Sports Karnataka

Sports Karnataka ಇದು ಹವ್ಯಾಸ ಅಷ್ಟೇ. ಹಾಗಂತ ವೃತ್ತಿಪರತೆಯಂ?

ಕೆಎಸ್‍ಸಿಎ ನೂತನ ಸಾರಥಿ ವೆಂಕಟೇಶ್ ಪ್ರಸಾದ್‍ಗೆ ಬಹಿರಂಗ ಪತ್ರ..! ಡಿಯರ್ ವೆಂಕಿ...ಮೊದಲಿಗೆ ನಿಮಗೆ ಅಭಿನಂದನೆಗಳು. ಯಾಕಂದ್ರೆ ಈಗ ನೀವು ಕರ್ನಾಟ...
09/12/2025

ಕೆಎಸ್‍ಸಿಎ ನೂತನ ಸಾರಥಿ ವೆಂಕಟೇಶ್ ಪ್ರಸಾದ್‍ಗೆ ಬಹಿರಂಗ ಪತ್ರ..!

ಡಿಯರ್ ವೆಂಕಿ...
ಮೊದಲಿಗೆ ನಿಮಗೆ ಅಭಿನಂದನೆಗಳು. ಯಾಕಂದ್ರೆ ಈಗ ನೀವು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ. ರಾಜ್ಯ ಹಾಗೂ ಟೀಮ್ ಇಂಡಿಯಾ ಆಟಗಾರನಾಗಿ ನೀವು ಹಲವು ದಾಖಲೆ, ಸಾಧನೆಗಳನ್ನು ಮಾಡಿದ್ದೀರಿ. ಅವೆಲ್ಲವೂ ವಿಶ್ವ ಕ್ರಿಕೆಟ್ ಇತಿಹಾಸ ಪುಟಗಳಲ್ಲಿ ದಾಖಲಾಗಿದೆ. ಈಗ ಮಹತ್ವದ ಸ್ಥಾನಮಾನ ಸಿಕ್ಕಿದೆ. ಇದು ಖುಷಿಯ ವಿಚಾರವೇ. ಆದ್ರೆ ಮುಂದಿನ ದಿನಗಳಲ್ಲಿ ಕೆಎಸ್‍ಸಿಎನಲ್ಲಿ ಹೊಸ ಶಕೆ ಆರಂಭವಾಗಬೇಕು. ಪಾರದರ್ಶಕ ಆಡಳಿತ, ದಿಟ್ಟ ನಿರ್ಧಾರಗಳಿಂದ ರಾಜ್ಯ ಕ್ರಿಕೆಟ್‍ನ ಪರಂಪರೆಯನ್ನು ಉಳಿಸಿ ಬೆಳೆಸಬೇಕು. ಇದು ನಿಮ್ಮ ಜವಾಬ್ದಾರಿಯೂ ಹೌದು.. ನಿಮ್ಮ ಕರ್ತವ್ಯವೂ ಹೌದು ಎಂಬುದನ್ನು ಮರೆಯಬೇಡಿ.
ಆದ್ರೆ ಯಾವುದೇ ಕಾರಣಕ್ಕೂ 12 ವರ್ಷಗಳ ಹಿಂದೆ ನೀವೂ ಹಾಗೂ ನಿಮ್ಮ ಆಪ್ತರು ಮಾಡಿರುವ ತಪ್ಪನ್ನು ಮತ್ತೆ ಮಾಡಬೇಡಿ. 2010ರಲ್ಲಿ ಉಪಾಧ್ಯಕ್ಷರಾಗಿದ್ದ ನೀವು 12 ವರ್ಷಗಳ ಬಳಿಕ ಕೆಎಸ್‍ಸಿಎ ಚಾವಡಿಗೆ ಬಂದು ಈಗ ಸಾರಥಿಯಾಗಿದ್ದೀರಿ. ಮುಂದಿನ ಮೂರು ವರ್ಷಗಳ ಕಾಲ
ಕರ್ನಾಟಕ ಕ್ರಿಕೆಟ್ ಅನ್ನು ಮುನ್ನಡೆಸಿಕೊಂಡು ಹೋಗಬೇಕಿದೆ. ಹಾಗಂತ ಈ ಹಿಂದಿನಂತೆ ಕೇವಲ ಮೂರು ವರ್ಷಕ್ಕೆ ಸೀಮಿತವಾಗಬೇಡಿ. ದೂರದೃಷ್ಟಿಯನ್ನಿಟ್ಟುಕೊಂಡು ಕೆಎಸ್‍ಸಿಎಗೆ ಆಧುನಿಕತೆ ಸ್ಪರ್ಶವನ್ನು ನೀಡುತ್ತೀರಿ ಎಂಬ ನಂಬಿಕೆ ಇದೆ.
