29/06/2020
ಡಿಜಿಟಲ್ ಸ್ಟ್ರೈಕ್! ಟಿಕ್ ಟಾಕ್ ಸೇರಿ ಚೀನಾದ 59 ಆ್ಯಪ್ ಗಳನ್ನು ನಿಷೇಧಿಸಿದ ಕೇಂದ್ರ ಸರ್ಕಾರ..
ಭಾರತ ಮತ್ತು ಚೀನಾ ನಡುವಿನ ಘರ್ಷಣೆ ಮುಂದುವರೆದಿರುವ ಬೆನ್ನಲ್ಲೇ ಚೀನಾ ವಿರುದ್ಧ ಭಾರತದೆಲ್ಲೆಡೆ ಆಕ್ರೋಶ ಮುಗಿಲು ಮುಟ್ಟಿದೆ. ಚೀನಾ ವಸ್ತುಗಳನ್ನು ಸಂಪೂರ್ಣವಾಗಿ ಭಾರತದಿಂದ ನಿಷೇಧಿಸುವಂತೆ ಕೂಗು ಕೇಳಿ ಬರುತ್ತಿದೆ. ಸಿಎಐಟಿಯಂತಹ ಕೆಲವು ವ್ಯಾಪಾರ ಸಂಸ್ಥೆಗಳು ಗಡಿ ಬಿಕ್ಕಟಿಗೆ ಸಂಬಂಧಿಸಿದಂತೆ ಪ್ರತಿಭಟನೆ ನಡೆಸಿ ಚೀನಾದ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಒತ್ತಾಯಿಸಿವೆ.
ಚೀನಾ ಮೂಲದ ಸ್ಮಾರ್ಟ್‌ಫೋನ್‌ಗಳ ಅಬ್ಬರದ ಜೊತೆಗೆ ಚೀನಿ ನಿರ್ಮಿತ ಆ್ಯಪ್ ಗಳನ್ನೂ ನಿಷೇಧಿಸಬೇಕೆಂಬ ಕೂಗು ಕೇಳಿ ಬರುತ್ತಿತ್ತು.
ಇದರ ಭಾಗವಾಗಿ ಕೇಂದ್ರ ಸರ್ಕಾರ ಇಂದು ಚೀನಾದ 59 ಆ್ಯಪ್ ಗಳನ್ನು ನಿಷೇಧಿಸಿ ಮಹತ್ವದ ಆದೇಶ ಹೊರಡಿಸಿದೆ. ಜನಪ್ರಿಯ ಆ್ಯಪ್ ಆಗಿರುವ ಟಿಕ್ ಟಾಕ್ ಅನ್ನೂ ಕೇಂದ್ರ ಸರ್ಕಾರ ನಿಷೇಧಿಸಿದೆ. ಟಿಕ್ ಟಾಕ್ ಜೊತೆಗೆ ಶೇರ್ ಇಟ್, ಯುಸಿ ಬ್ರೌಸರ್ ಸೇರಿದಂತೆ 59 ಆ್ಯಪ್ ಗಳು ಇನ್ನುಮುಂದೆ ಭಾರತದಲ್ಲಿ ಕೆಲಸ ಮಾಡುವಂತಿಲ್ಲ. ಚೀನಾ ಆ್ಯಪ್ ಗಳು ಕೋಟ್ಯಾಂತರ ರೂಪಾಯಿ ಹಣವನ್ನು ಭಾರತದಿಂದ ದುಡಿಯುತ್ತಿದ್ದವು. ಇದೀಗ ಈ ಅವಕಾಶ ತಪ್ಪಿಹೋಗಲಿದೆ.
ಇದೊಂದು ಐತಿಹಾಸಿಕ ನಿರ್ಧಾರವಾಗಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಚೀನಾದ ಮೇಲೆ ಡಿಜಿಟಲ್ ಸ್ಟ್ರೈಕ್ ಮಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಹರ್ಷ ವ್ಯಕ್ತವಾಗಿದೆ. ಭಾರತೀಯರ ಖಾಸಗಿತನಕ್ಕೆ ಈ ಆ್ಯಪ್ ಗಳಿಂದ ಧಕ್ಕೆ ಬರುತ್ತಿತ್ತು ಹಾಗೂ ಭಾರತೀಯರ ದತ್ತಾಂಶಗಳನ್ನು ಚೀನಾ ಈ ಆ್ಯಪ್ ಗಳ ಮೂಲಕ ಕಳುವು ಮಾಡುತ್ತಿತ್ತು ಎಂದು ಕೇಂದ್ರ ಸರ್ಕಾರ ಹೇಳಿದೆ. ಟಿಕ್ ಟಾಕ್ ಗೆ ವಿಶ್ವದಲ್ಲೇ ಅತೀ ಹೆಚ್ಚು ಜನ ಬಳಕೆದಾರರು ಭಾರತದಲ್ಲಿದ್ದರು. ಕೇಂದ್ರದ ಈ ನಿರ್ಧಾರದಿಂದ ಭಾರತದ ಮೇಲೆ ಕಿಡಿಕಾರಿದ್ದ ಚೀನಾಗೆ ಮರ್ಮಾಘಾತವೇ ಆಗಿದೆ.