VISMAYA24x7

VISMAYA24x7 VISMAYA 24x7 is a leading Kannada news portal and television channel in Karnataka, India

12/08/2026

ತಾಯಿ, ಮಗಳು ನಾಪತ್ತೆ.!
ಸುಳಿವು ಸಿಕ್ಕರೆ ಮಾಹಿತಿ ನೀಡುವಂತೆ ಪ್ರಕಟಣೆ

ಖ್ಯಾತ ಉದ್ಯಮಿಗಳಾದ ಪದ್ಮಶ್ರೀ ಡಾ|| ವಿಜಯ ಸಂಕೇಶ್ವರ್ ದಂಪತಿಗಳಿಂದ ಶ್ರೀಕರಾರ್ಚಿತ ರಾಮಪೂಜೆ, ಗೋಪೂಜೆಗೋಕರ್ಣ:ಉಪವಾಸ ಸರಿಯಾಗಿ ಮಾಡಿದಾಗ ನಿಶ್ಯಕ...
11/08/2026

ಖ್ಯಾತ ಉದ್ಯಮಿಗಳಾದ ಪದ್ಮಶ್ರೀ ಡಾ|| ವಿಜಯ ಸಂಕೇಶ್ವರ್ ದಂಪತಿಗಳಿಂದ ಶ್ರೀಕರಾರ್ಚಿತ ರಾಮಪೂಜೆ, ಗೋಪೂಜೆ

ಗೋಕರ್ಣ:ಉಪವಾಸ ಸರಿಯಾಗಿ ಮಾಡಿದಾಗ ನಿಶ್ಯಕ್ತಿಯಾಗುವುದಲ್ಲ. ಅದು ಬಲವೃದ್ಧಿಗೆ ಸಹಕಾರಿ. ಉಪವಾಸದಿಂದ ದೇಹ ಮತ್ತು ಮನಸ್ಸು ಹಗುರವಾಗುತ್ತದೆ. ಹೃದಯದಲ್ಲಿ ಶುದ್ಧತೆ, ದೇಹದಿಂದ ಬೇಡವಾದ ಅಂಶಗಳ ನಿರ್ಗಮನ, ಬಾಯಿ-ಗಂಟಲುಗಳ ಶುದ್ಧತೆ, ಹಿತವಾದ ಹಸಿವು ಮುಂತಾದವುಗಳು ಸರಿಯಾಗಿ ಉಪವಾಸವನ್ನು ನಡೆಸಿದಾಗ ಸಿಗುವ ಪ್ರಯೋಜನಗಳಾಗಿವೆ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ತಿಳಿಸಿದರು.

ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ 'ಅನ್ನಬ್ರಹ್ಮ ಚಾತುರ್ಮಾಸ್ಯ'ದ ಧರ್ಮಸಭೆಯಲ್ಲಿ 11.08.2026 ರಂದು 'ಅನ್ನಂ ಬ್ರಹ್ಮ' ಮಾಲಿಕೆಯಲ್ಲಿ 'ಉಪವಾಸ'ದ ಕುರಿತಾಗಿ ಪ್ರವಚನ ಅನುಗ್ರಹಿಸಿದ ಶ್ರೀಗಳು, ಉಪವಾಸದಲ್ಲಿ ಹಲವಾರು ವಿಧಗಳಿದ್ದು, ನಾವು ಯಾವುದಾದರೂ ವಿಷಯದಲ್ಲಿ ತಲ್ಲೀನರಾದಾಗ ನಡೆಯುವ ಉಪವಾಸ ಒಂದು ರೀತಿಯಾದರೆ, ಧರ್ಮಶಾಸ್ತ್ರದ ಪ್ರಕಾರ ಮೂರು ರೀತಿಯ ಉಪವಾಸಗಳಿದ್ದು, ದಿನದಲ್ಲಿ ಎರಡು ಹೊತ್ತು ಮಾತ್ರ ಊಟ ಮಾಡಿ, ನಡುವೆ ಯಾವುದೇ ಆಹಾರ ಸ್ವೀಕರಿಸದಿರುವುದು ನಿತ್ಯೋಪವಾಸ ಎನಿಸಿಕೊಂಡರೆ, ಏಕಾದಶಿ, ಶಿವರಾತ್ರಿಗಳಲ್ಲಿ ಮಾಡುವ ಉಪವಾಸವು ವ್ರತೋಪವಾಸ ಹಾಗೂ ಕೃಚ್ಛ್ರ ಎಂಬ ಉಪವಾಸ ವಿಧಿಯು ಪಾಪವನ್ನು ತೊಳೆದುಕೊಳ್ಳುವ ವಿಧವಾಗಿದ್ದು, ಶಾಸ್ತ್ರಗಳಲ್ಲಿ ಅನೇಕ ವಿಧವಾದ ಕೃಚ್ಛ್ರ ಉಪವಾಸವನ್ನು ಸೂಚಿಸಲಾಗಿದ್ದು, ಬೇರೆಬೇರೆ ಪಾಪಗಳನ್ನು ತೊಳೆದುಕೊಳ್ಳಲು ಇರುವ ಪ್ರಾಯಶ್ಚಿತ್ತ ಉಪವಾಸಗಳು ಇವಾಗಿವೆ ಎಂದರು.