ಹೌದು, ನಿಮಗೆ ಚೆನ್ನಾಗಿ ಗೊತ್ತಿದೆ.. ಕೆಎಸ್‍ಸಿಎ ಗದ್ದುಗೆಯಲ್ಲಿ ಕುಳಿತುಕೊಂಡು ಕೆಲಸ ಸುಲಭದ ಸಂಗತಿಯಲ್ಲ ಅಂತ. ಇಲ್ಲಿ ಸಾಕಷ್ಟು ಸವಾಲುಗಳನ್ನು ಎದುರಿಸಬೇಕು. ನೂರಾರು ಸಮಸ್ಯೆಗಳನ್ನು ಬಗೆಹರಿಸಬೇಕು. ಕೆಎಸ್‍ಸಿಎಗೆ ಅಂಟಿಕೊಂಡಿರುವ ಕಲೆಗಳನ್ನು ಕಿತ್ತು ಹಾಕಬೇಕು. ಕರ್ನಾಟಕ ಕ್ರಿಕೆಟ್‍ನ ಪರಂಪರೆ, ಗೌರವ, ಪ್ರತಿಷ್ಠೆಯನ್ನು ಮತ್ತೆ ಪಡೆಯಬೇಕು. ಇದು ನಿಮ್ಮ ಧ್ಯೇಯವೂ ಹೌದು..ಇದನ್ನು ಕಾರ್ಯರೂಪಕ್ಕೆ ತರೋದು ನಿಮ್ಮ ಕರ್ತವ್ಯವೂ ಹೌದು.
ಮುಖ್ಯವಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಿಂದ ದೂರವಾಗಿರುವ ಚಿನ್ನಸ್ವಾಮಿಯಲ್ಲಿ ಮತ್ತೆ ಪಂದ್ಯಗಳನ್ನು ಆಡಿಸಬೇಕು. ಕಳೆದ ವರ್ಷ ಆರ್‍ಸಿಬಿ ವಿಜಯೋತ್ಸದ ವೇಳೆ ಆಗಿದ್ದ ಕಾಲ್ತುಳಿತದಂತಹ ಅನಾಹುತಗಳನ್ನು ತಡೆಗಟ್ಟಲು ಸೂಕ್ತ ಕ್ರಮ ತೆಗೆದುಕೊಳ್ಳಬೇಕು.
ಆದ್ರೆ ದಯವಿಟ್ಟು ಕರ್ನಾಟಕ ಪ್ರೀಮಿಯರ್ ಲೀಗ್ ಅನ್ನು ರದ್ದು ಮಾಡಬೇಡಿ. ಈ ಹಿಂದೆ ನಿಮ್ಮದೇ ಟೀಮ್‍ನವರು ಕೆಪಿಎಲ್ ಟೂರ್ನಿಯನ್ನು ಸ್ಥಗಿತಗೊಳಿಸಿದ್ದರು. ಆ ಪ್ರಮಾದವನ್ನು ಮತ್ತೆ ಮಾಡಬೇಡಿ. ಅದರ ಬದಲು ಕೆಪಿಎಲ್ ಟೂರ್ನಿಗೆ ಹೊಸ ಸ್ವರೂಪವನ್ನು ನೀಡಿ. ಐಪಿಎಲ್ ಮಾದರಿಯಲ್ಲೇ ಕೆಪಿಎಲ್ ಟೂರ್ನಿಯನ್ನು ಆಯೋಜನೆ ಮಾಡಿ. ಯಾವುದೇ ಕಾರಣಕ್ಕೂ ತಟಸ್ಥ ತಾಣ ಹಾಗೂ ಬೆಂಗಳೂರು, ಹುಬ್ಬಳ್ಳಿ ಮೈಸೂರಿಗೆ ಮಾತ್ರ ಸೀಮಿತಗೊಳಿಸಬೇಡಿ. ಆಯಾ ಫ್ರಾಂಚೈಸಿಗಳ ತವರಿನಲ್ಲೇ ಪಂದ್ಯಗಳನ್ನು ಆಯೋಜಿಸಿ. ಯಾಕಂದ್ರೆ ಸ್ಥಳೀಯ ಕ್ರಿಕೆಟ್ ಪಂದ್ಯಗಳನ್ನು ನೋಡಲು ಸಾವಿರಾರು ಜನ ಸೇರ್ತಾರೆ ಅಂದ ಮೇಲೆ ಕೆಪಿಎಲ್ ಫ್ರಾಂಚೈಸಿಗಳ ತವರಿನಲ್ಲಿ ಪಂದ್ಯಗಳನ್ನು ಸಂಘಟಿಸಿದ್ರೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಪಂದ್ಯವನ್ನು ನೋಡಬಹುದು. ಹೀಗಾಗಿ ರಾಜ್ಯದ ಪ್ರಮುಖ ನಗರಗಳಲ್ಲಿ ಕೆಎಸ್‍ಸಿಎ ಕ್ರೀಡಾಂಗಣಗಳನ್ನು ನಿರ್ಮಾಣ ಮಾಡುವ ಪ್ರಯತ್ನ ಮಾಡಬೇಕಿದೆ. ಅಲ್ಲದೆ ಇದೇ ಮೈದಾನದಲ್ಲಿ ಕೆಎಸ್‍ಸಿಎ ಕ್ರಿಕೆಟ್ ಅಕಾಡೆಮಿಯನ್ನು ಆರಂಭಿಸಿದ್ರೆ ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ಸಿಕ್ಕಂತಾಗುತ್ತದೆ.
