26/10/2025
ಮೂರು ಕೋಟಿ ಇನ್ಶುರೆನ್ಸ್ ಹಣಕ್ಕಾಗಿ ಪತಿಯನ್ನೇ ಕೊಂದ ಪತ್ನಿ? — ಸಿ.ಆರ್.ಪಿ.ಎಫ್ ಯೋಧನ ಸಾವು ಸುತ್ತ ಹೊಸ ಅನುಮಾನಗಳು
ಮೂರು ಕೋಟಿ ರೂಪಾಯಿ ಇನ್ಶುರೆನ್ಸ್ ಹಣಕ್ಕಾಗಿ ಪತಿಯನ್ನೇ ಕೊಲೆಗೈದಿರುವ ಆರೋಪದಿಂದ ಹಾವೇರಿ ಜಿಲ್ಲೆಯ ಶಿಗ್ಗಾವಿ ಪಟ್ಟಣ ಮತ್ತೆ ಸುದ್ದಿಯಲ್ಲಿದೆ. ಸಿ.ಆರ್.ಪಿ.ಎಫ್ ಯೋಧ ತಾರೇಶ್ (37) ಅವರ ಸಾವು ಆತ್ಮಹತ್ಯೆ ಅಲ್ಲ, ಕೊಲೆ ಎಂದು ಈಗ ಕುಟುಂಬದವರು ಆರೋಪಿಸಿದ್ದಾರೆ.
ತಾರೇಶ್ ಅವರ ತಂದೆ ಬಸವರಾಜ್ ಮತ್ತು ತಾಯಿ ಮಂಜುಳಾ ಅವರು ಸೊಸೆ ದಿವ್ಯಾ ಹಾಗೂ ಆಕೆಯ ಸಹೋದರನ ವಿರುದ್ಧ ಕೊಲೆ ಆರೋಪ ಮಾಡಿದ್ದಾರೆ. ಇವರ ಪ್ರಕಾರ, ತಾರೇಶ್ ಅವರ ಹೆಸರಿನಲ್ಲಿ ಸುಮಾರು ₹3 ಕೋಟಿ ಮೌಲ್ಯದ ಇನ್ಶುರೆನ್ಸ್ ಪಾಲಿಸಿಯನ್ನು, ಅವರ ಸಾವಿನ ಕೇವಲ ಮೂರು ತಿಂಗಳ ಮುಂಚೆಯೇ ತೆಗೆದುಕೊಳ್ಳಲಾಗಿತ್ತು.
ಘಟನೆ ಹಿನ್ನೆಲೆ..
ತಾರೇಶ್ ಮೂಲತಃ ಹಾಸನ ಜಿಲ್ಲೆಯ ಅರಸೀಕೆರೆ ಪಟ್ಟಣದವರು. ಸುಮಾರು 7 ವರ್ಷಗಳ ಹಿಂದೆ ದಿವ್ಯಾಳೊಂದಿಗೆ ವಿವಾಹವಾಗಿದ್ದರು.ದಂಪತಿಗಳು ಬೆಂಗಳೂರಿನಲ್ಲಿ ಹೊಸ ಮನೆ ಖರೀದಿಸಿ ವಾಸಿಸುತ್ತಿದ್ದರು.
ಜೂನ್ 18 ರಂದು ತಾರೇಶ್ ಕಾಣೆಯಾಗಿದ್ದರೆಂದು ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದರು.
ಜೂನ್ 23 ರಂದು, ಹಾವೇರಿ ಜಿಲ್ಲೆಯ ಶಿಗ್ಗಾವಿ ಹೊರವಲಯದಲ್ಲಿ ತಾರೇಶ್ ಅವರ ಶವ ಪತ್ತೆಯಾಯಿತು. ಆದಾಗ್ಯೂ, ಪ್ರಾಥಮಿಕ ತನಿಖೆಯಲ್ಲಿ ಆತ್ಮಹತ್ಯೆ ಎಂದು ಹೇಳಿ ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯಕ್ರಿಯೆ ಮುಗಿಸಲಾಯಿತು. ಆದರೆ ನಂತರ ಬಂದ ವೈದ್ಯಕೀಯ ವರದಿಯಲ್ಲಿ ಉಸಿರುಗಟ್ಟಿ ಮತ್ತು ಪುಡ್ ಪಾಯ್ಸನ್ ಸೇವನೆಯಿಂದ ಸಾವಾಗಿದೆ ಎಂಬುದು ಬಹಿರಂಗವಾಯಿತು.
ಕುಟುಂಬದ ಆಕ್ಷೇಪಣೆ:
ತಾರೇಶ್ ಅವರ ಹೆತ್ತವರ ಪ್ರಕಾರ, ದಿವ್ಯಾ ಮತ್ತು ಆಕೆಯ ಸಹೋದರರು ಇನ್ಶುರೆನ್ಸ್ ಹಣಕ್ಕಾಗಿ ಪೂರ್ವಯೋಜನೆ ಮಾಡಿಕೊಂಡು ತಾರೇಶ್ ಅವರನ್ನು ಕೊಲೆಗೈದು, ನಂತರ ಶವವನ್ನು ಶಿಗ್ಗಾವಿ ಬಳಿ ಬಿಸಾಕಿದ್ದಾರೆ.
ಮರುತನಿಖೆಗೆ ಒತ್ತಾಯ:
ತಾರೇಶ್ ಅವರ ಕುಟುಂಬ ಈಗ ಈ ಪ್ರಕರಣವನ್ನು ಮರುತನಿಖೆ ನಡೆಸುವಂತೆ ಹಾವೇರಿ ಜಿಲ್ಲಾ ಎಸ್ಪಿ ಯಶೋಧ ವಂಟಗೋಡಿ ಅವರಿಗೆ ಅಧಿಕೃತ ದೂರು ಸಲ್ಲಿಸಿದೆ. ಈ ಬೆಳವಣಿಗೆಯು ಸಿ.ಆರ್.ಪಿ.ಎಫ್ ಸಿಬ್ಬಂದಿ ವಲಯದಲ್ಲಿಯೂ ಚರ್ಚೆಗೆ ಗ್ರಾಸವಾಗಿದ್ದು, ಸತ್ಯ ಹೊರಬರುವ ತನಕ ಈ ಪ್ರಕರಣವನ್ನು ಮುಚ್ಚಬಾರದು ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.