03/07/2025
ವೈದ್ಯನಾ ತಪ್ಪಿನಿಂದ 12 ವರ್ಷದ ಬಾಲಕನಿಗೆ ಕೈ ನಷ್ಟ
: ಕೆಜಿಎಫ್ ಸರ್ಕಾರಿ ಆಸ್ಪತ್ರೆಯ ಡಾ|| ಸುರೇಶ್ ಕುಮಾರ್ ವಿರುದ್ಧ ಪ್ರತಿಭಟನೆ
ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನಲ್ಲಿ ಮನುಷ್ಯತೆಯನ್ನು ಕದಲಿಸುವ ಘಟನೆ ನಡೆದಿದೆ. 12 ವರ್ಷದ ವಿದ್ಯಾರ್ಥಿ ಜಗದೀಶ್ ಬಿನ್ ವೆಂಕಟಪ್ಪ, ಆಟವಾಡುವ ವೇಳೆ ಕೈ ಮೇಲೆ ಅಲೋಬ್ಲಾಕ್ ಕಲ್ಲು ಬಿದ್ದ ಪರಿಣಾಮ ಗಾಯಗೊಂಡು, ತಕ್ಷಣವೇ ಕೆಜಿಎಫ್ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು.
ಆಸ್ಪತ್ರೆಯ ವೈದ್ಯ ಡಾ. ಸುರೇಶ್ ಕುಮಾರ್ ಅವರು ಪ್ರಾಥಮಿಕ ಚಿಕಿತ್ಸೆ ನೀಡಿ ರೂ.30,000 ಹಣ ಪಡೆದು ಶಸ್ತ್ರಚಿಕಿತ್ಸೆ ನಡೆಸಿದರೂ, ಅದು ಸರಿಯಾದ ರೀತಿಯಲ್ಲಿ ನಡೆಯದೇ, ತಕ್ಷಣ ಜಿಲ್ಲಾ ಆಸ್ಪತ್ರೆಗೆ ಹಾಗೂ ನಂತರ ಬೆಂಗಳೂರು ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ ಪ್ರಾಥಮಿಕ ಹಂತದಲ್ಲೇ ತಪ್ಪಾದ ಶಸ್ತ್ರ ಚಿಕಿತ್ಸೆಯಿಂದ ಬಾಲಕನ ಕೈ ಸಂಪೂರ್ಣವಾಗಿ ನಷ್ಟವಾಗಿದೆ. ವೈದ್ಯಕೀಯ ನಿರ್ಲಕ್ಷ್ಯದಿಂದಾಗಿ ಈಗ ಬಾಲಕ ತನ್ನ ಉಜ್ವಲ ಭವಿಷ್ಯವನ್ನೇ ಕಳೆದುಕೊಂಡಿದ್ದಾನೆ.
ಈ ವಿಷಯ ತಿಳಿದ ದಲಿತ ಪರ ಸಂಘಟನೆಗಳ ಮುಖಂಡರು ಆಕ್ರೋಶ ವ್ಯಕ್ತಪಡಿಸಿ, ಕೆಜಿಎಫ್ ಸಾರ್ವಜನಿಕ ಆಸ್ಪತ್ರೆಯ ಮುಂಭಾಗದಲ್ಲಿ ಭಾರೀ ಪ್ರತಿಭಟನೆ ನಡೆಸಿದ್ದಾರೆ. ಬಿಸಿಲು, ಮಳೆ ಎನ್ನದೇ ನೂರಾರು ಜನ ವಿದ್ಯಾರ್ಥಿ ಜಗದೀಶ್‌ಗೆ ನ್ಯಾಯ ಒದಗಿಸಬೇಕೆಂದು ಧರಣಿ ನಡೆಸುತ್ತಿದ್ದಾರೆ.
ಪ್ರಮುಖ ಬೇಡಿಕೆಗಳು:
ವೈದ್ಯ ಡಾ. ಸುರೇಶ್ ಕುಮಾರ್ ವಿರುದ್ಧ ಕಠಿಣ ಕಾನೂನು ಕ್ರಮ
ಕುಟುಂಬಕ್ಕೆ ಸರ್ಕಾರದಿಂದ ಹೆಚ್ಚಿನ ಪರಿಹಾರ
ವಿದ್ಯಾರ್ಥಿಗೆ ಉತ್ತಮ ತಜ್ಞರಿಂದ ಮುಂದಿನ ಚಿಕಿತ್ಸೆ
ಈ ಹೀನಕೃತ್ಯಕ್ಕೆ ಆರೋಗ್ಯ ಇಲಾಖೆ ಸ್ಪಂದನೆ ನೀಡಬೇಕಿದೆ. ಇಂತಹ ವೈದ್ಯಕೀಯ ತಪ್ಪುಗಳು ಪುನರಾವೃತ್ತಿಯಾಗದಂತೆ ತಕ್ಷಣ ಕ್ರಮ ಕೈಗೊಳ್ಳುವುದು ಅವಶ್ಯಕ.