28/12/2025
#ಪತ್ರಕರ್ತ_ಚಂದನ್_ನಂದರಬೆಟ್ಟುರವರಿಗೆ_ನಾಡೋಜ_ಡಾ_ಕಯ್ಯಾರ_ರಾಷ್ಟ್ರೀಯ_ಪ್ರಶಸ್ತಿ_2026.
ಡಾ. ವಾಮನ್ ರಾವ್ ಬೇಕಲ್ -ಸಂದ್ಯಾ ರಾಣಿ ಟೀಚರ್ ಸಾರತ್ಯದ ಕನ್ನಡ ಭವನ ಕಾಸರಗೋಡು ಇದರ ರಜತ ಸಂಭ್ರಮದ ಶುಭ ಕಾರ್ಯಕ್ರಮವಾದ “ನಾಡು -ನುಡಿ ಸಂಭ್ರಮ
2026, 18-01-2026 ರಂದು ಕಾಸರಗೋಡು
ಕನ್ನಡ ಭವನ ರಜತ ಮಂಟಪ ವೇದಿಕೆಯಲ್ಲಿ ನಡೆಯಲಿದೆ.
ಈ ಕಾರ್ಯಕ್ರಮ ದಲ್ಲಿ ಕೊಡಗು ಜಿಲ್ಲೆಯ ಮಡಿಕೇರಿಯ ಪತ್ರಕರ್ತ, ಲೇಖಕ ಹಾಗು ಸಮಾಜಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡ ಎಲೆಮರೆ ಕಾಯಿಯಂತಿರುವ ಚಂದನ್ ನಂದರಬೆಟ್ಟು ಇವರೀಗೆ ಕನ್ನಡ ಭವನ ಕೊಡಮಾಡುವ ಪ್ರತಿಷ್ಠಿತ *ರಾಷ್ಟ್ರ ಪ್ರಶಸ್ತಿಯಾದ “ನಾಡೋಜ ಡಾ. ಕಯ್ಯಾರ ರಾಷ್ಟ್ರೀಯ ಪ್ರಶಸ್ತಿ,” 2026* ನೀಡಿ ಗೌರವಿಸಲಾಗುವುದು ಎಂದು ಕನ್ನಡ ಭವನ ಸ್ಥಾಪಕ ಅಧ್ಯಕ್ಷರಾದ ಡಾ. ವಾಮನ್ ರಾವ್ ಬೇಕಲ್ ಹಾಗೂ ಕಾರ್ಯದರ್ಶಿ ವಸಂತ್ ಕೆರೆಮನೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
#ಪತ್ರಕರ್ತ_ಸಮಾಜಸೇವಕ_ಚಂದನ್_ನಂದರಬೆಟ್ಟು
ಗಾಳಿಬೀಡು ಗ್ರಾಮದ. ನಿವೃತ್ತ ಸಬ್ ಇನ್ಸ್ಪೆಕ್ಟರ್ ಕೃಷ್ಣ ಎನ್ ಎಂ ಹಾಗು ಜಯಲಕ್ಷ್ಮಿ ಎನ್ ಕೆ ಇವರ ಪುತ್ರರಾಗಿರುವ ಚಂದನ್ ನಂದರಬೆಟ್ಟು ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಗಾಳಿಬೀಡು ಗ್ರಾಮದ ಸರಕಾರಿ ಶಾಲೆಗಳಲ್ಲಿ ಮುಗಿಸಿ ಬಳಿಕ ಮಡಿಕೇರಿಯ ಸರಕಾರಿ ಕಾಲೇಜಿನಲ್ಲಿ ಪದವಿಪೂರ್ವ ವ್ಯಾಸಂಗ ಹಾಗು
ಫೀಲ್ಡ್ ಮಾರ್ಷಲ್ ಕೆ ಎಂ ಕಾರ್ಯಪ್ಪ ಕಾಲೇಜು ಮಡಿಕೇರಿಯಲ್ಲಿ ಬಿ ಕಾಂ ಪದವಿಯನ್ನು ಓದಿ ಆನಂತರ ತಮ್ಮದೇ ಶೈಲಿಯಲ್ಲಿ ಬರವಣಿಗೆಯನ್ನು ಆರಂಭಿಸಿ ಲೇಖನ, ಕಥೆ, ಕವನ, ವಿಮರ್ಶೆಗಳ ಮುಖಾಂತರ ಜನಮನಗೆದ್ದವರು. ಸಮಾಜಮುಖಿ ಚಿಂತನೆಗಳತ್ತ ಹೆಚ್ಚು ಒಲವು ತೋರುವ ಇವರ ಪತ್ರಿಕಾ ವರದಿಗಳು ಬಹಳಷ್ಟು ಸರಕಾರದ ಸೌಲಭ್ಯಗಳು ಜನರನ್ನು ತಲುಪುವಂತೆ ಮಾಡಿದೆ.
