01/09/2020
#ದಿವಂಗತ_ಹಿರಿಯ_ಮುತ್ಸದ್ದಿ_ಪ್ರಣಬ್_ಮುಖರ್ಜಿ
#ಪ್ರದಾನಿ_ಪದವಿಯಿಂದ_ವಂಚಿತರಾದ_ಬಗ್ಗೆ
1984ನೇ ಇಸವಿಯಲ್ಲಿ ಇಂದಿರಾ ಗಾಂಧಿ ಹತ್ಯೆಯಾದ ನಂತರ ಸಂವಿಧಾನಾತ್ಮಕವಾಗಿ ರಾಷ್ಟ್ರಪತಿ ಆಳ್ವಿಕೆ ಬರಬೇಕಿತ್ತು. ಆಗಿನ ರಾಷ್ಟ್ರಪತಿಗಳಾದ ಗ್ಯಾನಿ ಜೇಲ್ ಸಿಂಗ್ ಆ ಸಂದರ್ಭದಲ್ಲಿ ಯಮನ್‌ಗೆ ಹೋಗಿದ್ದರು. ಅವರೇನಾದರೂ ಬಂದರೆ ಪ್ರಧಾನಿ ಹುದ್ದೆಗೆ ಪ್ರಣಬ್ ದಾ ಅವರನ್ನೇ ಸೂಚಿಸುತ್ತಿದ್ದರು. ಕುಟುಂಬ ನಿಷ್ಠರಾದ ಅರುಣ್ ನೆಹರೂ ರಾಷ್ಟ್ರಪತಿಗಳು ಬರುವ ಮೊದಲೇ ರಾಜೀವ್ ಅವರನ್ನು ಗದ್ದುಗೆಗೆ ಏರಿಸುವ ತರಾತುರಿಯಲ್ಲಿದ್ದರು. ಉಪರಾಷ್ಟ್ರಪತಿಗಳಿಂದ ಪ್ರಮಾಣ ವಚನ ಸ್ವೀಕರಿಸುವಂತಾಗಲಿ ಸಿಂಗ್ ಬಂದರೆ ಪ್ರಣಬ್ ಪ್ರಧಾನಿಯಾಗುತ್ತಾರೆ. ಹಾಗಾದರೆ ಬಹಳ ಕಷ್ಟ ಅನುಭವಿಸಬೇಕಾಗುತ್ತೆ ಅನ್ನುವುದನ್ನು ಒತ್ತಿ ಒತ್ತಿ ಹೇಳುತ್ತಾರೆ. ಪ್ರಧಾನ ಮಂತ್ರಿಗಳ ಫ್ರಿನ್ಸಿಫಲ್ ಸೆಕ್ರೆಟರಿ ಪಿ.ಸಿ. ಅಲೆಗ್ಸಾಂಡರ್ ಅವರು ಇದನ್ನು ತಳ್ಳಿಹಾಕುತ್ತಾರೆ. ಇಂದಿರಾಜೀ ಅವರ ಶವ AIIMSನಲ್ಲಿರುವುದರಿಂದ ರಾಜೀವ್ ಅಲ್ಲೇ ಇರುತ್ತಾರೆ. ಈ ವಿಚಾರ ರಾಜೀವ್ ಅವರ ಮುಂದೆ ಇಡುತ್ತಾರೆ. ರಾಜೀವ್ ಕೂಡಾ ರಾಷ್ಟ್ರಪತಿ ಬರುವವರೆಗೆ ಕಾಯೋಣ ಅನ್ನುತ್ತಾರೆ. ರಾಷ್ಟ್ರಪತಿ ಬಂದಾಗ ಎಲ್ಲವೂ ಪೂರ್ವನಿರ್ಧಾರಿತವಾದ್ದದ್ದರಿಂದ ರಾಜೀವ್ ಅವರು ಪ್ರಧಾನಿಯಾಗುತ್ತಾರೆ. ರಾಜೀವ್ ಪ್ರಧಾನಿ ಹುದ್ದೆಗೇರುವಾಗ ಅವರ ತಾಯಿಯ ಶವ ಇನ್ನೂ AIIMSನಲ್ಲಿತ್ತು! ರಾಜೀವ್ ಅವರಿಗೆ ಕಾಯುವ ತಾಳ್ಮೆ ಇತ್ತು ಆದರೆ ಕುಟುಂಬೇತರರು ಬಂದರೆ ತಮ್ಮ ಆಟ ನಡೆಯುವುದಿಲ್ಲ ಎಂದು ಅವರ ಬಾಲಬುಡುಕರು ತರಾತುರಿಯಲ್ಲಿ ಪ್ರಮಾಣವಚನ ಸಮಾರಂಭವನ್ನು ಮಾಡಿಬಿಟ್ಟಿದ್ದರು.
