06/07/2025
ಜೀವನದಲ್ಲಿ ಅನೇಕ ಏಳುಬೀಳುಗಳನ್ನು ಎದುರಿಸಿ ಏಕಾಂಗಿಯಾಗಿ ಸಾವಯವ ರೀತಿ ತೋಟಕಟ್ಟಿ ಹಸು, ಕೋಳಿ ಮತ್ತು ವಿಶೇಷವಾಗಿ ಹಂದಿ ಸಾಕಾಣಿಕೆಯೂ ಮಾಡಿ, ದೇಶವಿದೇಶಗಳ ಸಾವಿರಾರು ಪ್ರಭೇದಗಳ ಸಸ್ಯಗಳನ್ನು ಬೆಳೆಸುವ ಜೊತೆಗ ಮಕ್ಕಳಿಗೂ ಉತ್ತಮ ಭವಿಷ್ಯ ರೂಪಿಸುವಲ್ಲಿ ಯಶ್ವಿಯಾಗಿರುವ ಮೈಸೂರಿನ ಶ್ರೀಮತಿ ನಳಿನಿ ಅವರ ಕುರಿತು ಶ್ರೀಮತಿ ಸುಧಾ ಸಂದೀಪ್ ಎಂ.ಎಸ್ಸಿ ಕೃಷಿ ಬರೆದ ಲೇಖನ ಈ ವಾರದ ವಿಕ್ರಮ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಆಸಕ್ತರು ಓದಿ ಇತತರೊಂದಿಗೆ ಹಂಚಿಕೊಳ್ಳಬಹುದು.
ವಿಕ್ರಮ ಪತ್ರಿಕೆ ಚಂದಾದಾರರಾಗಲು ಸಂಪರ್ಕಿಸಿ +91 88929 23338
ಮೈಸೂರಿನ ಇನ್ಫೋಸಿಸ್ ಸಂಸ್ಥೆಯ ಹಿಂಭಾಗದಲ್ಲಿ ನಾವೆಲ್ಲರೂ ನಿಬ್ಬೆರಗಾಗುವಂತೆ ಮಲೆನಾಡಿನಂತಹ ತೋಟ ಕಟ್ಟಿರುವ ಶ್ರೀಮತಿ ನಳಿನಿಯವರ ಸಾಧನೆ ಅಮೋಘವಾದದ್ದು.
ನಮಗೆ ಪರಿಚಯವಿರುವ ಮೈಸೂರು ಸಮೀಪದ ನಾಗನಹಳ್ಳಿಯ ಶ್ರೀಮತಿ ದೇವಕಿ ಅವರು ಬಹಳ ದಿನಗಳಿಂದ ನೀವು ಒಮ್ಮೆ ನನ್ನ ಸ್ನೇಹಿತೆಯಾದ ಶ್ರೀಮತಿ ನಳಿನಿ ಅವರ ತೋಟ ನೋಡಬೇಕು. ತೆಂಗು ಅಡಿಕೆಯಷ್ಟೇ ಅಲ್ಲದೆ ಸಾವಿರಾರು ಪ್ರಭೇದದ ಗಿಡ ಮರಬೆಳೆಸಿದ್ದಾರೆ. ಸಮಗ್ರ ಕೃಷಿ ಪದ್ದತಿಯಲ್ಲಿ ಹಸು, ಕೋಳಿ, ಬಾತು ಕೋಳಿ ಮತ್ತು ವಿಶೇಷವಾಗಿ ಹಂದಿಗಳನ್ನು ಸಾಕುತ್ತಿದ್ದಾರೆ ಎಂದು ಹೇಳಿದ್ದರು. ಅದರಂತೆ ಕಳೆದವಾರ ಬಿಡುವು ಮಾಡಿಕೊಂಡು ಶ್ರೀಮತಿ ನಳಿನಿ ಅವರ ತೋಟಕ್ಕೆ ಭೇಟಿಕೊಟ್ಟೆವು.
