11/08/2024
ಇಂದು ವಯನಾಡು ನಾಳೆ ಕೋಟೆನಾಡು!
ಕಾಲಕಾಲೇಶ್ವರ-ಗಜೇಂದ್ರಗಡಕ್ಕೆ ಗುಡ್ಡ ಕುಸಿತ ಅಪಾಯ ಕಟ್ಟಿಟ್ಟಬುತ್ತಿ
ಮರಣ ಮೃದಂಗದ ದುರಂತ ಸಂಭವಿಸುವ ಮುನ್ನ ಎಚ್ಚರಿಕೆ ವಹಿಸಬೇಕು
----
ಮಾನವನ ಅತಿಯಾದ ಹಸ್ತಕ್ಷೇಪದಿಂದ ಹಾಗೂ ದುರಾಸೆಯಿಂದ ಭೂಮಿಯ ಒಡಿಲನ್ನು ಅಗೆದ ಕಾರಣದಿಂದಾಗಿ ಪ್ರಕೃತಿ ತಾಯಿಯು ಮುನಿಸಿಕೊಂಡು ತನ್ನ ಕೋಪವನ್ನು ಪಕ್ಕದ ಕೇರಳ ರಾಜ್ಯದ ವಯನಾಡಿನಲ್ಲಿ ಈಚೆಗೆ ಹೊರಹಾಕಿದ್ದಾಳೆ. ಅಲ್ಲಿನ ಭೀಕರ ಗುಡ್ಡದ ಭೂಕುಸಿತಕ್ಕೆ ಸಾವುಗಳ ಸಂಖ್ಯೆ ನಿಖರವಾಗಿ ಸಿಗಲಿಲ್ಲ. ನಾಲ್ಕು ಗ್ರಾಮಗಳು ಕೊಚ್ಚಿಹೋಗಿವೆ. ಕೆಸರು ಮೆತ್ತಿಕೊಂಡ ಮೃತದೇಹಗಳು, ಅಮ್ಮಂದಿರ ತೆಕ್ಕೆಯಲ್ಲೇ ಚಿರನಿದ್ರೆಗೆ ಜಾರಿದ ಕಂದಮ್ಮಗಳು ದುರಂತದ ತೀವ್ರತೆ ತೆರೆದಿಟ್ಟ ದೃಶ್ಯಗಳಾಗಿವೆ.
ಮಣ್ಣಿನಲ್ಲಿಯೇ ಕುಟುಂಬ ಸಮೇತರಾಗಿ ಮಣ್ಣಾಗಿ ಹೋದ ದೇಹಳಿಗೆ ಲೆಕ್ಕವಿಲ್ಲವಾಗಿದೆ. ಅಲ್ಲಿ ಎತ್ತ ಹೆಜ್ಜೆ ಹಾಕಿದರೂ ನೋವಿನ ನೋಟಗಳೇ ಕಣ್ಣಿಗೆ ಬಿಳುತ್ತವೆ. ಬೆಟ್ಟ-ಗುಡ್ಡದ ಜೀವಗಳ ಆಕ್ರಂದನದ ಸದ್ದಿಗೆ ಈಡೀ ದೇಶವೇ ಕಣ್ಣೀರು ಹಾಕಿದೆ. ಇದು ಕೇರಳ ರಾಜ್ಯ ಕಂಡಂತಹ ಅತ್ಯಂತ ಭೀಕರ ಪ್ರಕೃತಿ ವಿಕೋಪಗಳಲ್ಲಿ ಒಂದಾಗಿದೆ.
ಇದಕ್ಕೆ ಪ್ರಕೃತಿ ವಿಕೋಪ ಒಂದೇಡೆಯಾದರೆ ಮಾನವ ಹಸ್ತಕ್ಷೇಪ ಪ್ರಮುಖ ಕಾರಣವಾಗಿದೆ. ನೀರಿನ ಹರಿವಿನ ಹಾದಿಯನ್ನು ಪರಿಗಣಿಸದೆ ನಿರ್ಮಾಣ ಕಾಮಗಾರಿ, ಸ್ಫೋಟಕ ಬಳಸಿ ಬಂಡೆ ಒಡೆಯುವುದು, ರೇಸಾರ್ಟ್ ಮಾಡುವುದು, ಮಣ್ಣು ಗಣಿಗಾರಿಕೆ, ಕಲ್ಲು ಗಣಿಗಾರಿಕೆ, ಕಾಡಿಗೆ ಬೆಂಕಿ ಹಾಕುವುದು ಸೇರಿದಂತೆ ಇತರೆ ಅಕ್ರಮಗಳು ಕುಸಿತಕ್ಕೆ ನೇರ ಅಥವಾ ಪರೋಕ್ಷ ಕಾರಣ ಆಗಿವೆ.