ಇನ್ನು ಕರ್ನಾಟಕ ಕ್ರಿಕೆಟ್ ಅಕಾಡೆಮಿಗೆ ಮರುಜೀವ ನೀಡಬೇಕು. ವಿವಿಧ ವಯೋಮಿತಿ, ಕ್ಲಬ್ ಕ್ರಿಕೆಟ್, ರಣಜಿ ಟೂರ್ನಿ ಸೇರಿದಂತೆ ಪ್ರತಿಯೊಂದು ಆಯ್ಕೆಯಲ್ಲೂ ಪಾರದರ್ಶಕತೆಯನ್ನು ತರಬೇಕು. ಹಾಗೇ ಶಿಸ್ತು, ಕಠಿಣ ನಿಯಮಗಳನ್ನು ರೂಪಿಸಬೇಕು. ಯುವ ಪ್ರತಿಭಾವಂತ ಆಟಗಾರರಿಗೆ ಅನ್ಯಾಯವಾಗಬಾರದು. ಹಾಗೇ ಖಾಸಗಿ ಕ್ಲಬ್‍ಗಳ ಪ್ರಭಾವಕ್ಕೂ ಕಡಿವಾಣ ಹಾಕಬೇಕಿದೆ.
ಹಾಗೇ ಕೆಎಸ್‍ಸಿಎಯನ್ನು ಕ್ಲೀನ್ ಮಾಡೋದು ನಿಮ್ಮ ಮೊದಲ ಕೆಲಸವಾಗಲಿದೆ. ನೆನೆಗುದಿಗೆ ಬಿದ್ದಿರುವ ಕ್ರೀಡಾಂಗಣಗಳ ಕಾಮಗಾರಿಗಳಿಗೆ ವೇಗವನ್ನು ನೀಡಬೇಕಿದೆ. ರಾಜ್ಯದ ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ಸರ್ಕಾರ, ಕಾರ್ಪೋರೇಟ್ ಸಂಸ್ಥೆಗಳ ಸಹಾಯದಿಂದ ಕೆಎಸ್‍ಸಿಎ ಮೈದಾನಗಳನ್ನು ನೀವು ಮನಸು ಮಾಡಿದ್ರೆ ನಿರ್ಮಾಣ ಮಾಡಬಹುದು. ಇನ್ನೊಂದೆಡೆ, ಕೆಎಸ್‍ಸಿಎನಲ್ಲಿ ಈ ಹಿಂದೆ ಆಗಿರುವ ಲೋಪದೋಷಗಳು, ಅವ್ಯವಹಾರಗಳನ್ನು ಬಯಲಿಗೆ ತರಬೇಕು. ಇಲ್ಲಿ, ನಿಮ್ಮ ಸ್ವಾರ್ಥ, ಅಹಂ, ಪ್ರತಿಷ್ಠೆ ಎಲ್ಲವನ್ನೂ ಬಿಡಬೇಕಿದೆ. ರಾಜ್ಯದ ಹಿರಿಯ ಹಾಗೂ ಅನುಭವಿ ಕ್ರಿಕೆಟಿಗರ ಅಭಿಪ್ರಾಯಗಳನ್ನು ಪಡೆದುಕೊಂಡು ರಾಜ್ಯ ಕ್ರಿಕೆಟ್ ಸಂಸ್ಥೆಯನ್ನು ಮುನ್ನಡೆಸಿಕೊಂಡು ಹೋಗಬೇಕು.
ಮತ್ತೊಂದು ಮನವಿ.. ಕೆಎಸ್‍ಸಿಎನಲ್ಲಿ ಕನ್ನಡ ಪರ್ತಕರ್ತರು, ಕನ್ನಡ ಮಾಧ್ಯಮಗಳಿಗೂ ಆದ್ಯತೆ ನೀಡಿ. ಕೇವಲ ನಿಮ್ಮ ಅನುಕೂಲಕ್ಕೆ ತಕ್ಕಂತೆ ಕನ್ನಡ ಮಾಧ್ಯಮಗಳನ್ನು ಬಳಸಿಕೊಳ್ಳಬೇಡಿ. ಯಾವುದೇ ವಿಚಾರದಲ್ಲೂ ತಾರತಮ್ಯ, ಸರ್ವಾಧಿಕಾರಿ ಧೋರಣೆಯನ್ನು ಯಾವತ್ತೂ ಮಾಡಬೇಡಿ.
ಕೊನೆಂiÀiದಾಗಿ ವೆಂಕಿ.. ಗೇಮ್ ಚೇಂಜರ್ಸ್ ಅಂತ ಟೀಮ್ ಕಟ್ಟಿಕೊಂಡು ಕೆಎಸ್‍ಸಿಎ ಪಟ್ಟಕ್ಕೇರಿದ್ದಿರಿ. ನಿಮ್ಮಿಂದ ಸಾಕಷ್ಟು ನಿರೀಕ್ಷೆಗಳಿವೆ. ಕರ್ನಾಟಕ ಕ್ರಿಕೆಟ್ ಇನ್ನಷ್ಟು ಎತ್ತರಕ್ಕೇರುತ್ತದೆ ಎಂಬ ಭರವಸೆ ಇದೆ. ಸ್ಥಳೀಯ ಪ್ರತಿಭೆಗಳನ್ನು ಬೆಳೆಸಿ.. ಕರ್ನಾಟಕದ ಹೆಸರನ್ನು ಉಳಿಸಿ.. ಆಗ ನೀವು ಕೆಎಸ್‍ಸಿಎ ಅಧ್ಯಕ್ಷನಾಗಿರುವುದಕ್ಕೂ ಸಾರ್ಥಕತೆ ಇರುತ್ತೆ. ಈ ನಂಬಿಕೆಯನ್ನು ಹುಸಿಗೊಳಿಸಬೇಡಿ..!