ತುಂತುರು ಮಳೆಯಲ್ಲಿ ನಮಗಾಗಿ ಕಾದಿದ್ದ ಅವರು ಕೈಯಲ್ಲಿ ಗಿಡ ಕತ್ತರಿಸುವ ಕಟರ್ ಹಿಡಿದೇ ನಮ್ಮನ್ನು ಸ್ವಾಗತಿಸಿದರು. ಮೈಸೂರಿನ ಇನ್ಫೋಸಿಸ್ ಹಿಂಭಾಗದಲ್ಲಿದ್ದರೂ ಅವರ ಜಮೀನು ಮಂಡ್ಯ ಜಿಲ್ಲೆಗೆ ಸೇರುತ್ತದೆ. ಸುಮಾರು 7.5 ಎಕರೆ ಹಚ್ಚಹಸುರಿನ ತೋಟದ ಪ್ರಾರಂಭದಲ್ಲಿರುವ ಸಣ್ಣ ಗುಡ್ಡದ ಮೇಲೆ ಮನೆ. ಮನೆಯ ಸುತ್ತಾ ಹಲವಾರು ರೀತಿಯ ಹೂವಿನ ಗಿಡಗಳು, ಅಲಂಕಾರಿಕ ಸಸ್ಯಗಳು, ಬೋನ್ಸಾಯ್ ಗಳು ಕಣ್ಮನ ಸೆಳೆಯುತ್ತಿದ್ದವು. ಸಂಜೆಯಾಗುತ್ತಿದ್ದರಿಂದ ಮೊದಲು ತೋಟ ನೋಡಿ ನಂತರ ಮನೆಯೊಳಗೆ ಬರುತ್ತೇವೆ ಎಂದೆವು. ಸಂತೋಷ ಮತ್ತು ಉತ್ಸಾಹದಿಂದ ಒಂದೊಂದೇ ಗಿಡಗಳನ್ನು ತೋರಿಸುತ್ತಾ ಇದು ನಿಮ್ಮಲ್ಲಿ ಇದೆಯೇ? ಇಲ್ಲವಾದಲ್ಲಿ ನಾನೊಂದು ಕಡ್ಡಿ ಕೊಡುವೆ ನೀವು ಬೆಳೆಸಿ ಎಂದು ಬಗೆ ಬಗೆಯ ಬಣ್ಣದ ದಾಸವಾಳ ಮತ್ತಿತ್ತರ ಅಲಂಕಾರಿಕ ಸಸ್ಯಗಳ ಗೆಲ್ಲುಗಳನ್ನು ಕಟರ್ ಸಹಾಯದಿಂದ ನಯವಾಗಿ ಕತ್ತರಿಸಿ ಕೊಟ್ಟರು. ತೋಟ ತೋರಿಸುತ್ತಾ ನಳಿನಿ ಅವರು ತಮ್ಮ ಅನುಭವ ಹಂಚಿಕೊಂಡರು.
ಬಾಲ್ಯದಿಂದಲೂ ನನಗೆ ಗಿಡಗಳಂದರೆ ವಿಪರೀತ ಪ್ರೀತಿ. ತಂದೆಯವರು ಸರ್ಕಾರಿ ನೌಕರಿಯಲ್ಲಿದ್ದ ಕಾರಣ ಬೇರೆ ಬೇರೆ ಊರುಗಳಲ್ಲಿರಬೇಕಾಯಿತು. ನಾವಿದ್ದ ಸರ್ಕಾರಿ ಕ್ವಾರ್ಟರ್ಸ್ ಗಳಲ್ಲಿ ವಿಶಾಲವಾದ ಹಿತ್ತಲು ಇರುತಿತ್ತು. ತಾಯಿಯವರು ಮನೆಗೆ ಬೇಕಾದ ಸೊಪ್ಪು ತರಕಾರಿ ಹಣ್ಣು ಹಂಪಲು