ಇದೇ ಪರಿಸ್ಥಿತಿ ಗದಗ ಜಿಲ್ಲೆಯ ಗಜೇಂದ್ರಗಡ, ಕಾಲಕಾಲೇಶ್ವರ ಗುಡ್ಡದ ಪ್ರದೇಶಕ್ಕೆ ಆಗುವ ಸಾಧ್ಯತೆ ದೂರವಿಲ್ಲವಾಗಿದೆ. ಅದಕ್ಕೆ ಕಾರಣ ಇಲ್ಲಿನ ಗುಡ್ಡ, ಬೆಟ್ಟ ಪ್ರದೇಶಗಳಲ್ಲಿ ಅಕ್ರಮವಾಗಿ, ಕಾನೂನು ಬಾಹಿರವಾಗಿ ನಡೆಯುತ್ತಿರುವ ಚಟುವಟಿಕೆಗಳು. ಗುಡ್ಡದ ಏರಿಳಿತಕ್ಕೆ ಪ್ರದೇಶದಲ್ಲಿ ಅಪಾರ ಪ್ರಮಾಣದಲ್ಲಿ ಗರಸಿಗಾಗಿ(ಮೋರಂ) ಕೊರೆದಿರುವ ತಗ್ಗು ಪ್ರದೇಶಗಳೇ, ಅಲ್ಲಲ್ಲಿ ಕೈಗೊಂಡಿರುವ ಸ್ಫೋಟಕ ಬಳಸಿ ಬಂಡೆ ಒಡೆಯುವ ಕೆಲಸಗಳು ಸದ್ಯ ಎಲ್ಲರಿಗೂ ಕಂಡು ಬರುವ ಜೀವಂತಿ ಸಾಕ್ಷಿ ದೃಶ್ಯಗಳಾಗಿವೆ.
ಈಗಾಗಲೇ ಗಜೇಂದ್ರಗಡ ವ್ಯಾಪ್ತಿಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಬೃಹತ್ ಪ್ರಮಾಣದ ಕಲ್ಲೊಂದು ಉರುಳಿ ಬಂದ ಘಟನೆ ನಡೆದಿದೆ. ಇದು ಮುಂದೆ ನಡೆಯುವ ದುರಂತ ಹಾಗೂ ಸಾವುಗಳ ಮೃದಂಗದ ಮುನ್ಸೂಚನೆಯಾಗಿದೆ. ಬೃಹತ್ ಕಲ್ಲುಗಳಿಗೆ ಕೆಳಮಟ್ಟದಲ್ಲಿ ಬಿಗಿಯಾಗಿ ಹಿಡಿದಿರುವ ಮಣ್ಣು ಅಲ್ಲಿಯೇ ಗಟ್ಟಿಯಾಗಿ ನಿಲ್ಲುವಂತೆ ರಕ್ಷಣೆ ನೀಡಿದೆ. ಆದಕಾರಣ ಇಂದಿಗೂ ಅಪಾಯದ ಘಟನೆಗಳು ನಡೆದಿಲ್ಲ.
ಈಚೆಗೆ ಪೈಪೋಟಿಯಲ್ಲಿ ರಾಜಕೀಯ ನಾಯಕರು, ಪ್ರಭಾವಿಗಳು ಪುಕ್ಕಟೆಯಾಗಿ ಸಿಗುವ ಪ್ರಕೃತಿ ಮಡಿಲನ್ನು ಮನಸೋ ಇಚ್ಚೆ ಕೊರೆಯುತ್ತಿದ್ದಾರೆ, ಬ್ಲಾಸ್ಟ್ ಮಾಡುತ್ತಿದ್ದಾರೆ. ಕಂಡುಕಾಣದಂತೆ ಬಾಯಿಮುಚ್ಚಿಕೊಂಡು ಕುಳಿತುಕೊಳ್ಳುವ ಅನಿವಾರ್ಯತೆ ಎಲ್ಲಾ ಇಲಾಖೆಯ ಅಧಿಕಾರಿಗಳಿಗೆ, ಪರಿಸರ ಪ್ರೇಮಿಗಳಿಗೆ, ಹಿರಿಯ ಜೀವಿಗಳಿಗೆ ಒದಗಿದೆ. ಕಾರಣ ಅವರಿಗೂ ಕುಟುಂಬವಿದೆ. ಧ್ವನಿ ಎತ್ತಿದ್ದರೆ ಅವರೇ ಇರುವ ಸಾಧ್ಯತೆ ಇಲ್ಲವಾಗಿದೆ. ಆದರೆ ಕೇರಳದ ದುರಂತ ಗಜೇಂದ್ರಗಡದ ದುರಂತವಾದಾಗ ಅದರ ಅರಿವು ಎಲ್ಲರಿಗೂ ಗೊತ್ತಾಗುತ್ತದೆ.