ಸನತ್ ರೈ

07/12/2025

ಕೆಎಸ್‍ಸಿಎ ಚುನಾವಣೆ - ಪಟೇಲರಿಗೆ ಮಹಾ ಮಂಗಳಾರತಿ.. ವೆಂಕಟೇಶನಿಗೆ ಪ್ರಸಾದ

ಅಂತು.. ಇಂತು.. ಕೆಎಸ್‍ಸಿಎನಲ್ಲಿ ಪಟೇಲರ ಒಡ್ಡೋಲಗಕ್ಕೆ ಬ್ರೇಕ್ ಬಿದ್ದಿದೆ. 22ವರ್ಷಗಳ ಕಾಲ ಕೆಎಸ್‍ಸಿಎ ಆಡಳಿತವನ್ನು ಕೈ ಬೆರಳಿನಲ್ಲೇ ಆಡಿಸುತ್ತಿದ್ದ ಬ್ರಿಜೇಶ್ ಪಟೇಲರು 2025ರ ಚುನಾವಣೆಯಲ್ಲಿ ಮುಖಭಂಗ ಅನುಭವಿಸಿದ್ದಾರೆ. ಕುಂಬ್ಲೆಯ ಗೂಗ್ಲಿ, ಶ್ರೀನಾಥ್ ಬೌನ್ಸರ್ ಹಾಗೂ ವೆಂಕಿಯ ಸ್ವಿಂಗ್‍ಗೆ ಬ್ರಿಜೇಶ್ ಪಟೇಲರ ಬ್ಯಾಟ್ ಮುರಿದು ಹೋಗಿದೆ.
ಈ ಹಿಂದೆ ಐದು ಬಾರಿ ಕೆಎಸ್‍ಸಿಎನಲ್ಲಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದ ಪಟೇಲರು ಕಳೆದ ಎಂಟು ವರ್ಷಗಳಿಂದ ಕೆಎಸ್‍ಸಿಎನಲ್ಲಿ ಪಟೇಲರ ಪ್ರಭುತ್ವಕ್ಕೆ ಯಾವುದೇ ರೀತಿಯ ಅಡೆತಡೆಗಳಿರಲಿಲ್ಲ.
ಕಾರಣ 2010ರಲ್ಲಿ ಕೆಎಸ್‍ಸಿಎ ಚುಕ್ಕಾಣಿ ಹಿಡಿದ್ದ ಕುಂಬ್ಳೆ ಒಂದೇ ಅವಧಿಗೆ ಕೆಎಸ್‍ಸಿಎ ಸಹವಾಸ ಸಾಕು ಅಂತ ದೂರ ಸರಿದಿದ್ದರು. ನಂತರ 12 ವರ್ಷಗಳ ಕಾಲ ಕುಂಬ್ಳೆ - ಶ್ರೀನಾಥ್ ಟೀಮ್ ಕೆಎಸ್‍ಸಿಎ ಚಾವಡಿಗೆ ಎಂಟ್ರಿಯಾಗುವ ಮನಸ್ಸು ಮಾಡಲಿಲ್ಲ ಎಂಬುದು ಬೇರೆ ವಿಚಾರ. ಕೊನೆಗೂ ಕರ್ನಾಟಕ ಕ್ರಿಕೆಟ್ ಅರ್ಧಪತನದತ್ತ ಸಾಗುತ್ತಿದೆ ಎಂಬುದು ಜ್ಞಾನೋದಯವಾಗಿದ್ದು ಮಾತ್ರ ಒಳ್ಳೆಯ ವಿಚಾರ.
ಹೀಗಾಗಿ ಈ ಬಾರಿ ಕುಂಬ್ಳೆ - ಶ್ರೀನಾಥ್ ಟೀಮ್ ಕೆಎಸ್‍ಸಿಎ ಅಖಾಡಕ್ಕೆ ವೆಂಕಿ ತಂಡನ್ನು ಕಣಕ್ಕಿಳಿಸಿತ್ತು. ಇನ್ನೊಂದೆಡೆ ಪಟೇಲರು ಈ ಬಾರಿಯ ಚುನಾವಣೆಯಲ್ಲಿ ಕುಂಬ್ಳೆ - ಶ್ರೀನಾಥ್ ಟೀಮ್‍ಗೆ ನೇರವಾಗಿ ಪಂಥಾಹ್ವಾನವನ್ನು ನೀಡಿದ್ದರು. 