21/04/2025
ವಡ್ಡರ ಯಲ್ಲಣ್ಣ, ಕಿತ್ತೂರು ರಾಣಿ ಚೆನ್ನಮ್ಮನ ಶೂರ ಬಂಟರಲ್ಲೊಬ್ಬ. ಈತನಿಗೆ ಶಬ್ದವೇದಿ ವಿದ್ಯೆ ಕರಗತವಿತ್ತು.
ವಡ್ಡರ ಯಲ್ಲಣ್ಣ, ಕಿತ್ತೂರು ರಾಣಿ ಚೆನ್ನಮ್ಮನ ಶೂರ ಬಂಟರಲ್ಲೊಬ್ಬ. ಈತನಿಗೆ ಶಬ್ದವೇದಿ ವಿದ್ಯೆ ಕರಗತವಿತ್ತು.
* "ವಡ್ಡರ ಯಲ್ಲಣ್ಣ" ಬ್ರಿಟಿಷರ ವಿರುದ್ಧ ಕಿತ್ತೂರು ರಾಣಿ ಚೆನ್ನಮ್ಮ ನಡೆಸಿದ ಕೆಚ್ಚಿನ ಹೋರಾಟದ ಗೌರವ ಹೆಚ್ಚಿಸಿದ ಐತಿಹಾಸಿಕ
ಶೂರರಲ್ಲೊಬ್ಬ.
ಸಂಗೊಳ್ಳಿ ರಾಯಣ್ಣ, ಅಮಟೂರು ಬಾಳಪ್ಪ ಒಳಗೊಂಡ ಶೂರರ ತಂಡದ ಭಾಗವಾಗಿದ್ದ. ಈತ ಬಹುಕಾಲದವರೆಗೆ ಬ್ರಿಟಿಷರಿಗೆ ತಲೆನೋವಾಗಿ, ಜನರಲ್ಲಿ ಸ್ವಾತಂತ್ರ್ಯ ಪ್ರೇಮ ನಿಗಿನಿಗಿಯಾಗಿ ಬೆಳಗುವಂತೆ ಮಾಡಿದ್ದ.
ರಾಣಿ ಚೆನ್ನಮ್ಮನಿಗಿಂತಲೂ ಮೊದಲೇ ಇದೇ ಪ್ರದೇಶದಲ್ಲಿ ಶೌರ್ಯ ಮೆರೆದು ಹೋಗಿದ್ದ ರಾಣಿ ಮಲ್ಲಮ್ಮನ ಬೆಳವಡಿಯವನಾದ ಈತನ ವಿಶೇಷವೆಂದರೆ ತನ್ನ ಹೆಗಲ ಮೇಲೆ ಹಾಕಿಕೊಳ್ಳುತ್ತಿದ್ದ "ವಲ್ಲಿ"ಯನ್ನು ನೆಲಕ್ಕೆ ಹಾಸಿ ಅದಕ್ಕೆ ಬಲ ಕಿವಿ ಕೊಟ್ಟು ಶಬ್ದ ಕೇಳಿಸಿಕೊಂಡನೆಂದರೆ ದೂರದಲ್ಲಿ ಸೇನಾ ಚಲನವಲನ, ಚಟುವಟಿಕೆಗಳು ನಡೆದಿದ್ದರೆ ಅದನ್ನು ನಿಖರವಾಗಿ ಹೇಳುತ್ತಿದ್ದ. ಆನೆ, ಒಂಟೆ, ಕುದುರೆಗಳು ಮತ್ತು ಸೇನಾ ಪ್ರಮಾಣ ಎಷ್ಟಿದೆ ಎಂದು ತಿಳಿಸುತ್ತಿದ್ದ. ಇದರ ಮೇಲೆ ಈ ಕಡೆಯಿಂದ ಮುಂದಿನ ರಣನೀತಿ ಸಿದ್ದವಾಗುತ್ತಿತ್ತು. ಹೀಗಾಗಿ ಆತನಿಗೆ "ಶಬ್ದವೇದಿ" ಉಪಾದಿ ಇತ್ತು. ಈ ವಿದ್ಯೆ, ಪ್ರತಿಭೆಯನ್ನು ಯಾವ ಗುರುವೂ ಆತನಿಗೆ ಹೇಳಿ ಕೊಟ್ಟಿರಲಿಲ್ಲ. ಅದು ಆತನಿಗೆ ದೈವದತ್ತವಾಗಿ ಬಂದಿತ್ತು.
