06/11/2025
ಕೋರ್ಟುಗಳಿಗೆ ಕಂಡ ಕನ್ನೇರಿ ಸ್ವಾಮಿಯ ಸತ್ಯ ಸಂಘ ಪರಿವಾರಕ್ಕೆ ಕಾಣದೆ?
ಇತ್ತೀಚೆಗೆ ವಿಜಯಪುರ ಮತ್ತು ಧಾರವಾಡ ಜಿಲ್ಲೆಯ ಕುಂದಗೋಳದಲ್ಲಿ ಕನ್ನೇರಿ ಮಠದ ಕಾಡಸಿದ್ದೇಶ್ವರ ಸ್ವಾಮಿಯ ಪರವಾಗಿ ಹಿಂದುತ್ವ ಸಂಘಟನೆಗಳಿಂದ ಮೆರವಣಿಗೆ, ಪ್ರತಿಭಟನೆ ನಡೆದವು. ಅಲ್ಲಿ ಮಾತನಾಡಿದ ಹಿಂದುತ್ವ ನಾಯಕರು ‘ಸಂತ’ ‘ಮಹಾತ್ಮ’ ಎಂದೆಲ್ಲಾ ಕನ್ನೇರಿ ಸ್ವಾಮಿಯನ್ನು ವರ್ಣಿಸಿ ಅವರ ಮೇಲೆ ವಿಧಿಸಿರುವ ನಿರ್ಬಂಧವನ್ನು ಉಗ್ರವಾಗಿ ಖಂಡಿಸಿದರು.
“ಒಂದು ಸಣ್ಣ ಗ್ರಾಮ್ಯ ಭಾಷೆಯ ಪದ ಬಳಸಿರುವುದಕ್ಕೆ ಅವರನ್ನು ನಿರ್ಬಂಧಿಸಿರುವುದು ಸರಿಯಲ್ಲ, ಕಾಂಗ್ರೆಸ್ ಪಕ್ಷದಿಂದ ಇದು ಹಿಂದೂ ಧರ್ಮ ಒಡೆಯುವ ಸಂಚು,” ಎಂದು ವಿಜಯಪುರದಲ್ಲಿ ಒಬ್ಬರು ಕೇಸರಿ ನಾಯಕರು ಆಕ್ರೋಶ ವ್ಯಕ್ತಪಡಿಸಿದರು.
ಕನ್ನೇರಿ ಸ್ವಾಮಿ ಸಂತರೇ? ಮಹಾತ್ಮರೇ? ಕರ್ನಾಟಕದ ಒಂದು ದೊಡ್ಡ ಸಮುದಾಯದ ಪೂಜ್ಯರ ಮೇಲೆ ಇವರು ಬಳಸಿರುವುದು ಸಣ್ಣ ಗ್ರಾಮ್ಯ ಭಾಷೆಯ ಪದವೆ?
ಈ ಪ್ರಶ್ನೆಗಳಿಗೆ ಈಗ ಕೋರ್ಟಿನ ಕಟಕಟೆಯಲ್ಲಿ ಉತ್ತರ ದೊರಕಿದೆ. ಕೇವಲ ಎರಡು ವಾರಗಳ ಅವಧಿಯಲ್ಲಿ ನಗರ ಸಿವಿಲ್ ಕೋರ್ಟ್, ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟುಗಳ ಕದ ತಟ್ಟಿದ ವಿಶಿಷ್ಟ ಪ್ರಕರಣವಿದು. ಅಲ್ಲೆಲ್ಲಾ ವಿಚಾರಣೆ ನಡೆಸಿದ ಯಾವ ನ್ಯಾಯಮೂರ್ತಿಯವರಿಗೂ ಕನ್ನೇರಿ ಸ್ವಾಮಿ ‘ಸಂತ’ ಅಥವಾ ‘ಮಹಾತ್ಮ’ರಂತೆ ಕಾಣಿಸಿಲ್ಲ.
ಈ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟಿಗೆ ಮೊರೆ ಹೋದ ಕನ್ನೇರಿ ಸ್ವಾಮಿಗೆ ಕಾನೂನು ಸಮರದಲ್ಲಿ ಎರಡನೇ ಹಿನ್ನಡೆಯಾಯಿತು.
ಅವರ ಮೇಲ್ಮನವಿ ಅರ್ಜಿಯನ್ನು ಅಕ್ಟೊಬರ್ 29 ವಜಾಗೊಳಿಸಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಪಂಕಜ್ ಮಿತ್ತಲ್ ಹಾಗೂ ಪ್ರಸನ್ನ ವರಾಲೆ ಹೈಕೋರ್ಟ್ ಹೇಳಿರುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.