2010ರಲ್ಲಿ ಒಲ್ಲದ ಮನಸ್ಸಿನಿಂದಲೇ ಕುಂಬ್ಳೆ ಟೀಮ್‍ಗೆ ಬೆಂಬಲ ನೀಡಿ ಮಹಾರಾಜರ ವಿರುದ್ಧ ಸೇಡು ತೀರಿಸಿಕೊಂಡಿದ್ದ ಪಟೇಲರು 2013ರಲ್ಲಿ ಅದೇ ಮಹಾರಾಜರ ಜೊತೆ ಸೇರಿಕೊಂಡು ಮತ್ತೆ ಕೆಎಸ್‍ಸಿಎಯನ್ನು ಕೈವಶಮಾಡಿಕೊಂಡಿದ್ದರು.
ಆದ್ರೆ ಈ ಬಾರಿ ಪರಿಸ್ಥಿತಿ ಭಿನ್ನವಾಗಿತ್ತು. ಹೇಗಾದ್ರೂ ಪಟೇಲರ ಕಾರುಬಾರುಗೆ ಅಂತ್ಯ ಹಾಡಲೇಬೇಕು ಅಂತ ಕುಂಬ್ಳೆ - ಶ್ರೀನಾಥ್ ಟೀಮ್ ನಿರ್ಧಾರ ಮಾಡಿದ್ರು. ತಡವಾಗಿ ಬಂದ್ರೂ
ವೆಂಕಟೇಶ್ ಪ್ರಸಾದ್ ಈಗ ಕೆಎಸ್‍ಸಿಎ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ. ಉಪಾಧ್ಯಕ್ಷರಾಗಿ ಸುಜೀತ್ ಸೋಮಸಂದರ್. ಕಾರ್ಯದರ್ಶಿಯಾಗಿ ಸಂತೋಷ್ ಮೇನನ್ ಗೆದ್ರೆ, ಸಹಕಾರ್ಯದರ್ಶಿಯಾಗಿ ಬ್ರಿಜೇಶ್ ಟೀಮ್ ನ ಬಿ.ಕೆ. ರವಿ ಜಯ ಗಳಿಸಿದ್ದಾರೆ. ]
ಅಚ್ಚರಿ ಅಂದ್ರೆ, ಕಾರ್ಯದರ್ಶಿ ಸಂತೋಷ್ ಮೇನನ್ ಒಂದು ಕಾಲದಲ್ಲಿ ಪಟೇಲರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು. ಆದ್ರೆ ಈ ಬಾರಿ ಪಟೇಲರಿಗೆ ತಿರುಗಿಬಿದ್ದಿರೋದು ನಂಬಲು ಅಸಾಧ್ಯವಾಗಿದೆ. 2007ರಲ್ಲಿ ಬ್ರಿಜೇಶ್ ಪಟೇಲರ ವಿರುದ್ಧ ಕೆಂಡಕಾರುತ್ತಿದ್ದ ಬಿ.ಕೆ. ರವಿ ಅವರು ಈ ಸಲ ಪಟೇಲರ ಬಣದಲ್ಲಿ ಗುರುತಿಸಿಕೊಂಡು ಗೆಲುವಿನ ನಗೆ ಚೆಲ್ಲಿದ್ದಾರೆ.
ಆದ್ರೆ ಇಲ್ಲಿ ಹರಕೆಯ ಕುರಿಯಾಗಿದ್ದು ಪತ್ರಿಕೋಧ್ಯಮಿ ಶಾಂತಕುಮಾರ್ ಅವರು. ಬ್ರಿಜೇಶ್ ಟೀಮ್‍ನಿಂದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಶಾಂತಕುಮಾರ್ ಅವರನ್ನು ಗೆಲ್ಲಿಸಲು ಪಟೇಲರು ಯಶಸ್ವಿಯಾಗಲಿಲ್ಲ. ಪಟೇಲರ ವೋಟ್ ಬ್ಯಾಂಕ್ ಶಾಂತ ಕುಮಾರ್ ಅವರ ಕೈ ಹಿಡಿಯಲಿಲ್ಲ. ಉತ್ತಮ ಆಡಳಿತಗಾರ ಎಂಬ ಖ್ಯಾತಿ ಪಡೆದಿದ್ದ ಶಾಂತಕುಮಾರ್ ತಪ್ಪು ನಿರ್ಧಾರ ತೆಗೆದುಕೊಂಡ್ರು ಎಂಬ ಮಾತು ಕೇಳಿಬಂದಿದ್ದು ಸುಳ್ಳಾಗಲಿಲ್ಲ. ಹೆಸರಿಗೆ ತಕ್ಕಂತೆ ಶಾಂತ ವರ್ಚಸ್ಸು ಹೊಂದಿದ್ದ ಶಾಂತಕುಮಾರ್ ಅವರಿಗೆ ಪಟೇಲರ ಬಣದಲ್ಲಿ ಗುರುತಿಸಿಕೊಳ್ಳುವ ಅಗತ್ಯವಿರಲಿಲ್ಲ. ಆದ್ರೆ ಪಟೇಲರ ತಂತ್ರವೇ ಬೇರೇನೇ ಇತ್ತು. ತನ್ನ ಆಪ್ತರು ಎಲ್ಲಾ ಬಿಟ್ಟು ಹೋದಾಗ ವರ್ಚಸ್ಸಿನ ಅಭ್ಯರ್ಥಿ ಬೇಕಾಗಿತ್ತು. ಅಲ್ಲದೆ ತನ್ನದೇ ಆದ ವೋಟ್ ಬ್ಯಾಂಕ್ ಹೊಂದಿದ್ದ ಪಟೇಲರು ವೆಂಕಿ ಟೀಮ್‍ಗೆ ಸಡ್ಡು ಹೊಡೆಯುವ ಲೆಕ್ಕಚಾರದಲ್ಲಿದ್ರು. ಆದ್ರೆ ಅದು ಈ ಬಾರಿ ವರ್ಕ್ ಆಗಲಿಲ್ಲ.
ಯಾರು ಏನೇ ಹೇಳಲಿ, ಪಟೇಲರ ಚಾಣಕ್ಷತನವನ್ನು ಯಾರು ಕೂಡ ಲಘುವಾಗಿ ಪರಿಗಣಿಸುವ ಹಾಗಿಲ್ಲ. ಯಾಕಂದ್ರೆ, ಕೆಎಸ್‍ಸಿಎನಲ್ಲಿ ಪಟೇಲರ ಮಾತೇ ಅಂತಿಮ. ಯಾರು ಎಷ್ಟೇ ಟೀಕೆ, ಆರೋಪಗಳನ್ನು ಮಾಡಿದ್ರೂ ಬ್ರಿಜೇಶ್ ಕ್ಯಾರ್ ಮಾಡ್ತಾ ಇರಲಿಲ್ಲ. ಅದಕ್ಕೂ ಕಾರಣವಿದೆ. ಈ ಹಿಂದೆ ನಾಗರಾಜ್‍ನಂತವರನ್ನೇ ಮಕಾಡೆ ಮಲಗಿಸಿ ಕೆಎಸ್‍ಸಿಎ ಅಧಿಕಾರವನ್ನು ಗಿಟ್ಟಿಸಿಕೊಂಡ ಪಟೇಲರು, ಕೆಎಸ್‍ಸಿಎನಲ್ಲಿ ಅಷ್ಟೊಂದು ಪವರ್‍ಫುಲ್ ವ್ಯಕ್ತಿ. ಒಂದು ರೀತಿಯಲ್ಲಿ ಕೆಎಸ್‍ಸಿಎ ಆಡಳಿತವನ್ನು ಫೆವಿಕಾಲ್ ಗಮ್‍ನಂತೆ ಗಟ್ಟಿಯಾಗಿ ಹಿಡಿದಿಟ್ಟುಕೊಂಡಿದ್ದರು. ಹಾಗಾಗಿ ಕೆಎಸ್‍ಸಿಎಗೆ ಬೇರೆಯವರು ಎಂಟ್ರಿಯಾಗೋದು ಅಷ್ಟೊಂದು ಇಝಿ ಇರಲಿಲ್ಲ.