ಆಯುರ್ವೇದ ಶಾಸ್ತ್ರವೂ ಉಪವಾಸವನ್ನು ಹೇಳಿದ್ದು, ಊಟವನ್ನು ಸರಿಯಾಗಿ ಮಾಡಿದರೆ ಹಲವು ರೋಗಗಳ ಪರಿಹಾರ. ಊಟದಿಂದ ಪರಿಹಾರವಾಗದಿರುವುದು ಉಪವಾಸದಿಂದ ಪರಿಹಾರ ಮಾಡಿಕೊಳ್ಳಲು ಸಾಧ್ಯ ಮತ್ತು ಊಟ ಹಾಗೂ ಉಪವಾಸ ಎರಡರಲ್ಲಿಯೂ ಪರಿಹಾರವಾಗದಿರುವುದಕ್ಕೆ ಮಾತ್ರ ಆಯುರ್ವೇದ ಔಷಧವನ್ನು ಸೂಚಿಸುತ್ತದೆ ಎಂದರು.

ತಪ್ಪಾದ ರೀತಿಯಲ್ಲಿ ಅಥವಾ ಅತಿಯಾಗಿ ಉಪವಾಸವನ್ನು ಮಾಡಿದರೆ ಸಂಧಿನೋವು, ದೇಹದ ದುರ್ಬಲತೆ, ಬಾಯಾರಿಕೆ, ಹಸಿವಿನ ನಾಶ, ರುಚಿ ಕಡಿಮೆಯಾಗುವುದು, ಮಾನಸಿಕ ಅಸಮತೋಲನ ಮುಂತಾದ ಸಮಸ್ಯೆಗಳು ಉಂಟಾಗಬಹುದು. ಆದ್ದರಿಂದ ವೈದ್ಯರ ಸಲಹೆ ಇಲ್ಲದೆ ಚಿಕಿತ್ಸೆಯ ಉದ್ದೇಶದಿಂದ ಉಪವಾಸ ಮಾಡಬಾರದು ಹಾಗೂ ಧಾರ್ಮಿಕ ಉಪವಾಸಗಳನ್ನೂ ಕೂಡ ಸರಿಯಾದ ಮಾರ್ಗದರ್ಶನದೊಂದಿಗೆ ಮಾಡಬೇಕು. ಗರ್ಭಿಣಿಯರು, ಮಕ್ಕಳು, ವೃದ್ಧರು, ದುರ್ಬಲರು, ಅತಿಹಸಿವು ಅಥವಾ ಬಾಯಾರಿಕೆ ಇರುವವರು ಮತ್ತು ಕೆಲವು ಕಾಯಿಲೆಗಳಿರುವವರು ಸ್ವಯಂಪ್ರೇರಿತವಾಗಿ ಉಪವಾಸ ಮಾಡಬಾರದು ಎಂದು ಎಚ್ಚರಿಸಿದರು.

ಆಹಾರ ಮತ್ತು ಉಪವಾಸ ಎರಡೂ ದೇಹದ ಸಹಜ ಪ್ರಕ್ರಿಯೆ, ಆಯುರ್ವೇದ, ಆಧ್ಯಾತ್ಮಿಕತೆ ಮತ್ತು ಸರಿಯಾದ ಜ್ಞಾನವನ್ನು ಗಮನದಲ್ಲಿಟ್ಟುಕೊಂಡು ನಡೆಸಬೇಕು. ಊಟವಾಗಲಿ, ಉಪವಾಸವಾಗಲಿ ಜ್ಞಾನಪೂರ್ವಕವಾಗಿ ಮತ್ತು ಸರಿಯಾದ ಮಾರ್ಗದರ್ಶನದೊಂದಿಗೆ ಮಾಡಬೇಕು. ಸರಿಯಾದ ಆಹಾರ ಮತ್ತು ಉಪವಾಸಗಳು ಆರೋಗ್ಯ ಮತ್ತು ಆಧ್ಯಾತ್ಮಿಕ ಪ್ರಗತಿಗೆ ಸಹಾಯಕ. ಆದರೆ ಜ್ಞಾನವಿಲ್ಲದೆ ಮಾಡಿದರೆ ಎರಡೂ ಹಾನಿಕರವಾಗಬಹುದು ಎಂದು ಅಭಿಪ್ರಾಯಪಟ್ಟರು.

ಖ್ಯಾತ ಉದ್ಯಮಿಗಳಾದ ಪದ್ಮಶ್ರೀ ಡಾ|| ವಿಜಯ ಸಂಕೇಶ್ವರ್ ದಂಪತಿಗಳು ಶ್ರೀಕರಾರ್ಚಿತ ರಾಮಪೂಜೆ, ಗೋಪೂಜೆಗಳಲ್ಲಿ ಭಾಗವಹಿಸಿ, ಶ್ರೀಗಳನ್ನು ಭೇಟಿಯಾಗಿ ಆಶೀರ್ವಾದ ಪಡೆದರು.

