05/12/2025
ಸಾಂಕ್ರಾಮಿಕವಲ್ಲದ ರೋಗಗಳ ಕುರಿತಾದ ಮಾಹಿತಿ ಒದಗಿಸಲು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಒತ್ತಾಯ
ದಾವಣಗೆರೆ/ ನವದೆಹಲಿ; ಸಾಂಕ್ರಾಮಿಕವಲ್ಲದ ರೋಗಗಳ ಕುರಿತಾದ ಮಾಹಿತಿ ನೀಡಬೇಕೆಂದು ಶುಕ್ರವಾರ ನಡೆದ ಸಂಸತ್ತಿನ ಪ್ರಶ್ನೋತ್ತರ ವೇಳೆಯಲ್ಲಿ ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಜೆ.ಪಿ ನಡ್ಡಾ ಅವರಿಗೆ ದಾವಣಗೆರೆ ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ವಿವರ ಕೇಳಿದರು.
ಈ ವೇಳೆ ಸದನದಲ್ಲಿ ಮಾತನಾಡಿದ ಸಂಸದರು
ಭಾರತದಲ್ಲಿ ಎನ್‌ಸಿಡಿ ಹೊರೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಆರಂಭಿಕ ರೋಗ ಪತ್ತೆ ಅತ್ಯಂತ ಪ್ರಮುಖವಾಗಿದೆ. ಈ ಸಂದರ್ಭದಲ್ಲಿ ಪಿಎಂ- ಎಬಿಹೆಚ್ ಐಎಂ ಯೋಜನೆಯಡಿಯಲ್ಲಿ ಸೇವೆ ಕಡಿಮೆ ಇರುವಂತಹ ಜಿಲ್ಲೆಗಳಿಗೆ ಮಾನ್ಯತೆ ನೀಡಿ ಕಾಲಬದ್ದ ಅನುಮೋದನೆ ನೀಡಬೇಕು ಎಂದು ಗಮನಸೆಳೆದರು.
ಅದರಲ್ಲೂ ವಿಶೇಷವಾಗಿ ಎಂಆರ್ ಐ ಯಂತ್ರಗಳನ್ನು ಒಳಗೊಂಡ ಸಂಪೂರ್ಣ ಕಾರ್ಯನಿರ್ವಹಣೆಯ ರೋಗ ನಿರ್ಣಯ ಸೌಲಭ್ಯಗಳು ಹಾಗೂ ತಾಂತ್ರಿಕ ಸಿಬ್ಬಂದಿಯ ಕಡ್ಡಾಯ ನಿಯೋಜನೆ ಮತ್ತು ನಿರ್ವಹಣಾ ಒಪ್ಪಂದಗಳೊಂದಿಗೆ ಕೇಂದ್ರ ಸರ್ಕಾರ ಒದಗಿಸುತ್ತದೆಯೇ ಎಂಬುದನ್ನು ಖಚಿತಪಡಿಸಬೇಕೆಂದು ಒತ್ತಾಯಿಸಿದರು.
ಕೇಂದ್ರ ಸರ್ಕಾರ ಮುಂದಿನ ದಿನಗಳಲ್ಲಿ
ಸಾಂಕ್ರಾಮಿಕವಲ್ಲದ ರೋಗಗಳ ತಡೆಗಟ್ಟುವಿಕೆ ಮತ್ತು ರೋಗನಿರ್ಣಯ ಸೇವೆಗಳನ್ನು ನೀಡುವ ಎನ್ ಹೆಚ್ ಎಂ ಗುತ್ತಿಗೆ ಸಿಬ್ಬಂದಿ ಎದುರಿಸುತ್ತಿರುವ ಅನಿಯಮಿತ ವೇತನ, ಸಾಮಾಜಿಕ ಭದ್ರತೆಯ ಕೊರತೆ ಮತ್ತು ಅಸಮಾನತೆಯಂತಹ ದೀರ್ಘಕಾಲದ ಸಮಸ್ಯೆಗಳನ್ನು ಪರಿಹರಿಸಲು ಯಾವ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂಬ ಬಗ್ಗೆ ಮಾಹಿತಿ ಒದಗಿಸಬೇಕೆಂದರು.
150 ಕೋಟಿ ಜನಸಂಖ್ಯೆಯನ್ನು ಹೊಂದಿರುವ ದೇಶದಲ್ಲಿ, ಉದ್ದೇಶಿತ ಜನಸಂಖ್ಯೆ ಮತ್ತು ತಪಾಸಣೆಗೊಳ್ಳುವ ಶೇಕಡಾವಾರು ಇವುಗಳನ್ನು ಮಾನದಂಡವಾಗಿ ಬಳಸುವುದು ಸರಿಯಾದ ಕ್ರಮವಾಗಿದೆ ಎಂದು ಸಂಸದರು ಸದನದ ಗಮನಸೆಳೆದರು.