22/08/2026
Gen Z ಯಾನೆ ನವಪೀಳಿಗೆ: ವಿದ್ಯೆ ಕಲಿತರಷ್ಟೇ ಸಾಲದು!
ಈ "ಕೆಲವು" ಜೆನ್ Z ಗಳಿಗೆ, ಕೇಳಿದ್ದು ತಕ್ಷಣ ಸಿಗಬೇಕು, ತಕ್ಷಣ ಆಗಬೇಕು; ಇಲ್ಲಾಂದ್ರೆ, ಸಕಾಲಕ್ಕೆ ಗಾಂಜಾ, ಅಫೀಮು ಸಿಗದೇ ಇರೋರ ಥರಾ, ಏನೇನೋ ಆಡಿಬುಡ್ತಾವೆ... ಕೊನೆಗೆ ಯಾರೋ ಹೇಳಿದರೂಂತ ಕ್ಷಮೆ ಕೇಳ್ತಾವೆ, ಮತ್ತದೇ ಚಾಳಿ ಮುಂದುವರಿಸ್ತಾವೆ.
ನಾನು Gen Z ಗೊತ್ತಾ, ನಾವು ಕಟ್ಟಿದ ತೆರಿಗೆಯಲ್ಲಿ ನಿಮ್ಗೆ ಸಂಬಳ ಸಿಗೋದು!
ಹೀಗಂತ ಆಕೆ ಹೇಳಿದ್ದಾಳೆಂದಾದ್ರೆ, (Context ಏನು? ಈ ಸುದ್ದಿಯ ಲಿಂಕ್ ಕಾಮೆಂಟ್ ಸೆಕ್ಷನ್‌ನಲ್ಲಿ ಹಾಕಿದ್ದೇನೆ.) ಎಷ್ಟು ದಾರ್ಷ್ಟ್ಯ ಇರ್ಬೇಕು ಅವಳಿಗೆ! ದುಡ್ಡಿನ ಮದ - ತೆರಿಗೆ ಕಟ್ಟೋವಷ್ಟು ಇವ್ಳು ಇವತ್ತು ಸಂಪಾದನೆ ಮಾಡ್ತಿದ್ದಾಳೆ, ಬೇಕಾಬಿಟ್ಟಿ ದುಡ್ಡು ಖರ್ಚು ಮಾಡ್ತಾಳೆ, ಎಂಜಾಯ್ ಮಾಡ್ತಿದ್ದಾಳೆ, ಕಾರು ತಗೊಂಡು ನೆಮ್ಮದಿಯಿಂದ ಊರು ಸುತ್ತುತ್ತಾಳೆ ಎಂದಾದ್ರೆ, ಇದಕ್ಕೆ ಕಾರಣ ಇದೇ ದೇಶ ಕಾಯುವ ಸೈನಿಕರು. ಇವಕ್ಕೆ ಕಾರಿನ ಗಾಜು ಸರಿಸಿದಾಗ ಅಲ್ಲಿನ ಶೈತ್ಯಗಾಳಿಯ ಅನುಭವ ಆಗಿರ್ತದೆ, ಆದ್ರೆ ಇದೇ ಸೈನಿಕ, ಆ ಕೊರೆಯುವ ಚಳಿಯಲ್ಲಿ (ಮೈನಸ್ 13 ಡಿಗ್ರಿ) ಪ್ರತಿದಿನವೂ ನಿಂತು ದೇಶ ಕಾಯುತ್ತಿದ್ದಾನೆ. ಮಜಾ ಉಡಾಯ್ಸೋಕೆ ಬಂದು ಏನೇನೋ ಕೂಗಾಡ್ತಾವೆ, ಥುಪಕ್...