ಸಿದ್ದಾಪುರ ಹವ್ಯಕ ಮಂಡಲದ ಭಾನ್ಕುಳಿ, ಇಟಗಿ, ದೊಡ್ಮನೆ, ಚಪ್ಪರಮನೆ, ತಾಳಗುಪ್ಪಇಡುವಾಣಿ ವಲಯಗಳ ಪರವಾಗಿ ಬಿ.ಎಸ್.ಮಂಜುನಾಥ ಶರ್ಮಾ ದಂಪತಿಗಳು ಗುರುಭಿಕ್ಷಾ ಸೇವೆ ನೆರವೇರಿಸಿದರು. ಕೆ. ಎನ್. ಮಂಜುನಾಥ ಭಟ್, ಶಾಂತಾರಾಮ ಹಿರೇಮನೆ, ಜಯಂತಿ ಹೆಗಡೆ, ರಾಘವೇಂದ್ರ ಹೆಗಡೆ ಮುಸವಳ್ಳಿ, ದಿನ ಪ್ರಧಾನರಾಗಿ ರಾಧಾಕೃಷ್ಣ ಭಟ್ ದಂಪತಿಗಳು ಉಪಸ್ಥಿತರಿದ್ದರು.

#ಚಾತುರ್ಮಾಸ್ಯ

ಅಡಿಕೆ ತೋಟ ವಿಸ್ತಾರ : ಇಳುವರಿ ಮಾತ್ರ ಭಾರೀ ಕುಸಿತ: ಕಾರಣವೇನು? ನಿಮ್ಮ ಅಭಿಪ್ರಾಯ ತಿಳಿಸಿ“ಅಡಿಕೆ ತೋಟಗಳು ಹೆಚ್ಚಾಗುತ್ತಿವೆ... ಆದರೆ ಅಡಿಕೆ ಕ...
11/08/2026

ಅಡಿಕೆ ತೋಟ ವಿಸ್ತಾರ : ಇಳುವರಿ ಮಾತ್ರ ಭಾರೀ ಕುಸಿತ: ಕಾರಣವೇನು? ನಿಮ್ಮ ಅಭಿಪ್ರಾಯ ತಿಳಿಸಿ

“ಅಡಿಕೆ ತೋಟಗಳು ಹೆಚ್ಚಾಗುತ್ತಿವೆ... ಆದರೆ ಅಡಿಕೆ ಕಾಯಿ ಮಾತ್ರ ಕಡಿಮೆಯಾಗುತ್ತಿದೆ! ಕಳೆದ ಐದು ವರ್ಷಗಳಲ್ಲಿ ಕರ್ನಾಟಕದಲ್ಲಿ ಅಡಿಕೆ ಬೆಳೆಯುವ ಪ್ರದೇಶ ಬರೋಬ್ಬರಿ 1.95 ಲಕ್ಷ ಹೆಕ್ಟೇರ್ ಹೆಚ್ಚಾಗಿದೆ. ಆದರೆ ರೈತನ ಕೈಗೆ ಸೇರುವ ಫಸಲು ಮಾತ್ರ ಶೇ.37ರಷ್ಟು ಕುಸಿದಿದೆ. ಅಡಿಕೆಯ ನಾಡಿನಲ್ಲಿ ನಿಜಕ್ಕೂ ಏನಾಗುತ್ತಿದೆ?”

ಕರ್ನಾಟಕದ ಅಡಿಕೆ ಬೆಳೆಗಾರರಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಮಂಡಿಸಿರುವ ಅಂಕಿಅಂಶಗಳು ಆತಂಕಕಾರಿ ಬೆಳವಣಿಗೆಯೊಂದನ್ನು ಬಹಿರಂಗಪಡಿಸಿವೆ. ರಾಜ್ಯದಲ್ಲಿ ಅಡಿಕೆ ಬೆಳೆಯುವ ಪ್ರದೇಶ ಕಳೆದ ಐದು ವರ್ಷಗಳಲ್ಲಿ ಶೇ.32ಕ್ಕೂ ಹೆಚ್ಚು ವಿಸ್ತರಣೆಯಾಗಿದ್ದರೂ, ಪ್ರತಿ ಹೆಕ್ಟೇರ್‌ಗೆ ದೊರೆಯುವ ಉತ್ಪಾದಕತೆ ಬರೋಬ್ಬರಿ ಶೇ.37ರಷ್ಟು ಕುಸಿದಿದೆ.

ಅಡಿಕೆ ಬೆಳೆ ಪ್ರದೇಶ ಹೆಚ್ಚುತ್ತಿದೆ... ಆದರೆ ಅದೇ ಪ್ರಮಾಣದಲ್ಲಿ ಫಸಲು ಸಿಗುತ್ತಿಲ್ಲ. ಪರಿಣಾಮ, ರಾಜ್ಯದ ಒಟ್ಟಾರೆ ಅಡಿಕೆ ಉತ್ಪಾದನೆಯೂ ಐದು ವರ್ಷಗಳ ಹಿಂದಿನ ಮಟ್ಟಕ್ಕಿಂತ ಕಡಿಮೆಯಾಗಿದೆ.

1.95 ಲಕ್ಷ ಹೆಕ್ಟೇರ್ ಹೆಚ್ಚಾದ ಅಡಿಕೆ ಪ್ರದೇಶ

2021-22ರಲ್ಲಿ ಕರ್ನಾಟಕದಲ್ಲಿ 6,03,121 ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತಿತ್ತು. 2025-26ರ ಎರಡನೇ ಮುಂಗಡ ಅಂದಾಜಿನ ವೇಳೆಗೆ ಈ ಪ್ರಮಾಣ 7,98,677 ಹೆಕ್ಟೇರ್‌ಗೆ ಏರಿಕೆಯಾಗಿದೆ.

ಅಂದರೆ ಕೇವಲ ಐದು ವರ್ಷಗಳ ಅವಧಿಯಲ್ಲಿ ಸುಮಾರು 1.95 ಲಕ್ಷ ಹೆಕ್ಟೇರ್ ಪ್ರದೇಶ ಅಡಿಕೆ ಬೆಳೆಗೆ ಸೇರ್ಪಡೆಯಾಗಿದೆ. ಒಟ್ಟಾರೆ ಅಡಿಕೆ ಬೆಳೆಯುವ ಪ್ರದೇಶದಲ್ಲಿ ಶೇ.32ಕ್ಕೂ ಹೆಚ್ಚು ಏರಿಕೆ ದಾಖಲಾಗಿದೆ. ಆದರೆ ಅಚ್ಚರಿ ಮೂಡಿಸುವ ಸಂಗತಿ ಎಂದರೆ, ಬೆಳೆ ಪ್ರದೇಶ ಹೆಚ್ಚಾದರೂ ಉತ್ಪಾದಕತೆ ಮಾತ್ರ ಗಣನೀಯವಾಗಿ ಕುಸಿದಿದೆ.

2021-22ರಲ್ಲಿ ಪ್ರತಿ ಹೆಕ್ಟೇರ್‌ಗೆ ಸರಾಸರಿ 2.24 ಟನ್ ಅಡಿಕೆ ಉತ್ಪಾದನೆಯಾಗುತ್ತಿದ್ದರೆ, 2025-26ರ ಅಂದಾಜಿನಲ್ಲಿ ಅದು ಕೇವಲ 1.42 ಟನ್‌ಗೆ ಇಳಿದಿದೆ. ಅಂದರೆ ಪ್ರತಿ ಹೆಕ್ಟೇರ್ ಉತ್ಪಾದಕತೆಯಲ್ಲಿ ಸುಮಾರು ಶೇ.37ರಷ್ಟು ಕುಸಿತ ಕಂಡುಬಂದಿದೆ.

5 ವರ್ಷಗಳಲ್ಲಿ ಅಡಿಕೆ ಉತ್ಪಾದನೆ ಶೇ.16ರಷ್ಟು ಇಳಿಕೆ

ಉತ್ಪಾದಕತೆಯ ಕುಸಿತದ ನೇರ ಪರಿಣಾಮ ರಾಜ್ಯದ ಒಟ್ಟಾರೆ ಅಡಿಕೆ ಉತ್ಪಾದನೆಯ ಮೇಲೂ ಬಿದ್ದಿದೆ. 2021-22ರಲ್ಲಿ ಕರ್ನಾಟಕದಲ್ಲಿ ಸುಮಾರು 13.5 ಲಕ್ಷ ಟನ್ ಅಡಿಕೆ ಉತ್ಪಾದನೆಯಾಗಿತ್ತು. 2022-23ರಲ್ಲಿ ಇದು 10.2 ಲಕ್ಷ ಟನ್‌ಗೆ ಕುಸಿಯಿತು. ನಂತರ ಉತ್ಪಾದನೆಯಲ್ಲಿ ನಿಧಾನವಾಗಿ ಚೇತರಿಕೆ ಕಂಡುಬಂದರೂ, 2025-26ರ ಎರಡನೇ ಮುಂಗಡ ಅಂದಾಜಿನ ಪ್ರಕಾರ ಉತ್ಪಾದನೆ 11.3 ಲಕ್ಷ ಟನ್ ಆಸುಪಾಸಿನಲ್ಲಿದೆ. ಹೀಗಾಗಿ ಐದು ವರ್ಷಗಳ ಹಿಂದಿನ ಉತ್ಪಾದನೆಗೆ ಹೋಲಿಸಿದರೆ ಈಗಲೂ ರಾಜ್ಯದ ಅಡಿಕೆ ಉತ್ಪಾದನೆ ಸುಮಾರು ಶೇ.16ರಷ್ಟು ಕಡಿಮೆಯಾಗಿದೆ.