ಬೆಳೆಯುತ್ತಿದ್ದರು. ನಮಗೆ ಬೇಕಾದಾಗ ಹಿತ್ತಲಿಗೆ ಹೋಗಿ ಬದನೆಕಾಯಿ ಮೆಣಸಿನಕಾಯಿ ನುಗ್ಗೆ ಬಾಳೆ ಇತ್ಯಾದಿ ತಂದು ಅಡಿಗೆ ಮಾಡಿ ಖುಷಿಯಿಂದ ತಿನ್ನುತ್ತಿದ್ದೆವು. ಶಾಲೆಯ ಮುಂದೆ ತಿಳಿ ನೇರಳೆ ಬಣ್ಣದ ಹೂವುಗಳಿರುವ ಒಂದು ಅಲಂಕಾರಿಕ ಮರವಿತ್ತು. ಸಂಜೆಯಾದರೆ ಅನೇಕ ಮಕ್ಕಳು ಅದರ ಅಡಿಯಲ್ಲಿ ಆಟವಾಡಿ ಕೆಲವರು ಅಲ್ಲೇ ಮಲಗುತ್ತಿದ್ದರು. ಅದನ್ನು ನೋಡಿದಾಗೆಲ್ಲಾ ನಾನು ಸಹ ಮರವಾಗಿ ಹುಟ್ಟಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎನಿಸುತ್ತಿತ್ತು. ಹೀಗೆ ಮರಗಿಡಗಳೆಂದರೆ ನನಗೆ ಅಷ್ಟೋಂದು ಇಷ್ಟ. ಮದುವೆಯಾದ ನಂತರ ಈ ಜಾಗಕ್ಕೆ ಬಂದೆವು. ನನ್ನ ದುರಾದೃಷ್ಟಕ್ಕೆ ಸಾಂಸಾರಿಕ ಜೀವನ ಅಷ್ಟಾಗಿ ಸರಿಯಾಗಲಿಲ್ಲ. ಇಬ್ಬರು ಮುದ್ದಾದ ಮಕ್ಕಳಿದ್ದರೂ ಪತಿಗಿದ್ದ ದುಶ್ಚಟಗಳ ಪರಿಣಾಮ ಆರ್ಥಿಕವಾಗಿ ದೊಡ್ಡ ಸಂಕಷ್ಟ ಎದುರಾಯಿತು. 1996ರಲ್ಲಿ ನಮ್ಮ ಅಜ್ಜಿಯ ಊರಾದ ಕೃಷ್ಣರಾಜಪೇಟೆ ಸಮೀಪದ ಕಟ್ಟೆಕ್ಯಾತನಹಳ್ಳಿ ಹಳ್ಳಿಯಿಂದ ಸುಮಾರು 400 ತೆಂಗು ಮತ್ತು ನಾಟನಹಳ್ಳಿಯಿಂದ 850 ಅಡಿಕೆ ಗಿಡಗಳನ್ನು ತಂದು ನೆಟ್ಟೆ. ಇಲವಾಲ ಸಮೀಪವಿರುವ ತೋಟಗಾರಿಕಾ ಕಾಲೇಜಿನಿಂದ ಹದಿನೈದು ಬೇರ ಬೇರೆ ತಳಿಗಳ ಮಾವನ್ನು ಅಂತರ ಬೆಳೆಯಾಗಿ ತೆಂಗಿನ ತೋಟದಲ್ಲಿ ಬೆಳೆಸುವ ಪ್ರಯತ್ನ ಮಾಡಿದೆ. ಆದರೆ ತೆಂಗಿನೊಳಗೆ ಮಾವು ಸರಿಯಾಗಿ ಬರುವುದಿಲ್ಲವೆಂದು ನಂತರ ತಿಳಿಯಿತು.
