18/03/2024
# ನಾನೇಕೆ ಪ್ರತಿಕ್ರಯಿಸುತ್ತೇನೆ #
(Long and boring post alert)
ಬಹಳ ಜನ ನನ್ನ ಪೋಸ್ಟ್ ಗಳನ್ನ ಓದಿ ಸ್ವಾಭಾವಿಕವಾಗಿ biased ಮತ್ತು ಪೂರ್ಣಮಾಹಿತಿ ಇಲ್ಲದೆ (ನನ್ನ ಬಗ್ಗೆ) ಮುಂತಾಗಿ ಪ್ರತಿಕ್ರಯಿಸುತ್ತಾರೆ. ನಾನೂ ಕೂಡ sarcastic ಆಗಿ ಅಥವಾ ಪ್ರಖಂಡವಾಗಿ ಯಾವುದನ್ನೂ ಯಾರನ್ನೂ ಅಲ್ಲಗಳೆಯದ್ದರಿಂದ ನನ್ನ ಮೇಲೆಯೂ ಅವರಿಗೆ ಅಷ್ಟು ಕೋಪ ಇರುವುದಿಲ್ಲ. ಬದಲಾಗಿ ನನಗೆ ಮಾಹಿತಿ ಕೊರತೆ ಇರಬಹುದೆಂದು( “ಅಯ್ಯೋ ಪಾಪ “ ಎಂಬಂತೆ) ಮೃದುವಾಗಿಯೇ ವ್ಯವಹರಿಸುತ್ತಾರೆ. ಅಂತಹವರಿಗೆ ನಾನು ಆಗಾಗ ಸಾಕ್ಷಿ ಆಧಾರ ಕೊಟ್ಟಿದ್ದೇನೆ. ಅದು ದಿನಪತ್ರಿಕೆಯ ಅಂಕಣ ಆಗಿರಬಹುದು, ರಿಪೋರ್ಟ್ ಆಗಿರಬಹುದು, video ಇನ್ನೊಂದು ಮತ್ತೊಂದು …ಹಲವರು ಇನ್ನಷ್ಟು ಮಾಹಿತಿ ಕೇಳುತ್ತಾರೆ, ಅದನ್ನೂ ಕೊಡುತ್ತೇನೆ. ಕೆಲವೊಮ್ಮೆ ಅಂಗೈ ಹುಣ್ಣಿಗೆ ಮಾಹಿತಿ ಬೇಡದಿದ್ದರೂ ಕೊಟ್ಟಿದ್ದೇನೆ…..facts are important not opinion !
ಕಾರಣ ಇಷ್ಟೇ….
ನಾನು ವಿಜ್ಞಾನದ ವಿದ್ಯಾರ್ಥಿ, ಕಳೆದ 20 ವರ್ಷಗಳಿಂದ ಈ ರಂಗದಲ್ಲಿದ್ದು ಪ್ರಸ್ತುತ ಕೆಮಿಕಲ್ ಕಂಪನಿಯೊಂದರಲ್ಲಿ ಹಿರಿಯ ವಿಜ್ಞಾನಿ ಯಾಗಿದ್ದೇನೆ. ಪ್ರಪಂಚದ ಬಹುಷ ಎಲ್ಲ ಮುಖ್ಯ ದೇಶ/ ಭಾಗಗಳಲ್ಲಿ ನಮ್ಮ ಕೆಲಸದ publications ಗಳು, ಹಕ್ಕುಸಾಮ್ಯ ಅಥವಾ ‘ಪೇಟೆಂಟ್’ಗಳು ನೋಂದಾಯಿಸಲ್ಪಟ್ಟಿವೆ. ಮುಖ್ಯವಾಗಿ ಪ್ಲ್ಯಾಸ್ಟಿಕ್ಸ್ ಪುನರ್ಬಳಕೆ, ಜೈವಿಕ ವಿಘಟನೀಯ ಪ್ಲಾಸ್ಟಿಕ್‌ಗಳು (plastics recycling, bio degradable plastics) ನನ್ನ ಕಾರ್ಯ ಕ್ಷೇತ್ರವಾಗಿದೆ. ಮಂಗಳೂರು ಕೆಮಿಕಲ್ಸ್ ಅಂಡ್ ಫರ್ಟಿಲೈಜರ್ಸ್ ನಲ್ಲಿ (MCFL) ಆರಂಭವಾದ ಈ ಪ್ರಯಾಣ, ಬೆಂಗಳೂರಿನ GE, SABIC ತಂತ್ರಜ್ಞಾನ ಸಂಸ್ಥೆ ಗಳಿಗೆ ತಲುಪಿ ಪ್ರಸ್ತುತ ಸೌದಿಅರೇಬಿಯಾಗೆ ಮುಟ್ಟಿದೆ. ಇದರ ಕಾರಣ ನನ್ನ ಕೆಲಸದಲ್ಲಿ ಅಕಾಡೆಮಿಕ್ ಶಿಸ್ತು ಇರುತ್ತದೆ. ಯಾವುದೇ ವಿಷಯವಿದ್ದರೂ ಮಾಹಿತಿ ಜಾಲಾಡುತ್ತೇನೆ ಇದಕ್ಕೆ ಸಂಶೋಧನಾವಲಯದಲ್ಲಿ literature review / search, ಅಥವಾ domain background research ಅನ್ನುತ್ತಾರೆ.
ಇದು ಹೆಗ್ಗಳಿಕೆಯಲ್ಲ ,ಪ್ರತಿಯೊಬ್ಬ ಜರ್ನಲಿಸ್ಟ್ ಅಥವಾ ಆಕ್ಟಿವಿಸ್ಟ್ ಅಥವಾ ಸಂಶೋಧಕ ಇರಬೇಕಾದುದೇ ಹೀಗೆಯೇ.
ನನ್ನ ಉನ್ನತ ವ್ಯಾಸಂಗ “Energy policy” ವಿಷಯದ ಮೇಲೆ ಆಗುರುವುದರಿಂದ ಸಾಧಾರಣವಾಗಿ ಹಲವಾರು ಕಡೆಯಿಂದ (ವಿಶ್ವಸಂಸ್ಥೆ, ವರ್ಲ್ಡ್ ಬ್ಯಾಂಕ್, IMF, Economist, financial times, express, peer reviewed articles, newspapers, blogs, government reports etc.) ಮಾಹಿತಿ ಸಂಗ್ರಹ ಮತ್ತು ಮಂಥನ ಮಾಡಿಕೊಳ್ಳುತ್ತಿರುತ್ತೇನೆ ಮತ್ತು ಸಮಾನ ಮನಸ್ಕರಾದ ಗೆಳೆಯರು ಹಲವು ವಿಚಾರಗಳ ಬಗೆಗಿನ ಮಾಹಿತಿಯನ್ನ ( ಅಭಿಪ್ರಾಯ, ಅನಿಸಿಕೆ ಅಲ್ಲ …ರಿಪೋರ್ಟ್ಗಳು! ) ಹಂಚಿಕೊಳ್ಳುತ್ತಾರೆ. ನಾನು ಹಾಗಾಗಿ ಏನೇ ಪೋಸ್ಟ್ ಮಾಡಿದರೂ ಅದಕ್ಕೆ reference ಕೊಡುತ್ತೇನೆ. ಕೆಲವೊಮ್ಮೆ ಮರೆತರೂ ನಂತರ ತಿದ್ದಿಕೊಳ್ಳುತ್ತೇನೆ.
ಇಲ್ಲಿಯವರೆಗೆ ಓದಿರುವ ಹಲವು ಪುಸ್ತಕಗಳು, ಓಡಾಡಿದ ಹತ್ತಕ್ಕೂ ಮಿಗಿಲಾದ ದೇಶಗಳು, ಭಾರತದ ಹಲವು ರಾಜ್ಯಗಳು, ಒಡನಾಡಿದ ಮತ್ತು ಒಡನಾಡುತ್ತಿರುವ ಪ್ರಪಂಚದ ಬೇರೆ ಬೇರೆ ದೇಶದ ಹಲವು ಜನಗಳು, ನಾನು ಬೆಳೆದುಬಂದ ಪರಿಸರ , ನಂಬಿಕೆ ಇದೆಲ್ಲದುದರ ಆಧಾರದ ಮೇಲೆ ಪ್ರಾಮಾಣಿಕವಾಗಿ ಹೇಳುವುದಾದರೆ ….we as a country have definitely come a long way but we have an awful long way to GO …..ಅದಕ್ಕೆ ಒಬ್ಬೊಬ್ಬರು ಒಂದೊಂದು ರಂಗದಲ್ಲಿ ಆಳವಾಗಿ ತೊಡಗಿಸಿಕೊಳ್ಳಬೇಕಿದೆ, ಸಮಸ್ಯೆಗಳನ್ನು ಹುಡುಕಿ ಹುಡುಕಿ ಎಲ್ಲರ ಸಹಾಯದಿಂದ ಪರಿಹರಿಸಿ ಮುನ್ನೆಡೆಯಬೇಕಿದೆ …80 ವರ್ಷಗಳ ಹಿಂದಷ್ಟೇ ನಾಯಿ ನರಿಗಳಂತೆ ಕಿತ್ತಾಡುತ್ತಿದ್ದ ಯೂರೋಪಿನ ದೇಶಗಳ ಮಧ್ಯೆ ಇವತ್ತು ಸರಹದ್ದುಗಳೇ ಇಲ್ಲ ….ಕೇವಲ 200 ಅಥವಾ ಗರಿಷ್ಠ 300 ವರ್ಷಗಳ ಹಿಂದೆ ಜಗತ್ತಿಗೆ ಗೊತ್ತಿರದಿದ್ದ ಯಾವ ನಾಗರೀಕತೆಗೂ ಪರಿಚಯವಿಲ್ಲದ ಅಮೆರಿಕ ಇವತ್ತು ಜಗತ್ತನ್ನು ತನ್ನ ಹಾರ್ಡ್ ಮತ್ತು ಸಾಫ್ಟ ಪವರ್ ನಿಂದಾಗಿ ಅಳುತ್ತಿದೆ. ಯುದ್ಧದ ಹೊಡೆತಕ್ಕೆ ಛಿದ್ರವಾಗಿದ್ದ ಜಪಾನ್ ದೇಶ, 90 ರ ದಶಕದವರೆಗೆ ನಮ್ಮಂತೆಯೇ ಇದ್ದ ಚೀನಾದ ಗ್ರೋಥ್ ರೇಟ್ ಅಲ್ಲಿಂದಾ ವರ್ಷಕ್ಕೆ 10 ರಿಂದಾ 13 ಪರ್ಸಂಟ್ನವರೆಗೆ ಹೋಗಿ ಇವತ್ತು ಅದು ಜಗತ್ತಿನ ಎಲ್ಲಾ ದೇಶಗಳ ಮಣ್ಣು ಮುಕ್ಕಿಸುತ್ತಿದೆ … ನಾವು ಇದನೆಲ್ಲಾ ಮನಗಾಣಬೇಕಿದೆ. ಇರಲಿ !
ದೇಶಪ್ರೇಮ ಒಳ್ಳೆಯದು ಆದರೆ ಮನುಷ್ಯಪ್ರೇಮ ದೊಡ್ಡದು. ಜಗಳ converge ಆಗುವ ಉದ್ದೇಶದಿಂದ ಆಡಿದರೆ ಅದರಿಂದ ಲಾಭ … ಅದಿಲ್ಲದಿದ್ರೆ ನಾವು ಒಬ್ಬರಿಂದೊಬ್ಬರು diverge ಆಗುತ್ತೇವೆ, ಅತ್ಯಂತ ಹೆಚ್ಚು ಜನಸಂದಣಿ ಇದ್ದರೂ ದ್ವೀಪಗಳಾಗುತ್ತೇವೆ. ಅದಕ್ಕೆ ಓದು, ತಾಳ್ಮೆ, ಕೇಳಿಸಿಕೊಳ್ಳುವಿಕೆ, ಮಂಥನ ಬಹುಮುಖ್ಯ …many people cant think thats why they judge ಅನ್ನುವ ಮಾತೊಂದಿದೆ.
ನಾವು ಹಾಗಾಗುವುದು ಬೇಡ. ನಾವು ಯಾವದೋ ಒಂದು ಬಣದೊಂದಿಗೆ ಗುರುತಿಸಲ್ಪಡುವುದು ಅವಶ್ಯಕವಲ್ಲ ಮತ್ತು ಹಲವು ಬಗೆಯಿಂದ ಯೋಚಿಸಿದರೆ ಅದು ಸಾಧುವೂ ಅಲ್ಲ . ಏಕೆಂದರೆ ಎಲ್ಲಬಲವರಿಲ್ಲ, ಎಲ್ಲರೂ ಮಹಾತ್ಮರೂ ಇಲ್ಲ, ಯಾವ ಸಿದ್ಧಾಂತವೂ, ಧರ್ಮವೂ ಮನುಷ್ಯನಿಗಿಂತ ಮುಂಚೆ ಬರಲಿಲ್ಲ ಅವನು ಹೋಗುವವರೆಗೆ ಇರುವುದೂ ಇಲ್ಲ.
ಅದು ಎಲ್ಲರಿಗೆ ಪ್ರಸ್ತುತವೂ ಅಲ್ಲ ಅಪ್ರಸ್ತುತವೂ ಕೂಡ ಅಲ್ಲ….
“To define is to limit” ಅನ್ನುತ್ತಾನೆ Oscar wilde - ಅದನ್ನು ನಾನು ಅಳವಡಿಸಿಕ್ಕೊಳ್ಳುತ್ತಿದ್ದೇನೆ ಅಷ್ಟೇ. ಆದ್ದರಿಂದಲೇ ಬರೆಯುತ್ತೇನೆ, ಓದುತ್ತೇನೆ, ಓದಿಸುತ್ತೇನೆ, ಕೇಳಿಸಿಕೊಳ್ಳುತ್ತೇನೆ, ಮಾತಾಡುತ್ತೇನೆ, ಸಂಶೋಧನೆಯಲ್ಲಿ ತೊಡಗುತ್ತೇನೆ, ಸಿನಿಮಾ ಮಾಡಲು (ನಿರ್ಮಾಣ) ತೊಡಗುತ್ತೇನೆ, ಪ್ರವಾಸ ಮಾಡುತ್ತೇನೆ, ಪ್ರೀತಿಸುತ್ತೇನೆ, ಅದರಿಂದಲೇ ಇದನ್ನೂ ಬರೆದಿದ್ದೇನೆ. ಹಾಗೆಯೇ ಈ ಹಿಂದೆ ಬರೆದ ಮುಂದೆ ಬಹುಷಃ ಬರೆಯುವ ಕಥೆ, ಕವನ, ಲೇಖನ, ಪ್ರಬಂಧ ಈ ದಾರಿಯ ನಡಿಗೆ ಮಾತ್ರ ಅದು ಬಿನ್ನವಾದ identity ಅಲ್ಲವೇ ಅಲ್ಲ.
ತಕರಾರಿದ್ದರೆ ಮಾತನಾಡೋಣ, ಮಾಹಿತಿ ಕೊರತೆಯಿದ್ದರೆ ಹುಡುಕಿ ಹಂಚಿಕೊಳ್ಳೋಣ. ಎಲ್ಲರೂ ನಮ್ಮ ಜೀವಮಾನದಲ್ಲಿ ಕನಿಷ್ಠ ಒಂದು ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸೋಣ.
ಸ್ವಲ್ಪ ಆತ್ಮರತಿ ಅನ್ನಿಸಿರಬಹುದು …ಕ್ಷಮೆಯಿರಲಿ. ಯಾವಾಗಲೊಮ್ಮೆ ಹೇಳಲೇ ಬೇಕಿತ್ತು!
ವಂದನೆಗಳೊಂದಿಗೆ
ದರ್ಶನ್ ಜಯಣ್ಣ