ಈ ಅಂಕಿಅಂಶಗಳನ್ನು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವ ರಾಮನಾಥ್ ಠಾಕೂರ್ ಅವರು ಲೋಕಸಭೆಯಲ್ಲಿ ಲಿಖಿತ ಉತ್ತರದ ಮೂಲಕ ನೀಡಿದ್ದಾರೆ. ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಅವರು ಕೇಳಿದ್ದ ಪ್ರಶ್ನೆಗೆ ಸಚಿವರು ಈ ಮಾಹಿತಿಯನ್ನು ನೀಡಿದ್ದಾರೆ.

ಕರಾವಳಿ ಜಿಲ್ಲೆಗಳಲ್ಲೂ ಇದೇ ಕಥೆ

ಅಡಿಕೆ ಬೆಳೆಯ ಪ್ರಮುಖ ಪ್ರದೇಶಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲೂ ಉತ್ಪಾದಕತೆ ಕುಸಿತ ದಾಖಲಾಗಿದೆ. ದಕ್ಷಿಣ ಕನ್ನಡದಲ್ಲಿ ಅಡಿಕೆ ಬೆಳೆಯುವ ಪ್ರದೇಶ 1,01,689 ಹೆಕ್ಟೇರ್‌ನಿಂದ 1,07,900 ಹೆಕ್ಟೇರ್‌ಗೆ ಹೆಚ್ಚಾಗಿದೆ. ಆದರೆ ಪ್ರತಿ ಹೆಕ್ಟೇರ್ ಉತ್ಪಾದಕತೆ 2.70 ಟನ್‌ನಿಂದ 1.31 ಟನ್‌ಗೆ ಕುಸಿದಿದೆ. ಇದರ ಪರಿಣಾಮ ಜಿಲ್ಲೆಯ ಅಡಿಕೆ ಉತ್ಪಾದನೆ 2,74,560 ಟನ್‌ನಿಂದ 1,41,349 ಟನ್‌ಗೆ ಇಳಿಕೆಯಾಗಿದೆ.

ಉಡುಪಿಯಲ್ಲೂ ಉತ್ಪಾದಕತೆ 3.12 ಟನ್‌ನಿಂದ 1.50 ಟನ್‌ಗೆ ಕುಸಿದಿದೆ. ಇದರ ಪರಿಣಾಮ ಉತ್ಪಾದನೆ 72,430 ಟನ್‌ನಿಂದ 39,859 ಟನ್‌ಗೆ ಇಳಿಕೆಯಾಗಿದೆ. ಇದೇ ಅವಧಿಯಲ್ಲಿ ಅಡಿಕೆ ಬೆಳೆಯುವ ಪ್ರದೇಶದಲ್ಲಿ ಮಾತ್ರ ಸ್ವಲ್ಪ ಏರಿಕೆ ಕಂಡುಬಂದಿದೆ.

ಉತ್ತರ ಕನ್ನಡದಲ್ಲೂ ಫಸಲು ಕುಸಿತ

ಅಡಿಕೆ ಬೆಳೆಗಾರರಿಗೆ ಪ್ರಮುಖ ಜಿಲ್ಲೆಯಾಗಿರುವ ಉತ್ತರ ಕನ್ನಡದಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ. 2021-22ರಲ್ಲಿ ಜಿಲ್ಲೆಯಲ್ಲಿ 32,698 ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತಿತ್ತು. 2025-26ರಲ್ಲಿ ಅದು 39,354 ಹೆಕ್ಟೇರ್‌ಗೆ ಏರಿಕೆಯಾಗಿದೆ. ಅಂದರೆ ಸಾವಿರಾರು ಹೆಕ್ಟೇರ್ ಪ್ರದೇಶ ಹೆಚ್ಚಾದರೂ, ಉತ್ಪಾದಕತೆ 2.90 ಟನ್‌ನಿಂದ ಕೇವಲ 1.50 ಟನ್‌ಗೆ ಕುಸಿದಿದೆ.

ಇದರ ಪರಿಣಾಮ ಉತ್ತರ ಕನ್ನಡದ ಅಡಿಕೆ ಉತ್ಪಾದನೆ 94,823 ಟನ್‌ನಿಂದ 59,031 ಟನ್‌ಗೆ ಇಳಿಕೆಯಾಗಿದೆ. ಇದು ಜಿಲ್ಲೆಯ ಅಡಿಕೆ ಬೆಳೆಗಾರರಿಗೆ ಎದುರಾಗಿರುವ ದೊಡ್ಡ ಸವಾಲಿನ ಸೂಚನೆಯಾಗಿದೆ.