ರಾಜೀವ್ ಹತ್ಯೆಯಾದಾಗ ಸೋನಿಯಾ ಹೆದರಿಯೋ ಅಥವಾ ಪೂರ್ವಸಿದ್ಧತೆ ಇಲ್ಲ ಅನ್ನುವ ಕಾರಣಕ್ಕೋ ಹಿಂದಕ್ಕೆ ಸರಿದಾಗಲೂ ಪ್ರಣಬ್ ಯಾಕೆ ಪ್ರಧಾನಿಯಾಗಲಿಲ್ಲ ಅನ್ನೋದು ಇವತ್ತಿಗೂ ಯಕ್ಷ ಪ್ರಶ್ನೆ. ಆದರೆ ಗದ್ದುಗೆಯೇರಿದ ನರಸಿಂಹರಾವ್ ಕೂಡಾ ಮುತ್ಸದ್ದಿಗಳಾಗಿದ್ದರು. ಅಟಲ್‌ಜೀ ಆಳ್ವಿಕೆಯೆಲ್ಲಾ ಮುಗಿದ ನಂತರ ಮತ್ತೊಮ್ಮೆ ಎಲೆಕ್ಷನ್ ಬಂದಾಗ ಪ್ರಣಬ್‌ಜೀ ನಾಯಕತ್ವದಲ್ಲಿ ಚುನಾವಣೆಗೆ ಹೊರಡಬೇಕು ಅನ್ನುವ ಆಶಯ ಕೆಲವರಲ್ಲಿತ್ತು. ಅದಾಗಲಿಲ್ಲ. ಸೋನಿಯಾ ಅವರನ್ನೇ ಪ್ರಧಾನಿ ಮಾಡುವ ಕಾರ್ಯಕ್ಕೆ ಸಂವಿಧಾನಾತ್ಮಕ ತೊಂದರೆಗಳಾದಾಗ ಅವರು ನಿಯಂತ್ರಿಸಬಲ್ಲ ಮನಮೋಹನರು ಗದ್ದುಗೆಯೇರಿದರು. ಮೊದಲನೇ ಅವಧಿ ಹೇಗೋ ಸಾಗಿತು. ಎರಡನೇಯ ಬಾರಿ ಸೋನಿಯಾ ಪ್ರಧಾನಿಯಾಗುವ ನಿರೀಕ್ಷೆಯೂ ಇರಲಿಲ್ಲ. ಆದರೂ ಬಿಜೆಪಿಗೆ ಪೂರ್ಣ ಬಹುಮತ ಬರುವ ನಿರೀಕ್ಷೆಗಳೂ ಇರಲಿಲ್ಲ. ಆಗಲೂ ಪ್ರಣಬ್‌ದಾ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಮುನ್ನೆಲೆಗೆ ತರಲಿಲ್ಲ. ಕಾಂಗ್ರೆಸ್‌ನ ಎರಡನೇಯ ಅವಧಿಯ ಆಳ್ವಿಕೆಯಲ್ಲಿ ಸೋತು ಹೋದ ದೇಶ. ಈ ಸಲ ಅದು ಗದ್ದುಗೆಯೇರಲ್ಲ ಅನ್ನುವುದು ಕಾಂಗ್ರೆಸ್ಸಿನ ಒಳಗಿನವರಿಗೂ ಗೊತ್ತಿತ್ತು. ಸ್ಥಿತಿ ಹೀಗಿದ್ದಾಗ ಪ್ರಣಬ್ ಅವರನ್ನು ಮುಂದೆ ಮಾಡಿದ್ದರೇ ಅಷ್ಟು ಹೀನಾಯ ಸೋಲು ಕಾಂಗ್ರೆಸ್ ಕಾಣುತ್ತಿರಲಿಲ್ಲ. ಪ್ರಣಬ್ ದಾ ಅವರಿಗಾದ ಅನ್ಯಾಯವನ್ನು ಮುಚ್ಚಿಹಾಕಲು ರಾಷ್ಟ್ರಪತಿಯನ್ನಾಗಿಸಿದ ಸಮಜಾಯಿಷಿ ಇವತ್ತಿಗೂ ಕಾಂಗ್ರೆಸ್ಸಿಗೆ ಕೊಡುತ್ತಾರೆ. ಅಸಲಿಗೆ ಸ್ಪರ್ಧೆಯಲ್ಲಿದ್ದ ಅವರನ್ನು ಅಲ್ಲಿಂದ ಸರಿಸಿ ರಾಹುಲ್‌ಗೆ ದಾರಿ ಮಾಡಿಕೊಡುವ ಹುನ್ನಾರವಿತ್ತು ಅನ್ನುವುದು ಮುಕ್ತ ಗೌಪ್ಯ(open secret).
