02/02/2025
#ಫೆಬ್ರುವರಿ- #೨ರಾಣಿ_ಚನ್ನಮ್ಮಾಜೀಯ_ಸ್ಮೃತಿ #ದಿವಸ
1824 ಅಕ್ಟೋಬರ್ 23 ರಂದು ಥ್ಯಾಕರೆಯ ತಲೆ ತೆಗೆದ ನಂತರ ಬ್ರಿಟಿಷರು ಹೆಡೆ ಮುಟ್ಟಿದ ನಾಗರ ಹಾವಿನಂತಾಗಿದ್ದರು.
ಬ್ರಿಟಿಷರು ದಕ್ಷಿಣ ಭಾರತದ ಎಲ್ಲ ಸಂಸ್ಥಾನಗಳನ್ನು ಕಿತ್ತೂರು ಸಂಸ್ಥಾನದಿಂದ ದೂರ ಸರಿಯುವಂತೆ ವಿಭಜಕ ನೀತಿಯನ್ನು ಅನುಸರಿಸಿ ಅವರೆಲ್ಲರನ್ನು ತಮ್ಮ ಬೆನ್ನಿಗೆ ನಿಲ್ಲುವಂತೆ ಮಾಡಿಕೊಂಡು ಸುಮಾರು 25000 ಸೈನಿಕರೊಡನೆ ಎರಡನೇ ಬಾರಿ ಕಿತ್ತೂರಿನ ಮೇಲೆ 1824 ನವೆಂಬರ್ 30ರಂದು ದಾಳಿಮಾಡಿದರು.
1824 ಡಿಸೆಂಬರ್ ನಾಲ್ಕರಂದು ಕಿತ್ತೂರಿನ ಗಡಾದ ಮರಡಿಯನ್ನು ಬ್ರಿಟಿಷ್‌ರು ವಶಪಡಿಸಿಕೊಂಡು.ಇದೇ ಸಂದರ್ಭದಲ್ಲಿ ಕಿತ್ತೂರಿನ ಪ್ರಮುಖ ಸೇನಾ ನಾಯಕರಾಗಿರುವ ಸರ್ದಾರ್ ಗುರುಸಿದ್ಧಪ್ಪ ,ಸಂಗೊಳ್ಳಿ ರಾಯಣ್ಣ ,ಬಿಚ್ಚುಗತ್ತಿ ಚನ್ನಬಸಪ್ಪರನ್ನು,ವಡ್ಡರ ಯಲ್ಲಣ ರನ್ನು ಗಡಾದ ಮರಡಿಯಲ್ಲಿ ಬಂಧಿಸಿ ಧಾರವಾಡದ ಸೆರೆಮನೆಗೆ ಸಾಗಿಸಿದರು.
5 ನೇ ತಾರೀಖಿನಂದು ಕಿತ್ತೂರು ಕೋಟೆಯನ್ನು ತಮ್ಮ ಕೈವಶ ಮಾಡಿಕೊಂಡು ಕಿತ್ತೂರು ಕೋಟೆ ಮೇಲೆ ಜಾಕ ಯುನಿಯನ್ ಧ್ವಜ ಹಾರಿಸಿದರು.
1824 ಡಿಸೆಂಬರ್ 6ರಿಂದ 12ನೇ ತಾರೀಖಿನವರೆಗೆ ಕಿತ್ತೂರು ಕೋಟೆಯನ್ನು ಒತ್ತಾಯ ಪೂರ್ವಕವಾಗಿ ಜಪ್ತ ಮಾಡಿದರು.ಈ ಸಂದರ್ಭದಲ್ಲಿ ಕೋಟೆಯಲ್ಲಿ ರಾಣಿ ಚೆನ್ನಮ್ಮ ಸೊಸೆಯಂದಿರಾದ ವೀರಮ್ಮ,ಜಾನಕಿಬಾಯಿ ಇದ್ದರು,ಅವರೆಲ್ಲರಿಂದ ಕಂದಾಯ ಇಲಾಖೆಯ ದಾಖಲೆಗಳಿಗೆ ಒತ್ತಾಯಪೂರ್ವಕವಾಗಿ ಸಹಿ ಪಡೆದರು.
ಆಗ ಬ್ರೀಟಿಷರಿಗೆ 16ಲಕ್ಷ ನಗದು ಮತ್ತು 4ಲಕ್ಷ ವಜ್ರಾಭರಣಗಳನ್ನು ಕೈವಶಮಾಡಿಕೊಂಡ ಕುರಿತು ದಾಖಲೆಗಳು ಹೇಳುತ್ತವೆ.