ಹೌದು, ವೆಂಕಿ ಟೀಮ್ ಗೆಲುವಿನ ಹಿಂದೆ ಕುಂಬ್ಳೆ, ಶ್ರೀನಾಥ್, ರಾಹುಲ್ ಪ್ರಭಾವ ಇತ್ತು ಎಂಬುದು ಬಹುತೇಕರ ಭಾವನೆ. ಆದ್ರೆ ಈ ಗೆಲುವಿನ ಹಿಂದಿರುವ ಶಕ್ತಿ ವಿನಯ್ ಮೃತ್ಯುಂಜಯ ಎಂಬ ಲೆಕ್ಕಪರಿಶೋಧಕ. ಮಹಾರಾಜರ ಕಾಲದಲ್ಲೂ ಗೆಲುವಿನ ಹಿಂದೆ ಇದ್ದದ್ದು ಇದೇ ವಿನಯ್ ಮೃತ್ಯುಂಜಯ್. ಬಳಿಕ ವಿನಯ್ ಮೃತ್ಯುಂಜಯ್ ಕೂಡ ಪಟೇಲರ ಬಣ ಸೇರಿಕೊಂಡಿದ್ದರು ಎಂಬುದು ಬೇರೆ ಮಾತು.
ಆದ್ರೆ ಈ ಬಾರಿ ಕೆಎಸ್‍ಸಿಎಯನ್ನು ಪಟೇಲರ ಕೈಯಿಂದ ವಶಪಡಿಸಿಕೊಳ್ಳಬೇಕು ಎಂದು ವಿನಯ್ ಮೃತ್ಯುಂಜಯ್ ವೆಂಕಿ ಟೀಮ್‍ಗೆ ಬಹಿರಂಗವಾಗಿ ಬೆಂಬಲ ನೀಡುವ ಮೂಲಕ ಪಟೇಲರ ದರ್ಬಾರ್‍ಗೆ ಅಂತ್ಯಹಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ ಎಂಬುದು ಗೊತ್ತಿಲ್ಲದ ವಿಚಾರವೇನೂ ಅಲ್ಲ.
ಇದೀಗ ಕೆಎಸ್‍ಸಿಎನಲ್ಲಿ ಬದಲಾವಣೆಯ ಗಾಳಿ ಬೀಸಿದೆ. ವೆಂಕಿ ಟೀಮ್‍ಗೆ ಸಾಕಷ್ಟು ಸವಾಲುಗಳಿವೆ. ಕಳೆದು ಹೋಗಿರುವ ಕರ್ನಾಟಕ ಕ್ರಿಕೆಟ್‍ನ ಘನತೆಯನ್ನು ಮತ್ತೆ ಪಡೆದುಕೊಳ್ಳಲು ವೆಂಕಿ ಟೀಮ್ ಸಾಕಷ್ಟು ಹೋಮ್ ವರ್ಕ್ ಮಾಡಬೇಕಿದೆ.
ನೆನಪಿಡಿ, ವೆಂಕಿ.. ಕೆಎಸ್‍ಸಿಎ ಕ್ಲಬ್‍ನ ಸದಸ್ಯರು ನಿಮ್ಮನ್ನು ನಂಬಿಕೊಂಡು ನಿಮ್ಮನ್ನು ಗೆಲ್ಲಿಸಿದ್ದಾರೆ. ಕರ್ನಾಟಕ ಕ್ರಿಕೆಟ್‍ಗೆ ವಿನೂತನ ಸ್ವರೂಪ ನೀಡ್ತೀರಿ ಎಂಬ ನಂಬಿಕೆಯ ಮೇಲೆ ನಿಮ್ಮನ್ನು ಆಯ್ಕೆ ಮಾಡಿದ್ದಾರೆ. ಅಲ್ಲದೆ, ನಿಮ್ಮ ಟೀಮ್ ಮೇಲೆ ಸಾಕಷ್ಟು ಭರವಸೆಗಳಿವೆ. ಅದನ್ನು ಹುಸಿಗೊಳಿಸಬೇಡಿ. ನಿಮ್ಮ ಗಾಡ್ ಫಾದರ್‍ಗಳು ಈ ಹಿಂದೆ ಮಾಡಿರುವ ಪ್ರಮಾದವನ್ನು ಮತ್ತೆ ಮಾಡಬೇಡಿ. ನಿಮ್ಮ ಪ್ರತಿಷ್ಠೆ, ಸ್ಥಾನಮಾನವನ್ನು ಬದಿಗಿಟ್ಟು ಕರ್ನಾಟಕ ಕ್ರಿಕೆಟ್ ಪ್ರತಿಭೆಗಳಿಗೆ ಸೂಕ್ತ ಅವಕಾಶ ನೀಡುವುದು ನಿಮ್ಮ ಆದ್ಯ ಕರ್ತವ್ಯ. ಇದನ್ನು ಮಾತ್ರ ಮರೆಯಬೇಡಿ.
ಸನತ್ ರೈ