ಸಮಾಜ ಸೇವೆಯಲ್ಲಿ ತನ್ನದೇ ಕೊಡುಗೆ ನೀಡುತ್ತಿರುವ ಇವರು ಹದಿನೆಂಟು ಬಾರಿ ರಕ್ತದಾನ ಮಾಡಿದ್ದಾರೆ ಹಾಗು ಮರಣಾನಂತರ ತಮ್ಮ ಕಣ್ಣುಗಳನ್ನು ಮತ್ತು ದೇಹವನ್ನು ದಾನಮಾಡಲು ನೋಂದಣಿ ಮಾಡಿಸಿಕೊಂಡಿದ್ದಾರೆ. ಕಷ್ಟದಲ್ಲಿರುವವರಿಗೆ ಸದಾ ನೆರವನ್ನು ನೀಡುವ ಇವರು ಎಲ್ಲಿಯೂ ಪ್ರಚಾರದ ಕಡೆಗೆ ಒಲವನ್ನು ತೋರಿದವರಲ್ಲ. ಆ ಕಾರಣಕ್ಕೆಂದೇ ಈ ಒಂದು ಲೇಖನವನ್ನು ನಿಮ್ಮ ಮುಂದಿಡುತ್ತಿರುವೆ.
ಮೂಲತಃ ವಿಟ್ಲದ ಕನ್ಯಾನ ಗ್ರಾಮದವರಾದ ಇವರು ಈಗ ಕೊಡಗಿನ ಮಡಿಕೇರಿ ತಾಲ್ಲೂಕಿನ ಗಾಳಿಬೀಡು ಗ್ರಾಮದಲ್ಲಿ ನೆಲೆಸಿದ್ದಾರೆ.
ವೃತ್ತಿಯಲ್ಲಿ ಪತ್ರಕರ್ತರಾಗಿದ್ದು, ಪತ್ರಿಕಾ ರಂಗದ ಮೊದಲ ಹೆಜ್ಜೆಯಾಗಿ ಶ್ರೀಧರ್ ನೆಲ್ಲಿತ್ತಾಯ ಸಾರಥ್ಯದ ಕೂರ್ಗ್ ಎಕ್ಸ್‌ಪ್ರೆಸ್ ವಾರಪತ್ರಿಕೆ ಹಾಗು ಚಾನಲ್ ಕೂರ್ಗ್ ನ ಉಪಸಂಪಾದಕರಾಗಿ ಕಾರ್ಯನಿರ್ವಹಿಸಿದ್ದು ಬಳಿಕ ಸ್ಥಳೀಯ ಹಾಗು ರಾಜ್ಯ ಮಟ್ಟದ ಪತ್ರಿಕೆಗಳಲ್ಲಿ ವರದಿಗಾರರಾಗಿ ಕಾರ್ಯನಿರ್ವಹಿಸಿದ್ದಾರೆ. ಪ್ರಸ್ತುತ ವಿಶ್ವದೂತ ದಿನಪತ್ರಿಕೆಯ ಜಿಲ್ಲಾ ವರದಿಗಾರರಾಗಿ ಕಾರ್ಯನಿರ್ವಹಿಸುತಿದ್ದಾರೆ. ವಿಜಯಕರ್ನಾಟಕ ದಿನಪತ್ರಿಕೆಯ ಹವ್ಯಾಸಿ ಬರಹಗಾರರೂ ಹೌದು.
#ಕನ್ನಡದ_ಮೊದಲ_ಪುಸ್ತಕ
ನೆತ್ತರು ಎನ್ನುವ ರಕ್ತಕ್ಕೆ ಸಂಬಂಧಿಸಿದ ಸಮಸ್ತ ವಿವರಗಳುಳ್ಳ ಪುಸ್ತಕವನ್ನೂ ಪ್ರಕಟಿಸಿದ್ದು, ಕನ್ನಡದಲ್ಲಿ ಈ ರೀತಿ ರಕ್ತಕ್ಕೆ ಸಂಬಂಧಿಸಿದ ಪೂರ್ತಿ ವಿವರಗಳುಳ್ಳ ಮೊದಲ ಪುಸ್ತಕ ಎನ್ನುವ ದಾಖಲೆ ಈ ಪುಸ್ತಕದ್ದು.