ಡಿಸೆಂಬರ್ 13ರಿಂದ ಬೈಲಹೊಂಗಲ ದಲ್ಲಿ ಚನ್ನಮ್ಮ ಮತ್ತು ಸೊಸೆಯಂದಿರಾದ ಜಾನಕಿಬಾಯಿ ಮತ್ತು ರಾಣಿ ವೀರಮ್ಮಳನ್ನು ಗೃಹಬಂಧನದಲ್ಲಿ ಇರಿಸಿ ವಾರ್ಷಿಕ rs.40000 ವರ್ಷಾಸನವನ್ನು ನಿಗದಿ ಮಾಡಿದ್ದರು.
ಚನ್ನಮ್ಮಾಜಿ ಗಂಡನನ್ನು ಕಳೆದುಕೊಂಡಾಗ 36ವರ್ಷ, ಸಂಸ್ಥಾನ ಕೈಬಿಟ್ಟಾಗ 48 ವರ್ಷ ,ಚೆನ್ನಮ್ಮಾಜಿ ಐದು ವರ್ಷಗಳ ಕಾಲ ಗೃಹ ಬಂಧನ ದ ನಂತರ 1829 ಫೆಬ್ರುವರಿ 2ರಂದು ವಯೋಸಹಜ ಮತ್ತು ಸಂಸ್ಥಾನ ಕೈಬಿಟ್ಟು ಹೋದ ಖಿನ್ನತೆಯಿಂದಾಗಿ ಚನ್ನಮ್ಮಾಜೀ ನಿಧನಹೊಂದಿದಳು.
1830 ಮೇ 20ರಂದು ಚನ್ನಮ್ಮಾಜೀ ಯ ಸೊಸೆ ಜಾನಕಿಬಾಯಿ ಗೃಹ ಬಂದನದಲ್ಲಿಯೇ ನಿಧನ ಹೊಂದುವಳು.
ತಮಗೆ ಸಿಗುತ್ತಿದ್ದ rs.40000 ವರ್ಷಾಸನ ದಲ್ಲಿ ಸ್ವಲ್ಪ ಹಣವನ್ನು ಮಾತ್ರ ಬಳಸಿಕೊಂಡು ಉಳಿದಿದ್ದನ್ನು ಬ್ರಿಟಿಷರ ವಿರುದ್ಧ ಲಡಾಯಿ ಕಟ್ಟಲು ದತ್ತಕಮಗನಾದ ಶಿವಬಸವರಾಜನಿಗೆ ರವಾನಿಸುತ್ತಿದ್ದರು.
1830 ಫೆಬ್ರುವರಿಯಲ್ಲಿ ಚೆನ್ನಮ್ಮಾಜಿಯ ಸೊಸೆಯಾದ ರಾಣಿ ವೀರಮ್ಮ ದತ್ತಕ ಮಗನಾಗಿರುವ ಸವಾಯಿ ಮಲ್ಲಸರ್ಜನಿಗೆ rs.455 ಮನಿಆರ್ಡರ್ ಮಾಡುವಳು.
ಆ ಮನಿಯಾರ್ಡರ್ ಪತ್ರ ಧಾರವಾಡದ ಜಿಲ್ಲಾಧಿಕಾರಿ ಬೇಬರನ ಕೈಗೆ ಸಿಗುವುದು. ಇದರಿಂದ ಆತಂಕಗೊಂಡ ಬ್ರಿಟಿಷ್ ಸರಕಾರ ಬೈಲಹೊಂಗಲದ ಗೃಹ ಬಂಧನದಲ್ಲಿರುವ ಚೆನ್ನಮ್ಮಾಜಿಯ ಸೊಸೆ ರಾಣಿ ವೀರಮ್ಮಾ ನನ್ನು ಬೈಲಹೊಂಗಲದಿಂದ ಧಾರವಾಡ, ಧಾರವಾಡ ದಿಂದ ಕುಸುಗಲ್ ನ ಸಂಬಂದಿಕರ ಮನೆಗೆ ವರ್ಗಾಯಿಸಿ ಕಠಿಣ ಕಾವಲು ಇರಿಸುವರು.