ಬಚ್ಚಾ ಬಚ್ಚಾಗಳಿಗಾದ್ರೂ ಒಂದಿಷ್ಟು ಬುದ್ಧಿ ಇರ್ತದೆ. ಸೈನಿಕರಿಗೆ ರೆಸ್ಪೆಕ್ಟ್ ಕೊಡ್ತಿರೋ ಪುಟಾಣಿಗಳನ್ನು ಕೂಡ ನೋಡಿದ್ದೇನೆ ನಾನು. ಆದ್ರೆ, ಇದು ನೋಡಿ... ನಮ್ಮ ಟ್ಯಾಕ್ಸ್‌ನಿಂದ ನಿಮ್ಮ ತೆರಿಗೆ ಅಂತ ಸೈನಿಕರಿಗೇ ಹೇಳ್ತಿದ್ದಾಳೆ... ಈ ಸೈನಿಕರೂ ತೆರಿಗೆ ಕಟ್ತಾರೆ ಅನ್ನೋ ಸಣ್ಣ ಕಾಮನ್ ಸೆನ್ಸ್ ಕೂಡ ಇವುಗಳಿಗೆ ಇಲ್ಲದಾಗಿ ಹೋಯಿತೇ?
ಸೈನಿಕರೂ ಪ್ರತಿ ವರ್ಷ, ಪ್ರತಿ ತಿಂಗಳು ತೆರಿಗೆ ಕಟ್ಟುತ್ತಾರೆ. ಸಂಬಳ ಬರುವುದೇ ತೆರಿಗೆ ಕಟ್ ಆಗಿಯೇ, ನಮ್ಮ-ನಿಮ್ಮಂತೆಯೇ. ಆದಾಯ ತೆರಿಗೆ, ಜಿಎಸ್ಟಿ, ಪರೋಕ್ಷ ತೆರಿಗೆ, ಆಸ್ತಿ ತೆರಿಗೆ, ಸ್ಥಳೀಯ ತೆರಿಗೆ - ಎಲ್ಲವನ್ನೂ ಸೈನಿಕರು ಕೂಡ ಪಾವತಿಸ್ತಾರೆ. ನಿಮ್ ತೆರಿಗೆಯಿಂದ ಅವರಿಗೆ ಸಂಬಳ ಬರ್ತಿದೆ ಅಂತ ನೀನು ಹೇಳ್ತಿರ್ಬೇಕಾದ್ರೆ, ಅವ್ರು ತೆರಿಗೆ ಮಾತ್ರವೇ ಅಲ್ಲ, ತಮ್ಮ ಜೀವವನ್ನೇ ದೇಶಕ್ಕೆ ಕೊಟ್ಟು ನಿನ್ನ ಬದುಕು ಸುಗಮವಾಗುವಂತೆ ನೋಡಿಕೊಳ್ತಿದ್ದಾರೆ ಅನ್ನೋ ಕಾಮನ್ ಸೆನ್ಸ್ ಕೂಡ ಇಲ್ಲದಾಯಿತೇ?
ಸೈನಿಕರಿಗೆ ಸಿಗುವ ರೇಶನ್ ಅಥವಾ ಸೇನಾ ಕ್ಯಾಂಟೀನ್‌ಗಳಲ್ಲಿ ಸಿಗುವ ರಿಯಾಯಿತಿಯೇ ನಿಮಗೆ ದೊಡ್ಡ ಸಮಸ್ಯೆಯೆಂದಾದರೆ, ತೆರಿಗೆ ರಿಟರ್ನ್ಸ್ ವೇಳೆ ಮೆನ್ಷನ್ ಮಾಡದೇ ಅವರು ತಮ್ಮ ಬದುಕಿನ ತೆರಿಗೆಯನ್ನು ಅಲ್ಲಿ ಕಟ್ಟಿಡುತ್ತಾರೆ ಅನ್ನುವ ಸತ್ಯ ಕೂಡ ಜೆನ್ ಝೀಗಳು ತಿಳಿದುಕೊಳ್ಳಬೇಕಾಗಿದೆ. ಹೋಗ್ಲಿ, ಮಕ್ಕಳು ಅಂತ ಬಿಡೋಣವೇ? ಉಫ್, 25 ವರ್ಷ ಅಂದ್ರೆ ಬದುಕಿನ ಮೂರನೇ ಒಂದು ಭಾಗ ದಾಟಿದೆ! ಇಷ್ಟಾದ್ರೂ ಬುದ್ಧಿ ಮಾತ್ರ, ಮಕ್ಕಳಿಗಿಂತ ಕಡೆ.