ನಿತ್ಯ ಆದಾಯಕ್ಕೆ ಹೈನುಗಾರಿಕೆ : ಪತಿಯಿಂದ ಯಾವುದೇ ಆದಾಯ ನಿರೀಕ್ಷಿಸದ ನಾನು ಮಕ್ಕಳ ವಿದ್ಯಾಭ್ಯಾಸಕ್ಕೆ ಮತ್ತು ಮನೆ ಖರ್ಚಿಗೆ ಹೈನುಗಾರಿಕೆ ಪ್ರಾರಂಭಿಸಿದೆ. ಹೆಚ್ಚು ಹಾಲು ನೀಡುವ ಮತ್ತು ಕಡಿಮೆ ರೋಗಭಾದೆಯಿರುವ ಜೆರ್ಸಿ ಮತ್ತು ಗೀರ್ ಸಂಕರಣ ತಳಿ, ನಾಟಿ ಕ್ರಾಸ್ ಮಿಶ್ರತಳಿ ಹಸುಗಳನ್ನು ಸಾಕಲು ಪ್ರಾರಂಭಿಸಿದೆ. ಸಾವಯವದ ಮೇಲಿರುವ ಒಲವಿನಿಂದ ಮತ್ತು ಕಡಿಮೆ ಖರ್ಚಿನ ದೃಷ್ಠಿಯಿಂದ ಯಾವುದೇ ಕೃತಕ ರಾಸಾಯನಿಕ ಒಳಸುರಿಗಳನ್ನು ತೋಟಕ್ಕಾಗಲೀ ಹಸುಗಳಿಗಾಗಲಿ ನೀಡುವುದಿಲ್ಲ. ಗ್ರಾಹಕರು ಒಮ್ಮೆ ಈ ಹಾಲಿನ ರುಚಿ ನೋಡಿದಮೇಲೆ ಮತ್ತಾವ ಹಾಲನ್ನು ಒಪ್ಪುವುದಿಲ್ಲ. ಹಾಗಾಗಿ ಹಾಲಿಗೆ ಖಾಯಂ ಗ್ರಾಹಕರಿದ್ದಾರೆ. ನಿತ್ಯ ಹಾಲು ಕರೆದು ನಾನೇ ವಾಹನ ಚಲಾಯಿಸಿಕೊಂಡು ಅವರಿಗೆ ತಲುಪಿಸುತ್ತೇನೆ. ಹೆಚ್ಚಾದ ಹಾಲನ್ನು ಡೈರಿಗೆ ಹಾಕುವೆ. ಹಸುಗಳಿಗೆ ರೋಗ ಬಂದರೆ ನನ್ನ ಸಂಭಂದಿಕರೊಬ್ಬರು ಪಶುವೈದ್ಯರಾದ ಕಾರಣ ಅವರ ಸಲಹೆಮೇರೆಗೆ ಕೆಲ ಮನೆ ಮದ್ದು, ಹೋಮಿಯೋಪತಿ ಮತ್ತಿತ್ತರೆ ಪರ್ಯಾಯ ಔಷಧಗಳನ್ನು ನೀಡುತ್ತೇವೆ. ತೆಂಗಿನ ತೋಟದಲ್ಲಿ ಮೇಯಲು ಕೆಲಕಾಲ ಬಿಟ್ಟರೂ ಕೊಟ್ಟಿಗೆಯಲ್ಲಿ ಕಟ್ಟಿದಾಗ ಮೆಲ್ಲಲ್ಲು ಕೆಲ ಬಗೆಯ ನೇಪಿಯರ್ ಹುಲ್ಲು ಬೆಳೆಸಿದ್ದೇವೆ.
ಹಸುಗಳ ಜೊತೆ ನಾಟಿ ಕೋಳಿಗಳನ್ನು ಸಾಕಿ ಮೊಟ್ಟೆ ಮಾರುತ್ತೇವೆ. ಆದರೆ ಕೇವಲ ಇಷ್ಟರಿಂದ ನಮ್ಮ ಆರ್ಥಿಕಮಟ್ಟ ಸುಧಾರಿಸಲಿಲ್ಲ.