“ಒಬ್ಬ ಸ್ವಾಮೀಜಿ ಈ ರೀತಿ ಕೀಳುಮಟ್ಟದ ಹೇಳಿಕೆ ನೀಡಿದ್ದು ಸರಿಯಲ್ಲ. ನೀವು ಒಳ್ಳೆಯ ಪ್ರಜೆಯಲ್ಲ. ನೀವು ಸ್ವಾಮೀಜಿಯಾಗಿ ಗಂಭೀರವಾಗಿರಬೇಕು. ಅವಹೇಳನಕಾರಿ ಭಾಷೆ ಬಳಸಿದ್ದೀರಿ. ನೀವು ಮಾತನಾಡುವುದು ನಿಲ್ಲಿಸಿ ಮೌನವಾಗಿ ಬೇರೆ ಮಠದಲ್ಲಿ ಧ್ಯಾನ ಮಾಡಿ,” ಎಂದು ನ್ಯಾಯಮೂರ್ತಿಗಳು ಎಚ್ಚರಿಸಿದರು ಎಂದು ಮಾಧ್ಯಮಗಳು ವರದಿ ಮಾಡಿವೆ.
ಒಟ್ಟಾರೆ ಕನ್ನೇರಿ ಸ್ವಾಮಿ ಕೋರ್ಟುಗಳಲ್ಲಿ ಛೀಮಾರಿ ಹಾಕಿಸಿಕೊಂಡು ಆರೋಪಿ ಸ್ಥಾನದಲ್ಲಿ ನಿಂತಿದ್ದಾರೆ. ಅವರು ಹಾಕಿರುವ ಬಟ್ಟೆಗೂ, ಅವರ ವರ್ತನೆಗೂ ಸಂಬಂಧವಿಲ್ಲವೆನ್ನುವುದು ಅವರ ವಿರುದ್ಧ ಸಾಕ್ಷಿಯನ್ನು ಪರಿಶೀಲಿಸಿರುವ ನ್ಯಾಯಾಧೀಶರ ಕಾನೂನುಬದ್ಧ ನಿಲುವು.
ಆದರೆ ಕನ್ನೇರಿ ಸ್ವಾಮಿಗೆ ಏನೋ ದೊಡ್ಡ ಅನ್ಯಾಯವಾಗಿದೆ ಎಂದು ಸಂಘ ಪರಿವಾರದವರು ಹೋರಾಟ ಶುರು ಮಾಡಿದ್ದಾರೆ. ಬೆಳಗಾವಿಯಲ್ಲಿ ಚಕ್ರವರ್ತಿ ಸೂಲಿಬೆಲೆ, ಯತ್ನಾಳ, ಪ್ರತಾಪ ಸಿಂಹ, ಈಶ್ವರಪ್ಪ, ಸಿ.ಟಿ. ರವಿಯಂತವರು ಕರೆ ನೀಡಿದ ಮೇಲೆ ಅಲ್ಲಲ್ಲಿ ಹಿಂದುತ್ವದ ಸಂಘಟನೆಗಳು ಕೂಗಾಡಿಕೊಂಡು ರಸ್ತೆಗಿಳಿದಿವೆ.
ಇವರು ಕನ್ನೇರಿ ಸ್ವಾಮಿಯ ವರ್ತನೆ ಕಾಣದಷ್ಟು ಕುರುಡರೇ ಅಥವಾ ಕೋರ್ಟುಗಳ ಧ್ವನಿ ಕೇಳದಷ್ಟು ಕಿವುಡರೇ. ಇವರನ್ನು ರಸ್ತೆಗಿಳಿಸಿರುವವರ ಉದ್ದೇಶವೇನು? ಲಿಂಗಾಯತರನ್ನು, ಲಿಂಗಾಯತ ಮಠಾಧೀಶರನ್ನು ಟಾರ್ಗೆಟ್ ಮಾಡಿಕೊಂಡು ಏನನ್ನು ಸಾಧಿಸಲು ಹೊರಟ್ಟಿದ್ದಾರೆ? ಇದು ಈಗ ಲಿಂಗಾಯತರು ಉತ್ತರ ಕಂಡುಕೊಳ್ಳಬೇಕಾಗಿರುವ ಪ್ರಶ್ನೆಗಳು.