Address

Banglore

Alerts

Be the first to know and let us send you an email when Sports Karnataka posts news and promotions. Your email address will not be used for any other purpose, and you can unsubscribe at any time.

Contact The Business

Send a message to Sports Karnataka:

Share

Rainewz.com

ರೈ ನ್ಯೂಝ್.ಕಾಮ್. ಇದು ನನ್ನ ಬಹುದಿನಗಳ ಕನಸು. ಈ ಕನಸು ಈಗ ಸಾಕಾರಗೊಂಡಿದೆ. ಕಳೆದ 17 ವರ್ಷಗಳಿಂದ ಮಾಧ್ಯಮ ರಂಗದಲ್ಲಿದ್ದೇನೆ. ಈ ವೃತ್ತಿ ಬದುಕಿನಲ್ಲಿ ಸಾಕಷ್ಟು ಏಳು ಬೀಳುಗಳನ್ನು ಕಂಡಿದ್ದೇನೆ. ಆದ್ರೂ ನನ್ನತನವನ್ನು ಉಳಿಸಿಕೊಂಡಿದ್ದೇನೆ ಎಂದು ಎದೆ ತಟ್ಟಿ ಹೇಳಿಕೊಳ್ಳುತ್ತೇನೆ. ಉದಯವಾಣಿ, ಸೂರ್ಯೋದಯ ದಿನ ಪತ್ರಿಕೆಯಲ್ಲಿ ಕ್ರೀಡಾ ವರದಿಗಾರನಾಗಿ ಕಾರ್ಯನಿರ್ವಹಿಸಿದ ನಂತರ 2007ರಿಂದ ಟಿವಿ 9 ಸಂಸ್ಥೆಯ ಮೂಲಕ ದೃಶ್ಯ ಮಾಧ್ಯಮದತ್ತ ಹೆಜ್ಜೆ ಇಟ್ಟೆ. ಟಿವಿ9 ಬೌಂಡರಿ ಲೈನ್ ಕ್ರೀಡಾ ಕಾರ್ಯಕ್ರಮದ ಹಿರಿಯ ವರದಿಗಾರನಾಗಿ, ಮುಖ್ಯಸ್ಥನಾಗಿ ಸೇವೆ ಸಲ್ಲಿಸಿದ ನಾನು ಬಳಿಕ ಸಮಯ ಟಿವಿಯ ಗೇಮ್ ಪ್ಲಾನ್ ಕ್ರೀಡಾ ಕಾರ್ಯಕ್ರಮದ ಮುಖ್ಯಸ್ಥನಾಗಿಯೂ ಕೆಲಸ ಮಾಡಿದ್ದೇನೆ. 6 ವರ್ಷ ದಿನ ಪತ್ರಿಕೆ ಹಾಗೂ ಆರು ವರ್ಷ ದೃಶ್ಯ ಮಾಧ್ಯಮದಲ್ಲಿ ಕ್ರೀಡಾ ವಿಭಾಗದಲ್ಲಿ ಕೆಲಸ ಮಾಡಿದ ಅನುಭವ ನನಗಿದೆ. ಕಳೆದ ಐದು ವರ್ಷಗಳಿಂದ ಇನ್‍ಪುಟ್, ಔಟ್‍ಪುಟ್, ನ್ಯೂಸ್ ಎಡಿಟರ್ ಆಗಿ ಬೇರೆ ಬೇರೆ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿದ್ದೇನೆ. ಆದ್ರೂ ನನಗೆ ಬದುಕು ಕಟ್ಟಿಸಿಕೊಟ್ಟ, ನನ್ನತನವನ್ನು ಉಳಿಸಿಕೊಟ್ಟ ಕ್ರೀಡಾ ವರದಿ, ಕ್ರೀಡಾ ಲೇಖನಗಳನ್ನು ಬರೆಯುವುದನ್ನು ಮಾತ್ರ ನಿಲ್ಲಿಸಲಿಲ್ಲ. ಫೇಸ್‍ಬುಕ್ ಹಾಗೂ ವಾರಪತ್ರಿಕೆಗಳಿಗೆ ಲೇಖನಗಳನ್ನು ಬರೆಯುತ್ತಿದ್ದ ನನಗೆ ಗೆಳೆಯರು ವೆಬ್‍ಸೈಟ್ ಮಾಡುವಂತೆ ಸಲಹೆ ನೀಡಿದ್ದರು. ಮೊದಲೇ ವೆಬ್‍ಸೈಟ್ ಮಾಡುವ ಯೋಚನೆಯಲ್ಲಿದ್ದ ನನಗೆ ನನ್ನ ಗೆಳೆಯರ ಸಲಹೆಯಂತೆ ರೈ ನ್ಯೂಝ್.ಕಾಮ್ ರೂಪುಗೊಂಡಿದೆ. ಇಲ್ಲಿ ನ್ಯೂಸ್ ಜೊತೆ ಕ್ರೀಡಾವರದಿಗಳು, ಲೇಖನಗಳನ್ನು ಪ್ರಕಟವಾಗಲಿದೆ. ಆಸಕ್ತರು ಕೂಡ ತಮ್ಮ ಲೇಖನಗಳನ್ನು ಈ ವೆಬೈಸೈಟ್‍ಗೆ ಕಳುಹಿಸಬಹುದು. ಇದು ಹವ್ಯಾಸ ಅಷ್ಟೇ. ಹಾಗಂತ ವೃತ್ತಿಪರತೆಯಂತೂ ಇದ್ದೇ ಇದೆ. ಎಲ್ಲರು ಸಹಕರಿಸಿ ಎಂದು ಈ ಮೂಲಕ ಕೇಳಿಕೊಳ್ಳುತ್ತೇನೆ.