ವೀರಮ್ಮನನ್ನು ಖಾನ ದೇಶದ ಮಾಲೆಗಾವ್ ಗೆ ವರ್ಗಾವಣೆ ಮಾಡುವ ಕುರಿತು ಅಂದಿನ ಧಾರವಾಡದ ಜಿಲ್ಲಾಧಿಕಾರಿ ಬಾಂಬೆ ಸರ್ಕಾರದ ಜೊತೆಗೆ ಪತ್ರವ್ಯವಹಾರವನ್ನು ಮಾಡಿರುವ ದಾಖಲೆಗಳು ಇವತ್ತಿಗೂ ಸಿಗುತ್ತವೆ.
ವೀರಮ್ಮನನ್ನು ವರ್ಗಾವಣೆ ಮಾಡುವಂತಹ ಸಂದರ್ಭದಲ್ಲಿ ಸಂಗೊಳ್ಳಿರಾಯಣ್ಣ ಮತ್ತು ಅವರ ತಂಡ ದಾಳಿ ಮಾಡುವ ಆತಂಕ ಬ್ರಿಟಿಷ್ ಸರ್ಕಾರಕ್ಕೆ ಇತ್ತು .
ವೀರಮ್ಮ ಅನಾರೋಗ್ಯ ಪೀಡಿತನಾದ ಕಾರಣ ಕುಸಗಲ್ ನಿಂದ ಧಾರವಾಡದ ಉಳವಿಚನ್ನಬಸವೇಶ್ವರ ದೇವಸ್ಥಾನ ದ ಹತ್ತಿರ ಸಂಬಂದಿಕರ ಮನೆಗೆ ಕರೆ ತಂದು ಧಾರವಾಡ ಜಿಲ್ಲಾಧಿಕಾರಿ ಬೇಬರ ವೀರಮ್ಮನಿಗೆ ನೀಡುವ ಹಾಲಿನಲ್ಲಿ ನಿಧಾನವಿಷ ಗುಳಿಗೆಯನ್ನು ಮೀಶ್ರಣ ಮಾಡಿದ ಕಾರಣ ನಿಧನಳಾದಳು ಏಂದು ಲಾವಣಿ ಪದಗಳು ಹೇಳುತ್ತವೆ.
ಈ ಕಾರಣಕ್ಕೆ 1830 ಜುಲೈ 15ರಂದು ರಾಣಿ ವೀರಮ್ಮ ನಿಧನ ಹೊಂದಿದಳು. ಕಿತ್ತೂರು ಸಂಸ್ಥಾನದ ಕೊನೆಯ ರಾಣಿ ವೀರಮ್ಮನ ಅಧ್ಯಾಯವು ಇಲ್ಲಿಗೆ ಮುಕ್ತಾಯವಾಯಿತು.
ನಂತರದಲ್ಲಿ 1831ರಿಂದ ದತ್ತಕ ಮಗನಾಗಿರುವ ಸವಾಯಿ ಮಲ್ಲಸರ್ಜ ಬ್ರಿಟಿಷರೂಡನೆ ಲಡಾಯಿಯನ್ನು 1857 ರ ವರೆಗೆ ಮುಂದುವರೆಸಿದನು.
1857 ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ದತ್ತಕ ಮಗನನ್ನು ಬ್ರಿಟಿಷರು ಸೆರೆಹಿಡಿದರು ಎಂಬುದು ಮಾಹಿತಿಗಳು ಸಿಗುತ್ತದೆ.
ಇಲ್ಲಿಗೆ 1585 ರಿಂದ ಪ್ರಾರಂಭವಾದ ಕಿತ್ತೂರ ರಾಜಮನೆತನ 1857ರಲ್ಲಿ ಶಾಶ್ವತವಾಗಿ ಅಂತ್ಯವಾಗುವುದು.ಆದರೆ ಕಿತ್ತೂರ ಸಂಸ್ಥಾನ ಬ್ರೀಟಿಷರ ವಿರುದ್ಧ ತೋರಿದ ಧೈರ್ಯ, ಸಾಹಸ,ದೇಶಪ್ರೇಮ ಇತಿಹಾಸದಲ್ಲಿ ಶಾಶ್ವತವಾಗಿ ನೆಲೆ ನಿಂತಿವೆ.
ಲೇಖನ:ಮಹೇಶ ನೀಲಕಂಠ ಚನ್ನಂಗಿ.
ಮುಖ್ಯ ಶಿಕ್ಷಕರು.
ಚನ್ನಮ್ಮನ ಕಿತ್ತೂರ.
೯೭೪೦೩೧೩೮೨೦.