ಕಸದಿಂದ ರಸ ಮತ್ತು ಆರ್ಥಿಕ ಭದ್ರತೆ ನೀಡಿದ ಹಂದಿ ಸಾಕಾಣಿಕೆ:
ಮಗ ಈಶ್ವರ್ ನ ಸಲಹೆಯಂತೆ ಕಡಿಮೆ ಖರ್ಚು ಹೆಚ್ಚು ಆದಾಯ ತರುವ ಹಂದಿ ಸಾಕಾಣಿಕೆ ಮಾಡಲು ಮುಂದಾದೆವು. ಯಾರ್ಕಶೈರ್, ಡ್ಯೂರಿಕ್, ಲ್ಯಾಂಡ್ ರೇಸ್ ಮಿಶ್ರತಳಿಗಳ ಹಂದಿ ಮರಿಗಳನ್ನು ತಂದೆವು. ಅವುಗಳಿಗೆ ಸರಿಯಾದ ಗೂಡಿನ ವ್ಯವಸ್ಥೆಯಾಯಿತು. ಆದರೆ ಇವುಗಳಿಗೆ ಮೇವು ಒದಗಿಸುವುದೇ ಸವಾಲಾಯಿತು. ಪ್ರಾರಂಭದಲ್ಲಿ ಬೆಮೆಲ್ ಸಂಸ್ಥೆಯ ಕ್ಯಾಂಟೀನ್ ನಿಂದ ಅಡುಗೆ ತ್ಯಾಜ್ಯ ಸಂಗ್ರಹದ ಟೆಂಡರ್ ಪಡೆದೆವಾದರೂ ನಂತರ ತ್ಯಾಜ್ಯಕ್ಕೂ ಬೇಡಿಕೆ ಹೆಚ್ಚಾದ್ದರಿಂದ ಇದು ದುಬಾರಿಯಾಯಿತು. ಹಾಗಾಗಿ ಹತ್ತಿರದ ಕೆಲ ಹೋಟೆಲ್ ನವರ ಸಂಪರ್ಕ ಸಾಧಿಸಿ ತ್ಯಾಜ್ಯ ಶೇಕರಿಸಿಕೊಂಡು ತಂದು ಹಂದಿಗಳಿಗೆ ಮೇವಾಗಿ ನೀಡುತ್ತಿದ್ದೇವೆ. ಒಂದು ವೇಳೆ ಈ ರೀತಿ ತ್ಯಾಜ್ಯ ಸಿಗದಿದ್ದ ಪಕ್ಷದಲ್ಲಿ ಪಾಲೀಶ್ ತೌಡು ಮತ್ತು ಹಿಂಡಿ ಹಾಕಿ ಮೇವು ನಿರ್ವಹಿಸುತ್ತೇವೆ. ಹಂದಿಗಳು ಬಹು ಬೇಗ ಸಂತಾನಾಭಿವೃದ್ದಿ ಮಾಡುತ್ತವೆ. ಗಂಡು ಹೆಣ್ಣುಗಳಿಗೆ ಪ್ರತ್ಯೇಕ ಕೋಣೆಗಳಿವೆ. ಗರ್ಭಧರಿಸುವ ವರೆಗೆ ಗಂಡು ಹೆಣ್ಣುಗಳನ್ನು ಒಟ್ಟಿಗೆ ಒಂದೇ ಕೋಣೆಯಲ್ಲಿ ಬಿಡುತ್ತೇವೆ. ನಂತರ ಹೆಣ್ಣು ಹಂದಿಯನ್ನು ಪ್ರತ್ಯೇಕ ಕೋಣೆಯಲ್ಲಿ ಬಿಡುತ್ತೇವೆ. ಮರಿಹಾಕಿದ ಮೇಲೆ 45ದಿನ ಅಮ್ಮನ ಹಾಲನ್ನು ಮರಿಗಳು ಸಂತೃಪ್ತವಾಗಿ ಕುಡಿದು ಬೆಳೆಯುತ್ತವೆ. ನಂತರ ಮರಿಗಳನ್ನು ಪ್ರತ್ಯೇಕಿಸಿ ಅವುಗಳಿಗೆ ಬೇರೆ ಆಹಾರ ನೀಡಿ ಹಾಲು ಬಿಡಿಸುತ್ತೇವೆ.
ಪ್ರತಿ ಮೂರು ತಿಂಗಳಿಗೆ ನಮ್ಮಲ್ಲಿ 60-70ಮರಿಗಳಾಗುತ್ತವೆ. ಉತ್ತಮ ಗುಣಮಟ್ಟದ ಮರಿಗಳನ್ನು ಸಾಕುವವರಿಗೆ ಮಾರುತ್ತೇವೆ. ಪ್ರತಿನಿತ್ಯ ಎರಡು ಸಲ ಜೋರಾಗಿ ನೀರು ಹಾಕಿ ಗೂಡು ತೊಳೆಯುತ್ತೇವೆ. ಹಂದಿ ತ್ಯಾಜ್ಯ ಒಂದೆಡೆ ಸಂಗ್ರಹವಾಗಿ ಉತ್ಕೃಷ್ಟ ಗೊಬ್ಬರವಾಗುತ್ತದೆ. ಇದನ್ನು ಸ್ವಲ್ಪ ಪ್ರಮಾಣದಲ್ಲಿ ಹಸುವಿನ ಸಗಣಿ ಗೊಬ್ಬರದೊಂದಿಗೆ ತೋಟಕ್ಕೆ ನೀಡಿದೆರೆ ಭರಪೂರ ಫಸಲು ತೆಗೆಯಬಹುದು ಎಂಬುದು ನಮ್ಮ ವೈಯಕ್ತಿಕ ಅನುಭವ.