ಎಲ್ಲ ಜಿಲ್ಲೆಗಳಲ್ಲೂ ಕುಸಿತವಿಲ್ಲ

ಆದರೆ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲೂ ಅಡಿಕೆ ಉತ್ಪಾದನೆ ಕುಸಿದಿಲ್ಲ. ಇತ್ತೀಚಿನ ಅಂದಾಜಿನ ಪ್ರಕಾರ ಚಿಕ್ಕಮಗಳೂರಿನಲ್ಲಿ ಉತ್ಪಾದನೆ ಹೆಚ್ಚಾಗಿದೆ. ಹಾವೇರಿ ಮತ್ತು ಹಾಸನ ಜಿಲ್ಲೆಗಳಲ್ಲೂ ಅಡಿಕೆ ಬೆಳೆಯುವ ಪ್ರದೇಶ ಹಾಗೂ ಉತ್ಪಾದನೆಯಲ್ಲಿ ಏರಿಕೆ ದಾಖಲಾಗಿದೆ.

ಹೀಗಾಗಿ ಹವಾಮಾನ, ರೋಗಬಾಧೆ, ತೋಟ ನಿರ್ವಹಣೆ, ತಳಿಗಳ ಆಯ್ಕೆ ಸೇರಿದಂತೆ ಹಲವು ಅಂಶಗಳು ಜಿಲ್ಲೆಯೊಂದರಿಂದ ಮತ್ತೊಂದು ಜಿಲ್ಲೆಗೆ ವಿಭಿನ್ನ ಪರಿಣಾಮ ಬೀರುತ್ತಿರುವ ಸಾಧ್ಯತೆ ಇದೆ.

ಅಡಿಕೆ ಉತ್ಪಾದಕತೆ ಕುಸಿಯಲು ಕಾರಣವೇನು?

ಉತ್ಪಾದಕತೆ ಕುಸಿತಕ್ಕೆ ನಿಖರವಾದ ಕಾರಣವನ್ನು ಲೋಕಸಭೆಯಲ್ಲಿ ನೀಡಿರುವ ಕೇಂದ್ರ ಸರ್ಕಾರದ ಉತ್ತರದಲ್ಲಿ ಪ್ರತ್ಯೇಕವಾಗಿ ವಿವರಿಸಲಾಗಿಲ್ಲ. ಅಡಿಕೆ ತೋಟಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಎಲೆ ಚುಕ್ಕೆ ರೋಗ, ಹಣ್ಣುಕೊಳೆ ರೋಗ ಮತ್ತು ಬೇರುಹುಳು ಬಾಧೆ ನಿರ್ವಹಣೆಗೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಹೀಗಾಗಿ ‘ಹೆಚ್ಚು ಪ್ರದೇಶದಲ್ಲಿ ಅಡಿಕೆ ಬೆಳೆಯುವುದೇ ಸಾಕೇ? ಅಥವಾ ಇರುವ ತೋಟಗಳ ಉತ್ಪಾದಕತೆಯನ್ನು ಹೆಚ್ಚಿಸುವುದೇ ಮುಖ್ಯವೇ?’ ಎಂಬ ಪ್ರಶ್ನೆ ಈಗ ಎದುರಾಗಿದೆ.

ಅಡಿಕೆ ಬೆಳೆ ಪ್ರದೇಶ ವಿಸ್ತರಿಸುತ್ತಿದೆ... ಆದರೆ ಫಸಲು ಏಕೆ ಕುಸಿಯುತ್ತಿದೆ?
ಈ ಪ್ರಶ್ನೆಗೆ ಸೂಕ್ತ ಉತ್ತರ ಕಂಡುಕೊಳ್ಳುವುದು ಇದೀಗ ರಾಜ್ಯದ ಅಡಿಕೆ ವಲಯದ ಮುಂದಿರುವ ದೊಡ್ಡ ಸವಾಲಾಗಿದೆ.

#ಅಡಿಕೆ

11/08/2026

ಹೆದ್ದಾರಿ ದಾಟುತ್ತಿದ್ದ ಮಹಿಳೆಯೊಬ್ಬಳಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಕುಮಟಾ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 66ರ ಬರ್ಗಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ಸಮೀಪ ನಡೆದಿದೆ. ಮೃತರನ್ನು ಕುಮಟಾ ಶಶಿಹಿತ್ಲ್ ನಿವಾಸಿ ದುರ್ಗಿ ಹರಿಕಾಂತ ಎಂದು ಗುರುತಿಸಲಾಗಿದೆ. ಅವರು ಬರ್ಗಿಯಲ್ಲಿರುವ ಸಂಬAಧಿಕರ ಮನೆಗೆ ತೆರಳಿದ್ದರು ಎನ್ನಲಾಗಿದೆ. ಕುಮಟಾದಿಂದ ಬರ್ಗಿಗೆ ಬಂದಿದ್ದ ದುರ್ಗಿ ಹರಿಕಾಂತ ಅವರು ಬಸ್‌ನಿಂದ ಇಳಿದು ಹೆದ್ದಾರಿ ಮೂಲಕ ಸಂಬoಧಿಕರ ಮನೆಗೆ ನಡೆದುಕೊಂಡು ಹೋಗುತ್ತಿದ್ದರು. ಸರ್ಕಾರಿ ಪ್ರೌಢಶಾಲೆ ಸಮೀಪ ಹೆದ್ದಾರಿ ದಾಟಲು ಮುಂದಾದಾಗ, ಕುಮಟಾ ಕಡೆಯಿಂದ ಗೋಕರ್ಣದತ್ತ ತೆರಳುತ್ತಿದ್ದ ಕಾರು ಅವರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಗಂಭೀರವಾಗಿ ಗಾಯಗೊಂಡ ಮಹಿಳೆ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಕಾರಿನಲ್ಲಿದ್ದವರು ಸಿದ್ದಾಪುರದಿಂದ ಗೋಕರ್ಣಕ್ಕೆ ತೆರಳುತ್ತಿದ್ದರು ಎನ್ನಲಾಗಿದೆ. ಅಪಘಾತದ ಮಾಹಿತಿ ತಿಳಿದು ಗೋಕರ್ಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಈ ಸಂಬoಧ ಪ್ರಕರಣ ದಾಖಲಾಗಿದೆ.

11/08/2026

ಪೊಲೀಸ್ ಇಲಾಖೆ ಹಾಗೂ ಸಾರ್ವಜನಿಕರ ನಡುವಿನ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವ ಉದ್ದೇಶದಿಂದ ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕಾನಸೂರು ಹಾಗೂ ಹಾರ್ಸಿಕಟ್ಟಾ ಗ್ರಾಮಗಳಲ್ಲಿ ಗ್ರಾಮ ಸಭೆ ನಡೆಸಲಾಯಿತು. ಗ್ರಾಮ ಸಭೆಯಲ್ಲಿ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಾರ್ವಜನಿಕರೊಂದಿಗೆ ನೇರವಾಗಿ ಸಂವಾದ ನಡೆಸಿ, ಗ್ರಾಮದಲ್ಲಿ ಎದುರಾಗುತ್ತಿರುವ ವಿವಿಧ ಸಮಸ್ಯೆಗಳು, ಸಾರ್ವಜನಿಕರ ಅಹವಾಲುಗಳು ಹಾಗೂ ಸುರಕ್ಷತೆಗೆ ಸಂಬoಧಿಸಿದ ವಿಚಾರಗಳ ಕುರಿತು ಮಾಹಿತಿ ಪಡೆದುಕೊಂಡರು. ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಪೊಲೀಸರ ಗಮನಕ್ಕೆ ತಂದಿದ್ದು, ಅವುಗಳಿಗೆ ಸಂಬAಧಿಸಿದAತೆ ಅಗತ್ಯ ಸಲಹೆ ಮತ್ತು ಮಾರ್ಗದರ್ಶನ ನೀಡಲಾಯಿತು. ಸಭೆಯಲ್ಲಿ ಪ್ರಮುಖವಾಗಿ 112 ತುರ್ತು ಸಹಾಯವಾಣಿ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಲಾಯಿತು. ಅಪಘಾತ, ಅಪರಾಧ, ಮಹಿಳೆಯರು ಮತ್ತು ಮಕ್ಕಳಿಗೆ ಎದುರಾಗುವ ಅಪಾಯ, ತುರ್ತು ಪರಿಸ್ಥಿತಿ ಸೇರಿದಂತೆ ತಕ್ಷಣ ಪೊಲೀಸ್ ನೆರವು ಅಗತ್ಯವಿರುವ ಸಂದರ್ಭಗಳಲ್ಲಿ 112 ಸಂಖ್ಯೆಗೆ ಕರೆ ಮಾಡುವ ಮೂಲಕ ಸಹಾಯ ಪಡೆಯಬಹುದು ಎಂದು ತಿಳಿಸಲಾಯಿತು . ಇದೇ ವೇಳೆ ರಸ್ತೆ ಸಂಚಾರ ನಿಯಮಗಳು ಮತ್ತು ರಸ್ತೆ ಸುರಕ್ಷತೆ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು. ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸುವುದು, ವಾಹನ ಚಲಾಯಿಸುವಾಗ ಮೊಬೈಲ್ ಬಳಸದೇ ಇರುವುದು, ಮದ್ಯಪಾನ ಮಾಡಿ ವಾಹನ ಚಲಾಯಿಸದಿರುವುದು, ವೇಗದ ಮಿತಿಯನ್ನು ಪಾಲಿಸುವುದು ಹಾಗೂ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವಂತೆ ಸೂಚಿಸಲಾಯಿತು.

