಡುವೆ ಭೀಕರ ಅಪಘಾತ ಸಂಭವಿಸಿತ್ತು.
ಅಪಘಾತದಲ್ಲಿ ಹೆಮ್ಮರಗಾಲ ಗ್ರಾಮದ ಮೂವರಿಗೆ ಮತ್ತು ಹೆಡತಲೆ ಗ್ರಾಮದ ಮಹೇಶ್, ರಾಣಿ ಎಂಬ ದಂಪತಿಗಳು ಸೇರಿ ಮಗುವಿಗೂ ಗಂಭೀರ ಗಾಯಗಳಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಐದು ವರ್ಷದ ಆದ್ಯ ಎಂಬ ಮಗು ಸಾವನ್ನಪ್ಪಿದೆ.
ಮಗುವಿನ ತಂದೆ ತಾಯಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಇಂತಹ ಪರಿಸ್ಥಿತಿಯಲ್ಲಿ ಮೃತಪಟ್ಟಿರುವ ಮಗುವಿನ ಶವವನ್ನು ಪಡೆಯಲು ಹಣದ ಕೊರತೆ ಎದುರಾಗಿದೆ. ಮೈಸೂರಿನ ಖಾಸಗಿ ಆಸ್ಪತ್ರೆ ಚಿಕಿತ್ಸೆ ವೆಚ್ಚ ಸರಿಸುಮಾರು ಒಂದುವರೆ ಲಕ್ಷ ಹಣವನ್ನು ಕಟ್ಟಿ ನಂತರ ಶವವನ್ನು ತೆಗೆದುಕೊಂಡು ಹೋಗುವಂತೆ ಕುಟುಂಬಸ್ಥರಿಗೆ ತಾಕೀತು ಮಾಡಿದ್ದಾರೆ.ಅಷ್ಟೊಂದು ಹಣವನ್ನು ಬಡ ಕುಟುಂಬ ಕಟ್ಟಲಾಗದೆ ತಮ್ಮ ಗ್ರಾಮಕ್ಕೆ ಬಂದು ಗ್ರಾಮದ ಪ್ರತಿಯೊಂದು ಮನೆಗೆ ಮಗುವಿನ ದೊಡ್ಡಮ್ಮ ಮಂಗಳಮ್ಮ ಸೆರಗೊಡ್ಡಿ ಭಿಕ್ಷೆ ಬೇಡಿದ್ದಾರೆ.ಸುಮಾರು 80 ಸಾವಿರ ಹಣವನ್ನು ಸಂಗ್ರಹಿಸಿದ್ದಾರೆ.ಭಿಕ್ಷೆ ಬೇಡುತ್ತಿರುವ ದೃಶ್ಯಕಂಡು ಗ್ರಾಮಸ್ಥರು ಕಣ್ಣೀರಿಟ್ಟಿದ್ದಾರೆ.ನೊಂದ ಕುಟುಂಬಕ್ಕೆ ಪ್ರತಿ ಮನೆಯ ಕುಟುಂಬಸ್ಥರು ಹಣವನ್ನು ನೀಡಿ ಮಾನವೀಯತೆ ಮೆರೆದಿದ್ದಾರೆ.
ಮಾನವೀಯತೆ ಇಲ್ಲದ ಖಾಸಗಿ ಆಸ್ಪತ್ರೆ ಸಾವಿನಲ್ಲೂ ಸುಲಿಗೆ ಮಾಡುತ್ತಿರುವ ಈ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ...