Kannadaratna

Kannadaratna kannadaratna- page contains kannada news, views, articles

26.06.2024ರಂದು ಬೆಂಗಳೂರು ಹೊರವಲಯ ಬನ್ನೇರುಘಟ್ಟದಲ್ಲಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ದೇಶದ ಅತಿದೊಡ್ಡ ಹಾಗೂ ದಕ್ಷ...
27/06/2024

26.06.2024ರಂದು ಬೆಂಗಳೂರು ಹೊರವಲಯ ಬನ್ನೇರುಘಟ್ಟದಲ್ಲಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ದೇಶದ ಅತಿದೊಡ್ಡ ಹಾಗೂ ದಕ್ಷಿಣ ಭಾರತದ ಪ್ರಥಮ ಚಿರತೆ ಸಫಾರಿಗೆ ಚಾಲನೆ ನೀಡಿದರು. ಸಫಾರಿ ಆವರಣದಲ್ಲಿ ದೊಡ್ಡ ಬೆಕ್ಕು ಕ್ಯಾಮೆರಾದಲ್ಲಿ ಸೆರೆ ಆಗಿದ್ದು ಹೀಗೆ....

09/04/2024
25/02/2024

ಕನ್ನಡರತ್ನ - ಕರುನಾಡ ಮಾಹಿತಿ

ಚಿತ್ರದುರ್ಗ ಜಿಲ್ಲೆಯ ಗಣಿ ಪ್ರದೇಶದಲ್ಲಿ.....
26/12/2023

ಚಿತ್ರದುರ್ಗ ಜಿಲ್ಲೆಯ ಗಣಿ ಪ್ರದೇಶದಲ್ಲಿ.....

21/03/2023

ಪಂಚಾಂಗವೆಂದರೆ ಅರ್ಥವಾಗದ ಶ್ಲೋಕಗಳ ಕಗ್ಗಂಟಲ್ಲ!
ತಿಥಿ, ವಾರ, ನಕ್ಷತ್ರ, ಯೋಗ ಹಾಗೂ ಕರಣ ಎಂಬ ಐದು ಅಂಗಗಳ ವೈಜ್ಞಾನಿಕ ಸಮ್ಮಿಲನವೇ ಪಂಚಾಂಗ....
*ಲೇಖಕರು: ಟಿ.ಎಂ. ಸತೀಶ್, ಸಂಪಾದಕರು, ಕನ್ನಡರತ್ನ.ಕಾಂ
ಪಂಚಾಂಗ ನೋಡುವುದು ಅರ್ಥಾತ್ ಓದುವುದೇ ಒಂದು ಕಲೆ. ಎಲ್ಲರಿಗೂ ಪಂಚಾಂಗ ನೋಡಲು ಬರುವುದಿಲ್ಲ. ಹಲವರು ಪಂಚಾಂಗ ಎಂದರೆ ಅರ್ಥವಾಗದ ಶ್ಲೋಕಗಳ ಕಗ್ಗಂಟು, ಅದು ಪುರೋಹಿತರ ಸ್ವತ್ತು ಎಂದೇ ತಿಳಿದಿದ್ದಾರೆ.
ವಾಸ್ತವವಾಗಿ ಪಂಚಾಂಗ ಎಂದರೆ ಅರ್ಥವಾಗದ ಹಲವು ಶ್ಲೋಕಗಳಿಂದ ಕೂಡಿದ ಕಗ್ಗಂಟಲ್ಲ. ಬದಲಾಗಿ ಪಂಚಾಂಗ ಎಂಬುದು ಜನ ಜೀವನದ ನಿತ್ಯ ನಡೆವಳಿಕೆಗಳನ್ನು ವೈಜ್ಞಾನಿಕ ಆಧಾರಗಳ ಮೇಲೆ ವಿಶ್ಲೇಷಿಸುವ ಅತ್ಯದ್ಭುತ ಕಾಲಗಣನಾ ಶಾಸ್ತ್ರ.
ನಾವು ದೈನಂದಿನ ಲೌಕಿಕ ಚಟುವಟಿಕೆಗೆ ಬಳಸುವ ಜನವರಿ1ರಿಂದ ಡಿಸೆಂಬರ್ 31ರವರೆಗೆ ವಾರ ದಿನಾಂಕ ತೋರಿಸುವ ರೋಮನ್ ಕ್ಯಾಲೆಂಡರ್ ಹುಟ್ಟಿದ್ದು ಕ್ರಿಸ್ತ ಪೂರ್ವ 753ರಲ್ಲಿ. ಆದರೆ, ಅದಕ್ಕಿಂತ ಸಾವಿರಾರು ವರ್ಷಗಳ ಹಿಂದೆ ಅಂದರೆ ಸುಮಾರು 10 ಸಾವಿರಕ್ಕೂ ಹೆಚ್ಚು ವರ್ಷಗಳ ಹಿಂದೆಯೇ ಯುಗಯುಗಗಳಿಂದ ಹಿಂದೂ ಪಂಚಾಂಗ ಕಾಲಗಣನಾ ಶಾಸ್ತ್ರವಾಗಿತ್ತು ಎಂದು ವಿಶ್ಲೇಷಿಸಲಾಗುತ್ತದೆ. ಇದಕ್ಕೆ ವೇದ, ಪುರಾಣಗಳಲ್ಲಿ ಹಲವು ಆಧಾರಗಳೂ ದೊರಕುತ್ತವೆ.
ಈಗ ವಿಶ್ವ ವ್ಯಾಪಿ ಚಾಲ್ತಿಯಲ್ಲಿರುವ ಕ್ಯಾಲೆಂಡರ್ ಗಳು ಇನ್ನೂ ಹುಟ್ಟದಿದ್ದ ಕಾಲದಲ್ಲಿ, ಹುಟ್ಟು, ಸಾವು, ವಿವಾಹ ದಿನ, ಗ್ರಹಣ ವಿಚಾರ ಸೇರಿದಂತೆ ಬದುಕಿನ ಮಹತ್ವದ ಘಟನೆಗಳನ್ನು ನೆನಪಿನಲ್ಲಿಟ್ಟುಕೊಳ್ಳಲೆಂದೇ ವೈಜ್ಞಾನಿಕ ತಳಹದಿಯ ಮೇಲೆ ತಯಾರಿಸಿದ ವಾರ್ಷಿಕ ಕೈಪಿಡಿಯೇ ಪಂಚಾಂಗ.
ಐದರ ಸಮಾಗಮ: ವಾಸ್ತವವಾಗಿ ಪಂಚಾಂಗವೆಂಬುದು ತಿಥಿ, ವಾರ, ನಕ್ಷತ್ರ, ಯೋಗ ಹಾಗೂ ಕರಣ ಎಂಬ ಐದು ವೈಜ್ಞಾನಿಕ ಅಂಗಗಳ ಸಮ್ಮಿಲನ ಹಾಗೂ ಮಾಹಿತಿ ಸಂಚಯ.
ಸೂರ್ಯ, ಚಂದ್ರ, ಭೂಮಿಯೂ ಸೇರಿದಂತೆ ನವಗ್ರಹಗಳ ಚಲನೆಯನ್ನೂ ಗುರುತಿಸುತ್ತಿದ್ದ ಶ್ರೇಷ್ಠ ಖಭೌತಜ್ಞರಾಗಿದ್ದ ನಮ್ಮ ಪೂರ್ವಿಕರು ವೈಜ್ಞಾನಿಕ ತಳಹದಿಯ ಅಧ್ಯಯನದಿಂದ ತಿಥಿ, ವಾರ, ನಕ್ಷತ್ರ, ಯೋಗ ಹಾಗೂ ಕರಣಗಳನ್ನು ವಿಶ್ಲೇಷಿಸಿ ಪಂಚಾಂಗ ಸೃಷ್ಟಿಸಿದ್ದರು. ಗ್ರಹಣ ಯಾವ ದಿನ ಘಟಿಸುತ್ತದೆ. ಹುಣ್ಣಿಮೆ, ಅಮಾವಾಸ್ಯೆ ಎಂದು ಬರುತ್ತದೆ ಎಂಬಿತ್ಯಾದಿ ಮಹತ್ವದ ಮಾಹಿತಿಗಳನ್ನು ಈ ಪಂಚಾಂಗದಲ್ಲಿ ಸೆರೆಹಿಡಿಯುತ್ತಿದ್ದರು. ಈ ಎಲ್ಲ ಲೆಕ್ಕಾಚಾರಗಳಿಗೆ ತಿಥಿ, ವಾರ, ನಕ್ಷತ್ರ, ಕರಣ ಹಾಗೂ ಯೋಗವೇ ಆಧಾರವಾಗಿತ್ತು.

ತಿಥಿ, ವಾರ, ನಕ್ಷತ್ರ, ಕರಣ, ಯೋಗ ಎಂದರೇನು ?

ನಕ್ಷತ್ರ : ಆಗಸದಲ್ಲಿ ನಮಗೆ ಕೋಟ್ಯನುಕೋಟಿ ನಕ್ಷತ್ರಗಳು ಕಾಣಿಸಿದರೂ, ಸೂರ್ಯಸನ ಸುತ್ತ ಇರುವ ಅಶ್ವಿನಿ, ಭರಣಿ, ಕೃತ್ತಿಕೆ, ರೋಹಿಣಿ, ಮೃಗಶಿರೆ, ಆರಿದ್ರೆ, ಪುನರ್ವಸು, ಪುಷ್ಯ... ಇತ್ಯಾದಿ 27 ನಕ್ಷತ್ರಗಳನ್ನು ಮಾತ್ರ ಜ್ಯೋತಿಷಿಗಳು ದಿನ ಗಣನೆಗೆ ಪರಿಗಣಿಸಿದ್ದಾರೆ. ಇನ್ನುಳಿದ ನಕ್ಷತ್ರಗಳನ್ನು ಆಕಾಶಕಾಯಗಳು ಅಥವಾ ತ್ಯಾಜ್ಯ ನಕ್ಷತ್ರ ಎಂದು ಅವರು ವಿಶ್ಲೇಷಿಸಿದ್ದಾರೆ. ನಮ್ಮ ಭಾರತೀಯ ಋಷಿಮುನಿಗಳು ಹೀಗೆ ನಿರ್ಣಯಕ್ಕೆ ಬರಲು ಬಲವಾದ ವೈಜ್ಞಾನಿಕ ಆಧಾರವಿದೆ. ನಕ್ಷತ್ರದಿಂದ ದಿನವನ್ನು ಗುರುತಿಸುವುದು ಅತಿ ಪುರಾತನ ಪದ್ಧತಿಯಾಗಿದೆ. ಅದು ಹೇಗೆ ಎಂಬುದೂ ಅತಿ ಸ್ವಾರಸ್ಯಕರ. ಅಷ್ಟೇ ಅಲ್ಲ ನಮ್ಮ ಹಿರಿಯರ ಜ್ಞಾನಕ್ಕೆ ಹಿಡಿದ ಕನ್ನಡಿ. ನಕ್ಷತ್ರಮಂಡಲದಲ್ಲಿ ಚಂದ್ರಸ್ಥಾನ ಗಂಟೆ ಗಂಟೆಗೂ ಬದಲಾಗುತ್ತಿರುತ್ತದೆ. ಒಂದು ರಾತ್ರಿ ಚಂದ್ರನ ಸಮೀಪದಲ್ಲಿ ಯಾವ ನಕ್ಷತ್ರ ಇರುತ್ತದೆ ಎಂದು ಗುರುತಿಸಿದ್ದಾರೆ. ಅದೇ ನಕ್ಷತ್ರದ ಸಮೀಪಕ್ಕೆ ಚಂದ್ರ ಮತ್ತೆ ಯಾವಾಗ ಬರುತ್ತಾನೆ ಎಂಬುದನ್ನೂ ಅವರು ಗುರುತಿಸಿದ್ದಾರೆ. ಇಂದು ಒಂದು ನಕ್ಷತ್ರದ ಬಳಿ ಕಾಣಿಸಿಕೊಳ್ಳುವ ಚಂದ್ರ ಮತ್ತೆ ಅದೇ ನಕ್ಷತ್ರದ ಸನಿಹಕ್ಕೆ ಬರಲು ಸುಮಾರು 27.32ದಿನಗಳು ಬೇಕಾಗುತ್ತದೆಂಬುದನ್ನು ನಿರ್ಧರಿಸಿದ್ದಾರೆ. ಹೀಗಾಗಿಯೇ ತಿಂಗಳಲ್ಲಿ 30 ದಿನ ಬಂದಿರುವುದು. ಈ ಚಲನೆಗೆ ಅನುಗುಣವಾಗಿಯೇ ಎರಡೆರಡು ದಿನ ಒಂದೇ ತಿಥಿ ಇರುವುದು ಎಂಬುದನ್ನು ನಮ್ಮ ಪುರಾತನ ಭಾರತೀಯ ಖಗೋಳಜ್ಞರು ನಿರ್ಣಯಿಸಿದ್ದರು. ವೈಜ್ಞಾನಿಕ ಉಪಕರಣಗಳೇ ಇಲ್ಲದ ಸಮಯದಲ್ಲಿ ಈ ಎಲ್ಲ ಲೆಕ್ಕಾಚಾರ ಮಾಡಿದ ನಮ್ಮ ಪೂರ್ವಿಕರ ಜ್ಞಾನ ಶ್ರೀಮಂತಿಕೆಗೆ ನಾವೆಲ್ಲಾ ತಲೆ ಬಾಗಲೇ ಬೇಕು.

ತಿಥಿ : ತಿಥಿ ಎಂದರೆ, ಭೂಮಿಯನ್ನು ಸುತ್ತಲು ಚಂದ್ರನು ಒಂದು ದಿನದಲ್ಲಿ ತೆಗೆದುಕೊಳ್ಳುವ ಅವಧಿ. ಚಂದ್ರನು ನಿತ್ಯ ಸುಮಾರು 12 ಡಿಗ್ರಿಗಳಷ್ಟು ಸಂಚರಿಸುತ್ತಾನೆ. (ಈ ಚಲನೆಯಲ್ಲಿ ಚಂದ್ರ ಭೂಮಿಯ ಮೇಲೆ ಬೀರುವ ಪರಿಣಾಮ ವೈಜ್ಞಾನಿಕವಾಗಿಯೂ ದೃಢಪಟ್ಟಿದೆ.) ಈ ಚಲನೆಯನ್ನು ಆಧರಿಸಿ ಶುಭ - ಅಶುಭ, ರಿಕ್ತ ತಿಥಿಗಳು ಎಂಬ ವಿಶ್ಲೇಷಣೆಯನ್ನು ನಮ್ಮ ಹಿರಿಯರು ಮಾಡಿದ್ದಾರೆ. ವಾಸ್ತವವಾಗಿ ದಿನ ನಿರ್ಧರಣೆಯನ್ನು ನಕ್ಷತ್ರದಿಂದ ಮಾತ್ರ ಮಾಡುವುದು ವ್ಯಾವಹಾರಿಕವಾಗಿ ಸರಿಯಲ್ಲ ಎಂದು ಮನಗಂಡ ನಮ್ಮ ಪೂರ್ವಿಕರು, ಚಂದ್ರನ ವೃದ್ಧಿಕ್ಷಯಗಳನ್ನು ಸೂಚಿಸುವ ತಿಥಿಗಳಿಂದಲೂ ದಿನವನ್ನು ನಿರ್ಧರಿಸುವ ಮಾರ್ಗ ಕಂಡುಕೊಂಡರು. ಅಮಾವಾಸ್ಯೆ, ಹುಣ್ಣಿಮೆಯ ಲೆಕ್ಕಾಚಾರದ ಮೇಲೆ ಮಾಸದಲ್ಲಿ ಎರಡು ಪಕ್ಷ ನಿರ್ಧರಿಸಿ ಪಾಡ್ಯ, ಬಿದಿಗೆ, ತದಿಗೆ, ಚೌತಿ, ಪಂಚಮಿ, ಷಷ್ಠಿ, ಸಪ್ತಮಿ, ಅಷ್ಟಮಿ, ನವಮಿ, ದಶಮಿ, ಏಕಾದಶಿ, ದ್ವಾದಶಿ, ಚತುರ್ದಶಿ, ಹುಣ್ಣಿಮೆ ಅಥವಾ ಅಮಾವಾಸ್ಯೆ ಎಂಬ 15 ತಿಥಿಗಳನ್ನೂ ಗುರಿತಿಸಿದರು.

ವಾರ : ವಾರಗಳು ಎಂದರೆ ಭೂಮಿ ತನ್ನ ಅಕ್ಷದ ಸುತ್ತ ಸುತ್ತು ಹಾಕುವ 7 ಅವಧಿ. (24 ಗಂಟೆ x 7 ದಿನ) ಈ ಚಲನೆ 7 ದಿನಕ್ಕೊಮ್ಮೆ ಪುನರಾವರ್ತನೆ ಆಗುವುದರಿಂದ ಇವುಗಳನ್ನು 7 ಗ್ರಹಗಳು ಎಂದು ಗುರುತಿಸಲಾಗಿದೆ. ಖಗೋಳ ವಿಜ್ಞಾನಿಗಳು ಸೂರ್ಯಇನನ್ನು ನಕ್ಷತ್ರ ಎಂದರೆ, ನಮ್ಮ ಋಷಿ ಮುನಿಗಳು, ಪಂಚಾಂಗಕರ್ತರು ಹಾಗೂ ಜ್ಯೋತಿಷಿಗಳು ಸೂರ್ಯನನ್ನೂ ಒಂದು ಗ್ರಹ ಎಂದು ಪರಿಗಣಿಸಿದ್ದಾರೆ. ಅವರ ಪ್ರಕಾರ ನವಗ್ರಹಗಳ ಪೈಕಿ ಸೂರ್ಯಯನೂ ಒಬ್ಬ. ಹೀಗಾಗೆ ನಮಃಸೂರ್ಯಾ ಯ ಚಂದ್ರಾಯ ಮಂಗಳಾಯ ಬುಧಾಯಚ, ಗುರು ಶುಕ್ರ ಶನಿ ಭ್ರಶ್ಚ, ರಾಹುವೇ ಕೇತುವೇ ನಮಃ ಎಂಬು ಶ್ಲೋಕವೂ ಹುಟ್ಟಿರುವುದು. ಆ ಪ್ರಕಾರವಾಗಿ ಏಳು ದಿನಗಳಲ್ಲಿ ರವಿವಾರ, ಸೋಮ (ಚಂದ್ರ) ವಾರ, ಮಂಗಳವಾರ, ಬುಧವಾರ, ಗುರುವಾರ, ಶುಕ್ರವಾರ ಹಾಗೂ ಶನಿವಾರ ಎಂದು ಗುರುತಿಸಲಾಗಿದೆ. ಗ್ರಹಗಳ ಹೆಸರಿನ ಮೂಲಕ, ಶುಭ ಹಾಗೂ ಅಶುಭ ದಿನಗಳನ್ನೂ ನಿರ್ಧರಿಸಲಾಗಿದೆ. ರೋಮನ್ನರು ಕೂಡ ಹಿಂದೂ ಪಂಚಾಗದ ರೀತಿಯೇ ತಮ್ಮ ಕ್ಯಾಲೆಂಡರ್ ರಚಿಸಿದ್ದಾರೆ ಎಂದರೆ ಅತಿಶಯೋಕ್ತಿಯೇನಲ್ಲ ಎನ್ನುತ್ತಾರೆ ಕೆಲವು ತಜ್ಞರು. ತಜ್ಞರ ಪ್ರಕಾರ ವಾರದ ಬಳಕೆ ಕ್ರಿ.ಶ. 4ನೇ ಶತಮಾನಕ್ಕೆ ಮೊದಲು ಭಾರತದಲ್ಲಿ ಇರಲಿಲ್ಲವಂತೆ. ವೇದಗಳ ಕಾಲದಲ್ಲಿ ಆರು ದಿವಸಗಳ ವಾರ ಪ್ರಚಾರದಲ್ಲಿತ್ತು ಎಂದೂ ಹೇಳುತ್ತಾರೆ.

ಯೋಗ : ಸೂರ್ಯ ಚಂದ್ರರಿಬ್ಬರು 13 ಡಿಗ್ರಿ ಮತ್ತು 20 ಡಿಗ್ರಿ ಅಂತರಕ್ಕೆ ಬರುವುದನ್ನು ಯೋಗ ಎನ್ನುತ್ತಾರೆ. ಇನ್ನೂ ಹೆಚ್ಚು ವೈಜ್ಞಾನಿಕವಾಗಿ ಹೇಳುವುದಾದರೆ ಸೂರ್ಯಚಂದ್ರರ ರೇಖಾಂಶಾಂತರ ತಿಥಿಯನ್ನು ನಿರ್ಣಯಿಸುವುದೇ ಯೋಗ. ಹಾಗೆಯೆ ಸೂರ್ಯಚಂದ್ರರ ರೇಖಾಂಶಗಳ ಮೊತ್ತ ಯೋಗವನ್ನು ನಿರ್ಣಯಿಸುತ್ತದೆ. ಇದಕ್ಕೆ ಅಶ್ವಿನಿ ಮೂಲಬಿಂದುವಾಗಿರುತ್ತದೆ. ಸೂರ್ಯನ ರೇಖಾಂಶ ಮತ್ತು ಚಂದ್ರನ ರೇಖಾಂಶಗಳ ಈ ಯೋಗದಲ್ಲಿ ಸೂರ್ಯಕ ಚಂದ್ರರ ಚಲನೆ ಆಧರಿಸಿ 27 ಯೋಗಗಳನ್ನು ಹಾಗೂ ಸೂರ್ಯ-ಚಂದ್ರರ ಚಲನೆಯ ವ್ಯತ್ಯಾಸ ಅರಿಯಲಾಗಿದೆ. ಇದು ಗ್ರಹಣ ಮೊದಲಾದ ವಿಷಯಗಳನ್ನು ಖಚಿತವಾಗಿ ಹೇಳಲು ನೆರವಾಗುತ್ತದೆ.

ಕರಣ : ಕರಣ ಎಂಬುದು ಒಂದು ದಿನದ ಅರ್ಧಭಾಗದಲ್ಲಿ ಸೂರ್ಯದ ಚಂದ್ರರ ನಡುವೆ ಇರುವ ದೂರದ ಪ್ರಮಾಣ. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ಚಂದ್ರಸೂರ್ಯರ ರೇಖಾಂಶಾಂತರ 60 ಆಗುವ ಅವಧಿಯೇ ಕರಣ. ಹೀಗಾಗಿ ಕರಣ ಕೂಡ ಸೂರ್ಯಚಂದ್ರರ ಚಲನೆಯನ್ನು ಅರ್ಥೈಸುವ ಮಾನದಂಡಗಳಲ್ಲೊಂದಾಗಿದೆ. ಕಾಲ ದೇಶಕ್ಕೆ ಅನುಗುಣವಾಗಿ ಪಂಚಾಂಗಗಳಿವೆ. ಉತ್ತರ ಭಾರತದಲ್ಲಿ ವಿಕ್ರಮ ಶಕೆಯ ರೀತ್ಯ ಕಾಲ ಗಣನೆ ಮಾಡುತ್ತಾರೆ. ವಿಕ್ರಮ ಶಕೆಯ ಆರಂಭದ ದಿನವಾದ ಕಾರ್ತೀಕ ಶುಕ್ಲ ಪಾಡ್ಯದಿಂದ (ದೀಪಾವಳಿ) ಉತ್ತರ ಭಾರತೀಯರಿಗೆ ಹೊಸವರ್ಷದ ದಿನ. ಆದರೆ, ದಕ್ಷಿಣ ಭಾರತೀಯರು ವಿಕ್ರಮಾದಿತ್ಯನನ್ನು ಶಾಲಿವಾಹನನು ಸಂಹರಿಸಿದ ದಿನದಿಂದ ಕಾಲಗಣನೆ ಆರಂಭಿಸುತ್ತಾರೆ. ಆದ್ದರಿಂದ ಶಾಲಿವಾಹನ ಶಕೆಯಲ್ಲಿ ಚೈತ್ರ ಶುಕ್ಲ ಪಾಡ್ಯವೇ ಪ್ರಥಮದಿನ. ಚೈತ್ರ ಮಾಸದ ಪೌರ್ಣಿಯ ದಿನ ಚಂದ್ರನು ಚಿತ್ತಾನಕ್ಷತ್ರದಲ್ಲಿ ಇರುವ ಕಾರಣ ಈ ಮಾಸಕ್ಕೆ ಚೈತ್ರ ಮಾಸ ಎಂದು ಹೆಸರು ಬಂದಿದೆ. ಅದೇ ರೀತಿ ದ್ವಾದಶ ರಾಶಿಗಳನ್ನು ಆಧರಿಸಿ 12 ತಿಂಗಳನ್ನು ನಿರ್ಧರಿಸಲಾಗಿದೆ. ಸೂರ್ಯನು ತನ್ನ ಉಪ ಗೋಚರ ವಾರ್ಷಿಕ ಚಲನೆಯಲ್ಲಿ ಮೇಷ, ವೃಷಭ, ಮಿಥುನ, ಕಟಕ, ಸಿಂಹ, ಕನ್ಯಾ.. ಇತ್ಯಾದಿ ದ್ವಾದಶ ರಾಶಿಗಳನ್ನು ಪ್ರವೇಶಿಸುವ ಕ್ಷಣಗಳನ್ನು ಆಯಾ ರಾಶಿಗಳ ಸಂಕ್ರಮಣವೆಂದೂ ಅರ್ಥೈಸಲಾಗುತ್ತದೆ.

ಇಷ್ಟೆಲ್ಲಾ ಹೇಳಿದ ಮೇಲೆ ಪಂಚಾಂಗದ ಭಾಗವಲ್ಲದಿದ್ದರೂ ಈ ಐದನ್ನೂ ಒಳಗೊಂಡ ವರ್ಷದ ಬಗ್ಗೆಯೂ ಹೇಳಲೇಬೇಕು. ನಮ್ಮ ಪೂರ್ವಿಕರು ಈಗಿನ ಇಸವಿ ಪದ್ಧತಿ ಜಾರಿಗೆ ಬರುವ ಮುನ್ನವೇ ನಮ್ಮ 12 ತಿಂಗಳ ಅವಧಿಯನ್ನು ವರ್ಷ ಎಂದು ಪರಿಗಣಿಸಿ ಒಂದೊಂದಕ್ಕೆ ಒಂದೊಂದು ಹೆಸರಿಟ್ಟಿದ್ದರು.
ಅದನ್ನು ಪ್ರಭವ, ವಿಭವ, ಶುಕ್ಲ, ಪ್ರಮೋದೂತ, ಪ್ರಜೋತ್ಪತ್ತಿ, ಆಂಗೀರಸ, ಶ್ರೀಮುಖ, ಭಾವ, ಯುವ, ಧಾತ್ರಿ, ಈಶ್ವರ, ಬಹುಧಾನ್ಯ, ಪ್ರಮಾಥಿ, ವಿಕ್ರಮ, ವೃಷ (ವಿಷು), ಚಿತ್ರಭಾನು, ಸ್ವಭಾನು, ತಾರಣ, ಪಾರ್ಥಿವ, ವ್ಯಯ, ಸರ್ವಜಿತ್, ಸರ್ವಧಾರಿ, ವಿರೋಧಿ, ವಿಕೃತ, ಖರ, ನಂದನ, ವಿಜಯ, ಜಯ, ಮನ್ಮಥ, ದುರ್ಮುಖಿ, ಹೇ ವಿಳಂಬಿ, ವಿಳಂಬಿ, ವಿಕಾರಿ, ಶಾರ್ವರಿ, ಪ್ಲವ, ಶುಭಕೃತ್, ಶೋಭಕೃತ್ , ಕ್ರೋಧಿ, ವಿಶ್ವಾವಸು, ಪರಾಭವ, ಪ್ಲವಂಗ, ಕೀಲಕ, ಸೌಮ್ಯ, ಸಾಧಾರಣ, ವಿರೋಧಿಕೃತ್, ಪರಿಧಾವಿ, ಪ್ರಮಾಧಿ, ಆನಂದ, ರಾಕ್ಷಸ, ನಳ, ಪೈಂಗಳ(ಪಿಂಗಳ), ಕಾಳಯುಕ್ತಿ, ಸಿದ್ಧಾರ್ಥಿ, ರುದ್ರ (ರೌದ್ರಿ), ದುರ್ಮತಿ, ದುಂದುಭಿ, ರುಧಿರೋದ್ಗಾರಿ, ರಕ್ತಾಕ್ಷಿ, ಕ್ರೋಧನ ಹಾಗೂ ಅಕ್ಷಯ (ಕ್ಷಯ). 60 ವರ್ಷಗಳ ಬಳಿಕ ಮತ್ತೆ ಪ್ರಭವದಿಂದ ಆರಂಭವಾಗುತ್ತದೆ.

ಒಟ್ಟಾರೆಯಾಗಿ ಪಂಚಾಗ ನಮ್ಮ ಪೂರ್ವಿಕರು ಸಂಶೋಧಿಸಿದ ವೈಜ್ಞಾನಿಕ ಕಾಲ ನಿರ್ಣಯ. (ಈ ಲೇಖನ ಬರೆಯಲು ಹಲವು ಗ್ರಂಥಗಳನ್ನು, ತಜ್ಞರ, ಜ್ಯೋತಿಷಿಗಳ ಅಭಿಪ್ರಾಯಗಳನ್ನು ಆಕರವಾಗಿ ಪರಿಗಣಿಸಲಾಗಿದೆ)

10/04/2022

ಶ್ರೀರಾಮ ಮಂತ್ರವೊಂದಿರಲು ಸಾಕು....
ಶ್ರೀರಾಮನಾಮ ಸ್ಮರಣೆ ಮಾತ್ರದಿಂದ ಕಪಿ ಸೈನ್ಯ ರಾಮೇಶ್ವರದಿಂದ ಲಂಕೆಗೆ ಸೇತುವೆಯನ್ನೇ ಕಟ್ಟಿತು... ದುಷ್ಟ ರಾವಣ, ಸಮುದ್ರಕ್ಕೆ ಎಸೆದ ಕಲ್ಲೂ ತೇಲಿತು.. ಇಲ್ಲಿದೆ ರಾಮಾಯಣದ ಸ್ವಾರಸ್ಯಕರ ಕಥೆ..
*ಟಿ.ಎಂ. ಸತೀಶ್
ಶ್ರೀರಾಮ ಮಂತ್ರದಲ್ಲೇ ಪ್ರಚಂಡ ಶಕ್ತಿ ಅಡಗಿದೆ ಹೀಗಾಗೇ ಕನ್ನಡ ಕುಲ ಪುಂಗವ ಹನುಮಂತ ಶ್ರೀರಾಮ ಜಪ ಮಾಡಿ ಭಗವಂತನೇ ಆದ. ಶ್ರೀರಾಮ ನಾಮದ ಶಕ್ತಿಯನ್ನು ನಿರೂಪಿಸುವ ಪ್ರಸಂಗವೂ ರಾಮಾಯಣದಲ್ಲಿದೆ. ದಶಕಂಠನಾದ ರಾವಣ ಸೀತಾ ಮಾತೆಯನ್ನು ಅಪಹರಿಸಿದ್ದ. ಶ್ರೀರಾಮ ಕಪಿ ಸೈನ್ಯದ ನೆರವಿನಿಂದ ಲಂಕೆಯ ಮೇಲೆ ಯುದ್ಧಕ್ಕೆಹೊರಟ.
ರಾವಣನಿಗೆ ದೂತರು ಈ ಸುದ್ದಿ ಮುಟ್ಟಿಸಿದರು. ಅಯ್ಯಾ ರಾವಣ, ಕಪಿಗಳು ಲಂಕೆಗೆ ಸೇತುವೆ ಕಟ್ಟುತ್ತಿದ್ದಾರೆ. ಕಲ್ಲಿನ ಮೇಲೆ ಶ್ರೀರಾಮ, ಜಯರಾಮ ಎಂದು ಬರೆದು ಸಾಗರಕ್ಕೆ ಎಸೆಯುತ್ತಿದ್ದಾರೆ. ಏನಾಶ್ಚರ್ಯ ಆ ಕಲ್ಲುಗಳು ತೇಲುತ್ತಿವೆ. ಸೇತುವೆ ಕಾರ್ಯ ನಿರ್ವಿಘ್ನವಾಗಿ ಸಾಗಿದೆ.
ಆಗ ರಾವಣ ಹೇಳಿದ. ಇದ್ಯಾವ ದೊಡ್ಡ ವಿಷಯ. ನಾನೂ ಕೂಡ ಸಮುದ್ರಕ್ಕೆ ಕಲ್ಲು ಎಸೆದರೆ ಅದೂ ತೇಲುತ್ತದೆ. ಎಲ್ಲರಿಗೂ ಆಶ್ಚರ್ಯ ಆಯಿತು. ಅಲ್ಲ ರಾವಣ ಹೇಳಿ ಕೇಳಿ ರಾಕ್ಷಸ. ದುಷ್ಟ. ಇವನು ಎಸೆದ ಕಲ್ಲು ತೇಲಲು ಸಾಧ್ಯವೇ ಎಂದು ಅನುಮಾನಗೊಂಡರು. ಸಭಾಸದರ ಮುಖದಲ್ಲಿ ಮೂಡಿದ ಪ್ರಶ್ನೆಯನ್ನು ಗ್ರಹಿಸಿದ ರಾವಣ ಎಲ್ಲರನ್ನೂ ಉದ್ದೇಶಿಸಿ, ನಿಮಗೆ ಅನುಮಾನ ಬೇಡ. ನನ್ನೊಂದಿಗೆ ಸಾಗರದ ತೀರಕ್ಕೆ ಬನ್ನಿ, ಕಲ್ಲು ಎಸೆಯುತ್ತೇನೆ. ಅದು ತೇಲುವುದನ್ನು ನೀವೇ ಕಣ್ಣಾರೆ ಕಾಣುವಿರಂತೆ ಎಂದು ಎಲ್ಲರನ್ನೂ ಕರೆದೊಯ್ದ.
ಅಲ್ಲೇ ಬಿದ್ದಿದ್ದ ಒಂದು ದೊಡ್ಡ ಕಲ್ಲು ಬಂಡೆಯನ್ನು ಕೈಗಳಲ್ಲಿ ಹಿಡಿದು ಮೇಲೆತ್ತಿ ಸಮುದ್ರಕ್ಕೆ ಎಸೆದ, ಆ ಹೆಬ್ಬಂಡೆ ದೋಣಿಯಂತೆ ಸಾಗರದಲ್ಲಿ ತೇಲಿತು. ಎಲ್ಲರೂ ಆಶ್ಚರ್ಯ. ನಮ್ಮ ರಾವಣನೇನು ಕಡಿಮೆ ಇಲ್ಲ. ರಾಮನಿಗೆ ಇವನು ಸರಿಸಾಟಿ ಎಂದು ಜಯಘೋಷ ಮಾಡಿದರು.
ರಾವಣನ ಮಡದಿ ಮಂಡೋದರಿಗೂ ಇದು ಆಶ್ಚರ್ಯ ಎನಿಸಿತು. ತನ್ನ ಪತಿ ರಾವಣ ಘಾತುಕ. ರಾವಣ ಎಸೆದ ಕಲ್ಲು ಹೇಗೆ ತೇಲಲು ಸಾಧ್ಯ. ಈ ಮರ್ಮ ಅರಿಯಲೇಬೇಕೆಂದು ಮಂಡೋದರಿ ಏಕಾಂತದಲ್ಲಿದ್ದಾಗ ರಾವಣನನ್ನೇ ಈ ಬಗ್ಗೆ ಕೇಳುತ್ತಾಳೆ. ಮಡದಿಯ ಒತ್ತಾಯಕ್ಕೆ ಮಣಿದ ರಾವಣ ಸತ್ಯ ಹೇಳುತ್ತಾನೆ.
ನೋಡು ಪ್ರಿಯೆ, ಇದು ರಾಜಕೀಯ ಮರ್ಮ. ರಾಮ ನನ್ನ ಮೇಲೆ ಯುದ್ಧ ಸಾರಲು ಬರುತ್ತಿದ್ದಾನೆ. ಈಗ ನನ್ನ ಸೈನಿಕರಿಗೆ ಧೈರ್ಯ ತುಂಬಬೇಕು. ನಾನೂ ರಾಮನಿಗೆ ಕಡಿಮೆ ಇಲ್ಲ ಎಂದು ನಿರೂಪಿಸಬೇಕಿತ್ತು. ಹೀಗಾಗಿ ನಾನು ಕಲ್ಲು ತೇಲುವಂತೆ ಮಾಡಲೇ ಬಿಕಿತ್ತು. ಅನಿವಾರ್ಯವಾಗಿ ಈ ಪರೀಕ್ಷೆಗೆ ನನ್ನನ್ನು ನಾನು ಒಡ್ಡಿಕೊಂಡೆ ಎಂದ.
ಆಗ ಮಂಡೋದರಿ ಅದೆಲ್ಲಾ ಸರಿ. ಆದರೆ, ನೀವು ಸಮುದ್ರಕ್ಕೆ ಹಾಕಿದ ಕಲ್ಲು ತೇಲಿದ್ದರ ಗುಟ್ಟೇನು? ಎಂದು ಕೇಳಿದಳು. ಆಗ ರಾವಣ ಹೇಳುತ್ತಾನೆ. ಇದು ರಾಜ ರಹಸ್ಯ ಯಾರಿಗೂ ಹೇಳಬೇಡ. ನನಗೂ ಕೂಡ ನಾನು ಹಾಕುವ ಕಲ್ಲು ತೇಲಲ್ಲ ಮುಳುಗತ್ತೆ ಅಂತ ಗೊತ್ತಿತ್ತು. ಹೀಗಾಗಿ ನಾನು ಕಲ್ಲನ್ನು ಸಮುದ್ರಕ್ಕೆ ಹಾಕುವ ಮುನ್ನ ಈ ಕಲ್ಲು ತೇಲದಿದ್ದರೆ ಶ್ರೀರಾಮ ಚಂದ್ರನ ಮೇಲಾಣೆ ಎಂದು ಹೇಳಿ ಹಾಕಿದೆ. ಕಲ್ಲು ತೇಲಿತು ಎಂದ.
ಅಂದರೆ ಶತ್ರುವಾದ ರಾವಣನಿಗೂ ರಾಮನ ಮಹಿಮೆ ತಿಳಿದಿತ್ತು. ಅಂಥದರಲ್ಲಿ ನಾವು ರಾಮನ ಪೂಜಿಸದಿದ್ದರೆ ಅದು ಸರಿಯಾದೀತೆ? ಇದು ಮಂತ್ರಾಲಯ ಮಠದ ಕಿರಿಯ ಸ್ವಾಮಿಗಳಾಗಿದ್ದ ಸುವಿದ್ಯೇಂದ್ರ ತೀರ್ಥರು 12 ವರ್ಷಗಳ ಹಿಂದೆ ಹೇಳಿದ ಕಥೆ ಇದು.

ಸಿಂಹ ವಾಹಿನಿ ನೆಲೆಸಿಹ ಬನಶಂಕರಿಇಂದು ಬನಹುಣ್ಣಿಮೆಲೇಖಕರು *ಟಿ.ಎಂ. ಸತೀಶ್ (ಸತೀಶ್ ತುರುವೇಕೆರೆ)ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನಲ್ಲಿರುವ ...
17/01/2022

ಸಿಂಹ ವಾಹಿನಿ ನೆಲೆಸಿಹ ಬನಶಂಕರಿ
ಇಂದು ಬನಹುಣ್ಣಿಮೆ
ಲೇಖಕರು *ಟಿ.ಎಂ. ಸತೀಶ್ (ಸತೀಶ್ ತುರುವೇಕೆರೆ)
ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನಲ್ಲಿರುವ ಪವಿತ್ರ ಪುಣ್ಯ ಕ್ಷೇತ್ರ ಬನಶಂಕರಿ. ಸಿಂಹ ವಾಹಿನಿಯಾದ ಪಾರ್ವತಿ ಬನಶಂಕರಿಯಾಗಿ ನೆಲೆಸಿಹ ಈ ಊರಿಗೆ ಬನಶಂಕರಿ ಎಂದೇ ಹೆಸರು ಬಂದಿದೆ.
ಈ ಪ್ರದೇಶ ಸಂಪೂರ್ಣ ಬನಗಳಿಂದ ಅಂದರೆ ಕಾಡುಗಳಿಂದ ಕೂಡಿದ್ದ ಕಾರಣ ಇಲ್ಲಿ ನೆಲೆಸಿಹ ತಾಯಿಗೂ ಬನಶಂಕರಿ ಎನ್ನುತ್ತಾರೆ. ಈ ತಾಯಿಗೆ ಸ್ಥಳೀಯರು ಬಾಳವ್ವ, ಬನದವ್ವ, ಸುಂಕವ್ವ, ಶಾಕಾಂಬರಿ, ಶಿರಿವಂತಿ, ಚೌಡಮ್ಮ, ವನದುರ್ಗೆ ಎಂತಲೂ ಕರೆಯುತ್ತಾರೆ. ಬನಶಂಕರಿ ನವದುರ್ಗೆಯರದಲ್ಲಿ 6ನೇ ಅವತಾರವೆಂದೂ ಹೇಳಲಾಗುತ್ತದೆ. ಈ ಪ್ರದೇಶದಲ್ಲಿ ಭೀಕರ ಕ್ಷಾಮ ತಲೆದೋರಿದಾಗ ತಾಯಿ ತನ್ನ ತನುವಿನಿಂದ ಕಾಯಿಪಲ್ಲೆ ಸೃಷ್ಟಿಸಿ ಜನರ ಸಂಕಷ್ಟ ನೀಗಿಸಿದಳಂತೆ ಹೀಗಾಗೇ ಶಾಕಾಂಬರಿ ಎನ್ನುವ ಹೆಸರು ತಾಯಿಗೆ ಬಂತೆಂದೂ ರಥೋತ್ಸವದ ಮುನ್ನಾ ದಿನ ತಾಯಿಗೆ 108 ತರಕಾರಿಗಳಿಂದ ಖಾದ್ಯ ತಯಾರಿಸಿ ಸಮರ್ಪಿಸುವ ಮೂಲಕ ಕೃತಜ್ಞತೆ ಅರ್ಪಿಸುತ್ತಾರೆ. ಈ ಋಣ ಸಂದಾಯ ಪಲ್ಲೇದ ಹಬ್ಬ ಎಂದೇ ಖ್ಯಾತವಾಗಿದೆ.
ದೇವಿ ಶಾಂಕಾಂಬರಿ ಆದ ಬಗ್ಗೆ ಸ್ಕಂದ ಪುರಾಣ, ಪದ್ಮಪುರಾಣಗಳಲ್ಲಿ ಉಲ್ಲಖವಿದೆಯೆಂತಲೂ ಹಿರೀಕರು ಹೇಳುತ್ತಾರೆ. ಈ ಊರಿನ ಸುತ್ತ ಅರಣ್ಯವಿದೆ, ತೆಂಗು, ಬಾಳೆ, ವೀಳೆಯದೆಲೆಯ ಬನಗಳಿವೆ. ಸನಿಹದಲ್ಲೇ ಸರಸ್ವತಿ ಹೊಳೆಯೂ ಹರಿಯುತ್ತದೆ.
ಸುಂದರ ಕೋಟೆಯಂತೆ ಭಾಸವಾಗುವ ಪ್ರವೇಶ ದ್ವಾರ ದಾಟಿ ಒಳಹೊಕ್ಕರೆ ದೇವಾಲಯ ಕಾಣಸಿಗುತ್ತದೆ. ದೇವಾಲಯದ ಎದುರು ಸುಂದರವಾದ ಕೊಳವಿದೆ. 360 ಅಡಿಗಳ ಚಚ್ಚೌಕಾಕಾರದ ಈ ಕಲ್ಯಾಣಿಯ ಸೌಂದರ್ಯ ನೋಡಲು ಎರಡು ಕಣ್ಣು ಸಾಲದು. ಈ ಕೊಳ ಬನಶಂಕರಿಯಲ್ಲಿ ನೋಡಲೇ ಬೇಕಾದ ರಮಣೀಯ ತಾಣ.
ಕಲ್ಯಾಣಿಯ ಸೊಬಗನ್ನು ಕಣ್ತುಂಬಿಕೊಂಡು ದೇವಾಲಯ ಪ್ರವೇಶಿಸಿದರೆ ದ್ರಾವಿಡ ಶೈಲಿಯಲ್ಲಿರುವ ಮನೋಹರವಾದ ದೇವಾಲಯದ ಸೌಂದರ್ಯ ಕಣ್ಮನ ಸೆಳೆಯುತ್ತದೆ. ಕಲ್ಯಾಣ ಚಾಲುಕ್ಯರ ದೊರೆ 1ನೇ ಜಗದೇಕಮಲ್ಲನ ಕಾಲದಲ್ಲಿ ಈ ದೇವಾಲಯ ನಿರ್ಮಾಣವಾಗಿದೆ, ಕ್ರಿ.ಶ.603ರಲ್ಲಿ ದೇವಿಯ ಪ್ರತಿಷ್ಠಾಪನೆ ಮಾಡಲಾಗಿದೆ ಎಂಬುದನ್ನು ಇಲ್ಲಿರುವ ಶಾಸನಗಳು ಸಾರುತ್ತವೆ. ದೇವಾಲಯದ ಆವರಣದಲ್ಲಿರುವ ದೀಪಸ್ತಂಭಗಳು ನಯನ ಮನೋಹರವಾಗಿವೆ.
ಗರ್ಭಗುಡಿಯಲ್ಲಿ ಗರ್ಜಿಸುತ್ತಿರುವ ಸಿಂಹದ ಮೇಲೆ ವಿರಾಜಮಾನಳಾದ ಪಾರ್ವತಿಯ ಸುಂದರ ಮೂರ್ತಿಯಿದೆ. ದೇವಿಗೆ ಶರಣು ಹೋದರೆ ಸಕಲ ಅಭಿಷ್ಟಗಳೂ ಈಡೇರುತ್ತವೆ ಎಂಬುದು ಭಕ್ತರ ನಂಬಿಕೆ. ವರ್ಷಕ್ಕೊಮ್ಮೆ ನಡೆಯುವ ಬನಶಂಕರಿ ಜಾತ್ರೆ ಜಗದ್ವಿಖ್ಯಾತವಾಗಿದೆ. ಅಂದು ಊರಿಗೆ ಊರೇ ತಳಿರು ತೋರಣಗಳಿಂದ ಅಲಂಕೃತವಾಗುತ್ತದೆ. ದೂರದೂರುಗಳಿಂದ ಆಗಮಿಸುವ ಭಕ್ತರು ಇಲ್ಲಿ ಬಂದು ಬಿಡಾರ ಹೂಡಿ ದೇವಿಯನ್ನು ಪೂಜಿಸುತ್ತಾರೆ. ಬನಶಂಕರಿ ಬೆಂಗಳೂರಿನಿಂದ 425 ಕಿಲೋ ಮೀಟರ್ ದೂರದಲ್ಲಿದೆ.
ಎಲ್ಲರಿಗೂ ಬನದ ಹುಣ್ಣಿಮೆಯ ಶುಭಾಶಯಗಳು.

(ಚಿತ್ರ ಕೃಪೆ: ಸಾಮಾಜಿಕ ತಾಣದಲ್ಲಿ ಪಾರ್ವರ್ಡ್ ಆಗಿ ಬಂದಿದ್ದು)

13/01/2022

Address

Bangalore
560056

Telephone

+918660805963

Website

Alerts

Be the first to know and let us send you an email when Kannadaratna posts news and promotions. Your email address will not be used for any other purpose, and you can unsubscribe at any time.

Contact The Business

Send a message to Kannadaratna:

Share