ಈ ರೀತಿ ಸಮಗ್ರ ಕೃಷಿಯಿಂದ ದೊರೆಯುತ್ತಿದ್ದ ಆದಾಯದಲ್ಲಿ ಮಗ ಈಶ್ವರ್ ಮೆಕಾನಿಕಲ್ ಇಂಜಿನಿಯರ್ ಪದವಿ ಪಡೆದು ಭಾರತೀಯ ವಾಯು ಸೇವೆಯಲ್ಲಿದ್ದರೆ, ಮಗಳು ಸಮೀಕ್ಷ ಮೆಕಾಟ್ರಾನಿಕ್ಸ್ ಸ್ನಾತಕೋತ್ತರ ಪದವಿ ಪಡೆದು ಲಂಡನ್ ನಗರದ ಪ್ರತಿಷ್ಠತಿ ಕಂಪೆನಿಯಲ್ಲಿ ಕಾರ್ಯನಿರ್ವಹಿಸುತಿದ್ದಾಳೆ. ಸಮಗ್ರ ಸಾವಯವ ಕೃಷಿಯಿಂದ ಮಕ್ಕಳನ್ನು ಓದಿಸುವ ಜೊತೆಗ ನನಗಿಷ್ಟದ ಗಿಡಗಳನ್ನು ಖರೀದಿಸಿ ಸಂತಸ ಪಡುವಹಾಗಾಗಿದೆ
ಎನ್ನುತ್ತಾರೆ ನಳಿನಿಯವರು.
ಹತ್ತಾರು ಬಗೆಯ ದಾಸವಾಳ, ಮಲ್ಲಿಗೆ, ಜಾಜಿ, ಅಲಮೆಂಡಾ ರೀತಿಯ ಹೂವುಗಳು, ಟಾರ್ಚ್ ಜಿಂಜರ್ ಹೆಲಿಕೋನಿಯಾ ಪ್ರಭೇದಗಳು, ಕೇದಿಗೆ, ಸಂಪಿಗೆ, ಪಾರಿಜಾತ ಪುಷ್ಪಗಳು, ಹತ್ತಾರು ಆಲದ ಜಾತೀಯ ಬೋನ್ಸಾಯ್ಗಳು, ಲೆಕ್ಕವಿಲ್ಲದಷ್ಟು ಕ್ಯಾಕಟ್ಸ್ ಸಕ್ಯುಲೆಂಟ್ಸ್ ಗಿಡಗಳು, ಹಲಸು, ಜೀಗುಜ್ಜೆ, ಬೆಣ್ಣೆಹಣ್ಣು, ದೊಡ್ಡ ಗಾತ್ರದ ಚಳ್ಳೆ ಹಣ್ಣು, ಸೀತಾಫಲ, ರಾಮ ಫಲ ವಾಟರ್ ಆಪಲ್ ಪೀನಟ್ ಬಟರ್, ಕಮಲದ್ರಾಕ್ಷಿ ರೀತಿಯ ಹಣ್ಣುಗಳು, ನಿಂಬೆಹಿಲ್ಲು, ಹಿಂಗು, ಬರ್ಸೆರಾ, ಚಕ್ಕೆ, ಸರ್ವಸಾಂಬಾರ ರೀತಿಯ ಸುಗಂಧ ಮತ್ತು ಸಾಂಬಾರ ಪ್ರಭೇದಗಳು, ದೊಡ್ಡ ಪತ್ರೆ, ಶಂಕಪುಷ್ಪ, ಟಿಂಚರ್ ಗಿಡ, ಅಮೃತಬಳ್ಳಿ, ಮಂಗನ ಬಳ್ಳಿ, ಒಂದೆಲಗ ರೀತಿಯ ಹತ್ತಾರು ಔಷಧಿಯ ಸಸ್ಯಗಳು ಸೇರಿ ದೇಶ ವಿದೇಶಗಳ ಅಪರೂಪದ ಸಾವಿರಾರು ಪ್ರಭೇದದ ಗಿಡಗಳ ಸಂಗ್ರಹ ಇವರ ಬಳಿಯಿದೆ. ಏಕಾಂಗಿಯಾಗಿ ಇಷ್ಟು ವರ್ಷಗಳ ಕಾಲ ತೋಟ ನಿಭಾಯಿಸುವುದೆಂದರೆ ಸುಲಭವಲ್ಲ. ಜೀವನದಲ್ಲಿ ನೊಂದು ಬೆಂದು ಮಕ್ಕಳಿಗಾಗಿ ಉಸಿರಿಡುಕೊಂಡು ಈ ಮಟ್ಟಿನ ಸಾಧನೆ ಮೆಚ್ಚುವಂತಹದ್ದು.
