08/07/2025
"ಜಯನಗರದ ಶ್ರೀ ರಾಘವೇಂದ್ರ ಸ್ವಾಮಿಗಳ ಸನ್ನಿಧಿಗೆ ಬಂಗಾರದ ರಥ ಸಮರ್ಪಿಸಲು ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದರಿಂದ ಸಂಕಲ್ಪ"
ಬೆಂಗಳೂರಿನ ಜಯನಗರದ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ರಾಯರ ಸನ್ನಿಧಿಗೆ ಭಕ್ತರ ಸಹಕಾರದಿಂದ ಬಂಗಾರದ ರಥವನ್ನು ಸಮರ್ಪಣೆ ಮಾಡಲು ಶ್ರೀ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರು ಸಂಕಲ್ಪವನ್ನು ಮಾಡಿ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್ ಕೆ ವಾದೀಂದ್ರ ಆಚಾರ್ಯರಿಗೆ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿ ಫಲ ಮಂತ್ರಾಕ್ಷತೆ ಕೊಟ್ಟು ಆಶೀರ್ವದಿಸಿದರು. ಈ ಸುವರ್ಣ ರಥದ ನಿರ್ಮಾಣದ ಅಂದಾಜು 3 ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಈ ಸುವರ್ಣರಥದ ಬೃಹತ್ ಕಾರ್ಯವು ನಿರ್ವಿಘ್ನವಾಗಿ ನೆರವೇರಲಿ ಎಂದು ಪರಮಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದರು ಸಂಕಲ್ಪಿಸಿದರು. ಈ ಶುಭ ಸಂದರ್ಭದಲ್ಲಿ ಶ್ರೀಪಾದರು ಆಶೀರ್ವಚನವನ್ನು ನೀಡುತ್ತಾ ರಾಯರಿಗೆ ಬಂಗಾರದ ಕವಚ, ಸುವರ್ಣ ರಥ ಮುಂತಾದವುಗಳು ಯಾವುದೂ ಬೇಕಾಗಿಲ್ಲ. ಗುರುಗಳು ತ್ಯಾಗ ವಿರಕ್ತರು ಆದರೂ ಭಕ್ತರು ತಮ್ಮ ಗುರುಗಳನ್ನು ಭಕ್ತಿಯಿಂದ ಅಲಂಕರಿಸಿ ರಥದಲ್ಲಿ ಕೂರಿಸಿ ಅನುಗ್ರಹ ಪಡೆದು ಕಣ್ಣು ತುಂಬಾ ಸಂತೋಷ ಪಡುವ ಇಂತಹ ಮಹತ್ಕಾರ್ಯಕ್ಕೆ ತನು ಮನ ಧನದಿಂದ ಸೇವೆ ಸಲ್ಲಿಸುವ ರಾಯರ ಭಕ್ತರ ಅಪೇಕ್ಷೆಯ ಮೇರೆಗೆ ಬಂಗಾರದ ರಥವನ್ನು ರಾಯರಿಗೆ ಸಮರ್ಪಿಸಲು ಸಂಕಲ್ಪವನ್ನು ಮಾಡಿದ್ದೇವೆ. ಇಂತಹ ಮಹತ್ಕಾರ್ಯಕ್ಕೆ ಸೇವೆ ಸಲ್ಲಿಸುವ ಭಕ್ತರಿಗೆ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಅನುಗ್ರಹವು ಸದಾ ಕಾಲ ಇರಲಿ ಎಂದು ಆಶೀರ್ವದಿಸಿದರು ಎಂದು ಶ್ರೀ ನಂದಕಿಶೋರ್ ಆಚಾರ್ಯರು ತಿಳಿಸಿದರು. ಈ ಸಂದರ್ಭದಲ್ಲಿ ವಿಶೇಷ ದಾನಿಗಳು ಭಾಗವಹಿಸಿ ಶ್ರೀಗಳಿಂದ ಫಲ ಮಂತ್ರಾಕ್ಷತೆ ಪಡೆದು ಗುರುಗಳ ಅನುಗ್ರಹಕ್ಕೆ ಪಾತರಾದರು.