ಇದೇ ಸೈನಿಕರು ಗಡಿಯಲ್ಲಿ ನಮ್ಮ ರಕ್ಷಣೆಗಾಗಿ ನಿಂತುಕೊಂಡೇ ಕೆಲಸ ಮಾಡುತ್ತಿರುವ ವೇಳೆ, ತನ್ನ ಕುಟುಂಬದಿಂದ ದೂರವಿದ್ದುಕೊಂಡು ತನ್ನ ಯೌವನವನ್ನು, ಹಬ್ಬ ಹರಿದಿನಗಳ ಆಚರಣೆಯ ಸಂಭ್ರಮವನ್ನು, ತನ್ನ ಮಕ್ಕಳ ಬಾಲ್ಯವನ್ನು ನೋಡುವ ಆನಂದವನ್ನು, ಫೋನ್‌ನಲ್ಲಷ್ಟೇ ತನ್ನ ಮಕ್ಕಳು ಹೇಗೆ ಬೆಳೆಯುತ್ತಿದ್ದಾರೆಂಬುದನ್ನು ನೋಡುತ್ತಾ, ನೇರವಾಗಿ ನೋಡುವ ಖುಷಿಯನ್ನು, ತನ್ನ ಬದುಕನ್ನೇ ತೆರಿಗೆ ರೂಪದಲ್ಲಿ ನಿಮಗಾಗಿ, ನಮಗಾಗಿ ಕಟ್ಟುತ್ತಿದ್ದಾನೆ! ಧರಿಸಿರುವ ದಪ್ಪನೆಯ ಚಳಿಯುಡುಪು, ದೇಹದ ಹೊದಿಕೆ ಚರ್ಮವನ್ನು ದಾಟಿ ನೇರವಾಗಿ ಎಲುಬೇ ಕೊರೆಯುವಷ್ಟು ಚಳಿಯಲ್ಲಿಯೂ ತನ್ನ ಜೀವವೆಂಬ ತೆರಿಗೆಯನ್ನು ಕಟ್ಟುತ್ತಾ, ನಮ್ಮ-ನಿಮ್ಮೆಲ್ಲರನ್ನು ಶತ್ರುಗಳ ಕೈಯಿಂದ ರಕ್ಷಿಸುತ್ತಿದ್ದಾನೆ!
ವಿದ್ಯೆ ಕಲಿತರೆ ಸಾಲದು, ಬುದ್ಧಿಯೂ ಬಲಿಯಬೇಕು. ಪದವಿ ಪೂರ್ಣಗೊಳಿಸಿದ್ದೇನೆ, ಉದ್ಯೋಗಕ್ಕೆ ಸೆಲೆಕ್ಟ್ ಆಯ್ಕೆ ಆಗಿದ್ದೇನೆ ಎಂದಾದರೆ, ಬುದ್ಧಿ ಇರಲೇಬೇಕೆಂದಿಲ್ಲ. ಅದು ಆರ್ಜಿಸಿಕೊಳ್ಳಬೇಕು. ಸ್ಮಾರ್ಟ್ ಫೋನ್ ಇದೆ ಎಂದಾಕ್ಷಣ, ಯೋಚಿಸುವುದನ್ನೇ ನಿಲ್ಲಿಸಿಬಿಡಬಾರದು. ಹಾಗೆ ಮಾಡಿದರೆ ಡಾರ್ವಿನ್ನನ ವಿಕಾಸ ಸಿದ್ಧಾಂತದಂತೆ, ಮೆದುಳೇ ನಶಿಸುತ್ತದೆ! ಇಷ್ಟು ಹೇಳಬೇಕಾಗಿತ್ತು, ಹೇಳಿಬಿಟ್ಟೆ!
ಜೈ ಜವಾನ್!
Send a message to learn more