ತೋಟ ಕಟ್ಟಿರುವುದಷ್ಟೇ ಅಲ್ಲದೆ ಮಕ್ಕಳಿಗೆ ಸಂಸ್ಕಾರ ತುಂಬಿದ್ದಾರೆ. ಹಾಲು ಕರೆಯುವಾಗ ಮಕ್ಕಳೊಂದಿಗೆ ರಾಮಾಯಣ, ಮಹಾಭಾರತ ಮತ್ತಿತರ ಪುರಾಣ ಇತಿಹಾಸಗಳ ಕುರಿತು ಚರ್ಚೆ ಮಾಡುತ್ತಿರುತ್ತಾರೆ. ವಿಶೇಷವಾಗಿ ನಮ್ಮ ಹಿರಿಯರಿಗಿದ್ದ ಪ್ರಕೃತಿ ಪ್ರೇಮ ಎಂತಹದ್ದು ಎಂಬುದರ ಬಗ್ಗೆ ಸದಾ ಚರ್ಚಿಸಿರುತ್ತಾರೆ.
ಉದಾಹರಣೆಗೆ ಶ್ರಾವಣದಲ್ಲಿ ಬಹುತೇಕ ಎಲ್ಲ ಪ್ರಾಣಿಗಳು ಗರ್ಭದರಿಸುತ್ತವೆ. ಹಾಗಾಗಿ ಆ ಸಮಯದಲ್ಲಿ ಮಾಂಸಾಹಾರ ವರ್ಜ್ಯ ಎಂದು ನಮ್ಮ ಹಿರಿಕರು ನಿಯಮ ರೂಡಿಸಿರುತ್ತಾರೆ. ಅವರ ಎಷ್ಟೋ ಆಚರಣೆಗಳಲ್ಲಿ ವೈಜ್ಞಾನಿಕ ಸತ್ಯವಿದೆ ಎಂಬುದು ಇವರ ಅನುಭವಕ್ಕೆ ಬಂದಿರುತ್ತದೆ.
ಕೃಷಿಯಲ್ಲಿನ ತಮ್ಮ ಶ್ರಮಕ್ಕೆ ಅನೇಕ ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ. ಕೇವಲ ಕೃಷಿಯಷ್ಟೇ ಅಲ್ಲದೆ ಚಿತ್ರಕಲೆಯಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಮನೆಯೊಳಗಿನ ವಿನ್ಯಾಸವನ್ನು ಕಾಡು ಮರಗಳ ರೆಂಬೆಗಳಿಂದ ಚಿತ್ತಾಕರ್ಶಕವಾಗಿ ವಿನ್ಯಾಸಗೊಳಿಸಿದ್ದಾರೆ. ಒಟ್ಟಿನಲ್ಲಿ ಸಕಲಾಕಲಾವಲ್ಲಭೆಯಾಗಿ ನಮ್ಮೆಲ್ಲಿರಿಗೂ ಸ್ಫೂರ್ತಿಯಾಗಿದ್ದಾರೆ ಶ್ರೀಮತಿ ನಳಿನಿಯವರು.
- ಸುಧಾ ಸಂದೀಪ್ ಎಂ.ಎಸ್ಸಿ ಕೃಷಿ ಹುಣಸೂರು.