26/01/2023
ಸಂವಿಧಾನ ಕಲ್ಪಿಸಿಕೊಟ್ಟ ಬಹುದೊಡ್ಡ ಕೊಡುಗೆ ಸಮಾನತೆ: ಉಸ್ತುವಾರಿ ಸಚಿವ ಕಾರಜೋಳ...
ಬೆಳಗಾವಿ : “ಗಣತಂತ್ರ ಭಾರತವು ಭಾರತದ ಪ್ರತಿ ಪ್ರಜೆಗೂ ಪರಮಾಧಿಕಾರವನ್ನು ಘೋಷಿಸಿದೆ. ವ್ಯಕ್ತಿ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯಗಳನ್ನು ನೀಡುವುದರ ಮೂಲಕ ಮೂಲಭೂತ ಹಕ್ಕುಗಳನ್ನು ದಯಪಾಲಿಸಿದೆ. ಸಾಮಾಜಿಕ ನ್ಯಾಯ, ಸಮಾನತೆ, ವ್ಯಕ್ತಿ ಹಾಗೂ ಅಭಿವ್ಯಕ್ತಿ ಸ್ವಾತಂತ್ರಂತ್ರ್ಯಗಳು ನಮ್ಮ ಸಂವಿಧಾನ ನಮಗೆ ಕಲ್ಪಿಸಿಕೊಟ್ಟ ಬಹುದೊಡ್ಡ ಕೊಡುಗೆಗಳಾಗಿವೆ” ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳ ತಿಳಿಸಿದರು.74ನೇ ಗಣರಾಜ್ಯೋತ್ಸವ ಅಂಗವಾಗಿ ಗುರುವಾರ (ಜ.26) ಜಿಲ್ಲಾ ಕ್ರೀಡಾಂಗಣದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಅವರು ಸಂದೇಶ ನೀಡಿದರು.
ಡಾ. ಬಿ.ಆರ್.ಅಂಬೇಡ್ಕರ್ ಅವರ ದೂರದೃಷ್ಟಿ, ಚಿಂತನೆಯ ಫಲವಾಗಿ ನಾವಿಂದು ಜಗತ್ತಿಗೆ ಮಾದರಿಯಾದ ಸಂವಿಧಾನದ ವಾರಸುದಾರರಾಗಿದ್ದೇವೆ. ಪರಕೀಯರ ಆಡಳಿತದಲ್ಲಿದ್ದ ಭಾರತವು ಕೇವಲ 75 ವರ್ಷಗಳಲ್ಲಿ ಅತ್ಯಂತ ಬಲಿಷ್ಠ ಪ್ರಜಾತಂತ್ರ ರಾಷ್ಟವಾಗಿ ಹೊರಹೊಮ್ಮಲು ಈ ಸಂವಿಧಾನವೇ ಮಾರ್ಗದರ್ಶಿಯಾಗಿದೆ.
ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳ ಜತೆ ಗಡಿ ಹಂಚಿಕೊಂಡಿರುವ ನಮ್ಮ ಬೆಳಗಾವಿ ಜಿಲ್ಲೆ ಕರ್ನಾಟಕದ ಜಿಲ್ಲೆಗಳಲ್ಲಿ ಹಿರಿದಾದ ಸ್ಥಾನಪಡೆದಿದೆ. ಇಲ್ಲಿನ ಜನರು ಧರ್ಮ ಸಹಿಷ್ಣುಗಳು. ಭಾಷಾ ವೈವಿಧ್ಯತೆಯ ನಡುವೆಯೂ ಏಕತೆಯನ್ನು ಮೆರೆದವರು ಅದಕ್ಕಾಗಿ ಅವರನ್ನು ಅಭಿನಂದಿಸುತ್ತಿದ್ದೇನೆ ಎಂದು ಸಚಿವ ಗೋವಿಂದ ಕಾರಜೋಳ ಅವರು ಹೇಳಿದರು.
ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಅನಿಲ್ ಬೆನಕೆ, ಪ್ರಾದೇಶಿಕ ಆಯುಕ್ತರಾದ ಎಂ.ಜಿ.ಹಿರೇಮಠ, ಉತ್ತರ ವಲಯ ಐಜಿಪಿ ಎನ್.ಸತೀಶ್ ಕುಮಾರ್, ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಸಂಜೀವ ಪಾಟೀಲ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕಾಧಿಕಾರಿ ದರ್ಶನ್. ಹೆಚ್.ವಿ, ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು, ಸಾರ್ವಜನಿಕರು ಹಾಗೂ ವಿವಿಧ ಶಾಲಾ-ಕಾಲೇಜುಗಳ ಸಾವಿರಾರು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.