04/09/2025
ಕೋಲಾರ ಮೂಲದ ಮಾಡೆಲ್ ಹಾಗೂ ಬಾಡಿ ಬಿಲ್ಡರ್ ಸುರೇಶ್ ಕುಮಾರ್ ಅಮೆರಿಕದಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಕನ್ನಡ ಚಿತ್ರರಂಗದ ಹಲವು ನಟ-ನಟಿಯರಿಗೆ ದೈಹಿಕ ತರಬೇತಿ ನೀಡಿದ್ದ ಸುರೇಶ್, ಕುಟುಂಬದೊಂದಿಗೆ ಅಮೆರಿಕದಲ್ಲಿ ನೆಲೆಸಿದ್ದರು.
ಕೋಲಾರ: ಕೋಲಾರ ಜಿಲ್ಲೆಯ ಗಾಂಧಿನಗರ ಬಡಾವಣೆಯ ಮೂಲದ ಮಾಡೆಲ್ ಹಾಗೂ ಬಾಡಿ ಬಿಲ್ಡರ್ ಸುರೇಶ್ ಕುಮಾರ್ (42) ಅಮೆರಿಕಾದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಮೂರು ದಿನಗಳ ಹಿಂದೆ ಅಮೆರಿಕಾದ ಫ್ಲೋರಿಡಾ ರಾಜ್ಯದ ಟೆಕ್ಸಾಸ್ ನಗರದಲ್ಲಿ ಈ ದುರ್ಘಟನೆ ಸಂಭವಿಸಿತ್ತು. ಕಾರು ಡಿಕ್ಕಿಯಿಂದ ತೀವ್ರ ಗಾಯಗೊಂಡಿದ್ದ ಸುರೇಶ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟರು. ಸುರೇಶ್ ಕುಮಾರ್ ಅವರು ಗಾಂಧಿನಗರದ ಚಲಪತಿ ಮತ್ತು ಮುನಿಯಮ್ಮ ದಂಪತಿಯ ಪುತ್ರರಾಗಿದ್ದರು. ಬಾಲ್ಯದಿಂದಲೇ ಕ್ರೀಡೆ ಹಾಗೂ ದೈಹಿಕ ಕ್ಷಮತೆ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದ ಅವರು ಬಳಿಕ ಬಾಡಿ ಬಿಲ್ಡಿಂಗ್ ಕ್ಷೇತ್ರಕ್ಕೆ ಕಾಲಿಟ್ಟರು. ತಮ್ಮ ಪರಿಶ್ರಮ ಮತ್ತು ಸಾಮರ್ಥ್ಯದ ಆಧಾರದ ಮೇಲೆ ಮಾಡೆಲಿಂಗ್ ಕ್ಷೇತ್ರದಲ್ಲೂ ಗುರುತಿಸಿಕೊಂಡಿದ್ದರು.
ಕನ್ನಡದ ಹಲವಾರು ನಟ–ನಟಿಯರಿಗೆ ದೈಹಿಕ ತರಬೇತಿ ನೀಡಿ, ಫಿಟ್ನೆಸ್ ಜಗತ್ತಿನಲ್ಲಿ ಉತ್ತಮ ಹೆಸರು ಗಳಿಸಿದ್ದರು. ಹೀಗೆ ತಮ್ಮ ಪ್ರತಿಭೆ ಹಾಗೂ ಪರಿಶ್ರಮದಿಂದ ಕನ್ನಡ ಮನರಂಜನಾ ಕ್ಷೇತ್ರಕ್ಕೂ ಕೊಡುಗೆ ನೀಡಿದ್ದರು. ಅವರು ದೆಹಲಿ ಮೂಲದ ಯುವತಿಯನ್ನು ಪ್ರೀತಿಸಿ ವಿವಾಹವಾಗಿದ್ದರು. ಕುಟುಂಬದೊಂದಿಗೆ ಅಮೆರಿಕಾದಲ್ಲಿ ನೆಲೆಸಿದ್ದ ಅವರು ಮಾಡೆಲಿಂಗ್ ಮತ್ತು ಫಿಟ್ನೆಸ್ ತರಬೇತಿಯನ್ನೇ ವೃತ್ತಿಯಾಗಿ ಮಾಡಿಕೊಂಡಿದ್ದರು.
ಆದರೆ ಅಕಾಲಿಕ ಸಾವಿನಿಂದ ಕುಟುಂಬದವರು, ಸ್ನೇಹಿತರು ಹಾಗೂ ಅಭಿಮಾನಿಗಳು ತೀವ್ರ ಶೋಕದಲ್ಲಿದ್ದಾರೆ. ಕೋಲಾರ ಮೂಲದ ಪ್ರತಿಭಾವಂತ ಯುವಕ ಅಮೆರಿಕಾದಲ್ಲಿ ಇಂತಹ ದುರಂತಕ್ಕೆ ಗುರಿಯಾದ ಸುದ್ದಿ ಜಿಲ್ಲೆಯಾದ್ಯಂತ ಶೋಕ ವಾತಾವರಣ ನಿರ್ಮಿಸಿದೆ.