ಗುಡ್ಡದ ತಳಭಾಗದಲ್ಲಿ ಅಪಾರ ಪ್ರಮಾಣದಲ್ಲಿ ಕೊರೆಯುವ ಮಣ್ಣಿನಿಂದ ಭೂಕುಸಿತವಾಗಿ ಗುಡ್ಡದ ಕಲ್ಲುಗಳು ಕುಸಿಯಬಹುದು, ಅಕ್ರಮ ಚಟುವಟಿಕೆಗಳ ಕಾರಣದಿಂದಾಗಿ ಪೂರ್ಣ ಗುಡ್ಡವೇ ಕುಸಿಯಬಹುದು. ಒಂದು ವೇಳೆ ಹೀಗಾದರೆ ಸಂಭವಿಸಬಹುದಾದ ಸಾವುನೋವುಗಳ ಬಗ್ಗೆ ಒಂದೊಂಮ್ಮೆ ಆತ್ಮಸಾಕ್ಷಿಯಿಂದ ವಿಚಾರ ಮಾಡಿರಿ. ಗಜೇಂದ್ರಗಡದಿಂದ ಬರುವ ಕಲ್ಲುಗಳು ಕೊಡಗಾನೂರ, ಚೀಲಝರಿ, ಪುರ್ತಗೇರಿ, ಬೆಣಚಮಟ್ಟಿ, ಗೋಗೇರಿ ಹಾಗೂ ಗುಡ್ಡದ ಸುತ್ತಳತೆಯ ಎಲ್ಲಾ ಗ್ರಾಮಗಳ ವರೆಗೆ ಬರಬಹುದು.
ಆಗ ನಡೆಯುವ ದುರ್ಘಟನೆಯಲ್ಲೂ ಎಷ್ಟೋ ಗ್ರಾಮಗಳೇ ನಾಪತ್ತೆಯಾಗಬಹುದು. ಈಗ ನಡೆಯುತ್ತಿರುವ ಅಕ್ರಮವನ್ನು ನೋಡಿಯುವ ಸುಮ್ಮನಿರುವ ಪ್ರತಿಯೊಬ್ಬರಿಗೂ ಅದರ ಪಾಪ ತಲುಪಬಹುದು. ನಾಳೆಯ ಒಳ್ಳೆಯದಕ್ಕಾಗಿ ಇಂದಿನ ಪ್ರಕೃತಿಯನ್ನು ಕಾಪಾಡುವುದು ಪ್ರತಿಯೊಬ್ಬರಿಗೂ ಅನಿವಾರ್ಯವಾಗಿದೆ.
ಗಜೇಂದ್ರಗಡ ವ್ಯಾಪ್ತಿಯ ಗಜೇಂದ್ರಗಡ, ಕಾಲಕಾಲೇಶ್ವರ, ಕುಂಟೋಜಿ, ಕೃಷ್ಣಾಪುರ(ಕಣವಿ), ಗೌಡಗೇರಿ, ದಿಂಡೂರು, ಲಕ್ಕಲಕಟ್ಟಿ, ನೆಲ್ಲೂರು ಸೇರಿದಂತೆ ಎಲ್ಲೆಡೆ ಇದೇ ರೀತಿ ಗುಡ್ಡ ಕೊರೆಯುವ ಚಟುವಟಕೆಗಳು ದಿನವೂ ನಡೆಯುತ್ತಿವೆ. ಇನ್ನಾದರು ಎಚ್ಚೆತ್ತುಕೊಳ್ಳುವುದು ಅಗತ್ಯವಾಗಿದೆ. ಎಚ್ಚೆತ್ತುಕೊಳ್ಳದೆ ಇದ್ದರೆ ಮುಂದೊಂದು ದಿನ ನಡೆಯುವ ಘಟನೆಗೆ ಈ ಲೇಖನ ಸಾಕ್ಷಿಯಾಗಲಿದೆ.
ಧನ್ಯವಾದಗಳೊಂದಿಗೆ
---
ಚಂದ್ರು ಎಂ. ರಾಥೋಡ್, ಗ್ರೀನ್ ಆರ್ಮಿ ತಂಡದ ಸದಸ್ಯ
ಮೊಬೈಲ್ ನಂ: 7676296140