ಪ್ರಣಬ್ ದಾ ಪ್ರಧಾನಿ ಹುದ್ದೆಯಿಂದ ನಾಲ್ಕು ಬಾರಿ ವಂಚಿತರಾದರು. ಕಾಂಗ್ರೆಸ್ಸಿನ ಒಳಗಿದ್ದು ಅನ್ಯಾಯಗಳಿಗೆ ಕೈ ಜೋಡಿಸಲೂ ಇಲ್ಲ, ಮನಮೋಹನರಂತೆ ನೋಡಿ ಸುಮ್ಮನಾಗಲೂ ಇಲ್ಲ. ಅಲ್ಲಲ್ಲಿ ಅನ್ಯಾಯಗಳನ್ನು ತಮ್ಮ ಇತಿಮಿತಿಯಲ್ಲಿ ಖಂಡಿಸಿದರು. ರಾಷ್ಟ್ರಪತಿಯ ಹುದ್ದೆಗೇರಿದ ಮೇಲೆ ಕಲಾಂರ ನಂತರ ಹುದ್ದೆಗೆ ನ್ಯಾಯ ಒದಗಿಸಿದವರಲ್ಲಿ ಇವರೂ ಒಬ್ಬರು. ತನ್ನ ಪಕ್ಷದ ಹೊರಗಿದ್ದ ಮೋದಿಯ ಒಳಿತುಗಳನ್ನು ಶ್ಲಾಘಿಸಿದರು. ಮೋದಿಯ ದೂರದೃಷ್ಟಿ ಮತ್ತು ಗುರಿಯನ್ನು ಸೇರಲು ಮಾಡುತ್ತಿರುವ ನಿರಂತರ ಪ್ರಯತ್ನವನ್ನು ಮನಸಾರೆ ಹೊಗಳಿದರು. ಅಷ್ಟೇ ಅಲ್ಲದೇ ಉನ್ನತ ಹುದ್ದೆಯಲ್ಲಿ ಕೂತ ಅವರು ದೇಶದ ಎಲ್ಲವನ್ನೂ ಗಮನಿಸುತ್ತಾ ಅಲ್ಲಲ್ಲಿ ಆಗುತ್ತಿದ್ದ ಲಿಂಚಿಂಗ್ ಬಗ್ಗೆ ಮೋದಿಯವರಿಗೆ ಎಚ್ಚರಿಕೆಯನ್ನೂ ಕೊಟ್ಟರು.
ರಾಷ್ಟ್ರಪತಿ ಹುದ್ದೆಯಿಂದ ಹೊರನಡೆದ ಮೇಲೆ ಆರೆಸ್ಸೆಸ್ಸಿನ ಸಭೆಗೆ ಆಹ್ವಾನಿಸಿದಾಗ ಇಡಿಯ ಕಾಂಗ್ರೆಸ್ ವಿರೋಧಿಸಿತ್ತು. ಆದರೆ ಪ್ರಣಬ್ ದಾ ಭೇಟಿ ಕೊಟ್ಟು ಆರೆಸ್ಸೆಸ್ಸನ್ನು ಶ್ಲಾಘಿಸಿಯೂ ಬಂದರು.
ಇದೆಲ್ಲದರ ಮಧ್ಯೆ ಭಾರತ ರತ್ನ ಅವರನ್ನು ಹುಡುಕಿಕೊಂಡು ಬಂದಿದ್ದು ಮೋದಿಯವರ ರಾಜಕೀಯ ದಾಳ ಅನಿಸಿದ್ದೂ ಇದೆ. ಆದರೆ ಪ್ರಣಬ್ ಗೌರವಕ್ಕೆ ಅರ್ಹರೂ ಹೌದು.
ಇಂಥ ಶುದ್ಧ"ಹಸ್ತ"ರಿಗೆ ಅಧಿಕಾರದಿಂದ ವಂಚಿಸಿದ ಮಾತೃಪಕ್ಷ ಮತ್ತು ಭಾರತ ರತ್ನ ಕೊಟ್ಟು ಗೌರವಿಸಿದ ಬಿಜೆಪಿ ಇಬ್ಬರಿಗೂ ಆಪ್ತರಾಗಿ ಉಳಿದು ಅಜಾತ ಶತ್ರುವಂತೆ ಬದುಕಿ ನಮ್ಮಿಂದ ನಿರ್ಗಮಿಸಿದ್ದಾರೆ.
ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ.
ಬರಹ : ರಾಹುಲ್ ಹಜಾರೆ ಹಜಾರ್ ಮಾತು