ಈತ ಕವಣೆ ಬೀಸುವುದರಲ್ಲೂ ನಿಸ್ಸಿಮನಾಗಿದ್ದ. ತನ್ನ ವಲ್ಲಿಯಲ್ಲಿ ಕಲ್ಲಿನ ಚೂರುಗಳನ್ನು ಹಾಕಿ ಅದರ ನಾಲ್ಕೂ ಮೂಲೆಗಳನ್ನು ಹಿಡಿದು ಗರಗರನೆ ಬೀಸಿ ಗುರಿಯತ್ತ ವಲ್ಲಿಯ ಎರಡು ಮೂಲೆಗಳನ್ನು ಬಿಟ್ಟನೆಂದರೆ ತೂರಿ ಹೋಗುತ್ತಿದ್ದ ಕಲ್ಲಿನ ಚೂರುಗಳು ಶತ್ರುಗಳಿಗೆ ಬಂದೂಕಿನ ಗುಂಡಿನಂತೆ ಚುಚ್ಚಿ ಗಂಭೀರ ಸ್ಥಿತಿ ತಂದೊಡ್ಡುತ್ತಿದ್ದವು.
"ಶಬ್ದವೇದಿ" ಶಬ್ದ ಇಲ್ಲಿ ಚರ್ಚಿತ ಸಂಗತಿ. "ಶಬ್ದವೇದಿ" ಎಂದರೆ ಅರಿಯುವ, ತಿಳಿಯುವ, ಬಲ್ಲವ, ವಿದ್ವಾಂಸ ಎಂದರ್ಥವಾಗುತ್ತದೆ.
ಇದೇ ಅಕ್ಷರದ ಇನ್ನೊಂದು ಪದ "ಶಬ್ದವೇಧಿ" ಎಂದರೆ ಗುರಿ ತಪ್ಪದೆ ಹೊಡೆಯುವ, ಗಾಯಗೊಳಿಸುವ, ಚುಚ್ಚುವ ಎಂದರ್ಥವಾಗುತ್ತದೆ.
ಇವೆರಡೂ ಹೆಚ್ಚುಕಡಿಮೆ ಹತ್ತಿರದ ಅರ್ಥ ನೀಡುವುದರಿಂದ ಇಂಥ ವಿಷಯ ಬಂದಾಗ "ಶಬ್ದವೇದಿ" ಪದವೇ ಸಾಮಾನ್ಯವಾಗಿ ಬಳಕೆಯಲ್ಲಿದೆ.
ವಡ್ಡರ ಯಲ್ಲಣ್ಣ ಭೂಮಿಗೆ ಕಿವಿಕೊಟ್ಟು ಶಬ್ದ ಆಲಿಸಿ ಅದರ ವಿಶ್ಲೇಷಣೆ ಮಾಡಿ ಸೇನಾ ಚಟುವಟಿಕೆಯ ಮಾಹಿತಿಯನ್ನು ನೀಡುತ್ತಿದ್ದ. ಆದರೆ ಶಬ್ದ ಬಂದ ದಿಕ್ಕೂ ಆಧರಿಸಿ ಶಸ್ತ್ರಾಸ್ತ್ರ ಪ್ರಯೋಗಿಸಿ ಬೇಟೆ ಅಥವಾ ಶತ್ರುಗಳ ನಾಶ ಮಾಡುತ್ತಿರಲಿಲ್ಲ. ಹೀಗಾಗಿ ಸದ್ಯ ನಮಗೆ ಲಭ್ಯವಿರುವ ಮಾಹಿತಿ, ಆಕರಗಳಿಗನುಗುಣವಾಗಿ
ಈತನಿಗೆ "ಶಬ್ದವೇದಿ" ಉಪಮೇಯವೇ ಸರಿ ಎನಿಸುತ್ತಿದೆ. ಇನ್ನಷ್ಟು ಆಳಕ್ಕೆ ಇಳಿದು ಇತಿಹಾಸದ ಸಾಕ್ಷ್ಯ, ದಾಖಲೆಗಳನ್ನು ಹೊರತೆಗೆದರೆ ಈ ಅಭಿಪ್ರಾಯದಲ್ಲಿ ಬದಲಾವಣೆ ಆದರೂ ಆಗಬಹುದು!