11/08/2026

ಪದೇ ಪದೇ ಕಳ್ಳತನ ಹಿನ್ನಲೆ
ಮುಂಡಗೋಡಿನಲ್ಲಿ ಹೆಚ್ಚಿದ ಪೊಲೀಸ್ ಕಾವಲು
ರಾತ್ರಿಯ ಗಸ್ತು ಹೆಚ್ಚಳ

11/08/2026

ತಾಯಿ, ಮಗಳು ನಾಪತ್ತೆ
ಭಟ್ಕಳ ಠಾಣೆಯಲ್ಲಿ ದೂರು ದಾಖಲು
ಸುಳಿವು ಸಿಕ್ಕರೆ ಮಾಹಿತಿ ನೀಡುವಂತೆ ಪ್ರಕಟಣೆ

11/08/2026

ವಿವಿಧ ಬೇಡಿಕೆಗಳ ಈಡೇರಿಕೆಗೆ ಬಿ.ಎಮ್.ಎಸ್ ಕಟ್ಟಡ ಮತ್ತು ಇತರೇ ನಿರ್ಮಾಣ ಕಾಮಗಾರಿ ಸಂಘಟನೆ ಆಗ್ರಹಿಸಿದೆ. ಹೊನ್ನಾವರ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಪ್ರಮುಖ ಬೇಡಿಕೆಗಳ ಮನವಿ ಪತ್ರವನ್ನು ಸಲ್ಲಿಸಲಾಯಿತು.

11/08/2026

ಕಾರವಾರ ಅಂಚೆ ವಿಭಾಗ ಹಾಗೂ ಸೇನಾ ನಾಗರಿಕರ ವಸತಿ ಸಮುಚ್ಚಯ ಇವರ ವತಿಯಿಂದ ಅಮದಳ್ಳಿ ಸಿ.ಎಚ್.ಸಿ ಕಮ್ಯೂನಿಟಿ ಹಾಲ್‌ನಲ್ಲಿ ಆಧಾರ್ ನವೀಕರಣ ಹಾಗೂ ಜನ ಸಂಪರ್ಕ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಅಂಚೆ ಅಧಿಕಾರಿ ರಾಜಕುಮಾರ್, ಈ ಅಭಿಯಾನದ ಅಂಗವಾಗಿ ಹೊಸ ಆಧಾರ್ ನೋಂದಣಿ, ಬಯೋಮೆಟ್ರಿಕ್ ಪರಿಷ್ಕರಣೆ, ವಿಳಾಸ ಹಾಗೂ ಮೊಬೈಲ್ ಸಂಖ್ಯೆಯ ತಿದ್ದುಪಡಿ ಸೇವೆಗಳನ್ನು ಒದಗಿಸಲಾಗುವುದು. ಜೊತೆಗೆ ಅಂಚೆ ಇಲಾಖೆಯ ವಿವಿಧ ಉಳಿತಾಯ ಯೋಜನೆಗಳು, ಅಂಚೆ ಜೀವ ವಿಮೆ, ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಸೇರಿದಂತೆ ವಿವಿಧ ಅಂಚೆ ಸೇವೆಗಳ ಕುರಿತು ಮಾಹಿತಿ ಹಾಗೂ ಕಾರ್ಯಾಗಾರವನ್ನು ಆಯೋಜಿಸಲಾಗಿದೆ ಎಂದು ಹೇಳಿದರು. ಸಾರ್ವಜನಿಕರು ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ, ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ, ಅಂಚೆ ಜೀವ ವಿಮೆ ಹಾಗೂ ಗ್ರಾಮೀಣ ಅಂಚೆ ಜೀವ ವಿಮೆ ಸೇರಿದಂತೆ ವಿವಿಧ ವಿಮಾ ಯೋಜನೆಗಳ ಸೌಲಭ್ಯಗಳನ್ನು ಪಡೆಯಬಹುದು. ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್ಫರ್ ಫಲಾನುಭವಿಗಳಿಗಾಗಿ ಖಾತೆಗಳನ್ನು ಸ್ಥಳದಲ್ಲಿಯೇ ತೆರೆಯುವ ವಿಶೇಷ ವ್ಯವಸ್ಥೆಯನ್ನೂ ಮಾಡಲಾಗಿದೆ. ಸಾರ್ವಜನಿಕರು ಈ ಅವಕಾಶದ ಸದುಪಯೋಗವನ್ನು ಪಡೆದುಕೊಳ್ಳುವಂತೆ ತಿಳಿಸಿದರು.

11/08/2026

ಚಿರತೆ ಭಯ
ಗ್ರಾಮಸ್ಥರಿಗೆ ಪ್ರತಿದಿನ ಕಾಡುತ್ತಿದೆ ಆತಂಕ
ಸೂಕ್ತ ರಕ್ಷಣೆಗೆ ಆಗ್ರಹಿಸಿ ಡಿಎಫ್‌ಗೆ ಮನವಿ

Address

#1019/1a, Postal Colony, Post, Heravatta
Kumta
581332

Telephone

+919591537698

Website

Alerts

Be the first to know and let us send you an email when VISMAYA24x7 posts news and promotions. Your email address will not be used for any other purpose, and you can unsubscribe at any time.

Contact The Business

Send a message to VISMAYA24x7:

Shortcuts

Share