
02/05/2025
*ಮೈಸೂರು ಹಲಸು ಮೇಳದಲ್ಲಿ ಪಾಸಿಟಿವ್ ತಮ್ಮಯ್ಯ ಕೃಷಿ ಅರಿವು*
ಮೈಸೂರು: ನಗರದ ನಂಜರಾಜ ಬಹದ್ದೂರ್ ಛತ್ರದಲ್ಲಿ ಸಹಜ ಸಮೃದ್ಧ ಮತ್ತು ರೋಟರಿ ಕ್ಲಬ್ ಮೈಸೂರು ಪಶ್ಚಿಮ ಸಹಯೋಗದಲ್ಲಿ ನಾಳೆಯಿಂದ (ಮೇ ೩) ಎರಡು ದಿವಸ ನಡೆಯಲಿರುವ ʻಹಲಸು ಮೇಳʼದಲ್ಲಿ ಹುಣಸೂರು ತಾಲ್ಲೂಕು ಚೌಡಿಕಟ್ಟೆಯ ಪಾಸಿಟಿವ್ ತಮ್ಮಯ್ಯ ನೇತೃತ್ವದ ಶಿವಯೋಗ ದೇಸೀ ಗೋ ಶಾಲೆ ಟ್ರಸ್ಟ್ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಹಮ್ಮಿಕೊಳ್ಳಲಾಗಿದೆ.
ಕಳೆದ ಐದು ದಶಕಗಳಿಂದ ಸಹಜ ಕೃಷಿ, ಸಹಜ ಆಹಾರ, ಪ್ರಕೃತಿ ಚಿಕಿತ್ಸೆ ಹಾಗೂ ಯೋಗದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಭೂಮಿ ಮತ್ತು ಜನರ ಆರೋಗ್ಯ ಸುಧಾರಣೆಯಲ್ಲಿ ಪಾಸಿಟಿವ್ ತಮ್ಮಯ್ಯ ಅವರು ಅರಿವು ಮೂಡಿಸುತ್ತಿದ್ದಾರೆ. ಕೃಷಿ ಮತ್ತು ಆರೋಗ್ಯದ ವಿಷಯದಲ್ಲಿ ತಾವು ಮಾಡಿದ ಪ್ರಯೋಗಗಳು ಹಾಗೂ ಅನುಸರಿಸುತ್ತಿರುವ ಮಾರ್ಗಗಳ ಬಗ್ಗೆ ಈಗಾಗಲೇ ಲಕ್ಷಾಂತರ ಮಂದಿಗೆ ತರಬೇತಿ ನೀಡಿ ಕೃಷಿಯಲ್ಲಿ ಲಾಭ ಗಳಿಸುವಂತೆ ಮಾಡಿದ್ದಾರೆ.
ಹಲಸು ಮೇಳದಲ್ಲಿ ಪ್ರತಿವರ್ಷದಂತೆ ಭಾಗವಹಿಸುತ್ತಿರುವ ಪಾಸಿಟಿವ್ ತಮ್ಮಯ್ಯ ಅವರು ತಮ್ಮ ಜ್ಞಾನವನ್ನು ಆಸಕ್ತರಿಗೆ ಧಾರೆಯೆರೆಯಲಿದ್ದಾರೆ. ಜತೆಗೆ ವಿಷಮುಕ್ತ ಭೂಮಿಯಲ್ಲಿ ಬೆಳೆದ ಬೆಳೆಗಳಿಂದ ಉತ್ಪಾದಿಸಲಾದ ಪುಷ್ಟಿದಾಯಕ ಆಹಾರೋತ್ಪನ್ನಗಳ ಪ್ರದರ್ಶನ, ಅರಿವು ಮತ್ತು ಮಾರಾಟಕ್ಕೆ ಮಳಿಗೆ ತೆರೆಯಲಿದ್ದಾರೆ. ಅಗ್ರತಾ ಉತ್ಪನ್ನಗಳಾದ ಆರೋಗ್ಯ ಸ್ಫೂರ್ತಿ, ರಾಗಿ ಹುರಿಹಿಟ್ಟು, ದಂತ ಮಂಜನ್ ಹಲ್ಲಿನ ಪುಡಿ, ಆರೋಗ್ಯ ಕಷಾಯ ಪುಡಿ, ಪರಿಶುದ್ಧ ಅರಿಸಿನ ಮೇಳದಲ್ಲಿ ಲಭ್ಯವಿರಲಿದೆ.
ಆರೋಗ್ಯ ಕೃಷಿ ಮತ್ತು ಕ್ಷೇಮ ತರಬೇತಿ ಹೆಸರಿನಲ್ಲಿ ನೈಸರ್ಗಿಕ ಕೃಷಿ ಮತ್ತು ಪ್ರಕೃತಿ ಚಿಕಿತ್ಸೆ ಕಾರ್ಯಾಗಾರವನ್ನು ಪ್ರತಿ ತಿಂಗಳು ಎರಡನೇ ಭಾನುವಾರ ತಮ್ಮ ತೋಟದಲ್ಲಿ ನಡೆಸುತ್ತಿರುವ ಪಾಸಿಟಿವ್ ತಮ್ಮಯ್ಯ ಅವರು ರಾಜ್ಯಾದ್ಯಂತ ಆಗಮಿಸುವ ೧೫೦ಕ್ಕೂ ಹೆಚ್ಚು ಮಂದಿಗೆ ತರಬೇತಿ ನೀಡುತ್ತಿದ್ದಾರೆ. ರಾಜ್ಯಾದ್ಯಂತ ನೂರಾರು ನೈಸರ್ಗಿಕ ಕೃಷಿ ತೋಟಗಳನ್ನು ಅಭಿವೃದ್ಧಿಪಡಿಸಿರುವ ಪಾಸಿಟಿವ್ ತಮ್ಮಯ್ಯ ಅವರ ಕೃಷಿ ತರಬೇತಿಗೆ ಆಕರ್ಷಣೆಗೊಂಡು ಸಹಸ್ರಾರು ಐಟಿ ಬಿಟಿ ಯುವಕರು ಜಮೀನುಗಳನ್ನು ಖರೀದಿಸಿ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ತರಬೇತಿ ಪಡೆದ ರೈತರು ನೈಸರ್ಗಿಕ ಕೃಷಿಗೆ ಮರಳಿದ್ದಾರೆ.
ಹಲಸು ಮೇಳದ ಮೊದಲ ದಿನ ಶನಿವಾರ ಲಾಭದಾಯಕ ಹಲಸು ಕೃಷಿ ತರಬೇತಿ ಹಾಗೂ ಭಾನುವಾರ ನಾನಾ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಮೇಳದಲ್ಲಿ ಬಿಳಿ, ಹಳದಿ, ಕೆಂಪು ಬಣ್ಣದ ರಸಭರಿತ ಹಲಸು ತಿನ್ನಲು ಲಭ್ಯವಿರುತ್ತದೆ. ಹಲಸಿನಿಂದ ಮಾಡಿದ ನಾನಾ ತಿಂಡಿ ತಿನಿಸುಗಳ ಮಳಿಗೆಗಳನ್ನು ತೆರೆಯಲಾಗುತ್ತಿದೆ. ಸಂಪರ್ಕ: ಸುಹಾಸ್- ೯೪೮೨೧೧೫೪೯೫