ನನಗೆ ತಿಳಿದಿರುವಂತೆ "ಶಬ್ದವೇಧಿ" ವಿದ್ಯೆ ಪೌರಾಣೇತಿಹಾಸ ಕಾಲದ ದಶರಥ ಮಹಾರಾಜ, ಅರ್ಜುನ ಮತ್ತು ಏಕಲವ್ಯನಿಗೆ ಇದು ಗೊತ್ತಿತ್ತು. ಇವರು ಧ್ವನಿ ಬಂದ ದಿಕ್ಕೂ ಆಧರಿಸಿ ತಮ್ಮ ಬಿಲ್ಲಿನಿಂದ ನಿರ್ದಿಷ್ಟ ಮತ್ತು ನಿಖರ ಗುರಿ ಸಾಧಿಸಿ ಬಾಣ ಪ್ರಯೋಗಿಸುವ ಮೂಲಕ ಬೇಟೆ ಅಥವಾ ಶತ್ರುವನ್ನು ಹೊಡೆ ದುರುಳಿಸುತ್ತಿದ್ದರು. ಇವರಿಗೆ ಬೇಟೆ ಅಥವಾ ಶತ್ರು ಕಣ್ಣೆದುರಿಗೆ ಇರಬೇಕೆಂದಿದ್ದಿಲ್ಲ.
"ಶಬ್ದ" ಇದರ ಅರ್ಥವನ್ನು ಧ್ವನಿ ಇಲ್ಲವೆ ನುಡಿ ಎನ್ನಬಹುದು. "ವೇದಿ" ಇದರ ಅರ್ಥ ವಿಷಯವಾಗಿ ತಿಳಿದಿರುವವನು ಇಲ್ಲವೆ ಯಾವುದೇ ವಿಷಯದ ಪಂಡಿತ ಎನ್ನಬಹುದು.
ಇದರ ಇನ್ನಷ್ಟು ಮಾಹಿತಿ, ವಿಸ್ತಾರತೆ ಬೇಕಿದ್ದರೆ ಭಾಷಾತಜ್ಞ, ವಿಷಯ ಪಂಡಿತ ಇಲ್ಲವೆ ಇತಿಹಾಸಜ್ಞರನ್ನು ಸಂಪರ್ಕ ಮಾಡಿರಿ.
ಇದರೊಂದಿಗೆ ಕೆಲವರು ತಪ್ಪಾಗಿ "ಶಬ್ದಭೇದಿ" ಪದ ಉಚ್ಛರಿಸಿದ್ದನ್ನು ಕೇಳಿರುವ ನೆನಪು. ಆದರೆ ಬರಹ ರೂಪದಲ್ಲಿ ಕಂಡಿಲ್ಲ. ಬಹುತೇಕ ಈ ಶಬ್ದ ಇರಲಿಕ್ಕಿಲ್ಲ!? ಭೇದಿಸುವುದು ಎಂದರೆ ರಹಸ್ಯ ಬಯಲು ಮಾಡುವುದು.
ಇದೇನೇ ಇದ್ದರೂ ಇವೆರಡೂ ವಿದ್ಯೆ ಬಲ್ಲವರಿಗೆ ಅತಿಸೂಕ್ಷ್ಮ ಶ್ರವಣೇಂದ್ರಿಯ ಇರುತ್ತದೆ. ಇವರು ಶಬ್ದ ಸೂಚನೆ ಗ್ರಹಿಸಿ ಅಸಾಧಾರಣ ಸಾಮರ್ಥ್ಯ ತೋರುತ್ತಾರೆ.
ಹೈಲೈಟ್: ವಡ್ಡರ ಯಲ್ಲಣ್ಣ, ಕಿತ್ತೂರು ರಾಣಿ ಚೆನ್ನಮ್ಮನ ಶೂರ ಬಂಟರಲ್ಲೊಬ್ಬ. ಈತನಿಗೆ "ಶಬ್ದವೇದಿ" ವಿದ್ಯೆ ಕರಗತವಿತ್ತು.
ಈ ವಿದ್ಯೆ ಪೌರಾಣೇತಿಹಾಸ ಕಾಲದ ದಶರಥ ಮಹಾರಾಜ, ಅರ್ಜುನ ಮತ್ತು ಏಕಲವ್ಯನಿಗೆ ಗೊತ್ತಿತ್ತು.