ನಗುಮುಖದಿಂದಲೇ ಎಲ್ಲರೊಡನೆ ಬೆರೆಯುವ ಇವರ ಸ್ನೇಹಿತರ ಪಡೆ ಬಹಳಾ ದೊಡ್ಡದು. ಯಾರನ್ನೇ ಆದರೂ ಮಾತುಗಳಿಂದ ತಮ್ಮೆಡೆಗೆ ಸೆಳೆದುಕೊಳ್ಳುವ ತಾಕತ್ತು ಇವರ ನಗುಮುಖದ ಮಾತಿಗಿದೆ. ಪ್ರವಾಸವೆಂದರೆ ಗೊತ್ತುಗುರಿ ಇಲ್ಲದೆ ಪ್ರಯಾಣಿಸುವ ಇವರಿಗೆ ಒಬ್ಬಂಟಿಯಾಗಿ ಪ್ರವಾಸ ಹೋಗುವುದು ಬಹಳಾ ಖುಷಿಯ ವಿಚಾರ. ಇದಲ್ಲದೆ ಕಂಟೆಂಟ್ ಕ್ರಿಯೇಷನ್, ಕಿರುಚಿತ್ರಗಳಲ್ಲಿ ನಟಿಸುವುದು, ಪ್ರಾಚೀನ ವಸ್ತುಗಳ ಸಂಗ್ರಹಣೆ, ಪುಸ್ತಕ ಓದುವಿಕೆ, ಪುಸ್ತಕ ಸಂಗ್ರಹ ಹೀಗೆ ಬಹಳಷ್ಟು ಹವ್ಯಾಸಗಳನ್ನು ತಮ್ಮ ಬದುಕಿನ ಆನಂದಕ್ಕೆ ಅವಲಂಬಿಸಿಕೊಂಡಿದ್ದಾರೆ. ಎರಡರಿಂದ ಎರಡೂವರೆ ಸಾವಿರ ಪುಸ್ತಕಗಳ ಸಂಗ್ರಹ ಇವರ ಬಳಿ ಇದೆ.
#ಕಾಲೇಜು_ದಿನಗಳಲ್ಲೇ_ಸಮಾಜ_ಸೇವೆಯತ್ತ_ಆಸಕ್ತಿ
ಪದವಿ ವ್ಯಾಸಂಗ ಮಾಡುತ್ತಿದ್ದಾಗಲೇ ರಾಷ್ಟ್ರೀಯ ಸೇವಾ ಯೋಜನೆಯನ್ನು ಸೇರಿ ಸಮಾಜಮುಖಿ ಕೆಲಸಗಳನ್ನು ಮಾಡಲಾರಂಭಿಸಿದ್ದರು.
ಕಾಲೇಜು ದಿನಗಳಲ್ಲಿ ಸತತವಾಗಿ ಮೂರು ವರ್ಷ ಅತ್ಯುತ್ತಮ ಎನ್ ಎಸ್ ಎಸ್ ಸ್ವಯಂ ಸೇವಕ ಪ್ರಶಸ್ತಿ. ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅತ್ಯುತ್ತಮ ಎನ್ ಎಸ್ ಎಸ್ ಸ್ವಯಂ ಸೇವಕ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ ಹಾಗು ತಮ್ಮ ಸಮಾಜ ಸೇವೆಗಾಗಿ ಸಂಘ ಸಂಸ್ಥೆಗಳಿಂದ ಸನ್ಮಾನಗಳನ್ನು ಸ್ವೀಕರಿಸಿದ್ದಾರೆ.
#ಕೊಡಗು_ಜಿಲ್ಲಾ_ಕಾರ್ಯನಿರತ_ಪತ್ರಕರ್ತರ_ಸಂಘದ_ವಾರ್ಷಿಕ_ಜಿಲ್ಲಾ_ಪ್ರಶಸ್ತಿ.
