19/09/2025
ಬೆಳಗಾವಿ
ಪ್ರತಿ ವರ್ಷದಂತೆ ಈ ವರ್ಷವೂ 98ನೇ ನಾಡ ಹಬ್ಬ ಉತ್ಸವವನ್ನು ಸೆ.22ರಿಂದ ಸೆ.26ರವರೆಗೆ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಆಯೋಜಿಸಲಾಗಿದೆ ಎಂದು ನಾಡಹಬ್ಬದ ಪ್ರಧಾನ ಕಾರ್ಯದರ್ಶಿ ಡಾ. ಸಿ.ಕೆ.ಜೋರಾಪೂರ ಹೇಳಿದರು.
ಶುಕ್ರವಾರ ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಬೆಳಗಾವಿಯಲ್ಲಿ ನಡೆಸುವ ನಾಡಹಬ್ಬಕ್ಕೆ ತನ್ನದೆಯಾದ ಇತಿಹಾಸ ಇದೆ. ಪ್ರಚಲಿತ ವಿಷಯವನ್ನು ಮುಂದಿಟ್ಟುಕೊಂಡು ಚಿಂತನೆ ಮಾಡುವ ಕೆಲಸ ಮಾಡುತ್ತಿದ್ದೇವೆ ಎಂದರು.
ಸೆ.22 ರಂದು ಸಂಜೆ 6ಕ್ಕೆ ನಾಡದೇವಿ ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಪೂಜೆ ನೆರವೆರಿಸುವ ಮೂಲಕ ರಾಣಿಚನ್ನಮ್ಮ ವಿವಿಯ ಕುಲಪತಿ ಡಾ. ಸಿ.ಎಂ.ತ್ಯಾಗರಾಜ ನೆರವೆರಿಸಲಿದ್ದಾರೆ. ಅಧ್ಯಕ್ಷತೆಯನ್ನು ಸಂಸದ ಜಗದೀಶ್ ಶೆಟ್ಟರ್, ಸಾನಿಧ್ಯವನ್ನು ಗದುಗಿನ ತೋಂಟದಾರ್ಯ ಡಾ. ಸಿದ್ದರಾಮ ಸ್ವಾಮೀಜಿ ವಹಿಸಲಿದ್ದಾರೆ. ಕರ್ನಾಟಕಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಕೊಡುಗೆ ವಿಷಯದ ಕುರಿತು ಗೋಕಾಕ ಸಾಹಿತಿ ವಿದ್ಯಾ ರೆಡ್ಡಿ ಉಪನ್ಯಾಸ ನೀಡಲಿದ್ದಾರೆ ಎಂದರು.
ಸೆ.23 ರಂದು ಸಂಜೆ 6ಕ್ಕೆ ಜಾನಪದ ಕಲಾವಿದರಿಂದ ಗಾಯನ, ಬೆಳ್ಳಿ ಚುಕ್ಕಿ ಅಕಾಡೆಮಿಯಿಂದ ಜಾನಪದ ನೃತ್ಯ ನಡೆಯಲಿದೆ. ಸೆ.24 ರಂದು ಸಂಜೆ 6ಕ್ಕೆ ಇಂದಿನ ಶಿಕ್ಷಣ ನೀತಿ ರಾಷ್ಟ್ರ ನಿರ್ಮಾಣಕ್ಕೆ ಪೂರಕವೇ ಎಂಬ ವಿಷಯದ ಕುರಿತು ಉಪನ್ಯಾಸ ನೀಡಲಿದ್ದಾರೆ ನಿವೃತ್ತ ಪ್ರಾಚಾರ್ಯ ಡಾ. ಆರ್.ಜಿ.ಹೆಗಡೆ, ಸಾನಿಧ್ಯವನ್ನು ಕಿತ್ತೂರು ಕಲ್ಮಠದ ಶ್ರೀ ಮಡಿವಾಳೇಶ್ವರ ಸ್ವಾಮೀಜಿ ವಹಿಸಲಿದ್ದಾರೆ ಎಂದರು.
ಸೆ.25 ರಂದು ಕುಗ್ಗುತ್ತಿರುವ ಸಾಹಿತ್ಯಿಕ ಸಾಂಸ್ಕೃತಿಕ ಆಸಕ್ತಿ ಕುರಿತು ಉಪನ್ಯಾಸವನ್ನು ನರಗುಂದದ ನಿವೃತ್ತ ಪ್ರಾಚಾರ್ಯ ಎಂ.ಎಸ್.ಯಾವಗಲ್ಲ ನೀಡಲಿದ್ದಾರೆ. ಸಾನಿಧ್ಯವನ್ನು ಅಥಣಿ ಮೋಟಗಿಮಠದ ಶ್ರೀ ಪ್ರಭು ಚನ್ನಬಸವ ಸ್ವಾಮೀಜಿ ವಹಿಸಲಿದ್ದಾರೆ ಎಂದರು.
ಸೆ.26 ರಂದು ಕವಿಗೋಷ್ಠಿ, ಸಮಾರೋಪ ಸಮಾರಂಭ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಸನ್ಮಾನ ನಡೆಯುತ್ತದೆ ಎಂದರು.
ಡಾ.ಎಚ್.ಬಿ.ರಾಜಶೇಖರ, ವಿ.ಕೆ.ಪಾಟೀಲ್, ಆರ್. ಪಿ.ಪಾಟೀಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.