ಶಕ್ತಿ ದಿನಪತ್ರಿಕೆಯಲ್ಲಿ ಪ್ರಕಟವಾಗಿದ್ದ ಕಳೆದುಹೋದವಳ ಏಳು ವರ್ಷಗಳ ಬಳಿಕ ಕೈಹಿಡಿದು ಕರೆದೊಯ್ದರು : ನೆರಳು ಕೊಟ್ಟ ತನಲ್ ನಸುನಗುತ್ತಿತ್ತು. ಎನ್ನುವ ವರದಿಗೆ ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಅತ್ಯುತ್ತಮ ಮಾನವೀಯ ವರದಿಗಾಗ ಜಿಲ್ಲಾ ವಾರ್ಷಿಕ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಕಾಸರಗೋಡು ಕನ್ನಡ ಭವನದಿಂದ ಕೊಡಮಾಡುವ 2025 ನೇ ಸಾಲಿನ ಪ್ರತಿಷ್ಠಿತ ಅಂತರಾಜ್ಯ ಪ್ರಶಸ್ತಿಯಾದ ಕನ್ನಡ ಪಯಸ್ವಿನಿ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದಾರೆ.
#ಕೋವಿಡ್_ವಾರಿಯರ್_ಆಗಿ_ಕೆಲಸ.
ಎಲ್ಲೆಡೆ ಕೋವಿಡ್ ಆವರಿಸಿಕೊಂಡು ಜನರು ಮನೆಯಿಂದ ಹೊರಬರಲು ಭಯಾತಂಕಗಳಿಂದ ಇದ್ದಂತಹ ದಿನಗಳಲ್ಲಿ ಸೀಲ್ ಮಾಡಿದ್ದ ಮನೆಗಳಲ್ಲಿನ ಜನರಿಗೆ ಊಟ ನೀಡಿ, ನಗರದಲ್ಲಿ ವಾಸಿಸುತಿದ್ದ ಅಸಹಾಯಕರು, ಪ್ರಾಣಿಗಳಿಗೆ ಆಹಾರ ನೀಡವಲ್ಲಿ ಬಹಳಷ್ಟು ಮುತುವರ್ಜಿ ವಹಿಸಿದ್ದನ್ನು ನಾವು ಪ್ರಶಂಸಿಸಲೇಬೇಕು.
#ವಿದ್ಯಾರ್ಥಿಗಳ_ವಿದ್ಯಾಭ್ಯಾಸಕ್ಕೆ_ನೆರವು.
ಕೊಡಗಿನಲ್ಲಿ ಇವರಿಗೆ ಪರಿಚಿತರಿರುವ ವಿದ್ಯಾರ್ಥಿಗಳಿಗೆ, ಬಡತನವೋ ಅಥವಾ ಇನ್ಯಾವುದೋ ಕಾರಣದಿಂದ ವಿದ್ಯಾಭ್ಯಾಸಕ್ಕೆ ಹಣಕಾಸಿನ ಸಮಸ್ಯೆ ಬಂದಂತಹ ಸಂದರ್ಭದಲ್ಲಿ ತಮ್ಮ ಕೈಯಿಂದಾಗುವಷ್ಟು ನೆರವು ಒದಗಿಸುವ ಮೂಲಕ ಅವರ ಓದಿಗೆ ಪ್ರೋತ್ಸಾಹ ನೀಡುವ ಸಹೃದಯಿ.
ಈಗಾಗಲೇ ಐದಾರು ಮಂದಿ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಎಲ್ಲಾ ಖರ್ಚು ವೆಚ್ಚಗಳನ್ನು ಇವರೇ ಭರಿಸುತ್ತಿರುವುದು ಹೆಮ್ಮೆಯ ವಿಚಾರ. ಇವರ ಈ ಸಹಾಯಹಸ್ತ ಇತರರಿಗೂ ಪ್ರೇರೇಪಣೆಯಾಗಿ ಕಷ್ಟದಲ್ಲಿರುವ ವಿದ್ಯಾರ್ಥಿಗಳಿಗೆ ನೆರವು ಸಿಗುವಂತಾಗಲಿ.
#ಅನಾರೋಗ್ಯ_ಪೀಡಿತ_ವ್ಯಕ್ತಿಗೆ_ಚಿಕಿತ್ಸೆ.
ಮಡಿಕೇರಿಯಲ್ಲಿ ಅನಾರೋಗ್ಯಕ್ಕೀಡಾಗಿ ಮಾನಸಿಕವಾಗಿ ಅಸ್ವಸ್ಥರಾಗಿದ್ದವರೋರ್ವರನ್ನು ಯಾರೂ ಸಹಾಯಕ್ಕೆ ನೆರವಾಗದಂತಹ ಸಂದರ್ಭದಲ್ಲಿ ತಕ್ಷಣ ಕಾರ್ಯತತ್ಪರರಾಗಿ ಶಕ್ತಿ ಹಿರಿಯ ನಾಗರಿಕರ ವಸತಿ ನಿಲಯದ ಮೇಲ್ವಿಚಾರಕರಾದ ಸತೀಶ್ ಅವರೊಡಗೂಡಿ ಆಂಬ್ಯುಲನ್ಸ್ ನಲ್ಲಿ ಬೆಂಗಳೂರಿನ ನಿಮ್ಮಾನ್ಸ್ ಆಸ್ಪತ್ರೆಗೆ ಕರೆದೊಯ್ದು ಸೂಕ್ತ ಚಿಕಿತ್ಸೆಗೆ ನೆರವಾದ ವಿಚಾರ ಮಾತ್ರ ಚಂದನ್ ನಂದರಬೆಟ್ಟು ಅವರ ಮನದಾಳದಲ್ಲೇ ಭದ್ರವಾಗಿದೆ. ಇಲ್ಲಿ ಸತೀಶ್ ಅವರ ಕಾರ್ಯವನ್ನೂ ಮೆಚ್ಚಲೇಬೇಕು.
ಸದಾ ಜನರ ಕಾಳಜಿಯನ್ನು ಬಯಸುವ ಇವರು ಸಮಾಜದಲ್ಲಿ ತಪ್ಪು ಕಂಡರೆ ಪ್ರತಿಭಟಿಸುವುದರ ಮೂಲಕ ತಪ್ಪನ್ನು ಪ್ರಶ್ನಿಸುತ್ತಾರೆ ಹಾಗು ಆ ತಪ್ಪು ಮರುಕಳಿಸದಂತೆ ಎಚ್ಚರಿಕೆಯನ್ನೂ ನ್ಯಾಯಯುತವಾಗಿ ನೀಡುತ್ತಾರೆ. ಇದಕ್ಕೆ ಉದಾಹರಣೆ ಕೆಲದಿನಗಳ ಹಿಂದೆ ಕಾಟಿಕೇರಿ ಬಳಿ ಮಂಗಳೂರು ಮುಖ್ಯ ರಸ್ತೆ ಬದಿಯಲ್ಲಿನ ಹೋಟೇಲ್ ಒಂದರಲ್ಲಿನ ಅಶುದ್ಧತೆಯ ಬಗ್ಗೆ ಅಧಿಕಾರಿಗಳ ಗಮನಸೆಳೆದು ಹೊಟೇಲ್ ಸ್ವಚ್ಛಗೊಳಿಸಿದ ಪ್ರಕರಣ. ಹೀಗೆ ಜನರಿಗೆ ನೆರವಾಗಬೇಕಾದ ಸರ್ಕಾರದ ಸವಲತ್ತುಗಳ ಕುರಿತಾಗಿ ಅಧಿಕಾರಿಗಳಿಗೆ ಮಾಹಿತಿ ಮುಟ್ಟಿಸುತ್ತಲೇ ಇರುವ ಸಾಮಾಜಿಕ ಕಾಳಜಿಗೆ ಜನರ ಬೆಂಬಲವೂ ಬಹಳಾ ಮುಖ್ಯ.
ಪ್ರಸ್ತುತ ಫೀಲ್ಡ್ ಮಾರ್ಷಲ್ ಕೆ ಎಂ ಕಾರ್ಯಪ್ಪ ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ, ಕೊಡಗು ಪ್ರೆಸ್ ಕ್ಲಬ್ ಸೌಹಾರ್ದ ಸಹಕಾರಿ ಸಂಘ ನಿಯಮಿತದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿ, ಕೊಡಗು ಕನ್ನಡ ಭವನದ ಪ್ರಧಾನ ಕಾರ್ಯದರ್ಶಿಯಾಗಿ, ಕೊಡಗು ಚುಟುಕು ಸಾಹಿತ್ಯ ಪರಿಷತ್ತಿನ ಕೋಶಾಧಿಕಾರಿಯಾಗಿ ಹಾಗು ಕೋದಂಡ ರಾಮ ದೇವಾಲಯದ ರಾಮೋತ್ಸವ ಸಮಿತಿಯ ಸಹಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.